ನಾನು ಹೀಗಿದ್ದೇನೆ….

ಆಗ ಪ್ರೆಸ್, ಎಕ್ಸ್-ಪ್ರೆಸ್, ನ್ಯೂ ಮೀಡಿಯಾ…!

ನಾನು ಅವಿನಾಶ್ ಬಿ. ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೇ?

ಮೂಲತಃ ಮಂಗಳೂರಿನ, ಈಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ನಾನು, ಪತ್ರಕರ್ತನಾಗಿ ಸುಮಾರು ಎರಡು ದಶಕಗಳಿಗೂ ಹೆಚ್ಚುಕಾಲಗಳಿಂದ ಮುಂಬಯಿ, ಮಂಗಳೂರು, ಬೆಂಗಳೂರು, ಮಂಗಳೂರು, ಚೆನ್ನೈ ಬಳಿಕ ಮತ್ತೆ ಬೆಂಗಳೂರಿಗೆ ಬಂದು, ಬದಲಾವಣೆಯೇ ಜಗದ ನಿಯಮ ಎಂಬ ಧ್ಯೇಯ ವಾಕ್ಯಕ್ಕೆ ಕಟ್ಟುಬಿದ್ದವ. ಹೇಗೂ ಬದಲಾವಣೆ. ಇದರ ಪರಿಣಾಮವೋ ಎಂಬಂತೆ ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿರಿಸಿದವನಾದರೂ, ಬಿಟ್ಟರೂ ಬಿಟ್ಟಿರಲಾಗದ ಮೀಡಿಯಾ ಎಂಬೋ ಧನಾತ್ಮಕ ವ್ಯಸನ ಮತ್ತೆ ಇಂಟರ್ನೆಟ್ ಮೂಲಕ ನನಗಂಟಿಕೊಂಡಿದ್ದು ನನಗರಿವಿಲ್ಲದಂತೆಯೇ. ಈ ಕ್ಷೇತ್ರವಂತೂ ನನಗೆ ಕಲಿಸಿದ ಪಾಠ ಅನೇಕ. ಅದಕ್ಕಾಗಿ ನನ್ನೊಳಗಿನ ಮಿಡಿತವನ್ನು ನೆಟ್ ಮೂಲಕ ಅಕ್ಷರ ರೂಪಕ್ಕಿಳಿಸುವ ಸಾಹಸದ ಫಲ ಈ ಜಾಲ ತಾಣ….

ಸಾಫ್ಟ್‌ವೇರ್ ಕ್ಷೇತ್ರಕ್ಕೇಂತ ಹೋದವನಾದರೂ, ಮಾಧ್ಯಮದ ಆಕರ್ಷಣೆ ಬಿಟ್ಟಿರಲಿಲ್ಲ. ಪರಿಣಾಮವಾಗಿ ಅಂತರ್ಜಾಲ ಮಾಧ್ಯಮ ವೆಬ್‌ದುನಿಯಾ ಎಂಬ ಕನ್ನಡ ತಾಣದ ಹೊಣೆಯೊಂದಿಗೆ ನನ್ನನ್ನು ಕೈಬೀಸಿ ಎರಡೂ ತೋಳಿನಿಂದ ಅಪ್ಪಿಕೊಂಡಿತ್ತು. ಕನ್ನಡದ ಗಂಧವಿಲ್ಲದ ದೂರದ ಚೆನ್ನೈಯಲ್ಲಿ ಆರು ವರ್ಷಗಳ ಕಾಲ ಎಂಎಸ್ಎನ್ ಕನ್ನಡ, ಯಾಹೂ ಕನ್ನಡ ಹಾಗೂ ವೆಬ್‌ದುನಿಯಾ ಕನ್ನಡ ಎಂಬ ಮೂರು ಪೋರ್ಟಲ್‌ಗಳನ್ನು ಆರಂಭಿಸಿದ ಮತ್ತು ಏಕಕಾಲದಲ್ಲಿ ಮೂರನ್ನೂ ನಿಭಾಯಿಸಿದ ಅನೂಹ್ಯವಾದ ಅನುಭವವೇ ನನ್ನನ್ನು ಮರಳಿ ರಾಜ್ಯಕ್ಕೆ ಕರೆಸಿಕೊಂಡಿತ್ತು. ಮರಳಿ ಬೆಂಗಳೂರಿಗೆ ಬಂದಿದ್ದು ನಾನು ಈ ಹಿಂದೆ ಕೆಲಸ ಮಾಡಿದ ವಿಜಯ ಕರ್ನಾಟಕಕ್ಕೆ… ಅದು ಕೂಡ ವಿಜಯ ಕರ್ನಾಟಕದ ವೆಬ್ ಪೋರ್ಟಲ್‌ಗಾಗಿಯೇ. ಅದನ್ನು ಕಟ್ಟಿ ಬೆಳೆಸುವ ಹೊಣೆಗಾರಿಕೆಯನ್ನು ನೀಡಿದವರು ಟೈಮ್ಸ್ ಗ್ರೂಪಿನ ಅಂದಿನ ಸಿಇಒ ಸುನಿಲ್ ರಾಜಶೇಖರ್. ವಿಜಯ ಕರ್ನಾಟಕ ಡಾಟ್ ಕಾಂ ಆರಂಭಿಸಿ, ಅದನ್ನು ಅಲ್ಪಾವಧಿಯಲ್ಲಿಯೇ ಕನ್ನಡ ಪತ್ರಿಕಾ ರಂಗದ ಶ್ರೇಷ್ಠ ಪೋರ್ಟಲ್ ಆಗಿ ರೂಪಿಸುವಲ್ಲಿ, ಹಗಲಿರುಳೆನ್ನದ ಶ್ರಮವಿದ್ದುದು ಸುಳ್ಳಲ್ಲ. ಆ ಬಳಿಕ ನಾನು ಕೆಲಸ ಮಾಡುತ್ತಿದ್ದ ಕಂಪನಿ VPL ನಿಂದ MMCL ಆಗಿ ಬದಲಾಯಿತು. ಕೊನೆಗೆ ನನ್ನ ಪೋರ್ಟಲ್ ತಂಡವೇ ಟೈಮ್ಸ್ ಇಂಟರ್ನೆಟ್ ಲಿ. ಎಂಬ ಸಂಸ್ಥೆಗೆ ವರ್ಗಾವಣೆಗೊಂಡಾಗ, ಅಲ್ಲಿ ನನ್ನ ಬಾಸ್ ರಾಜೇಶ್ ಕಾಲ್ರಾ. ಟೈಮ್ಸ್ ಸಮೂಹದ ಎಲ್ಲ ಸುದ್ದಿಯ ವೆಬ್ ತಾಣಗಳ ಮುಖ್ಯಸ್ಥರಾಗಿ ಅವರ ಮಾರ್ಗದರ್ಶನದಲ್ಲಿ ವಿಜಯ ಕರ್ನಾಟಕವು ಮತ್ತೊಂದು ಶಿಖರವನ್ನೇರಿತು.

ಇದಾಗಿ, 8 ವರ್ಷಗಳ ಕಾಲ ಆನ್‌ಲೈನ್ ಕೆಲಸ ಮಾಡುತ್ತಲೇ, ಜನ ಸಾಮಾನ್ಯರಿಗೂ ಟೆಕ್ನಾಲಜಿಯನ್ನು ಸುಲಭವಾಗಿಸುವ ಉದ್ದೇಶದಲ್ಲಿ ಪತ್ರಿಕೆಯಲ್ಲಿಯೂ ಟೆಕ್ನಾಲಜಿ ಅಂಕಣವನ್ನು ನಿರಂತರವಾಗಿ 8 ವರ್ಷಗಳ ಕಾಲ ಬರೆದೆ, ಬರೆದೆ, ಬರೆದೆ. ನನ್ನೊಡನಿದ್ದ ಎಲ್ಲ ಎಡಿಟರ್‌ಗಳೂ ನನ್ನಿಂದ ಬರೆಸಿದರು, ಬರೆಸಿದರು, ಬರೆಸಿದರು. ಅಷ್ಟು ಹೊತ್ತಿಗೆ, ಕೊಂಚ ತಿರುಗಿ ನೋಡಿದಾಗ, ಅರೆ! ಲೈಫು ಸ್ಟ್ಯಾಗ್ನೆಂಟ್ ಆಯಿತಲ್ಲಾ? ಎಂಬುದು ಥಟ್ಟನೇ ಗೋಚರಿಸಿತು. ಆಗಷ್ಟೇ ಟೈಮ್ಸ್ ಇಂಟರ್ನೆಟ್ ಲಿ. ಸಂಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸಿತು. ಅಷ್ಟರಲ್ಲಾಗಲೇ ಯಕ್ಷಗಾನದ ತುಡಿತವಂತೂ ತಡೆದುಕೊಳ್ಳಲಾಗಲೇ ಇಲ್ಲ. ಕಟೀಲು ಮೇಳಕ್ಕೆ ಮದ್ದಳೆಗಾರನಾಗಿ ಸೇರುವ ನಿರ್ಣಯದೊಂದಿಗೆ ಮತ್ತು ಕೆಲವೊಂದು ಫ್ರೀಲ್ಯಾನ್ಸಿಂಗ್ ಭರವಸೆಯೊಂದಿಗೆ ಕೆಲಸಕ್ಕೆ ರಾಜೀನಾಮೆ ನೀಡಿಬಿಟ್ಟೆ.

ಆದರೆ, ಅಲ್ಲೇ ಸಮೀಪದಲ್ಲಿ ಈ ಆನ್‌ಲೈನ್ ಮೀಡಿಯಾದಲ್ಲಿ ನನಗಾಗಿಯೇ ಕಾಯುತ್ತಿದ್ದಂತಿದ್ದ ಹುದ್ದೆಯೊಂದು ಕೈಬೀಸಿ ಕರೆಯಿತು. ದಿ ಮೈಸೂರು ಪ್ರಿಂಟರ್ಸ್ ಲಿ.ನ ಪ್ರಜಾವಾಣಿ ಆನ್‌ಲೈನ್ ತಾಣದ ಜವಾಬ್ದಾರಿಯೊಂದು ಆರೇಳು ತಿಂಗಳಿಂದ ಖಾಲಿ ಇತ್ತು. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟರು ಹಾಯ್ ಎಂದರು. ಬಳಗದ ನಿರ್ದೇಶಕರಲ್ಲೊಬ್ಬರಾದ ಶಾಂತ ಕುಮಾರ್ ಜೈ ಎಂದರು. ನಾನು ಸೈ ಅಂದುಬಿಟ್ಟೆ.

ಹಿನ್ನೆಲೆ: ಕರ್ನಾಟಕ ಕರಾವಳಿಯ ರಮ್ಯಾದ್ಭುತ ಕಲೆ ಎಂದೆನಿಸಿಕೊಂಡು ದೇಶ ವಿದೇಶಗಳಲ್ಲಿ ಮನೆಮಾತಾಗಲು ಹೊರಟಿರುವ ಯಕ್ಷಗಾನವೆಂಬ ಶ್ರೀಮಂತ ಕಲಾ ಪ್ರಕಾರ ನನ್ನ ರಕ್ತದಲ್ಲೇ ಇದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬೇಕಾಗಿದೆ. ಇದಕ್ಕೆ ಕಾರಣ, ನನ್ನ ಹೆತ್ತವರು. ಯಕ್ಷಗಾನ ರಂಗದಲ್ಲಿ ಬೈಪಾಡಿತ್ತಾಯ ಎಂಬ ಉಪನಾಮ ಕೇಳದವರೇ ಇಲ್ಲ. ಅಷ್ಟರ ಮಟ್ಟಿಗೆ ತಂದೆ, ಹಿರಿಯ ಯಕ್ಷಗಾನ ಕಲಾವಿದರೂ, ಉತ್ತಮ ಗುರುಗಳೂ ಆದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ತಾಯಿ, ಏಕೈಕ ವೃತ್ತಿಪರ ಮಹಿಳಾ ಭಾಗವತರೆಂಬ ಹೆಗ್ಗಳಿಕೆಗೆ ಪಾತ್ರವಾದ ಲೀಲಾ ಬೈಪಾಡಿತ್ತಾಯ ಅವರ ದಣಿವರಿಯದ ಸಾಧನೆ.

