ಮನೆಯೇ ಕಚೇರಿ: ಮೀಟಿಂಗ್‌ಗೆ ನೆರವಾಗುವ ‘ಝೂಮ್’

Zoom Appಕೊರೊನಾ ವೈರಸ್ ಈ ಪರಿಯಾಗಿ ಮನುಷ್ಯನನ್ನು ಕಾಡುತ್ತದೆಯೆಂದು ಯಾರೂ ಊಹಿಸಿರಲಾರರು. ವಿಶ್ವದ ಬಹುತೇಕ ಜನರನ್ನು ಮನೆಯಲ್ಲೇ ಕೂರುವಂತೆ ಮಾಡಿರುವ ಈ ಕೋವಿಡ್-19 ಕಾಯಿಲೆಯು ಕಚೇರಿಯ ಅಗತ್ಯವಿಲ್ಲದೆ, ಮನೆಯಿಂದಲೇ ದುಡಿಯಬಹುದಾದ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಉತ್ತಮ ಇಂಟರ್ನೆಟ್ ಸಂಪರ್ಕವಿದ್ದರಾಯಿತಷ್ಟೇ. ಈಗಾಗಲೇ ಹಣಕಾಸು ಹಿಂಜರಿತದ ದೆಸೆಯಿಂದಾಗಿ ಅದೆಷ್ಟೋ ಕಂಪನಿಗಳು ಕಚೇರಿಯ ಖರ್ಚು ಕಡಿಮೆ ಮಾಡುವುದಕ್ಕಾಗಿ ಹೆಚ್ಚಿನ ಟೆಕಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾರಂಭಿಸಿತ್ತು. ಆದರೆ, ಭವಿಷ್ಯದ ಈ ವ್ಯವಸ್ಥೆಯ ಆಗಮನವನ್ನು ವೇಗವಾಗಿಸಿದ್ದು ಕೊರೊನಾ ವೈರಸ್ ತಂದಿರುವ ಅನಿವಾರ್ಯ ಲಾಕ್‌ಡೌನ್.

ತಂಡವಾಗಿ ಕೆಲಸ ಮಾಡುವಾಗ, ಬೇರೆಯವರೊಂದಿಗೆ ಬೆರೆಯಬೇಕಾಗುತ್ತದೆ, ಫೈಲುಗಳನ್ನು ಹಂಚಿಕೊಳ್ಳಬೇಕಾಗುತ್ತದೆ, ಮೀಟಿಂಗ್‌ಗಳಲ್ಲಿ ಭಾಗವಹಿಸಬೇಕಾಗುತ್ತದೆ – ಹೀಗೆ ಎಲ್ಲ ರೀತಿಯ ಸಂವಹನವು ಅಗತ್ಯವಿರುತ್ತದೆ. ಇದಕ್ಕಾಗಿ ಈಗಾಗಲೇ ಸಾಕಷ್ಟು ಆ್ಯಪ್‌ಗಳು, ತಂತ್ರಜ್ಞಾನಗಳು ಸಾಕಷ್ಟು ಬಂದಿವೆ. ಅವುಗಳಲ್ಲಿ ಪ್ರಮುಖವಾದದ್ದು ಗೂಗಲ್ ಹ್ಯಾಂಗೌಟ್ಸ್ ಮೀಟ್, ಸ್ಕೈಪ್, ಸ್ಲ್ಯಾಕ್, ಮೈಕ್ರೋಸಾಫ್ಟ್ ಟೀಮ್ಸ್, ಇತ್ಯಾದಿ.

ಆದರೆ, ಈ ಲಾಕ್‌ಡೌನ್ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದೆಂದರೆ ಝೂಮ್ ಎಂಬ ಆನ್‌ಲೈನ್ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆ. ಜಾಗತಿಕವಾಗಿ ಲಾಕ್‌ಡೌನ್ ಘೋಷಣೆಯಾದ ತಕ್ಷಣ ಭ್ರಮಾವಾಸ್ತವದ ಮೀಟಿಂಗ್ ಪ್ಲ್ಯಾಟ್‌ಫಾರ್ಮ್‌ಗೆ ಭರ್ಜರಿ ಬೇಡಿಕೆ ಬಂದ ಪರಿಣಾಮ, ಕಳೆದ ತಿಂಗಳಲ್ಲಿ ಝೂಮ್ ಆ್ಯಪ್ ಈಗ ವಾಟ್ಸ್ಆ್ಯಪ್, ಟಿಕ್‌ಟಾಕ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮುಂತಾದ ಆ್ಯಪ್‌ಗಳನ್ನೆಲ್ಲ ಹಿಂದಿಕ್ಕಿ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ (ಆಂಡ್ರಾಯ್ಡ್ ಆ್ಯಪ್‌ಗಳ ತಾಣ) ಭಾರತದ ನಂ.1 ಸ್ಥಾನಕ್ಕೇರಿದೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಇದೊಂದು ವಿಡಿಯೊ ಕಾನ್ಫರೆನ್ಸಿಂಗ್ ಆ್ಯಪ್ ಆಗಿದ್ದು, ಇದರ ಬೇಸಿಕ್ ವ್ಯವಸ್ಥೆಯಲ್ಲಿ ಗರಿಷ್ಠ 100 ಮಂದಿ ಏಕಕಾಲಕ್ಕೆ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಬಹುದಾಗಿದೆ. ಇದನ್ನು ಕಂಪ್ಯೂಟರಿನಲ್ಲಿಯೂ ಬಳಸಬಹುದಾಗಿದೆ. ಇದು ಅಮೆರಿಕದ ಸಿಲಿಕಾನ್ ಸಿಟಿ ಮೂಲದ ನವೋದ್ಯಮ ಕಂಪನಿಯ ಕೊಡುಗೆ.

