ಎಷ್ಟು ಮೊಬೈಲ್ ಕರೆನ್ಸಿ ಹಾಕಿಕೊಂಡರೆ ಉಳಿತಾಯ?: ತಿಳಿಯಲು iReff ಆ್ಯಪ್

iReffಮೊಬೈಲ್ ಫೋನ್‌ಗೆ ಕರೆನ್ಸಿ ಹಾಕಿಸಿಕೊಳ್ಳಲು ಸಾಕಷ್ಟು ವೈವಿಧ್ಯಮಯ ಆಯ್ಕೆಗಳು ಲಭ್ಯವಿರುತ್ತವೆ. ಕಡಿಮೆ ದುಡ್ಡಿನಲ್ಲಿ ಹೆಚ್ಚು ಲಾಭ ಪಡೆಯುವ ಸಾಕಷ್ಟು ಕರೆನ್ಸಿ ಪ್ಲ್ಯಾನ್‌ಗಳನ್ನು ಮೊಬೈಲ್ ಸೇವಾದಾರರು ಒದಗಿಸುತ್ತಾರೆ. ಬಿಎಸ್ಸೆನ್ನೆಲ್, ವೋಡಾಫೋನ್, ಐಡಿಯಾ, ಏರ್‌ಟೆಲ್, ಡೊಕೊಮೊ ಮುಂತಾದ ಸೇವಾದಾರರು ಹೊಂದಿರುವ ಎಲ್ಲ ಉಪಯುಕ್ತ ಪ್ಲ್ಯಾನ್‌ಗಳ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಾಗುವ ಸಾಧ್ಯತೆಗಳು ಕಡಿಮೆ. ಉದಾಹರಣೆಗೆ, ರೇಟ್ ಕಟ್ಟರ್‌ಗಳ ಬಗ್ಗೆ (ನಿರ್ದಿಷ್ಟ ಮೊತ್ತದ ರೀಚಾರ್ಜ್ ಮಾಡಿಸಿಕೊಂಡರೆ, ಕಡಿಮೆ ದುಡ್ಡಿನಲ್ಲಿ ಹೆಚ್ಚು ಮಾತನಾಡಲು ಅವಕಾಶ ಮಾಡಿಕೊಡುವ ಯೋಜನೆಗಳು) ಜನರಿಗೆ ತಿಳಿದಿರುವುದಿಲ್ಲ. ಒಂದು ತಿಂಗಳಿಗೆ ಎಷ್ಟು ಜಿಬಿ ಡೇಟಾ (ಇಂಟರ್ನೆಟ್) ಪ್ಯಾಕ್ ಇದೆ, ಎಷ್ಟು ಹಣ ನೀಡಬೇಕಾಗುತ್ತದೆ ಎಂಬುದೆಲ್ಲಾ ಅಂಗೈಯಲ್ಲಿಯೇ ತಿಳಿಯುವಂತಾದರೆ?

ಇಂಥದ್ದೊಂದು ಸೇವೆಯನ್ನು ಒದಗಿಸುತ್ತಿದೆ iReff ಎಂಬ ಆ್ಯಪ್. ನೀವು ಇದನ್ನು ಅಳವಡಿಸಿಕೊಂಡರೆ, ನಿಮ್ಮ ಆಪರೇಟರ್ ಮತ್ತು ಯಾವ ಪ್ರದೇಶ (ಟೆಲಿಕಾಂ ಭಾಷೆಯಲ್ಲಿ ಸರ್ಕಲ್) ಎಂದು ಆಯ್ಕೆ ಮಾಡಿದಾಗ, ಲಭ್ಯವಿರುವ ಎಲ್ಲ ರೀಚಾರ್ಜ್ ಪ್ಲ್ಯಾನ್‌ಗಳನ್ನು ಮೊಬೈಲ್‌ನಲ್ಲೇ ನೋಡಬಹುದು. ಅಲ್ಲಿಂದಲೇ ಕ್ಲಿಕ್ ಮಾಡಿದರೆ, Paytm ಅಥವಾ Mobikwik ಎಂಬ ಆ್ಯಪ್‌ಗಳ ಮೂಲಕವಾಗಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಎಲ್ಲ ಮೊಬೈಲ್ ಆಪರೇಟರುಗಳ ವೆಬ್ ಸೈಟ್‌ನಲ್ಲಿ ದೊರೆಯುವ, ಬದಲಾಗುತ್ತಿರುವ ರೀಚಾರ್ಜ್ ಪ್ಲ್ಯಾನ್‌ಗಳ ಮಾಹಿತಿ ಕಲೆ ಹಾಕಿ, ಈ ಆ್ಯಪ್‌ಗೆ ದೊರೆಯುವಂತೆ ಮಾಡಲಾಗುತ್ತದೆ.

