ವರ್ಕ್ ಫ್ರಂ ಹೋಂ?: ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿಸುವುದು ಹೀಗೆ!

ವರ್ಕ್ ಫ್ರಂ ಹೋಮ್? ಇಂಟರ್ನೆಟ್ ಸಂಪರ್ಕ ತತ್‌ಕ್ಷಣಕ್ಕೆ ಸಿಗುತ್ತಿಲ್ಲವಾದರೆ, ನಿಮ್ಮ ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಿ, ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಧಾನ ಇಲ್ಲಿದೆ.

Mobile Wifi Hotspot

ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್. ಹೀಗಾಗಿ ವರ್ಕ್ ಫ್ರಂ ಹೋಮ್ ಅಂದರೆ ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವುದಕ್ಕೆ ಆದ್ಯತೆ. ಆದರೆ, ಇಂಟರ್ನೆಟ್ ಸೇವೆ ನೀಡುವ ಟೆಲಿಕಾಂ ಕಂಪನಿಗಳು ಕೂಡ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ, ಹೊಸದಾಗಿ ವೈಫೈ ಹಾಟ್‌ಸ್ಪಾಟ್ ಅಥವಾ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಳ್ಳಲು ತ್ರಾಸ ಪಡಬೇಕಾಗುತ್ತದೆ. ಇದಕ್ಕೆ ತ್ವರಿತ ಉಪಾಯವೇ, ನಮ್ಮ ಆಂಡ್ರಾಯ್ಡ್ ಫೋನ್‌ಗಳನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುವುದು.

ಫೋನ್‌ನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಹೇಗೆ ಬಳಸಬಹುದು ಎಂಬುದು ತಿಳಿದಿದ್ದರೂ, ಬಹುತೇಕರಿಗೆ ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈಗ ನಗರವಾಸಿಗಳಿಂದ ಹಿಡಿದು, ಗ್ರಾಮೀಣ ಪ್ರದೇಶದಲ್ಲಿರುವವರಿಗೂ ಅತ್ಯಗತ್ಯವಾಗಿಬಿಟ್ಟಿರುವ ಈ ಸೌಕರ್ಯವನ್ನು ಸರಳವಾಗಿ ಸಕ್ರಿಯಗೊಳಿಸಬಹುದಾಗಿದ್ದು, ಇದಕ್ಕೆ ಯಾವುದೇ ಟೆಕ್ ಪರಿಣಿತರ ನೆರವೂ ಬೇಕಾಗಿರುವುದಿಲ್ಲ.

ಈಗಾಗಲೇ ಇದ್ದವರು, ಟೆಲಿಕಾಂ ಸೇವಾದಾತರಿಂದ ದೊರೆಯುವ ವೈಫೈ ಹಾಟ್‌ಸ್ಪಾಟ್ ಬಳಸಬಹುದು. ಇಲ್ಲವೆಂದಾದರೆ, ನಿಮ್ಮಲ್ಲಿ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇದ್ದರೆ ಅದನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಿ, ಹಲವು ಮಂದಿ ಅದರ ಇಂಟರ್ನೆಟ್ ಸಂಪರ್ಕವನ್ನು ತಮ್ಮ ಮೊಬೈಲ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ. ಅದಲ್ಲದೆ, ನಿಮ್ಮದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುವುದು ಹೇಗೆಂಬ ಮಾಹಿತಿ ಇಲ್ಲಿದೆ. ಆಂಡ್ರಾಯ್ಡ್‌ನಲ್ಲಿನ ಈ ಹಾಟ್‌ಸ್ಪಾಟ್ ವ್ಯವಸ್ಥೆಯನ್ನು ಟಿದರಿಂಗ್ (Tethering) ಎಂದು ಕರೆಯಲಾಗುತ್ತದೆ.

