ಆಂಡ್ರಾಯ್ಡ್ ಸಾಧನಗಳಲ್ಲಿ ಸ್ವಯಂಚಾಲಿತ ಬ್ಯಾಕಪ್ ಎಂಬ ವರದಾನ

Android auto backupಆಂಡ್ರಾಯ್ಡ್ ಫೋನ್/ಟ್ಯಾಬ್ಲೆಟ್ ಕಾರ್ಯಾಚರಣಾ ವ್ಯವಸ್ಥೆ ಮತ್ತು ಗೂಗಲ್ ಕ್ರೋಮ್ ಬ್ರೌಸರ್ ವ್ಯವಸ್ಥೆಯ ಒಡೆತನವಿರುವುದು ತಂತ್ರಜ್ಞಾನ ದಿಗ್ಗಜ ಕಂಪನಿಯಾಗಿರುವ ಗೂಗಲ್‌ನ ಕೈಯಲ್ಲಿ. ಹೀಗಾಗಿ, ನಾವು ಎಲ್ಲಿಗೆ ಹೋಗುತ್ತೇವೆ, ಏನು ಮಾಡುತ್ತೇವೆ, ಯಾರಿಗೆ ಕರೆ ಮಾಡುತ್ತೇವೆ, ಯಾವ ಆ್ಯಪ್ ಬಳಸುತ್ತೇವೆ, ನಮ್ಮ ಫೋನ್ ಗ್ಯಾಲರಿಯಲ್ಲಿ ಯಾವ ಫೋಟೋ/ವೀಡಿಯೋಗಳಿವೆ, ಮೊಬೈಲ್‌ನಲ್ಲಿ ಯಾವೆಲ್ಲ ಜಾಲತಾಣಗಳಿಗೆ ಭೇಟಿ ಕೊಡುತ್ತೇವೆ ಎಂಬುದೆಲ್ಲ ಗೂಗಲ್‌ಗೆ ಗೊತ್ತಿರುತ್ತದೆ. ಹೌದು, ಗೂಗಲ್ ಒಡೆತನದಲ್ಲಿರುವ ಉಚಿತ ಇಮೇಲ್ ಸೇವೆಯಾಗಿರುವ ಜಿಮೇಲ್, ಆಂಡ್ರಾಯ್ಡ್ ಫೋನ್‌ಗಳ ಕಾರ್ಯಾಚರಣೆಗೆ ಅತ್ಯವಶ್ಯವಾಗಿರುವುದರಿಂದ ಇದು ಸಾಧ್ಯ.

ನಮ್ಮೆಲ್ಲ ಫೋನ್ ಚಟುವಟಿಕೆಗಳ ಮಾಹಿತಿಯು ಗೂಗಲ್ ಸರ್ವರ್‌ನಲ್ಲಿರುತ್ತದೆ, ಅವುಗಳನ್ನು ಹೇಗೆಲ್ಲ ನಿಭಾಯಿಸಬಹುದೆಂದು ಹಿಂದಿನ ಅಂಕಣಗಳಲ್ಲಿ ತಿಳಿಸುತ್ತಾ ಬಂದಿದ್ದೆ. ಆಂಡ್ರಾಯ್ಡ್ ಫೋನ್‌ನಲ್ಲಿ ಜಿಮೇಲ್ ಮಿಳಿತವಾಗಿರುವುದರಿಂದಾಗಿ (ಸಿಂಕ್ರನೈಸ್) ಸಾಕಷ್ಟು ಲಾಭವೂ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಆಂಡ್ರಾಯ್ಡ್ ಫೋನ್‌ನಲ್ಲಿ ನಮ್ಮ ಜಿಮೇಲ್ ಖಾತೆಯ ಮೂಲಕ ಲಾಗಿನ್ ಆಗುವಾಗ ಫೋನ್‌ನಲ್ಲಿನ ವಿಭಿನ್ನ ಆ್ಯಪ್‌ಗಳ ಹಲವಾರು ವಿಷಯಗಳು ಗೂಗಲ್ ಸರ್ವರ್‌ಗೆ ಬ್ಯಾಕಪ್ ಆಗಿರುತ್ತವೆ. ಬ್ಯಾಕಪ್ ಅಂದರೆ ಕೆಲವರಿಗೆ ಅರಿವಿರುತ್ತದೆ, ಆದರೆ ಹಲವರು, ‘ಹಾಗಂದ್ರೇನು’ ಅಂತ ನಾನು ಹೋದಲ್ಲೆಲ್ಲ ಪ್ರಶ್ನಿಸಿದ್ದಿದೆ. ಈ ಮಾಹಿತಿ ಎಲ್ಲರಿಗೂ ತಿಳಿಯಲಿ ಎಂಬ ಕಾರಣಕ್ಕೆ ಇಲ್ಲಿ ಹೇಳುತ್ತಿದ್ದೇನೆ. ಸುಲಭವಾಗಿ ಹೇಳುವುದಾದರೆ, ಬ್ಯಾಕಪ್ ಅಂದರೆ ನಕಲು ಪ್ರತಿ ಇದ್ದಂತೆ. ಉದಾಹರಣೆಗೆ, ನಮ್ಮ ಫೋನ್‌ನ ಫೋಟೋಗಳು ‘ಗೂಗಲ್ ಫೋಟೋಸ್’ ಎಂಬ ಆ್ಯಪ್‌ಗೆ ಸಿಂಕ್ರನೈಸ್ ಆಗುತ್ತದೆ. ಗ್ಯಾಲರಿಯಲ್ಲಿರುವ ಫೋಟೋ, ವೀಡಿಯೋಗಳು ಗೂಗಲ್ ಸರ್ವರ್‌ನ ‘ಗೂಗಲ್ ಫೋಟೋಸ್’ ತಾಣದಲ್ಲಿ (ಕ್ಲೌಡ್‌ನಲ್ಲಿ) ಸೇವ್ ಆಗುತ್ತವೆ. ನಿಮ್ಮ ಮೊಬೈಲ್ ಫೋನ್‌ನಿಂದ ಫೋಟೋಗಳನ್ನು ಅಳಿಸಿದರೂ, ಅವುಗಳ ನಕಲು ಪ್ರತಿಗಳು ‘ಗೂಗಲ್ ಫೋಟೋಸ್’ನಲ್ಲಿರುತ್ತವೆ. ಅನಿಯಮಿತ ಇಂಟರ್ನೆಟ್ ಸಂಪರ್ಕ ಹೊಂದಿರುವವರು ಇದನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ನಮ್ಮ ಮೊಬೈಲ್ ಸಾಧನದಲ್ಲಿ ಸ್ಪೇಸ್ (ಸ್ಥಳಾವಕಾಶ) ಉಳಿತಾಯ ಮಾಡಬಹುದು. ಗ್ಯಾಲರಿಯಲ್ಲಿ ಡಿಲೀಟ್ ಆದರೂ, ಅದರ ‘ಬ್ಯಾಕಪ್’ ಪ್ರತಿಗಳು ಗೂಗಲ್ ಫೋಟೋಸ್‌ನಲ್ಲಿ ಭದ್ರವಾಗಿರುತ್ತವೆ. ಇದುವೇ ಅತಿದೊಡ್ಡ ಅನುಕೂಲ.

ಇದೇ ರೀತಿ, ಮೊಬೈಲ್‌ನಲ್ಲಿರುವ ಫೋಟೋ ಮಾತ್ರವಲ್ಲದೆ, ವೀಡಿಯೋ, ಟೆಕ್ಸ್ಟ್, ಕಾಂಟ್ಯಾಕ್ಟ್ (ಸಂಪರ್ಕ) ಸಂಖ್ಯೆಗಳು ಮುಂತಾದವುಗಳನ್ನೆಲ್ಲ ಡೇಟಾ ಎಂದು ತಂತ್ರಜ್ಞಾನ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇಂಟರ್ನೆಟ್ ಸಂಪರ್ಕಕ್ಕೂ ‘ಡೇಟಾ’ ಕನೆಕ್ಷನ್ ಅಂತ ಕರೆಯಲಾಗುತ್ತಿರುವುದರಿಂದ ಗೊಂದಲಕ್ಕೊಳಗಾಗುವುದು ಬೇಡ. ಇಂಟರ್ನೆಟ್ ಸಂಪರ್ಕದ ಮೂಲಕ ಡೇಟಾ (ಅಥವಾ ದತ್ತಾಂಶ, ಮಾಹಿತಿ ವಿಷಯಗಳು) ಸಂಕೇತಾಕ್ಷರಗಳ ಮೂಲಕ ವಿನಿಮಯ ಆಗುವ ಕಾರಣಕ್ಕಾಗಿಯೇ ಅಲ್ಲೂ ‘ಡೇಟಾ’ ಕನೆಕ್ಷನ್ ಎಂಬ ಪದ ಬಳಕೆ ಚಾಲ್ತಿಯಲ್ಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಡೇಟಾ ಸ್ವಯಂಚಾಲಿತವಾಗಿ ಬ್ಯಾಕಪ್ ಆಗುತ್ತದೆ. ಕೆಲವನ್ನು ನಾವೇ ಮ್ಯಾನ್ಯುಯಲ್ ಆಗಿ ಬ್ಯಾಕಪ್ ಇರಿಸಿಕೊಳ್ಳುವ ಅಗತ್ಯವಿರುತ್ತದೆ. ಫೋನ್ ಏನಾದರೂ ಹ್ಯಾಂಗ್ ಆಗಿಯೋ, ಬೇರೇನಾದರೂ ತಾಂತ್ರಿಕ ದೋಷದಿಂದಾಗಿಯೋ ‘ಫ್ಯಾಕ್ಟರಿ ಡೇಟಾ ರೀಸೆಟ್’ ಮಾಡಬೇಕಾಗಿ ಬಂದಾಗ ಅಥವಾ ಫೈಲುಗಳು ಆಕಸ್ಮಿಕವಾಗಿ ಡಿಲೀಟ್ ಆದ ಸಂದರ್ಭದಲ್ಲಿ, ಈ ಬ್ಯಾಕಪ್ ಫೈಲ್‌ಗಳು ಉಪಯೋಗಕ್ಕೆ ಬರುತ್ತವೆ. ಯಾವಾಗ ಫೈಲುಗಳು ಕೈತಪ್ಪಿ ಡಿಲೀಟ್ ಆಗುತ್ತವೆ ಅಂತ ಹೇಳಲಿಕ್ಕೆ ಬರುವುದಿಲ್ಲವಾದ್ದರಿಂದ, ನಮಗೆ ಅಗತ್ಯವಿರುವ ವಿಷಯಗಳ ಬ್ಯಾಕಪ್ ಇರಿಸಿಕೊಳ್ಳುವುದು ನಮ್ಮ ಜವಾಬ್ದಾರಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ಗೆ ಸಂಪರ್ಕಗೊಂಡಿರುವ ಡೇಟಾದ ಬ್ಯಾಕಪ್ ಸೇವೆಯು ಅಂತರ್‌ನಿರ್ಮಿತವಾಗಿಯೇ ಇರುತ್ತದೆ. ಗೂಗಲ್ ಸರ್ವರ್ ಜತೆ ಯಾವೆಲ್ಲ ಡೇಟಾ ಸಿಂಕ್ರನೈಸ್ ಆಗಬೇಕು ಎಂಬುದನ್ನು ನಾವೇ ನಿಯಂತ್ರಿಸಬಹುದು. ಆಂಡ್ರಾಯ್ಡ್ ಫೋನ್ ಸ್ವಯಂಚಾಲಿತವಾಗಿ ಬ್ಯಾಕಪ್ ಇರಿಸಿಕೊಳ್ಳುವ ಅಂಶಗಳಲ್ಲಿ ಕ್ರೋಮ್ ಬ್ರೌಸರ್ ಡೇಟಾ, ಗೂಗಲ್ ಹ್ಯಾಂಗೌಟ್ಸ್ ಸಂಭಾಷಣೆಗಳು, ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡುವ ಆ್ಯಪ್‌ಗಳು, ಗೂಗಲ್ ಫೋಟೋಗಳು ಮತ್ತು ಜಿಮೇಲ್ ಮುಖ್ಯವಾದವು.