ಆಂಡ್ರಾಯ್ಡ್, ವಿಂಡೋಸ್, ಆ್ಯಪಲ್ ಹಾಗೂ ಬ್ಲ್ಯಾಕ್‌ಬೆರಿ ಸಾಧನಗಳ ಆ್ಯಪ್ ತಾಣಗಳಲ್ಲಿ ಇದು ಉಚಿತವಾಗಿ ದೊರೆಯುತ್ತದೆ. ಇದಲ್ಲದೆ, http://www.ireff.in ಎಂಬಲ್ಲಿ ಕಂಪ್ಯೂಟರ್ ಮೂಲಕವೂ ಯಾವ ಆಪರೇಟರುಗಳು ಯಾವ ಕೊಡುಗೆಗಳನ್ನು ನೀಡುತ್ತಿದ್ದಾರೆಂಬುದನ್ನು ವೀಕ್ಷಿಸಬಹುದು.

2013ರಲ್ಲಿ ಸಾಫ್ಟ್‌ವೇರ್‌ನ ಉನ್ನತ ಹುದ್ದೆ ತೊರೆದು ಐರೆಫ್ (iReff) ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ನಿಜಾಮ್ ಮೊಹಿದ್ದೀನ್. ಅವರ ಜತೆಗೆ ಬೆನ್ನೆಲುಬಾಗಿ ನಿಂತವರು ಅವರ ಸಹಪಾಠಿಗಳಾದ ಪ್ರಸನ್ನ ಹೆಗಡೆ ಹಾಗೂ ರಾಜೇಶ್ ಬಡಗೇರಿ. ಎಲ್ಲರೂ ವಿಪ್ರೋ, ಟಿಸಿಎಸ್ ಮುಂತಾದ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದವರೇ. ಇದೀಗ ತಮ್ಮದೇ ಸ್ಟಾರ್ಟ್ ಅಪ್‌ನೊಂದಿಗೆ ಹೊಸ ಕನಸು ಕಾಣುತ್ತಿದ್ದಾರೆ. ಅವರಿಗೆ ತಾಂತ್ರಿಕವಾಗಿ ರವೀಂದ್ರ ಭಟ್ ಜತೆಗೂಡಿದ್ದಾರೆ.

‘ಈ ಕಿರು ಸಂಸ್ಥೆಯ ಮೂಲಕ ಜನರಿಗೆ ಉಪಯೋಗವಾಗಿರುವುದು ನಮಗೂ ಆತ್ಮತೃಪ್ತಿ ತಂದುಕೊಡುವ ಸಂಗತಿ’ ಎನ್ನುತ್ತಾರೆ ಐರೆಫ್‌ನ ಸಹಸಂಸ್ಥಾಪಕರಲ್ಲೊಬ್ಬರಾದ ಪ್ರಸನ್ನ ಹೆಗಡೆ. ‘ಆ್ಯಪ್ ಬಳಸಿದ ಜನರು ನಮ್ಮ ಆ್ಯಪ್‌ನಲ್ಲಿ ಕಾಮೆಂಟ್ ಮಾಡಿ ಪ್ರೋತ್ಸಾಹ ನೀಡಿದ್ದಾರೆ. ಇದನ್ನು ಮತ್ತಷ್ಟು ಸುಧಾರಿಸುವ ಇರಾದೆಯಿದೆ’ ಎಂದು ಹೆಗಡೆ ವಿವರಿಸಿದ್ದಾರೆ. ಭವಿಷ್ಯದ ಯೋಜನೆ? ‘ಯಾವುದೇ ವ್ಯಕ್ತಿಯ ಬಳಕೆಯನ್ನು ಆಧರಿಸಿ, ಒಳ್ಳೆಯ ಪ್ಲ್ಯಾನ್ ಸೂಚಿಸುವ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಯುತ್ತಿದೆ,’ ಎಂದು ವಿವರಿಸಿದ್ದಾರೆ ಹೆಗಡೆ. ಅಂದರೆ, ಒಂದು ತಿಂಗಳಿಗೆ ಒಬ್ಬ ವ್ಯಕ್ತಿಯ ಕರೆಗಳೆಷ್ಟು, ಎಸ್ಸೆಮ್ಮೆಸ್ ಎಷ್ಟು, ಇಂಟರ್ನೆಟ್ ಎಷ್ಚು ಬಳಸುತ್ತಾರೆ ಎಂಬುದನ್ನೆಲ್ಲಾ ಈ ಆ್ಯಪ್ ಅರ್ಥೈಸಿಕೊಂಡು, ಅದಕ್ಕೆ ತಕ್ಕಂತಹಾ ಪ್ಲ್ಯಾನ್ ಯಾವುದಿದೆ ಎಂದು ಆ ವ್ಯವಸ್ಥೆಯೇ ಹುಡುಕಿ ತೋರಿಸುವ ಸ್ವಯಂಚಾಲಿತ ತಂತ್ರಜ್ಞಾನ.

