ಮೊಬೈಲ್‌ನಲ್ಲಿ ಸಂದೇಶ ಕಳುಹಿಸಲು ಗೂಗಲ್ ಕನ್ನಡ ಕೀಬೋರ್ಡ್

ವಿಜಯ ಕರ್ನಾಟಕ ಸಂಡೇ ಸಮಾಚಾರ ಅಕ್ಟೋಬರ್ 19, 2014

ಬೆಂಗಳೂರು: ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಟೈಪ್ ಮಾಡುವುದು ಮಾತೃ ಭಾಷಾ ಪ್ರಿಯರ ಬಹುಕಾಲದ ಬಯಕೆ. ಆಂಡ್ರಾಯ್ಡ್ ಬಳಕೆದಾರರು ಕೆಲವರು Google Keyboard2.jpgಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಹಲವಾರು ಕೀಬೋರ್ಡ್ ಅಪ್ಲಿಕೇಶನ್‌ಗಳನ್ನು (ಆ್ಯಪ್) ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಮಾತೃಭಾಷೆಯಲ್ಲಿ ಸಂವಹನ ನಡೆಸುವ ಹೆಬ್ಬಯಕೆಯನ್ನು ತಣಿಸಿಕೊಂಡರೆ, ಗೊತ್ತಿಲ್ಲದಿದ್ದವರು ಕನ್ನಡದಲ್ಲೇ ಸಂದೇಶ ಬಂದಿರುವುದನ್ನು ನೋಡಿಯಷ್ಟೇ ಆನಂದಿಸುತ್ತಿದ್ದರು. ಭಾಷಾ ಬಳಕೆದಾರರ ಈ ತ್ರಾಸದ ಬಗ್ಗೆ ಕೊನೆಗೂ ಕಣ್ಣು ಬಿಟ್ಟು, ಪ್ರಾದೇಶಿಕ ಭಾಷೆಗಳ ಮಹತ್ವವನ್ನು ಅರಿತುಕೊಂಡಿರುವ ಗೂಗಲ್, ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಡೀಫಾಲ್ಟ್ ಆಗಿ (ಅಳವಡಿಸಿಯೇ) ಬರುವ ಕೀಬೋರ್ಡ್ ಆ್ಯಪ್‌ಗೆ ಮತ್ತಷ್ಟು ಸುಧಾರಣೆ ತಂದು, ಕನ್ನಡವನ್ನೂ ಅಳವಡಿಸಿದೆ.

ಇದುವರೆಗೆ ಗೂಗಲ್ ಕೀಬೋರ್ಡ್‌ನಲ್ಲಿ ಹಿಂದಿ ಮತ್ತು ಹಲವು ವಿದೇಶೀ ಭಾಷೆಗಳ ಕೀಬೋರ್ಡ್‌ಗಳಿದ್ದವಷ್ಟೆ. ಈಗ ಬರಲಿರುವ 3.2 ಆವೃತ್ತಿಯ ಕೀಬೋರ್ಡ್‌ನಲ್ಲಿ, ಹೊಸದಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ, ತೆಲುಗು ಭಾಷೆಗಳನ್ನೂ ಸೇರಿಸಲಾಗಿದೆ. ಇದನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕಿಲ್ಲ. ಇಂಟರ್ನೆಟ್ ಸಂಪರ್ಕವಿದ್ದಾಗ, ಕೀಬೋರ್ಡ್‌ನ ಹೊಸ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳುವಂತೆ ನಿಮ್ಮ ಸ್ಮಾರ್ಟ್‌ಫೋನೇ ಕೇಳುತ್ತದೆ. ಆದರೆ, ಭಾರತೀಯ ಬಳಕೆದಾರರಿಗಿನ್ನೂ ಬಿಡುಗಡೆಯಾಗಬೇಕಷ್ಟೆ. ಬೇರೆ ರಾಷ್ಟ್ರಗಳ ಭಾಷೆಗಳ ಕೀಬೋರ್ಡುಗಳನ್ನೂ ಅಳವಡಿಸಲಾಗಿದ್ದು, ಭಾರತದ ಬಳಕೆದಾರರಿಗೆ ನಿಧಾನವಾಗಿ ಅಪ್‌ಡೇಟ್ ಆಗಲಿದೆ. ಅಪ್‌ಡೇಟ್ ಯಾವಾಗ ಬರುತ್ತದೆಯೆಂದು ಕಾದು ನೋಡಿ. ಕಾಯುವುದು ಇಷ್ಟವಿಲ್ಲವೇ? ಹೀಗೆ ಮಾಡಿ: “http://bit.ly/VKGoogle” ಲಿಂಕ್ ಕ್ಲಿಕ್ ಮಾಡಿ, Download ಎಂದು ಬರೆದಿರುವ ಲಿಂಕ್ ಕ್ಲಿಕ್ ಮಾಡಿ ಕೀಬೋರ್ಡ್‌ನ ಎಪಿಕೆ ಫೈಲನ್ನು ಡೌನ್‌ಲೋಡ್ ಮಾಡಿಕೊಳ್ಳಿ. ತೀರಾ ಸುಲಭದ ಕೆಲಸವಿದು.

