2ಜಿಯಲ್ಲೂ ಉಚಿತ ಕರೆ ಮಾಡಲು ಬಂದಿದೆ ‘ನಾನು’

ಮಾಹಿತಿ@ತಂತ್ರಜ್ಞಾನ ಅಂಕಣ – 88, ವಿಜಯ ಕರ್ನಾಟಕ, ಆಗಸ್ಟ್ 11, 2014

Avinash Column-1ವಾಟ್ಸ್ಆ್ಯಪ್, ಫೇಸ್‌ಬುಕ್ ಮೆಸೆಂಜರ್, ಲೈನ್, ಸ್ಕೈಪ್, ವಿ-ಚಾಟ್, ಲೈನ್, ಟೆಲಿಗ್ರಾಂ ಮುಂತಾದ ಉಚಿತವಾಗಿ ಸಂದೇಶ ಕಳುಹಿಸಬಹುದಾದ ಹಾಗೂ ಕರೆ ಮಾಡಬಹುದಾದ ಆ್ಯಪ್‌ಗಳಿಗೆ ಸೇವಾ ತೆರಿಗೆ ವಿಧಿಸಬೇಕು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಕಳೆದ ವಾರ ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಉಚಿತ ಆ್ಯಪ್‌ಗಳ ಭರಾಟೆಯಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಎಸ್ಎಂಎಸ್ ಆದಾಯ ಕುಸಿತವಾದದ್ದಂತೂ ಸತ್ಯ. ವೈಬರ್‌ನಂತಹಾ ಕೆಲವು ಆ್ಯಪ್‌ಗಳಂತೂ ಅಂತಾರಾಷ್ಟ್ರೀಯ ಕರೆಗಳನ್ನೂ ಉಚಿತವಾಗಿ ಮಾಡಲು (3ಜಿ ಇಂಟರ್ನೆಟ್ ಸಂಪರ್ಕ ಅತ್ಯಗತ್ಯ) ಅವಕಾಶ ಮಾಡಿಕೊಡುವುದರಿಂದ ಟೆಲಿಕಾಂ ಕಂಪನಿಗಳ ಆದಾಯಕ್ಕೆ ಬಲುದೊಡ್ಡ ಹೊಡೆತ ಬಿದ್ದಿದೆ. ಆದರೆ, ಕರೆ ಮಾಡಲು ಅವಕಾಶ ಮಾಡಿಕೊಡುವ ವೈಬರ್, ಸ್ಕೈಪ್ ಮುಂತಾದ ಆ್ಯಪ್‌ಗಳಿಗೆ 3ಜಿ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ನಮ್ಮಲ್ಲಿ ಹೆಚ್ಚಿನೆಡೆ ಸಿಗ್ನಲ್ ಸಮಸ್ಯೆಯಿರುವುದರಿಂದ ಯಾವಾಗಲೂ 3ಜಿ ಸಂಪರ್ಕ ಸಿಗುವುದು ಕಷ್ಟ. ಹೀಗಾಗಿ 2ಜಿ ನೆಟ್‌ವರ್ಕೇ ಗತಿ.

ಈ ರೀತಿ 2ಜಿ ಸಂಪರ್ಕದಲ್ಲಿ ಕೂಡ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡುವ ಹೊಸದೊಂದು ಆ್ಯಪ್ ಬಂದಿದೆ. ಇದರ ಹೆಸರು ‘ನಾನು’ (nanu). ಬೇರೆಯವರು nanu ಆ್ಯಪ್ ಹೊಂದಿರದಿದ್ದರೆ ಕೂಡ ಮಾತ್ರವೇ ಅಲ್ಲದೆ ಯಾವುದೇ ಲ್ಯಾಂಡ್‌ಲೈನ್ ಫೋನ್‌ಗೂ ಈ ಆ್ಯಪ್ ಮೂಲಕ ಉಚಿತವಾಗಿ ಕರೆ ಮಾಡಬಹುದು. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇಂಟರ್ನೆಟ್ ಸಂಪರ್ಕವಿದ್ದರೆ ಸಾಕು. ನಿಮ್ಮ ಸ್ನೇಹಿತರ ಫೋನ್‌ನಲ್ಲಿಯೂ ಇಂಟರ್ನೆಟ್ ಸಂಪರ್ಕ ಹಾಗೂ nanu ಆ್ಯಪ್ ಇದ್ದರೆ, ಅವರೊಂದಿಗೆ ಎಷ್ಟು ಬೇಕಾದರೂ ಮಾತನಾಡಬಹುದು. ಸದ್ಯಕ್ಕೆ nanu ಆ್ಯಪ್ ಇಲ್ಲದವರೊಂದಿಗೆ ಮಾತನಾಡಲು ಮಿತಿ ಹೇರಲಾಗಿದೆ. ಅಂದರೆ 15 ನಿಮಿಷ ಮಾತ್ರ ಮಾತನಾಡಬಹುದು. ಬಳಕೆದಾರರ ಸಂಖ್ಯೆ ಹೆಚ್ಚಾದಂತೆ nanu ಇಲ್ಲದವರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಹೆಚ್ಚಿಸುವುದಾಗಿ ಸಿಂಗಾಪುರ ಮೂಲದ ಜೆಂಟೇ ಕಮ್ಯುನಿಕೇಶನ್ಸ್ ಸಂಸ್ಥೆ ಹೇಳಿಕೊಂಡಿದೆ.