ಹವ್ಯಾಸ: ಇಂಥ ಹೆಮ್ಮೆಯ ಹೆತ್ತವರ ಮತ್ತು ಅವರು ಸವೆಸಿದ ಕ್ಷೇತ್ರದಲ್ಲಿಯೇ ಆಡುತ್ತಾಡುತ್ತಾ ಬೆಳೆದ ನನಗೆ ಯಕ್ಷಗಾನದ ಗಂಧ-ಗಾಳಿ ಹತ್ತದಿರಲು ಸಾಧ್ಯವೇ? ಯಕ್ಷಗಾನದಲ್ಲಿ ಹಿಮ್ಮೇಳದ ಸಾಧನಗಳಾದ ಚೆಂಡೆ-ಮದ್ದಳೆಗಳಲ್ಲಿ ಬೆರಳಾಡಿಸಬಲ್ಲಷ್ಟು ಪರಿಣತಿ ಪಡೆದಿರುವ ನಾನು, ತಾಯಿಯ ಗಾಯನ ಪರಂಪರೆಯನ್ನು ಉಳಿಸುವಲ್ಲಿ ಅದನ್ನು ಕಲಿಯಲಿಲ್ಲವಲ್ಲಾ ಎಂಬ ಕೊರಗು ಮನದ ಮೂಸೆಯಲ್ಲಿ ಇದ್ದೇ ಇದೆ. ಬದಲಾವಣೆಯೇ ಜಗದ ನಿಯಮ ಎಂಬುದು ಇಲ್ಲಿಯೂ ಅನ್ವಯಿಸಿತೇ ಎಂಬ ಪ್ರಶ್ನೆಯೊಂದಿಗೆ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತಿದ್ದೇನೆ.

ಮುಂದೆ ನನ್ನ ಸುಮ್ಮನಿರಲಾರದ ಕೈಗಳು, ಬಾಲ್ಯದಿಂದಲೂ ಸೆಳೆತಕ್ಕೀಡಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅದ್ಭುತ ಧ್ವನಿ ಹೊಮ್ಮಿಸುವ ಮತ್ತು ಯಕ್ಷಗಾನದ ಮದ್ದಳೆಯನ್ನೇ ಸ್ವಲ್ಪಮಟ್ಟಿಗೆ ಹೋಲುವ ಮೃದಂಗ ಎಂಬ ತಾಳವಾದ್ಯದತ್ತ ತನ್ನ ಆಕರ್ಷಣೆಯನ್ನು ತಡೆಯದಾಯಿತು. ಪರಿಣಾಮ, ಕರ್ನಾಟಕದ ಶ್ರೇಷ್ಠ ಮೃದಂಗ ವಾದಕರಲ್ಲೊಬ್ಬರಾದ, ಮಂಗಳೂರು ಆಕಾಶವಾಣಿ ಕಲಾವಿದ ಎಂ.ಆರ್.ಸಾಯಿನಾಥ್ ಅವರ ಶಿಷ್ಯತ್ವ. ಇಲ್ಲೂ ಕಾಡಿದ್ದು ಬದಲಾವಣೆಯ ನಿಯಮವೋ, ವಿಧಿ ಬರಹವೋ… ಅಂತೂ ಅದರಲ್ಲಿ ಪರಿಪೂರ್ಣತೆ ಸಾಧಿಸಲಾಗಲಿಲ್ಲ. ಸಣ್ಣಪುಟ್ಟ ಸಂಗೀತ ಕಛೇರಿಗಳಿಗೆ ವಿದ್ವತ್ ಪ್ರದರ್ಶಿಸುವ ಗೋಜಿಗೆ ಹೋಗದೆ ಮೃದಂಗ ವಾದಿಸುವಷ್ಟಕ್ಕೇ ನನ್ನನ್ನು ಸೀಮಿತಗೊಳಿಸಿದ ನನ್ನದೇ ಔದಾಸೀನ್ಯವೋ ಅಥವಾ ಪತ್ರಕರ್ತನ ಕೆಲಸದ ಒತ್ತಡವೋ, ಅಂತೂ ಅದರ ಕಲಿಕೆಗೆ ಬೇರೆಯ ಕೆಲವು ಕಾರಣಗಳೂ ಸೇರಿಕೊಂಡು, ತಡೆಯುಂಟಾಯಿತು. ಘಟಂ ಕೂಡ ನುಡಿಸಿದೆ, ರಾಮಕೃಷ್ಣಾಶ್ರಮದಲ್ಲಿರುವಾಗ ತಬಲಾ ಕೂಡ ನುಡಿಸುತ್ತಿದ್ದೆ. ಇದರ ನಡುವೆಯೂ ಮಂಗಳೂರಿನ ಕಲಾನಿಕೇತನದಲ್ಲಿ ಹಿರಿಯರಾದ ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಕೊಳಲು ವಾದನ ಅಭ್ಯಾಸ ಆರಂಭಿಸಿದ್ದೆನಷ್ಟೇ. ಅಷ್ಟರಲ್ಲಿ…..

ಅನಿರೀಕ್ಷಿತವಾಗಿ ಕರ್ನಾಟಕ ಸಂಗೀತವು ಇನ್ನಿಲ್ಲದಂತೆ ಬೆಳಗುತ್ತಿರುವ ಪ್ರದೇಶವಾದ ಚೆನ್ನೈಯಿಂದ ಉದ್ಯೋಗವೊಂದು ಕೈಬೀಸಿ ಕರೆದಾಗ, ಕಲಾ ಮಾತೆಯೇ ಕರೆದಂತಾಗಿ, ಕುಲದೇವಿಯೇ ಕರುಣಿಸಿದಂತಾಗಿ ಪುಳಕಗೊಂಡು ಆದದ್ದಾಗಲಿ ಎಂದು ಚೆನ್ನೈಯ ರೈಲೇರಿದಾಗ ಒಂದು ರೀತಿಯ ಧನ್ಯತಾ ಭಾವ. ಅಲ್ಲಿಯೂ ಅಲ್ಪಕಾಲ ಮೃದಂಗ ವಿದ್ವಾಂಸ ಗಣೇಶ್ ಕೆ. ಆರ್. ಅವರಲ್ಲಿ ಮೃದಂಗಾಭ್ಯಾಸ ಮುಂದುವರಿಕೆ. ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ಹೆಸರು ಗಳಿಸುವ ಮಹದಾಸೆಯಿತ್ತಾದರೂ, ಅನ್ನ ಕೊಡುವ ಕೆಲಸವೇ ಪ್ರಧಾನವಾಯಿತು. ಹೀಗಾಗಿ ಅದು ಕೂಡ ಹವ್ಯಾಸವೇ ಆಗಿ ಉಳಿಯಿತು.

ಪತ್ರಿಕಾ ರಂಗ: ವಿದ್ಯೆಗಾಗಿ ದುಡ್ಡಿಲ್ಲದ ಸಂದರ್ಭ, ಹೋಟೆಲ್‌ನಲ್ಲಿ, ಲಾಡ್ಜ್‌ನಲ್ಲಿ ಕೆಲಸ ಮಾಡಿಕೊಂಡೇ ಹುಟ್ಟೂರಿಗೆ ದೂರದ ತಿಪಟೂರು ಎಂಬಲ್ಲಿ ವಿಜ್ಞಾನ ಪದವಿ ಮುಗಿಸಿದ ತಕ್ಷಣ, ಬದಲಾವಣೆ ಬಯಸಿ ಮುಂಬಯಿಗೆ ಹಾರಿದ ನನಗೆ, ಪತ್ರಿಕಾ ರಂಗ ಪ್ರವೇಶಕ್ಕೆ ಮೊದಲ ಮೆಟ್ಟಿಲಾದ ಮುಂಬಯಿಯ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಆ ಬಳಿಕ ಅನಾರೋಗ್ಯದಿಂದಾಗಿ ಮತ್ತೆ ಮಂಗಳೂರಿಗೆ ಎಳೆದುತಂದಂತೆ ಬಂದು ಬಿದ್ದ ನನ್ನೊಳಗಿನ ಪತ್ರಕರ್ತನನ್ನು ಬಡಿದೆಬ್ಬಿಸಿದ ಮಂಗಳೂರಿನ ಕನ್ನಡ ಜನ ಅಂತರಂಗ ದಿನ ಪತ್ರಿಕೆ ಮತ್ತು ಕರಾವಳಿ ಅಲೆ ಸಂಜೆ ದೈನಿಕದ ಸಂಪಾದಕ ಮತ್ತು ಮಾಲೀಕರೂ ಆದ ಬಿ.ವಿ.ಸೀತಾರಾಂ, ದೇಶದ ನಂ.1 ಕನ್ನಡ ದಿನಪತ್ರಿಕೆ ಎಂಬ ನಾಮಧೇಯವನ್ನು ಅಲ್ಪ ಕಾಲಾವಧಿಯಲ್ಲಿ ಪಡೆದು ಪತ್ರಿಕಾ ರಂಗದಲ್ಲಿ ಕ್ರಾಂತಿಯ ಕಹಳೆಯೂದಿದ ವಿಜಯ ಕರ್ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ತಿದ್ದಿ ತೀಡಿದ ಈಶ್ವರ ದೈತೋಟ, ಆ ಬಳಿಕ ನನ್ನೊಳಗಿನ ಪತ್ರಕರ್ತನಿಗೆ ಹೊಸ ರೂಪ, ನವೀನತೆ ತುಂಬಿ, ಆಗಾಗ್ಗೆ ಗೆಳೆಯನಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ವಿಶ್ವೇಶ್ವರ ಭಟ್, ಮಂಗಳೂರು ಕಚೇರಿಯಲ್ಲಿ ಸದಾ ಕಾಲ ನನ್ನನ್ನು ಕಾರ್ಯನಿರತನಾಗುವಂತೆ ಮಾಡಿ, ನನ್ನೊಳಗಿನ ಔದಾಸೀನ್ಯವನ್ನು ತೊಡೆದು ಹಾಕಿದ ಕುಮಾರನಾಥ್….. ಹೀಗೆಯೇ ಬೆಳೆಯುತ್ತಿದೆ ನನ್ನನ್ನು ತಿದ್ದಿ ತೀಡಿದವರ ಪಟ್ಟಿ. ಬೆಂಗಳೂರಿಗೆ ಮರಳಿದ ಬಳಿಕ ವಿಕ ಸಂಪಾದಕ ಹುದ್ದೆ ಅಲಂಕರಿಸಿದ್ದ ಇ.ರಾಘವನ್, ಸುಗತ ಶ್ರೀನಿವಾಸ ರಾಜು, ತಿಮ್ಮಪ್ಪ ಭಟ್, ಹರಿಪ್ರಕಾಶ್ ಕೋಣೆಮನೆ ಅವರೊಂದಿಗೆ ಕೆಲಸ ಮಾಡಿಯೂ ಸಾಕಷ್ಟು ಕಲಿತುಕೊಂಡಿದ್ದೇನೆ. ಟೈಮ್ಸ್ ಇಂಟರ್ನೆಟ್ ಬಳಗದಲ್ಲಿ ರಾಜೇಶ್ ಕಾಲ್ರಾ ಅವರ ಕೈಕೆಳಗೆ ಟೈಮ್ಸ್ ಬಳಗದ ಎಲ್ಲ ಭಾಷಾ ಜಾಲತಾಣಗಳ ಮುಖ್ಯಸ್ಥರೊಂದಿಗೆ ಸಮೂಹ ಸಂಪರ್ಕದೊಂದಿಗೆ ನಾನು ಬೆಳೆದ ಬಗೆ, ಅಥವಾ ಅವರೆಲ್ಲ ಸೇರಿ ನನ್ನನ್ನು ಬೆಳೆಸಿದ ಬಗೆ ಅದ್ಭುತ. ಈಗ ಪ್ರಜಾವಾಣಿಯಲ್ಲಿ ರವೀಂದ್ರ ಭಟ್ಟರ ಸಮರ್ಥ ಮುಂದಾಳುತ್ವದಲ್ಲಿ.

