ಬರುತ್ತಿದೆ ಪುಟ್ಟದಾದ ಇ-ಸಿಮ್ ಕಾರ್ಡ್: ಏನಿದು? ಏನು ಉಪಯೋಗ?

ಸೆಪ್ಟೆಂಬರ್ 12ರಂದು ಆ್ಯಪಲ್ ಕಂಪನಿಯು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದಾಗ, ಅತ್ಯಾಧುನಿಕವಾದ, ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸಬಲ್ಲ ತಂತ್ರಜ್ಞಾನವೊಂದನ್ನು ಕೂಡ ತಿಳಿಯಪಡಿಸಿತು. ಇದುವೇ ಇ-ಸಿಮ್ ಅಥವಾ ಎಲೆಕ್ಟ್ರಾನಿಕ್ ಸಿಮ್. ಇದೇನು, ಇದರ ಸಾಧ್ಯತೆಗಳೇನು? ನಮಗೇನು ಲಾಭ?

ಹೌದು, ಇಂದು ಇಂಟರ್ನೆಟ್ ಸಂಪರ್ಕವಿರುವ ಸಿಮ್ ಕಾರ್ಡ್ ಹೊಂದುವುದು ತೀರಾ ಸುಲಭವೂ ಅಗ್ಗವೂ ಆಗಿರುವುದರಿಂದ, ಮಾತನಾಡಲೊಂದು, ಇಂಟರ್ನೆಟ್ ಸಂಪರ್ಕಕ್ಕೊಂದು, ವಾಟ್ಸ್ಆ್ಯಪ್‌ಗೊಂದು ಸಿಮ್ ಕಾರ್ಡ್ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಸ್ಮಾರ್ಟ್ ಫೋನ್ ತಯಾರಕರು ಕೂಡ ಡ್ಯುಯಲ್ (ಎರಡು) ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಅನಿವಾರ್ಯವಾಗಿ ನೀಡಲೇಬೇಕಾಯಿತು. ಆದರೆ ಈಗಲೂ ಅದರಲ್ಲೊಂದು ಸಮಸ್ಯೆಯಿದೆ. ಕನಿಷ್ಠ ಮೂರು ಅಳತೆಯ ಸಿಮ್ ಕಾರ್ಡ್‌ಗಳಿವೆ. ಹಿಂದಿನ ಫೀಚರ್ ಫೋನ್‌ಗಳಿಗಾದರೆ ಸ್ಟ್ಯಾಂಡರ್ಡ್ ಸಿಮ್ ಕಾರ್ಡ್ ಮತ್ತು ಈಗಿನ ಫೋನ್‌ಗಳಿಗಾದರೆ ಸ್ವಲ್ಪ ಚಿಕ್ಕದಾಗಿರುವ ಮೈಕ್ರೋ ಸಿಮ್, ಮತ್ತು ಇನ್ನಷ್ಟು ಅತ್ಯಾಧುನಿಕವಾದ ನ್ಯಾನೋ ಸಿಮ್. ಒಂದೊಂದು ಫೋನ್‌ಗಳಿಗೆ ಒಂದೊಂದು ಗಾತ್ರ ಮಾತ್ರ ಹೊಂದಿಕೆಯಾಗುವುದರಿಂದ, ಅದನ್ನು ಸರಿಪಡಿಸಲು ಅಡಾಪ್ಟರ್ ಬಳಸಬೇಕಾಗುತ್ತದೆ. ಜತೆಗೆ ಹೈಬ್ರಿಡ್ ಸಿಮ್ ಸ್ಲಾಟ್ (ಒಂದೋ ನ್ಯಾನೋ ಸಿಮ್ ಅಥವಾ ಮೆಮೊರಿ ಕಾರ್ಡ್ ಸೇರಿಸಲು) ಕೂಡ ಕೆಲವು ಫೋನುಗಳಲ್ಲಿವೆ. ಇದಕ್ಕೊಂದು ಪುಟ್ಟದಾದ ಪ್ಲಾಸ್ಟಿಕ್ ಟ್ರೇ ಕೂಡ ಬೇಕಾಗುತ್ತದೆ. ಈಗ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್‌ಗಳಲ್ಲಿರುವ ಗೊಂದಲಗಳಿವು.

ಸಿಮ್ ಕಾರ್ಡ್‌ಗಳಿಗಾಗಿಯೇ ಪ್ರತ್ಯೇಕ ಸ್ಲಾಟ್ ಬೇಕಾಗುವುದರಿಂದ ಫೋನ್‌ಗಳ ಸ್ಲಿಮ್ ಆಗಿಸುವುದಕ್ಕೆ ಕೂಡ ತೊಡಕಾಗುತ್ತಿದೆ. ಈ ಗೊಂದಲಗಳು ಮತ್ತು ಗಾತ್ರದ ಉಸಾಬರಿಯೇ ಬೇಡ, ಫೋನ್‌ನ ಒಳಗಡೆಯೇ ಸಿಮ್ ಕಾರ್ಡ್ ಎಂಬೆಡ್ ಆಗಿ ಬಂದರೆ ಹೇಗೆ? ಎಲ್ಲ ಸಮಸ್ಯೆಗಳಿಗೂ ಪರಿಹಾರ ಈಗ ಬರುತ್ತಿದೆ. ಹಿಂದೆ ಸಿಡಿಎಂಎ ಎಂಬ ತಂತ್ರಜ್ಞಾನವೊಂದಿತ್ತು. ಅದರಲ್ಲಿನ ಮಿತಿ ಎಂದರೆ, ಒಂದು ಫೋನ್ ಖರೀದಿಸಿದರೆ ಅದರಲ್ಲಿ ನಿರ್ದಿಷ್ಟ ಫೋನ್ ಸೇವಾ ಕಂಪನಿಯ ಸೇವೆಯನ್ನು ಮಾತ್ರ ಪಡೆಯಬಹುದಾಗಿತ್ತು.