ಹೇಗೆ ಇನ್‌ಸ್ಟಾಲ್ ಮಾಡಿಕೊಳ್ಳುವುದು:
ಸುಮಾರು 19 ಎಂಬಿ ಗಾತ್ರದ APK (ಅಪ್ಲಿಕೇಶನ್ ಪ್ಯಾಕೇಜ್) ಫೈಲ್ ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಆಗುತ್ತದೆ. ಬಳಿಕ Settings > Security > Unknown Sources ಎಂಬಲ್ಲಿರುವ ಚೆಕ್ ಬಾಕ್ಸ್‌ಗೆ ಟಿಕ್ ಗುರುತು ಹಾಕಿ (ಇದು ಗೂಗಲ್ ಪ್ಲೇ ಸ್ಟೋರ್ ಹೊರತಾಗಿ ಅಪರಿಚಿತ ಮೂಲಗಳಿಂದ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಲು, ಅಪ್ಪಿ ತಪ್ಪಿ ಬೇರೆ ಮೂಲದಿಂದ ಇನ್‌ಸ್ಟಾಲ್ ಮಾಡಿಕೊಳ್ಳದಂತೆ ಭದ್ರತೆಗಾಗಿ ಇರುವ ಆಯ್ಕೆ). ಇನ್‌ಸ್ಟಾಲ್ ಮಾಡಿದ ಬಳಿಕ ಇದರ ಚೆಕ್ ಗುರುತು ತೆಗೆಯಲು ಮರೆಯಬೇಡಿ.

ಇದಾದ ನಂತರ, ನಿಮ್ಮಲ್ಲಿರುವ ಡೌನ್‌ಲೋಡ್ ಫೋಲ್ಡರ್‌ನಲ್ಲಿರುವ ಎಪಿಕೆ ಫೈಲನ್ನು ಕ್ಲಿಕ್ ಮಾಡಿದಾಗ, ಅದು ನಿಮ್ಮ ಕೀಬೋರ್ಡ್‌ಗೆ ಅಪ್‌ಡೇಟ್ ಮಾಡಬೇಕೇ ಎಂದು ಅನುಮತಿ ಕೇಳುತ್ತದೆ. ಅನುಮತಿ ಕೊಟ್ಟ ತಕ್ಷಣ ಇನ್‌ಸ್ಟಾಲ್ ಆಗುತ್ತದೆ.

