ಫೇಸ್‌ಬುಕ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲಾವಣೆ: ಏನು, ಹೇಗೆ?

Facebook Privacyಇಂಟರ್ನೆಟ್ ಬಳಕೆಯು ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿದೆಯೋ ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿಯು ಜಾಣ್ನುಡಿಯಾಗಿ ಇಲ್ಲಿಗೂ ಅನ್ವಯವಾಗುತ್ತದೆ. ತಂತ್ರಜ್ಞಾನವು ನಮ್ಮ ಬದುಕನ್ನು ಸರಳಗೊಳಿಸಿದೆ ಎಂಬುದಂತೂ ನಿಜ, ಆದರೆ ನಮ್ಮ ಖಾಸಗಿ ಮಾಹಿತಿಯನ್ನು ನಾವು ಸ್ವಲ್ಪವೂ ಯೋಚಿಸದೆ ಎಲ್ಲರೊಂದಿಗೆ ಬೇಕಾಬಿಟ್ಟಿಯಾಗಿ ಹಂಚಿಕೊಂಡಿರುತ್ತೇವೆ. ನಮ್ಮದೇ ನಿರ್ಲಕ್ಷ್ಯದಿಂದ ನಾವು ಈ ಮಾಹಿತಿಯೆಲ್ಲವನ್ನೂ ಪರರಿಗೆ ಬಿಟ್ಟುಕೊಟ್ಟಿರುತ್ತೇವಾದರೂ ಕೊನೆಯಲ್ಲಿ ದೂರುವುದು ತಂತ್ರಜ್ಞಾನವನ್ನು.

ಕಳೆದ ವಾರವಿಡೀ ಚರ್ಚೆಯ ವಸ್ತುವಾಗಿದ್ದು, ಆತಂಕಕ್ಕೂ ಕಾರಣವಾಗಿದ್ದು ಈ ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವು ನಾವು ಅದಕ್ಕೆ ಉದಾರವಾಗಿ ಉಣಬಡಿಸಿರುವ ನಮ್ಮದೇ ಮಾಹಿತಿಯನ್ನು ಥರ್ಡ್ ಪಾರ್ಟಿಗಳಿಗೆ ಬಿಟ್ಟುಕೊಟ್ಟ ಸಂಗತಿ ಬಯಲಾಗಿರುವುದು ಮತ್ತು ಅದಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಯಾಚಿಸಿದ್ದು. ಇದು ಜಗತ್ತಿನಾದ್ಯಂತ ಪ್ರೈವೆಸಿಗೆ ಧಕ್ಕೆಯಾಯಿತು, ಉಲ್ಲಂಘನೆಯಾಯಿತು ಎಂಬ ಹಾಹಾಕಾರ ಎದ್ದಿತೇ ಹೊರತು, ನಮ್ಮ ಮಾಹಿತಿಯನ್ನು ನಾವು ಎಚ್ಚರಿಕೆಯಿಂದ ಬಳಸಬೇಕು ಎಂಬ ಬಗ್ಗೆ ಚರ್ಚೆಯಾಗಿದ್ದು ಕಡಿಮೆ.

