ಜಿಯೋನಿ ಎ1 ಪ್ಲಸ್: ಭರ್ಜರಿ RAM, ಮೆಮೊರಿ, ಬ್ಯಾಟರಿ

ಚೀನಾದಲ್ಲಿ ಸಾಕಷ್ಟು ಸದ್ದು ಮಾಡಿದ ಸ್ಮಾರ್ಟ್ ಫೋನ್‌ಗಳು ಭಾರತಕ್ಕೂ ಲಗ್ಗೆ ಇಡುವ ಮೂಲಕ ‘ಚೀನಾ ಸೆಟ್’ ಎಂಬ ತಾತ್ಸಾರ ಭಾವವನ್ನು ತೊಡೆದು ಹಾಕುವಂತೆ ಮಾಡಿವೆ. ಸ್ಮಾರ್ಟ್ ಫೋನ್‌ಗಳು ಹಾಗೂ ಕೆಲವೊಂದು ಎಲೆಕ್ಟ್ರಾನಿಕ್ ಸಾಧನಗಳ ವಿಚಾರದಲ್ಲಿ ಇದು ಸತ್ಯ. ಅಂಥವುಗಳ ಸಾಲಿನಲ್ಲಿರುವುದು ಜಿಯೋನಿ.

ಈಗ ಸ್ಮಾರ್ಟ್ ಫೋನ್‌ಗಳಲ್ಲಿ ಪರ್ಫೆಕ್ಷನ್ ಹುಡುಕುವ ಕಾಲ. ಮುಖ್ಯವಾಗಿ ಒಳ್ಳೆಯ ಬ್ಯಾಟರಿ, ಒಳ್ಳೆಯ ಕ್ಯಾಮೆರಾ, 4ಜಿ VoLTE ಸೌಕರ್ಯ, ಉತ್ತಮ ಇನ್-ಬಿಲ್ಟ್ ಮೆಮೊರಿ, ಹೆಚ್ಚು RAM…. ಹೀಗೆ ಮೂಲಭೂತ ಅಗತ್ಯಗಳನ್ನು ಪೂರೈಸುವುದರಲ್ಲಿ ಸ್ಮಾರ್ಟ್ ಫೋನ್‌ಗಳು ಪೈಪೋಟಿಗಿಳಿದಿದ್ದರೆ, ಬೆಲೆಯಲ್ಲೂ ಸ್ಫರ್ಧೆಯಿಂದಾಗಿ ಅಗ್ಗದ ದರದಲ್ಲಿ ಭಾರತೀಯ ಗ್ರಾಹಕರು ಉತ್ತಮ ಫೋನ್‌ಗಳನ್ನು ಪಡೆಯುವಂತಾಗಿದೆ.

ಮೇಲಿನ ಅಗತ್ಯಗಳನ್ನು ಪೂರೈಸುವ, ಮಧ್ಯಮ ಬೆಲೆಯ ಅಥವಾ ಐಷಾರಾಮಿ ವಲಯದ ಸ್ಮಾರ್ಟ್ ಫೋನ್ ಜಿಯೋನಿ ಎ1 ಪ್ಲಸ್. ಬಾರ್ಸಿಲೋನದಲ್ಲಿ ಮಾರ್ಚ್‌ನಲ್ಲಿ ನಡೆದ 2017ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2017) ಜಿಯೋನಿ ಎ1 ಹಾಗೂ ಜಿಯೋನಿ ಎ1 ಪ್ಲಸ್ ಸಾಧನಗಳನ್ನು ಲಾಂಚ್ ಮಾಡಿತ್ತು.

ಇದನ್ನು ಒಂದು ವಾರ ಬಳಸಿ ನೋಡಿದಾಗ ನನಗೆ ಅನ್ನಿಸಿದ ಅಂಶಗಳಿಲ್ಲಿವೆ.