ಇನ್‌ಸ್ಟಾಲ್ ಮಾಡಿದ ಬಳಿಕ ಕನ್ನಡ ಕೀಬೋರ್ಡ್ ಹೀಗೆ ಸಕ್ರಿಯಗೊಳಿಸಿ:
Settings > Langugage & Input ಎಂಬಲ್ಲಿಗೆ ಹೋಗಿ. ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ Default ಎಂಬಲ್ಲಿ, English (India) – Google keyboard ಎಂದಿರುತ್ತದೆ (ಇಲ್ಲದಿದ್ದರೆ ಅದನ್ನೇ ಆಯ್ಕೆ ಮಾಡಿಕೊಳ್ಳಿ). ಬಳಿಕ ಅದರ ಬಲಭಾಗದಲ್ಲಿರುವ ಸೆಟ್ಟಿಂಗ್ಸ್ ಬಟನ್ ಮೇಲೆ ಬೆರಳಿನಿಂದ ಒತ್ತಿ. ಮೇಲ್ಭಾಗದಲ್ಲಿ Languages ಎಂದಿರುತ್ತದೆ. ಅದನ್ನು ಪ್ರೆಸ್ ಮಾಡಿ. ಅಲ್ಲಿ English ಎಂಬ ಬಾಕ್ಸ್‌ಗೆ ಟಿಕ್ ಗುರುತು ಇರುತ್ತದೆ. ಅದೂ ಇರಲಿ, ಕೆಳಗೆ ಕನ್ನಡ ಎಂಬುದನ್ನು ಹುಡುಕಿ, ಅದರೆದುರಿಗಿರುವ ಚೆಕ್ ಬಾಕ್ಸ್‌ಗೂ ಟಿಕ್ ಗುರುತು ಹಾಕಿ. ಅಷ್ಟೆ, ವಾಪಸ್ ಬಂದರೆ ಆಯಿತು.

ಈಗ ಯಾವುದೇ ಸಂದೇಶ (ಎಸ್‌ಎಂಎಸ್, ಫೇಸ್‌ಬುಕ್ ಸಂದೇಶ) ಬರೆಯಲು ಹೊರಟಾಗ, ಕೀಬೋರ್ಡ್ ಕಾಣಿಸುತ್ತದೆಯಲ್ಲವೇ? ಅದರಲ್ಲಿ ಸ್ಪೇಸ್ ಬಾರ್‌ನ ಎಡಭಾಗದಲ್ಲಿ ಭೂಗೋಳದ ಚಿತ್ರದ ಕೀಯನ್ನು ಸ್ಪರ್ಶಿಸಿದರೆ ಕನ್ನಡ, ಅದನ್ನೇ ಮತ್ತೊಮ್ಮೆ ಒತ್ತಿದರೆ ಇಂಗ್ಲಿಷ್‌ನಲ್ಲಿ ಟೈಪ್ ಮಾಡಬಹುದು. ಇದು ಇನ್‌ಸ್ಕ್ರಿಪ್ಟ್ ಎಂಬ ಕೀಬೋರ್ಡ್ ಶೈಲಿಯಲ್ಲಿ ಟೈಪ್ ಮಾಡುವವರಿಗೆ ತುಂಬಾ ಅನುಕೂಲ. ಉಳಿದವರಿಗೂ ಕಲಿತುಕೊಳ್ಳಲು ಸುಲಭ. ಒಂದೇ ಸ್ಕ್ರೀನ್‌ನಲ್ಲಿ ಎಲ್ಲ ಸ್ವರದ ಗುಣಿತಾಕ್ಷರಗಳು, ವ್ಯಂಜನಾಕ್ಷರಗಳು ಕಾಣಿಸುತ್ತವೆ. ಮಹಾಪ್ರಾಣಾಕ್ಷರಗಳು ಮತ್ತು ಸ್ವರಾಕ್ಷರಗಳು ಬೇಕಿದ್ದರೆ, ಆಯಾ ಕೀಲಿಯನ್ನು ಒತ್ತಿ ಹಿಡಿದುಕೊಂಡಾಗ ಅದಕ್ಕೆ ಸಂಬಂಧವಿರುವ ಉಳಿದ ಅಕ್ಷರಗಳೂ ಗೋಚರಿಸುತ್ತವೆ. ಅದೇ ರೀತಿ ಮೇಲಿನ ಸಾಲಿನ ಅಕ್ಷರಗಳಲ್ಲಿ ಕನ್ನಡ ಅಂಕಿಗಳನ್ನೂ ಮೂಡಿಸಬಹುದು. ಟ್ರೈ ಮಾಡಿ ನೋಡಿ. ಇನ್ನು (ಆಂಡ್ರಾಯ್ಡ್) ಮೊಬೈಲ್‌ಗಳಲ್ಲಿ ಕನ್ನಡದಲ್ಲಿ ಟೈಪ್ ಮಾಡಲಾಗುವುದಿಲ್ಲ ಅಂತ ಹೇಳೋ ಹಾಗೆ ಇಲ್ಲ!