ಜಾಗತಿಕವಾಗಿ ಈ ಗದ್ದಲ ಎದ್ದ ಬಳಿಕ ಫೇಸ್‌ಬುಕ್ ಕೂಡ ತನ್ನ ಖಾಸಗಿತನದ ಸೆಟ್ಟಿಂಗ್ಸ್‌ನಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ ಮತ್ತು ಅದನ್ನು ಕಳೆದ ಬುಧವಾರ ಮೊಬೈಲ್ ಫೋನ್‌ಗಳ ಆ್ಯಪ್‌ಗಳಿಗಾಗಿ ಬಿಡುಗಡೆಯನ್ನೂ ಮಾಡಿದೆ. ಆ ಸೆಟ್ಟಿಂಗ್ಸ್ ಕುರಿತು ತಿಳಿದುಕೊಳ್ಳುವುದರ ಮೊದಲು, ಇಲ್ಲಿಯೂ ನಾವು ಕಲಿಯಬೇಕಾದ ಒಂದು ಪಾಠವನ್ನು ಹೇಳಲೇಬೇಕಿದೆ. ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‌ನಲ್ಲಿ ಕಾರ್ಯಾಚರಣಾ ವ್ಯವಸ್ಥೆಯ ತಂತ್ರಾಂಶ ಹಾಗೂ ಆ್ಯಪ್‌ಗಳನ್ನು (ಕಿರುತಂತ್ರಾಂಶ) ಅದರ ತಯಾರಕರು ಆಗಾಗ್ಗೆ ಅಪ್‌ಡೇಟ್ ಮಾಡಿ, ಆ್ಯಪ್ ಸ್ಟೋರ್ ಮೂಲಕ ಕಳುಹಿಸುತ್ತಾರೆ. ಈ ಆ್ಯಪ್‌ಗಳು ಮತ್ತು ಮೊಬೈಲ್ ತಂತ್ರಾಂಶಗಳು ಸ್ವಯಂಚಾಲಿತವಾಗಿ ಪರಿಷ್ಕರಣೆಯಾಗುವಂತೆ ನಾವು ಸೆಟ್ಟಿಂಗ್ಸ್‌ನಲ್ಲಿ ಹೊಂದಿಸಿಟ್ಟುಕೊಂಡಿರಬೇಕು ಮತ್ತು ಹೊಸದಾಗಿ ಏನೇ ಅಪ್‌ಡೇಟ್ ಆಗಿದ್ದರೂ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದು ನಮ್ಮ ಮೊಬೈಲ್ ರಕ್ಷಣೆ ದೃಷ್ಟಿಯಿಂದಲೂ ಅತ್ಯಂತ ಅವಶ್ಯ ಹೆಜ್ಜೆ. ಮಾಡಿಕೊಂಡಿಲ್ಲವಾದರೆ, ಆಂಡ್ರಾಯ್ಡ್ ಫೋನ್‌ನಲ್ಲಿ ಈಗಲೇ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಅದರ ಸೆಟ್ಟಿಂಗ್ಸ್ ಮೆನು (ಎಡ ಮೇಲ್ಭಾಗದಲ್ಲಿರುವ ಮೂರು ಗೆರೆ) ಕ್ಲಿಕ್ ಮಾಡಿ, ‘ಮೈ ಆ್ಯಪ್ಸ್ ಆ್ಯಂಡ್ ಗೇಮ್ಸ್’ ಕ್ಲಿಕ್ ಮಾಡಿ. ಯಾವೆಲ್ಲ ಆ್ಯಪ್‌ಗಳಿಗೆ ಅಪ್‌ಡೇಟ್‌ಗಳು ಲಭ್ಯ ಇವೆ ಎಂಬ ಪಟ್ಟಿ ಕಾಣಿಸುತ್ತದೆ. ‘ಅಪ್‌ಡೇಟ್ ಆಲ್’ ಅಂತ ಒತ್ತಿಬಿಡಿ. ಸಾಕಷ್ಟು ಡೇಟಾ ಡೌನ್‌ಲೋಡ್ ಆಗುವುದರಿಂದ ಇಂಟರ್ನೆಟ್ ಪ್ಯಾಕೇಜ್ ನೋಡಿಕೊಂಡು ಮುಂದುವರಿಯಿರಿ.

ಫೇಸ್‌ಬುಕ್ ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ಏನೆಲ್ಲ ಹೊಸ ಬದಲಾವಣೆಗಳಾಗಿವೆ?: ಈ ಬದಲಾವಣೆಯನ್ನು ಫೇಸ್‌ಬುಕ್ ಜಾಗತಿಕವಾಗಿ ಕಳೆದ ಬುಧವಾರ ಬಿಡುಗಡೆ ಮಾಡಿದ್ದು, ಭಾರತೀಯ ಬಳಕೆದಾರರಿಗೂ ಶೀಘ್ರ ಲಭ್ಯವಾಗಲಿದೆ. ಫೇಸ್‌ಬುಕ್ ಆ್ಯಪ್ ಭಾರತದಲ್ಲಿ ತೀರಾ ಇತ್ತೀಚೆಗೆ ಅಪ್‌ಡೇಟ್ ಆಗಿದ್ದು ಕಳೆದ ಮಂಗಳವಾರ. ನಂತರದ ಅಪ್‌ಡೇಟ್ ಬರಬೇಕಷ್ಟೆ.