ಜನರಿಗೀಗ ಸದಾ ಕಾಲ ನೆಟ್ ಸಂಪರ್ಕ ಬೇಕಾಗಿರುವುದರಿಂದ ಬ್ಯಾಟರಿಯೇ ಪ್ರಧಾನ. ಜತೆಗೆ ಒಂದಿಷ್ಟು ದೊಡ್ಡ ಸ್ಕ್ರೀನ್. ಫ್ಯಾಬ್ಲೆಟ್ ವ್ಯಾಪ್ತಿಯಲ್ಲಿರುವ, 6 ಇಂಚು ಸ್ಕ್ರೀನ್‌ನ 4550 mAh ಬ್ಯಾಟರಿ ಸಾಮರ್ಥ್ಯವಿರುವ ಮತ್ತು ಹಿಂಭಾಗದಲ್ಲಿ ಅವಳಿ ಕ್ಯಾಮೆರಾ (13 ಹಾಗೂ 5 ಮೆಗಾಪಿಕ್ಸೆಲ್) ಹಾಗೂ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಇದೆ. ಇದರಲ್ಲಿ 2 ಗಂಟೆ ಫೇಸ್‌ಬುಕ್ ಲೈವ್ ಮಾಡಿದ ಬಳಿಕವೂ, ಸದಾ ಕಾಲ ಇಂಟರ್ನೆಟ್ ಆನ್ ಇಟ್ಟಿದ್ದರೂ ಎರಡು ದಿನ ಭರ್ಜರಿಯಾಗಿ ಇದರ ಬ್ಯಾಟರಿ ತಾಳಿಕೊಂಡಿತು. 5000 mAh ಬ್ಯಾಟರಿ ಇರುವ ಬೇರೆ ಹಲವಾರು ಫೋನ್‌ಗಳನ್ನು ಬಳಸಿ ನೋಡಿದಾಗ ನನಗೆ ಇಷ್ಟು ಒಳ್ಳೆಯ ಬ್ಯಾಟರಿ ಬಾಳಿಕೆ ಸಿಕ್ಕಿಲ್ಲ. ಅದು ಕೂಡ ಆರು ಇಂಚಿನ ದೊಡ್ಡ ಸ್ಕ್ರೀನ್‌ನಲ್ಲಿ.

ಕ್ಯಾಮೆರಾ: ಫೋಟೋಗ್ರಫಿ ಮತ್ತು ಸೆಲ್ಫೀ ಕ್ರೇಜ್ ಇರುವವರಿಗೆ ಅತ್ಯುತ್ತಮ ಈ ಫೋನ್ ಅಂತ ಕಂಪನಿ ಹೇಳಿಕೊಂಡಿದೆ. ಆದರೆ, ಫೋಟೋಗಳಲ್ಲಿ ಶಾರ್ಪ್‌ನೆಸ್ ಕಡಿಮೆ ಇರುವುದು ತೊಡಕಾಗಿ ಕಾಣಿಸಿತು. ಹಿಂಭಾಗದಲ್ಲಿ ಎರಡು ಕ್ಯಾಮೆರಾ ಇದ್ದರೂ, ಒಳಾಂಗಣದಲ್ಲಿ ಫೋಟೋಗಳು ಪಿಕ್ಸಲೇಟ್ ಆಗುತ್ತವೆ. ಹೊರಾಂಗಣದಲ್ಲಿ ಅತ್ಯುತ್ತಮವಾಗಿ ಚಿತ್ರ ತೆಗೆಯಬಹುದು. ಅದೇ ರೀತಿ ಮ್ಯಾಕ್ರೋ ಫೋಟೋಗ್ರಫಿಗೆ (ಹತ್ತಿರದ ವಸ್ತುಗಳ ಫೋಟೋ) ಇದು ಉತ್ತಮವಾಗಿದೆ. ಕ್ಯಾಮೆರಾ ಆನ್ ಮಾಡಿ ಸ್ಕ್ರೀನ್‌ನಲ್ಲಿ ಕೆಳಕ್ಕೆ ಸ್ವೈಪ್ ಮಾಡಿದರೆ ಪ್ರೊಫೆಶನಲ್, ಜಿಫ್, ಮುಂತಾದ ಹಲವಾರು ಇನ್-ಬಿಲ್ಟ್ ಮೋಡ್‌ಗಳು ಗೋಚರಿಸುತ್ತವೆ. ಬೊಕೇ ಸೆಲ್ಫೀ ಮೋಡ್‌ನಲ್ಲಿ (ಫೇಸ್ ಬ್ಯೂಟಿ ಮೋಡ್ ಆಯ್ಕೆ ಮಾಡಿ, ಡ್ರಾಪ್ ಐಕಾನ್ ಕ್ಲಿಕ್ ಮಾಡಬೇಕು) ಹಿನ್ನೆಲೆ ಬ್ಲರ್ ಆಗಿ, ನಮ್ಮ ಫೋಟೋ ಮಾತ್ರ ಫೋಕಸ್ ಆಗಿ ಕಾಣಿಸುತ್ತದೆ.

