ಆಕರ್ಷಕ ಬ್ಯಾಟರಿ, ಕೇಸ್, ಉತ್ತಮ ಧ್ವನಿಯ ಬ್ಲೂಟೂತ್ ಇಯರ್‌ಪಾಡ್ (Review)

ವೈರ್‍‌ಲೆಸ್ ಬ್ಲೂಟೂತ್ ಇಯರ್‌ಫೋನ್‌ಗಳ ಜಮಾನದ ಬಳಿಕ ಈಗ ಇಯರ್-ಪಾಡ್‌ಗಳ ಕಾಲ. ಪುಟ್ಟದಾದ ಇಯರ್‌ಫೋನ್‌ಗಳು ಪ್ರತ್ಯೇಕವಾಗಿ ಎರಡೂ ಕಿವಿಯೊಳಗೆ ಕುಳಿತಿರುತ್ತವೆ ಮತ್ತು ಇದರಲ್ಲಿ ಸ್ಟೀರಿಯೊ ಧ್ವನಿಯನ್ನು ಅಸ್ವಾದಿಸಬಹುದು. ಇಂಥಾ ತಂತ್ರಜ್ಞಾನವನ್ನು ಬಳಸಿ ಆ್ಯಪಲ್ ಏರ್‌ಪಾಡ್‌ಗಳು ರೂಪುಗೊಂಡಿದ್ದರೆ, ಸ್ಯಾಮ್ಸಂಗ್ ಕೂಡ ಐಕಾನ್ ಎಕ್ಸ್ ಹಾಗೂ ಬೋಸ್ ಸೌಂಡ್ ಸ್ಪೋರ್ಟ್ ಕೂಡ ಮಾರುಕಟ್ಟೆಯಲ್ಲಿವೆ. ಇವು ತುಸು ದುಬಾರಿ ಅನ್ನಿಸುವವರಿಗೆ, ಭಾರತೀಯ ಕಂಪನಿಯೊಂದು ಇಯರ್-ಪಾಡ್‌ಗಳನ್ನು ರೂಪಿಸಿದೆ. ಅದುವೇ ಜೆಬ್ರಾನಿಕ್ಸ್ ಕಂಪನಿ ಹೊರತಂದಿರುವ ಜೆಬ್-ಪೀಸ್ (Zeb-Peace).

ಜೆಬ್ ಪೀಸ್ ಎಂಬುದು ಬ್ಲೂಟೂತ್ ಮೂಲಕ ಕಾರ್ಯಾಚರಿಸುವ ವೈರ್‌ಲೆಸ್ ಇಯರ್‌ಪಾಡ್ ಆಗಿದ್ದು, ಧುತ್ತನೇ ಗಮನ ಸೆಳೆಯುವುದು ಅದರ ಬಾಕ್ಸ್ ತೆರೆದಾಗ. ಮೋಟಾರು ಬೈಕುಗಳ ಬದಿಯಲ್ಲಿರುವ ಬಾಕ್ಸ್‌ನ ರೂಪದಲ್ಲೇ ಇವು ಗೋಚರಿಸುತ್ತವೆ. ಆದರೆ ಪುಟ್ಟ ಆಕಾರ. ಅದರ ಮುಚ್ಚಳ ತೆರೆದರೆ ಒಳಗೆರಡು ಪುಟ್ಟ ಇಯರ್‌ಪಾಡ್‌ಗಳು ಕೂತಿರುತ್ತವೆ. ಈ ಬಾಕ್ಸ್ ಯಾಕೆ ಅಂತ ಗಮನಿಸಿದಾಗ, ಇದು ಪೋರ್ಟೆಬಲ್ ಚಾರ್ಜಿಂಗ್ ಯುನಿಟ್ ಎಂಬುದು ತಿಳಿಯಿತು. ಹೌದು. ಈ ಬಾಕ್ಸ್ ಅನ್ನೇ ಚಾರ್ಜ್ ಮಾಡಿಸಿಟ್ಟರೆ, ಎರಡೂ ಇಯರ್‌ಪಾಡ್‌ಗಳನ್ನು ಅದರಲ್ಲಿ ಇರಿಸಿದರೆ, ತನ್ನಿಂತಾನಾಗಿ ಚಾರ್ಜ್ ಆಗುತ್ತದೆ ಎಂಬುದೇ ವಿಶೇಷ. ಇಯರ್‌ಪಾಡ್ ಕಾರ್ಯನಿರ್ವಹಣೆಗೂ ಬ್ಯಾಟರಿ ಚಾರ್ಜ್ ಬೇಕಾಗಿರುವಾಗ, ಇಂಥದ್ದೊಂದು ಪೋರ್ಟೆಬಲ್ ಬ್ಯಾಟರಿ ಇದ್ದರೆ ಸೂಕ್ತ. ಅಲ್ಲದೆ, ಇದು ನೈಜ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯೂ ಆಗಿದೆ.