ಇಷ್ಟೆಲ್ಲದರ ಮಧ್ಯೆ, ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಬಾಲಕಾಶ್ರಮ ಸೇರಿದ ನನ್ನೊಳಗಿನ ಒಳ್ಳೆಯ ಗುಣಗಳನ್ನು ಗುರುತಿಸಿ, ನನ್ನೊಳಗಿನ ನನ್ನತನವನ್ನು ಸರಿಯಾದ ದಿಕ್ಕಿಗೆ ಹೋಗುವಂತೆ ನಿರ್ದೇಶಿಸಿದ ಸ್ವಾಮೀಜಿಗಳಾದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಅವರ ಮಾರ್ಗದರ್ಶನ ಎಂದಿಗೂ ಮರೆಯಲಾಗದು. ಇವರಿಗೆಲ್ಲಾ ಸದಾ ಋಣಿಯಾಗಿದ್ದುಕೊಂಡಿದ್ದೇನೆ. ಬಾಳ ಪಯಣದಲ್ಲಿ ವಾಣಿ, ಮಗ ಅಭಿಷೇಕ್ ಸೇರಿಕೊಂಡಿದ್ದಾರೆ.

ಬದಲಾವಣೆಯೇ ಜಗದ ನಿಯಮ ಯಾಕೆ?

ಬದಲಾವಣೆ ಎಂಬುದು ಆಟೋಮ್ಯಾಟಿಕ್ ಆಗಿ ನನ್ನ ಜೀವನದ ಧ್ಯೇಯವಾಗಿಬಿಟ್ಟಿದೆ. ಕಾರಣ ಹೇಳುತ್ತೇನೆ ಕೇಳಿ. ನನ್ನ ವಾಸಸ್ಥಳಗಳು ಚಿಕ್ಕಂದಿನಿಂದ ಇದುವರೆಗೆ ಬದಲಾಗುತ್ತಲೇ ಬಂದವು. ಕಡಬ, ಕಟೀಲು, ಕುಡುಪು, ಅಳದಂಗಡಿ(ಅರುವ), ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ತಿಪಟೂರು, ಮುಂಬಯಿ, ಮಂಗಳೂರು (ಬಜಪೆ), ಚೆನ್ನೈ, ಮತ್ತೀಗ ಬೆಂಗಳೂರು. ಅಂಥಾ ಚೆನ್ನೈಯಲ್ಲೇ ಫ್ಲ್ಯಾಟ್ ಖರೀದಿಸಿದ್ದೀಯಲ್ಲಾ… ಗ್ರೇಟ್ ಅಂತ ಸ್ನೇಹಿತರು, ಆಪ್ತರು ಹೇಳುವಷ್ಟರಲ್ಲಿ, ಅದನ್ನು ಮಾರಿ ಬೆಂಗಳೂರಿಗೆ ಬಂದಿರುವುದು ಒಂಥರಾ ನಾಸ್ಟಾಲ್ಜಿಯಾ ಅನ್ನಬಹುದೇನೋ! ಇನ್ನು ಬೆಂಗಳೂರಲ್ಲಿ ಸ್ವಂತ ಗೂಡು ಕಟ್ಟಿಕೊಂಡಿದ್ದೇನೆ.

ಈ ಪರಿಯಾಗಿ ವಾಸಸ್ಥಳ ಬದಲಾವಣೆಯೊಂದಿಗೆ ನನ್ನ ಶಾಲೆ-ಕಾಲೇಜುಗಳೂ, ಉದ್ಯೋಗಗಳೂ, ಬದಲಾಗತೊಡಗಿದವು. ಆ ಮೇಲೆ ನನ್ನದೇ ಕಾರುಬಾರು. ಉದ್ಯೋಗಗಳನ್ನು ಬದಲಿಸಿದೆ, ಸೆಲ್ ಫೋನ್‌ಗಳನ್ನು ಬದಲಿಸಿದೆ, ಫೋನ್ ಸಿಮ್ ಕಾರ್ಡ್ ಬದಲಿಸಿದ ಕಾರಣ ನಂಬರ್‌ಗಳೂ ಬದಲಾಗತೊಡಗಿದವು. ಮೋಟಾರು ಬೈಕುಗಳನ್ನು ಬದಲಾಯಿಸಿದೆ, ಕಾರುಗಳನ್ನೂ ಖರೀದಿಸಿದೆ-ಬದಲಾಯಿಸುವ ಸಲುವಾಗಿ! ಇ-ಮೇಲ್ ಐಡಿಗಳನ್ನು ಬದಲಾಯಿಸತೊಡಗಿದೆ. ನನ್ನ ಇಚ್ಛೆಗಳನ್ನು ಬದಲಿಸಿದೆ, ಆಕಾಂಕ್ಷೆಗಳನ್ನು ಬದಲಿಸಿದೆ, ಮಹತ್ವಾಕಾಂಕ್ಷೆ ಬದಲಿಸಿದೆ, ಏನೇನೋ ಬದಲಾಗತೊಡಗಿದವು. ಈ ಬದಲಾವಣೆ ಎಂಬುದು ನಿರಂತರ ಪ್ರಕ್ರಿಯೆ.

ಹಾಗಿದ್ದರೆ ಈಗ ನನ್ನ ಜೀವನದ ಧ್ಯೇಯವೇ ಆಗಿಬಿಟ್ಟಿರುವ ಬದಲಾವಣೆಯನ್ನೇ ಬದಲಿಸಿದರೆ ಹೇಗೆ?

ಪ್ರಶ್ನೆಗೆ ಉತ್ತರ ಗೊತ್ತಿಲ್ಲ!

ಸಂಪರ್ಕ: avinash ಡಾಟ್ net ಅಟ್ ಜೀಮೇಲ್.com

109 thoughts on “ನಾನು ಹೀಗಿದ್ದೇನೆ….

  1. ಅವಿನಾಶ್:

    ನಮಸ್ಕಾರ!

    ಇವತ್ತು ಕನ್ನಡಬ್ಲಾಗ್ ನಕ್ಷತ್ರಗಳನ್ನು (ಸರಿಯಾಗಿ ೨೭ ಇವೆ!) ಇ-ಭೇಟಿಯಾಗುವ ಒಂದು ಯೋಜನೆ ಹಾಕಿಕೊಂಡೆ; ಫಲವಾಗಿ ನಿಮಗೂ ‘ಹಲೋ!’ ಹೇಳುತ್ತಿದ್ದೇನೆ. ಮಾಧ್ಯಮಕ್ಷೇತ್ರದಲ್ಲಿದ್ದ ನೀವು ಐ.ಟಿ.ಗೆ ಧುಮುಕಿದ ವಿಚಾರ ತಿಳಿಯಿತು. ಐ.ಟಿ.ಯಲ್ಲೇ ಇರುವ ನನಗೆ ‘ಮಾಧ್ಯಮ’ ಒಂದು ಸೈಡ್-ಗೀಳು/ಹುಚ್ಚುಹವ್ಯಾಸ ಅಷ್ಟೆ. ದಟ್ಸ್ ಕನ್ನಡದ ಶಾಮ್ ಮತ್ತು ವಿ.ಕ ದ ಭಟ್ ಈ ನನ್ನ ಹವ್ಯಾಸಕ್ಕೆ ನೀರೆರೆವವರು.

    ನಿಮ್ಮ ನೆಟ್-ಬರವಣಿಗೆಯನ್ನೋದಿ ನೆಟ್-ರಿಸಲ್ಟ್ ಏನೆಂದರೆ, ಅಪಾರ ಸಂತೋಷವಾಯಿತು! ಹೀಗೆಯೇ ಮುಂದುವರೆಸಿ!

    ಇತಿ,

    ಶ್ರೀವತ್ಸ ಜೋಶಿ

    Like

  2. ಧನ್ಯವಾದಗಳು ಜೋಷಿಯವರಿಗೆ,
    ಎಲ್ಲೋ ಇದ್ದವರನ್ನು ಎಳೆದುತಂದು ಹುಡುಕಿ ಗುರುತಿಸಿ ಓದಿದ್ದೀರಿ. ಕಾಮೆಂಟ್ ಕೂಡ ಮಾಡಿದ್ದೀರಿ.
    ನಿಮ್ಮ ವಿಚಿತ್ರಾನ್ನ ಉಣಬಡಿಸುವಿರಂತೆ….
    ಧನ್ಯವಾದ

    Like

  3. ಅವಿನಾಶರಿಗೆ ನಮಸ್ಕಾರ..

    ನಾನೂ ಸದ್ಯಕ್ಕೆ ನಿಮ್ಮ೦ತೆ ಮಾಹಿತಿ ತ೦ತ್ರಜ್ನಾನದ ಸ೦ಸ್ಥೆಯೊ೦ದರಲ್ಲಿ ಕೆಲಸ ಮಾಡುತ್ತಿದ್ದೇನೆ..ನನಗೂ ಯಕ್ಷಗಾನದ ಗೀಳು ಬಹಳ..ಬೆ೦ಗಳೂರಿನಲ್ಲಿ ಆಗುವ ಹೆಚ್ಚಿನ ಪ್ರದರ್ಶನಗಳಿಗೆ ಹಾಜರಿ ಹಾಕುತ್ತೇನೆ. ಹಾಗೆಯೇ ಸಾಹಿತ್ಯ ಮತ್ತು ಪತ್ರಿಕಾರಒಗದಲ್ಲೂ ಕೂಡಾ ಆಸಕ್ತಿ ಇದೆ..

    ನಿಮ್ಮ ಬರಹಗಳು ಚೆನ್ನಾಗಿವೆ..ಹೀಗೇ ಇ-ಪತ್ರಿಕೊದ್ಯಮ ಮು೦ದುವರಿಸಿ 🙂

    ಮುರಲಿ

    Like

  4. ನಮಸ್ಕಾರ ಮುರಳಿ ಅವರಿಗೆ,
    ಬ್ಲಾಗಿನೊಳಗೆ ಇಣುಕಿ ಶುಭ ಹಾರೈಸಿದ್ದಕ್ಕೆ ಥ್ಯಾಂಕ್ಸ್.
    ಸದ್ಯಕ್ಕೆ ಬ್ಲಾಗ್ ಅಪ್ ಡೇಟ್ ಗೆ ಸಮಯ ಸಿಗುತ್ತಿಲ್ಲ.
    ಇದಕ್ಕೆ ಕಾರಣ ನನ್ನ ಇನ್ನೊಂದು ಬ್ಲಾಗ್. ಕೆಲವು ದಿನಗಳಿಂದ ಊರಿಗೆ ಹೋಗಿದ್ದರಿಂದ ಅದೂ ಸ್ವಲ್ಪ ಸೊರಗಿದೆ. ಮತ್ತೆ ರಿಪೇರಿಸಬೇಕಾಗಿದೆ.
    ಧನ್ಯವಾದಗಳು.
    ಅವಿನಾಶ್

    Like

  5. ನಾನೀ ಬ್ಲಾಗನ್ನು ನೋಡಿರಲೇ ಇಲ್ಲ. ಬಹಳ ಸುಂದರವಾದ ಹೂದೋಟವಿದು. ಆದರೆ ಸ್ವಲ್ಪ ದಿನಗಳಿಂದು ನೀರು ನೆರಳು ಕಾಣದೆ ಬಳಲಿದಂತಿದೆ.

    ಮಾಹಿತಿ ತಂತ್ರಜ್ಞಾನ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಪರಿಣಿತಿ ಪಡೆದು ಮುಂದುವರೆಯುತ್ತಿರುವವರು ಬಹಳ ಕಡಿಮೆ. ಅದೂ ಅಲ್ಲದೇ ಜೀವನದ ಮರ್ಮವನ್ನು ತಿಳಿದ ನೀವು ಸತ್ಯವಾಗಿಯೂ ಬಹು ಎತ್ತರಕ್ಕೆ ಏರುವಿರಿ.

    ನಿಮ್ಮ ಮುಂದಿನ ಸುಗಮವಾಗಿರಲಿ ಎಂದು ಹಾರೈಸುವೆ.

    Like

  6. ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು ಶ್ರೀನಿವಾಸ್.

    ನೆಟ್ಟಿನಲ್ಲಿ ಕನ್ನಡದ ಕಂಪು ಹರಡಿಸುತ್ತಾ, ಎಳೆಯರನ್ನು ಬ್ಲಾಗ್ ಮಾಡಲು, ಅಪ್ ಡೇಟ್ ಮಾಡಿಸಲು ಅವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ನಿಮ್ಮ ನೆಟ್ಗನ್ನಡ ಸೇವೆ ಅನನ್ಯ.

    ನನ್ನ ಬ್ಲಾಗ್ ಕೂಡ ಅಪ್ಡೇಟ್ ಆಗಲು ನಿಮ್ಮ ಪ್ರೋತ್ಸಾಹವೇ ಕಾರಣ.
    ನಮಸ್ಕಾರ.

    Like

  7. ಮಾನ್ಯ ಅವಿನಾಶರೇ,

    ನಿಮ್ಮ ಈ ಬ್ಲಾಗನ್ನು ಇಂದಿನವರೆಗೆ ನೋಡಿರಲಿಲ್ಲ. ನಿಮ್ಮಂತೆಯೇ ನಾನೂ ಸಹ ಸಾಫ್ಟ್‌ವೇರ್ ಉದ್ಯೋಗಿ ಮತ್ತು ಪತ್ರಿಕೋದ್ಯಮದ ಬಗೆಗೆ ಆಸಕ್ತಿ ಉಳ್ಳವನು. ಆದರೆ, ಆ ಉದ್ಯಮದಲ್ಲಿ ಯಾವುದೇ ಅನುಭವ ಇಲ್ಲದವನು.

    ಇದೀಗತಾನೆ ನಿಮ್ಮ ಪರಿಚಯ ಲೇಖನ ಓದಿದೆ. ಉಳಿದ ಲೇಖನಗಳನ್ನು ತಪ್ಪದೇ ಓದುತ್ತೇನೆ.

    ವಂದನೆಗಳು.

    Like

  8. ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಶೇಷಾದ್ರಿ ಅವರೆ,

    ಈ ಬ್ಲಾಗು ಸ್ವಲ್ಪ ಮಂಕಾಗಿಬಿಟ್ಟಿದೆ. ಮನದಾಳದ ಮಾತುಗಳನ್ನು ಬರೆಯಬೇಕೆಂಬಾಸೆ, ಪುರುಸೊತ್ತು ಸಿಗುತ್ತಿಲ್ಲ.

    ಇದನ್ನು ಮುಂದುವರಿಸಲು ಒತ್ತಡ ಬರುತ್ತಿದೆ.
    ನಮಸ್ಕಾರ
    ಅವಿನಾಶ್

    Like

  9. ಬ್ಲಾಗಿಗೆ ನಿಮಗೆ ಸ್ವಾಗತ ರಾಜ್ ನಾರಾಯಣ ಅವರೆ.
    ಆಗಾಗ ಬರುತ್ತಾ ಇರಿ

    Like

  10. Hi avinash
    nanu nimma ottige kelasa maadiddarooo nnage nimma istella gunaglu, prthibhe iddaddu gottilla
    neevu olleya sangeetha kalavida
    net nalloo tumba hushaaru aagiddeeri
    keep it up
    – jithendra
    nana blog
    samajvani.blogspot.com

    Like

  11. ನಮಸ್ಕಾರ ಜಿತೇಂದ್ರ ಕುಂದೇಶ್ವರರಿಗೆ,
    ನನ್ನ ಬಗ್ಗೆ ನಿಮಗೆ ಹೆಚ್ಚು ತಿಳಿದುಕೊಳ್ಳಲು ಅಸಾಧ್ಯವಾಗಲು ಕಾರಣ ಎಂದರೆ ಬಹುಶಃ ನನ್ನನ್ನು ನಾನು ಸಂಪೂರ್ಣವಾಗಿ ತೆರೆದಿಡದಿರುವುದೇ ಇರಬಹುದು. ಯಾವತ್ತೂ ಕಡಿಮೆ ಮಾತಿಗೆ ಕಟ್ಟು ಬಿದ್ದವನು ನಾನು.
    ಇನ್ನೂ ಸತ್ಯ ವಿಷಯವೆಂದರೆ, ನನಗೆ ಮಾತನಾಡುವುದಕ್ಕೇ ಗೊತ್ತಿಲ್ಲ!
    🙂

    Like

  12. ohooooo avi! atlast I’m successful reading “About Me” section of your blog Hmmmmmmmmm……… Very talented haan…It’s nice to know about you.

    Like

  13. ಧನ್ಯವಾದ ಸೋನಿ….
    ಟ್ಯಾಲೆಂಟ್ ಇದೆ ಅಂತ ನೆನಪಿಸಿದ್ದಕ್ಕೆ ಥ್ಯಾಂಕ್ಸ್

    Like

  14. ಬ್ಲಾಗಿಗೆ ಸ್ವಾಗತ ಜಯಂತ್ ಅವರೆ,
    ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದ.

    Like

  15. ಬೈಪಡಿತ್ತಾಯರಿಗೆ ನಮಸ್ಕಾರ…
    ನೀವು ಅವಿನಾಶ್ ಎಂದು ತಿಳಿದಾಗಲೇ ಯಾರೀತ ಎಂಬ ಕುತೂಹಲ. ಇಂದು ನಿಮ್ಮ ಬ್ಲಾಗ್‌ನ about you ವಿಭಾಗ ನೋಡಿದಾಗಲೇ ತಿಳಿದದ್ದು ನೀವು ನನ್ನ ಪರಿಚಿತರು ಅಂತ. ನಿಮ್ಮ ಭಾವಚಿತ್ರ ನೋಡಿದ ಮೇಲಂತೂ all clear. ನಾನು ಮಂಗಳುರಿನಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಡುವ ಹಂತದಲ್ಲಿ ೪೦ ದಿನಗಳ ತರಬೇತಿ ವಿಜಯಕರ್ನಾಟಕದಲ್ಲಿ ಪಡೆದದ್ದು, ಆ ಬಳಿಕವೂ ಹಲವು ಕಾರ್ಯಕ್ರಮಗಳಲ್ಲಿ ಭೇಟಿ ಇನ್ನೂ ನೆನಪಿದೆ, ನಿಮಗೂ ಇರಬಹುದೆಂದುಕೊಳ್ಳುತ್ತೇನೆ. ಬ್ಲಾಗ್‌ ಚೆನ್ನಾಗಿದೆ. ಜಾಲದಲ್ಲಿ ಕನ್ನಡ ಪಸರಿಸುವ ನಿಮ್ಮ ಕನ್ನಡ ಮನಸ್ಸು ಸದಾ ಕ್ರಿಯಾಶೀಲವಾಗಿರಲಿ ಎಂಬ ಹಾರೈಕೆ ನಿಮ್ಮ ಈ ಕಿರಿಯ ಮಿತ್ರನದ್ದು. ಸಮಯ ಇದ್ದಾಗ ನನ್ನ ತಾಣಗಳಾದ venuvinod.blogspot.com, venukapra.blogspot.comಗಳಿಗೆ ಭೇಟಿ ಕೊಡಿ, ಸಲಹೆ ಕೊಡಿ

    Like

  16. ಧನ್ಯವಾದ ವೇಣು ವಿನೋದ್…

    ಮರೆತೇನೆಂದರೆ ಮರೆಯಲೀ ಹ್ಯಾಂಗೆ… ಅಲ್ಲವೇ…

    ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಿದ್ಧಿ-ಪ್ರಸಿದ್ಧಿ ಗಳಿಸಿ ಅಂತ ಹಾರೈಕೆ.

    Like

  17. ಆತ್ಮೀಯರಾದ, ಗುರು ಸಮಾನರಾದ ವಿಶ್ವೇಶ್ವರ ಭಟ್,

    ಈ ನನ್ನ ಪುಟ್ಟ ತಾಣಕ್ಕೆ ಬಂದು ಹರಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.
    ನನಗೆ ತಿಳಿದಿರುವಂತೆ, ಕನ್ನಡ ಬ್ಲಾಗ್ ಜಗತ್ತಿನಲ್ಲಿ ಬೇರಾರಿಗೂ ಸಿಗದ ಆಶೀರ್ವಾದವಿದು ಅಂತ ಭಾವಿಸಿದ್ದೇನೆ. ಇದು ಅತಿಶಯೋಕ್ತಿ ಖಂಡಿತಾ ಅಲ್ಲ. ಧನ್ಯತಾ ಭಾವ.

    Like

  18. ಅಬ್ಬ,

    ಅದ್ಭುತವಾದ ಬ್ಲಾಗ್. ಈ ಬ್ಲಾಗಿಗೆ ಇದೆ ಮೊದಲ ಬಾರಿ ಭೇಟಿ. ಎರಡೆರಡು ಬ್ಲಾಗ್ ಹೇಗೆ ನಿರ್ವಹಿಸುತ್ತಿರಿ ಸ್ವಾಮಿ? ಅಥವ ಇನ್ನು ಒಂದು ಇದ್ಯೋ? ನನಗೆ, ಒಂದು ನಿಬಾಯ್ಸೋದೆ ಕಷ್ಟ.
    ನಿಮ್ಮಲ್ಲಿರುವ ಅಮೋಘವಾದ ಅಬ್ರವಣಿಗೆಯನ್ನು ಮುಂದುವರಿಸುತ್ತರಿ. ನಮ್ಮಂತ ಓದುಗರಿಗೆ ಸ್ವಲ್ಪವಾದರು ತಿಳುವಳಿಕೆ ಬಂದೀತು.

