ಆಧಾರ್‌ಗೆ ಮೊಬೈಲ್, ಪ್ಯಾನ್ ಕಾರ್ಡ್ ಲಿಂಕ್: OTP ಕೊಟ್ಟು ಮೋಸ ಹೋಗದಿರಿ

ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ (ವಿಜಯ ಕರ್ನಾಟಕ ಅಂಕಣ): 06 ಜೂನ್ 2017
ಅವಿನಾಶ್ ಬಿ.
ಆಧಾರ್ ಕಾರ್ಡ್ ಎಂಬುದು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಇದು ಕೇವಲ ನಮ್ಮ ಗುರುತನ್ನು ತಿಳಿಯಪಡಿಸುವ ಕಾರ್ಡ್ ಆಗಿ ಮಾತ್ರವೇ ಉಳಿದಿಲ್ಲ. ಜತೆಗೆ, ಸರಕಾರಿ ಸೇವಾ ಸೌಲಭ್ಯಗಳನ್ನು ಪಡೆಯುವುದು, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು, ಬ್ಯಾಂಕ್ ಖಾತೆ, ಪಾಸ್‌ಪೋರ್ಟ್… ಹೀಗೆ ಎಲ್ಲ ದಾಖಲೆಗಳಿಗೂ ಮೂಲಾಧಾರವಾಗುತ್ತಿದೆ. ಈಗಂತೂ ಹೊಸದಾಗಿ ಸಿಮ್ ಕಾರ್ಡ್ ಖರೀದಿಸಲು ಇದು ಬೇಕೇ ಬೇಕು.

ದೊಡ್ಡ ಮೌಲ್ಯದ ಹಳೆಯ ನೋಟುಗಳ ನಿಷೇಧದ ಬಳಿಕ ಭಾರತ ಸರಕಾರವು ಕ್ಯಾಶ್‌ಲೆಸ್ ವ್ಯವಹಾರ ಅಥವಾ ಡಿಜಿಟಲ್ ಕ್ಯಾಶ್‌ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಾಳ ಧನ ತಡೆಗೆ ಇದೊಂದು ಪರಿಣಾಮಕಾರಿ ಕ್ರಮ ಎಂದುಕೊಂಡರೂ, ಈ ಡಿಜಿಟಲೀಕರಣದ ಧಾವಂತದಲ್ಲಿ, ಜನರಿಗೆ ಸಮರ್ಪಕ ಮಾಹಿತಿ ಇಲ್ಲದೆ ಆಗುವ ಅನಾಹುತಗಳು ಹೆಚ್ಚೇ ಎನಿಸುತ್ತವೆ. ಕಳೆದ ವಾರ ಊರಿಗೆ ಹೋಗಿದ್ದಾಗ ಗ್ರಾಮೀಣ ಜನತೆಗೆ ಈ ಆಧಾರ್, ಪಾನ್ ಕಾರ್ಡ್, ಮೊಬೈಲ್ ನಂಬರ್ ಮುಂತಾದವುಗಳ ಲಿಂಕಿಂಗ್ ಬಗ್ಗೆ ತೀರಾ ಗೊಂದಲ ಇರುವಂತೆ ಕಂಡುಬಂತು. ಮತ್ತು ಇಂತಹ ಮುಗ್ಧರನ್ನು ಜನರು ಹೇಗೆಲ್ಲ ವಂಚಿಸಬಹುದಲ್ಲವೇ ಎಂಬುದೂ ಯೋಚನೆಗೆ ಕಾರಣವಾಯಿತು.

ಎಲ್ಲರಿಗೂ ಒಂದೇ ರೀತಿಯ ವಿಶಿಷ್ಟ ಗುರುತಿನ ಚೀಟಿ ಇರಬೇಕೆಂಬ ಧ್ಯೇಯದೊಂದಿಗೆ ಬಂದಿರುವ ಆಧಾರ್ ಕಾರ್ಡ್ ಈಗ ಮೊಬೈಲ್ ನಂಬರ್‌ಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆಯು ಏರ್‌ಟೆಲ್, ಬಿಎಸ್ಸೆನ್ನೆಲ್, ವೊಡಾಫೋನ್, ಐಡಿಯಾ ಮುಂತಾದ ಎಲ್ಲ ಸರ್ವಿಸ್ ಪ್ರೊವೈಡರುಗಳು ಅಧಿಸೂಚನೆ ಕಳುಹಿಸಿದೆ. ಮುಂದಿನ ಫೆಬ್ರವರಿ ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದೂ ಸೂಚಿಸಲಾಗಿದೆ. ಅಂದರೆ ಆಧಾರ್ ಕಾರ್ಡ್‌ಗೂ ಮೊಬೈಲ್ ನಂಬರಿಗೂ ಲಿಂಕ್ ಮಾಡುವ ಮೂಲಕ, ಯಾರದ್ದೋ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದು, ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುವುದನ್ನು ತಡೆಯುವುದು ಇದರ ಹಿಂದಿರುವ ಉದ್ದೇಶಗಳಲ್ಲೊಂದು. ಸರ್ವಿಸ್ ಪ್ರೊವೈಡರುಗಳು ಇ-ಕೆವೈಸಿ (ಎಲೆಕ್ಟ್ರಾನಿಕ್-ನಿಮ್ಮ ಗ್ರಾಹಕರನ್ನು ತಿಳಿಯಿರಿ) ಎಂಬ ವಿಧಾನದ ಮೂಲಕ ತಮ್ಮ ಗ್ರಾಹಕರನ್ನು ದೃಢೀಕರಿಸಿಕೊಳ್ಳಬೇಕಾಗುತ್ತದೆ. ಈ ಆದೇಶದ ಹಿಂದೆ ಸುಪ್ರೀಂ ಕೋರ್ಟಿನ ಒತ್ತಾಸೆಯೂ ಇದೆ. ಎಲ್ಲ ಫೋನ್ ನಂಬರುಗಳು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಬೇಕೆಂದು ಸುಪ್ರೀಂ ಕೋರ್ಟು ಫೆಬ್ರವರಿ ತಿಂಗಳಲ್ಲಿ ಕೇಂದ್ರಕ್ಕೆ ಸೂಚನೆ ನೀಡಿತ್ತು.