ಇದನ್ನು ಮೂರು ವಾರಗಳ ಕಾಲ ಬಳಸಿ ನೋಡಿದಾಗ ಅನ್ನಿಸಿದ್ದೆಂದರೆ, 3999 ರೂ. ಬೆಲೆಯಲ್ಲಿ ಇದೊಂದು ಅತ್ಯುತ್ತಮ ಇಯರ್‌ಪಾಡ್. ಉತ್ತಮ ಗುಣಮಟ್ಟ ಸ್ಟೀರಿಯೊ ಧ್ವನಿ ಹೊರಹೊಮ್ಮುತ್ತದೆ. ಫೋನ್ ರಿಂಗ್ ಆಗುವಾಗ ಕೆಲ ಸೆಕೆಂಡುಗಳ ವಿಳಂಬ ಗಮನಕ್ಕೆ ಬಂದಿದೆಯಾದರೂ, ಅದು ದೊಡ್ಡ ಸಮಸ್ಯೆಯೇನಲ್ಲ.

ವಿಶೇಷವೆಂದರೆ, ಈ ಎರಡೂ ಇಯರ್‌ಪಾಡ್‌ಗಳನ್ನು ಬೇರೆ ಬೇರೆ ಡಿಜಿಟಲ್ ಸಾಧನಗಳಿಗೆ ಬ್ಲೂಟೂತ್ ಮೂಲಕ ಸಂಪರ್ಕಿಸಬಹುದಾಗಿದೆ. ಉದಾಹರಣೆಗೆ, ಎರಡು ಫೋನ್ ಇಟ್ಟುಕೊಳ್ಳುವವರಿಗೆ ಪ್ರತ್ಯೇಕ ಇಯರ್‌ಪಾಡ್‌ಗಳಿದ್ದಂತೆ. ಇಲ್ಲವಾದರೆ, ಎರಡೂ ಇಯರ್‌ಪಾಡ್‌ಗಳನ್ನು ಪರಸ್ಪರ ಪೇರ್ (Pair) ಮಾಡಿ, ಸ್ಟ್ರೀರಿಯೋ ಧ್ವನಿಯ ಮೂಲಕ ಸಂಗೀತವನ್ನು ಆಸ್ವಾದಿಸಬಹುದು.

ಗಮನಿಸಬೇಕಾದ ಅಂಶವೆಂದರೆ, ಈ ಇಯರ್‌ಪಾಡ್‌ಗಳನ್ನು ಅದರ ಚಾರ್ಜಿಂಗ್ ಪೆಟ್ಟಿಗೆಯಿಂದ ಹೊರಗೆ ತೆಗೆಯಲು ಒಂದಿಷ್ಟು ತೊಡಕಿದೆಯಷ್ಟೇ. ಅದನ್ನು ಹೊರತುಪಡಿಸಿದರೆ, ಓಡುವಾಗ, ಜಾಗಿಂಗ್, ವಾಕಿಂಗ್ ವೇಳೆ ಇದನ್ನು ಕಿವಿಯಲ್ಲಿಟ್ಟುಕೊಂಡು ಹಾಡುಗಳನ್ನು ಆನಂದಿಸಬಹುದು. ಜತೆಗೆ, ಇದನ್ನು ಆಂಡ್ರಾಯ್ಡ್ ಹಾಗೂ ಆ್ಯಪಲ್ ಫೋನ್‌ಗಳಲ್ಲಿಯೂ ಸುಲಭವಾಗಿ ಬಳಸಬಹುದಾಗಿದ್ದು, ಆಯಾ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಸಾಧನಗಳ ಧ್ವನಿ ಸಹಾಯಕವನ್ನು (ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ) ಕೂಡ ಬಳಸಬಹುದು. ಇಯರ್‌ಪೀಸ್‌ನಲ್ಲಿರುವ ಪುಟ್ಟ ಸ್ವಿಚ್ ಅನ್ನು ಎರಡು ಬಾರಿ ಅದುಮಿದರೆ, ವಾಯ್ಸ್ ಅಸಿಸ್ಟೆಂಟ್ ಲಾಂಚ್ ಆಗುತ್ತದೆ.

