ಇಂಟರ್ನೆಟ್ ಇಲ್ಲದಾಗ Youtube ವಿಡಿಯೊ ನೋಡಬೇಕೇ? ಹೀಗೆ ಮಾಡಿ!

Youtubeಹೇಗೂ ಲಾಕ್‌ಡೌನ್, ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಚಾಲ್ತಿಯಲ್ಲಿರುವ ಮನರಂಜನಾ ವಾಹಿನಿಗಳಲ್ಲೂ ಮನಸ್ಸು ಅರಳಿಸುವ ಅಥವಾ ಕೆರಳಿಸುವ ಧಾರಾವಾಹಿಗಳೂ ಇಲ್ಲ. ಆದರೆ, ಮನೆಯಲ್ಲೇ ಕುಳಿತವರಿಗೆ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇದೆ ಮತ್ತು ಈಗ ಇದೇ ಸುಸಂದರ್ಭವೆಂಬಂತೆ, ಗೂಗಲ್ ಒಡೆತನದ ಯೂಟ್ಯೂಬ್‌ನಲ್ಲಂತೂ ಸಾಕಷ್ಟು ಮನೋರಂಜನೆಯ, ಶೈಕ್ಷಣಿಕ ವಿಡಿಯೊಗಳು, ಚಿತ್ರಗಳ ಟ್ರೇಲರ್‌ಗಳು, ಟ್ಯುಟೋರಿಯಲ್, ಆನ್‌ಲೈನ್ ಶಿಕ್ಷಣ, ವೆಬ್ ಸೀರೀಸ್ – ಜೊತೆಗೆ ಚಲನಚಿತ್ರಗಳು, ಯಕ್ಷಗಾನ, ಧಾರಾವಾಹಿಗಳ ತುಣುಕುಗಳು, ರಾಜಕೀಯ ನಾಯಕರ ಹೇಳಿಕೆಗಳು – ಈ ಕ್ಲಿಪ್ಪಿಂಗ್‌ಗಳು ಕೂಡ ಸಾಕಷ್ಟು ಲಭ್ಯವಾಗುತ್ತಿವೆ. ಆದರೆ, ಇವೆಲ್ಲವೂ ದೊರೆಯಬೇಕಿದ್ದರೆ ಇಂಟರ್ನೆಟ್ ಸಂಪರ್ಕ ಬೇಕೇಬೇಕು. ಅದಿಲ್ಲದಿದ್ದರೆ ಏನೂ ಇಲ್ಲವೆಂದಾಗುತ್ತದೆ.

ಆದರೆ, ಇಂಟರ್ನೆಟ್ ಸಂಪರ್ಕ ಇರುವಾಗಲೇ ನಮಗೆ ಬೇಕು ಬೇಕಾದ ವಿಡಿಯೊಗಳನ್ನು ಸೇವ್ ಮಾಡಿಟ್ಟುಕೊಂಡರೆ, ಇಂಟರ್ನೆಟ್ ಇಲ್ಲದಿರುವಾಗ ನೋಡಲೆಂದು ಸ್ವತಃ ಯೂಟ್ಯೂಬ್ ಒಂದು ಅತ್ಯಮೂಲ್ಯ ಸೌಕರ್ಯವನ್ನೂ ಒದಗಿಸಿಕೊಟ್ಟಿರುವುದು ಬಹುತೇಕರಿಗೆ ತಿಳಿದಿಲ್ಲ. ಇಷ್ಟೇ ಅಲ್ಲ, ಇಂಟರ್ನೆಟ್ ಇರುವಾಗ ನಮ್ಮ ಫೋನ್‌ಗಳಿಗೆ ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಂಡು, ಸಮಯವಿದ್ದಾಗ ನೋಡುವ ವ್ಯವಸ್ಥೆಯೂ ಇದೆ. ಈ ಎರಡು ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