    ಇಂತಿ
    ಭೂತ

    Like

  19. ಭೂತ
    ನಿಮಗೆ ಸ್ವಾಗತ.
    ಭೂತ ಅಂತ ಹೆಸರು ಕೇಳಿದ್ರೆ ಸ್ವಲ್ಪ ಹೆದರಿಕೆ.
    ಸಾಕಷ್ಟು ಸಂಖ್ಯೆಯಲ್ಲಿ ಬ್ಲಾಗು ಹುಟ್ಟು ಹಾಕಿದ್ದೇನೆ. ಕೆಲವು ನಡೆದಾಡುವ ಭೂತಗಳು, ಮತ್ತೆ ಕೆಲವು ಸ್ಥಗಿತಗೊಂಡಿವೆ.
    🙂
    ಬರ್ತಾ ಇರಿ.

    Like

  20. ನಮಸ್ಕಾರ ಅವಿನಾಶ್ ರಿಗೆ.
    ಹೀಗೇ ಸುಮ್ನೆ ಬ್ಲೋಗ್ ಗಳನ್ನು ಚೆಕ್ ಮಾಡ್ತಿರ್ ಬೇಕಾದ್ರೆ ನೀವು ಕಣ್ಣಿಗೆ ಬಿದ್ದಿರಿ… ತುಂಬಾ ಖುಶಿಯಾಯಿತು. ಕನ್ನಡದಲ್ಲೇ ಹೇಗೆ ಎರಡು ಮಾತು ಬರೆಯೋದು ಅಂತ ತಲೆ ಕೆರೆದುಕೊಳ್ಳುತ್ತಿದ್ದೆ. ಈ ಉಪಾಯವನ್ನೂ ಜೊತೆಗೆ ಹೇಳಿಕೊಟ್ಟಿದ್ದೀರಿ. ಥ್ಯಾಂಕ್ಯೂ!
    ಒಂದೇ ಕಚೇರಿಯಲ್ಲಿರಬೇಕಾದರೆ ನಾವು ಹೆಚ್ಚು ಮಾತನಾಡಲಿಲ್ಲ, ಅಥವಾ ಮಾತನಾಡುವ ‘ವ್ಯವಸ್ಟೆ’ ಇರಲಿಲ್ಲ… ನಿಮಗೆ ನನ್ನ ನೆನಪಿರಬಹುದೆಂದು ಭಾವಿಸುತ್ತೇನೆ. ಈಗ ನಾನು ‘ಡೆಕ್ಕನ ಹೆರಾಲ್ಡ್ ‘ನಲ್ಲಿದ್ದೇನೆ. ಸದ್ಯಕ್ಕೆ ಇಲ್ಲಿ ನಿಲ್ಲಿಸುತ್ತೇನೆ. ಇಷ್ಟು ಬರೆಯುವುದಕ್ಕೆ ಬಹಳ ಪಾಡು ಪಟ್ಟಿದ್ದೇನೆ! ಮುಂದೆ ಧಾರಾಳ ಮಾತಾಡುವ, ಆಗದೇ?
    ಇತೀ, ಸಿಬಂತಿ ಪದ್ಮನಾಭ ಕೆ. ವಿ.

    Like

  21. ಸಿಬಂತಿ ಪದ್ಮನಾಭ ಅವರಿಗೆ ಸ್ವಾಗತ
    ಹೌದು, ಆ ವ್ಯವಸ್ಥೆ ನನಗೂ ತಿಳಿದಿತ್ತು. ಅದು ಮರೆತುಬಿಡಬಹುದಾದದ್ದು. 🙂
    ಡೆಕ್ಕನ್ ಹೆರಾಲ್ಡ್‌ಗೆ ಸೇರಿದ್ದು ಕೇಳಿ ಖುಷಿಯಾಯಿತು. ನಿಮಗೆ ಶುಭಾಕಾಂಕ್ಷೆಗಳು.
    ಬರುತ್ತಾ ಇರಿ,
    ನೀವೂ ಬರೆಯಿರಿ

    Like

  22. ಅವಿನಾಶ್ ಅವರಿಗೆ ನಮಸ್ಕಾರ. ನಿಮ್ಮ ಕನ್ನಡ ಬ್ಲಾಗ್ ನೋಡಿ ಬಹಳ ಸಂತೋಷವಾಯಿತು. ಅಬ್ಬ ಒಳ್ಳೆ ಕೆಲ್ಸ ಮಾಡ್ತಿದೀರಿ. ಹೀಗೆ ಮುಂದುವರಿಸಿ.

    ವೀಣಾ, ಬೆಂಗಳೂರು.

    Like

  23. ವೀಣಾ ಅವರಿಗೆ ನಮಸ್ಕಾರ.

    ನಿಮ್ಮ ಪ್ರೋತ್ಸಾಹಕ ನುಡಿಗೆ ಧನ್ಯವಾದಗಳು.

    ನಿಮ್ಮ ಫೋಟೋ ಬ್ಲಾಗ್ ನೋಡಿ ಖುಷಿಯಾಯಿತು. 🙂

    Like

  24. ನಮಸ್ಕಾರ…ನಿಮ್ಮ “ವರದಿಗಳನ್ನು” ಓದುವಾಗ…ನೀವು ಹೆಂಗೋ…ಇದ್ದೀರಾ ಅನ್ಕೊಂಡಿದ್ದೆ….ಇವತ್ತೆ ಸುಮ್ಮನೆ ನಿಮ್ಮ ” about me “ಓದಿದ್ದು…ನಾನೆನಾದ್ರೂ ನಿಮ್ಮ ವರದಿಗಳಿಗೆ ಪೆದ್ದು ಪೆದ್ದಾಗಿ ಕಾಮೆಂಟ್ ಮಾಡಿದ್ರೆ…ದಯಮಾಡಿ ಕ್ಷಮಿಸಿ….

    Like

  25. nilgiri ಅವರೆ,
    ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.
    ಇದೇ ಮೊದಲ ಸಲ ಬರ್ತಾ ಇದ್ದೀರಾ ಇಲ್ಲಿಗೆ. ಬಹುಶಃ ಬೇರೆ ಹೆಸರಲ್ಲಿ ಕಾಮೆಂಟ್ ಮಾಡ್ತಾ ಇದ್ದೀರೇನೋ…ಮತ್ತು ಅಂಥ ಯಾವುದೇ ಕಾಮೆಂಟ್ ಗಳು ಇಲ್ಲಿ ಇಲ್ಲವಲ್ಲ.
    ಕ್ಷಮಿಸುವಷ್ಟು ದೊಡ್ಡವನಲ್ಲ.
    ಬರ್ತಾ ಇರಿ.

    Like

  26. ಚಿದಾ, ಈರೆಗ್ ನಮ್ಮ ಬ್ಲಾಗ್‌ಗ್ ಸ್ವಾಗತ.
    ಬರೋಂದುಪ್ಪುಲೆ. ಈರ್‌ಲಾ ಬ್ಲಾಗಿಸೊಯರ ಶುರು ಮಲ್ಪುಲೆ.
    ಧನ್ಯವಾದ,

    Like

  27. ಅವಿ, ನಿಮ್ಮ ಬ್ಲಾಗ್ ಖುಷಿ ಕೊಟ್ಟಿತು, ಹೀಗೇ ಮುಂದುವರೆಸುತ್ತಿರಿ. ನನ್ನ ಬ್ಲಾಗ್’ನಲ್ಲಿ ಲಿಂಕ್ ಹಾಕಿಕೊಂಡಿದ್ದೇನೆ. ಒಪ್ಪಿಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು.

    Like

  28. ಜ್ಯೋತಿ ಅವರೆ,
    ನಿಮಗೆ ಸ್ವಾಗತ… ಪ್ರೋತ್ಸಾಹದ ನುಡಿಗೆ ಧನ್ಯವಾದಗಳು. ಲಿಂಕಿಸಿಕೊಳ್ಳುವಿರಂತೆ…. 🙂

    Like

  29. ಬನ್ನಿ ಹರೀಶ್ ಅವರೆ, ನಿಮಗೆ ಸ್ವಾಗತ.
    ತುಂಬಾ ವರ್ಷದ ನಂತರ ಸಿಕ್ಕಿದ್ದೀರಿ.
    ನೀವು ಹೇಳಿದ್ದು ಸರಿ. ಈಗಲೂ ಪ್ರೆಸ್ ಎಂಬ ನಂಟು ಬಿಟ್ಟಿಲ್ಲ.

    Like

  30. ಶ್ಯಾಮ್ ಸುಂದರ್ ಅವರೆ ಸ್ವಾಗತ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ಈ ದಿನಗಳಲ್ಲಿ ಒಂದಿಷ್ಟು ಬ್ಯುಸಿಯಾಗಿರುವುದರಿಂದ ಅಪ್‌ಡೇಟ್ ನಿಧಾನವಾಗ್ತಿದೆ.
    ಹೊಣೆಗಾರಿಕೆ ನೆನಪಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.
    -ಅವಿನಾಶ್

    Like

  31. ನನ್ನ ಬ್ಲಾಗಿಗೆ ಸ್ವಾಗತ ರಶ್ಮಿ ಅವರೆ,

    ನಿಮ್ಮಿಂದಲೂ ಒಂದು ಬ್ಲಾಗು ಆರಂಭವಾಗುತ್ತದೆಯೆಂಬ ನಿರೀಕ್ಷೆಯಲ್ಲಿ….

    🙂

    Like

  32. Hi Dear sir

    This is (X kannada team member msn team)
    how ru sir
    I got ur web page while searching kalavida pictures

    how ru avi sir, and how is our vijay sarathi sir

    sir mail me ur email address we will keep in touch
    my id is deepak836@yahoo.com

    Like

  33. Hello ಅವಿ ಸರ್ ನಮಸ್ಕಾರ ಹಗೆ ಇದ್ದಿರಾ
    ನಿಮ್ಮ ಬ್ಲಾಗ ತುಂಬಾ ಚನ್ನಾಗಿದೆ
    ನಮ್ಮ ವಿಜಯ ಸರ್ ಮತ್ತು ಚಂದ್ರಾ ಅವರು ಹೇಗಿದ್ದಾರೆ, ನಿಮ್ಮ ಎಲ್ಲರ ಮೇಲ್ ಐಡಿ ನನಗೆ ಕಳಿಸಿ.

    Like

  34. ನಮಸ್ಕಾರ ಅವಿನಾಶ್ರವರಿಗೆ,
    ಹೇಗಿದ್ದಿರಿ?
    ನಿಮ್ ಬ್ಲಾಗ್ ಚೆನ್ನಾಗಿದೆ. ನಿಮಗೆ ನೆನಪಿರಬೇಕು..ನಾನು ರೋಹಿದಾಸ್ ತಂಗಿ(ವಿಜಯಕರ್ವಾಟಕ ಮಂಗಳೂರು)ನೀವು ಚೆನ್ನೈಗೆ ಹೋಗುವ ಮುಂಚೆ ನಮ್ಮಣ್ಣ ನಿಮ್ ಜತೆ ಹೋಗುತಿಯಾ ಅಂದಿದ್ದ..ಯಾಕೋ ದೂರ ಅನಿಸಿತು. ಈಗ ನಾನು ದ ಸಂಡೆ ಇಂಡಿಯನ್ ವಾರಪತ್ರಿಕೆಯಲ್ಲಿ ಕೆಲ್ಸ ಮಾಡುತ್ತಿದ್ದೇನೆ.
    ಆದ್ರೂ ಪತ್ರಿಕೋದ್ಯಮದಲ್ಲಿ ಸಿಕ್ಕ ಖುಷಿ ಸಾಫ್ಟ್ ವೇರ್ ನಲ್ಲಿ ಸಿಗುವುದೇ?

