ಸೇವೆ ಸರಿಯಿಲ್ಲವೇ? ಮೊಬೈಲ್ ನಂಬರ್ ಅದೇ ಇರಲಿ, ಸೇವಾ ಕಂಪನಿಯನ್ನೇ ಬದಲಿಸಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-18 (ಡಿಸೆಂಬರ್ 24, 2012)

ನಿಮ್ಮ ಮೊಬೈಲ್ ಆಪರೇಟರ್‌ರ ಸೇವೆ ಸರಿ ಇಲ್ಲ ಅಥವಾ ನೀವು ಇರುವ ಊರಿನಲ್ಲಿ ಸರಿಯಾಗಿ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ, ಬೇರೆ ಕಂಪನಿಯ ಸಿಮ್ ತೆಗೆದುಕೊಂಡರೆ ಮೊಬೈಲ್ ನಂಬರ್ ಕೂಡ ಬದಲಾಗುತ್ತದೆ ಎಂದು ಇನ್ನು ಚಿಂತಿಸಬೇಕಾಗಿಲ್ಲ. ನೀವೀಗ ಆಪರೇಟರರನ್ನೇ ಬದಲಾಯಿಸಬಹುದು. ಇದು ಸುಲಭ ಮತ್ತು ತ್ವರಿತ. ಭಾರತ ಸರಕಾರವು ಈ ಒಳ್ಳೆಯ ಸೌಕರ್ಯವನ್ನು ಒದಗಿಸಿಕೊಟ್ಟಿರುವುದು ಬಹುಶಃ ಗ್ರಾಮೀಣ ಭಾಗಗಳಲ್ಲಿ ಇರುವವರಿಗೆ ಗೊತ್ತಿರಲಾರದು. ಗೊತ್ತಿದ್ದರೂ ಹೇಗೆ ಮಾಡುವುದು ಎಂಬ ಮಾಹಿತಿ ಇಲ್ಲದಿರಬಹುದು. ಇದುವೇ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಅಥವಾ ಎಂಎನ್‌ಪಿ ಸೌಲಭ್ಯ. 2011ರ ಜನವರಿ 20ರಿಂದ ಈ ಸೌಲಭ್ಯ ಜಾರಿಯಲ್ಲಿದೆ. ಮತ್ತು ಇದು ಉಚಿತವೂ ಹೌದು.

ನಮ್ಮ ನಂಬರನ್ನು ಉಳಿಸಿಕೊಂಡು, ಸರ್ವಿಸ್ ಪ್ರೊವೈಡರ್‌ಗಳನ್ನು (ಬಿಎಸ್‌ಎನ್‌ಎಲ್, ಏರ್‌ಟೆಲ್, ವೊಡಾಫೋನ್, ಏರ್‌ಸೆಲ್, ಐಡಿಯಾ ಇತ್ಯಾದಿ) ಮಾತ್ರವೇ ಬದಲಾಯಿಸುವ ವ್ಯವಸ್ಥೆಯೇ ಎಂಎನ್‌ಪಿ. ಬೇರೆ ಮೊಬೈಲ್ ಕಂಪನಿ ಒಳ್ಳೆಯ ಆಫರ್ ಕೊಡುತ್ತಿದೆ ಎಂದು ಅನ್ನಿಸಿದರೆ, ಅಥವಾ ನಿಮ್ಮ ಈಗಿನ ಮೊಬೈಲ್ ಸೇವಾ ಕಂಪನಿಯು ಒಳ್ಳೆಯ ಸರ್ವಿಸ್ ಕೊಡುತ್ತಿಲ್ಲ ಅಂತ ಸಿಟ್ಟು ಬಂದಿದ್ದರೆ ನಂಬರ್ ಬದಲಿಸದೆಯೇ ಆಪರೇಟರರನ್ನು ಮಾತ್ರ ಬದಲಿಸುವ ಆಯ್ಕೆಯಿದು.

