ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್: ಒಂದು ಆ್ಯಪ್, ಹಲವು ಪ್ರಯೋಜನಗಳು

ಭಾಷಾಂತರ ಸೇವೆ ಒದಗಿಸಬಲ್ಲ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಎಂಬ ತಂತ್ರಾಂಶಕ್ಕೆ ಏಪ್ರಿಲ್ ಮಧ್ಯಭಾಗದ ವೇಳೆ ಕನ್ನಡ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳು ಸೇರ್ಪಡೆಯಾದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್ ನ್ಯೂರಲ್ ನೆಟ್‌ವರ್ಕ್ಸ್ ಎಂಬ ತಂತ್ರಜ್ಞಾನಗಳನ್ನು ಆಧರಿಸಿ ಕೆಲಸ ಮಾಡುವ ಈ ತಂತ್ರಾಂಶವು ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ (ಕಂಪ್ಯೂಟರ್ ಸಹಿತ) ಕಾರ್ಯಾಚರಣಾ ವ್ಯವಸ್ಥೆಗಳಿಗೆ ಆ್ಯಪ್ ರೂಪದಲ್ಲಿ ಲಭ್ಯವಿದೆ.

ಕನ್ನಡ, ಮಲಯಾಳಂ, ಪಂಜಾಬಿ, ಗುಜರಾತಿ ಹಾಗೂ ಮರಾಠಿ ಭಾಷೆಗಳು ಹೊಸದಾಗಿ ಸೇರ್ಪಡೆಯಾಗಿದ್ದರೆ, ಹಿಂದಿ, ಬಂಗಾಳಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಅನುವಾದ ಸೇವೆಯು ಹಿಂದಿನಿಂದಲೂ ದೊರೆಯುತ್ತಿತ್ತು.

ಇದು ಹೇಗೆ ಕೆಲಸ ಮಾಡುತ್ತದೆ?
ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್ ಆ್ಯಪ್ ಅಳವಡಿಸಿಕೊಂಡು ನೋಡಿದಾಗ, ಗೂಗಲ್ ಭಾಷಾಂತರ ವ್ಯವಸ್ಥೆಗಿಂತ ಕೊಂಚ ಉತ್ತಮ ಮಟ್ಟದಲ್ಲಿರುವುದು ಕಂಡುಬಂದಿತು. ಈ ಆ್ಯಪ್ ತೆರೆದಾಗ, ನಮಗೆ ಪಠ್ಯ ಟೈಪ್ ಮಾಡಿ ಭಾಷಾಂತರ ಮಾಡುವ, ನುಡಿಯಿಂದ ಪಠ್ಯಕ್ಕೆ ಭಾಷಾಂತರ ಮತ್ತು ಚಿತ್ರದಿಂದ ಪಠ್ಯ ರೂಪಕ್ಕೆ ಭಾಷಾಂತರ ಮಾಡಬಲ್ಲ ಬಟನ್‌ಗಳಿರುತ್ತವೆ.

ಇದರ ಜೊತೆಗೆ, ಹೆಚ್ಚು ಕುತೂಹಲ ಮೂಡಿಸಿದ್ದು ನಾಲ್ಕನೆಯ ಬಟನ್. ಇದರಲ್ಲಿ, ಒಂದು ಗುಂಪು ರಚಿಸಿಕೊಂಡು, ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೆ, ಅದನ್ನು ಬೇರೆಯವರು ತಮಗೆ ಬೇಕಾದ ಭಾಷೆಯಲ್ಲಿ ತಿಳಿಯಬಹುದಾದ ಒಂದು ಅತ್ಯುತ್ತಮ ಸೌಕರ್ಯ ಇದರಲ್ಲಿದೆ. ಇದನ್ನು ಡೆಸ್ಕ್‌ಟಾಪ್ ಮೂಲಕವೂ ಮಾಡಲು https://translator.microsoft.com/ ಎಂಬಲ್ಲಿಗೆ ಹೋಗಿ ನೋಡಬಹುದು. ಕಂಪನಿಯಲ್ಲಿರುವ ಅನ್ಯ ಭಾಷಿಗರೊಂದಿಗೆ ಮೀಟಿಂಗ್ ನಡೆಸಬೇಕಾದ ಸಂದರ್ಭದಲ್ಲಿ ಇದು ನೆರವಿಗೆ ಬರುತ್ತದೆ. ಇದು ಬಹುಭಾಷೀಯ ಸಂಭಾಷಣೆಗಾಗಿರುವ ವೈಶಿಷ್ಟ್ಯ.

ಆದರೆ, ನಿರಾಶೆಯ ಅಂಶವೆಂದರೆ ನುಡಿಯಿಂದ/ಮಾತಿನಿಂದ ಹಾಗೂ ಚಿತ್ರದಿಂದ ಬೇರೆ ಭಾಷೆಗಳಿಗೆ ಭಾಷಾಂತರಿಸುವ ವ್ಯವಸ್ಥೆ ಇರುವುದು ಸದ್ಯಕ್ಕೆ ಭಾರತದ ಹಿಂದಿ, ತಮಿಳು, ತೆಲುಗು ಭಾಷೆಗಳಿಗೆ ಮಾತ್ರ. ಕನ್ನಡ ಸಹಿತ ಇತರ ಭಾರತೀಯ ಭಾಷೆಗಳಿಗೆ ಇದರ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಬೇಕಿದೆ.