    Like

  35. ನಮಸ್ಕಾರ ಚಿತ್ರಾ,

    ವಿ.ಕ.ದಲ್ಲಿ ಪ್ರಕಟವಾಗುತ್ತಿದ್ದ ನಿಮ್ಮ ಲೇಖನಗಳನ್ನು ಓದುತ್ತಿದ್ದೆ. ನೀವು ಬ್ಲಾಗ್ ಆರಂಭಿಸಿ.

    ಸಾಫ್ಟ್‌ವೇರ್ ಆಗ್ಲಿ, ಪತ್ರಿಕೋದ್ಯಮವೇ ಆಗಲಿ, ಅದು ಅವರವರ ಭಾವಕ್ಕೆ ತಕ್ಕಂತಿರುತ್ತದೆ. ನಾನಿರೋದು ಪೂರ್ಣ ಸಾಫ್ಟ್‌ವೇರ್ ಅಲ್ಲ. ಆನ್‌ಲೈನ್ ಮೀಡಿಯಾವೂ ಹೌದು, ಸಾಫ್ಟ್‌ವೇರ್ ಕ್ಷೇತ್ರದಲ್ಲಿಯೂ ಏನೆಲ್ಲಾ ನಡೀತಿದೆ ಅಂತೆಲ್ಲಾ ತಿಳಿದುಕೊಳ್ಳಲೂಬಹುದು.

    ಬರುತ್ತಾ ಇರಿ.

    Like

  36. ದೀಪಕ್,

    ಎಲ್ಲಿದ್ದೀರಿ, ಏನು ಮಾಡ್ತಾ ಇದ್ದೀರಿ, ನಮ್ಮನ್ನು ಮರೆತ್ರಾ ಹೇಗೆ ಅಂತ ಯೋಚ್ನೆ ಮಾಡೋಷ್ಟರಲ್ಲಿ ಬಂದುಬಿಟ್ರಿ…

    ವಿವರ ಕಳುಹಿಸುವೆ.

    Like

  37. ನಮಸ್ಕಾರ avi sir
    nivu allar mail id kodtira anta kai ta edini
    na use madta iro system nalli unicode install madill adake kannada dalli type madoke aglilla cut and paste madi letter bariyona andre yako manasu barlilla
    sir nim allardu id math contact no nan id ge mail madi sir nim allar jote matad bek ede, vijay sir chandra madam, sowmya maday mathu sarathi(system admin) allaru hege edare sir
    nim reply ge kaita edin sir

    with warm regards
    deepak

    Like

  38. ನಮಸ್ಕಾರ ಅವಿನಾಶ್,
    ನಿಮ್ಮ ಕನ್ನಡದ ಬ್ಲಾಗ್ ನೊಡಿ ತುಂಬಾ ಸಂತೋಷವಾಯಿತು. ಇದೆ ರೀತಿ ನಿರ್ಭಯವಾಗಿ ರಾಜಕೀಯ ಹಾಗೂ ಇತರೆ ವಿಷಯಗಳ ಮೆಲೆ ಬರೆಯುತ್ತಿರಿ.

    ಸಂಜಯ ಕಟ್ಟಿಮನಿ.

    Like

  39. ನಮಸ್ಕಾರ ನಲ್ಮೆಯ ಅವಿನಾಶ್ ರವರಿಗೆ,
    ಕನ್ನಡ ಜ್ಞಾನ ಸರಸ್ವತಿಯ ಸವಿಮನದ ಅಂಗಳದಿಂದ
    ಹೆಕ್ಕಿ ಹೆಕ್ಕಿ ತೆಗೆದಂತೆ ನೀವು ಬರೆದಿರುವ
    ಅರ್ಥ ತುಂಬಿ ಒಲವಾಗಿರುವ ಪದಗಳು, ಮಧುರ
    ವಾಕ್ಯಗಳನ್ನು ಓದಿ ನನ್ನ ಮನವು ತಣಿದಿದೆ
    ನಿಮ್ಮ ಮಾತೃಭಾಷಾ ಸಾಮರ್ಥ್ಯ ಬಹಳ ವಿಸ್ತುರವಾದುದು..
    ಹೀಗೆ ನಿಮ್ಮ ಅನವರತ ಸೇವೆ ಮುಂದುವರಿಯಲಿ.
    ಇಂತಿ ನಿಮ್ಮ
    ಸುನಿಲ್ ಮಲ್ಲೇನಹಳ್ಳಿ
    sunilkumara.ms@gmail.com,

    Like

  40. ಆತ್ಮೀಯ ಸುನಿಲ್ ಅವರೇ.

    ನಿಮಗೆ ಸ್ವಾಗತ.

    ನಿಮ್ಮ ಪ್ರಶಂಸೆ ಮನತುಂಬಿದೆ. ಧನ್ಯವಾದ. ಬರ್ತಾ ಇರಿ,
    ಹೊಸ ವರ್ಷದ ಶುಭಾಶಯಗಳು.

    Like

  41. ಆತ್ಮೀಯ ಅವಿನಾಶ್ ರವರಿಗೆ
    ಹೊಸ ವರುಷದ ಹಾರ್ಧಿಕ ಶುಭಾಶಯಗಳು,
    ಈ ಹೊಸ ವರುಷವು ನಿಮ್ಮ ಬಾಳ ಪಯಣದ ಹಾದಿಗೆ
    ನವ ಚೈತನ್ಯ ಸ್ಫೂರ್ತಿಯಾಗಿರಲಿ.
    ಇಂತಿ ನಿಮ್ಮ
    ಸುನಿಲ್ ಮಲ್ಲೇನಹಳ್ಳಿ

    Like

  42. ಅವಿನಾಶ್ ಅವರೇ,

    ನಿಮ್ಮ ಬ್ಲಾಗನ್ನು ನೋಡಿ ತುಂಬಾ ಖುಶಿಯಾಯಿತು. ನಿಮಗೆ ಒಂದು ನಮಸ್ತೆ ಹೇಳಿಹೋಗುವಾ ಅಂತ ಇಲ್ಲಿ ಭೇಟಿ ಕೊಟ್ಟೆ. ನಾನು ಇತ್ತೀಚಗೆ ಬ್ಲಾಗ್ ಬರೀಲಿಕ್ಕೆ ಶುರು ಮಾಡಿದ್ದೇನೆ. ನಿಮ್ಮ ಅತ್ಯಮೂಲ್ಯ ಅನಿಸಿಕೆ ವ್ಯಕ್ತಪಡಿಸಬೇಕಾಗಿ ವಿನಂತಿ.

    http://kiranjayanth.blogspot.com

    ಧನ್ಯವಾದಗಳು.
    ಕಿರಣ್

    Like

  43. ಕಿರಣ್ ಅವರೆ,

    ನನ್ನ ಪುಟ್ಟ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗಿಂಗ್ ಅದ್ಭುತವಾಗಿ ಬೆಳೆಯಲಿ ಅಂತ ಹಾರೈಕೆ.

    Like

  44. ನಾನು ಇತ್ತೀಚೆಗೆ ಹೊಸದಾಗಿ ಬ್ಲಾಗ್ ಲೋಕಕ್ಕೆ ಸೇರಿದವ. ಇನ್ನೂ ಅಂಬೆಗಾಲಿಡುತ್ತಿರುವ ಮಗು. ನನ್ನ ಬ್ಲಾಗ್ ನೋಡಿ ಸದಾ ಸಂಪರ್ಕದಲ್ಲಿ ಇರಬೇಕೆಂಬುದೇ ನನ್ನ ಆಶಯ. ಹಾಗೆಯೇ ಬ್ಲಾಗ್ ಲೋಕದಲ್ಲಿನ ಅನೇಕ ಮಿತ್ರರನ್ನು ಭೇಟಿ ಮಾಡುವ ಆಸೆ. ಇನ್ನೊಂದು ಬ್ಲಾಗ್ ಸಮ್ಮೇಳನ ನಡೆಸಲೇಬೇಕು. ಅದು ಬೆಂಗಳೂರಿನಲ್ಲಾದರೆ ಉತ್ತಮ.

    Like

  45. ಮಾಧ್ಯಮ ಕ್ಷೇತ್ರದಿಂದ ಐ.ಟಿ.ಗೆ ವಲಸೆ ಹೋಗಿ ಕೂಡಾ ತಮ್ಮ ಮಾಧ್ಯಮ ಪ್ರೀತಿಯಿಂದಾಗಿ ನಾವು ಇಂಟರ್ನೆಟ್ ನಲ್ಲಿ ನಿಮ್ಮ ಬ್ಲಾಗ್ ಓದುವಂತಾಯಿತು..! ತಮ್ಮ ಅಕ್ಷರ ಪ್ರೀತಿ ಹಿಂಗೇ ಮುಂದುವರಿಯಲೆಂದು ಹರಸುವ ಹಾರೈಸುವ…
    ಗಣೇಶ್.ಕೆ.

    Like

  46. ಗಣೇಶ್ ಅವರೆ, ಬ್ಲಾಗು ಬುಟ್ಟಿಗೆ ಸ್ವಾಗತ. ನಿಮ್ಮ ಹಾರೈಕೆಗೆ ಧನ್ಯವಾದಗಳು.

    Like

  47. hello

    avinash…

    nimma blog nodiddu ondu akasmika. odi thumba khushiyaythu. computernalli kannada mathra gothu… adare blognalli hege bareyodu gothagalilla… addarinda nanna englikannada shisikolluvudu nimge anivarya..

    anda haage naanu shama antha… belthangady nandibettada hudugi… ega bendakaaloorinalli udyogi…

    Like

  48. ಹಲೋ ಶಾಮಾ ಅವರೆ,
    ಬ್ಲಾಗಿಗೆ ಸ್ವಾಗತ. ನೀವು ಕಂಪ್ಯೂಟರಿನಲ್ಲಿ ಕನ್ನಡ ಟೈಪ್ ಮಾಡಬೇಕಿದ್ದರೆ ಗೂಗಲ್ ಅವರ ಟ್ರಾನ್ಸ್‌ಲಿಟರೇಶನ್ ಟೂಲ್ ಬಳಸಿ. http://www.google.co.in/transliterate/indic/Kannada

    ಬೆಂದ ಕಾಳೂರಿನಲ್ಲಿ ಏನು ಮಾಡುತ್ತಿದ್ದೀರಿ? ನೀವು ಕೂಡ ಯಾಕೆ ಬ್ಲಾಗ್ ಮಾಡಬಾರದು?

    Like

  49. ಇಂದು ಶಮ ಕನ್ನಡ ಕಲಿತಳು. ಈಗ ಟೈಪಿಸುತ್ತಿದ್ದಾಳೆ. ಅವಿನಾಶ್ ರವರಿಗೆ ವಂದನೆಗಳು.

    naanu illi CEO aagi kelasa madtha ideeni.. naanu balaso kannada software nudi. so its bit difficult at once to this kind of kanglish typing… anyways i shall try.. blog create madidini. but running short of time to write a single word…

    i was browsing sibanthi’s write ups . i found u at that time.

    nice knowing u..
    bye 4 nw.

    Like

  50. ಶಮ ಅವರೆ, ಕೊನೆಗೂ ಕನ್ನಡ ಕಲಿತಿರಲ್ಲ!! 🙂

    ‘ನುಡಿ’ಯಲ್ಲೂ ಯುನಿಕೋಡ್ ಸೌಲಭ್ಯ ಇದೆ. ಅದಲ್ಲದೆ, ನುಡಿಯಲ್ಲಿ ಬರೆದಿದ್ದನ್ನು ಯುನಿಕೋಡಿಗೆ ಕನ್ವರ್ಟ್ ಮಾಡಬಲ್ಲ ತಂತ್ರಾಂಶಗಳೂ ಇವೆ. ನಿಮಗೆ ಅವಶ್ಯಕತೆಯಿದ್ದಲ್ಲಿ ಇ-ಮೇಲ್ ಮೂಲಕ ಸಂಪರ್ಕಿಸಿ. ಅದಕ್ಕೆ ಸಂಬಂಧಪಟ್ಟ ಲಿಂಕ್/ವಿವರ ನೀಡಬಲ್ಲೆ….