2ಜಿ ನೆಟ್‌ವರ್ಕ್‌ನಲ್ಲಿಯೂ ಸ್ಪಷ್ಟ ಕರೆಗಳನ್ನು ಮಾಡಲು ಈ ಆ್ಯಪ್ ರೂಪಿಸಲಾಗಿದೆ. ರೋಮಿಂಗ್‌ನಲ್ಲಿರುವಾಗ (ನಿಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಹೋಗುವಾಗ) ಇದು ಹೆಚ್ಚು ಅನುಕೂಲ. ಬೇರೆಲ್ಲಾ ಇಂಟರ್ನೆಟ್ ಕರೆ ಮಾಡುವ ಆ್ಯಪ್‌ಗಳಂತೆಯೇ ‘ನಾನು’ ಮೂಲಕ ಕರೆ ಮಾಡಿದರೆ ಕೂಡ ರೋಮಿಂಗ್ ಚಾರ್ಜ್ ಅನ್ವಯವಾಗುವುದಿಲ್ಲ. ಯಾಕೆಂದರೆ ಈ ಕರೆ ಟೆಲಿಕಾಂ ಆಪರೇಟರ್ ಮೂಲಕ ಹೋಗುವುದಿಲ್ಲ, ಬದಲಾಗಿ ಇಂಟರ್ನೆಟ್ ಮೂಲಕವಾಗಿ ಕರೆ ಮಾಡಲಾಗುತ್ತದೆ.

ನೀವು ಕರೆ ಮಾಡಿದಾಗ, ಆ ಕಡೆಯವರು ಉತ್ತರಿಸುವವರೆಗೆ ಅವರ ಕಾಲರ್ ಟ್ಯೂನ್ ಬದಲಾಗಿ ಜಾಹೀರಾತು ಕೇಳಿಸುತ್ತದೆ. ಸ್ಕ್ರೀನ್ ಮೇಲೂ ಜಾಹೀರಾತು ಲಿಂಕ್ ಇರುತ್ತದೆ. ಅದರಿಂದ ಬರುವ ಆದಾಯವೇ ಈ ಕಂಪನಿಗೆ ಲಾಭ. Nanu-Nanu ಕರೆ ಉಚಿತವಾಗಿದ್ದು, nanu ಇಲ್ಲದವರ ಮೊಬೈಲಿಗೆ ಕರೆ ಮಾಡಿದರೆ, ಸದ್ಯಕ್ಕೆ 15 ನಿಮಿಷ ಮಾತ್ರ ಮಾತನಾಡಬಹುದು. ಅದು ಕೂಡ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೊದಲ 10 ಲಕ್ಷ ಬಳಕೆದಾರರಿಗೆ ಮಾತ್ರ ಎಂದಿದೆ ಕಂಪನಿ. ಉಚಿತ ಸಂದೇಶ ಸೇವೆಯೂ ಶೀಘ್ರದಲ್ಲೇ ಲಭ್ಯವಾಗಲಿದೆ. ಜಾಸ್ತಿ ಜನ ಇದನ್ನು ಬಳಸಲಾರಂಭಿಸಿದಷ್ಟೂ ಉಚಿತ ಸೇವೆಯನ್ನು ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತ, ಹಂಗೆರಿ, ಜರ್ಮನಿ, ಐರ್ಲೆಂಡ್, ಇಸ್ರೇಲ್, ಸಿಂಗಾಪುರ, ಸ್ಪೇನ್, ಥಾಯ್ಲೆಂಡ್, ಅಮೆರಿಕ, ಯುಕೆ ಸೇರಿದಂತೆ 41 ದೇಶಗಳಲ್ಲಿ ಉಚಿತ ಕರೆಗೆ nanu ಅವಕಾಶ ಮಾಡಿಕೊಡುತ್ತದೆ. ಪ್ರಸ್ತುತ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅನ್‌ಲಿಮಿಟೆಡ್ ಡೇಟಾ (ಇಂಟರ್ನೆಟ್) ಪ್ಯಾಕ್ ಇದ್ದವರಿಗೆ ಸಮಸ್ಯೆಯಿಲ್ಲ. ಉಳಿದವರಿಗಾದರೆ, ಹತ್ತು ನಿಮಿಷ ಕರೆ ಮಾಡಿದಿರೆಂದಾದರೆ, 1 ಎಂಬಿ ಡೇಟಾ ಖರ್ಚಾಗುತ್ತದೆ. ಅಂದರೆ 1 ಜಿಬಿ ಡೇಟಾ ಪ್ಲ್ಯಾನ್ ಇದ್ದಲ್ಲಿ, ಬರೇ ‘ನಾನು’ ಉಪಯೋಗಿಸಿದಲ್ಲಿ 10 ಸಾವಿರ ನಿಮಿಷ ಮಾತನಾಡಬಹುದು.

