ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್: ಯಾವುದು ಕೊಳ್ಳುವುದೆಂಬ ಗೊಂದಲವೇ?

Geek Girlsಡೆಸ್ಕ್‌ಟಾಪ್ ಬದಲು ಲ್ಯಾಪ್‌ಟಾಪ್ ಖರೀದಿಗೆ ನೀವು ಮನಸ್ಸು ಮಾಡಿದ್ದರೆ, ಹೆಚ್ಚು ಹಣ ತೆರುವ ಬದಲು ಟ್ಯಾಬ್ಲೆಟ್‌ಗಳನ್ನೇಕೆ ಕೊಳ್ಳಬಾರದು ಅಂತ ಯೋಚಿಸಿದ್ದೀರಾ? ಹಾಗಿದ್ದರೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳ ಸೌಕರ್ಯಗಳು ಮತ್ತು ಇತಿಮಿತಿಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು. ಓದಿದ ಬಳಿಕ ಟ್ಯಾಬ್ಲೆಟ್ ಖರೀದಿಸುವ ಮೂಲಕ ಹಣ ಉಳಿತಾಯ ಮಾಡಬಹುದೇ ಅಥವಾ ಲ್ಯಾಪ್‌ಟಾಪೇ ನಿಮಗೆ ಅಗತ್ಯವೇ ಎಂಬುದನ್ನು ನಿರ್ಧರಿಸಿ ಮುಂದುವರಿಯಿರಿ.

ಲ್ಯಾಪ್‌ಟಾಪ್: ತೂಕದ ಹಾಗೂ ಹೆಚ್ಚು ತಂತ್ರಾಂಶಗಳು ಅಗತ್ಯವಿರುವ ಕೆಲಸ ನಿಮ್ಮದಾಗಿದ್ದರೆ, ಇದಕ್ಕೆ ಟ್ಯಾಬ್ಲೆಟ್ ಬದಲು ಲ್ಯಾಪ್‌ಟಾಪ್ ಕೊಳ್ಳುವುದೇ ಸೂಕ್ತ. ವೀಡಿಯೋ ಎಡಿಟಿಂಗ್, ಆನಿಮೇಶನ್, ಫೋಟೋ ಎಡಿಟಿಂಗ್ ಇತ್ಯಾದಿಗಳಿಗೆಲ್ಲ ಲ್ಯಾಪ್‌ಟಾಪ್ ಸೂಕ್ತ. ಇದರಲ್ಲಿನ ವಿಶಾಲ ಕೀಬೋರ್ಡ್, ಹಲವು ಕಾರ್ಯಗಳನ್ನು ಏಕಕಾಲದಲ್ಲಿ ಮಾಡಬಹುದಾದ (ಮಲ್ಟಿಟಾಸ್ಕಿಂಗ್) ಸಾಮರ್ಥ್ಯ, ದೊಡ್ಡದಾಗಿ, ಸ್ಪಷ್ಟವಾಗಿ ಚಿತ್ರ ಮತ್ತು ವೀಡಿಯೋಗಳನ್ನು ತೋರಿಸಬಲ್ಲ ಸ್ಕ್ರೀನ್ ಗಾತ್ರ, ಮತ್ತು ಸಾಕಷ್ಟು ತಂತ್ರಾಂಶಗಳನ್ನು ಅಳವಡಿಸಿಕೊಳ್ಳಬಹುದಾದ ಅವಕಾಶಗಳು ಲ್ಯಾಪ್‌ಟಾಪ್‌ನಲ್ಲಿ ಮಾತ್ರ ಲಭ್ಯ. ಇದಲ್ಲದೆ, ಕನಿಷ್ಠ 500 ಜಿಬಿಯಷ್ಟು ಸ್ಟೋರೇಜ್ ಸಾಮರ್ಥ್ಯವು ನಮಗೆ ಬೇಕಾದ ಫೈಲ್‌ಗಳನ್ನು ಸೇವ್ ಮಾಡಿಡಲು ಅನುಕೂಲ.