ಕ್ರೋಮ್ ಬ್ರೌಸರ್‌ನಲ್ಲಿ ನಾವು ಏನೆಲ್ಲ ಸರ್ಚ್ ಮಾಡುತ್ತೇವೆ, ಯಾವ ಅಂತರ್ಜಾಲ ತಾಣವನ್ನು ನೋಡುತ್ತೇವೆ… ಹೀಗೆ ನಮ್ಮ ಸರ್ಫಿಂಗ್ (ಜಾಲಾಡುವ) ಚರಿತ್ರೆಯ (ಹಿಸ್ಟರಿ) ಬ್ಯಾಕಪ್ ಸ್ವಯಂಚಾಲಿತವಾಗಿ ಸೇವ್ ಆಗುತ್ತದೆ. ನೀವು ನೋಡುವ/ಸೇವ್ ಮಾಡಿಕೊಳ್ಳುವ ಹಾಗೂ ಬುಕ್ ಮಾರ್ಕ್ ಮಾಡಿಕೊಳ್ಳುವ ಅಂತರ್ಜಾಲದ ಪುಟಗಳು ನಿಮ್ಮ ಜಿಮೇಲ್ ಖಾತೆಯೊಂದಿಗೆ ಮಿಳಿತವಾಗಿರುವುದರಿಂದ, ಅದೇ ಜಿಮೇಲ್ ಖಾತೆಗೆ ಲಾಗಿನ್ ಆಗಿ, ಕಂಪ್ಯೂಟರಿನಲ್ಲಿ ಕ್ರೋಮ್ ಬ್ರೌಸರ್ ಮೂಲಕ ಇಂಟರ್ನೆಟ್ ಜಾಲಾಡುವಾಗಲೂ ಅವುಗಳು ಲಭ್ಯ. ಅಂದರೆ, ಬ್ರೌಸರ್ ಹಿಸ್ಟರಿಯಲ್ಲಿ ಸೇವ್ ಆಗಿರುತ್ತವೆ. ಬ್ರೌಸರ್‌ನ ಮೆನುವಿನಲ್ಲಿ ಸೆಟ್ಟಿಂಗ್ಸ್ ಮೂಲಕ ‘ಬ್ರೌಸರ್ ಹಿಸ್ಟರಿ’ ಅಥವಾ ‘ಕಂಟ್ರೋಲ್ + ಹೆಚ್’ ಒತ್ತಿದಾಗ ತೆರೆದುಕೊಳ್ಳುವ ಪುಟದಲ್ಲಿ ಎಲ್ಲವನ್ನೂ ಅಳಿಸಬಹುದು.

ಜಿಮೇಲ್‌ನ ಚಾಟಿಂಗ್ (ಸಂದೇಶ ವಿನಿಮಯ) ಸೇವೆಯಾಗಿರುವ ‘ಹ್ಯಾಂಗೌಟ್ಸ್’ನ ಡೇಟಾ ಕೂಡ ಜಿಮೇಲ್‌ಗೆ ಲಿಂಕ್ ಆಗಿರುವುದರಿಂದ, ಅದೇ ಖಾತೆಯಲ್ಲಿ ಸೇವ್ ಆಗಿರುತ್ತದೆ. ಇದು ಬೇಡವೆಂದಾದರೆ, ಜಿಮೇಲ್‌ನ ಸೆಟ್ಟಿಂಗ್‌ನಲ್ಲಿ ‘ಚಾಟ್ ಲಾಗಿಂಗ್’ ಎಂಬುದನ್ನು ಡಿಸೇಬಲ್ ಮಾಡಬೇಕಾಗುತ್ತದೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳುವ ಆ್ಯಪ್‌ಗಳ ಚರಿತ್ರೆಯೂ ನಿಮ್ಮ ಜಿಮೇಲ್ ಖಾತೆಯ ಮೂಲಕ ಬ್ಯಾಕಪ್ ಆಗಿರುತ್ತದೆ. ಹೊಸ ಆಂಡ್ರಾಯ್ಡ್ ಫೋನ್ ಖರೀದಿಸಿ, ಅದಕ್ಕೆ ಅದೇ ಜಿಮೇಲ್ ಖಾತೆಯಿಂದ ಲಾಗಿನ್ ಆಗುವಾಗ ಈ ಬ್ಯಾಕಪ್ ಕಾರಣದಿಂದಾಗಿಯೇ, ಹಿಂದಿನ ಫೋನ್‌ನಲ್ಲಿ ಅಳವಡಿಸಿಕೊಂಡ ಆ್ಯಪ್‌ಗಳ ಬಗ್ಗೆ ಗೂಗಲ್ ನಿಮಗೆ ತಿಳಿಸುತ್ತದೆ. ಪುನಃ ಪುನಃ ಹುಡುಕಾಟ ನಡೆಸಿ ಇನ್‌ಸ್ಟಾಲ್ ಮಾಡಿಕೊಳ್ಳುವ ಪ್ರಮೇಯ ಬರುವುದಿಲ್ಲ. ಪ್ಲೇ ಸ್ಟೋರ್‌ನಲ್ಲಿ ದುಡ್ಡು ಪಾವತಿಸಿ ಖರೀದಿಸಿದ ಆ್ಯಪ್‌ಗಳು ಕೂಡ ಹೊಸ ಫೋನ್‌ಗೆ ಸುಲಭವಾಗಿ (ಪುನಃ ಪಾವತಿ ಮಾಡದೆಯೇ) ವರ್ಗವಾಗುತ್ತವೆ. ಆ್ಯಪ್ ಡೇಟಾ (ಉದಾಹರಣೆಗೆ, ಫೇಸ್‌ಬುಕ್‌ಗೆ ಅಥವಾ ಟ್ವಿಟರ್‌ಗೆ ನೀವು ಲಾಗಿನ್ ಆಗಿ ಮಾಡಿಕೊಂಡ ಸೆಟ್ಟಿಂಗ್‌ಗಳು) ಕೂಡ ಹಾಗೆಯೇ ಇರುತ್ತವೆ.