ಬೇಕಾದ ಮೂಲಭೂತ ವ್ಯವಸ್ಥೆ: ನೀವಿರುವ ಪ್ರದೇಶದಲ್ಲಿ ಅತ್ಯುತ್ತಮ 4ಜಿ ನೆಟ್‌ವರ್ಕ್ ಸಿಗ್ನಲ್ ಇರುವ ಟೆಲಿಕಾಂ ಸೇವಾದಾತರ ಸಿಮ್ ಕಾರ್ಡ್ ನಿಮ್ಮಲ್ಲಿರಬೇಕಾಗುತ್ತದೆ, ಮೊಬೈಲ್ ಫೋನ್‌ನಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯ ಅಥವಾ ಪಕ್ಕದಲ್ಲೇ ಚಾರ್ಜಿಂಗ್ ಅಡಾಪ್ಟರ್ ಇರಲಿ. ಅತ್ಯಂತ ಮುಖ್ಯವೆಂದರೆ, ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವೈಫೈ ಸೌಕರ್ಯ ಇರಬೇಕಾಗುತ್ತದೆ. ಅದು ಇಲ್ಲದಿದ್ದರೆ, ಇನ್ನೂ ಎರಡು ವಿಧಾನಗಳಿವೆ. ಅವೆಂದರೆ, ಬ್ಲೂಟೂತ್ ಟಿದರಿಂಗ್ ಹಾಗೂ ಯುಎಸ್‌ಬಿ ಟೆದರಿಂಗ್. ಬ್ಲೂಟೂತ್ ಮೂಲಕ ಇಂಟರ್ನೆಟ್ ಸಂಪರ್ಕವು ತೀರಾ ನಿಧಾನವಾಗಿರುತ್ತದೆ, ಯುಎಸ್‌ಬಿ ಮೂಲಕ ಗುಣಮಟ್ಟದ ಸಂಪರ್ಕ ಪಡೆಯಬಹುದು.

ಮಾಡುವುದು ಹೀಗೆ:

Wi-Fi Hotspot

ಆಂಡ್ರಾಯ್ಡ್ 10 ಕಾರ್ಯಾಚರಣೆ ವ್ಯವಸ್ಥೆಯುಳ್ಳ ಫೋನ್‌ನಲ್ಲಿ ಹೇಗೆ ಮಾಡಬಹುದೆಂಬ ವಿಧಾನ ಇಲ್ಲಿದೆ. ಅದಕ್ಕೂ ಹಿಂದಿನ (ಆಂಡ್ರಾಯ್ಡ್ 9, 8, 7 ಇತ್ಯಾದಿ) ಮೊಬೈಲ್‌ಗಳಲ್ಲಿ ಅಥವಾ ಒಂದೊಂದು ಬ್ರ್ಯಾಂಡ್‌ಗಳ ಫೋನ್‌ಗಳ ಸೆಟ್ಟಿಂಗ್‌ನಲ್ಲಿ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದಷ್ಟೇ. ಮಾಡುವ ವಿಧಾನ ಒಂದೇ.
ಮೊದಲು, ಫೋನ್‌ನ ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ‘ವೈಫೈ & ಇಂಟರ್ನೆಟ್’ ವಿಭಾಗ ತೆರೆಯಿರಿ, ಅದರಲ್ಲಿ ‘ಹಾಟ್‌ಸ್ಪಾಟ್ & ಟಿದರಿಂಗ್’ ಎಂಬುದನ್ನು ಸ್ಪರ್ಶಿಸಿ. ಅಲ್ಲಿರುವ ಮೊದಲನೇ ಆಯ್ಕೆ ‘ವೈಫೈ ಹಾಟ್‌ಸ್ಪಾಟ್’. ಅದನ್ನು ಸ್ಪರ್ಶಿಸಿ, ಬಟನ್ ಅನ್ನು ‘ಆನ್’ಗೆ ಸ್ಲೈಡ್ ಮಾಡಿ. ಈ ಹಾಟ್‌ಸ್ಪಾಟ್‌ಗೆ ಹೆಸರು ಕೂಡ ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದು. ಅಲ್ಲೇ ಹಾಟ್‌ಸ್ಪಾಟ್‌ಗೆ ಪಾಸ್‌ವರ್ಡ್ ಸೆಟ್ ಮಾಡುವ ಆಯ್ಕೆ ಇರುತ್ತದೆ. ಪಾಸ್‌ವರ್ಡ್ ನಮೂದಿಸಿ. ಇದು ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಮುಖ್ಯ. ಇಲ್ಲವೆಂದಾದರೆ, ಬೇರೆಯವರು ಈ ಸಂಪರ್ಕವನ್ನು ಸುಲಭವಾಗಿ ಬಳಸಬಲ್ಲರು.