    ಬ್ಲಾಗಿಸಲು ಆರಂಭಿಸಿ, ಬ್ಲಾಗಿಸ್ತಾ ಇರಿ.
    btw ನಿಮ್ಮ ಬ್ಲಾಗಿನ ಯುಆರ್ಎಲ್ ಏನು?

    Like

  51. ಅವಿನಾಶ್,
    ಧನ್ಯವಾದಗಳು. ನಿಮ್ಮ ಈ ಮೇಲ್ ವಿಳಾಸ ನೀಡಿದಲ್ಲಿ ಸಂಪರ್ಕಿಸುವೆ. ನುಡಿಯಲ್ಲಿ ಬರೆದಿದ್ದನ್ನು ಯುನಿಕೋಡಿಗೆ ಕನ್ವರ್ಟ್ ಮಾಡಬಲ್ಲ ತಂತ್ರಾಂಶದ ವಿವರಗಳು ಸಿಕ್ಕಿದಲ್ಲಿ ಎಷ್ಟೊ ಸಮಯ ಉಳಿತಾಯ ಆಗುತ್ತದೆ. ಸಮಯ ಖರ್ಚು ಮಾಡುವುದರಲ್ಲಿ ಸ್ವಲ್ಪ ಕಂಜೂಸ್ ನಾನು. ಚಿಕುನ್ ಗುನ್ಯಾದ ದೃಷ್ಟಿ ನನ್ನ ಮೇಲೆ ಬಿದ್ದ ಕಾರಣ ಹಲವು ದಿನ ಮರೆಯಾಗ್ಬೇಕಾದ ಅನಿವಾರ್ಯತೆ ಬಂತು. ಡಾಕ್ಟರ್ ಗಂಡ ಇರುವ ಕಾರಣ ಫೀಸ್ ಕೊಡದೆ ಅದೊಂದು ಕರ್ಮಕಾಂಡ ಮುಗೀತು. ಅಂದ ಹಾಗೆ ನನ್ನ ಬ್ಲಾಗಿನಲ್ಲಿ ಒಂದೆರಡು ಅಕ್ಷರಗಳನ್ನು ಬರೆದ ಮೇಲೆ ವಿಳಾಸ ಹೇಳುವೆ. ಆಗದೆ ?
    -‘ಶಮ’, ನಂದಿಬೆಟ್ಟ

    Like

  52. ಅವಿನಾಶ್,
    ನನ್ನ ಹೊಸ ಬ್ಲಾಗ್ ಶುರುವಾಗಿದೆ. ಒಳ್ಗೇನಿಲ್ಲ. ಬರೆಯಲು ಒಂಚೂರು ಸಮಯ ಸಿಕ್ಕರೂ ಖಂಡಿತ ಬರೆಯುತ್ತೇನೆ. ಅದ್ಸರಿ, ಹಲವು ದಿನಗಳಿಂದ ನಿಮ್ಮ ಪತ್ತೆ ಇಲ್ಲ… ಎಲ್ಲಿ ಮರೆಯಾದಿರಿ ? ನುಡಿಯಿಂದ ಕನ್ವರ್ಟ್ ಮಾಡಬಲ್ಲ ಟ್ರಿಕ್ ಹೇಳ್ತೀರಿ ಅಂತ ಕಾದು ಕಾದು ನನ್ನ ಕತ್ತು ಉದ್ದ ಆಗಿದೆ. ನಾನಾಗಿ ನಾನು ಹುಡುಕಿಕೊಳ್ಳುವ ಮೊದಲು ನೀವೇ ಹೇಳಿಬಿಡಿ.
    ಬರ್ಲಾ….

    http://minchulli.wordpress.com

    Like

  53. ಏನೂ ಪರವಾಗಿಲ್ಲ. ಸುಮ್ಮನೆ ಕೇಳಿದೆ ಅಷ್ಟೆ. ಅಂಥಾ ಅರ್ಜೆಂಟು ನಂಗೂ ಏನಿಲ್ಲ.. ಕೆಲಸ ಮುಗಿಸಿಕೊಂಡು ಬಂದ ಮೇಲೆ ಉತ್ತರಿಸಿ. ಬರ್ಲಾ….

    Like

  54. ಹಲೋ ಮಿಂಚುಳ್ಳಿ,

    ಬ್ಲಾಗು ಆರಂಭಿಸಿದ್ದು ಒಳ್ಳೆಯ ಪ್ರಯತ್ನ. ಶಮ ಇನ್ನು ಬರೆಯಲು ಶುರು ಮಾಡ್ತಾರೆ. 🙂

    Like

  55. ಅವಿನಾಶ್!
    ಫಕ್ಕನೆ ನನ್ನ ಬ್ಲಾಗಿಗೆ ಬಂದು ಖೋ ಕೊಟ್ಟು ಕಾಣೆಯಾದಿರಲ್ಲ. 🙂
    ಹುಡುಕುತ್ತಾ ಇಲ್ಲಿ ಬಂದಾಗ ನಿಮ್ಮ ಅಭಿಮಾನಿಗಳ ದಂಡು ನೋಡಿ ಬೆರಗಾದೆ. ನೀವು ಚೆನ್ನೈಗೆ ಹಾರಿದ ಸುದ್ದಿ ಇಲ್ಲಿಯೇ ಓದಿ ಇನ್ನೇನು ಕುಮಾರನಾಥ್, ಚಂದ್ರಕಾಂತ್ ಮೊದಲಾದವರ ಬಗ್ಗೆಲ್ಲ ಕೇಳಬೇಕು ಅಂತೆಲ್ಲ ಯೋಚಿಸುತ್ತಾ ಬಂದಿದ್ದು ನುಂಗಿ ಬಿಟ್ಟೆ.
    ಒಳಿತಾಗಲಿ. ಇನ್ನು ಸಿಕ್ತಾ ಇರ್ತಿರಲ್ಲ.

    ಗುರು ಬಾಳಿಗ

    Like

  56. ಗುರುದತ್,
    ಎಷ್ಟು ಸಮಯ ಆಯ್ತು ನಿಮ್ಮನ್ನು ನೋಡಿ… ಬರ್ತಾ ಇರಿ. ದಿಲ್ಲಿಯಲ್ಲೇನು ಮಾಡ್ತಾ ಇದ್ದೀರಿ.
    ಶುಭವಾಗಲಿ.

    Like

  57. ಮಂಜು ಅವರೆ,
    ಬ್ಲಾಗಿಗೆ ಬಂದು ಸಕ್ಕರೆ ಮಾತಾಡಿದ್ದಕ್ಕೆ ಧನ್ಯವಾದ. ನೀವೇಕೆ ಬ್ಲಾಗಿಸಬಾರದು? ಯೋಚಿಸಿ.

    Like

  58. interesting. ನೀವು ಕರಾವಳಿಯವರ ಮರಾಯರೆ. ತುಂಭಾ ಚೆನ್ನಾಗಿದೆ. ನಿಮ್ಮ ಬಗ್ಗೆ ತಿಳಿದು ಖುಶಿಯಾಯಿತು.

    Like

  59. ಅನಾಮಿಕರೆ, ಬ್ಲಾಗಿಗೆ ಸ್ವಾಗತ, ನೀವೂ ಕರಾವಳಿಯವರಾಗಿರಬಹುದು. ನಿಮ್ಮ ಬ್ಲಾಗು ಇಲ್ಲವೇ?

    Like

  60. Nimma yradu mooru lekhanagalannu oadide chennagide naanu hosadaagi kannada blogige serikondiddu matte nive nanna modala snehitaraagiddu ivattu about u oodide nimma bagge neevu chennaagitilisiddiri devaru nimage olledannu maadali

    Like

  61. to
    avinash
    after a long time i saw your blog, i am very happy to see u on kannada blog
    this is same old lingadevaru from tiptur kalpataru college.
    i am in bangalore working for an NGO as data management and web portal manager.

    Like

  62. ಲಿಂಗದೇವರು, ಮತ್ತೆ ಹೇಗಿದ್ದೀರಿ… ಪತ್ತೇನೆ ಇಲ್ಲ… ದಯವಿಟ್ಟು ಸಂಪರ್ಕಿಸಿ… ಮೇಲ್ ಐಡಿ ಕೊಡಿ.

    ಬಸವರಾಜರೇ ನಮಸ್ಕಾರ… ಬರ್ತಾ ಇರಿ.

    Like

  63. ಸನ್ಮಾನ್ಯ ಅವಿನಾಶರೇ,
    ಹೇಗಿದ್ದಿರೀ ನಮ್ಮೂರು ಕಾರಿಗನೂರು ಗೊತ್ತಲ್ಲ ನೇರ, ನಿರಂತರ, ದಿಟ್ಟ ! ಜೆ. ಹೆಚ್. ಪಟೇಲರು ಊರು. ಬನ್ನಿ ನಮ್ಮೂರಿಗೆ ಒಂದು ಸಾರಿ. ಅಲ್ಲೆನಿದೇ ಐ.ಟಿ.ಯಲ್ಲಿ ಮಣ್ಣು !
    ನಮಸ್ಕಾರ
    ಲೋಕಿ. ಕಾರಿಗನೂರು

    Like

  64. ಅವಿನಾಶ ಅರಾಮ ಅದಿರೇನರೀ !
    ನೀವು ಬಾರಿ ಬರಿತೀರಿ ಬಿಡ್ರಿ. ನಮ್ಮ ಹುಬ್ಬಳ್ಳಿ ಕಡೆಗೇ ಒಮ್ಮೆ ಬರೆಲ್ಲಾ ಧಾರವಾಡ ಪೇಡೆ ತಿನ್ನನೂ. ಒಂದು ನಾಟಕ ನೋಡೋನು. ಬರೀ ಸಾಹೇಬ್ರ.

    Like

  65. ಲಕ್ಷ್ಮಣ ಭೀಮಣ್ಣ ಅವರೇ
    ಪಟೇಲ್ರ ಊರು ಕಾರಿಗನೂರು ಅಲ್ವೇ? ಆಕಡೆ ಬರೋಣ್ವಂತೆ, ಅಂಥದ್ದೊಂದು ಅನ್ನ ಕೊಡೋ ಕೆಲ್ಸ ಬಂದ್ರೆ ಬತ್ತೀನಿ ಸಾರ್…

    ನೀಲಕಂಠ ಶೇಶಗಿರಿ ಅವರೇ,
    ನಿಮಗೆ ನಮ್ಮೂರಿಗೂ (ಬ್ಲಾಗಿನೂರು) ಸ್ವಾಗತ. ಹುಬ್ಳಿ ಕಡೆ ಬರ್ಬೇಕು ನೀವು ಪೇಡೆ ಹೇಳಿದ್ಮ್ಯಾಕೆ, ಬಾಯಲ್ಲಿ ನೀರೂರೋಕೆ ಶುರು ಆಗ್ಬಿಟ್ಟಿದೆ. ನಾಟ್ಕಾನೂ ನೋಡ್ಬೇಕು…

    ಆಹ್ವಾನ ನೀಡಿದ ಇಬ್ರಿಗೂ ತುಂಬಾ ತುಂಬಾ ಧನ್ಯವಾದಗಳು.