ಯೂಟ್ಯೂಬ್ ಆಫ್‌ಲೈನ್
ಯಾವುದೇ ಯೂಟ್ಯೂಬ್ ವಿಡಿಯೊ ತೆರೆದಾಗ, ಅದನ್ನು ನೋಡಲು ಈಗ ಸಮಯವಿಲ್ಲವೆಂದೋ ಅಥವಾ ಬೇರೆ ದಿನ ನೋಡೋಣ ಎಂದೋ ನಿರ್ಧರಿಸಿದರೆ, ಅದಕ್ಕಾಗಿ ಯೂಟ್ಯೂಬ್‌ನ ಅಧಿಕೃತ ಆ್ಯಪ್‌ನಲ್ಲಿ ‘ಡೌನ್‌ಲೋಡ್’ ಎಂಬ ಆಯ್ಕೆಯೊಂದಿದೆ. ವಾಸ್ತವವಾಗಿ ಇದು ನಮ್ಮ ಮೊಬೈಲ್ ಸಾಧನಗಳಿಗೆ ಡೌನ್‌ಲೋಡ್ ಮಾಡುವ ಆಯ್ಕೆಯಲ್ಲ. ಇಂಟರ್ನೆಟ್ ಇಲ್ಲದಾಗ ಯೂಟ್ಯೂಬ್ ಆ್ಯಪ್ ಮೂಲಕ ಮಾತ್ರವೇ ನೋಡಬಹುದಾದ ಸೌಲಭ್ಯವಿದು. ಒಂದು ರೀತಿಯಲ್ಲಿ ಲೋಕಲ್ ಫೈಲ್ ಇದ್ದಂತೆ. ಇದನ್ನು ಹಂಚಲಾಗದು ಅಥವಾ ಬೇರೆ ವಿಡಿಯೊ ಪ್ಲೇಯರ್‌ನಲ್ಲಿ ವೀಕ್ಷಿಸಲಾಗದು.

ಹೇಗೆ?:
ಯೂಟ್ಯೂಬ್ ಆ್ಯಪ್ ತೆರೆದು ನಮಗೆ ಬೇಕಾದ ವಿಡಿಯೊ ತೆರೆಯಿರಿ. ಪ್ಲೇ ಆರಂಭವಾದಾಗ ಅದರ ಕೆಳ ಭಾಗದಲ್ಲಿ ‘ಡೌನ್‌ಲೋಡ್’ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನೊತ್ತಿದಾಗ, ವಿಡಿಯೊ ಗುಣಮಟ್ಟವನ್ನು ಆಯ್ಕೆ ಮಾಡಿಕೊಳ್ಳಲು ವಿಂಡೋ ಕಾಣಿಸುತ್ತದೆ. ಗುಣಮಟ್ಟ ಆಯ್ಕೆ ಮಾಡಿದ ತಕ್ಷಣ ಡೌನ್‌ಲೋಡ್ ಪ್ರಾರಂಭವಾಗುತ್ತದೆ. ಪ್ಲೇ ಆಗದಿರುವ ವಿಡಿಯೊವನ್ನು ಆಫ್‌ಲೈನ್ ವೀಕ್ಷಣೆಗಾಗಿ ಡೌನ್‌ಲೋಡ್ ಮಾಡಬೇಕೆಂದಿದ್ದರೆ ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನುವನ್ನು ಒತ್ತಿದಾಗ, ಡೌನ್‌ಲೋಡ್ ಆಯ್ಕೆಯೊಂದು ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು.

ಮುಂದಿನ ಬಾರಿ ಯೂಟ್ಯೂಬ್ ತೆರೆದಾಗ, ಕೆಳಭಾಗದಲ್ಲಿರುವ ಲೈಬ್ರರಿ ಬಟನ್ ಕ್ಲಿಕ್ ಮಾಡಿದಾಗ, ಡೌನ್‌ಲೋಡ್ಸ್ ಎಂದು ಬರೆದಿರುವಲ್ಲಿ ಈ ವಿಡಿಯೊಗಳು ಗೋಚರಿಸುತ್ತವೆ. ಬೇಕಾದುದನ್ನು ಆಯ್ಕೆ ಮಾಡಿಕೊಂಡು ನೋಡಬಹುದು.