ಪ್ರೈವೇಟ್ ಅಥವಾ ಖಾಸಗಿ ವಿಚಾರಗಳನ್ನು ಯಾರೊಂದಿಗೆ ಹಂಚಿಕೊಳ್ಳಬಹುದು ಎಂಬುದನ್ನು ಸುಲಭವಾಗಿ ಸೆಟ್ ಮಾಡಿಕೊಳ್ಳುವ ಮತ್ತು ತಿದ್ದುಪಡಿ ಮಾಡುವ ವಿಧಾನವನ್ನು ಫೇಸ್‌ಬುಕ್ ಹೊಸ ಅಪ್‌ಡೇಟ್‌ನಲ್ಲಿ ಸರಳಗೊಳಿಸಿದೆ.

ಈಗ ಪ್ರೈವೆಸಿ ಸೆಟ್ಟಿಂಗ್ಸ್ ನ್ಯಾವಿಗೇಶನ್ ತೀರಾ ಸಂಕೀರ್ಣವಾಗಿದೆ. ಸುಮಾರು 20 ಸ್ಕ್ರೀನ್‌ಗಳಲ್ಲಿ ಈ ಸೆಟ್ಟಿಂಗ್ಸ್‌ಗಳು ವ್ಯಾಪಿಸಿಕೊಂಡಿವೆ. ಆದರೆ ಕೆಲವೇ ವಾರಗಳಲ್ಲಿ ಬಿಡುಗಡಯಾಗಲಿರುವ ಅಪ್‌ಡೇಟೆಡ್ ಆ್ಯಪ್‌ನಲ್ಲಿ, ಇದು ತೀರಾ ಸರಳವಾಗಿಬಿಟ್ಟಿದೆ. ಫೇಸ್‌ಬುಕ್ ಆ್ಯಪ್ ತೆರೆದು, ಬಲ ಮೇಲ್ಭಾಗದಲ್ಲಿರುವ ಮೂರು ಗೆರೆಗಳ ಮೆನು ಬಟನ್ ಒತ್ತಿದರೆ, ಬಳಿಕ ಕಾಣಿಸಿಕೊಳ್ಳುವ ಸ್ಕ್ರೀನ್‌ನಲ್ಲಿ ಕೆಳಕ್ಕೆ ಸ್ಕ್ರಾಲ್ ಮಾಡಿದಾಗ, ಅಕೌಂಟ್ ಸೆಟ್ಟಿಂಗ್ಸ್‌ನಲ್ಲಿ, ಹಿಂದೆ ಸಾಕಷ್ಟು ವಿಭಾಗಗಳಿದ್ದರೆ, ಈಗ ಪ್ರಮುಖವಾಗಿ ವೈಯಕ್ತಿಕ ಮಾಹಿತಿ, ಭಾಷೆ ಮತ್ತು ಪಾವತಿಗಳು ಎಂಬ ಮೂರು ವಿಭಾಗಗಳಿರುತ್ತವೆ. ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಹೋದರೆ, ನಿಮ್ಮ ಫೇಸ್‌ಬುಕ್ ಖಾತೆಯನ್ನು ಯಾವೆಲ್ಲಾ ಆ್ಯಪ್‌ಗಳಿಗೆ ಸಂಪರ್ಕಿಸಿದ್ದೀರಿ ಎಂಬುದನ್ನೂ ನೋಡಬಹುದು ಮತ್ತು ಆ್ಯಕ್ಸೆಸ್ ಹಿಂತೆಗೆದುಕೊಳ್ಳಬಹುದಾಗಿದೆ. ನಾವು ಕಣ್ಣು ಮುಚ್ಚಿ ಆ ಥರ್ಡ್ ಪಾರ್ಟಿ ಆ್ಯಪ್‌ಗಳು ಅಥವಾ ವೆಬ್‌ಸೈಟುಗಳ ನಿಯಮಗಳನ್ನು ಓದದೆ ಬಳಸಲೇಬಾರದು. ಇದು ನಮ್ಮ ಖಾಸಗಿ ಮಾಹಿತಿಯನ್ನು ಅಂತಹ ಸೈಟುಗಳಿಗೆ ಧಾರೆಯೆರೆದು ಕೊಟ್ಟಂತೆ.