ಇನ್ನು, ನಿರಂತರ ವೀಡಿಯೋ ರೆಕಾರ್ಡಿಂಗ್‌ಗೆ ಇದರ ತೂಕ ಸ್ವಲ್ಪ ಹಿನ್ನಡೆ ಅನ್ನಿಸಿತು. ಇಷ್ಟು ಬ್ಯಾಟರಿ ಇರುವಾಗ ಅದು ಸಹಜವೇ. 229 ಗ್ರಾಂ ತೂಕವಿರುವುದರಿಂದ ಸತತವಾಗಿ ಹತ್ತು-ಹದಿನೈದು ನಿಮಿಷ ರೆಕಾರ್ಡ್ ಮಾಡುವುದು ಒಂದಿಷ್ಟು ತ್ರಾಸದಾಯಕ.

ಇದರ ಜತೆಗೆ ಬಂದಿರುವ ಎ1 ಮಾಡೆಲ್‌ಗಿಂತ, ಸ್ಕ್ರೀನ್ ಗಾತ್ರ, ಬ್ಯಾಟರಿ, ಕ್ಯಾಮೆರಾ ಪವರ್ ಉತ್ತಮವಾಗಿದೆ. ಎ1 ಬೆಲೆ 19999 ಇದ್ದರೆ ಇದರ ಬೆಲೆ 26999 ರೂ. ಫಿಂಗರ್ ಪ್ರಿಂಟ್ ಸೆಕ್ಯುರಿಟಿ, 4 ಜಿಬಿ RAM, 64 GB ಇಂಟರ್ನಲ್ ಮೆಮೊರಿ, 4550 mAH ಬ್ಯಾಟರಿ, ಡ್ಯುಯಲ್ ಕ್ಯಾಮೆರಾ, 4ಜಿ VoLTE ಅತ್ಯಾಧುನಿಕ ತಂತ್ರಜ್ಞಾನ ಇರುವುದರಿಂದ ಇದೇ ಲೆವೆಲ್‌ನ ಸ್ಮಾರ್ಟ್ ಫೋನ್‌ಗಳಲ್ಲಿ ಸಾಕಷ್ಟು ಪೈಪೋಟಿ ಇದೆ.

ಕೈಯಲ್ಲಿ ಚೆನ್ನಾಗಿ ಕೂರುವಂತೆ 9ಮಿಮೀ ದಪ್ಪ ಮತ್ತು ಮೆಟಾಲಿಕ್ ಬಾಡಿ ಇದೆ. ಹೋಮ್ ಬಟನ್ ಫಿಂಗರ್ ಪ್ರಿಂಟ್ ಅನ್‌ಲಾಕ್ ಕೆಲಸವನ್ನೂ ಮಾಡುತ್ತದೆ.

Gionee A1 Plus

ಜತೆಗೆ ಇದರಲ್ಲಿರುವ ಇಕೋ ಮೋಡ್ ವ್ಯವಸ್ಥೆಯು, ಬ್ಯಾಟರಿ ಉಳಿತಾಯಕ್ಕೆ ಸಹಕರಿಸುತ್ತದೆ. ವೈಟ್ ಲಿಸ್ಟ್‌ಗೆ ಸೇರಿಸಿದ (ಅಂದರೆ ನಿಮಗೆ ಹೆಚ್ಚಾಗಿ ಬೇಕಾಗುವ) ಆ್ಯಪ್‌ಗಳು ಮಾತ್ರ ಸದಾ ಇಂಟರ್ನೆಟ್ ಬಳಸುವಂತೆ, ಅಂದರೆ ಬ್ಯಾಕ್‌ಗ್ರೌಂಡ್‌ನಲ್ಲೂ ಕೆಲಸ ಮಾಡುವಂತೆ ಈ ಮೋಡ್ ಸಹಕರಿಸುತ್ತದೆ.

