ಇಂಟರ್ನೆಟ್ಟಲ್ಲಿ ಯೂನಿಕೋಡ್ ಕನ್ನಡ ಬಳಕೆ: ನೆಪ ಹೇಳೋ ಹಾಗಿಲ್ಲ
ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ವಿಶ್ವದ ಎಲ್ಲ ಭಾಷೆಗಳಿಗೆ ಸಮದಂಡಿಯಾಗಿ ಕನ್ನಡವೂ ಬೆಳೆಯಬೇಕೆಂಬ ಇರಾದೆಯೊಂದಿಗೆ, ಕನ್ನಡದ ಮನಸ್ಸುಳ್ಳ ತಂತ್ರಜ್ಞರ ನಿಸ್ವಾರ್ಥ ಶ್ರಮದೊಂದಿಗೆ ಯೂನಿಕೋಡ್ ಎಂಬ ಸಾರ್ವತ್ರಿಕ ಶಿಷ್ಟತೆಯಲ್ಲಿ ಕನ್ನಡ ಬೆರೆತು ಹೋಗಿ ಪ್ರಗತಿ ಸಾಧಿಸಲಾರಂಭಿಸಿ ದಶಕವೇ ಕಳೆಯಿತು. ಇಂದು ಇಂಟರ್ನೆಟ್ ಲೋಕದಲ್ಲಿ ಕನ್ನಡ ಇಷ್ಟು ಸಮೃದ್ಧವಾಗಿ ಬೆಳೆದಿದೆಯೆಂದರೆ, ಅಂತರಜಾಲದಲ್ಲಿ ಕನ್ನಡದಲ್ಲಿಯೇ ಟೈಪ್ ಮಾಡಿ ಯಾವುದನ್ನೇ ಹುಡುಕಿದರೂ ತಕ್ಷಣ ಲಕ್ಷಾಂತರ ಪುಟಗಳು ತೆರೆದುಕೊಳ್ಳುತ್ತವೆಯೆಂದರೆ, ಜಾಲತಾಣ ಲೋಕದಲ್ಲಿ ಕನ್ನಡಿಗರು ಯಾವ ಪರಿ ಸಕ್ರಿಯರಾಗಿದ್ದಾರೆ ಎಂಬುದು ವೇದ್ಯವಾಗುತ್ತದೆ. ಒಂದೆಡೆ, ಕನ್ನಡದಲ್ಲಿ ಬರೆದದ್ದನ್ನು ಹೇಳುವ (ಟೆಕ್ಟ್ಸ್…