ಫೇಸ್‌ಬುಕ್‌ನ ಹೊಸ ಪ್ರೈವೆಸಿ ಸೆಟ್ಟಿಂಗ್ಸ್ ಪ್ರಕಾರ, ಇನ್ನು ಮುಂದೆ ಟಾರ್ಗೆಟೆಡ್ ಜಾಹೀರಾತುಗಳ (ನಮ್ಮ ಇಷ್ಟವನ್ನರಿತು ಅದಕ್ಕೆ ಅನುಗುಣವಾದ ಜಾಹೀರಾತುಗಳನ್ನು ನಮ್ಮ ಟೈಮ್‌ಲೈನ್‌ನಲ್ಲಿ ತೋರಿಸುವುದು) ಮೇಲೂ ಕಡಿವಾಣ ಹಾಕುತ್ತಿದೆ ಎಂದು ಜುಕರ್‌ಬರ್ಗ್ ಘೋಷಿಸಿದ್ದಾರೆ. ಕೆಲವೊಂದು ಕ್ಲಿಕ್‌ಗಳ ಮೂಲಕ ಇದನ್ನು ನಾವೇ ನಿಯಂತ್ರಿಸಿಕೊಳ್ಳಬಹುದು. ಥರ್ಡ್ ಪಾರ್ಟಿ ಸೈಟುಗಳು ನಿಮ್ಮ ಖಾಸಗಿ ಮಾಹಿತಿಯನ್ನು ಆ್ಯಕ್ಸೆಸ್ ಮಾಡಬೇಕೇ ಬೇಡವೇ ಎಂದು ನಿರ್ದಿಷ್ಟವಾಗಿ ಆಯ್ಕೆ ಮಾಡಿ, ಹೊಂದಿಸಿಟ್ಟುಕೊಳ್ಳುವ ವ್ಯವಸ್ಥೆ ತೀರಾ ಸುಲಭವಾಗಲಿದೆ. ಇದಕ್ಕಾಗಿಯೇ ಪ್ರೈವೆಸಿಯ ಶಾರ್ಟ್‌ಕಟ್ಸ್ ಮೆನು ಇದೆ. ಇಲ್ಲಿ ನಮ್ಮ ಖಾತೆಗೆ ಸಂರಕ್ಷಣೆಯ ಹೆಚ್ಚುವರಿ ಪದರಗಳನ್ನು ಎನೇಬಲ್ ಮಾಡಿಕೊಳ್ಳುವ ಅವಕಾಶಗಳಿರುತ್ತವೆ. ಈಗಾಗಲೇ ಶೇರ್ ಮಾಡಿರುವ, ನೀವು ಪ್ರತಿಕ್ರಿಯಿಸಿರುವ, ನೀವು ಫ್ರೆಂಡ್ ರಿಕ್ವೆಸ್ಟ್ ಕಳಿಸಿರುವ, ನೀವು ಹುಡುಕಾಡಿರುವ ಮಾಹಿತಿಯನ್ನು ಪರಿಷ್ಕರಿಸುವ ಆಯ್ಕೆ ಒಂದೇ ಕಡೆ ಸಿಗುವಂತಾಗುತ್ತದೆ. ಈ ಶಾರ್ಟ್‌ಕಟ್ಸ್‌ನಿಂದಲೇ ಹಿಂದಿನ ಯಾವುದಾದರೂ ಮಾಹಿತಿಯನ್ನು ನೇರವಾಗಿ ಅಳಿಸಿಬಿಡಬಹುದು.