ಅಷ್ಟೊಳ್ಳೆ ಕೆಲಸ ಬಿಟ್ಟು, ಈ ಸಾಹಸಕ್ಕೆ ಕೈಹಚ್ಚಿದ್ದು ಯಾಕೆ? ಇದಕ್ಕೆ ಅವರಲ್ಲಿ ಉತ್ತರವಿದೆ. ”ಕಾರ್ಪೊರೇಟ್ ಜಗತ್ತಿನ ಏಕತಾನತೆ ನಿವಾರಣೆಯಾಗಿದೆ, ಜನರು ಮೆಚ್ಚಿಕೊಂಡಿದ್ದಾರೆ ಮತ್ತು ಅವರಿಗೆ ಉಪಯೋಗ ಆಗುತ್ತಿದೆಯಲ್ಲ ಎಂಬುದು ನಮಗೆ ತೃಪ್ತಿ ನೀಡುವ ವಿಷಯ” ಎನ್ನುತ್ತಾರೆ. ಜನರಿಗೆ ಈ ಸೇವೆ ಉಚಿತವಾಗಿ ದೊರೆಯುತ್ತಿರುವಾಗ, ಇವರಿಗೆ ಆದಾಯ ಎಲ್ಲಿಂದ ಎಂಬ ಸಂದೇಹವಲ್ಲವೇ? ಬೆಂಗಳೂರು ಮೂಲದ ಈ ಕಂಪನಿಯನ್ನು ದೇಶಾದ್ಯಂತ ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಈ ಆ್ಯಪ್ ಮೂಲಕ, ರೀಚಾರ್ಜ್ ಆ್ಯಪ್‌ಗಳಿಗೆ ತೆರಳಿದರೆ ದೊರೆಯುವ ಕಮಿಶನ್ ಹಾಗೂ ಆ್ಯಪ್‌ನಲ್ಲಿರುವ ಜಾಹೀರಾತಿನಿಂದಲೂ ಆದಾಯ ಬರುತ್ತಿದೆ ಎನ್ನುತ್ತಾರೆ ಅವರು.

ಸ್ಟಾರ್ಟಪ್ ಕಂಪನಿ ಪ್ರಾರಂಭಿಸುವುದು ಹೇಗೆ?: ನಾಸ್ಕಾಂನ 1000 ಸ್ಟಾರ್ಟಪ್ಸ್ ಯೋಜನೆ, ಗೂಗಲ್‌ನ ಲಾಂಚ್ ಪ್ಯಾಡ್ ಹಾಗೂ ಮೈಕ್ರೋಸಾಫ್ಟ್ ಕಂಪನಿಯ ವೆಂಚರ್ ಮುಂತಾದ ಪ್ರೋಗ್ರಾಂಗಳು ಮೊದಲಡಿ ಇಡಲು (ಅಂದರೆ ಸ್ಟಾರ್ಟಪ್ ಕಂಪನಿಗಳನ್ನು ತೆರೆಯಲು) ಅದ್ಭುತವಾಗಿ ಸಹಕಾರ ನೀಡುತ್ತವೆ. ಅದಮ್ಯ ಉತ್ಸಾಹ ಮತ್ತು ವಿನೂತನ ಐಡಿಯಾಗಳಿದ್ದ ಯಾರೇ ಆದರೂ ತಮ್ಮದೇ ಪುಟ್ಟ ಕಂಪನಿ ಪ್ರಾರಂಭಿಸಬಹುದು, ನಿಷ್ಠೆಯಿಂದ ದುಡಿದರೆ ಕುಳಿತಲ್ಲೇ ಸಂಪಾದಿಸಬಹುದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಮೇ 11, 2015

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s