ಅನಿವಾರ್ಯ ಅಗತ್ಯ: ಆಧಾರ್, ಮೊಬೈಲ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಹೀಗೆ

Aadhar Mobile Linkingಈಗ ಎಲ್ಲದಕ್ಕೂ ಆಧಾರ್ ಕಾರ್ಡ್ ಎಂಬುದು ಆಧಾರವೇ ಆಗುತ್ತಿದೆ. ಸರಕಾರವಂತೂ ಆಧಾರ್ ಸಂಖ್ಯೆ ಲಿಂಕ್ ಮಾಡುವ ಕ್ಷೇತ್ರಗಳನ್ನು ವಿಸ್ತರಿಸುತ್ತಲೇ ಇದೆ. ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಖಾತೆಗಳು ಜನ ಸಾಮಾನ್ಯರು ಅತ್ಯಗತ್ಯವಾಗಿ ಲಿಂಕ್ ಮಾಡಿಸಿಕೊಳ್ಳಬೇಕಾದ ಎರಡು ಸಂಗತಿಗಳು. ಇದರ ಜತೆಗೆ, ಪ್ಯಾನ್ ಕಾರ್ಡ್, ವಿಮಾ ಪಾಲಿಸಿಗಳು, ಮ್ಯೂಚುವಲ್ ಫಂಡ್, ಪಿಪಿಎಫ್ ಖಾತೆಗಳು ಕೂಡ ಆಧಾರ್ ವ್ಯಾಪ್ತಿಗೆ ಬರುತ್ತಿವೆ. ಜನ ಸಾಮಾನ್ಯರು ಕೂಡ ಹಲವಾರು ಕರೆಗಳು, ಎಸ್ಸೆಮ್ಮೆಸ್ ಬಂದಾಗ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಮಧ್ಯೆ, ಆಧಾರ್ ಲಿಂಕ್ ಮಾಡಿ ಎನ್ನುತ್ತಾ ನಮ್ಮ ಮಾಹಿತಿ ಕದಿಯುವ ಕಳ್ಳರ ಹಾವಳಿಯೂ ಹೆಚ್ಚಾಗಿದ್ದು, ಜನರು ಯಾರ್ಯಾರಿಗೋ ಆಧಾರ್ ಕಾರ್ಡ್ ಮಾಹಿತಿ ನೀಡಬಾರದು ಎಂದು ಎಚ್ಚರಿಸಲು ಇಲ್ಲಿದೆ ಮಾಹಿತಿ. ಜತೆಗೆ, ಏನು ಮಾಡಬೇಕೆಂಬ ಗೊಂದಲಗಳಿಗೆ ಪರಿಹಾರವೂ ಇಲ್ಲಿದೆ.

ಆಧಾರ್ ಕಾರ್ಡ್ ಎಂಬುದು ದೇಶದ ಪ್ರತಿ ನಾಗರಿಕನ ವಿಶಿಷ್ಟ ಗುರುತಿನ ಚೀಟಿ. ಅದು ಈಗ ವಿಳಾಸದ ದಾಖಲೆಯಾಗಿಯೂ, ಗುರುತಿನ ದಾಖಲೆಯಾಗಿಯೂ ಬಹುತೇಕ ಎಲ್ಲ ಕಡೆ ಸ್ವೀಕಾರಾರ್ಹ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರುವ ಮೊಬೈಲ್ ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರ್‌ಗಂತೂ ಆಧಾರ್ ಅನಿವಾರ್ಯ ಆಗಿದೆ. ಹೀಗಾಗಿ ಹಿಂದೆ ಆಧಾರ್ ಕಾರ್ಡ್ ಮಾಡಿಸಿದವರು ಈಗಿನ ಮೊಬೈಲ್ ನಂಬರಿಗೆ ಲಿಂಕ್ ಮಾಡುವುದು ಹೇಗೆ, ಹಿಂದಿನ ಮೊಬೈಲ್ ನಂಬರೇ ನೆನಪಿಲ್ಲದಿದ್ದರೆ ಏನು ಮಾಡಬೇಕು ಅಂತ ಇಲ್ಲಿ ವಿವರಿಸಿದ್ದೇನೆ.