    Like

  66. ಎಲ್ಲೋ ಕುಳಿತು ಬಹಳ ಚೆನ್ನಾಗಿ ಬರೀತೀರಾ. ನಮ್ಮ ಊರು ಮಲೆನಾಡು ಶಿವಮೋಗ್ಗ ಒಮ್ಮೆ ಬನ್ನಿ ಇಲ್ಲಿಗೆ. ಮಳೆಗಾಲದಲ್ಲಿ ಬಂದ್ರೆ ಅದರ ಮಜಾನೇ ಬೇರೆ………………
    ……………………..

    Like

    • ಗುರುರಾಜ್ ಅವರೆ, ಖಂಡಿತಾ ಮಲೆನಾಡಿಗೆ, ಮಳೆನಾಡಿಗೆ ಬರಬೇಕೆಂಬಾಸೆ… ಇನ್ನೇನು ಶುರುವಾಗಿರ್ಬೇಕಲ್ವಾ… ಬರ್ತೀನಿ,,,
      ಬರ್ತಾ ಇರಿ..
      ನಮಸ್ಕಾರ.

      Like

  67. ಅಂತರ್ಜಾಲದಲ್ಲಿ ಹಳಬರಾಗಿದ್ದವರ ಪರಿಚಯ ನನಗೆ ಹೊಸದಾಗಿ ಆಗುತ್ತಲೇ ಇರುತ್ತದೆ. ಇಂದು ಎಲ್ಲಿಂದಲೋ ನಿಮ್ಮ ತಾಣಕ್ಕೆ ಬಮ್ದು ಬಿದ್ದೆ. ನಿಮ್ಮ ಪರಿಚಯ ಆಯ್ತು. ಸಂತಸವಾಯ್ತು. ನಿಮ್ಮ ಪರಿಚಯದ ಶೈಲಿ ಮುದನೀಡಿ ನನ್ನನ್ನು ಆಕರ್ಷಿಸಿತು.
    ನಮಸ್ಕಾರ!

    Like

  68. ಹೆಗ್ಡೆಯವರೇ, ತಾಣಕ್ಕೆ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ನೀವು ಬಂದಿದ್ದು ಸಂತೋಷ. ಬರ್ತಾ ಇರಿ.

    Like

  69. ಅವಿನಾಶರೇ, ಖುಷಿ ಕೊಟ್ಟ ಬ್ಲಾಗ್ ನಿಮ್ಮದು. ಎಲ್ಲಿಗೋ ಹೋದವನು ಇಲ್ಲಿ ಬ೦ದು ಬಿದ್ದೆ.ಹಾಗೆಯೇ ಸರಕ್ಕನೇ ಎದ್ದೆ,ನಿಮ್ಮ “ನಾನು ಹೀಗಿದ್ದೇನೆ“ ಓದಿ! ಒ೦ಥರಾ ವಿಶೇಷವಾದ ಶೈಲಿ ಖುಷಿಕೊಟ್ಟಿತು.
    ನಮ್ಮಲ್ಲಿಗೂ ಒಮ್ಮೆ ಬನ್ನಿ. ಅಭಿಪ್ರಾಯ ತಿಳಿಸಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    Like

  70. ಹಲೋ ಸರ್, ಹೇಗಿದ್ದೀರಿ, ನಿಮ್ಮ `ನಾನು ಹೀಗಿದ್ದೇನೆ ` ಲೇಖನ ಚೆನ್ನಾಗಿದೆ. ಮುಚ್ಚುಮರೆಯಿಲ್ಲದೇ ನಿಮ್ಮ ಜೀವನ ಚರಿತ್ರೆಯನ್ನು ತೆಗೆದಿಟ್ಟಿದ್ದೀರಿ. ನೀವು ವೆಬ್‌ದುನಿಯದಲ್ಲಿ ಎಲ್ಲರ ಜತೆ ಹೊಂದಿಕೊಂಡು ಕೆಲಸವನ್ನು ನಿರ್ವಹಿಸಿಕೊಂಡು ಹೋಗುವ ರೀತಿಯೂ ಚೆನ್ನಾಗಿದೆ. ನಿಮ್ಮ ಬ್ಲಾಗಿನಲ್ಲಿ ಇನ್ನಷ್ಟು ಲೇಖನಗಳಿಗಾಗಿ ಕಾಯುತ್ತಿದ್ದೇನೆ.

    Like

  71. ರಾಘವೇಂದ್ರ ಅವರೆ,
    ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ. ಖಂಡಿತಾ ನಿಮ್ಮಲ್ಲಿಗೂ ಬರ್ತೀನಿ.

    Like

  72. ಶೆಟ್ರೇ, ಓದಿ ತುಂಬಾ ಖುಷಿಯಾಯಿತು. ನೀವು ಕೂಡ ಅಂತರಜಾಲ ಲೋಕದಲ್ಲಿ ಬ್ಲಾಗ್ ತೆರೆಯಬಹುದಲ್ಲಾ… ಹೇಗಿದ್ದೀರಿ…

    Like

  73. ನಲ್ಮೆಯ ಅವಿನಾಶ್‌ರವರೇ,

    ನಮಸ್ಕಾರ.

    ನಿಮ್ಮ ಬಹುಮುಖ ಪ್ರತಿಭೆ ಹಲವು-ಹನ್ನೊಂದು ಉತ್ಸಾಹಿಗಳಿಗೆ ಸ್ಫೂರ್ತಿಯಾಗಲಿ.

    Like

    • ನಾಡಿಗ್ ಅವರಿಗೆ ನಮಸ್ಕಾರ. ನಿಮ್ಮ ಹಾರೈಕೆ ನಮಗೂ ಪ್ರೋತ್ಸಾಹದಾಯಕ. ಪ್ರೀತಿ ಇರಲಿ. ೃ

      Like

    • ನಮಸ್ತೇ ಶ್ರೀನಿಧಿ… ನಿಮಗೆ ಸ್ವಾಗತ.
      ಥ್ಯಾಂಕ್ಸ್…. ನಿಮ್ಮೂರಿಗೆ ಬಂದು ನೋಡಿದರೆ, ನನಗಿಷ್ಟವಾಗಿರೋ ಬೆಕ್ಕುಗಳೇ ತುಂಬಿವೆ!!!

      Like

  74. ಅವಿ ಸರ್…….

    ನೀವು ಪ್ರತಿ ಕೆಲಸದ ಗುರಿ,
    ಮತ್ತು ಮಾತನಾ(ಮಾ)ಡುವ ಪರಿ.
    ಇದು ನಿಮ್ಮ ಚಮತ್ಕಾರವೇ ಸರಿ.
    ಹೇಗಿದ್ದಿರಿ….

    ಹೊಸ ಮುಖ ……….. 🙂

    Like

    • ಸಂಜಯ್ ಮೊವಾಡಿ ಅವರೇ,
      ಥ್ಯಾಂಕ್ಸ್… ನಾನು ಚೆನ್ನಾಗಿದ್ದೀನಿ… ನಿಮ್ಮದೇನಾದರೂ ಬ್ಲಾಗ್ ಇದೆಯೇ? 🙂

      Like

  75. ಬಹಳಷ್ಟು ಮಾಹಿತಿಗಳನ್ನು ಹಂಚುತ್ತಿದ್ದೀರಿ. ತುಂಬು ಹೃದಯದ ಧನ್ಯವಾದಗಳು ಬೈಪಡಿತ್ತಾಯರೇ. ಹೀಗೇ ಮುಂದುವರಿಸಿ.

    Like

  76. ಸಾರ್ ನಾನು ಪದಬಂಧ ರಚಿಸುತ್ತೇನೆ. “ಹೊಸದಿಗಂತ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಈ ಪದಬಂಧಗಳ ಒಂದು ಬ್ಲಾಗ್ ರಚಿಸಬೇಕೆಂದ್ದಿದ್ದೇನೆ.ಅದಕ್ಕೆ ತಮ್ಮ ಸಹಕಾರ ಬೇಕು. ಧನ್ಯವಾದಗಳು. 8880333842

    Like

  77. ಅವಿನಾಶ್ ಅವರಿಗೆ ನಮಸ್ಕಾರಗಳು. ಇವತ್ತು ನಿಮ್ಮೊಂದಿಗೆ ಫೋನ್ ನಲ್ಲಿ ಮಾತನಾಡಿದಾಗಿಂದ ನಿಮ್ಮ ಬಗ್ಗೆ ಕುತೂಹಲ ಮೂಡಿತು.ನನ್ನ ಸಣ್ಣ ಮೆಸೇಜ್ ಗೆ ನೀವು ಪ್ರತಿಕ್ರಿಯಿಸಿದ್ದಲ್ಲದೆ, ಫೋನ್ ಮಾಡಿ ಮಾತನಾಡಿದ್ದು ನನಗೆ ತುಂಬಾ ಸಂತೋಷವಾಯಿತು.ಅಲ್ಲಿ ವರೆಗೂ ನಿಮ್ಮ ಬಗ್ಗೆ ಹೆಚ್ಚು ತಿಳಿದು ಕೊಂಡಿರಲಿಲ್ಲ.ನಿಮ್ಮ ಹಳೆಯ ಲೇಖನಗಳನ್ನು ಓದುತ್ತ ಅದು ಈ ಬ್ಲಾಗ್ ವರೆಗೆ ಕರೆ ತಂದಿತು.ನಿಮ್ಮಬಗ್ಗೆ ತುಂಬಾ ಚನ್ನಾಗಿ ಬರೆದಿರುವಿರಿ.ಅಲ್ಲದೆ ನಿಮ್ಮಹವ್ಯಾಸ ಗಳ ಬಗ್ಗೆ ಕೇಳಿ ಸಂತೋಷವಾಯಿತು.ಹೀಗೆ ಮುಂದುವರಿಸಿ…ಧನ್ಯವಾದಗಳು .

    Like

  78. ತಿಪಟೂರಿನ ಜನತಾ ಲಾಡ್ಜ್. ಹಳೆಯ ರೂಮು. ಸ್ವೀಟ್ ಅಂಗಡಿ. ಜನತಾ ಡಿಲೆಕ್ಸ್ ಲಾಡ್ಜ್ ನಲ್ಲಿನ ಕ್ಯಾಷ್ ಕೌಂಟರ್. ಮುಂಬೈನಿಂದ ಕಳಿಸುತ್ತಿದ್ದ ಕರ್ನಾಟಕ ಮಲ್ಲ ಪತ್ರಿಕೆ, ಚೆನ್ನೈನಲ್ಲಿ ಭೇಟಿ, ಮತ್ತೆ ವಿಜಯ ಕರ್ನಾಟಕದಲ್ಲಿ ನೋಡಿದ್ದು. ನಾನು ಮನೆ ಕಟ್ಟಿದ್ದನ್ನು ನೀನು ನೋಡಿದೆ, ನೀನು ಮನೆಕಟ್ಟಿದ್ದನ್ನು ನಾನು ನೋಡಿದೆ. ಹದಿನೇಳು ವರ್ಷಗಳ ನಿನ್ನ ಬೆಳವಣಿಗೆಯನ್ನು ಬೆರಗಿನಿಂದಲೇ ಇನ್ನೂ ನೋಡುತ್ತಿದ್ದೇ. ಖುಷಿಯಾಗಿದೆ. ನಿಜಕ್ಕೂ ಬದಲಾವಣೆ ಜಗದ ನಿಯಮವೇ ! ಒಳ್ಳೆಯದಾಗಲಿ. ಶುಭ ಕಾಮನೆಗಳು…!

    Like

ನೀವೇನಂತೀರಾ?