ಪ್ಲೇ ಸ್ಟೋರ್‌ನಲ್ಲಿ nanu ಅಂತ ಹುಡುಕಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಯಾವುದೇ nanu ಸದಸ್ಯರಿಗೆ ಕರೆ ಮಾಡಬೇಕಿದ್ದರೆ ಪ್ಲಸ್ (+) ಹಾಗೂ ಕೋಡ್ (ಉದಾ: ಭಾರತದಲ್ಲಾದರೆ +91) ಹಾಕಿದ ಮೇಲೆ ಮೊಬೈಲ್ ನಂಬರ್ ಟೈಪ್ ಮಾಡಿ ಕರೆ ಬಟನ್ ಒತ್ತಬೇಕು. ಲ್ಯಾಂಡ್‌ಲೈನ್ ದೂರವಾಣಿಗೆ ಮಾಡಬೇಕಿದ್ದರೆ ಪ್ಲಸ್ (+) ಚಿಹ್ನೆ, ದೇಶದ ಕೋಡ್ (ಭಾರತ 91) ಹಾಗೂ ಏರಿಯಾ ಕೋಡ್ ನಮೂದಿಸಬೇಕು.

ಟೆಕ್ ಟಾನಿಕ್
ಫೇಸ್‌ಬುಕ್ ವೈರಸ್: ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ನ ಬಣ್ಣ ಬದಲಾಯಿಸಿ ಅಂತ ಕೆಲವೊಂದು ಸೂಚನೆಗಳು ಬರುತ್ತಿರುತ್ತವೆ. ಅದನ್ನು ಕ್ಲಿಕ್ ಮಾಡಲು ನೋಡಿದ್ದೀರಾ? ಅದು ಬೇರೇನೂ ಅಲ್ಲ, ಮಾಲ್‌ವೇರ್! ಹಿಂದಿನಿಂದಲೂ ಈ ವೈರಸ್ ಇತ್ತಾದರೂ, ಅದಕ್ಕೆ ಫೇಸ್‌ಬುಕ್ ಪರಿಹಾರ ಕಲ್ಪಿಸಿತ್ತು. ಆದರೆ ಈಗ, ಮತ್ತೆ ಕಾಣಿಸಿಕೊಂಡಿದೆಯಂತೆ. ಅದು ಟ್ಯುಟೋರಿಯಲ್ ವೀಡಿಯೋ ವೀಕ್ಷಿಸಲು ಪ್ರೇರೇಪಿಸುತ್ತದೆ. ಅದನ್ನು ನೋಡುತ್ತಿರುವಾಗ ನಿಮ್ಮ ಸ್ನೇಹಿತರ ಖಾತೆಗೆ ಸಂಪರ್ಕಿಸುತ್ತದೆ ಈ ವೈರಸ್. ವೀಡಿಯೋ ನೋಡದಿದ್ದರೆ, “ವೈರಸ್ ದಾಳಿ ಆಗಿದೆ, ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸರಿಪಡಿಸಿಕೊಳ್ಳಿ” ಅಂತ ಹೇಳುವ ಮೂಲಕ ಆ್ಯಪ್ ಡೌನ್‌ಲೋಡ್ ಮಾಡುವಂತೆ ಪ್ರೇರೇಪಿಸುತ್ತದೆ. ಈಗಾಗಲೇ ಅದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೆ, ಅನ್‌ಇನ್‌ಸ್ಟಾಲ್ ಮಾಡಿ, ತಕ್ಷಣ ಫೇಸ್‌ಬುಕ್ ಪಾಸ್‌ವರ್ಡ್ ಬದಲಿಸಿ.

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s