ಮೊಬೈಲ್ ನಂಬರ್ ಬದಲಾಗಿದ್ದರೆ: ಕೆಲವು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸುವಾಗ ಕೊಟ್ಟಿರುವ ಮೊಬೈಲ್ ನಂಬರ್ ಬದಲಾಯಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ಅಥವಾ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಮೊಬೈಲ್ ನಂಬರನ್ನೇ ಕೊಟ್ಟಿಲ್ಲದಿದ್ದರೆ ಅಥವಾ ನಿಮ್ಮಲ್ಲಿ ಅಂದಿನ ಸಿಮ್ ಕಾರ್ಡ್ ಇಲ್ಲದಿದ್ದರೆ ಏನು ಮಾಡಬೇಕು? ಕೆಲವು ತಿಂಗಳ ಹಿಂದಿನವರೆಗೂ ಆನ್‌ಲೈನ್‌ನಲ್ಲೇ ಇದನ್ನು ಮಾಡಬಹುದಾಗಿತ್ತು. ಆದರೆ ಈ ಸೌಲಭ್ಯ ಈಗಿಲ್ಲ. ಹೀಗಾಗಿ ನೀವು ಆಧಾರ್ ಕೇಂದ್ರಗಳಿಗೇ ಹೋಗಿ (ಐಡಿ ಪ್ರೂಫ್, ವಿಳಾಸದ ಪ್ರೂಫ್ ಮತ್ತು ಆಧಾರ್ ಕಾರ್ಡ್ ಸಹಿತ ಹೋಗಿ) ಅಪ್‌ಡೇಟ್ ಮಾಡಬೇಕಾಗುತ್ತದೆ. ಆಧಾರ್‌ಗೆ ಸಂಬಂಧಿಸಿದಂತೆ ಏನೇ ಮಾಡುವುದಿದ್ದರೂ, ಮೊಬೈಲ್ ನಂಬರಿಗೇ ಒಟಿಪಿ ಬರುವುದರಿಂದ ಲಿಂಕ್ ಮಾಡುವುದು ಅತ್ಯಂತ ಅನಿವಾರ್ಯ. ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಮೊಬೈಲ್ ನಂಬರ್ ಪೂರಕವಾದರೆ, ಮೊಬೈಲ್ ಸಂಖ್ಯೆಯನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ಆಧಾರ್ ಸಂಖ್ಯೆಯೂ ಪೂರಕವಾಗುತ್ತದೆ. ಇತ್ತೀಚಿನ ದಿನಾಂಕ ವಿಸ್ತರಣೆಯ ಪ್ರಕಾರ, ಮುಂದಿನ ಅಂದರೆ 2018ರ ಫೆಬ್ರವರಿ 6ರೊಳಗೆ ಇವೆರಡೂ ಲಿಂಕ್ ಆಗಬೇಕಿರುತ್ತದೆ.