ಮೊದಲು ನೀವಿರುವಲ್ಲಿ ಅಥವಾ ನೀವು ಹೆಚ್ಚಾಗಿ ಹೋಗುತ್ತಿರುವಲ್ಲಿ ಯಾವ ಮೊಬೈಲ್ ಕಂಪನಿಯ ಕವರೇಜ್ ಹಾಗೂ ಸೇವೆ ಚೆನ್ನಾಗಿದೆ ಎಂಬುದನ್ನು ಸ್ನೇಹಿತರಿಂದ ತಿಳಿದುಕೊಳ್ಳಿ. ಒಮ್ಮೆ ಆಪರೇಟರ್ ಬದಲಾಯಿಸಬೇಕಿದ್ದರೆ ಕನಿಷ್ಠ 90 ದಿನಗಳಾಗಿರಬೇಕಾಗುತ್ತದೆ. ಸದ್ಯ ನೀವು ರಾಜ್ಯದೊಳಗಿನ (ಟೆಲಿಕಾಂ ಪರಿಭಾಷೆಯಲ್ಲಿ ‘ಸರ್ಕಲ್’ ಅನ್ನುತ್ತಾರೆ) ಮೊಬೈಲ್ ಸಂಖ್ಯೆಯನ್ನು ಮಾತ್ರವೇ ಬೇರೆ ಆಪರೇಟರುಗಳಿಗೆ ಪೋರ್ಟ್ ಮಾಡಬಹುದಾಗಿದೆ. ಮುಂದಿನ (2013) ಫೆಬ್ರವರಿ ತಿಂಗಳಿಂದ ಇದು ದೇಶಾದ್ಯಂತ ಅನ್ವಯವಾಗಲಿದೆ ಅಂತ ನಮ್ಮ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಘೋಷಿಸಿದ್ದಾರೆ. ಅಂದರೆ ಬೇರೆ ರಾಜ್ಯಗಳ ಮೊಬೈಲ್ ನಂಬರ್ ಹೊಂದಿದ್ದರೂ ನೀವು ಈಗಿರುವಲ್ಲಿಗೆ ಪೋರ್ಟ್ ಮಾಡಿಸಿಕೊಳ್ಳಬಹುದು.

ಹೇಗೆ ಮಾಡುವುದು?:
ನಿಮ್ಮ ಈಗಿನ ನಂಬರ್‌ನಿಂದ PORT XXXXXXXXXX (ಇಲ್ಲಿ XXXXXXXXXX ಅಂದರೆ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ)ಅಂತ ಎಸ್‌ಎಂಎಸ್ ಸಂದೇಶವೊಂದನ್ನು ಬರೆದು 1900 ಸಂಖ್ಯೆಗೆ ಕಳುಹಿಸಿಬಿಡಿ. ಕೆಲವೇ ಕ್ಷಣಗಳಲ್ಲಿ ನಿಮಗೆ ನಿಮ್ಮ ಪ್ರಸ್ತುತ ಮೊಬೈಲ್ ಸೇವಾದಾರರಿಂದ ಒಂದು ಪೋರ್ಟಿಂಗ್ ಕೋಡ್ ಸಂಖ್ಯೆಯು ಎಸ್‌ಎಂಎಸ್ ರೂಪದಲ್ಲಿ ಬರುತ್ತದೆ. ಅದಕ್ಕೆ ಹದಿನೈದು ದಿನಗಳ ಅವಧಿಯೂ ಇರುತ್ತದೆ. ಅಷ್ಟರೊಳಗೆ ನೀವು ಈ ಸಂಖ್ಯೆಯನ್ನು ನಿಮಗೆ ಬೇಕಾದ ಮೊಬೈಲ್ ಸೇವಾದಾರ ಕಂಪನಿಯ ಶೋರೂಂಗಳಿಗೆ ಹೋಗಿ ತೋರಿಸಿ. ಹೋಗುವಾಗ ಒಂದು ಫೋಟೋ, ಗುರುತಿನ ಚೀಟಿ (ಐಡಿ) ಹಾಗೂ ವಿಳಾಸದ ಸಾಕ್ಷಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್ ಆಗಿದ್ದರೆ, ಅದರ ಹಿಂದಿನ ಬಿಲ್ ಪಾವತಿಸಿದ ರಶೀದಿಯನ್ನೂ ತೆಗೆದುಕೊಂಡು ಹೋಗಿ. ಬಾಕಿ ಉಳಿದಿರುವ ಬಿಲ್ ಪಾವತಿಸಬೇಕಾಗುತ್ತದೆ.