ಮಾತು ಹಾಗೂ ಚಿತ್ರಗಳ ಇಂಗ್ಲಿಷ್ ವಾಕ್ಯಗಳು ಕನ್ನಡಕ್ಕೆ ಅನುವಾದಗೊಂಡವಾದರೂ, ಗೂಗಲ್‌ನಲ್ಲಿರುವಂತೆಯೇ ಯಾಂತ್ರಿಕ ಅನುವಾದವಾಗಿರುವುದರಿಂದ ಇಲ್ಲೂ ಕೂಡ ವಾಕ್ಯ ರಚನೆ ಮತ್ತು ಸಾಂದರ್ಭಿಕತೆಯ ಸಮಸ್ಯೆಗಳಿವೆ. ಅಕ್ಷರ ದೋಷಗಳು ಕಡಿಮೆ ಇವೆ. ಆದರೆ, ಕನ್ನಡದಿಂದ ಅನ್ಯ ಭಾಷೆಗೆ ಭಾಷಾಂತರ ವ್ಯವಸ್ಥೆಯು ಸದ್ಯಕ್ಕೆ ಪಠ್ಯ (ಟೈಪಿಂಗ್ ಮೂಲಕ) ಮಾತ್ರ ಇದೆ. ಹಿಂದಿ, ಇಂಗ್ಲಿಷ್ ಹಾಗೂ ವಿದೇಶೀ ಭಾಷೆಗಳಲ್ಲಿ ಇವನ್ನು ಕೇಳಿಸಿಕೊಳ್ಳುವ ಸ್ಪೀಚ್ ವ್ಯವಸ್ಥೆಯೂ ಇದರಲ್ಲಿದೆ.

ಇದಲ್ಲದೆ, ಈ ಆ್ಯಪ್ ಬಳಸಿ, ನಾವು ಮಾಡಿದ ಭಾಷಾಂತರದ ಪಠ್ಯವನ್ನು ಅಲ್ಲಿಂದಲೇ ಸೋಷಿಯಲ್ ಮೀಡಿಯಾ, ಇಮೇಲ್, ಪಠ್ಯ ಸಂದೇಶ ಮೂಲಕ ಹಂಚಿಕೊಳ್ಳುವ ವ್ಯವಸ್ಥೆಯಿದೆ. ಇಂಟರ್ನೆಟ್ ಇಲ್ಲದೆಯೂ ಕೆಲಸ ಮಾಡಲು ಅನುವಾಗುವಂತೆ, ನಮಗೆ ಬೇಕಾದ ಭಾಷಾ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುವ ಆಯ್ಕೆಯಿದೆ.

ಇದರ ಜತೆಗೆ ಗಮನ ಸೆಳೆದ ಮತ್ತೊಂದು ಸೌಕರ್ಯವೆಂದರೆ, ಮೈಕ್ ಬಟನ್ ಅದುಮಿದಾಗ, ಪಕ್ಕದಲ್ಲೇ ಎರಡು ಮೈಕ್‌ಗಳಿರುವ ಬಟನ್ ಗೋಚರಿಸುತ್ತದೆ. ಅದನ್ನು ಅದುಮಿದರೆ, ಹಿಂದೆ ಹೊಂದಿಸಿದ ಭಾಷೆಗಳ ಮಧ್ಯೆ, ಒಂದೇ ಸ್ಕ್ರೀನ್‌ನಲ್ಲಿ, ಸ್ಪ್ಲಿಟ್-ಸ್ಕ್ರೀನ್ ಮೂಲಕ ಎರಡು ಭಾಷೆಗಳನ್ನು ನೋಡಬಹುದು ಮತ್ತು ಕೇಳಿಸಿಕೊಳ್ಳಬಹುದು.

ಇಷ್ಟೇ ಅಲ್ಲ, ಈ ಪುಟ್ಟ ಆ್ಯಪ್‌ನ ಎಡ ಕೆಳಭಾಗದಲ್ಲಿ ಗಡಿಯಾರದ ಐಕಾನ್ ಇದೆ. ನಾವು ಇದುವರೆಗೆ ಅನುವಾದಕ್ಕೆ ಸಂಬಂಧಿಸಿದಂತೆ ಈ ಆ್ಯಪ್‌ನಲ್ಲಿ ಮಾಡಿದ ಎಲ್ಲ ಕೆಲಸಗಳೂ ಇಲ್ಲಿ ಸ್ಟೋರ್ ಆಗಿರುತ್ತವೆ. ಬಲ ಕೆಳಭಾಗದಲ್ಲಿ ಪುಸ್ತಕದ ಐಕಾನ್ ಒತ್ತಿದರೆ, ಸಾಮಾನ್ಯವಾಗಿ ಬಳಸುವ ಪದಗುಚ್ಛಗಳ ಸಂಗ್ರಹವೇ ಇದೆ. ಇದು ವಿದೇಶಕ್ಕೆ ಪ್ರವಾಸ ಹೋಗುವಾಗ ಅಲ್ಲಿನ ಭಾಷೆಯಲ್ಲಿ ವ್ಯವಹರಿಸಬೇಕಾದಾಗ ಅನುಕೂಲವಾಗಬಹುದು.

ಈ ತಂತ್ರಾಂಶವು ಕಂಪ್ಯೂಟರುಗಳಿಗೂ ಲಭ್ಯವಿದೆ. ಒಟ್ಟಿನಲ್ಲಿ ಇದು ಬೆರಳ ತುದಿಯಲ್ಲಿ ಹಲವು ಸೇವೆಗಳನ್ನು ನೀಡಬಲ್ಲ ವೈಶಿಷ್ಟ್ಯಗಳ ಗುಚ್ಛ ಎನ್ನಬಹುದು.

ಪ್ರಜಾವಾಣಿಯಲ್ಲಿ ಪ್ರಕಟ By ಅವಿನಾಶ್ ಬಿ. On 08 ಮೇ 2020

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s