ಹಾಗಿದ್ದರೆ, ಲ್ಯಾಪ್‌ಟಾಪ್ ಯಾಕೆ ಬೇಡ? ಅದರ ಗಾತ್ರ ಮತ್ತು ತೂಕ ನಿಮ್ಮ ನಿರ್ಧಾರದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಅದು ಬಿಟ್ಟರೆ, ಬ್ಯಾಟರಿ ಸಾಮರ್ಥ್ಯ. ದೊಡ್ಡದಾದ ಬ್ಯಾಟರಿ ಇದ್ದರೂ ಕೂಡ, ಒಮ್ಮೆ ಚಾರ್ಜ್ ಮಾಡಿದರೆ ಆರೇಳು ಗಂಟೆ ಮಾತ್ರವೇ ಉಪಯೋಗಕ್ಕೆ ಬರುತ್ತದೆ. ಟ್ಯಾಬ್ಲೆಟ್‌ನಲ್ಲಿರುವಂತಹಾ ವೈವಿಧ್ಯಮಯ ಆ್ಯಪ್‌ಗಳು (ಕಿರು ತಂತ್ರಾಂಶಗಳು) ದೊರೆಯುವ ಸಾಧ್ಯತೆಗಳು ಕಡಿಮೆ.

ಟ್ಯಾಬ್ಲೆಟ್ ಬಗ್ಗೆ ಹೇಳುವುದಾದರೆ, ತೂಕ ಹಾಗೂ ಗಾತ್ರ ಪ್ಲಸ್ ಪಾಯಿಂಟ್. ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಕೈಯಲ್ಲಿ ಪುಸ್ತಕದಂತೆ ಹಿಡಿದುಕೊಂಡು ಓಡಾಡಬಹುದು. ಆಂಡ್ರಾಯ್ಡ್ ಮಾತ್ರವಲ್ಲದೆ, ಐಒಎಸ್, ವಿಂಡೋಸ್ ಟ್ಯಾಬ್ಲೆಟ್‌ಗಳೂ ಇವೆ. ಜಾಸ್ತಿ ಹೊತ್ತು ಕೆಲಸ ಮಾಡಿದರೆ, ಲ್ಯಾಪ್‌ಟಾಪ್‌ನಷ್ಟು ಬಿಸಿಯಾಗುವುದಿಲ್ಲ. ವೆಬ್ ಜಾಲಾಡಲು, ಜಾಸ್ತಿ ಭಾರವಿಲ್ಲದ ಗೇಮ್ಸ್ ಆಡಲು, ಪತ್ರಿಕೆ ಅಥವಾ ಇ-ಬುಕ್‌ಗಳನ್ನು ಓದಲು, ಹಾಡು ಮತ್ತು ಚಲನಚಿತ್ರಗಳು, ವೀಡಿಯೋ ತುಣುಕುಗಳನ್ನು ಆನಂದಿಸಲು ಟ್ಯಾಬ್ಲೆಟ್ ಆಪ್ತಮಿತ್ರನಾಗಬಲ್ಲ. ಸಿಮ್ ಕಾರ್ಡ್ ಅಳವಡಿಸುವ ಟ್ಯಾಬ್ಲೆಟ್‌ಗಳಿದ್ದಲ್ಲಿ, ಇಂಟರ್ನೆಟ್ ಸಂಪರ್ಕಕ್ಕೂ ಪ್ರತ್ಯೇಕ ಡಾಂಗಲ್ ಇಟ್ಟುಕೊಳ್ಳಬೇಕಾಗಿರುವುದಿಲ್ಲ. ಸ್ಮಾರ್ಟ್ ಫೋನ್‌ನ ಕೆಲಸವೆಲ್ಲವನ್ನೂ ಟ್ಯಾಬ್ಲೆಟ್‌ನಲ್ಲೇ ಮಾಡಿ ಮುಗಿಸಬಹುದು. ಮತ್ತು ಇದರ ಅದ್ಭುತ ಬ್ಯಾಟರಿ ಕ್ಷಮತೆ ಕೂಡ ನಿಮ್ಮ ಕೆಲಸಕ್ಕೆ ಪೂರಕವಾಗಬಹುದು.

ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆಗೆ ಸರಿಸಾಟಿಯಾಗಬಲ್ಲ ಆಧುನಿಕ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳು ಟ್ಯಾಬ್ಲೆಟ್‌ಗೂ ಲಭ್ಯ. ಉದಾಹರಣೆಗೆ, 2ಜಿಬಿ RAM, 4000 mAh ಕ್ಕೂ ಮಿಗಿಲಾದ ಬ್ಯಾಟರಿ ಸಾಮರ್ಥ್ಯ, ಹೆಚ್ಚಿನ ಕೆಲಸ ಮಾಡಲು ಅನುಕೂಲವಾಗುವ ಅಕ್ಟಾ-ಕೋರ್ ಪ್ರೊಸೆಸರ್‌ಗಳು, ಆ್ಯಪ್ ಮೂಲಕ ಲ್ಯಾಪ್‌ಟಾಪ್‌ಗಿಂತಲೂ ಸುಲಭವಾಗಿ ಬಳಸಬಹುದಾದ ಕನ್ನಡ ಕೀಬೋರ್ಡ್; ಟೈಪ್ ಮಾಡಲು ಕಷ್ಟವೆಂದಾದರೆ, ಪ್ರತ್ಯೇಕ ಕೀಬೋರ್ಡ್‌ಗಳನ್ನು ಬ್ಲೂಟೂತ್ ಅಥವಾ ಯುಎಸ್‌ಬಿ ಕೇಬಲ್ ಮೂಲಕ ಸಂಪರ್ಕಿಸುವ ಆಯ್ಕೆಯೂ ಇದೆ. ತಕ್ಷಣ ಬೂಟ್ ಆಗುತ್ತದೆ, ಸ್ಟ್ಯಾಂಡ್‌ಬೈ ಇದ್ದರೂ ಸದಾ ಕಾಲ ಇಂಟರ್ನೆಟ್ ಸಂಪರ್ಕದಲ್ಲಿರಬಹುದು, ಬೆಲೆಯೂ ತೀರಾ ಕಡಿಮೆ.

ಇದಕ್ಕಾಗಿಯೇ ಈಗಿನ ಟ್ಯಾಬ್ಲೆಟ್‌ಗಳು ಟು-ಇನ್-ಒನ್ ಎಂದು ಕರೆಸಿಕೊಳ್ಳುವಂತೆ ಮಾರ್ಪಾಟು ಹೊಂದಿವೆ. ಅಂದರೆ, ಅದಕ್ಕೆ ಕೀಬೋರ್ಡ್ ಮತ್ತು ಬ್ಯಾಕ್ ಕವರ್ ಅಳವಡಿಸಿದರೆ ಲ್ಯಾಪ್‌ಟಾಪ್‌ನಂತೆಯೇ ಕಾಣಿಸಬಹುದಾಗಿದೆ. ಮಾರುಕಟ್ಟೆಯಲ್ಲೀಗ ಏಸರ್, ಲೆನೋವೋ, ಆ್ಯಸುಸ್, ನೋಷನ್ ಇಂಕ್, ಹೆಚ್‌ಪಿ, ಡೆಲ್ ಮುಂತಾದ ಪ್ರಮುಖ ಬ್ರಾಂಡೆಡ್ ಕಂಪನಿಗಳು ಈಗಾಗಲೇ ಈ ರೀತಿಯ ಟ್ಯಾಬ್ಲೆಟ್ಟೂ-ಲ್ಯಾಪ್‌ಟಾಪೂ ಆಗಿರುವಂತಹಾ ಸಾಧನಗಳನ್ನು ಪರಿಚಯಿಸಲಾರಂಭಿಸಿವೆ.

