ಫ್ರೀಡಂ 251 ಎಂಬ ಫ್ರೀ ಬಕ್ರಾಗಿರಿ!

Freedom251ಹೇಳಿ ಕೇಳಿ ಭಾರತೀಯರು ಚೌಕಾಶಿ ಪ್ರಿಯರು. ಯಾವುದು ಕಡಿಮೆಗೆ ಸಿಗುತ್ತದೋ, ಅದರತ್ತ ಒಲವು ಹೆಚ್ಚು. ಜತೆಗೆ ಸ್ವದೇಶೀ ಉತ್ಪನ್ನಗಳ ಮೇಲೆ ಅಭಿಮಾನ ಜಾಸ್ತಿ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡ, ಮೂರ್ನಾಲ್ಕು ತಿಂಗಳ ಹಿಂದಷ್ಟೇ ಹುಟ್ಟಿಕೊಂಡ ಸಂಸ್ಥೆಯೊಂದು ಭಾರತೀಯರನ್ನು ಮಂಗ ಮಾಡಲು ಹೊರಟಿದೆಯೋ?

ಇಂಥದ್ದೊಂದು ಸಂದೇಹ ಬಂದರೆ ತಪ್ಪಿಲ್ಲ. 500 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡುತ್ತೇವೆ ಎಂದು ಟಾಂಟಾಂ ಹೊಡೆಸಿಕೊಂಡ ಮರುದಿನವೇ, ಫ್ರೀಡಂ251 ಯೋಜನೆಯಡಿ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡುತ್ತೇವೆ ಎಂದು ಮರುದಿನವೇ ಪ್ರಚಾರ ಮಾಡಿದ ರಿಂಗಿಂಗ್ ಬೆಲ್ ಕಂಪನಿಯ ಪ್ರಚಾರ ವೈಖರಿಗೆ ಮರುಳಾಗದವರಿಲ್ಲ.

ಯಾವತ್ತೂ ಏಳೆಂಟು ಗಂಟೆಯಾದರೂ ಸೂರ್ಯನ ಮುಖ ನೋಡವರು 5.50ಕ್ಕೇ ಎದ್ದು ಕಂಪ್ಯೂಟರ್ ಓಪನ್ ಮಾಡಿ, Freedom251.com ಸೈಟಿಗೆ ಹೋದವರು ಹಲವರು. ಹೆಚ್ಚಿನವರಿಗೆ ಆರಂಭದಲ್ಲಿ ಖಾಲಿ ಆಕಾಶದ ಸ್ಕ್ರೀನ್ ಕಾಣಿಸಿದೆ. ಜನ ಜಾಸ್ತಿ ನೋಡುತ್ತಿರುವುದಕ್ಕೆ ಹೀಗಾಗಿರಬಹುದು ಎಂದುಕೊಂಡು, ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಹೋಗಿದ್ದಾರೆ. ಅಬ್ಬ, ಓಪನ್ ಆಗಿದೇಂತ ತಿಳಿದುಕೊಂಡು Buy ಬಟನ್ ಒತ್ತಿದಾಕ್ಷಣ, ನಿಮ್ಮ ಬುಟ್ಟಿಯಲ್ಲಿ ಒಂದು ಮೊಬೈಲ್ ಫೋನ್ ಇದೆ ಎಂಬ ಸಂದೇಶ ಬಂದಾಕ್ಷಣ ಖುಷಿಯೋ ಖುಷಿ. ಮುಂದೆ ತಮ್ಮ ಹೆಸರು, ವಿಳಾಸ, ಫೋನ್ ನಂಬರ್ ತುಂಬಿಸಿ, Pay Now ಬಟನ್ ಒತ್ತಿದಾಕ್ಷಣ, ಇಡೀ ಸ್ಕ್ರೀನ್ ಖಾಲಿ ಖಾಲಿ!

ಜನರ ಕೊಳ್ಳುಬಾಕ ಮನಸ್ಥಿತಿಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದೆಂಬುದಕ್ಕೆ ಇದೂ ಒಂದು ಸಾಕ್ಷಿ. ಜನರ ಆಕ್ರೋಶ ಮುಗಿಲುಮುಟ್ಟುತ್ತಿರುವಂತೆಯೇ, ರಿಂಗಿಂಗ್ ಬೆಲ್ಸ್ ಕಂಪನಿಯ ಟ್ವಿಟರ್, ಫೇಸ್‌ಬುಕ್ ಖಾತೆಗಳಲ್ಲಿ ಜನರು ಉಗಿಯತೊಡಗಿದರು. ಕ್ಷಮಿಸಿ, ತಾಂತ್ರಿಕ ಸಮಸ್ಯೆಯಾಗಿದೆ, ಸರಿಪಡಿಸುತ್ತೇವೆ ಅಂತೆಲ್ಲಾ ಸಮಜಾಯಿಷಿಗಳು ಬಂದವು.

