ಕಿರಿಕಿರಿ ಇಲ್ಲದ ಸೆಕೆಂಡರಿ ಫೋನ್: ಪರ್ಸ್‌ನಲ್ಲಿಟ್ಟುಕೊಳ್ಳಬಹುದಾದ ಫಾಕ್ಸ್ ಮಿನಿ 1

 

Fox Mobile1

ಅತ್ಯಂತ ತೆಳುವಾದ, ಕ್ರೆಡಿಟ್ ಕಾರ್ಡ್‌ನಂತೆ ಕಾಣಿಸಬಹುದಾದ ಮೊಬೈಲ್ ಫೋನ್ ಒಂದು ಇತ್ತೀಚೆಗೆ ಭಾರತದಲ್ಲಿಯೂ ಬಿಡುಗಡೆಯಾಗಿದೆ. ಫಾಕ್ಸ್ ಮೊಬೈಲ್ಸ್ ಹೊಸತಂದಿರುವ ಈ ಪುಟ್ಟ ಬೇಸಿಕ್ ಫೀಚರ್ ಹೆಸರು ಮಿನಿ 1. ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ, ಬೇಡಪ್ಪಾ ಈ ಇಂಟರ್ನೆಟ್, ವಾಟ್ಸಾಪ್, ಮೆಸೆಂಜರ್ ಕಿರಿಕಿರಿ, ಬರೇ ಫೋನ್ ಮಾಡಿಕೊಂಡು, ಎಸ್ಸೆಮ್ಮೆಸ್ ಸ್ವೀಕರಿಸಿಕೊಂಡು ಸುಮ್ಮನಿರೋಣ ಅಂತಂದುಕೊಳ್ಳುವವರಿಗೆ ಈ ಮೊಬೈಲ್ ಇಷ್ಟವಾಗಬಹುದು.

ಇದರ ವಿಶೇಷತೆಯೆಂದರೆ, ನಿಮ್ಮಲ್ಲಿ ಎರಡು ಸರ್ವಿಸ್ ಪ್ರೊವೈಡರ್‌ಗಳ ಎರಡು ಸಿಮ್ ಕಾರ್ಡ್‌ಗಳು ಇದ್ದರೆ, ಒಂದನ್ನು ಇದಕ್ಕೆ ಅಳವಡಿಸಿಕೊಳ್ಳಬಹುದು. ಇದರ ಪ್ರಮುಖ ಉಪಯೋಗವೆಂದರೆ, ಪ್ರಧಾನ ಸಿಮ್ ಕಾರ್ಡ್‌ನ ನೆಟ್ವರ್ಕ್ ಕವರೇಜ್ ಸರಿ ಇಲ್ಲವೆಂದಾದರೆ, ಇದರಲ್ಲಿ ಅಳವಡಿಸಿರುವ ಸಿಮ್ ಕಾರ್ಡ್‌ಗೆ ಕಂಡೀಶನಲ್ ಕಾಲ್ ಫಾರ್ವರ್ಡಿಂಗ್ ಆಯ್ಕೆಯ ಮೂಲಕ, ಕರೆ ಸ್ವೀಕರಿಸಬಹುದು. ಉದಾಹರಣೆಗೆ, ನೀವು ಜಿಮ್‌ಗೋ ಅಥವಾ ಬೇರೆಲ್ಲೋ ಹೋಗುತ್ತೀರಿ, ಅಲ್ಲಿಗೆ ಸ್ಮಾರ್ಟ್ ಫೋನ್ ಒಯ್ಯಲು ನಿಮಗಿಷ್ಟವಿಲ್ಲ, ಕರೆ ಬಂದರಷ್ಟೇ ಸ್ವೀಕರಿಸಬೇಕು ಅಂತಿಟ್ಟುಕೊಳ್ಳಿ. ಆ ಫೋನನ್ನು ಆಫ್ ಮಾಡಿ, ಈ ಫೋನನ್ನು ಪರ್ಸಲ್ಲಿ ಇಟ್ಟುಕೊಂಡು ಹೋದರಾಯಿತು. ಇದರಲ್ಲಿರುವ ನಂಬರಿಗೆ ಕರೆ ಫಾರ್ವರ್ಡ್ ಆಗುತ್ತದೆ. ಬ್ಯಾಟರಿ ಚಾರ್ಜ್ ಇಲ್ಲದೆ ಆಫ್ ಇದ್ದರೂ ಇದನ್ನು ಬಳಸಬಹುದು.