ಪೋರ್ಟಿಂಗ್ ಪ್ರಕ್ರಿಯೆಗೆ ಮೂರ್ನಾಲ್ಕು ದಿನಗಳು ಬೇಕಾಗಬಹುದು. ಅಲ್ಲಿಯವರೆಗೆ ನಿಮ್ಮ ಈಗಿರುವ ಮೊಬೈಲನ್ನು ಬಳಸುತ್ತಿರಬಹುದು. ಪ್ರೀಪೇಯ್ಡ್ ಆಗಿದ್ದರೆ ಅದರಲ್ಲಿರುವ ಎಲ್ಲ ಕರೆನ್ಸಿಯನ್ನೂ ಖಾಲಿ ಮಾಡಿಬಿಡಿ, ಯಾಕೆಂದರೆ ಬಾಕಿ ಉಳಿದಿರುವ ಕರೆನ್ಸಿಯು ವರ್ಗಾವಣೆಯಾಗುವುದಿಲ್ಲ.

ನಿಮ್ಮ ನಂಬರ್ ಪೋರ್ಟ್ ಆಗಿರುವ ಬಗ್ಗೆ ಹೊಸ ಆಪರೇಟರ್ ನಿಮಗೆ ತಿಳಿಸುತ್ತಾರೆ. ಈಗಿನ ಸಿಮ್ ತೆಗೆದು, ಹೊಸ ಆಪರೇಟರ್ ನೀಡುವ ಸಿಮ್ ಕಾರ್ಡನ್ನು ಮೊಬೈಲ್ ಸಾಧನಕ್ಕೆ ಅಳವಡಿಸಬೇಕು. ಆಪರೇಟರ್ ಬದಲಾಯಿಸುವಾಗ ಮೊಬೈಲ್ ಸಂಪರ್ಕಕ್ಕೆ ಅಡಚಣೆಯಾಗುವ ಅವಧಿ ಕೇವಲ ಸಿಮ್ ಕಾರ್ಡ್ ಬದಲಾಯಿಸಲು ಬೇಕಿರುವಷ್ಟು ನಿಮಿಷಗಳು ಮಾತ್ರ! ಹೊಸ ಮೊಬೈಲ್ ಸೇವೆಯೂ ಸರಿ ಇಲ್ಲ ಅಂತ ಅನ್ನಿಸಿದರೆ ಮೂರು ತಿಂಗಳ ಬಳಿಕ ನೀವು ಆ ನಂಬರನ್ನು ಬೇರೆ ಆಪರೇಟರ್‌ಗೆ ಪುನಃ ಬದಲಾಯಿಸಬಹುದು!

ಈ ವ್ಯವಸ್ಥೆಯಿಂದಾಗಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳ ಹೊಣೆಗಾರಿಕೆ ಹೆಚ್ಚಿದೆ. ಬೇರೆ ಕಂಪನಿಗಳಿಂದ ಪೋರ್ಟ್ ಮಾಡಿಸಿಕೊಳ್ಳುವವರಿಗೆ ಕೆಲವು ಮೊಬೈಲ್ ಸೇವಾ ಕಂಪನಿಗಳು ಭರ್ಜರಿ ಕೊಡುಗೆಯನ್ನೂ ನೀಡುತ್ತವೆ. ಇದರಿಂದ ಗ್ರಾಹಕರಿಗೆ ಲಾಭ ಹೆಚ್ಚು ಅನ್ನುವುದರಲ್ಲಿ ಎರಡು ಮಾತಿಲ್ಲ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s