ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಯಕ್ಷಗಾನದ ಧ್ವನಿ

Chennai Music Academy
ಚೆನ್ನೈ ಮ್ಯೂಸಿಕ್ ಅಕಾಡೆಮಿ!
ಸಂಗೀತ ಕ್ಷೇತ್ರದ ಜ್ಞಾನಿಗಳ ಜನಜನಿತ ಹೆಸರು; ಸಂಗೀತ ಕಲಾವಿದರ ಕನಸಿನ ವೇದಿಕೆ. ಒಂದಲ್ಲ ಒಂದು ದಿನ ಇಲ್ಲಿ ಕಾರ್ಯಕ್ರಮ ನೀಡುವ ಅವಕಾಶ ತನ್ನದಾಗಬೇಕೆಂದು ಗಾಯಕರು, ವಾದಕರು ಹಪಹಪಿಸುವ ತಾಣವಿದು. ಶಾಸ್ತ್ರೀಯ ಸಂಗೀತ ಲೋಕದ ಕೇಂದ್ರ ಬಿಂದು – ಚೆನ್ನೈಯಲ್ಲಿರುವ ಮ್ಯೂಸಿಕ್ ಅಕಾಡೆಮಿ.

ಈ ಪೀಠಿಕೆ ಯಾಕೆಂದರೆ, ಭರ್ತಿ ಆರು ವರ್ಷ ಚೆನ್ನೈಯಲ್ಲೇ ಇದ್ದರೂ, ಹಲವಾರು ಬಾರಿ ಮನದ ದುಗುಡ ಕಳೆಯಲೆಂದು ಸಮುದ್ರ ತೀರಕ್ಕೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರೂ, ರಾಧಾಕೃಷ್ಣನ್ ಸಾಲೈ (ಟಿಟಿಕೆ ರೋಡ್) ನಲ್ಲೇ ಇರುವ ಮ್ಯೂಸಿಕ್ ಅಕಾಡೆಮಿಯತ್ತ ಕಣ್ಣು ಹಾಯಿಸಿದ್ದೆನಷ್ಟೇ, ಅದೇನೇನೋ ಕನಸುಗಳಲ್ಲಿದ್ದವು, ನಿರೀಕ್ಷೆ ಇದ್ದಿತ್ತು. ಆದರೆ, ಚೆನ್ನೈ ಬಿಟ್ಟು ಬಂದ ನಾಲ್ಕು ವರ್ಷಗಳ ತರುವಾಯ ಆ ಒಂದು ದಿನ ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ.

ಅದು ಕೂಡ ಕರ್ನಾಟಕ ಸಂಗೀತ ಲೋಕದ ದಿಗ್ಗಜರೆದುರು ಮ್ಯೂಸಿಕ್ ಅಕಾಡೆಮಿಯ ಆ ಒಂದು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ಭಾಗವಾಗುವ ಯೋಗ ನನ್ನದಾಗಿತ್ತು. ಈ ಕಾರಣಕ್ಕಾಗಿ, ಸಿಕ್ಕಿದ ಅವಕಾಶ ಬಿಡಬಾರದೆಂದು, ಒಂದೇ ದಿನ ರಜೆ ಹಾಕಿ ಕ್ರಿಸ್‌ಮಸ್ ಮುನ್ನಾದಿನ ಚೆನ್ನೈಗೆ ಹೋಗಿ ಬಂದೆ.

ಡಿಸೆಂಬರ್ ಎಂದರೆ ಮಾರ್ಗಳಿ ಮಾಸ (ಮಾರ್ಗಶಿರ ತಿಂಗಳು); ಚೆನ್ನೈ ತಂಪಾಗುವ ಸಮಯವದು. ಈ ವರ್ಷ ತಿಂಗಳಾರಂಭದ ಭಾರೀ ಮಳೆ ತಂದ ಅನಾಹುತದಿಂದಾಗಿ ಮುಳುಗಿ ಚೆನ್ನೈಯಿನ್ನೂ ನಿಧಾನವಾಗಿ ಕಣ್ಣು ತೆರೆದುಕೊಳ್ಳುತ್ತಿದೆಯಷ್ಟೇ. ಈ ಮಾಸವು ಇದ್ದಬದ್ದ ವೇದಿಕೆಗಳಲ್ಲೆಲ್ಲಾ ಕರ್ನಾಟಕ ಶಾಸ್ತ್ರೀಯ ಸಂಗೀತದ ಆಲಾಪನೆಗಳು, ಮೃದಂಗದ ನುಡಿಗಳು, ಘಟಂ ಪೆಟ್ಟುಗಳು, ಕೊನ್ನಕ್ಕೋಲು, ಕಂಜಿರ, ಪಿಟೀಲು, ವೀಣೆ, ಕೊಳಲಿನ ಧ್ವನಿಗಳು ಕೇಳಿಬರುವ ಕಾಲ. ತಿಂಗಳೊಂದಲ್ಲ, ಎರಡು ತಿಂಗಳಿಗೂ ಮಿಕ್ಕಿ ಕೆಲವು ಕಡೆ ಈ ರೀತಿಯ ಸಂಗೀತೋತ್ಸವಗಳು ಮುಂದುವರಿಯುತ್ತವೆ. ಒಳಗಿದ್ದುಕೊಂಡೂ ವೃತ್ತಿಯೊತ್ತಡದಿಂದಾಗಿ ಸಂಭ್ರಮಿಸಲಾಗದಿದ್ದ ನಾನು, ಈ ಸಂಭ್ರಮ ಕಾಲದಲ್ಲಿ ಚೆನ್ನೈಗೆ ಮತ್ತೊಮ್ಮೆ ‘ಹೊರಗಿನವನಾಗಿ’ ಹೋಗಿ ಬಂದೆ.

