ದಿವಾಳಿ ಬೇಡ, ದೀಪಾವಳಿ; ಶುಭಾಷಯ ಬೇಡ, ಶುಭಾಶಯ

ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು. ದೀಪದಿಂದ ದೀಪ ಹಚ್ಚುವುದು, ಪರಸ್ಪರ ಕೈಜೋಡಿಸಿ ಭ್ರಾತೃತ್ವ ಮೆರೆಯುವುದು, ಅನೇಕತೆಯಲ್ಲಿ ಏಕತೆ ಮೆರೆಯುವುದರ ಸಂಕೇತವೂ ಹೌದು.

ಈ ಶುಭ ಸಂದರ್ಭದಲ್ಲಿ ಓದುಗರೆಲ್ಲರಿಗೂ ಬೆಳಕಿನ ಆವಳಿಯ ಹಬ್ಬದ ವಿಶೇಷ ಶುಭ ಆಶಯಗಳ ಸಾಲುಗಳು ಇಲ್ಲಿವೆ:

‘ದಿವಾಳಿ’ ಶುಭಾಶಯ ಬೇಡ
‘ದೀಪಾವಳಿ’ಯ ಶುಭಾಶಯಗಳಿರಲಿ
ದೀಪಾವಳಿ ಶುಭಾ’ಷ’ಯ ಬೇಡ
ಅದು ಶುಭದ ‘ಆಶಯ’ ಮಾತ್ರವಾಗಿರಲಿ
ಶುಭಾಶಯಗಳು ಹಾ’ರ್ಧಿ’ಕವಾಗುವುದು ಬೇಡ
ಅದು ಹಾ’ರ್ದಿ’ಕವಾಗಿಯೇ ಇರಲಿ

ಹೌದು, ಓದುಗರು ಸುದ್ದಿಗಳ ಚರ್ಚಾ ವಿಭಾಗಗಳಲ್ಲಿಯೋ ಅಥವಾ ನೀವು ಕಳುಹಿಸುತ್ತಿರುವ ಶುಭಾಶಯ ಪತ್ರಗಳಲ್ಲಿಯೋ ಶುಭಾ’ಷ’ಯ ತಪ್ಪಾಗಿ ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ನೋಡಿಯೇ ಈ ತಿದ್ದುಪಡಿ. ತಪ್ಪು ಶುಭಾಶಯ ಕಳುಹಿಸುವ ಓದುಗರಿಗಾಗಿ ಬೆಳಕು ಚೆಲ್ಲಲು! ಈ ಅಕ್ಷರ ತಪ್ಪುಗಳು ಸಣ್ಣ ಪುಟ್ಟವಾದರೂ, ಕನ್ನಡ ಸರಿಯಾಗಿಯೇ ಬರೆದು-ಓದುವವರಿಗೆ ಓದಲು ಸಮಸ್ಯೆಯಾಗುತ್ತದೆ ಎಂಬ ಅರಿವಿರುವುದರಿಂದ, ನಮ್ಮ ಓದುಗರು ಈ ತಪ್ಪು ಮಾಡಬಾರದು ಎಂಬ ಕಳಕಳಿಯಿಂದ ನಿಮಗಿದು ಸಲಹೆ. ನೀವೂ ತಿದ್ದಿಕೊಳ್ಳಿ, ನಿಮ್ಮ ಒಡನಾಡಿಗಳಿಗೂ ತಿಳಿಸಿ, ಅರಿವಿನ ಬೆಳಕನ್ನು ಪಸರಿಸಿ.

ನಾವು ಬಳಸುವ ಭಾಷೆ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಚರ್ಚಾ ವೇದಿಕೆಗಳಲ್ಲಿ ಬರೆಯುವ ನಿಮ್ಮ ಅನಿಸಿಕೆಯಲ್ಲಿ ಶುದ್ಧತೆಯಿರಲಿ. ಅದು ನಿಮ್ಮ ಮನಸ್ಸಿನ, ನಿಮ್ಮ ಸಂಸ್ಕೃತಿಯ, ನಿಮ್ಮ ಸಂಸ್ಕಾರದ, ನೀವು ಕಲಿತ ವಿದ್ಯೆಯ ಪ್ರತೀಕವೂ ಹೌದು. ಹೀಗಾಗಿ ಅದು ದೀಪಾವಳಿ ಬೆಳಕಿನಷ್ಟೇ ಪರಿಶುಭ್ರವಾಗಿರಲಿ. ಮನಸ್ಸಿನೊಳಗಿರುವ ಕತ್ತಲೆಯೆಂಬ ಕೊಳೆಯನ್ನು ನಿವಾರಿಸಿ ಬೆಳಕು ಮೂಡಲಿ. ಭಾಷೆಯನ್ನು ನಾವು ಪ್ರೀತಿಸಿದರೆ ಅದು ನಮಗೆ ಒಲಿಯುತ್ತದೆ. ಮತ್ತು ಈ ದೀಪಾವಳಿಯೆಂಬ ಬೆಳಕಿನ ಹಬ್ಬದಲ್ಲಿ ನಮ್ಮ ಬಾಳು ಬೆಳಗುತ್ತದೆ, ನೀವು ಬರೆದದ್ದನ್ನು ಓದುವ ಇತರರ ಮನಸ್ಸುಗಳೂ ಬೆಳಕಿನಿಂದ ಅರಳುತ್ತವೆ.