ಇದರಲ್ಲಿ Edge Bar ಎಂಬೊಂದು ಆಯ್ಕೆಯಿದೆ. ಅದನ್ನು ಎನೇಬಲ್ ಮಾಡಿದರೆ, ಸ್ಕ್ರೀನ್ ಅನ್‌ಲಾಕ್ ಆಗಿರುವಾಗ ಹೋಮ್ ಬಟನ್‌ನ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿದರೆ ನಮಗೆ ಪದೇ ಪದೇ ಬೇಕಾಗುವ ಆ್ಯಪ್‌ಗಳು ಕಾಣಿಸುವಂತೆ ಹೊಂದಿಸಿಕೊಳ್ಳಬಹುದು.

ಈ ಫೋನ್‌ನಲ್ಲಿ ನ್ಯಾವಿಗೇಶನ್ ಕೀಲಿಗಳಿಗೆ ಬೆಳಕಿಲ್ಲದಿರುವುದು (ಬ್ಯಾಕ್‌ಲಿಟ್ ವ್ಯವಸ್ಥೆ) ಹಿನ್ನಡೆ ಅನ್ನಿಸಿತು. ಕತ್ತಲಲ್ಲಿ ಹಿಂದೆ ಹೋಗಲು ವರ್ಚುವಲ್ ಕೀಯನ್ನು ಹುಡುಕಬೇಕಾಗುತ್ತದೆ.

ಹಾಡು ಕೇಳಲು ಒಳ್ಳೆಯ ಇಯರ್-ಫೋನ್ ಜತೆಗೆ ಬರುತ್ತದೆ. ಉಳಿದಂತೆ ಅತ್ಯಾಧುನಿಕ ಫೋನುಗಳಲ್ಲಿರುವ ಎಲ್ಲ ಸೌಕರ್ಯಗಳಿವೆ. ಅಂದರೆ, ಡ್ಯುಯಲ್ ಸಿಮ್, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಮೈಕ್ರೋ ಯುಎಸ್‌ಬಿ ಪೋರ್ಟ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, ವೈಫೈ, ಆಂಡ್ರಾಯ್ಡ್ ನೌಗಾಟ್ (7.0) ಆಧುನಿಕ ಕಾರ್ಯಾಚರಣಾ ವ್ಯವಸ್ಥೆಯಿದೆ. ಜತೆಗೆ18W ಅಲ್ಟ್ರಾಫಾಸ್ಟ್ ಚಾರ್ಜ್ ವ್ಯವಸ್ಥೆಯಿದೆ.

ಪ್ಲಸ್ ಪಾಯಿಂಟ್ ಎಂದರೆ, 2.6 ಗಿಗಾಹರ್ಟ್ಜ್ ಸಾಮರ್ಥ್ಯದ ಒಕ್ಟಾ ಕೋರ್ ಪ್ರೊಸೆಸರ್ ಜತೆಗೆ ದೊಡ್ಡ ಬ್ಯಾಟರಿ. ಮೀಡಿಯಾ ಟೆಕ್ ಹೀಲಿಯೋ ಪಿ25 ಪ್ರೊಸೆಸರ್‌ಗೆ ಮಾಲಿ-ಟಿ880 ಜಿಪಿಯು ಅಳವಡಿಕೆಯಾಗಿರುವುದು ಬ್ಯಾಟರಿ ಸಾಮರ್ಥ್ಯ ಮತ್ತು ಪರ್ಫಾರ್ಮೆನ್ಸ್‌ಗೆ ಉತ್ತೇಜನ ನೀಡಲು ಸಹಾಯವಾಗುತ್ತದೆ. ಜತೆಗೆ ಸ್ಪ್ಲಿಟ್-ಸ್ಕ್ರೀನ್ ವ್ಯವಸ್ಥೆಯೂ ಇದರಲ್ಲಿದೆ. ಅಂದರೆ ಏಕ ಕಾಲದಲ್ಲಿ ಒಂದೇ ಸ್ಕ್ರೀನ್‌ನಲ್ಲಿ ಎರಡು ಆ್ಯಪ್‌ಗಳನ್ನು (ಕಿರು ಪ್ರೋಗ್ರಾಂ) ಓಪನ್ ಮಾಡಿ ವೀಕ್ಷಿಸಬಹುದು.

