ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ, ಶಾಶ್ವತವಾಗಿ ಹೊರಬರುವುದು ಹೇಗೆ?

Facebook deactivateತಲೆಬುಡವಿಲ್ಲದ ಫೇಕ್ ಸುದ್ದಿಗಳು, ವ್ಯರ್ಥ ರಾಜಕೀಯ ಚರ್ಚೆಗಳು, ಸತ್ವಹೀನ ವ್ಯರ್ಥಾಲಾಪಗಳು, ಫೇಕ್ ಸ್ನೇಹಿತರು, ಖಾಸಗಿತನಕ್ಕೆ ಭಂಗ ತರುವ ಇಂಟರ್ನೆಟ್ ಚಾಳಿ, ಜತೆಗೆ ನಮ್ಮ ಮಾಹಿತಿ ಸೋರಿ ಹೋಗುವಿಕೆಯಂತಹಾ ಅಲ್ಲೋಲ ಕಲ್ಲೋಲದ ಕಾರಣದಿಂದಾಗಿ, ಫೇಸ್‌ಬುಕ್‌ನಿಂದ ಹೊರಬಂದರೆ ಸಾಕು ಅಂತ ಅಂದುಕೊಳ್ಳುವವರ ಸಂಖ್ಯೆಗೇನೂ ಕೊರತೆಯಿಲ್ಲ. ಬೇಡಪ್ಪಾ ಫೇಸ್‌ಬುಕ್ ಸಹವಾಸ ಅಂದುಕೊಂಡವರಿದ್ದಾರೆ. ಫೇಸ್‌ಬುಕ್ ಖಾತೆ ಇದ್ದರಲ್ಲವೇ ಅದರತ್ತ ಕಣ್ಣು ಹಾಯಿಸಲೇಬೇಕು ಎಂಬ ತುಡಿತ? ಫೇಸ್‌ಬುಕ್‌ನಲ್ಲಿ ಖಾತೆಯೇ ಇಲ್ಲದಿದ್ದರೆ? ಅತ್ತ ಕಡೆ ತಲೆಹಾಕಲೇಬೇಕೆಂದಿಲ್ಲ! ಆದರೆ, ಇರುವ ಖಾತೆಯನ್ನು ಇಲ್ಲದಂತೆ ಮಾಡುವುದು ಹೇಗೆ ಎಂಬುದೇ ಕೆಲವರಿಗೆ ತಿಳಿಯದಿರುವ ಸಂಗತಿ. ಗೂಗಲ್‌ನಲ್ಲಿ ಹೌ ಟು ಡಿಲೀಟ್ ಫೇಸ್‌ಬುಕ್ ಅಕೌಂಟ್ ಅಂತ ಸರ್ಚ್ ಮಾಡಿದರೆ, 52 ಕೋಟಿಗೂ ಹೆಚ್ಚು ಇಂಟರ್ನೆಟ್ ಪುಟಗಳು ತೆರೆದುಕೊಳ್ಳುತ್ತವೆಯೆಂದರೆ ಜನರೆಷ್ಟು ರೋಸಿಹೋಗಿದ್ದಾರೆ ಎಂಬುದು ವೇದ್ಯವಾಗುತ್ತದೆ.

ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವು ಈಗ ಫೇಕ್‌ಬುಕ್ ಆಗುತ್ತಿರುವುದು ಅದರಲ್ಲಿ ಹರಿದಾಡುತ್ತಿರುವ ಮಾಹಿತಿ, ಪೋಸ್ಟ್‌ಗಳನ್ನು ಗಮನಿಸುತ್ತಲೇ ಭ್ರಮನಿರಸನಗೊಂಡವರಿಗೆ ತಿಳಿದಿರುವ ವಿಚಾರ. ಒಂದು ರಾಜಕೀಯ ಕಾಮೆಂಟ್‌ನಿಂದ ಸ್ನೇಹಿತರಿಂದಲೇ ದೂರವಾದ ಪ್ರಕರಣಗಳೂ ಇವೆ. ಇಷ್ಟೇ ಅಲ್ಲ, ಒಂದು ಸಲ ಫೇಸ್‌ಬುಕ್ ಆ್ಯಪ್ ಓಪನ್ ಮಾಡಿಟ್ಟುಕೊಂಡರೆ, ಗಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ಆ ಒಂದು ಗಂಟೆಯಲ್ಲಿ ನಾನೇನು ಮಾಡಿದೆ? ಏನೂ ಇಲ್ಲ ಅನ್ನಿಸಿದಾಗ, ಸಮಯ ವ್ಯರ್ಥವಾಗಿರುವುದರ ಚಿಂತೆ ಶುರುವಾಗುತ್ತದೆ. ಇವೆಲ್ಲದರ ಗೊಡವೆಯೇ ಬೇಡ. ನಮಗೆ ಆನ್‌ಲೈನ್‌ನ ಸ್ನೇಹವೂ ಫೇಕ್ ಸ್ನೇಹವೂ ಬೇಡ, ನೇರವಾಗಿಯೇ ಫೋನ್ ಮೂಲಕ ಸಂಪರ್ಕದಲ್ಲಿದ್ದುಕೊಂಡು ಶಾಂತಿಯಿಂದಿರೋಣ ಎಂದುಕೊಂಡವರಿಗಾಗಿ ಇಲ್ಲಿದೆ ಮಾಹಿತಿ.

ಫೇಸ್‌ಬುಕ್‌ನಲ್ಲಿ ಅಷ್ಟೊಂದು ಫ್ರೆಂಡ್ಸ್ ಇದ್ದಾರಲ್ವಾ, ಅವರನ್ನೆಲ್ಲಾ ಹೇಗೆ ಒಂದೇ ಬಾರಿಗೆ ಕೈಬಿಡುವುದು? ಅಂತ ಯೋಚನೆ ಮಾಡುವವರಿಗೆ ಇರುವ ಒಂದು ಆಯ್ಕೆಯೆಂದರೆ, ಸೀಮಿತ ಸಮಯಕ್ಕೆ ಫೇಸ್‌ಬುಕ್ ಸಾಮಾಜಿಕ ಜಾಲತಾಣದಿಂದ ಹೊರನಡೆಯುವುದು. ಆಫ್‌ಲೈನ್ ಪ್ರಪಂಚದಲ್ಲಿ ಎಲ್ಲವೂ ಸ್ತಿಮಿತಕ್ಕೆ ಬಂದ ಬಳಿಕ, ಮತ್ತೆ ಆನ್‌ಲೈನ್ ಜಗತ್ತನ್ನು ಸರಿಪಡಿಸಿಕೊಳ್ಳೋಣ ಅಂತ ನೀವು ಭಾವಿಸಿದರೆ, ಸ್ವಲ್ಪ ದಿನ ಬ್ರೇಕ್ ತೆಗೆದುಕೊಳ್ಳಲು, ನೀವು ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು. ಆಗ ನಿಮ್ಮ ಫೋಟೋ, ವೀಡಿಯೊಗಳೆಲ್ಲ ಅಲ್ಲಿಯೇ ಇರುತ್ತವೆ, ಆದರೆ ನಿಮ್ಮ ಪ್ರೊಫೈಲ್ ಯಾರಿಗೂ ಕಾಣಿಸುವುದಿಲ್ಲ. ಆದರೂ ನೀವು ಫೇಸ್‌ಬುಕ್ ಮೆಸೆಂಜರ್ ಬಳಸಬಹುದು.

