ಮನೆಯಿಂದ ಕೆಲಸ: 11 ಸೈಬರ್ ಸುರಕ್ಷಾ ಸೂತ್ರಗಳು

Zoom Meetingಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ. ಎಲ್ಲವೂ ಇಂಟರ್ನೆಟ್ ಮೂಲಕವೇ ನಡೆಯುವುದರಿಂದ, ಸೈಬರ್ ಕ್ರಿಮಿನಲ್‌ಗಳು ಕಾದು ಕುಳಿತಿರುತ್ತಾರೆ. ತತ್ಫಲವಾಗಿ ಸೈಬರ್ ವಂಚನೆ ಪ್ರಕರಣಗಳೂ ಹೆಚ್ಚಾಗುತ್ತಿವೆ. ಇಂಟರ್ನೆಟ್ ಮೂಲಕ ಮನೆಯಿಂದಲೇ ಕೆಲಸ ಮಾಡುವವರು ವೈಯಕ್ತಿಕ ಮತ್ತು ಕಂಪನಿಯ ಹಿತದೃಷ್ಟಿಯಿಂದ, ಸೈಬರ್ ಸುರಕ್ಷೆಗೆ ನೆರವಾಗುವ ಈ 11 ಅಂಶಗಳನ್ನು ಅನುಸರಿಸುವುದು ಅಗತ್ಯ.

1. ಕಚೇರಿಯಲ್ಲಾದರೆ ಸುರಕ್ಷಿತ ನೆಟ್‌ವರ್ಕ್ ಇರುತ್ತದೆ. ಆದರೆ, ಮನೆಯಿಂದ ಕೆಲಸ ಮಾಡುವಾಗ, ನಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕಾಗುತ್ತದೆ. ಬಹುತೇಕ ಕಂಪನಿಗಳು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಮೂಲಕ, ಸುರಕ್ಷಿತ ಕೆಲಸಕ್ಕೆ ಅನುವು ಮಾಡಿಕೊಟ್ಟಿವೆ. ವಿಪಿಎನ್ ತಂತ್ರಾಂಶವನ್ನು ಅಳವಡಿಸಿಕೊಳ್ಳಿ, ಇದರಿಂದ ಯಾವುದೇ ಫೈಲ್‌ಗಳ ಆನ್‌ಲೈನ್ ವಿನಿಮಯವು ಸೈಬರ್ ಕಳ್ಳರ ಪಾಲಾಗುವ ಸಾಧ್ಯತೆಗಳು ತೀರಾ ಕಡಿಮೆ.

2. ನಿಮ್ಮ ಸಿಸ್ಟಂಗೆ ವೈರಸ್, ಫೀಶಿಂಗ್ ಮುಂತಾದವುಗಳಿಂದ ಸಮರ್ಥವಾಗಿ ರಕ್ಷಣೆ ನೀಡಬಲ್ಲ ಉತ್ತಮ ಆ್ಯಂಟಿ-ಮಾಲ್‌ವೇರ್ (ಸುರಕ್ಷತಾ ತಂತ್ರಾಂಶ) ಅಳವಡಿಸಿಕೊಳ್ಳಿ.

3. ಸಿಸ್ಟಂನ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನ) ಕಾರ್ಯಾಚರಣಾ ವ್ಯವಸ್ಥೆಯನ್ನು ಹಾಗೂ ಬ್ರೌಸರ್ ಸೇರಿದಂತೆ ಎಲ್ಲ ಪ್ರೋಗ್ರಾಂಗಳು ಕಾಲಕಾಲಕ್ಕೆ ನೀಡುವ ಸೆಕ್ಯುರಿಟಿ ಪ್ಯಾಚ್ ಸಹಿತದ ತಂತ್ರಾಂಶ ಅಪ್‌ಡೇಟ್‌ಗಳನ್ನು ಅಳವಡಿಸಿಕೊಳ್ಳಲೇಬೇಕು. ಸೈಬರ್ ದಾಳಿಯಿಂದ ಇದು ಭದ್ರತೆ ಒದಗಿಸುತ್ತದೆ.

4. ಸಿಸ್ಟಂ ಮತ್ತು ಲಾಗಿನ್ ಅನಿವಾರ್ಯವಿರುವ ಎಲ್ಲ ಪ್ರೋಗ್ರಾಂ ಅಥವಾ ಸೇವೆಗಳ ಪಾಸ್‌ವರ್ಡ್ ಬದಲಿಸಿ, ಪ್ರಬಲವಾದ ಪಾಸ್‌ವರ್ಡ್ ಬಳಸಿ.

