‘ಕ್ವಾರಂಟೈನ್ ವಾಚ್’ ಆ್ಯಪ್ ಬಗ್ಗೆ ನಿಮಗಿದು ತಿಳಿದಿರಲಿ

ಹೋಂ ಕ್ವಾರಂಟೈನ್‌ನಲ್ಲಿದ್ದೀರಾ? ಹದ್ದಿನ ಕಣ್ಣಿಡುತ್ತದೆ ಈ ಆ್ಯಪ್!
Quarantine Watchವಿದೇಶಕ್ಕೆ ಹೋಗಿ ಬಂದವರಿಗೆ ಮತ್ತು ಕೊರೊನಾ ವೈರಸ್ ಸೋಂಕುಳ್ಳವರೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಕಡ್ಡಾಯ 14 ದಿನಗಳ ಕಾಲ ಮನೆಯೊಳಗಿನ ಪ್ರತ್ಯೇಕ ವಾಸಕ್ಕೆ ಸೂಚಿಸಿದರೂ, ಕೆಲವರು ವಿವೇಕಶೂನ್ಯವಾಗಿ ವರ್ತಿಸಿ ಊರೆಲ್ಲಾ ಓಡಾಡುತ್ತಾ ವೈರಸ್ ಹರಡಲು ಕಾರಣರಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮವಾಗಿ ಇತರರಿಗೂ ಸೋಂಕು ಹರಡುವ ಶಂಕಿತರ ಚಲನವಲನಕ್ಕೆ ಕಡಿವಾಣ ಹಾಕಲೆಂದೇ ಕರ್ನಾಟಕ ಸರ್ಕಾರವು ಈಗ ತಂತ್ರಜ್ಞರ ನೆರವು ಪಡೆದು ಒಂದು ಮೂರನೇ ಕಣ್ಣನ್ನು ಸೃಷ್ಟಿಸಿದೆ. ಅದುವೇ ಕ್ವಾರಂಟೈನ್ ವಾಚ್ ಎಂಬ ಆ್ಯಪ್. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮೂಲಕ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮತ್ತು ತಂಡವು ಈ ಆ್ಯಪ್ ಸಿದ್ಧಪಡಿಸಿದೆ. ಸೆಲ್ಫೀ ಆಧಾರಿತ ಮುಖ ಗುರುತಿಸುವಿಕೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಜಿಯೋ ಲೊಕೇಶನ್ ಟ್ರ್ಯಾಕಿಂಗ್ ತಂತ್ರಜ್ಞಾನಗಳ ಸಮಾಗಮವಿದು.

ಕೊರೊನಾ ವೈರಸ್ ಹರಡದಂತೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳಲ್ಲಿ ಇದೂ ಒಂದು. ವಿದೇಶದಿಂದ ಬಂದವರು ಮತ್ತು ಕೊರೊನಾ ಶಂಕಿತರು ಎಂದು ಗುರುತಿಸಲ್ಪಟ್ಟು, 14 ದಿನಗಳ ಹೋಂ ಕ್ವಾರಂಟೈನ್‌ಗಾಗಿ ಕೈಗೆ ಮುದ್ರೆ (ಸ್ಟ್ಯಾಂಪ್) ಹಾಕಿಸಿಕೊಂಡವರು ಕಡ್ಡಾಯವಾಗಿ ಈ ಆ್ಯಪ್ ಬಳಸಬೇಕಾಗುತ್ತದೆ. ಮತ್ತು ಪ್ರತೀ ಗಂಟೆಗೊಮ್ಮೆ ತಾವೆಲ್ಲಿದ್ದೇವೋ ಅಲ್ಲಿಂದ ತಮ್ಮ ಫೋಟೋ (ಸೆಲ್ಫೀ) ತೆಗೆದು ಕಳುಹಿಸಬೇಕಾಗುತ್ತದೆ. ಅವರು ಮನೆಯಲ್ಲೇ ಇರಬೇಕು, ಹೊರಗೆ ಓಡಾಡಬಾರದು ಎಂಬುದಷ್ಟೇ ಇದರ ಉದ್ದೇಶ. ಅವರು ಕಳುಹಿಸುವ ಫೋಟೋದಲ್ಲಿಯೇ ಜಿಪಿಎಸ್ ಆಧಾರಿತ ಲೊಕೇಶನ್ ಮತ್ತು ಸಮಯವೂ ಅಡಕವಾಗಿರುತ್ತದೆ.