ಇತ್ತೀಚೆಗೆ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳು, ಅಕ್ರಮಗಳು ಹೆಚ್ಚಾಗುತ್ತಿವೆ. ಯಾರೋ ಯಾರದ್ದೋ ಮೊಬೈಲ್ ನಂಬರ್ ಬಳಸಿ ಅಕ್ರಮ ಎಸಗುತ್ತಾರೆ ಎಂಬುದೇ ಮುಂತಾದ ಕಾರಣಗಳು ಇದರ ಹಿಂದಿವೆ. ಹೀಗಾಗಿ ಮೊಬೈಲ್ ನಂಬರ್ ಹೊಂದಿರುವಾತನ ಗುರುತು ಪರಿಚಯ ಇರುವುದು ಕಡ್ಡಾಯವಾಗುತ್ತದೆ. ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿಬಿಟ್ಟರೆ ಗುರುತು ದೃಢೀಕರಣಗೊಳ್ಳುತ್ತದೆ. ಈ ಕುರಿತು ಎಲ್ಲ ಮೊಬೈಲ್ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡಬೇಕು, ಎಸ್ಸೆಮ್ಮೆಸ್, ಕರೆ, ವೆಬ್ ತಾಣದಲ್ಲಿ ಅಪ್‌ಲೋಡಿಂಗ್ ವ್ಯವಸ್ಥೆಯ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ಟೆಲಿಕಾಂ ಇಲಾಖೆಯು ಎಲ್ಲ ಸರ್ವಿಸ್ ಪ್ರೊವೈಡರುಗಳಿಗೆ ಸೂಚಿಸಿದೆ. ಇ-ಕೆವೈಸಿ ಪ್ರಕ್ರಿಯೆಯ ಅನುಸಾರ, ಟೆಲಿಕಾಂ ಸೇವಾದಾತರು ತಮ್ಮ ಗ್ರಾಹಕರ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸುತ್ತಾರೆ. ಸದ್ಯಕ್ಕೆ ಗ್ರಾಹಕರು ಆಯಾ ಟೆಲಿಕಾಂ ಸೇವಾದಾತರ ಗ್ರಾಹಕ ಸೇವಾಕೇಂದ್ರಕ್ಕೆ ಹೋಗಿ, ಸಂಬಂಧಿತ ಅರ್ಜಿಯನ್ನು ಭರ್ತಿ ಮಾಡಬೇಕು. ಬಳಿಕ ಗ್ರಾಹಕರಿಗೆ ದೃಢೀಕರಣ ಪ್ರಕ್ರಿಯೆ ಮುಕ್ತಾಯವಾದ ಕುರಿತು ಎಸ್ಸೆಮ್ಮೆಸ್ ಕಳುಹಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವುದಾಗಲೀ, ನೀವಾಗಿಯೇ ಎಸ್ಸೆಮ್ಮೆಸ್ ಕಳುಹಿಸಿ ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರಿಗೆ ಲಿಂಕ್ ಮಾಡುವುದಾಗಲೀ ಯಾವುದೇ ವಿಧಾನವೂ ಊರ್ಜಿತವಲ್ಲ.