ಅದೇ ರೀತಿ, ನಿಮ್ಮ ಪ್ರಧಾನ ಫೋನ್ ಜತೆಗೆ ಇದನ್ನು ಬ್ಲೂಟೂತ್ ಮೂಲಕ ಬೆಸೆದುಕೊಂಡುಬಿಟ್ಟರೆ, ಈ ಪುಟ್ಟ ಫೋನನ್ನೇ ಕರೆ ಸ್ವೀಕರಿಸಲು, ಎಸ್ಸೆಮ್ಮೆಸ್ ಓದಲು ಬಳಸಬಹುದು. ಇಷ್ಟಲ್ಲದೆ, ನಿಮ್ಮ ಬೇರೆ ಸ್ಮಾರ್ಟ್‌ಫೋನ್‌ನಲ್ಲಿ ಹಾಡು ಪ್ಲೇ ಮಾಡಿದರೆ, ಇದನ್ನು ಕಿವಿಗಾನಿಸಿಕೊಂಡು ಕೇಳಬಹುದು. ಅದೇ ರೀತಿಯಾಗಿ, ನಿಮ್ಮ ಪ್ರಧಾನ ಫೋನ್‌ನ ಸಂಪರ್ಕ ಸಂಖ್ಯೆಗಳು, ಕರೆ ಲಾಗ್‌ಗಳು, ಎಲ್ಲವೂ ಸಿಂಕ್ರನೈಜ್ ಆಗುತ್ತವೆ. ಅಂದರೆ ನಿಮ್ಮ ಪ್ರಧಾನ ಫೋನ್ ಚಾರ್ಜಿಂಗ್ ಆಗುತ್ತಿರುವಾಗ ಅಥವಾ ಬ್ಲೂಟೂತ್ ಸಂಪರ್ಕದ 10 ಮೀಟರ್ ದೂರದಲ್ಲೆಲ್ಲೋ ಇಟ್ಟಿದ್ದರೆ, ಪರ್ಸ್‌ನಲ್ಲಿರುವ ಈ ಫೋನ್‌ನಲ್ಲೇ ಕರೆ ಸ್ವೀಕರಿಸಬಹುದು.

ಕ್ರೆಡಿಟ್ ಕಾರ್ಡ್ ಗಾತ್ರದ್ದೆಂದು ಹೇಳಲಾಗುತ್ತಿದ್ದರೂ, ಇದು ಕನಿಷ್ಠ ಎರಡು ಕ್ರೆಡಿಟ್/ಎಟಿಎಂ ಕಾರ್ಡ್‌ಗಳನ್ನು ಜೋಡಿಸಿದಷ್ಟು ದಪ್ಪವಿದೆ. ಅಂದರೆ ಸುಮಾರು ಐದೂವರೆ ಮಿಮೀ ದಪ್ಪ. ಕೈಯಲ್ಲಿ ಹಿಡಿದುಕೊಳ್ಳಲು ಸ್ವಲ್ಪ ಕಷ್ಟವಾದರೂ, ಜಾರಿ ಬೀಳದಂತೆ ಹಿಂಭಾಗದಲ್ಲಿ ಪ್ಲಾಸ್ಟಿಕ್ ಕವಚವಿದ್ದು, ಚರ್ಮದಿಂದ ತಯಾರಿಸಿದ ಮಾದರಿಯಂತೆ ಪ್ರೀಮಿಯಂ ಫಿನಿಶಿಂಗ್ ಇದೆ.

ಬ್ಯಾಟರಿ: 320 mAh ಬ್ಯಾಟರಿ ಇದರಲ್ಲಿದೆ. ಸಾಮಾನ್ಯವಾಗಿ ಬಳಸಿದರೆ ಇದು ಮೂರು ದಿನ ಬರುತ್ತದೆ ಎಂಬುದು ವಿಶೇಷ. ಬ್ಯಾಟರಿ ಹೆಚ್ಚು ಬೇಗನೇ ಖಾಲಿಯಾಗದಂತಿರಲು ಈ ಫೋನ್ ವಿನ್ಯಾಸಗೊಂಡಿದೆ. ಹೆಚ್ಚು ಬ್ಯಾಟರಿ ಬಳಸಿದರೆ, ಗಾತ್ರ ದೊಡ್ಡದಿರಬೇಕಾಗುತ್ತದೆ. ಅದೇ ರೀತಿ, ಇರುವ ಬ್ಯಾಟರಿ ಜಾಸ್ತಿ ಬಾಳಿಕೆ ಬರುವಂತಾಗಲು, ಕಪ್ಪು-ಬಿಳುಪಿನ ಪುಟ್ಟ ಸ್ಕ್ರೀನ್ ಇದೆ. ಬಣ್ಣದ ಸ್ಕ್ರೀನ್‌ಗೆ ಅಥವಾ ಸ್ಕ್ರೀನ್ ರೆಸೊಲ್ಯುಶನ್ ಹೆಚ್ಚು ಮಾಡಿದರೆ, ಹೆಚ್ಚು ಸಾಮರ್ಥ್ಯದ ಬ್ಯಾಟರಿ ಬೇಕಾಗುತ್ತದೆ ಮತ್ತು ಅದು ಗಾತ್ರ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಫಿಸಿಕಲ್ ಕೀಗಳು ಇರುವುದರಿಂದ, ಟಚ್ ಸ್ಕ್ರೀನ್ ಒತ್ತಿದವರಿಗೆ ಇದು ಸ್ವಲ್ಪ ಗಟ್ಟಿ ಎನಿಸಬಹುದು.