Chennai Music Academy1ಕಾರ್ಯಕ್ರಮವಿದ್ದದ್ದು ಶಾಸ್ತ್ರೀಯ ಸಂಗೀತಕ್ಕೂ ಯಕ್ಷಗಾನಕ್ಕೂ ನಂಟು ಬೆಸೆಯುವ ತಾಳಗಳ ಬಗೆಗೆ ಮೈಸೂರಿನ ಸಂಗೀತ ವಿದ್ವಾನ್ ಮಹೇಶ ಪದ್ಯಾಣ ನೆರವೇರಿಸಿಕೊಡುವ ಪ್ರಾತ್ಯಕ್ಷಿಕೆ. ಪದ್ಯಾಣ ಮನೆತನ – ನಮಗೆಲ್ಲ ಗೊತ್ತಿರುವಂತೆ ಯಕ್ಷಗಾನಕ್ಕೆ ಭಾರಿ ಹೆಸರು. ಯಕ್ಷಗಾನ ಲೋಕಕ್ಕೆ ದಿಗ್ಗಜರನ್ನು ನೀಡಿದ ಊರದು. ಆದರೆ ಸಂಗೀತ ಕ್ಷೇತ್ರದಲ್ಲಿಯೂ ವಿಟ್ಲ ಸಮೀಪದ ಈ ಒಂದು ಊರಿನ ಮಣ್ಣಿನ ಕೊಡುಗೆ ಅಪಾರ. ಅಲ್ಲಿನವರೇ ಆದ ಮಹೇಶ್ ಪದ್ಯಾಣ ಸಾಫ್ಟ್‌ವೇರ್ ಎಂಜಿನಿಯರ್ ಆಗಿ, ಅಮೆರಿಕದಲ್ಲಿ ಸೇವೆ ಸಲ್ಲಿಸಿ ತಮ್ಮಲ್ಲಿನ ಸಂಗೀತವನ್ನು ಅಲ್ಲೂ ಪೋಷಿಸಿಕೊಂಡೇ ಬಂದವರು. ಈಗ ಕ್ಲೌಡ್ ಡಾಟ್ ಇನ್ ಸಿಇಒ ಆಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ.

‘ಯಕ್ಷಗಾನದಲ್ಲಿ ತಾಳಗಳು’ ಎಂಬ ಕುರಿತಾಗಿ ಉಪನ್ಯಾಸ-ಪ್ರಾತ್ಯಕ್ಷಿಕೆ ಅವರದು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರಾಗಿದ್ದರೂ, ಕೆಲವೇ ದಿನಗಳಲ್ಲಿ ಯಕ್ಷಗಾನದ ಶೈಲಿಯಲ್ಲಿ ಹಾಡುಗಳನ್ನು ಕರಗತವಾಗಿಸಿಕೊಂಡು, ಈ ಅಪರೂಪದ ಉಪನ್ಯಾಸ ಕಾರ್ಯಕ್ರಮಕ್ಕೆ ತಯಾರು ಮಾಡಿಕೊಂಡುಬಿಟ್ಟಿದ್ದರು.