ಇದರೊಂದಿಗೆ, ಸ್ಮಾರ್ಟ್ ಗೆಸ್ಚರ್ ಅನುಕೂಲವಿದೆ. ಅಂದರೆ ಕಿವಿಗೆ ಇಟ್ಟಾಕ್ಷಣ ಕರೆಗೆ ಸ್ವಯಂಚಾಲಿತವಾಗಿ ಉತ್ತರಿಸುವುದು (ಫೋನ್ ಬಟನ್ ಪ್ರೆಸ್ ಮಾಡಬೇಕಿಲ್ಲ), ಮಗುಚಿ ಇಟ್ಟರೆ ಕರೆ ಅಲರಾಂ Pause ಆಗುವುದು, ಡಬಲ್ ಕ್ಲಿಕ್ ಮಾಡಿದರೆ ಸ್ಕ್ರೀನ್ ಆನ್ ಆಗುವುದು… ಹೀಗೆ ಸ್ಮಾರ್ಟ್ ಕೆಲಸಗಳು ಆಗುತ್ತವೆ.

ವಿನ್ಯಾಸ – ಡಿಸೈನ್
2.5ಡಿ ಬಾಗಿದ ಗಾಜುಳ್ಳ ಮುಂಭಾಗ, 6 ಇಂಚು ಫುಲ್ ಹೆಚ್‌ಡಿ ಡಿಸ್‌ಪ್ಲೇ ನೋಡಲು ಆಕರ್ಷಕವಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್/ಹೋಮ್ ಬಟನ್ ಎರಡು ಸ್ಪರ್ಶ ಸಂವೇದಿ ನ್ಯಾವಿಗೇಶನ್ ಬಟನ್‌ಗಳ ಮಧ್ಯೆ ಇದೆ.

ಒಳಗೇನೇನಿದೆ
2.5 GHz ಸಾಮರ್ಥ್ಯದ MediaTek Helio P25 ಚಿಪ್‌ಸೆಟ್, 4GB RAM, 64GB ಆಂತರಿಕ ಮೆಮೊರಿಯಿದ್ದು 256GB ವರೆಗೂ MicroSD ಕಾರ್ಡ್ ಮೂಲಕ ವಿಸ್ತರಿಸಬಹುದು. ಆದರೆ ಇಲ್ಲಿರುವುದು ಹೈಬ್ರಿಡ್ ಸ್ಲಾಟ್ ಆಗಿರುವುದರಿಂದ 2ನೇ ಸಿಮ್ ಕಾರ್ಡ್ ಅಥವಾ ಹೆಚ್ಚುವರಿ ಮೆಮೊರಿ ಬಳಸಬೇಕಾಗುತ್ತದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ (13 ಮತ್ತು 8 ಮೆಗಾಪಿಕ್ಸೆಲ್) ಹಾಗೂ 20 ಮೆಗಾಪಿಕ್ಸೆಲ್ ಭರ್ಜರಿ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾ, ಸೆಲ್ಫೀ ಪ್ರಿಯರಿಗೆ ಹುಮ್ಮಸ್ಸು ಮೂಡಿಸಬಹುದು.
ಭರ್ಜರಿ 4,550 mAh ಸಾಮರ್ಥ್ಯದ ಬ್ಯಾಟರಿ, ಜತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಆದರೆ, ಫಾಸ್ಟ್ ಚಾರ್ಜಿಂಗ್ ವೇಳೆ ಸಾಧನ ಬಿಸಿಯಾಗುತ್ತಿತ್ತು. Android Nougat 7.0.1 ಆಧಾರದಲ್ಲಿ Amigo ಯೂಸರ್ ಇಂಟರ್ಫೇಸ್ ರೂಪುಗೊಂಡಿದ್ದು ಬಳಕೆಯೂ ಸರಳವಾಗಿದೆ. ಲಾಕ್ ಸ್ಕ್ರೀನ್‌ನಲ್ಲಿರುವ ಆನಿಮೇಶನ್‌ಗಳು ಆ್ಯಪಲ್ ಫೋನನ್ನು ಹೋಲುತ್ತದೆ.