ಝೂಮ್ ಮೂಲಕ ನಡೆಸಲಾಗುವ ಆನ್‌ಲೈನ್ ಸಮಾವೇಶಗಳಲ್ಲಿ, ನೆಟ್‌ವರ್ಕ್ ಸಿಗ್ನಲ್ ತೀರಾ ದುರ್ಬಲವಾಗಿದ್ದರೆ, ವಿಡಿಯೊ ಬಟನ್ ಆಫ್ ಮಾಡಿ, ಕಡಿಮೆ ಬ್ಯಾಂಡ್‌ವಿಡ್ತ್ ಅಗತ್ಯವಿರುವ ಆಡಿಯೋ ಮೂಲಕವೂ ಭಾಗವಹಿಸಬಹುದು.

ಇದನ್ನು ಕಂಪ್ಯೂಟರಿನಲ್ಲಿ ಬಳಸಬೇಕಿದ್ದರೆ ಹೀಗೆ ಮಾಡಿ. https://otago.zoom.us/join ತಾಣಕ್ಕೆ ಹೋಗಿ. ಮೊದಲ ಬಾರಿಗೆ ಹೋದಾಗ, ಒಂದು ಸಣ್ಣ ಲಾಂಚರ್ ಅಪ್ಲಿಕೇಶನ್ (exe) ಫೈಲನ್ನು ಡೌನ್‌ಲೋಡ್ ಮಾಡಿ, ಅನುಸ್ಥಾಪಿಸಿಕೊಳ್ಳಿ.

ಮೊಬೈಲ್ ಫೋನ್‌ನಿಂದಾದರೆ, ಝೂಮ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. ನಿಮ್ಮ ಇಮೇಲ್ ಐಡಿ ಮೂಲಕ ಹೆಸರು ನೋಂದಾಯಿಸಿಕೊಳ್ಳಿ. ಇಮೇಲ್‌ಗೆ ಬಂದಿರುವ ವೆರಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ, ದೃಢೀಕರಿಸಿ.

ಹಲವರು ಏಕಕಾಲದಲ್ಲಿ ಸಮಾವೇಶಗೊಳ್ಳುವುದರಿಂದ, ನಿಮಗೇನಾದರೂ ಮಾತನಾಡಬೇಕಿದ್ದರೆ, ಕೈಯೆತ್ತುವ ಆಯ್ಕೆಯೊಂದು ಗೋಚರಿಸುತ್ತದೆ. ಅದರಲ್ಲೇ ಚಾಟಿಂಗ್ (ಪಠ್ಯ ಸಂದೇಶದ ಮೂಲಕ) ವ್ಯವಸ್ಥೆಯೂ ಇದೆ.

ಯಾರು ಮೀಟಿಂಗ್ ಕರೆದಿರುತ್ತಾರೋ, ಅವರೊಂದು ಐಡಿ ಹಂಚಿಕೊಂಡಿರುತ್ತಾರೆ, ಅದನ್ನು ನಮೂದಿಸಿ ಆನ್‌ಲೈನ್ ಮೀಟಿಂಗ್‌ಗೆ ಸೇರಿಕೊಳ್ಳಲೂಬಹುದು. ಉಚಿತ ವ್ಯವಸ್ಥೆಯಲ್ಲಿ 100ರಷ್ಟು ಮಂದಿ, ಗರಿಷ್ಠ 40 ನಿಮಿಷದ ಮೀಟಿಂಗ್‌ನಲ್ಲಿ ಭಾಗವಹಿಸಬಹುದು. ಹೆಚ್ಚು ಜನರಿದ್ದರೆ ಮತ್ತು ಹೆಚ್ಚು ಸಮಯದ ಅಗತ್ಯವಿದ್ದರೆ ಹಣ ಪಾವತಿಯ ವ್ಯವಸ್ಥೆಯೂ ಇದೆ.

ಆದರೆ, ಭಾರತದ ರಾಷ್ಟ್ರೀಯ ಸೈಬರ್ ಭದ್ರತಾ ಏಜೆನ್ಸಿಯಾಗಿರುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT) ಈ ಬಗ್ಗೆ ಒಂದು ಎಚ್ಚರಿಕೆಯನ್ನೂ ನೀಡಿದೆ. ಸೂಕ್ಷ್ಮವಾದ ಕಚೇರಿ ಮಾಹಿತಿಯು ಇಲ್ಲಿ ಸೈಬರ್ ವಂಚಕರ ಕೈಗೆ ಸಿಗದಂತೆ ಕಟ್ಟೆಚ್ಚರ ವಹಿಸುವಂತೆ ಅದು ಸೂಚಿಸಿದೆ. ಎಲ್ಲ ರೀತಿಯ ಆ್ಯಂಟಿ ವೈರಸ್ ರಕ್ಷಣೆ, ಅಪ್‌ಡೇಟ್ ಆಗಿರುವ ತಂತ್ರಜ್ಞಾನದ ಬಳಕೆ, ಊಹಿಸಲು ಕಠಿಣವಾದ ಪಾಸ್‌ವರ್ಡ್ – ಈ ಎಚ್ಚರಿಕೆಗಳನ್ನು ವಹಿಸಿದರೆ ಪಾರಾಗಬಹುದು.

Published in Prajavani on 04 April 2020 by Avinash B

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s