ನಮ್ಮನ್ನು ಬಕ್ರಾ ಅಂತ ತಿಳಿದುಕೊಂಡು, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಮತ್ತಷ್ಟು ಬಕ್ರಾ ಮಾಡುವವರ ಪ್ರಯತ್ನವಿದಾಗಿದೆಯೇ ಎಂಬ ಸಂದೇಹ ಮೂಡಲು ಪ್ರಧಾನ ಕಾರಣವೆಂದರೆ, ಇಷ್ಟು ಅಗ್ಗದ ಬೆಲೆಯಲ್ಲಿ ಮೊಬೈಲ್ ಫೋನ್ ಮಾರುತ್ತೇವೆ ಎಂಬವರಿಗೆ, ಜನ ಮುಗಿಬೀಳುತ್ತಾರೆ, ವೆಬ್ ಸೈಟ್ ಕ್ರ್ಯಾಶ್ ಆಗಬಹುದು, ಸರ್ವರ್ ಕೈಕೊಡಬಹುದೆಂಬ ಕನಿಷ್ಠ ಜ್ಞಾನವೂ ಇರಲಿಲ್ಲವೇ?

251 ರೂಪಾಯಿಗೆ ಮೊಬೈಲ್ ಫೋನ್‌ನ ಒಳ್ಳೆಯ ಕವರ್ ಕೂಡ ಬರುವುದಿಲ್ಲ. ಅಂಥದ್ದರಲ್ಲಿ 1 ಜಿಬಿ RAM, 8 ಜಿಬಿ ಮೆಮೊರಿ, ಎರಡು ಕ್ಯಾಮೆರಾ (3.2 ಹಾಗೂ 0.3 ಮೆಗಾಪಿಕ್ಸೆಲ್), ಟಚ್ ಸ್ಕ್ರೀನ್, ಲಾಲಿಪಾಪ್ ಕಾರ್ಯಾಚರಣಾ ವ್ಯವಸ್ಥೆ, 1450 mAh ಬ್ಯಾಟರಿ, 1.3 ಗಿಗಾಹರ್ಟ್ಸ್ ಪ್ರೊಸೆಸರ್, ಅಲ್ಲದೆ 1 ವರ್ಷದ ವಾರಂಟಿ ಬೇರೆ ಇರುವ 3ಜಿ ತಂತ್ರಜ್ಞಾನದ ಮೊಬೈಲ್ ಹ್ಯಾಂಡ್‌ಸೆಟ್ಟೇ ಬರುತ್ತದೆ ಎಂದಾದಾಗ ಶಂಕೆ ಮೂಡಲೇಬೇಕಲ್ಲವೇ?

ಈಗ ವೆಬ್ ಸೈಟಿನಲ್ಲಿ ತಪ್ಪು ತಪ್ಪು ಇಂಗ್ಲಿಷ್ ಅಕ್ಷರಗಳಲ್ಲಿ, ನಿಮ್ಮ ಅಭಿಮಾನಕ್ಕೆ ಧನ್ಯವಾದ, ತಾಂತ್ರಿಕ ಅಡಚಣೆ ಸರಿಪಡಿಸಿದ ಬಳಿಕ ಮುಂದಿನ ಮಾರಾಟ ನಡೆಯಲಿದೆ ಎಂದು ಘೋಷಿಸಲಾಗಿದೆ. ಅವರೇ ಹೇಳಿಕೊಳ್ಳುವಂತೆ ಸೆಕೆಂಡಿಗೆ 6 ಲಕ್ಷ ಮಂದಿ ವೆಬ್ ಸೈಟಿಗೆ ಭೇಟಿ ನೀಡಿದ್ದಾರಂತೆ. ಹೆಚ್ಚಿನವರು ಖರೀದಿ ಪ್ರಕ್ರಿಯೆ ಆರಂಭಿಸಿ, ತಮ್ಮ ಹೆಸರು, ಇಮೇಲ್ ವಿಳಾಸ, ಮೊಬೈಲ್ ನಂಬರನ್ನು ಆ ವೆಬ್ ಸೈಟಿಗೆ ಉಣಬಡಿಸಿದ್ದಾರೆ. ನಾವು ಬರೆದ ಅಡ್ರೆಸ್, ಇಮೇಲ್ ವಿಳಾಸ, ಫೋನ್ ನಂಬರ್ ದಾಖಲಾಗುತ್ತದೆ. ಮುಂದಕ್ಕೆ ಹೋಗುವುದಿಲ್ಲವೆಂದರೇನರ್ಥ? ಒಟ್ಟಿನಲ್ಲಿ ಅಗಾಧ ಡೇಟಾಬೇಸ್ ಅವರಿಗೆ ಸುಖಾಸುಮ್ಮನೆ ದೊರೆತಂತಾಗಿದೆ. ಇನ್ನು ಸ್ಪ್ಯಾಮ್ ಮಾಡಲೇನೂ ತೊಂದರೆಯಿಲ್ಲವಲ್ಲ!

