ಪ್ಯಾನಿಕ್ ಬಟನ್: ಅಂಗೈಯಲ್ಲೇ ಇದ್ದಾನಲ್ಲ ರಕ್ಷಕಭಟ!

ಸ್ಮಾರ್ಟ್ ಫೋನ್ ವೈಶಿಷ್ಟ್ಯದ ಬಗ್ಗೆ ತಿಳಿದಿರಲೇಬೇಕಾದ ಸಂಗತಿ

ಕಳೆದ ವಾರ ಹೈದರಾಬಾದ್ ಟೋಲ್ ಸಂಗ್ರಹ ಕೇಂದ್ರದ ಬಳಿ ಪಶುವೈದ್ಯೆಯ ಮೇಲೆ ಕಾಮುಕರು ಮುಗಿಬಿದ್ದು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯು ದೇಶಾದ್ಯಂತ ಸದ್ದು ಮಾಡಿತು.

Panic Button

ರಾಜಧಾನಿ ದೆಹಲಿಯಲ್ಲಿ 2012 ಡಿಸೆಂಬರ್ 16ರಂದು ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲೆದ್ದ ಆವೇಶದ ಕಿಚ್ಚು ಮತ್ತೆ ಹತ್ತಿಕೊಂಡಿದೆ. “ನಮ್ಮಲ್ಲಿ ಮಹಿಳೆಗೆ ರಕ್ಷಣೆ ಇಲ್ಲ” ಎಂಬ ಮಾತಿಗೆ ಪುನರಪಿ ಬಲ ಬಂದಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೊಂದು ಸ್ವರಕ್ಷಣೆಯ ಸರಳ ವಿಧಾನ ನಮ್ಮ ಕೈಯಲ್ಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅಂಗೈಯಲ್ಲಿ ಅರಮನೆಯಂತೆ ಇರುವ ಮೊಬೈಲ್ ಫೋನ್‌ಗಳಲ್ಲಿ ಈ ವೈಶಿಷ್ಟ್ಯವಿದೆ. ದಾಳಿಗೀಡಾದ ಸಂದರ್ಭದಲ್ಲಿ ಪೆಪ್ಪರ್ ಸ್ಪ್ರೇಯಂತಹಾ ವಿಧಾನದ ಜತೆ, ನಮ್ಮ ಕೈಯಲ್ಲಿ ಸದಾ ಇರುವ ಮೊಬೈಲ್ ಫೋನ್‌ನಲ್ಲೇ ನಮಗೊಬ್ಬ ರಕ್ಷಕಭಟನಂತೆ ಇರುವ ಈ ವೈಶಿಷ್ಟ್ಯವನ್ನು ತುರ್ತು ಸಂದರ್ಭದಲ್ಲಿ ಎಲ್ಲರೂ, ವಿಶೇಷವಾಗಿ ಮಹಿಳೆಯರು ಸುಲಭವಾಗಿ ಬಳಸಬಹುದು. ಹೇಗೆಂಬ ಮಾಹಿತಿ ಇಲ್ಲಿದೆ.

ಮಹಿಳೆಯರ ರಕ್ಷಣೆಗಾಗಿ, 2017ರ ನಂತರ ತಯಾರಾದ ಎಲ್ಲ ಸ್ಮಾರ್ಟ್ ಫೋನ್, ಫೀಚರ್ ಫೋನ್‌ಗಳಲ್ಲಿ ಈ ಪ್ಯಾನಿಕ್ ಬಟನ್ ತಂತ್ರಜ್ಞಾನವನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿ 2016ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದಕ್ಕಾಗಿಯೇ 112 ಹೆಸರಿನಲ್ಲಿ ಆ್ಯಪ್ ಹೊರತರಲಾಯಿತು. ಜತೆಗೆ, ಆ್ಯಪ್ ಅಥವಾ ಬಟನ್ ಹುಡುಕುವುದು ಕಷ್ಟವಾದ ಸಂದರ್ಭದಲ್ಲಿ, ಫೋನ್ ಮಾಡಬಹುದಾದ ಸ್ಥಿತಿಯಲ್ಲಿದ್ದರೆ, 112 ಸಂಖ್ಯೆಯ ಮಹಿಳಾ ಸಹಾಯವಾಣಿಗೆ ಕರೆ ಮಾಡಬಹುದು.

ಕೆಲವು ಫೋನ್‌ಗಳಲ್ಲಿ ಪ್ರತ್ಯೇಕ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ವಿನ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುವ ಕಂಪನಿಗಳು ಪವರ್ ಬಟನ್‌ನಲ್ಲೇ ಈ ವೈಶಿಷ್ಟ್ಯವನ್ನು ಅಳವಡಿಸಿದವು. ಆದರೆ ನಮ್ಮ ಕೈಯಲ್ಲೇ ಇರುವ ಈ ರಕ್ಷಣಾ ವ್ಯವಸ್ಥೆಯ ಬಗೆಗೆ ಜನಜಾಗೃತಿ ಇನ್ನೂ ಆದಂತಿಲ್ಲ. ಇದು ಮಹಿಳೆಯರಿಗಷ್ಟೇ ಅಲ್ಲದೆ, ಸಂಕಷ್ಟದಲ್ಲಿ ಸಿಲುಕಿರುವ ಪುರುಷರು, ಮಕ್ಕಳಿಗೂ ಸಹಾಯವಾಗುತ್ತದೆ.