ಗೂಗಲ್ ಫೋಟೋಸ್‌ನಲ್ಲಿ ನಿಮ್ಮ ಮೊಬೈಲ್ ಸಾಧನದಲ್ಲಿರುವ ಫೋಟೋಗಳು ಸ್ವಯಂಚಾಲಿತವಾಗಿ ಸೇವ್ ಆಗಬೇಕಿದ್ದರೆ ಬ್ಯಾಕಪ್ ಆಯ್ಕೆಯನ್ನು ಎನೇಬಲ್ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ, ನೀವು ಮೊಬೈಲ್ ಮೂಲಕ ತೆಗೆದ ಫೋಟೋ ಅಥವಾ ವೀಡಿಯೋಗಳೆಲ್ಲವೂ, ಇಂಟರ್ನೆಟ್ ಸಂಪರ್ಕ ಲಭ್ಯವಾದಾಗ, ಗೂಗಲ್ ಸರ್ವರ್‌ನಲ್ಲಿ ಸೇವ್ ಆಗುತ್ತಿರುತ್ತದೆ. ಆಫ್‌ಲೈನ್‌ನಲ್ಲಿ ನೋಡಬೇಕೆಂದರೆ, ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲೂಬಹುದು.

ಉಳಿದಂತೆ, ಇವೆಲ್ಲವುಗಳ ಸಿಂಕ್ರನೈಸೇಶನ್ ತಾಣ ಜಿಮೇಲ್. ಅದರ ಸೆಟ್ಟಿಂಗ್ಸ್‌ನಲ್ಲಿ ‘ಸಿಂಕ್ ಸೆಟ್ಟಿಂಗ್ಸ್’ ಎಂಬಲ್ಲಿಗೆ ಹೋದರೆ, ಆ್ಯಪ್ ಡೇಟಾ, ಕ್ಯಾಲೆಂಡರ್, ಕಾಂಟ್ಯಾಕ್ಟ್ಸ್, ಡ್ರೈವ್, ಜಿಮೇಲ್, ಗೂಗಲ್ ಫಿಟ್ ಡೇಟಾ ಮುಂತಾದವನ್ನು ಜಿಮೇಲ್ ಜತೆ ಸಮ್ಮಿಳಿತಗೊಳಿಸಬೇಕೇ ಎಂದು ಹೊಂದಿಸಿಕೊಳ್ಳುವ ಆಯ್ಕೆ ಲಭ್ಯ. ಇದರಲ್ಲಿ ಕಾಂಟ್ಯಾಕ್ಟ್ಸ್ ಎನೇಬಲ್ ಮಾಡಿಕೊಂಡರೆ, ಹೊಸ ಫೋನ್‌ಗೆ ಅಥವಾ ಫೋನ್ ಬದಲಾಯಿಸಿದಾಗ ಸಂಪರ್ಕ ಸಂಖ್ಯೆಗಳು ಸುಲಭವಾಗಿ, ಸ್ವಯಂ ಆಗಿ ಲೋಡ್ ಆಗುತ್ತವೆ. ಅಂದರೆ ಹೊಸದಾಗಿ ಪ್ರತಿಯೊಂದು ಸಂಪರ್ಕ ಸಂಖ್ಯೆಯನ್ನೂ ಫೋನ್‌ಗೆ ಒಂದೊಂದಾಗಿ ಊಡಿಸಲು ಶ್ರಮ ಪಡಬೇಕಾಗಿಲ್ಲ.

ಮಾಹಿತಿ@ತಂತ್ರಜ್ಞಾನ ಅಂಕಣ for 12 ಫೆಬ್ರವರಿ 2018 by ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s