ಬೆಳ್ಳಂಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭವಾದಾಗ ಸಭಾಸದರ ಸಂಖ್ಯೆ ಕಡಿಮೆ ಇತ್ತು. ಐದು-ಹತ್ತು ನಿಮಿಷದಲ್ಲಿ ಮಿನಿ ಹಾಲ್ ತುಂಬಿಕೊಂಡಿತು. ಎದುರಿನ ಸಾಲಿನಲ್ಲಿ ಕುಳಿತಿದ್ದವರಾದರೂ ಯಾರು? ಕರ್ನಾಟಕ ಸಂಗೀತ ಲೋಕ ಕಂಡ ಮೇರು ಕಲಾವಿದ, ಕಲೈಮಾಮಣಿ ಟಿ.ವಿ.ಗೋಪಾಲಕೃಷ್ಣನ್. ಅವರನ್ನು ನೋಡಿದ ತಕ್ಷಣ ಕರಗಳು ಅಯಾಚಿತವಾಗಿ ಮುಗಿದುಕೊಂಡವು, ನಕ್ಕು ಬಿಟ್ಟೆ, ಆದರೆ ಮನಸ್ಸಿನೊಳಗಂತೂ ಭತ್ತ ಕುಟ್ಟಿದ ಅನುಭವ. ಅಂತಹಾ ಅದ್ಭುತ ಹಾಡುಗಾರ, ಮೃದಂಗವಾದನದ ಸಿಂಧುವಿನ ಎದುರು ನಾನೊಂದು ಬಿಂದುವಾಗಿದ್ದೆ. ಆತಂಕವಾಗತೊಡಗಿತು. ಮಹೇಶ್ ಹಾಡಿಗೆ ನಾನು ಮೃದಂಗಕ್ಕೆ ಮದ್ದಳೆಯ ನುಡಿತಗಳನ್ನು ಅಳವಡಿಸಲು ಹೆಣಗಾಡುತ್ತಾ ನುಡಿಸುವಾಗ, ಅವರ ಕೈಗಳೂ ತಾಳ ಹಾಕುತ್ತಿದ್ದವು! ಉಫ್! ಬೆವೆತುಬಿಟ್ಟೆ.

ಅಷ್ಟೆ, ಬೇರೇನೂ ಯೋಚಿಸಲಾರದಾದೆ. 9ರ ಆಸುಪಾಸಿಗೆ ಕಾರ್ಯಕ್ರಮ ಮುಗಿಸಿದ ಬಳಿಕ ಸಂಗೀತವೆಂಬ ಸಾರಸ್ವತ ಸಭೆಯಿಂದ ಕರತಾಡನ ಮತ್ತು ಶ್ಲಾಘನೆ. ಒಂದಿಷ್ಟು ಸಂದೇಹಗಳಿಗೆ ಸಂವಹನಾತ್ಮಕ ಉತ್ತರ. ಒಂದು ಕಾಲದಲ್ಲಿ ಕೇವಲ ಕನಸನ್ನೇ ಕಂಡು, ಅದನ್ನು ಹಾಗೆಯೇ ಮನದೊಳಗೆ ಮುಚ್ಚಿಟ್ಟುಕೊಂಡಿದ್ದ, ಮ್ಯೂಸಿಕ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡುವ ಕನಸು ನನಸಾದ ಕ್ಷಣ. ತೃಪ್ತಿ, ಆನಂದ ಮನದೊಳಗಿತ್ತು. ಈ ನೆಪದಲ್ಲಿ ವಾಪಸ್

ಇದಕ್ಕೂ ಹೆಚ್ಚಿನದಾಗಿ, ಚೆನ್ನೈಯೆಂಬ ಸಂಗೀತದ ಮಹಾಸಾಗರದಲ್ಲಿ ಯಕ್ಷಗಾನದ ನಡೆಗಳನ್ನು, ತಾಳಗಳನ್ನು; ಮತ್ತು ಸಂಗೀತ ಲೋಕವು ಕಂಡರಿಯದ ತಾಳ ಬದಲಾವಣೆಯ ಪ್ರಕ್ರಿಯೆಯನ್ನು (ಇದುವೇ ಯಕ್ಷಗಾನದ ವೈಶಿಷ್ಟ್ಯ, ಮಹಾನ್ ವಿದ್ವಾಂಸ ಜೇಸುದಾಸ್ ಅವರೂ ಈ ಬಗ್ಗೆ ಅಚ್ಚರಿಪಟ್ಟಿದ್ದರು) ಪರಿಚಯಿಸಿದ ಹೆಗ್ಗಳಿಕೆಯಲ್ಲಿ ನನ್ನದೂ ಒಂದು ಪಾಲು.

ಯಕ್ಷಗಾನಕ್ಕೂ ಸಂಗೀತಕ್ಕೂ ಬಹುಕಾಲದ ನಂಟಿದೆ. ಈಗ ಸಂಗೀತ ಲೋಕದಲ್ಲಿ ಯಕ್ಷಗಾನದ ಸಾರವನ್ನು ಪರಿಚಯಿಸಿದ್ದಾಗಿದೆ. ಈ ಎರಡು ಅದ್ಭುತ ಕಲೆಗಳ ಮತ್ತಷ್ಟು ಸಾಮೀಪ್ಯದ ನಿರೀಕ್ಷೆಯೊಂದಿಗೆ….

4 thoughts on “ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಯಕ್ಷಗಾನದ ಧ್ವನಿ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s