ಪ್ಯಾನಿಕ್ ಬಟನ್ ಹೇಗೆ ಕೆಲಸ ಮಾಡುತ್ತದೆ?
ಇದನ್ನು ತಿಳಿಯುವುದಕ್ಕಿಂತ ಮೊದಲು, ನಾವು ಸಂಕಷ್ಟದಲ್ಲಿ ಸಿಲುಕಿರುವುದರ ಬಗ್ಗೆ ತುರ್ತು ಸಂದೇಶ ರವಾನಿಸಲು ಮತ್ತು ಕರೆ ಮಾಡಿ ತಿಳಿಸುವಂತಾಗಲು ಕೆಲವು ಸ್ನೇಹಿತರು, ಕುಟುಂಬಿಕರನ್ನು ಗುರುತಿಸಬೇಕು ಮತ್ತು ನಮ್ಮ ಫೋನ್‌ನಲ್ಲಿ ಅವರ ಮೊಬೈಲ್ ಸಂಖ್ಯೆಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಕಾಗುತ್ತದೆ. ಪ್ಯಾನಿಕ್ ಬಟನ್ ಒತ್ತಿದಾಗ ಸ್ಥಳೀಯ ಮಹಿಳಾ ಸಹಾಯವಾಣಿಗೆ, ಸ್ಥಳೀಯ ಪೊಲೀಸರಿಗೆ ಹಾಗೂ ನಾವು ಸೇವ್ ಮಾಡಿಟ್ಟುಕೊಂಡ ನಮ್ಮ ಆತ್ಮೀಯರ ಸಂಖ್ಯೆಗೂ ನಾವೆಲ್ಲಿದ್ದೇವೆ ಎಂಬುದನ್ನು ತಿಳಿಸುವ ಸ್ಥಳದ (ಜಿಪಿಎಸ್ ಲೊಕೇಶನ್) ಮಾಹಿತಿಯ ಸಹಿತವಾಗಿ ಕರೆ ಹಾಗೂ ಸಂದೇಶ ಹೋಗುತ್ತದೆ.

ಪ್ಯಾನಿಕ್ ಬಟನ್ ಬಳಸುವುದು ಹೇಗೆ?

ಸ್ಮಾರ್ಟ್ ಫೋನ್‌ಗಳಲ್ಲಾದರೆ, ಆನ್/ಆಫ್ ಮಾಡುವ ಪವರ್ ಬಟನ್ ಅನ್ನೇ ಕ್ಷಿಪ್ರವಾಗಿ ಮೂರು ಬಾರಿ ಒತ್ತಿದರಾಯಿತು. ಅದೇ ರೀತಿ, ಕೀಪ್ಯಾಡ್ ಇರುವ ಅರೆ-ಸ್ಮಾರ್ಟ್ ಫೋನ್‌ಗಳಲ್ಲಾದರೆ (ಫೀಚರ್ ಫೋನ್), 5 ಅಥವಾ 9 ಬಟನನ್ನು ದೀರ್ಘ ಕಾಲ ಒತ್ತಿದರಾಯಿತು. ಅದು ತುರ್ತು ಕರೆ ಮತ್ತು ತುರ್ತು ಸಂದೇಶವನ್ನು ಟ್ರಿಗರ್ ಮಾಡಿ, ಮೊದಲೇ ಸೇವ್ ಮಾಡಿಟ್ಟುಕೊಂಡ ಸಂಪರ್ಕ ಸಂಖ್ಯೆಗಳಿಗೆ ನಾವು ಇರುವ ಸ್ಥಳ (ಲೊಕೇಶನ್) ಮಾಹಿತಿಯ ಸಹಿತ ಸಂದೇಶ ರವಾನಿಸುತ್ತದೆ. ಸಹಾಯವಾಣಿಯವರು ತಕ್ಷಣ ಕ್ರಮ ಕೈಗೊಂಡು ಮರಳಿ ಕಾಲ್ ಮಾಡುತ್ತಾರೆ ಹಾಗೂ ಸಮೀಪದ ಪೊಲೀಸ್ ಸ್ಟೇಶನ್‌ಗೆ, ನಾವಿರುವ ಸ್ಥಳದ ಸಮೀಪದಲ್ಲಿ ಸಕ್ರಿಯರಾಗಿರುವ ಸ್ವಯಂಸೇವಕರಿಗೆ ಸಂದೇಶ ರವಾನಿಸುತ್ತಾರೆ.