ರವಾನೆ ಶುಲ್ಕವಾಗಿ 40 ರೂ. ಸೇರಿಸಲಾಗುತ್ತದೆ. ಒಟ್ಟು 291 ರೂಪಾಯಿಗೆ ಈ ‘ಮೇಡ್ ಇನ್ ಇಂಡಿಯಾ’ ಮೊಬೈಲ್ ಲಭ್ಯವಂತೆ. ಉಚಿತವಾಗಿ ಸಿಕ್ಕುವುದಿದ್ದರೂ ನಾವು ಯೋಚಿಸುತ್ತೇವಲ್ಲ? ಇಷ್ಟು ಕಡಿಮೆಗೆ ಈ ಸ್ಪೆಸಿಫಿಕೇಶನ್ನುಗಳಿರೋ ಮೊಬೈಲ್ ಕೊಟ್ರೆ, ಅನ್ಯ ಕಂಪನಿಗಳು ಸುಮ್ಮನಿರುತ್ತಾವೆಯೇ? ಭಾರತೀಯ ಕಂಪನಿಗಳಾದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಕಾರ್ಬನ್, ಲಾವಾ, ಡೇಟಾವಿಂಡ್ ಮುಂತಾದವುಗಳ ಬೆಲೆಯೂ ಇದರ ಆಸುಪಾಸು ಕೂಡ ಇರುವುದಿಲ್ಲ. ಇಂತಹಾ, ಸರಿಯಾಗಿ ಕೆಲಸ ಮಾಡಬಲ್ಲ ಫೋನಿಗೆ ಕನಿಷ್ಠ 2 ಸಾವಿರ ಇರುತ್ತದೆ.

ಲಭ್ಯ ಮಾಹಿತಿ ಪ್ರಕಾರ, 2015ರ ಅಂತ್ಯಭಾಗದಲ್ಲಿ ಕೃಷ್ಯುತ್ಪನ್ನ ಮಾರಾಟ ಸಂಸ್ಥೆಯಾಗಿ ಮೈದಳೆದ ರಿಂಗಿಂಗ್ ಬೆಲ್ಸ್‌ನ ಈ 251ರ ಫೋನು ನೋಯಿಡಾ ಫ್ಯಾಕ್ಟರಿಯಲ್ಲಿ ತಯಾರಾಗುತ್ತದೆ. ಬಿಡಿಭಾಗಗಳು ಬರುವುದು ತೈವಾನ್‌ನಿಂದ ಅಂತೆ.