Home Quarantineಈ ಫೋಟೋಗಳನ್ನು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಪ್ರತ್ಯೇಕ ತಂಡವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಈ ತಂತ್ರಜ್ಞಾನದ ನೆರವಿನಿಂದ ಪರಿಶೀಲಿಸುತ್ತಿರುತ್ತದೆ. ಇದರ ಜೊತೆಗೆ, ಕೊರೊನಾ ಸೋಂಕಿನ ಶಂಕಿತರು ಮನೆ ಬಿಟ್ಟು ಎಲ್ಲೋ ಬೇರೆ ಕಡೆಯಿಂದ ಸೆಲ್ಫೀ ತೆಗೆದು ಕಳುಹಿಸಿದರೆ ಅಥವಾ ಮನೆಯಲ್ಲೇ ತೆಗೆದಿದ್ದ ಬೇರೆ ಫೋಟೋವನ್ನು ಬೇರೆಯೇ ಸ್ಥಳದಿಂದ ಅಪ್‌ಲೋಡ್ ಮಾಡಿದರೆ, ಇದರಲ್ಲಿ ಅಡಕವಾಗಿರುವ ತಂತ್ರಾಂಶವು ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ತಕ್ಷಣ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ಕಾರ್ಯಪ್ರವೃತ್ತವಾಗುವ ಈ ತಂಡವು, ಪೊಲೀಸರಿಗೆ ಮಾಹಿತಿ ನೀಡಿ, ಕ್ವಾರಂಟೈನ್ ಅವಧಿ ಉಲ್ಲಂಘಿಸಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಸುತ್ತದೆ.

ಗಮನಿಸಬೇಕಾದ ವಿಚಾರವೆಂದರೆ, ಈ ಆ್ಯಪ್ ಸಾಮಾನ್ಯ ನಾಗರಿಕರ ಬಳಕೆಗಲ್ಲ. ಹೋಂ ಕ್ವಾರಂಟೈನ್‌ಗಾಗಿ ಶಿಫಾರಸು ಮಾಡಲಾದ, ಕೈಗೆ ಮುದ್ರೆ ಹಾಕಿಸಿಕೊಂಡವರಿಗಷ್ಟೇ ಈ ಆ್ಯಪ್ ಬಳಸುವುದು ಸಾಧ್ಯವಾಗುತ್ತದೆ. ಸೋಂಕು ಶಂಕಿತರ ಮೊಬೈಲ್ ಫೋನ್ ನಂಬರ್ ಮೂಲಕ ಇದಕ್ಕೆ ಲಾಗಿನ್ ಆಗಬೇಕಾಗುತ್ತದೆ. ಈ ಫೋನ್ ನಂಬರನ್ನು ಸರ್ಕಾರಿ ಇಲಾಖೆಯೇ ಮೊದಲೇ ಡೇಟಾಬೇಸ್‌ಗೆ ಸೇರಿಸಿರುತ್ತದೆ. ನೋಂದಣಿ ಮಾಡಿದ ಬಳಿಕ ಪೊಲೀಸ್ ದೃಢೀಕರಣವೂ ನಡೆಯುತ್ತದೆ. ಅದರ ಬಳಿಕ, ಶಂಕಿತರು, ಸೋಂಕು ಪೀಡಿತರು ಲಾಗಿನ್ ಆಗಬಹುದು. ಅವರು ಕಳುಹಿಸುವ ಸೆಲ್ಫೀ ಫೋಟೋಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಗುರುತಿಸಿ, ಸ್ಥಳ ಹಾಗೂ ಮುಖ ಚಹರೆಯು ಹೋಲಿಕೆಯಾಗದಿದ್ದಲ್ಲಿ ಅಧಿಕಾರಿಗಳನ್ನು ಎಚ್ಚರಿಸುತ್ತದೆ. ಕರ್ನಾಟಕ ಮಾತ್ರವಲ್ಲದೆ, ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿಯೂ ಇಂಥದ್ದೇ ಆ್ಯಪ್‌ಗಳ ಬಳಕೆಯನ್ನು ಕಟ್ಟುನಿಟ್ಟು ಮಾಡಲಾಗಿದೆ.

ಮನೆಯಿಂದ ಹೊರ ಹೋದವರಿದ್ದರೆ ಪೊಲೀಸರು ಬಂದು ಅವರ ಬಾಗಿಲು ಬಡಿಯುತ್ತಾರೆ. ಹೀಗಾಗಿ, ಸೋಂಕು ಹರಡುವುದನ್ನು ತಡೆಯುವುದೇ ಕೊರೊನಾ ವೈರಸ್ ನಿವಾರಿಸುವ ಏಕೈಕ ಮಾರ್ಗವಾಗಿರುವುದರಿಂದ, ಮನೆಯೊಳಗೇ ಇರಿ, ಸುರಕ್ಷಿತವಾಗಿರಿ, ಆರೋಗ್ಯವಾಗಿರಿ.

ಪ್ರಜಾವಾಣಿಯಲ್ಲಿ ಪ್ರಕಟ (03 ಏಪ್ರಿಲ್ 2020) by ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s