ಇವೆಲ್ಲದರ ಜತೆಗೆ, ಎರಡು-ಹಂತದ (2 ಫ್ಯಾಕ್ಟರ್) ದೃಢೀಕರಣ ವ್ಯವಸ್ಥೆಯಂತೂ ಈಗಾಗಲೇ ಜಾರಿಯಲ್ಲಿದೆ. ಇದು ನಮ್ಮ ಖಾತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಅನುಕೂಲ. ಅದನ್ನೂ ಬಳಸಿಕೊಳ್ಳಿ.

ಗಮನಿಸಲೇಬೇಕಾದ ವಿಷಯ: ಇದು ಎಲ್ಲರೂ ಅನುಸರಿಸಲೇಬೇಕಿರುವ ಒಂದು ಹೆಜ್ಜೆ, ಎಷ್ಟೋ ಮಂದಿ ಯಾವ್ಯಾವುದೋ ವೆಬ್‌ಸೈಟುಗಳಿಗೆ ಫೇಸ್‌ಬುಕ್ ಖಾತೆಯನ್ನು ಸಂಪರ್ಕಿಸಿ, ಅದರಲ್ಲಿ ಬಂದ ಫಲಿತಾಂಶವನ್ನು ಶೇರ್ ಮಾಡಿಕೊಂಡಿರುವುದನ್ನು ನಾನು ಕೂಡ ನೋಡಿದ್ದೇನೆ. ಉದಾಹರಣೆಗೆ, ಹಿಂದಿನ ಜನ್ಮದಲ್ಲಿ ನಿಮ್ಮನ್ನು ಕೊಂದವರು ಯಾರು, ಮುದುಕರಾದಾಗ ಹೇಗೆ ಕಾಣಿಸುತ್ತೀರಿ, ಹೆಣ್ಣಾಗಿದ್ದರೆ ಯಾವ ಸೆಲೆಬ್ರಿಟಿಯನ್ನು ಹೋಲುತ್ತೀರಿ ಅಂತೆಲ್ಲ ಕೇಳುವ ವೆಬ್ ಪೋಸ್ಟ್‌ಗಳು. ಇವೆಲ್ಲವುಗಳಿಗೆ ನೀವು ನಿಮ್ಮ ಫೇಸ್‌ಬುಕ್ ಖಾತೆಯಲ್ಲಿರುವ ನಿಮ್ಮದೇ ಖಾಸಗಿ ಮಾಹಿತಿಯನ್ನು ಅರಿವಿಲ್ಲದಂತೆಯೇ ಕೊಟ್ಟಿರುತ್ತೀರಿ. ಈ ರೀತಿಯಾಗಿ, ಡೇಟಾ ಸೋರಿಕೆಯಾಗುವುದರಲ್ಲಿ ಪ್ರಮುಖ ಪಾತ್ರ ನಮ್ಮದೇ ಆಗಿರುತ್ತದೆ ಎಂಬುದು ನೆನಪಿರಲಿ. ಮುಂದೆಂದೂ ಅನಗತ್ಯ ಮತ್ತು ವಿಶ್ವಾಸಾರ್ಹವಲ್ಲದ ವೆಬ್ ತಾಣಗಳಿಗೆ ಫೇಸ್‌ಬುಕ್ ಖಾತೆಯ ಮೂಲಕ ಲಾಗಿನ್ ಆಗುವುದನ್ನು ಈಗಿಂದಲೇ ನಿಲ್ಲಿಸಿ. ಫೇಸ್‌ಬುಕ್ ಅಪ್‌ಡೇಟ್ ನೋಟಿಫಿಕೇಶನ್ ಬಂದಾಕ್ಷಣ ಸ್ಮಾರ್ಟ್ ಫೋನ್‌ನಲ್ಲಿರುವ ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ.

ಮಾಹಿತಿ@ತಂತ್ರಜ್ಞಾನ ಅಂಕಣ for 02 ಏಪ್ರಿಲ್ 2018 by ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s