ಕಂಪನಿಯ ಅಧಿಕಾರಿ ಅಶೋಕ್ ಛಡ್ಡಾ ಎಂಬವರು ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿರುವ ಪ್ರಕಾರ, 2500ರ ಆಸುಪಾಸಿನ ಈ ಫೋನ್, ಇಷ್ಟು ಕಡಿಮೆಗೆ ಸಿಗುವಂತಾಗಲು ಸಾಕಷ್ಟು ವೆಚ್ಚ ಉಳಿತಾಯ ಕ್ರಮಗಳನ್ನು ಕೈಗೊಂಡಿದ್ದಾರಂತೆ. ಸ್ಥಳೀಯವಾಗಿಯೇ ಅಸೆಂಬಲ್ ಮಾಡುವುದರಿಂದ 400 ರೂ. ಉಳಿತಾಯ, ದೊಡ್ಡ ಪ್ರಮಾಣದಲ್ಲಿ ಆ್ಯಡ್‌ಕಾಂ ಮೂಲಕ ಉತ್ಪಾದಿಸಿದಾಗ 400-500 ರೂ. ಉಳಿತಾಯವಾಗುತ್ತದೆ, ಆನ್‌ಲೈನ್ ಮಾರಾಟಕ್ಕೆ ಯಾವುದೇ ಸಿಬ್ಬಂದಿ ಅಗತ್ಯವಿಲ್ಲ, ಹೀಗಾಗಿ 500 ರೂ. ಉಳಿತಾಯವಾಗುತ್ತದಂತೆ. ಅಲ್ಲದೆ ಅವರ ವೆಬ್ ಸೈಟಿನಲ್ಲಿ ಇತರ ಕಂಪನಿಗಳಿಗೂ ಅವಕಾಶ ಮಾಡಿಕೊಡುವ ಮೂಲಕ ಮತ್ತಷ್ಟು ಹಣ ಬರುತ್ತದೆ ಎಂಬುದು ಅಶೋಕ್ ಛಡ್ಡಾ ಹೇಳಿಕೆ.

ಇದೀಗ ದೊಡ್ಡ ಕಂಪನಿಗಳಿರುವ ಇಂಡಿಯನ್ ಸೆಲ್ಯುಲಾರ್ ಅಸೋಸಿಯೇಶನ್ ಇಷ್ಟು ಕಡಿಮೆ ಪ್ರಮಾಣದಲ್ಲಿ ಮೊಬೈಲ್ ನೀಡುತ್ತಿರುವ ವಿಷಯ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಲಾರಂಭಿಸಿದೆ. ಈ ಬಗ್ಗೆ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದೆಯಂತೆ. ಯಾಕೆಂದರೆ ಇಂತಹಾ ಫೋನಿನ ಕಚ್ಚಾ ಸಾಮಗ್ರಿ ಬೆಲೆಯೇ 2700 ರೂ. (40 ಡಾಲರ್) ಆಗುತ್ತದೆ. ಇದನ್ನು ತಯಾರಿಸಿ, ತೆರಿಗೆ, ವಿತರಣೆ, ಅದೂ ಇದೂ ಎಂದಾದಾಗ 4100 ರೂ. ಕನಿಷ್ಠ ಬೆಲೆ. ಅದನ್ನು 251 ರೂ.ಗೆ ಮಾರಲಾಗುತ್ತಿದೆ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ ಭಾರತೀಯ ಸೆಲ್ಯುಲಾರ್ ಒಕ್ಕೂಟದ ಅಧ್ಯಕ್ಷ ಪಂಕಜ್ ಮಹೀಂದ್ರೂ.

ಈ ಮೊಬೈಲನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಉದ್ಘಾಟಿಸಬೇಕಿತ್ತಾದರೂ, ಕೊನೆಯ ಕ್ಷಣದಲ್ಲಿ ಅವರು ನುಣುಚಿಕೊಂಡಿದ್ದಾರೆ. ಈಗ ಸೈಟೇ ಹೇಳುತ್ತಿದೆ… ಶೀಘ್ರವೇ ಸಮಸ್ಯೆ ಸರಿಪಡಿಸಿಕೊಂಡು ವಾಪಸ್ ಬರುತ್ತೇವೆ ಅಂತ. ಜನ ಮರುಳೋ…

ಈ ವೆಬ್ ಸೈಟಿನಲ್ಲಿ ಕೇಂದ್ರ ಸರಕಾರದ ಸ್ವಚ್ಛಭಾರತ ಆ್ಯಪ್, ಮಹಿಳಾ ಸುರಕ್ಷತೆ, ಮೀನುಗಾರರು ಮತ್ತು ರೈತರ ಆ್ಯಪ್‌ಗಳನ್ನು ಅಳವಡಿಸಿ ನೀಡಲಾಗುತ್ತದೆಯಂತೆ. ಅಂತೂ, ಮೋದಿ ಸರಕಾರದ ಡಿಜಿಟಲ್ ಇಂಡಿಯಾ ಆಂದೋಲನವನ್ನು ಇವರು ಸರಿಯಾಗಿಯೇ ಬಳಸಿಕೊಂಡಿದ್ದಾರೆ ಅಲ್ಲವೇ?

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s