Infinix HOT S3X Review: ಅಗ್ಗದ ದರದ ಕ್ಯಾಮೆರಾ ಕೇಂದ್ರಿತ ಫೋನ್

ಈಗಾಗಲೇ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ ಹೊಸ ಛಾಪು ಬೀರುತ್ತಿರುವ ಟ್ರಾನ್ಸಿಯಾನ್ ಹೋಲ್ಡಿಂಗ್ಸ್‌ನ ಇನ್ಫಿನಿಕ್ಸ್ ಇಂಡಿಯಾ ಹೊರತಂದಿರುವ ಮತ್ತೊಂದು ಸ್ಮಾರ್ಟ್ ಫೋನ್ Infinix HOT S3X. ಅಗ್ಗದ ದರದಲ್ಲಿ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳುಳ್ಳ ಫೋನ್ ಇದು. ಇದನ್ನು ಒಂದು ತಿಂಗಳು ಬಳಸಿ ನೋಡಿದಾಗ ಹೇಗನಿಸಿತು? ವಿವರ ಇಲ್ಲಿದೆ.

2018ರ ಆರಂಭದಲ್ಲಿ ಬಿಡುಗಡೆಯಾಗಿದ್ದ HOT S3 ಯಶಸ್ಸಿನಿಂದ ಪ್ರೇರಣೆ ಪಡೆದು ಇದೀಗ ಅದರದ್ದೇ ಸುಧಾರಿತ ರೂಪ, ಸೆಲ್ಫೀ ಕೇಂದ್ರಿತ ಮಧ್ಯಮ ಬಜೆಟ್‌ನ ಫೋನ್ ಇನ್ಫಿನಿಕ್ಸ್ ಹಾಟ್ S3X ಹೊರಬಂದಿದೆ. ಅಗ್ಗದ ದರ, ಹಗುರ ತೂಕ, ಉತ್ತಮ ಕ್ಯಾಮೆರಾ ಇದರ ವಿಶೇಷತೆ.

Infinix Hot S3X
ಹಗುರ ತೂಕದ ಈ ಫೋನ್, 6.2” HD+ ಡಿಸ್‌ಪ್ಲೇ ಹೊಂದಿದೆ. ಈಗಿನ ಫೋನ್‌ಗಳ ವೈಶಿಷ್ಟ್ಯವಾಗಿರುವ ನಾಚ್ (Notch) ಕೂಡ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕನಿಷ್ಠ ಜಾಗವನ್ನು ಆವರಿಸಿದ ಕಾರಣ, ಪೂರ್ಣ ಡಿಸ್‌ಪ್ಲೇ ಎಂಬುದಕ್ಕೆ ಹತ್ತಿರವಾಗಿದೆ. ಜತೆಗೆ 19:9 ಆಸ್ಪೆಕ್ಟ್ ಅನುಪಾತ, 13MP+2MP ಡ್ಯುಯಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇರುವ ಹಿಂಭಾಗದ ಕ್ಯಾಮೆರಾ, ಫ್ಲ್ಯಾಶ್ ಸಹಿತವಾಗಿದೆ ಮತ್ತು ಭರ್ಜರಿ 4000 mAh ಬ್ಯಾಟರಿ ಇದರಲ್ಲಿದೆ. 16 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇದೆ. ಗ್ಲಾಸ್ ಫಿನಿಶಿಂಗ್ ಇರುವ ಯೂನಿಬಾಡಿ ವಿನ್ಯಾಸದ ಕವಚವನ್ನು ಹೊಂದಿದೆ. ಹಗುರವಾಗಿದ್ದು, ಐಸ್ ಬ್ಲೂ, ಸ್ಯಾಂಡ್‌ಸ್ಟೋನ್ ಬ್ಲ್ಯಾಕ್ ಮತ್ತು ಟ್ರೇಡ್‌ವಿಂಡ್ಸ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಹಾರ್ಡ್‌ವೇರ್
ಕ್ವಾಲ್‌ಕಾಂ SD 430 ಒಕ್ಟಾಕೋರ್ 64 ಬಿಟ್ ಪ್ರೊಸೆಸರ್, 1.4 Ghz, GPU – ಅಡ್ರಿನೋ 505 ಇದರಲ್ಲಿದ್ದು, ಫಿಂಗರ್‌ಪ್ರಿಂಟ್, ಫೇಸ್ ಐಡಿ ಅನ್‌ಲಾಕ್ ವ್ಯವಸ್ಥೆಯಿದೆ. ಡ್ಯುಯಲ್ ಸಿಮ್ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಜತೆಗೆ ಆಂಡ್ರಾಯ್ಡ್ ಒರಿಯೋ 8.1 ಆಧಾರಿತ XOS 3.3 ಕಾರ್ಯಾಚರಣಾ ವ್ಯವಸ್ಥೆಯಿದೆ. 3 GB RAM ಹಾಗೂ 32 GB ಮೆಮೊರಿ ಇದೆ. 128 GB ವರೆಗೆ ವಿಸ್ತರಿಸಬಹುದು.