Cyber Safety WFH

5. ಎದ್ದು ಹೋಗುವಾಗ ಸ್ಕ್ರೀನ್ ಲಾಕ್ ಮಾಡಲು ಮರೆಯದಿರಿ. ಇದರಲ್ಲಿ ಕಂಪನಿಯ ರಹಸ್ಯಗಳಿರುತ್ತವೆ ಮತ್ತು ಗೌಪ್ಯತಾ ನೀತಿಯ ರಕ್ಷಣೆಗೆ ನೀವು ಒಡಂಬಡಿಕೆ ಮಾಡಿಕೊಂಡಿರುವುದರಿಂದ ಎಚ್ಚರ ಇರಬೇಕಾಗುತ್ತದೆ. ಜೊತೆಗೆ, ಮಕ್ಕಳು ಮುಟ್ಟಿ ಅಥವಾ ಮನೆಯೊಳಗಿರುವ ಸಾಕುಪ್ರಾಣಿಗಳು ಕೀಬೋರ್ಡ್ ಮೇಲೆ ಓಡಾಡಿ, ಆಕಸ್ಮಿಕವಾಗಿ ಫೈಲ್ ಡಿಲೀಟ್ ಆಗದಂತಿರಲೂ ಇದು ಸಹಕಾರಿ.

6. ವೈಯಕ್ತಿಕ ಖಾತೆಗಳ ಬದಲಾಗಿ, ಕಂಪನಿ ಒದಗಿಸಿರುವ ಇಮೇಲ್ ಹಾಗೂ ಗೂಗಲ್ ಡ್ರೈವ್‌ನಂತಹಾ ಕ್ಲೌಡ್ ಸ್ಟೋರೇಜ್ ತಾಣಗಳನ್ನೇ ಬಳಸಿ, ಡಾಕ್ಯುಮೆಂಟ್ ವಿನಿಮಯ ಮಾಡಿಕೊಳ್ಳಿ.

7. ಕಾರ್ಪೊರೇಟ್ (ಕಚೇರಿ) ಇಮೇಲ್‌ಗೆ ಕೂಡ ಫೀಶಿಂಗ್ ಅಥವಾ ಮಾಲ್‌ವೇರ್, ಲಿಂಕ್ ಇರುವ ಇಮೇಲ್‌ಗಳು ಬರುವ ಸಾಧ್ಯತೆಯಿದ್ದೇ ಇದೆ. ಹೀಗಾಗಿ ಅಪರಿಚಿತರಿಂದ ಬಂದಿರುವ ಇಮೇಲ್ ಅಟ್ಯಾಚ್‌ಮೆಂಟ್/ಲಿಂಕ್ ತೆರೆಯಲು ಹೋಗಬೇಡಿ.

8. ಆನ್‌ಲೈನ್ ಮೀಟಿಂಗ್ ಅಥವಾ ಕಾನ್ಫರೆನ್ಸ್ ಲಿಂಕ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ, ಅನ್ಯರೊಂದಿಗೆ ತಪ್ಪಿಯೂ ಹಂಚಿಕೊಳ್ಳಬೇಡಿ.

9. ಕಚೇರಿ ಕೆಲಸಕ್ಕಾಗಿ ಕಂಪನಿ ಒದಗಿಸಿರುವ ಲ್ಯಾಪ್‌ಟಾಪ್ ಬಳಸಿ, ವೈಯಕ್ತಿಕ ಕಂಪ್ಯೂಟರ್ ಬೇಡ. ಅದೇ ರೀತಿ, ಖಾಸಗಿ ಕೆಲಸ ಕಾರ್ಯಗಳಿಗೆ ನಿಮ್ಮ ವೈಯಕ್ತಿಕ ಸಿಸ್ಟಂ ಅನ್ನೇ ಬಳಸಿ.

10. ನಿಮ್ಮ ಸಿಸ್ಟಂನಲ್ಲಿರುವ ‘ರಿಮೋಟ್ ಆ್ಯಕ್ಸೆಸ್’ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿಬಿಡಿ.

11. ಯಾವುದೇ ಕಾರಣಕ್ಕೂ ಉಚಿತ ಅಥವಾ ಮುಕ್ತವಾಗಿ ಲಭ್ಯವಿರುವ, ವಿಶ್ವಾಸಾರ್ಹವಲ್ಲದ ವೈಫೈ ವ್ಯವಸ್ಥೆಯನ್ನು ಬಳಸಬೇಡಿ.

16 ಏಪ್ರಿಲ್ 2020, ಪ್ರಜಾವಾಣಿಯಲ್ಲಿ ಪ್ರಕಟ By ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s