ತಾತ್ಕಾಲಿಕವಾಗಿ ಎಫ್‌ಬಿ ಬಂದ್ ಮಾಡಲು ಹೀಗೆ ಮಾಡಿ: ಫೇಸ್‌ಬುಕ್ ಸೆಟ್ಟಿಂಗ್ಸ್‌ನಲ್ಲಿ (ಬಲ ಮೇಲ್ತುದಿಯಲ್ಲಿ ತಲೆಕೆಳಗಾದ ತ್ರಿಕೋನ ಬಟನ್ ಕ್ಲಿಕ್ ಮಾಡಿದಾಗ ಕಾಣಿಸುತ್ತದೆ), ಎಡ ಮೇಲ್ಭಾಗ ನೋಡಿದರೆ, ‘ಯುವರ್ ಫೇಸ್‌ಬುಕ್ ಇನ್ಫಾರ್ಮೇಶನ್’ ಟ್ಯಾಬ್ ಒತ್ತಿದಾಗ, ಬಲ ಬದಿಯಲ್ಲಿ ಕೆಳಭಾಗದಲ್ಲಿ ‘ಡಿಲೀಟ್ ಯುವರ್ ಅಕೌಂಟ್ ಆ್ಯಂಡ್ ಇನ್ಫಾರ್ಮೇಶನ್’ ಕ್ಲಿಕ್ ಮಾಡಿ. ಆಗ ಕಾಣಿಸಿಕೊಳ್ಳುವ ಪುಟದಲ್ಲಿ, ಮೆಸೆಂಜರ್‌ನಲ್ಲಿ ಮಾತ್ರ ಇದ್ದು, ಖಾತೆ ನಿಷ್ಕ್ರಿಯಗೊಳಿಸಲು ‘ಡೀಆ್ಯಕ್ಟಿವೇಟ್ ಅಕೌಂಟ್’ ಆಯ್ಕೆ ಗೋಚರಿಸುತ್ತದೆ. 2ನೇ ಆಯ್ಕೆಯಲ್ಲಿ, ನಿಮ್ಮ ಮಾಹಿತಿಯ ಬ್ಯಾಕಪ್ ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಇರಿಸಿಕೊಳ್ಳುವ ಆಯ್ಕೆ ಇರುತ್ತದೆ. 3ನೇ ಆಯ್ಕೆಯಲ್ಲಿ ನೀವು ಯಾವುದಾದರೂ ಫೇಸ್‌ಬುಕ್ ಪುಟದ ನಿರ್ವಾಹಕರಾಗಿದ್ದರೆ (ಆ್ಯಡ್ಮಿನ್), ಅದರ ‘ಆಡಳಿತ’ವನ್ನು ಬೇರೆಯವರಿಗೆ ಒಪ್ಪಿಸಿ ನೀವು ನಿರ್ಗಮಿಸಬಹುದು. ಇಲ್ಲವೆಂದಾದರೆ, ಆ ಪುಟವೂ ನಿಷ್ಕ್ರಿಯವಾಗಿಬಿಡುತ್ತದೆ.

ಕೊನೆಯ ಬಟನ್ ಖಾತೆಯನ್ನೇ ಡಿಲೀಟ್ ಮಾಡಿಸುತ್ತದೆ. ಇದು ಶಾಶ್ವತವಾಗಿ ಖಾತೆ ತೆಗೆಯುವ ಆಯ್ಕೆಯಾಗಿರುವುದರಿಂದ ಮತ್ತೊಮ್ಮೆ ಪಾಸ್‌ವರ್ಡ್ ನಮೂದಿಸಬೇಕಾಗುತ್ತದೆ. ಡೀಆ್ಯಕ್ಟಿವೇಟ್ ಮಾಡಿದ ಖಾತೆಯನ್ನು ನೀವು ಮರಳಿ, ಇದೇ ಸೆಟ್ಟಿಂಗ್ಸ್ ಮೂಲಕ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಆದರೆ ಡಿಲೀಟ್ ಮಾಡಿದ ಖಾತೆ ಮರಳಿ ಪಡೆಯುವುದು ಸಾಧ್ಯವಿಲ್ಲ. ಇಷ್ಟು ಕಾಲದಿಂದ ಬಳಸುತ್ತಿದ್ದ ಫೇಸ್‌ಬುಕ್‌ನಿಂದ ಸಂನ್ಯಾಸ ಪಡೆಯಲು ಗಟ್ಟಿ ಮನಸ್ಸು ಬೇಕು!

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ಅಂಕಣ, 15 ಅಕ್ಟೋಬರ್ 2018

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s