ಈ ಮುನ್ನುಡಿಯೊಂದಿಗೆ ಇನ್ನೊಂದು ಸಲಹೆ. ದೀಪಾವಳಿ ಎಂಬುದು ಬೆಳಕಿನ ಹಬ್ಬವಾಗಬೇಕೇ ಹೊರತು ಸದ್ದಿನ ಹಬ್ಬವಾಗಬಾರದು. ಪರಿಸರ ವಿರೋಧೀ ಹಬ್ಬವಾಗಬಾರದು. ಪರಿಸರ ಚೆನ್ನಾಗಿದ್ದರೆ ತಾನೇ ನಮ್ಮ ಏಳಿಗೆ? ನಾವು ಇಷ್ಟೆಲ್ಲಾ ಮಾಡುವುದು, ದುಡಿಯುವುದು ನಮ್ಮ ಒಳಿತಿಗಾಗಿಯೇ ಅಲ್ಲವೇ? ನಮ್ಮ ಪರಿಸರ ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ ಎಂಬುದು ಪುಟ್ಟದಾದ ಅಷ್ಟೇ ಪರಿಣಾಮಕಾರಿಯಾದ ಭಾವನೆ. ಅದು ಬಂದರೆ ಊರೆಲ್ಲಾ ಬೆಳಕು.

ಹೇಳಿ ಕೇಳಿ, ದೀಪಾವಳಿ, ಲಕ್ಷ್ಮೀ ಪೂಜೆಯ ಮೇಳಾಮೇಳಿ. ನಮ್ಮ ಪ್ರೀತಿಪಾತ್ರ ಐಶ್ವರ್ಯಾಧಿದೇವತೆ ಲಕ್ಷ್ಮೀ ದೇವಿಯಂತೂ… ನಾಚಿಕೆಯ ಮುದ್ದೆ. ಮನಸ್ಸು, ಗುಣಗಳಲ್ಲಿ ಶ್ರೀಮಂತಿಕೆ ಇರುವವರಿಗೆ ಆಕೆ ಧನದ ಸಿರಿವಂತಿಕೆಯನ್ನು ಸದ್ದಿಲ್ಲದೇ ಕರುಣಿಸುತ್ತಾಳೆ. ಅಂದರೆ, ಜನರು ಐಸಿರಿಯ ನಿಜವಾದ ಅರ್ಥ ತಿಳಿದುಕೊಳ್ಳಬೇಕೆಂದು ಬಯಸುತ್ತಾಳೆ ಆಕೆ. ಹೀಗಾಗಿ, ಸಮಾಜದ ದುರ್ಬಲ ವರ್ಗದಲ್ಲಿರುವವರಿಗೆ, ದೀಪಾವಳಿ ಆಚರಿಸುವಷ್ಟು ಶಕ್ತಿ ಇಲ್ಲದವರಿಗೆ, ಒಂದಿನಿತು ನೆರವಾದರೆ, ಆವರಿಗೂ ಸಂತೃಪ್ತಿ. ನಿಮ್ಮ ಮನಸ್ಸಿಗೂ ಪೂರ್ಣತೃಪ್ತಿ. ಅವರ ಬಾಳಿನಲ್ಲಿ ಸಂತಸದ ಬೆಳಕು ಮೂಡಿಸಿದ ಹೆಮ್ಮೆ ನಿಮಗಾದರೆ, ಲಕ್ಷ್ಮೀಯ ಕೃಪಾಕಟಾಕ್ಷವು ನಿಮಗೆ ಬೋನಸ್. ಚಿನ್ನ ಖರೀದಿಸುವುದೇ ಲಕ್ಷ್ಮೀಯ ಆರಾಧನೆ ಅಲ್ಲ, ಚಿನ್ನದಂಥಾ ಮನಸ್ಸು, ಪುತ್ಥಳಿಯಂತಹಾ ಹೃದಯ ಹೊಂದಿದ್ದರೆ ಸಾಕು, ಆಕೆಯ ಸಂತೃಪ್ತಿಗೆ ಮತ್ತು ನಮ್ಮಯ ಸಮೃದ್ಧಿಗೆ.

ದೀಪಾವಳಿಯು ಎಲ್ಲರಿಗೂ ಶುಭ ತರಲಿ, ಲಾಭ ತರಲಿ.
ಹಬ್ಬವು ಸಂತಸದ ಹೆಬ್ಬಾಗಿಲನ್ನು ತೆರೆಯಲಿ.
[ವೆಬ್‌ದುನಿಯಾದಲ್ಲೂ ಇದೆ]

3 thoughts on “ದಿವಾಳಿ ಬೇಡ, ದೀಪಾವಳಿ; ಶುಭಾಷಯ ಬೇಡ, ಶುಭಾಶಯ

  1. ತಮ್ಮ ಆಶಯವನ್ನು ಮನದಲ್ಲಟ್ಟುಕೊಂಡು ತಮಗೆ ದೀಪಾವಳಿಯ ಶುಭಾಶಯಗಳು, ಧನ್ಯವಾದಗಳು

    Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s