ಟ್ಯಾಬ್ಲೆಟ್‌ಗಳಲ್ಲಿ ಮತ್ತೊಂದು ಲಾಭವೆಂದರೆ, ಮೈಕ್ರೋಸಾಫ್ಟ್‌ನ ಆಫೀಸ್ 365 ಎಂಬ ಪದ ಸಂಸ್ಕಾರಕ (ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇರುವ ವರ್ಡ್ ಪ್ರೊಸೆಸರ್) ತಂತ್ರಾಂಶವು ಉಚಿತವಾಗಿ ಲಭ್ಯ. ಲ್ಯಾಪ್‌ಟಾಪ್‌ಗಳಿಗಾದರೆ ಈ ತಂತ್ರಾಂಶಕ್ಕೆ ಸಾವಿರಾರು ರೂಪಾಯಿ ತೆರಬೇಕಾಗುತ್ತದೆ. ಹೀಗಾಗಿ, ಇಮೇಲ್, ಇಂಟರ್ನೆಟ್ ಬ್ರೌಸರಿಂಗ್, ಆಡಿಯೋ-ವೀಡಿಯೋ, ಚಿತ್ರ ವೀಕ್ಷಣೆ ಇತ್ಯಾದಿ ಮಾತ್ರ ನಿಮ್ಮ ಕೆಲಸವೆಂದಾದರೆ ಟ್ಯಾಬ್ಲೆಟ್ ಅನುಕೂಲಕರ. ಇದರ ಮಿತಿಯೆಂದರೆ, ಸ್ಟೋರೇಜ್. 64 ಜಿಬಿವರೆಗೂ ಫೈಲ್‌ಗಳನ್ನು ಮೆಮೊರಿ ಕಾರ್ಡ್‌ಗಳ ಮೂಲಕ ಉಳಿಸಿಕೊಳ್ಳಬಹುದು. ಈ ಮಿತಿಗೆ ಸುಲಭ ಪರಿಹಾರವೆಂದರೆ ಪೋರ್ಟೆಬಲ್ ಬಾಹ್ಯ ಹಾರ್ಡ್‌ಡ್ರೈವ್‌ಗಳು. 1 ಟಿಬಿ ಸಾಮರ್ಥ್ಯದ ಸ್ಟೋರೇಜ್ ಡ್ರೈವ್‌ಗಳು ಮೂರರಿಂದ ಐದು ಸಾವಿರ ರೂ.ಗೆ ಲಭ್ಯ ಇವೆ.
ಆಯ್ಕೆ ನಿಮಗೆ ಬಿಟ್ಟದ್ದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಮಾರ್ಚ್ 23, 2015]

4 thoughts on “ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್: ಯಾವುದು ಕೊಳ್ಳುವುದೆಂಬ ಗೊಂದಲವೇ?

  1. ಕಡಿಮೆ ಬಜೆಟ್ಟಿನಲ್ಲಿ ಟ್ಯಾಬ್ಲೆಟ್‍ ಹೆಸರು ಹೇಳಿ ಸರ್. ತುಗೊಂಡು ಬಿಡ್ತಿನಿ. ಇಷ್ಟೆಲ್ಲ ಆಪ್ಸನ್ ಇದ್ರೆ ಮತ್ಯಾಕೆ ಲ್ಯಾಪಟಾಪ್‍ನಲ್ಲೆ ಓದ್ದಾಡೋದು..

    Like

    • 15 ಸಾವಿರ ಆಸುಪಾಸು ಹೋಗೋದಿದ್ದರೆ, ಲ್ಯಾಪ್‌ಟ್ಯಾಬ್ ತಗೋಬೌದು (ಲ್ಯಾಪ್‌ಟಾಪ್ ಕಮ್ ಟ್ಯಾಬ್ಲೆಟ್). HP, Lenovo, Asus ಇವೆ. 8 ಸಾವಿರದ ಲೆನೊವೋ ಎ70 ಇದೆ

      Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s