ತಂತ್ರಾಂಶ, ಬ್ಯಾಟರಿ, ಕಾರ್ಯ ನಿರ್ವಹಣೆ
ಆಂಡ್ರಾಯ್ಡ್ ಒರಿಯೋ ಜತೆಗೆ 3 ಜಿಬಿ RAM, ಒಕ್ಟಾ ಕೋರ್ ಪ್ರೊಸೆಸರ್ ಇರುವುದರಿಂದ ಫೋನ್ ಕಾರ್ಯನಿರ್ವಹಣೆ ಸುಲಲಿತ ಅನ್ನಿಸಿತು. ಹಿಂಭಾಗದ ಕವಚದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು, ತಕ್ಷಣದ ಅನ್‌ಲಾಕ್‌ಗೆ ಅನುಕೂಲ. ಹಲವು ಬೆರಳಚ್ಚುಗಳನ್ನು ಅಳವಡಿಸಬಹುದು. ಹೀಗಾಗಿ ಎಡಗೈ ಅಥವಾ ಬಲಗೈಯಲ್ಲಿ ಹಿಡಿದುಕೊಂಡರೂ ಫಿಂಗರ್‌ಪ್ರಿಂಟ್ ಮೂಲಕ ಅನ್‌ಲಾಕ್ ಸಾಧ್ಯವಿದೆ.

ಕ್ಯಾಮೆರಾ ಇದರ ವಿಶೇಷ. ಪ್ರಧಾನ ಕ್ಯಾಮೆರಾದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅಳವಡಿಕೆಯಾಗಿದ್ದು, ಆಟೋಫೋಕಸ್ ಮಾಡಿ ಚಿತ್ರಗಳನ್ನು ಎರಡು ಲೆನ್ಸ್‌ಗಳಲ್ಲಿ (13 ಹಾಗೂ 2 ಮೆಗಾಪಿಕ್ಸೆಲ್ ಸೆನ್ಸರ್ ಸಹಿತ) ಚಿತ್ರಗಳನ್ನು ಉತ್ತಮವಾಗಿ ಸೆರೆಹಿಡಿಯಬಹುದು. ಒಳಾಂಗಣದಲ್ಲಿ ಮತ್ತು ಕಡಿಮೆ ಬೆಳಕಿನಲ್ಲಿ ಉತ್ತಮ ಚಿತ್ರಗಳು ಮೂಡಿಬಂದಿವೆ. ಇದಕ್ಕೆ ಕಾರಣ, ಅದರಲ್ಲಿರುವ ಸ್ವಯಂ ಬ್ರೈಟ್‌ನೆಸ್ ವ್ಯವಸ್ಥೆ. ಜತೆಗೆ ಪನೋರಮಾ ಮತ್ತು ನೈಟ್ ಮೋಡ್‌ಗಳಿವೆ. ಉಳಿದಂತೆ, ಎಐ ಮೋಡ್, ಬ್ಯೂಟಿ, ಪೋರ್ಟ್ರೇಟ್ ಮೋಡ್‌ಗಳಿವೆ. ಬ್ಯೂಟಿ ಮೋಡ್‌ನಲ್ಲಿ ಚಿತ್ರಗಳು ಮತ್ತಷ್ಟು ಸುಂದರವಾಗಿಸಬಹುದಾಗಿದ್ದರೆ, ಪೋರ್ಟ್ರೇಟ್ ಮೋಡ್‌ನಲ್ಲಿ ಹಿನ್ನೆಲೆಯನ್ನು ಮಸುಕಾಗಿಸಿ, ಪ್ರಧಾನ ವಸ್ತುವಿನ ಚಿತ್ರವನ್ನು ಅತ್ಯಂತ ಸ್ಫುಟವಾಗಿ ಕಾಣಿಸಬಲ್ಲುದು. ಹೊರಾಂಗಣ ಫೋನ್‌ಗಳಲ್ಲಂತೂ ಚಿತ್ರಗಳು ಅತ್ಯುತ್ತಮವಾಗಿ ಮೂಡಿಬಂದವು.

ವೇಗವನ್ನು ಮತ್ತು ಕ್ಷಿಪ್ರ ಪ್ರೊಸೆಸಿಂಗ್ ಅನ್ನು ಯಾಚಿಸುವ ಅಸ್ಫಾಲ್ಟ್‌ನಂತಹಾ ಗೇಮ್ ಇದರಲ್ಲಿ ಯಾವುದೇ ತೊಂದರೆಯಿಲ್ಲದೆ ಆಡುವುದು ಸಾಧ್ಯವಾಗಿದೆ. ಅಂದರೆ, ಕ್ವಾಲ್‌ಕಾಂ ಪ್ರೊಸೆಸರ್ 1.4 Ghz GPU ಹಿನ್ನೆಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆಯೆಂದಾಯಿತು.

ಬಾಕ್ಸ್‌ನಲ್ಲಿ ಇಯರ್‌ಫೋನ್ ಇಲ್ಲ. ಥರ್ಡ್ ಪಾರ್ಟಿ ಇಯರ್‌ಫೋನ್ ಅಳವಡಿಸಿ ಎಫ್ಎಂ ಹಾಗೂ ಹಾಡುಗಳು ಉತ್ತಮ ಧ್ವನಿಯನ್ನು ನೀಡಿದವು. ಸ್ಪೀಕರ್ ಮೂಲಕವೂ ಗರಿಷ್ಠ ವಾಲ್ಯೂಮ್‌ನಲ್ಲಿಟ್ಟರೂ ಗೊಗ್ಗರು ಧ್ವನಿ ಎಲ್ಲೂ ಕೇಳಿಸಲಿಲ್ಲ.

ಚಿತ್ರ, ವೀಡಿಯೊಗಳನ್ನು ಅಡಗಿಸಿಡಲು ಎಕ್ಸ್-ಹೈಡ್ ಎಂಬ ಫೋಲ್ಡರ್ ವ್ಯವಸ್ಥೆಯಿದೆ. ಇದರದ್ದೇ ಆದ ಥೀಮ್ ಹಾಗೂ PHX ಬ್ರೌಸರ್, ಒಪೆರಾ ನ್ಯೂಸ್, ಫೋನ್ ಮಾಸ್ಟರ್ ಮುಂತಾದ ಏಳೆಂಟು ಆ್ಯಪ್‌ಗಳು ಇನ್‌ಸ್ಟಾಲ್ ಆಗಿಯೇ ಬರುತ್ತವೆ. ಪ್ಯೂರ್ ಆಂಡ್ರಾಯ್ಡ್ ಅಲ್ಲದಿರುವುದರಿಂದ ಇದನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಸ್ಮಾರ್ಟ್ ವೈಶಿಷ್ಟ್ಯಗಳು ಇದರ ವಿಶೇಷತೆಗಳಲ್ಲೊಂದು. ಸ್ಕ್ರೀನ್ ಎಚ್ಚರಿಸಲು ಡಬಲ್ ಟ್ಯಾಪ್ ಮಾಡುವುದು, ಒಂದು ಕೈಯಲ್ಲಿ ಹಿಡಿಯಬಹುದಾದಂತೆ ಸ್ಕ್ರೀನ್ ವ್ಯಾಪನೆಯನ್ನು ಕಿರಿದಾಗಿಸುವ ವ್ಯವಸ್ಥೆ, ಮೂರು ಬೆರಳುಗಳಿಂದ ಮೇಲಿಂದ ಕೆಳಕ್ಕೆ ಎಳೆದರೆ ಸ್ಕ್ರೀನ್ ಶಾಟ್ ತೆಗೆಯುವುದು, ಫೋನ್ ತಿರುಗಿಸಿದರೆ ಸೈಲೆಂಟ್ ಆಗುವುದೇ ಮೊದಲಾದ ಸ್ಮಾರ್ಟ್ ವ್ಯವಸ್ಥೆಗಳನ್ನು ಆನ್ ಮಾಡಿಕೊಳ್ಳಬಲ್ಲ ವೈಶಿಷ್ಟ್ಯಗಳು ಗಮನ ಸೆಳೆದವು.

ಬ್ಯಾಟರಿ 4000 mAh ಇರುವುದರಿಂದ ಸಾಮಾನ್ಯ ಬಳಕೆಯಲ್ಲಿ ದಿನಪೂರ್ತಿ ಯಾವುದೇ ಚಿಂತೆ ಇಲ್ಲ.

ಒಟ್ಟಾರೆ ಹೇಗಿದೆ?
3 ಜಿಬಿ, 64 ಜಿಬಿ ಸಾಮರ್ಥ್ಯ, ಉತ್ತಮ ಕ್ಯಾಮೆರಾ, ಫಿಂಗರ್‌ಪ್ರಿಂಟ್, ಫೇಸ್ ಐಡಿ, ಜತೆಗೆ ಅತ್ಯಾಧುನಿಕ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಮುಂತಾದ ಅತ್ಯಾಧುನಿಕ ವೈಶಿಷ್ಟ್ಯಗಳು 10 ಸಾವಿರ ರೂ. ಒಳಗೆ ಬರುತ್ತದೆಯೆಂದಾದರೆ ಯಾರಿಗೆ ಇಷ್ಟವಾಗದು?

Infinix HOT S3X ಮೊಬೈಲ್ ರಿವ್ಯೂ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s