ಕನ್ನಡವಿಲ್ಲದ ಮೊಬೈಲಿಗೂ ನಿಘಂಟು, ಬ್ರೌಸರ್‌ಗೆ ಉಚಿತ ಪ್ಲಗ್-ಇನ್

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-17 (ಡಿಸೆಂಬರ್ 17, 2012)
ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಯಾವ ರೀತಿ ಓದಿದರೂ ಒಂದೇ ರೀತಿಯಾಗಿರುವ ಸಂಖ್ಯೆ, ಪದ ಅಥವಾ ವಾಕ್ಯಕ್ಕೆ ಪ್ಯಾಲಿಂಡ್ರೋಮ್ ಎನ್ನುತ್ತಾರೆ. ಕಳೆದ ವಾರ ಬಂದ 12-12-12 ದಿನಾಂಕ ನಮ್ಮ ಜೀವಮಾನದಲ್ಲೇ ಒಮ್ಮೆ ಬರುವುದರಿಂದ ಅದರ ನೆನಪಿಗಾಗಿ ಏನಾದರೂ ಮಾಡಬೇಕೆಂದುಕೊಂಡ ತಂತ್ರಜ್ಞಾನ ಪ್ರಿಯರೊಬ್ಬರು, ಕನ್ನಡವೂ ಸೇರಿ ಭಾರತದ 12 ಭಾಷೆಗಳ ಡಿಕ್ಷನರಿಯನ್ನು 12-12-12ರಂದು 12 ಗಂಟೆ 12 ನಿಮಿಷ 12 ಸೆಕೆಂಡಿಗೆ ಸರಿಯಾಗಿ ಬಿಡುಗಡೆಗೊಳಿಸಿದ್ದಾರೆ.

ಇದರಲ್ಲಿ ಹಲವಾರು ವಿಶೇಷತೆಗಳಿವೆ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳಲ್ಲಿ ಮಾತ್ರವಲ್ಲದೆ, ಕನ್ನಡವನ್ನು ಬೆಂಬಲಿಸದ ಜಾವಾ ಆಧಾರಿತ ಮೊಬೈಲ್ ಫೋನ್‌ಗಳಲ್ಲಿಯೂ ಡಿಕ್ಷನರಿಯನ್ನು ಅಳವಡಿಸಿಕೊಂಡು ಬಳಸಬಹುದು. ಇಂತಹಾ ಅಪರೂಪದ ಭಾಷಾ ಸೇವೆ ಮಾಡಿದವರು ಸುನಿಲ್ ಖಾಂಡಬಹಾಲೆ ಎಂಬ ಮರಾಠಿ ಭಾಷಾ ಉದ್ಯಮಿ. ಅವರದೇ ಆದ http://khandbahale.com ಗೆ ಹೋದರೆ ನಿಮಗೇ ತಿಳಿಯುತ್ತದೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಬಂಗಾಳಿ, ಸಂಸ್ಕೃತ ಮತ್ತು ಉರ್ದು ಭಾಷೆಗಳಲ್ಲಿ ಈ ನಿಘಂಟುಗಳು ಲಭ್ಯ.

ನೀವು ಬಳಸುತ್ತಿರುವ ಬ್ರೌಸರ್‌ಗಳಿಗೆ (ಇಂಟರ್ನೆಟ್ ಎಕ್ಸ್‌ಪ್ಲೋರರ್, ಒಪೆರಾ, ಫೈರ್‌ಫಾಕ್ಸ್, ಕ್ರೋಮ್, ಸಫಾರಿ ಮುಂತಾದವು) ಸೂಕ್ತವಾದ ಪ್ಲಗ್-ಇನ್ ಒಂದನ್ನು (ಕಿರು ತಂತ್ರಾಂಶ) ಅಳವಡಿಸಿಕೊಂಡುಬಿಟ್ಟರೆ, ಆಂಗ್ಲ ವೆಬ್‌ಸೈಟ್ ತೆರೆದು ಓದುತ್ತಿರುವಾಗ, ಯಾವುದಾದರೂ ಪದದ ಅರ್ಥ ಕನ್ನಡದಲ್ಲಿ (ಕನ್ನಡ ಪದದ ಅರ್ಥ ಇಂಗ್ಲಿಷಿನಲ್ಲಿಯೂ) ತಿಳಿಯಬಹುದು. ಆ ಪದವನ್ನು ಸೆಲೆಕ್ಟ್ ಮಾಡಿ ರೈಟ್-ಕ್ಲಿಕ್ ಮಾಡಿದರೆ, ಅದರ ಅರ್ಥ ಕಾಣಿಸುತ್ತದೆ. ಈ ಡಿಕ್ಷನರಿ ಪರಿಪೂರ್ಣವಲ್ಲ, ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಅನಿಸುತ್ತದೆ. ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ, ಆದರಿದು ಉಚಿತ. ಆಫ್‌ಲೈನ್‌ನಲ್ಲಿ ಮರಾಠಿ ಮತ್ತು ಹಿಂದಿ ಭಾಷಾ ನಿಘಂಟುಗಳು ಮಾತ್ರ ಇವೆ. ಇಂಗ್ಲಿಷ್-ಇಂಗ್ಲಿಷ್ ಹಾಗೂ ಇಂಗ್ಲಿಷ್‌ನಲ್ಲಿ ಕಾನೂನು ಡಿಕ್ಷನರಿಯೂ ಲಭ್ಯ. ಈ ಆಫ್‌ಲೈನ್ ಡಿಕ್ಷನರಿಗಳಿಗೆ ಮತ್ತು ಇಂಗ್ಲಿಷ್ ಸ್ಪೀಕಿಂಗ್ ಸಾಫ್ಟ್‌ವೇರ್ – ಇವು ಪಾವತಿ ಸೇವೆಗಳು.