ಇದೀಗ ಬಂದಿರುವ ಇ-ಸಿಮ್ ತಂತ್ರಜ್ಞಾನ (ಆ್ಯಪಲ್ ತನ್ನ ಐಫೋನ್ ಎಕ್ಸ್ಎಸ್ ಹಾಗೂ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಮಾಡೆಲ್‌ಗಳಲ್ಲಿ ಪರಿಚಯಿಸಿದೆ) ಭವಿಷ್ಯದ ಹೊಸ ಸಾಧ್ಯತೆಗೆ ನಾಂದಿ ಹಾಡಿದೆ. ಇದುವರೆಗೆ ಆ್ಯಪಲ್ ಫೋನ್‌ಗಳಲ್ಲಿದ್ದುದು ಒಂದೇ ಸಿಮ್. ಈಗ ಅದು ಡ್ಯುಯಲ್ ಸಿಮ್‌ಗೆ ಮೊರೆ ಹೋಗಿದೆ, ಒಂದು ಸಾಮಾನ್ಯ ಸಿಮ್, ಮತ್ತೊಂದು ಇ-ಸಿಮ್. ಇ-ಸಿಮ್ ಗಾತ್ರ ನ್ಯಾನೋ ಸಿಮ್‌ಗಿಂತ ತೀರಾ ಚಿಕ್ಕದು. ಫೋನ್‌ನಲ್ಲೇ ಎಂಬೆಡ್ ಆಗಿರುತ್ತದೆ ಮತ್ತು ತೆಗೆಯುವುದು ಅಸಾಧ್ಯ. ಪ್ರತ್ಯೇಕ ಸ್ಲಾಟ್ ಬೇಕಾಗಿಲ್ಲ. ಇದರಲ್ಲಿರುವ ಸಾಫ್ಟ್‌ವೇರ್ ಮೂಲಕ ನಮಗೆ ಬೇಕಾದ ಸರ್ವಿಸ್ ಪ್ರೊವೈಡರ್‌ಗಳನ್ನು (ಉದಾ. ಬಿಎಸ್ಸೆನ್ನೆಲ್, ಏರ್‌ಟೆಲ್, ಐಡಿಯಾ, ಜಿಯೋ ಇತ್ಯಾದಿ) ಸೇರಿಸಿಕೊಳ್ಳಬಹುದು. ಬದಲಾಯಿಸಿಕೊಳ್ಳುವುದು ಕೂಡ ಒಂದು ಫೋನ್ ಕರೆಯ ಮೂಲಕ ಸಾಧ್ಯ.

ಸದ್ಯಕ್ಕೆ ಭಾರತದಲ್ಲಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ಮಾತ್ರ ಎಲೆಕ್ಟ್ರಾನಿಕ್ ಸಿಮ್ ಸೇವೆಯನ್ನು ಬೆಂಬಲಿಸುತ್ತವೆ. ಇ-ಸಿಮ್ ಇದ್ದರೆ, ಪುಟ್ಟದಾದ ಸ್ಮಾರ್ಟ್ ವಾಚ್‌ಗಳಲ್ಲಿ ಕೂಡ ಬಳಸಬಹುದು. ವಿಶೇಷವಾಗಿ ವಿದೇಶಕ್ಕೆ ಹೋದಾಗ, ಅಲ್ಲಿನ ಸಿಮ್ ಕಾರ್ಡ್ ಖರೀದಿಸುವ ಬದಲು, ನಮ್ಮದೇ ಫೋನ್‌ನಲ್ಲಿರುವ ಇ-ಸಿಮ್ ಮೂಲಕ, ಸಂಬಂಧಿತ ನೆಟ್‌ವರ್ಕ್ ಸೇವೆಯನ್ನು ಬದಲಾಯಿಸಿಕೊಳ್ಳಬಹುದು. ಭಾರತದಲ್ಲಿ ಎಲ್ಲ ಆಪರೇಟರ್‌ಗಳು ಈ ತಂತ್ರಜ್ಞಾನಕ್ಕೆ ಬದಲಾಗಲು ಒಪ್ಪಿದರೆ, ಮುಂದಕ್ಕೆ ಫೋನ್ ನಂಬರ್ ಪೋರ್ಟ್ ಮಾಡುವುದು ಸುಲಭ. ಚೀನಾದಲ್ಲಿ ಇದಕ್ಕೆ ಯಾರೂ ಒಪ್ಪುತ್ತಿಲ್ಲವಾದುದರಿಂದ ಅಲ್ಲಿನ ಮಾರುಕಟ್ಟೆಗೆ ಡ್ಯುಯಲ್ ಸಿಮ್ ಆಯ್ಕೆಯನ್ನೇ ಆ್ಯಪಲ್ ಒದಗಿಸಿದ್ದರೆ, ಉಳಿದೆಡೆಗಳಲ್ಲಿ ಡ್ಯುಯಲ್ ಸಿಮ್ (ಒಂದು ಸ್ಟ್ಯಾಂಡರ್ಡ್ ಸಿಮ್ ಕಾರ್ಡ್ ಹಾಗೂ ಎರಡನೆಯದು ಇ-ಸಿಮ್) ಮಾಡೆಲ್‌ಗಳು ಬಿಡುಗಡೆಯಾಗುತ್ತಿವೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., 17 ಸೆಪ್ಟೆಂಬರ್ 2018 ಅಂಕಣ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s