ಸಿಮ್ (ಮೊಬೈಲ್‌ಗೆ) ಲಿಂಕ್ ಮಾಡುವುದು
ಇದು ಕೂಡ ಕಡ್ಡಾಯ. ಸಿಮ್ ಕಾರ್ಡ್ ತೆಗೆದುಕೊಂಡಾಗಲೇ ಆಧಾರ್ ಕಾರ್ಡ್ ಮೂಲಕವೇ ಮೊಬೈಲ್ ನಂಬರ್ ಆ್ಯಕ್ಟಿವೇಶನ್ ಮಾಡಿದವರಿಗೆ ಇದರ ಅಗತ್ಯ ಇರುವುದಿಲ್ಲ. ತುಂಬಾ ಹಿಂದೆ ಸಿಮ್ ಕಾರ್ಡ್ ಖರೀದಿಸಿದವರು ಲಿಂಕ್ ಮಾಡಲೇಬೇಕು. ಏನು ಮಾಡಬೇಕೆಂದರೆ, ಆಧಾರ್ ಕಾರ್ಡ್‌ನ ಪ್ರತಿ ಹಾಗೂ ನಿಮ್ಮ ಮೊಬೈಲ್ ಫೋನ್ ಜತೆಗೆ ಆಯಾ ಮೊಬೈಲ್ ಕಂಪನಿಗಳ (ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಐಡಿಯಾ, ಜಿಯೋ ಮುಂತಾದ) ಸೇವಾ ಕೇಂದ್ರಗಳಿಗೆ ಹೋದರೆ ಅವರೇ ಲಿಂಕ್ ಮಾಡುತ್ತಾರೆ. ಮಧ್ಯವರ್ತಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಕೊಡಬೇಡಿ. ಸೇವಾ ಕೇಂದ್ರಗಳಲ್ಲಿ ನಿಮ್ಮ ಕೈಬೆರಳಿನ ಸ್ಕ್ಯಾನ್ ಮಾಡಲಾಗುತ್ತದೆ (ಇದು ಬಯೋಮೆಟ್ರಿಕ್ ಮಾಹಿತಿಯ ದೃಢೀಕರಣಕ್ಕಾಗಿ). ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಅಲ್ಲಿನ ಸಿಬ್ಬಂದಿಗೆ ಕೊಡಬೇಕು. ಒಂದೆರಡು ದಿನಗಳೊಳಗೆ ದೃಢೀಕರಣ ಸಂದೇಶ ಬರುತ್ತದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡುವುದು ಸಾಧ್ಯವಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು
ಬ್ಯಾಂಕ್ ಖಾತೆ ಮತ್ತು ಮೊಬೈಲ್ ನಂಬರ್ ಒಂದನ್ನು ಬಿಟ್ಟು ಇನ್ನೊಂದು ಹೇಗೆ ಇರಲಾರದೋ, ಅದೇ ರೀತಿ ಈಗ ಆಧಾರ್ ಮತ್ತು ಬ್ಯಾಂಕ್ ಖಾತೆಗೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ಇದು ಅನಿವಾರ್ಯವೂ ಆಗಿದೆ. ಇದಕ್ಕಾಗಿ ಎಲ್ಲ ಬ್ಯಾಂಕುಗಳೂ ಕಾರ್ಯತತ್ಪರವಾಗಿದ್ದು, ಗ್ರಾಹಕರಿಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತಲೇ ಇವೆ. ನೆಟ್ ಬ್ಯಾಂಕಿಂಗ್ ವ್ಯವಸ್ಥೆಗೆ ನೋಂದಾಯಿಸಿಕೊಂಡವರು ಆನ್‌ಲೈನ್‌ನಲ್ಲಿಯೇ ಇವುಗಳನ್ನು ಲಿಂಕ್ ಮಾಡಿಕೊಳ್ಳಬಹುದು.