112 ಆ್ಯಪ್ ಅಳವಡಿಸಿಕೊಂಡ ಬಳಿಕ, ಅದನ್ನು ತೆರೆದು, ನಮ್ಮ ಹೆಸರು, ಜನ್ಮದಿನಾಂಕ, ಲಿಂಗ ಹಾಗೂ ಮೊಬೈಲ್ ಸಂಖ್ಯೆ ಸಹಿತ ಮಾಹಿತಿಯನ್ನು ನಮೂದಿಸಿ ನೋಂದಾಯಿಸಬೇಕು. ಆತ್ಮೀಯರ ಫೋನ್ ಸಂಖ್ಯೆಗಳನ್ನು ಒಂದೊಂದಾಗಿ ಸೇರಿಸಬಹುದು. ಕಷ್ಟದಲ್ಲಿರುವವರಿಗೆ ಸಹಾಯಕ್ಕಾಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ಇಷ್ಟ ಇರುವವರೂ ಅಲ್ಲಿ ನೋಂದಾಯಿಸಿಕೊಳ್ಳಬಹುದು. ಅಂದರೆ, ನಿರ್ದಿಷ್ಟ ಪ್ರದೇಶದಿಂದ ಯಾವುದಾದರೂ ತುರ್ತು ಸಹಾಯಕ್ಕಾಗಿ ಸಂದೇಶ ಬಂದರೆ, ನಮಗೂ ಮಾಹಿತಿ ದೊರೆಯುತ್ತದೆ ಮತ್ತು ನಾವು ಹೋಗಿ ಕಷ್ಟದಲ್ಲಿರುವವರ ನೆರವಿಗೆ ಧಾವಿಸಬಹುದಾಗಿದೆ. ಈ ಆ್ಯಪ್‌ನಲ್ಲಿ ಪೊಲೀಸ್, ಅಗ್ನಿಶಾಮಕ ದಳ, ವೈದ್ಯಕೀಯ ತುರ್ತು (ಆ್ಯಂಬುಲೆನ್ಸ್) ಸೇವೆ ಹಾಗೂ ಇತರ ಸಮಸ್ಯೆಗಳಿಗೆ ಕರೆ/ಸಂದೇಶಕ್ಕಾಗಿ ನಾಲ್ಕು ಬಟನ್‌ಗಳಿರುತ್ತವೆ. ಬೇಕಾದುದನ್ನು ಬೆರಳಿನಿಂದ ಸ್ಪರ್ಶಿಸಿದರಾಯಿತು. ತಪ್ಪಾಗಿ ಕರೆ ಹೋಗಿದೆಯೆಂದಾದರೆ, ತಕ್ಷಣವೇ ‘ನಾನು ಸುರಕ್ಷಿತ’ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು.

112 ಎಂಬುದು ವಿಶೇಷವಾಗಿ ಬೆಂಗಳೂರು ಹೊರತುಪಡಿಸಿದ ಸ್ಥಳಗಳಿಗಾಗಿ ರೂಪಿಸಲಾದ ಸಹಾಯವಾಣಿ. ಬೆಂಗಳೂರಿಗರು 100 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಅನಗತ್ಯ ಕರೆ ಮಾಡದೆ ಪ್ರಜ್ಞಾವಂತಿಕೆಯಿಂದ ಈ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕಿದೆ.

ಗಮನಿಸಿ

ನಿರ್ಭಯಾ ಎಂಬ ಹೆಸರಿನ ಸಂಪರ್ಕ ಸಂಖ್ಯೆಯೊಂದು (9833312222) ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸಹಾಯವಾಣಿ ಎಂಬ ಹೆಸರಿನಲ್ಲಿ ತಪ್ಪು ಸಂದೇಶ ರೂಪದಲ್ಲಿ ಹರಿದಾಡುತ್ತಿದೆ. ಇದು ಮಹಾರಾಷ್ಟ್ರ ರೈಲ್ವೇ ಪೊಲೀಸರು 2015ರಲ್ಲಿ ಹೊರತಂದಿದ್ದ ಮಹಿಳಾ ಸಹಾಯವಾಣಿ, ಈಗ ಕಾರ್ಯ ನಿರ್ವಹಿಸುತ್ತಿಲ್ಲ. ನಿಮಗೆ ಬಂದರೆ ಫಾರ್ವರ್ಡ್ ಮಾಡಲು ಹೋಗಬೇಡಿ.

ಎಮರ್ಜೆನ್ಸಿ ಸಂದರ್ಭದಲ್ಲಿ….
* 112 ಸಂಖ್ಯೆಗೆ ಡಯಲ್ ಮಾಡುವುದು
* 112 ಹೆಸರಿನ ಆ್ಯಪ್ ಬಳಸುವುದು
* 5 ಅಥವಾ 9 ನಂಬರ್ ಕೀ ಒತ್ತಿಹಿಡಿಯುವುದು
* ಕ್ಷಿಪ್ರವಾಗಿ 3 ಬಾರಿ ಪವರ್ ಬಟನ್ ಒತ್ತುವುದು

My Article Published in Prajavani on 05 Dec 2019

-ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s