ಕರೆ ಬಂದಾಗ ಏನು ಮಾಡಬೇಕು? ಇಯರ್‌ಪಾಡ್‌ನಲ್ಲೇ ಪುಟ್ಟ ಸ್ವಿಚ್ ಇದೆ. ಅದನ್ನು ಒತ್ತಿದರೆ ಸಾಕು. ದ್ವಿಚಕ್ರ ವಾಹನ ಓಡಿಸುವವರು ಹೆಲ್ಮೆಟ್ ಧರಿಸಬೇಕಾಗಿರುವುದರಿಂದ ಕರೆ ಸ್ವೀಕರಿಸಲು ಕೊಂಚ ಕಷ್ಟವಾಗಬಹುದು. ಬೇರೆಲ್ಲ ಕಡೆ ಬಳಕೆಗೆ ಇದೊಂದು ಅದ್ಭುತ ಸಾಧನ. ಹಾಡು ನಿಲ್ಲಿಸಲು (Pause) ಅಥವಾ ಕರೆ ಸ್ವೀಕರಿಸಲು ಸ್ವಲ್ಪ ಗಟ್ಟಿಯಾಗಿ ಒತ್ತಬೇಕಾಗುತ್ತದೆ.

ಚಾರ್ಜಿಂಗ್ ಯುನಿಟ್‌ನಿಂದ ತೆಗೆದ ತಕ್ಷಣ ಅದು ಆನ್ ಆಗುತ್ತದೆ. ಆಡಿಯೋ ಗುಣಮಟ್ಟವಂತೂ ಈ ಶ್ರೇಣಿಯ ವೈರ್‌ಲೆಸ್ ಉತ್ಪನ್ನಗಳಿಗೆ ಹೋಲಿಸಿದರೆ ಚೆನ್ನಾಗಿದೆ. ಕರೆ ಬಂದಾಗ, ಎಡ ಕಿವಿಯ ಇಯರ್‌ಪಾಡ್‌ನಲ್ಲಿ ಮಾತ್ರವೇ ಕರೆಯನ್ನು ಕೇಳಬಹುದಾಗಿದೆ. ಅಂದರೆ, ಕರೆಯಲ್ಲಿರುವಾಗ ಸ್ಟೀರಿಯೋ ಎಫೆಕ್ಟ್ ಇರುವುದಿಲ್ಲ. ಇದ್ದರೆ ಚೆನ್ನಾಗಿತ್ತು.

ಜೆಬ್ರಾನಿಕ್ಸ್‌ನ ಇಯರ್‌ಪಾಡ್‌ನಲ್ಲಿ ಕಂಡುಬಂದ ಅತ್ಯುತ್ತಮ ಅಂಶವೆಂದರೆ, ಅದರ ಚಾರ್ಜಿಂಗ್ ಪಾಡ್. ಎರಡೂ ಇಯರ್‌ಪಾಡ್‌ಗಳನ್ನು ಅದರೊಳಗಿಟ್ಟು ಒಯ್ಯುವುದು ಕೂಡ ಸುಲಭ. ಪ್ರತ್ಯೇಕ ಚಾರ್ಜಿಂಗ್ ಯುನಿಟ್‌ನ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿಸಿಟ್ಟುಕೊಂಡರೆ, ನಿರಂತರವಾಗಿ ಹೆಚ್ಚುವರಿ ಆರು ಗಂಟೆಗಳ ಕರೆ/ಆಡಿಯೋ ಬಳಕೆಗೆ ಅನುಕೂಲ. ಸಾಮಾನ್ಯವಾಗಿ ಒಂದು ಇಯರ್ ಪೀಸ್‌ನಲ್ಲಿ ಸುಮಾರು ಎರಡೂವರೆ ಗಂಟೆ ನಿರಂತರವಾಗಿ ಮಾತನಾಡಲು ಅಥವಾ ಸಂಗೀತ ಕೇಳಲು ಅಡ್ಡಿಯಿಲ್ಲ. ಎರಡು ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ವಿಜಯ ಕರ್ನಾಟಕದಲ್ಲಿ, ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s