ಉಚಿತವಾಗಿ ಪದಗಳ ಅರ್ಥ ದೊರೆಯಬೇಕೆಂದಾದರೆ, ಅವರದೇ ಸೈಟ್‌ಗೆ ಹೋಗಿ ಕನ್ನಡ ಟ್ಯಾಬ್ ಕ್ಲಿಕ್ ಮಾಡಬೇಕು. ನಂತರ ಮೇಲ್ಭಾಗದಲ್ಲಿರುವ ಸರ್ಚ್ ಬಾಕ್ಸ್‌ನಲ್ಲಿ ಯಾವುದಾದರೂ ಪದ ಟೈಪ್ ಮಾಡಿದರೆ, ಅಥವಾ ಅಲ್ಲಿರುವ ಮೈಕ್ ಗುರುತು ಕ್ಲಿಕ್ ಮಾಡಿ, ಪದವನ್ನು ಮೈಕ್ರೋಫೋನ್ ಇರುವ ಹೆಡ್‌ಸೆಟ್ ಮೂಲಕ ಉಚ್ಚರಿಸಿದರೆ, ತಕ್ಷಣವೇ ಅರ್ಥವನ್ನು ಹುಡುಕಿ ತರುತ್ತದೆ.

ಮೊಬೈಲ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿಕೊಳ್ಳಬಹುದಾದ ಡಿಕ್ಷನರಿಗೆ ನೀವು ಹಣ ಪಾವತಿಸಬೇಕಾಗುತ್ತದೆ. ಅಳವಡಿಸಿಕೊಂಡ ಬಳಿಕ ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ. ಇಂಗ್ಲಿಷ್ ಲಿಪಿಯಲ್ಲಿ ಟೈಪ್ ಮಾಡಿದರೆ, ಇಂಗ್ಲಿಷಿನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅರ್ಥ ತಿಳಿದುಕೊಳ್ಳಬಹುದು. ಕನ್ನಡ ಬೆಂಬಲಿಸದ ಫೋನುಗಳಲ್ಲಾದರೆ, ಇಂಗ್ಲಿಷ್ ಲಿಪಿಯಲ್ಲಿ ಲಿಪ್ಯಂತರ (ಟ್ರಾನ್ಸ್‌ಲಿಟರೇಶನ್) ಮೂಲಕ ಅರ್ಥ ಪಡೆಯಬಹುದು.

ಮತ್ತೊಂದು ಎಸ್‌ಎಂಎಸ್ ಡಿಕ್ಷನರಿ ಇದೆ. ಯಾವುದಾದರೂ ಪದವನ್ನು ನೀವು 9243342000 ಮೊಬೈಲ್ ಸಂಖ್ಯೆಗೆ @kann ಅಂತ ಬರೆದು, ಒಂದು ಸ್ಪೇಸ್ ಕೊಟ್ಟು ನಿಮ್ಮ ಪದವನ್ನು ಆಂಗ್ಲ ಲಿಪಿಯಲ್ಲಿ ಬರೆದು ಎಸ್‌ಎಂಎಸ್ ಕಳುಹಿಸಿದರೆ, ಅರ್ಥ ವಿವರಣೆಯು ಎಸ್‌ಎಂಎಸ್ ರೂಪದಲ್ಲೇ ಬರುತ್ತದೆ. ಇದು ಉಚಿತ ಸೇವೆಯಾದರೂ, ಇಲ್ಲಿ ಒಂದು ಸಮಸ್ಯೆಯಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವ ಅವರ ಸಾಫ್ಟ್‌ವೇರ್, ನಿಮಗೆ ಜಾಹೀರಾತುಗಳ ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಅದು ಬೇಡವೆಂದಾದರೆ ನೀವು ಆ ಸಂದೇಶವೊಂದರಲ್ಲಿ ಕೊಟ್ಟಿರುವ ಸಂಖ್ಯೆಗೆ STOP ಅಂತ ಟೈಪ್ ಮಾಡಿ ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ.

ಯುನಿಕೋಡ್‌ನಲ್ಲಿ ಕನ್ನಡ ಟೈಪ್ ಮಾಡುವ ಸೌಲಭ್ಯವೂ ಅವರ ವೆಬ್ ಸೈಟ್‌ನಲ್ಲಿಯೇ ಇದೆ. ಮತ್ತು ಇಷ್ಟೆಲ್ಲವನ್ನೂ ಮಾಡಿಕೊಟ್ಟಿರುವುದು ಒಬ್ಬ ಮರಾಠಿ ಭಾಷಿಗ.

ನೀವೇನಂತೀರಾ?