ಇಯರ್ ಫೋನ್, ಎಫ್ಎಂ ರೇಡಿಯೋ ಮುಂತಾಗಿ ಏನೂ ಇಲ್ಲ ಇದರಲ್ಲಿ. ಇಯರ್ ಫೋನ್ ಬೇಕಿದ್ದರೆ 3.5 ಎಂಎಂ ಜ್ಯಾಕ್ ಬೇಕು. ಆಗ ಗಾತ್ರ ದೊಡ್ಡದಾಗಿರಬೇಕಾಗುತ್ತದೆ. ಪರ್ಸ್ ಒಳಗೂ ಇಟ್ಟುಕೊಳ್ಳಬಹುದಾದ ಫೋನ್ ಇದು.

ಬ್ಲೂಟೂತ್ ಬೆಂಬಲಿಸುವ ಯಾವುದೇ ಫೋನ್ ಕೂಡ ಇದಕ್ಕೆ ಪೇರ್ ಮಾಡಬಹುದು. ಈ ಫೋನನ್ನು ಪ್ರಧಾನ ಫೋನ್‌ಗೆ ಪೇರಿಂಗ್ ಮಾಡುವುದಷ್ಟೇ ಅಲ್ಲದೆ, ಇದನ್ನೇ ಸ್ವತಂತ್ರ ಫೋನ್ ಆಗಿ ಬಳಸಬಹುದು. ಕರೆ ಮತ್ತು ಎಸ್ಸೆಮ್ಮೆಸ್ ಮಾತ್ರ. ಸಂಪರ್ಕ ಸಂಖ್ಯೆಗಳ ಸ್ಟೋರೇಜ್ ಅವಕಾಶವಿದೆ. ಬ್ಯಾಟರಿ ಸ್ವಿಚ್ ಆನ್ ಮಾಡುವ ಬಟನ್, ಸಿಮ್ ಸ್ಲಾಟ್, ಸ್ಪೀಕರ್, ಚಾರ್ಜಿಂಗ್ ಸ್ಲಾಟ್ ಇದೆ.

ಬಳಸಿ ನೋಡಿದಾಗ, ನನ್ನ ಬಳಕೆಯಲ್ಲಿ ಇದು ಎರಡೂವರೆ ದಿನ ಬ್ಯಾಟರಿ ಬಾಳಿಕೆ ಸಿಕ್ಕಿದೆ. ಕೀಪ್ಯಾಡ್‌ನಲ್ಲಿ ನಂಬರ್ ಒತ್ತಲು ಸ್ವಲ್ಪ ತ್ರಾಸದ ಅನುಭವ. ಕನಿಷ್ಠ ವ್ಯವಸ್ಥೆಯುಳ್ಳ ಈ ಪುಟ್ಟ ಮೊಬೈಲನ್ನು ಸಮರ್ಪಕವಾಗಿ ಬಳಸಿದರೆ ಒಳ್ಳೆಯ ಸೆಕೆಂಡರಿ ಫೋನ್ ಆಗಿ ಕೆಲಸ ಮಾಡಬಲ್ಲುದು. ನಿಮ್ಮ ಮೊಬೈಲ್‌ನ ಬ್ಯಾಟರಿ ಖಾಲಿಯಾದರೂ, ಈ ಸಾಧನ ಕೆಲಸ ಮಾಡಬಲ್ಲುದು ಎಂದು ಕಂಪನಿ ಹೆಗ್ಗಳಿಕೆಯಿಂದಲೇ ಹೇಳಿಕೊಳ್ಳುತ್ತಿದೆ.

ನೀಲಿ, ಹಸಿರು, ಕಪ್ಪು – ಮೂರು ಬಣ್ಣಗಳಲ್ಲಿ ಲಭ್ಯವಿದೆ.

ತೂಕ: 86 ಗ್ರಾಂ
ಸುತ್ತಳತೆ: 5.4×0.5×8.6 cm
ಬ್ಯಾಟರಿ: 320 ಎಂಎಎಚ್
ಬಾಕ್ಸಲ್ಲಿ ಏನಿದೆ: ಹ್ಯಾಂಡ್‌ಸೆಟ್, ಚಾರ್ಜಿಂಗ್ USB ಕೇಬಲ್, ಪುಟ್ಟ ಕೈಪಿಡಿ, ವಾರಂಟಿ ಕಾರ್ಡ್
ವಾರಂಟಿ: 1 ವರ್ಷ
ಬೆಲೆ: 1799 ರೂ.

ವಿಜಯ ಕರ್ನಾಟಕದಲ್ಲಿ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s