ಟ್ವೀಟ್‌ನಿಂದಲೇ ಸಂಗೀತ ಕೇಳಿ
ಕಿರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆಡಿಯೋ ಫೈಲ್‌ಗಳನ್ನು ಸಾಕಷ್ಟು ಮಂದಿ ಸಂಗೀತಗಾರರು, ಸುದ್ದಿ ತಾಣಗಳು ಮತ್ತು ಕೆಲವು ರೇಡಿಯೋ ವಾಹಿನಿಗಳು ಹಂಚಿಕೊಳ್ಳುತ್ತಿರುತ್ತವೆ. ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿಯ ಪಾಡ್‌ಕಾಸ್ಟ್‌ಗಳು, ಸಂಗೀತ, ಭಾಷಣ ಇತ್ಯಾದಿಗಳನ್ನು ಇದುವರೆಗೆ, ಟ್ವಿಟರ್ ಆ್ಯಪ್‌ನಿಂದ ಹೊರಬಂದು, ಸಿಸ್ಟಂನ ಆಡಿಯೋ ಪ್ಲೇಯರ್ ಆಯ್ಕೆ ಮಾಡುವ ಮೂಲಕ ಕೇಳಬೇಕಾಗುತ್ತಿತ್ತು. ಈಗ ಟ್ವಿಟರ್ ಆಡಿಯೋ ಕಾರ್ಡ್ ಎಂಬ ಹೊಸ ವ್ಯವಸ್ಥೆಯ ಮೂಲಕ, ನಿಮ್ಮ ಟ್ವಿಟರ್ ಫೀಡ್‌ನಿಂದಲೇ ಆಡಿಯೋ ಫೈಲುಗಳನ್ನು ಒಂದು ಸಲ ಬೆರಳಿನಿಂದ ತಟ್ಟುವ ಮೂಲಕ ಆಲಿಸಬಹುದಾಗಿದೆ. ಪ್ರಸ್ತುತ ಇದು ಆಂಡ್ರಾಯ್ಡ್ ಹಾಗೂ ಆ್ಯಪಲ್ ಸಾಧನಗಳ ಟ್ವಿಟರ್‌ನ ಅಧಿಕೃತ ಆ್ಯಪ್ ಮೂಲಕ ಲಭ್ಯವಿದೆ.

ಫಾಲೋ ಮಾಡದಿದ್ರೂ ಟ್ವೀಟ್ಸ್
ಇನ್ನೂ ಒಂದು ಸುದ್ದಿಯಿದೆ. ಟ್ವಿಟರ್‌ನಲ್ಲಿ ನೀವು ಫಾಲೋ ಮಾಡದೇ ಇರುವವರ ಟ್ವೀಟ್‌ಗಳೂ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಲ್ಲವು. ನಿಮ್ಮ ಸ್ನೇಹಿತರ ಟ್ವೀಟ್ಸ್, ನೀವು ಫೇವರಿಟ್ ಅಥವಾ ರೀಟ್ವೀಟ್ ಮಾಡಿದ ಟ್ವೀಟ್‌ಗಳು, ನಿಮ್ಮ ಚಟುವಟಿಕೆ ಆಧರಿಸಿ, ಆ ವಿಷಯಕ್ಕೆ ಸಂಬಂಧಿಸಿದ ಟ್ವೀಟ್‌ಗಳನ್ನು ಸ್ವತಃ ಟ್ವಿಟರ್ ಹುಡುಕಿ, ನಮ್ಮ ಟೈಮ್‌ಲೈನ್‌ನಲ್ಲಿ ತೋರಿಸುತ್ತದೆ. ಎಲ್ಲರನ್ನೂ ಫಾಲೋ ಮಾಡಬೇಕಿಲ್ಲ, ನಮ್ಮ ಆಸಕ್ತಿ ಆಧರಿಸಿದ ಟ್ವೀಟ್‌ಗಳು ನಮ್ಮ ಟೈಮ್‌ಲೈನ್‌ನಲ್ಲಿನ್ನು ಕಾಣಿಸಿಕೊಳ್ಳಲಿವೆ. ಈ ಕುರಿತು ಟ್ವಿಟರ್ ತನ್ನ ಬ್ಲಾಗ್‌ನಲ್ಲಿ ಮಾಹಿತಿ ನೀಡಿದೆ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s