ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವಿಕೆಗಾಗಿ ಎಲ್ಲರೂ ಮನೆಯೊಳಗೇ ಇರಿ ಎಂದು ಸರ್ಕಾರ ಸೂಚನೆ ನೀಡಿದ ಬಳಿಕ, ಮನೆಯಿಂದಲೇ ಕಚೇರಿ ಕೆಲಸ ನಿಭಾವಣೆಗಾಗಿ ಹಾಗೂ ಅನಿರೀಕ್ಷಿತವಾಗಿ ರಜೆಯನ್ನೇ ಪಡೆದು ಮನೆಯಲ್ಲಿ ಕುಳಿತಿರುವವರೆಲ್ಲರೂ ಈಗ ಇಂಟರ್ನೆಟ್ ಮೊರೆ ಹೋಗಿದ್ದಾರೆ. ಕಚೇರಿ ಕೆಲಸಕ್ಕಾಗಿ ಫೈಲ್ ಶೇರಿಂಗ್ ಇತ್ಯಾದಿಗಳಿಗಾಗಿ ಹೆಚ್ಚಿನ ವೇಗದ ಇಂಟರ್ನೆಟ್ ಬೇಕಿದ್ದರೆ, ರಜೆಯಲ್ಲಿ ಮನೆಯೊಳಗಿರುವವರು ಆನ್‌ಲೈನ್‌ನಲ್ಲಿ ವಿಭಿನ್ನ ಮನರಂಜನಾ ತಾಣಗಳಲ್ಲಿ ಲಭ್ಯವಾಗುವ ವಿಡಿಯೊಗಳು, ಸಿನಿಮಾ, ಧಾರಾವಾಹಿಗಳನ್ನು, ಹಾಡುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಇದು ಇಂಟರ್ನೆಟ್ ಬ್ಯಾಂಡ್‌ವಿಡ್ತ್ ಬಳಕೆಯಲ್ಲಿಯೂ ದಿಢೀರ್ ಏರಿಕೆಗೆ ಕಾರಣವಾಗಿರುವುದರಿಂದ, ಜನಪ್ರಿಯ ವಿಡಿಯೊ ತಾಣವಾಗಿರುವ ಯೂಟ್ಯೂಬ್ ಈಗ ಸ್ಟ್ರೀಮ್ ಆಗುವ ವಿಡಿಯೊ ಗುಣಮಟ್ಟದ ಮೇಲೆ ನಿರ್ಬಂಧ ವಿಧಿಸಿದೆ.
ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರು ತಮ್ಮ ಸಾಧನಗಳ ಮೂಲಕ ವೀಕ್ಷಿಸುವ ವಿಡಿಯೊಗಳ ಗುಣಮಟ್ಟವನ್ನು 480 ಪಿಕ್ಸೆಲ್‌ಗೆ ಯೂಟ್ಯೂಬ್ ಇಳಿಸಿದೆ. ಲಾಕ್‌ಡೌನ್ ಜಾರಿಯಲ್ಲಿರುವ ಏಪ್ರಿಲ್ 14ರವರೆಗೆ ಸೆಲ್ಯುಲಾರ್ ಡೇಟಾ ಅಥವಾ ವೈಫೈ ಸಂಪರ್ಕ ಬಳಸುತ್ತಿರುವ ಎಲ್ಲರಿಗೂ ಇದು ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ದೇಶದೆಲ್ಲೆಡೆ ಮಾತ್ರವೇ ಅಲ್ಲದೆ ಜಾಗತಿಕವಾಗಿ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ (ಕರ್ಫ್ಯೂ) ಘೋಷಣೆ ಮಾಡಲಾಗಿದ್ದು, ಕೊರೊನಾ ಸೋಂಕು ಪೀಡಿತರು ಸ್ವಯಂ ಗೃಹಬಂಧನದಲ್ಲಿದ್ದಾರೆ ಮತ್ತೆ ಕೆಲವರನ್ನು ಬಲವಂತವಾಗಿ ಮನೆಯೊಳಗೆ ಕುಳ್ಳಿರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಮತ್ತಿತರ ಡಿಜಿಟಲ್ ಸಾಧನಗಳಲ್ಲಿ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಅಮೆಜಾನ್ ಪ್ರೈಮ್ ಮತ್ತಿತರ ಆ್ಯಪ್‌ಗಳ ಮೂಲಕ ವಿಡಿಯೊ ವೀಕ್ಷಣೆಯ ಪ್ರಮಾಣವೂ ಭರ್ಜರಿಯಾಗಿ ಏರಿಕೆ ಕಂಡಿದೆ.