ನೆಟ್ ಬ್ಯಾಂಕಿಂಗ್ ಮೂಲಕ ಲಿಂಕಿಂಗ್ ಹೇಗೆ?
ನಿಮ್ಮ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ. ಅದರ ಮೆನುವಿನಲ್ಲಿ ಆಧಾರ್ ಸೀಡಿಂಗ್, ಲಿಂಕ್ ಆಧಾರ್, ಆಧಾರ್ ಲಿಂಕಿಂಗ್ ಹೀಗೆ ಯಾವುದಾದರೂ ವಾಕ್ಯ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ನಮೂದಿಸಿ. ಆಧಾರ್‌ಗೆ ಅದಾಗಲೇ ಲಿಂಕ್ ಆಗಿರುವ ಮೊಬೈಲ್ ಫೋನ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ. ಆಧಾರ್ ವಿವರಗಳು ಕಾಣಿಸುತ್ತವೆ. ಆಧಾರ್‌ನಲ್ಲಿರುವ ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು, ಸ್ಪೆಲ್ಲಿಂಗ್ ಮತ್ತಿತರ ವಿವರಗಳು ತಾಳೆಯಾದರೆ ಲಿಂಕ್ ಆಗುತ್ತದೆ. ಇದು ಆನ್‌ಲೈನ್‌ನಲ್ಲಿ ನೀವೇ ಮಾಡಿಕೊಳ್ಳಬಹುದಾದ ವಿಧಾನ. ನೆಟ್ ಬ್ಯಾಂಕಿಂಗ್ ಖಾತೆ ಇಲ್ಲದಿದ್ದವರು ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಹೋಗಿ, ನಿಗದಿತ ಅರ್ಜಿಯನ್ನು ತುಂಬಿದರೆ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಮಾಡಲಾಗುತ್ತದೆ. ಸರಕಾರದಿಂದ ಬರುವ ಯಾವುದೇ ರೀತಿಯ ಸವಲತ್ತುಗಳು ನಗದು ರೂಪದಲ್ಲಿ ಬರಬೇಕಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಕಡ್ಡಾಯ.

ಈಗಿನ ಡಿಜಿಟಲ್ ಯುಗದ ಅನಿವಾರ್ಯತೆಗಳು ಪದೇ ಪದೇ ಮೊಬೈಲ್ ನಂಬರ್ ಬದಲಾಯಿಸದಂತೆಯೂ ನಿಮ್ಮನ್ನು ಕಟ್ಟಿ ಹಾಕುತ್ತಿವೆ. ಯಾಕೆಂದರೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿಗೆ ಈ ಮೊಬೈಲ್ ನಂಬರ್‌ನ ಅಗತ್ಯವಿರುತ್ತದೆ. ಹೀಗಾಗಿ ಭಾರಿ ಆಫರ್‌ಗಳಿಗೆ ಮನಸೋತು ಸಿಮ್ ಕಾರ್ಡ್ ತೆಗೆದುಕೊಳ್ಳುವ ಮೊದಲು, ಒಂದು ಸಿಮ್ ಕಾರ್ಡ್ (ಮೊಬೈಲ್ ನಂಬರ್) ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುವುದು ಈಗಿನ ಅಗತ್ಯ.

ಆಧಾರ್ ಲಿಂಕ್: ಈ ಡೆಡ್‌ಲೈನ್ ನೆನಪಿಡಿ
*ಡಿಸೆಂಬರ್ 31, 2017*
ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗಳು, ಪಿಪಿಎಫ್, ಪೋಸ್ಟ್ ಆಫೀಸ್ ಖಾತೆ, ಕಿಸಾನ್ ವಿಕಾಸಪತ್ರ, ನ್ಯಾಷನಲ್ ಸೇವಿಂಗ್ಸ್ ಸ್ಕೀಮ್, ,ಮ್ಯೂಚುವಲ್ ಫಂಡ್, ಎಲ್‌ಪಿಜಿ, ಪಿಂಚಣಿ ಯೋಜನೆಗಳು, ವಿದ್ಯಾರ್ಥಿ ವೇತನ
*ಫೆಬ್ರವರಿ 06, 2018*
ಮೊಬೈಲ್ ಸಿಮ್ ಕಾರ್ಡ್

ಸೂಚನೆ: ಡೆಡ್‌ಲೈನ್ ಬಂದಾಗ ವಿಪರೀತ ಜನಜಂಗುಳಿ ಇರುವುದರಿಂದ ಈಗಲೇ ಇವನ್ನು ಮಾಡಿಸಿಟ್ಟುಕೊಳ್ಳಿ, ನೆಮ್ಮದಿಯಿಂದಿರಿ.

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ By ಅವಿನಾಶ್ ಬಿ. For 13 Nov 2017

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s