ಡೌನ್‌ಲೋಡ್ ಮಾಡುವುದು:
ಮುಖ್ಯವಾಗಿ ಗಮನಿಸಲೇಬೇಕಾದ ವಿಚಾರವೊಂದಿದೆ. ಯಾವುದೇ ವಿಡಿಯೊವನ್ನು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡುವುದು ಕೇವಲ ವೈಯಕ್ತಿಕ ಬಳಕೆಗಾಗಿ ಮಾತ್ರವೇ ಹೊರತು, ಹಂಚುವುದಕ್ಕಾಗಿ ಅಥವಾ ಕೃತಿಸ್ವಾಮ್ಯ ಉಲ್ಲಂಘನೆಗಾಗಿ ಅಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಅನ್ಯಥಾ ಬಳಸುವುದು ಅಪರಾಧವೂ ಆಗುತ್ತದೆ. ಜವಾಬ್ದಾರಿಯುತ ಬಳಕೆಗಾಗಿ ಡೌನ್‌ಲೋಡ್ ಮಾಡಲು ಸಾಕಷ್ಟು ಆ್ಯಪ್‌ಗಳಿವೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾತ್ರವಲ್ಲದೆ, ಅನ್ಯ ಜಾಲತಾಣಗಳಲ್ಲಿಯೂ (ಥರ್ಡ್ ಪಾರ್ಟಿ) ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಕೆಲಸ ಮಾಡಬಲ್ಲ ಆ್ಯಪ್‌ಗಳು ದೊರೆಯುತ್ತವೆ. ವಿಶ್ವಾಸಾರ್ಹ ತಾಣಗಳಿಂದಷ್ಟೇ ಅವುಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.

Snaptube ಎಂಬ ಆ್ಯಪ್ ಚೆನ್ನಾಗಿದೆ. ಇದನ್ನು ಬಳಸಿ ಯೂಟ್ಯೂಬ್ ಮಾತ್ರವಲ್ಲದೆ, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾದವುಗಳಿಂದಲೂ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕಂಪ್ಯೂಟರಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದರೆ 4K Downloader ಎಂಬ ಪುಟ್ಟ ತಂತ್ರಾಂಶ ಲಭ್ಯವಿದೆ. ನಮಗೆ ಬೇಕಾದ ಯೂಟ್ಯೂಬ್ ವಿಡಿಯೊದ ಯುಆರ್‌ಎಲ್ ಅನ್ನು 4ಕೆ ಡೌನ್‌ಲೋಡರ್ ತಂತ್ರಾಂಶವನ್ನು ತೆರೆದಾಗ ಕಂಡುಬರುವ ಬಾಕ್ಸ್‌ನಲ್ಲಿ ಹಾಕಿದರೆ, ಯಾವ ಫಾರ್ಮ್ಯಾಟ್‌ನಲ್ಲಿ ಮತ್ತು ಯಾವ ಗುಣಮಟ್ಟದಲ್ಲಿ (ರೆಸೊಲ್ಯುಶನ್) ವಿಡಿಯೊ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಜತೆಗೆ, ಆನ್‌ಲೈನ್‌ನಲ್ಲೇ Save From Net ಅಥವಾ VDYoutube ಎಂಬ ಮುಂತಾದ ಜಾಲತಾಣಗಳಿವೆ. ಅಲ್ಲಿ ಯುಆರ್‌ಎಲ್ ಪೇಸ್ಟ್ ಮಾಡಿದರೆ, ನಮಗೆ ಬೇಕಾದ ರೆಸೊಲ್ಯುಶನ್‌ನಲ್ಲಿ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿಡಿಯೊ ಬೇಡವೆಂದಾದರೆ, ಆಡಿಯೋ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯೂ ಇದೆ.

09 ಏಪ್ರಿಲ್ 2020 ಪ್ರಜಾವಾಣಿಯಲ್ಲಿ ಪ್ರಕಟ by ಅವಿನಾಶ್ ಬಿ. 

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s