ಆದರೆ, ಈ ಮಧ್ಯೆ ಕೆಲವೊಂದು ವಂಚಕರೂ ಸಕ್ರಿಯರಾಗಿದ್ದಾರೆ. ಅದಾಗಲೇ ನಿಮ್ಮ ಫೋನ್ ನಂಬರ್ ವಂಚಕರಿಗೆ ಸಿಕ್ಕಿರುವುದರಿಂದ, ಕಸ್ಟಮರ್ ಕೇರ್‌ನಿಂದ ಫೋನ್ ಮಾಡುತ್ತಿದ್ದೇವೆ ಎನ್ನುತ್ತಾ ನಿಮ್ಮ ಆಧಾರ್ ಸಂಖ್ಯೆಯನ್ನು ಅವರು ಕೇಳಬಹುದು. ನಂತರ ಆ ಎರಡು ಮಾಹಿತಿಗಳನ್ನು ಮುಂದಿಟ್ಟುಕೊಂಡು ಆನ್‌ಲೈನ್‌ನಲ್ಲಿ ಹಣಕಾಸು ವಹಿವಾಟು ಮಾಡುತ್ತಾ, ನಿಮ್ಮ ಫೋನ್‌ಗೆ ಬರುವ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ತಿಳಿಸುವಂತೆ ಕೇಳಬಹುದು. ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಗಳು ಬ್ಯಾಂಕ್ ಖಾತೆಗೂ ಲಿಂಕ್ ಆಗಿರುವುದರಿಂದ ವಂಚಕರಿಗೆ ಇದು ವರದಾನವಾಗುತ್ತದೆ. ಹೀಗಾಗಿ, ಯಾರಾದರೂ ದೂರವಾಣಿ ಕರೆಯ ಮೂಲಕ ನಿಮ್ಮಲ್ಲಿ ಒಟಿಪಿ/ಪಾಸ್‌ವರ್ಡ್ ಕೇಳಿದರೆ ಕೊಡಲು ಹೋಗಬೇಡಿ. ಯಾವುದೇ ಬ್ಯಾಂಕುಗಳಾಗಲೀ, ಸರ್ವಿಸ್ ಪ್ರೊವೈಡರುಗಳಾಗಲೀ, ಫೋನ್ ಮೂಲಕ ನಿಮ್ಮಲ್ಲಿ ಒಟಿಪಿ ಕೇಳುವುದೇ ಇಲ್ಲ ಎಂಬುದು ನೆನಪಿರಲಿ.

‘ನಾವು ಏರ್‍‌ಟೆಲ್‌ನಿಂದ, ವೊಡಾಫೋನ್, ಬಿಎಸ್ಸೆನ್ನೆಲ್‌ನಿಂದ ಕರೆ ಮಾಡ್ತಾ ಇದ್ದೀವಿ, ಆಧಾರ್ ಲಿಂಕ್ ಮಾಡಲು ಒಟಿಪಿ ತಿಳಿಸಿ’ ಅಂತೆಲ್ಲಾ ಹೇಳಿದರೆ ಒಟಿಪಿ ಸಂಖ್ಯೆ ನೀಡಲು ಹೋಗಬೇಡಿ. ಆಧಾರ್ ಲಿಂಕ್ ಮಾಡುವುದಕ್ಕೆ ಆಯಾ ಕಂಪನಿಗಳ ಗ್ರಾಹಕ ಸೇವಾ ಕೇಂದ್ರಗಳಿಗೆ ಹೋಗಿಯೇ ಮಾಹಿತಿ ಒಪ್ಪಿಸುವುದು ಸುರಕ್ಷಿತ ಮತ್ತು ಸದ್ಯ ಇರುವ ಏಕಮಾತ್ರ ವಿಧಾನ. ಈ ಬಗ್ಗೆ ಹೆಚ್ಚಿನ ವಿಚಾರವೇನೂ ಅರಿಯದ, ನಿಮಗೆ ಗೊತ್ತಿರುವ ಗ್ರಾಮೀಣ ಜನರಿಗೆಲ್ಲ ಈ ಮಾಹಿತಿಯನ್ನು ತಲುಪಿಸಿ.

ಆಧಾರ್-ಪ್ಯಾನ್ ಲಿಂಕ್ ಮಾಡುವುದು:
ಇದೇ ರೀತಿಯಾಗಿ, ಆಧಾರ್ ಕಾರ್ಡ್ ಹಾಗೂ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ ಲಿಂಕ್ ಮಾಡುವುದೂ ಕಡ್ಡಾಯವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇದು ಅಗತ್ಯ. ಪ್ಯಾನ್-ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟಿನಲ್ಲಿ ಅವಕಾಶವಿದೆ. ಅತ್ಯಂತ ಸುಲಭ ವಿಧಾನವೆಂದರೆ ಎಸ್ಸೆಮ್ಮೆಸ್. UIDPAN <ಸ್ಪೇಸ್> <12 ಅಂಕಿಯ ಆಧಾರ್ ಸಂಖ್ಯೆ> <ಸ್ಪೇಸ್> <10 ಅಂಕಿಯ ಪ್ಯಾನ್ ಸಂಖ್ಯೆ> ಟೈಪ್ ಮಾಡಿ, 567678 ಅಥವಾ 56161 ಗೆ ಕಳುಹಿಸಿದರಾಯಿತು.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s