ಸೆಲ್ಯುಲಾರ್ ಮೂಲಸೌಕರ್ಯದ ಮೇಲಾಗುತ್ತಿರುವ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ, ಪ್ಲೇಬ್ಯಾಕ್ ಹಾಗೂ ಡೌನ್‌ಲೋಡ್ ಆಗುವ ವಿಡಿಯೊಗಳ ಗುಣಮಟ್ಟವನ್ನು 480 ಪಿಕ್ಸೆಲ್‌ಗಳಿಗೆ ತಗ್ಗಿಸಲಾಗಿದೆ. ಗೂಗಲ್ ಒಡೆತನದ ವಿಡಿಯೊ ಸ್ಟ್ರೀಮಿಂಗ್ ವೇದಿಕೆಯಾಗಿರುವ ಯೂಟ್ಯೂಬ್, ಆರಂಭದಲ್ಲಿ ಯುಕೆ ಮತ್ತು ಸ್ವಿಜರ್ಲೆಂಡ್ ಮುಂತಾದ ಐರೋಪ್ಯ ದೇಶಗಳಲ್ಲಿ ಮಾತ್ರವೇ ರೆಸೊಲ್ಯುಶನ್ ಮಿತಿ ಹೇರಿತ್ತು. ಆದರೆ ಜಾಗತಿಕವಾಗಿ ಕೋವಿಡ್-19 ಹರಡುವ ಪ್ರಮಾಣ, ಅದರಿಂದಾದ ಲಾಕ್‌ಡೌನ್ ಹೆಚ್ಚಾಗುತ್ತಿರುವಂತೆಯೇ ಅನ್ಯ ದೇಶಗಳಿಗೂ ಈ ನಿರ್ಬಂಧವನ್ನು ವಿಸ್ತರಿಸಿತು.
ಸದ್ಯಕ್ಕೆ ಭಾರತದಲ್ಲಿ ದೆಹಲಿ ಮತ್ತು ಮುಂಬಯಿಯಂತಹಾ ಮೆಟ್ರೋ ನಗರಗಳಲ್ಲಿ ಇದನ್ನು ಕಟ್ಟುನಿಟ್ಟು ಮಾಡಲಾಗಿದ್ದರೆ, ನೆಟ್ವರ್ಕ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿಯೂ ಹೆಚ್‌ಡಿ ಅಥವಾ 4ಕೆ ಗುಣಮಟ್ಟದ ವಿಡಿಯೊಗಳು ಲಭ್ಯವಾಗುತ್ತಿಲ್ಲ. ಈಗ ಬಹುತೇಕ ಕಡೆಗಳಲ್ಲಿ 1080 ಪಿಕ್ಸೆಲ್ ಹಾಗೂ 4ಕೆ (ಗರಿಷ್ಠ ಗುಣಮಟ್ಟ) ಸಾಮರ್ಥ್ಯದ ವಿಡಿಯೊಗಳ ವೀಕ್ಷಣೆ ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಬಳಕೆದಾರರ ಸಾಂದ್ರತೆ ಹೆಚ್ಚಿರುವುದರಿಂದ, ಅದಕ್ಕೆ ಪೂರಕವಾದ ಮೂಲಸೌಕರ್ಯ ಇಲ್ಲದಿರುವುದರಿಂದಾಗಿ, ಇಂಟರ್ನೆಟ್ ಕೂಡ ನಿಧಾನಗತಿಯಲ್ಲಿದೆ. ಈ ಕುರಿತು ಬಳಕೆದಾರರು ಈಗಾಗಲೇ ಆಕ್ಷೇಪ ಎತ್ತುತ್ತಿದ್ದಾರೆ.
ಯೂಟ್ಯೂಬ್ ಮಾತ್ರವಲ್ಲದೆ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೊ, ಹೊಸದಾಗಿ ಬಂದಿರುವ ಡಿಸ್ನಿ ಪ್ಲಸ್ ಕೂಡ ಜಾಗತಿಕವಾಗಿ ತಮ್ಮ ಸ್ಟ್ರೀಮಿಂಗ್ ವಿಡಿಯೊಗಳ ಗುಣಮಟ್ಟವನ್ನು ತಗ್ಗಿಸಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳೂ ಈ ಕ್ರಮಕ್ಕೆ ಮುಂದಾಗಿದ್ದರೆ, ವಾಟ್ಸ್ಆ್ಯಪ್ ತನ್ನ ವೇದಿಕೆಯ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಲಾಗುವ ವಿಡಿಯೊ ಗುಣಮಟ್ಟಕ್ಕೆ ಕಡಿವಾಣ ಹಾಕಲು ನಿರ್ಧರಿಸಿದೆ.
ಪ್ರಜಾವಾಣಿಯಲ್ಲಿ ಪ್ರಕಟ by ಅವಿನಾಶ್ ಬಿ.