ಫೋನ್‌ನಲ್ಲಿ ಈ ರೀತಿ ಮಾಡಿದ ಬಳಿಕ, ನಿಮ್ಮ ವಿಂಡೋಸ್ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನ ವೈಫೈ ಬಟನ್ (ಅಥವಾ ಕೆಳ-ಬಲ ಮೂಲೆಯಲ್ಲಿರುವ ಗ್ಲೋಬ್ ಬಟನ್) ಒತ್ತಿ. ಆಗ ಲಭ್ಯವಿರುವ ವೈಫೈ ಸಂಪರ್ಕಗಳಿಂದ, ನೀವು ಕೊಟ್ಟಿರುವ ಹೆಸರಿನ ಹಾಟ್‌ಸ್ಪಾಟ್ ಆಯ್ಕೆ ಮಾಡಿಕೊಳ್ಳಿ. ‘ಕನೆಕ್ಟ್ ಆಟೋಮ್ಯಾಟಿಕಲಿ’ ಎಂಬ ಬಾಕ್ಸ್‌ಗೆ ಟಿಕ್ ಗುರುತು ಹಾಕಿಬಿಡಿ. (ಮುಂದಿನ ಬಾರಿ ನೀವು ಕಂಪ್ಯೂಟರ್ ಆನ್ ಮಾಡಿದಾಗ, ಹಾಟ್‌ಸ್ಪಾಟ್ ಆನ್ ಇದ್ದರೆ, ಕಂಪ್ಯೂಟರ್ ಸ್ವಯಂಚಾಲಿತವಾಗಿ ಅದಕ್ಕೆ ಸಂಪರ್ಕಗೊಳ್ಳುತ್ತದೆ, ಮತ್ತೊಮ್ಮೆ ಕ್ಲಿಕ್ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ). ನಂತರ ಮೊಬೈಲ್ ಹಾಟ್‌ಸ್ಪಾಟ್‌ನಲ್ಲಿ ಕೊಟ್ಟಿರುವ ಪಾಸ್‌ವರ್ಡ್ ನಮೂದಿಸಿ. ಅಷ್ಟೇ. ಕೆಲವೇ ಕ್ಷಣಗಳಲ್ಲಿ ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕಗೊಳ್ಳುತ್ತದೆ. ಬೇರೆ ಮೊಬೈಲ್‌ನಲ್ಲಿಯೂ, ವೈಫೈ ಆನ್ ಮಾಡಿದಾಗ, ಲಭ್ಯವಿರುವ ವೈಫೈ ಹಾಟ್‌ಸ್ಪಾಟ್‌ಗಳ ಪಟ್ಟಿಯಿಂದ ನಿಮ್ಮ ಮೊಬೈಲ್ ಹಾಟ್‌ಸ್ಪಾಟನ್ನು ಆಯ್ಕೆ ಮಾಡಿಕೊಂಡರಾಯಿತು. ಯುಎಸ್‌ಬಿ ಕೇಬಲ್ ಮೂಲಕ ಕಂಪ್ಯೂಟರಿಗೆ ಹಾಟ್‌ಸ್ಪಾಟ್ ಸಂಪರ್ಕಿಸಬೇಕೆಂದಿದ್ದರೆ, ಮೇಲಿನಂತೆಯೇ ‘ಹಾಟ್‌ಸ್ಪಾಟ್ & ಟಿದರಿಂಗ್’ ಎಂಬಲ್ಲಿ ಆಯ್ಕೆ ಗೋಚರಿಸುತ್ತದೆ.

ಕೆಲವೊಮ್ಮೆ ಇಂಟರ್ನೆಟ್ ಸಂಪರ್ಕ ಕಡಿದುಹೋಗಲೂಬಹುದು. ಅಂಥ ಸಂದರ್ಭದಲ್ಲಿ ಒಂದೋ ಮೊಬೈಲ್ ಹಾಟ್‌ಸ್ಪಾಟ್ ಆಫ್ ಮಾಡಿ ಮರಳಿ ಆನ್ ಮಾಡಿ. ಇಲ್ಲವೆಂದಾದರೆ, ಕಂಪ್ಯೂಟರ್/ಲ್ಯಾಪ್‌ಟಾಪ್‌ನ ವೈಫೈ ಆಫ್+ಆನ್ ಮಾಡಿ ನೋಡಿ. ಇದರಿಂದಲೂ ಪ್ರಯೋಜನವಾಗದಿದ್ದರೆ, ಕಂಪ್ಯೂಟರ್ ರೀಸ್ಟಾರ್ಟ್ ಮಾಡಿಬಿಡಿ. ಮೊಬೈಲ್ ಫೋನ್‌ನಲ್ಲಿ ಡೇಟಾ (ಇಂಟರ್ನೆಟ್) ಪ್ಯಾಕ್ ಸಾಕಷ್ಟು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ಇಲ್ಲವೆಂದಾದರೆ ರೀಚಾರ್ಜ್ ಮಾಡಿಸಿಕೊಳ್ಳಿ. ಹ್ಯಾಪೀ ಬ್ರೌಸಿಂಗ್!

ಪ್ರಜಾವಾಣಿಯಲ್ಲಿ 28 ಮಾರ್ಚ್ 2020 ಪ್ರಕಟ: ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s