ಕಾರ್ಯ ನಿರ್ವಹಣೆ
ಉತ್ತಮ ಸ್ಪೆಸಿಫಿಕೇಶನ್ ಇರುವುದರಿಂದ ಕಾರ್ಯಕ್ಷಮತೆ ಅದ್ಭುತವಾಗಿದೆ. ಬ್ಯಾಟರಿ ಸಾಮರ್ಥ್ಯವಂತೂ ಉಲ್ಲೇಖಾರ್ಹವೇ. ಎರಡು ಗಂಟೆ FB ಲೈವ್ ಮಾಡಿದ ಬಳಿಕವೂ ಸಾಧಾರಣ ಬಳಕೆಯೊಂದಿಗೆ ಎರಡು ದಿನ ಪೂರ್ತಿ ಬ್ಯಾಟರಿ ಬಾಳಿಕೆ ಬಂದಿದೆ. ಆದರೂ, ಟಚ್ ಸೆನ್ಸಿಟಿವಿಟಿ ಒಂದೊಂದು ಸಲ ಲ್ಯಾಗ್ ಆಗುವಂತಹಾ ಅನುಭವ ನೀಡುತ್ತದೆ. ಅಂದರೆ ಸಂವೇದನೆಯ ಕೊರತೆ. ಗೇಮ್ಸ್ ಆಡಲು, ವೀಡಿಯೋ ನೋಡಲು ಅತ್ಯುತ್ತಮವಾಗಿದೆ. ಜತೆಗೆ ಬಂದಿರುವ ಇಯರ್ ಫೋನ್ ಮೂಲಕ ಆಡಿಯೋ ಕೂಡ ಉತ್ತಮ ಅನುಭವ ಕೊಡುತ್ತದೆ. ಒಳಾಂಗಣದಲ್ಲಿ ಇದರ FM ರಿಸೀವರ್ ಪ್ರಬಲವಾಗಿರುವಂತಿದೆ. ಆಕ್ಟಾ ಕೋರ್ (8 ಕೋರ್) ಹಾಗೂ ಮೀಡಿಯಾ ಟೆಕ್ ಪ್ರೊಸೆಸರ್‌ಗಳು ಮಲ್ಟಿ ಟಾಸ್ಕಿಂಗ್‌ಗೆ, ಬ್ಯಾಟರಿ ಬಾಳಿಕೆಗೆ ಪೂರಕವಾಗಿರುವುದು ಬಳಸಿ ನೋಡಿದಾಗ ಎದ್ದು ಕಾಣುತ್ತದೆ.

ಇದರ ಬೆಲೆ 26,999 ರೂ.

ಸಾಧಕ-ಬಾಧಕ

ಉತ್ತಮ
ಬ್ಯಾಟರಿ
ಕಾರ್ಯನಿರ್ವಹಣೆ
ಆಂತರಿಕ ಮೆಮೊರಿ ಹಾಗೂ RAM

ಇಷ್ಟವಾಗದ್ದು
ಕ್ಯಾಮೆರಾ ನಿರೀಕ್ಷಿತ ಮಟ್ಟದಲ್ಲಿತ್ತ
ಜೇಬಲ್ಲಿರಿಸಿಕೊಳ್ಳಲು ಭಾರ

ಒಟ್ಟಾರೆಯಾಗಿ ಹೇಳುವುದಿದ್ದರೆ, ಉತ್ತಮ ಬ್ಯಾಟರಿ, ಬಿಲ್ಟ್-ಇನ್ ಮೆಮೊರಿ, ದೊಡ್ಡ ಸ್ಕ್ರೀನ್, ಸ್ಟೀರಿಯೋ ಸ್ಪೀಕರ್‌ಗಳು ಜಿಯೋನಿ ಎ1 ಪ್ಲಸ್‌ನ ಪ್ಲಸ್ ಪಾಯಿಂಟ್‌ಗಳಾದರೆ, ಸ್ವಲ್ಪ ತೂಕ, ದಪ್ಪ ಹಾಗೂ ಕ್ಯಾಮೆರಾಗಳು ಇದಕ್ಕೆ ಹಿನ್ನಡೆ ತಂದುಕೊಡುವವುಗಳು. 10ರಲ್ಲಿ 6.5 ಅಂಕ ಕೊಡಬಹುದು.

-ಅವಿನಾಶ್ ಬಿ. (ವಿಜಯಕರ್ನಾಟಕದಲ್ಲಿ)

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s