ಆಂಡ್ರಾಯ್ಡ್‌ನಲ್ಲಿ ಗೂಗಲ್ ಆಪ್ತ ಸಹಾಯಕನನ್ನು ಟ್ರೈ ಮಾಡಿ…

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-86, ಜುಲೈ 28, 2014

Avinash Column-1ಇತ್ತೀಚೆಗೆ ಗೂಗಲ್ ಕಂಪನಿಯು ತನ್ನ ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಭವಿಷ್ಯದ ಹಲವಾರು ಯೋಜನೆಗಳನ್ನು ಜನರ ಮುಂದಿಟ್ಟಿತ್ತು. ಸ್ಮಾರ್ಟ್‌ಫೋನ್‌ಗಳ ಜನಪ್ರಿಯ ಕಾರ್ಯಾಚರಣಾ ವ್ಯವಸ್ಥೆಯಾಗಿರುವ ಆಂಡ್ರಾಯ್ಡ್‌ನ ಅತ್ಯಾಧುನಿಕ ಆವೃತ್ತಿ 5.0 (ಎಲ್‌ನಿಂದ ಆರಂಭವಾಗುವ ಹೆಸರು ಹೊಂದಲಿದೆ) ಹೇಗಿರುತ್ತದೆ ಎಂಬ ಕುರಿತ ಮುನ್ನೋಟವನ್ನೂ ಅದು ನೀಡಿತ್ತು.

ಇದಲ್ಲದೆ ಆಂಡ್ರಾಯ್ಡ್ ಒನ್ ಕಾರ್ಯಾಚರಣಾ ವ್ಯವಸ್ಥೆಯನ್ನು ಅಗ್ಗದ ಸ್ಮಾರ್ಟ್‌ಫೋನ್ ತಯಾರಕರಿಗೆ ಒದಗಿಸಲಾಗುತ್ತದೆ ಎಂದಿತ್ತಲ್ಲದೆ ಸ್ಮಾರ್ಟ್‌ವಾಚ್, ಸ್ಮಾರ್ಟ್ ಟಿವಿ ಹಾಗೂ ಸ್ಮಾರ್ಟ್ ಕಾರುಗಳ ಕನಸನ್ನೂ ತೆರೆದಿಟ್ಟಿತ್ತು. ಇದರ ನಡುವೆಯೇ, ಸ್ಮಾರ್ಟ್‌ಫೋನ್‌ನಲ್ಲಿ ನಮ್ಮೆಲ್ಲರಿಗೂ ಆಪ್ತ ಸಹಾಯಕನಂ(ಳಂ)ತೆ ಕೆಲಸ ಮಾಡಬಲ್ಲ ಗೂಗಲ್ ನೌ ತಂತ್ರಾಂಶವೀಗ ಭಾರತೀಯ ಉಚ್ಚಾರಣೆಯನ್ನೂ ಬೆಂಬಲಿಸುತ್ತದೆ ಎಂದು ಕೂಡ ಘೋಷಿಸಿತ್ತು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಸರ್ಚ್ ಎಂಬ ವ್ಯವಸ್ಥೆಯ ಸುಧಾರಿತ ಆವೃತ್ತಿಯೊಂದಿಗೆ ಮಿಳಿತವಾಗಿರುವ ಈ ವಿನೂತನ ತಂತ್ರಾಂಶವು ಈಗಾಗಲೇ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಬಿಡುಗಡೆಯಾಗಿದೆ. ಈ ಅಪ್ಲಿಕೇಶನ್ (ಆ್ಯಪ್) ಅನ್ನು ಅಪ್‌ಡೇಟ್ ಮಾಡಿಕೊಂಡ ಬಳಿಕ ಅದರ ಪೂರ್ಣ ಪ್ರಯೋಜನ ನಮಗೆ ಲಭಿಸಲಿದೆ.

ಗೂಗಲ್ ನೌ ಬಹುಮುಖ್ಯ ಕೆಲಸವೆಂದರೆ, ನಾವು ಹೇಳಿದ್ದನ್ನು ಕೇಳಿಸಿಕೊಳ್ಳುತ್ತದೆ ಮತ್ತು ತತ್ಸಂಬಂಧೀ ಕೆಲಸವನ್ನು ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಇದು ನಮಗೊಬ್ಬ ಸಹಾಯಕನಿದ್ದಂತೆ. ನಮ್ಮ ಸ್ಮಾರ್ಟ್‌ಫೋನ್‌ನ ಹೋಂ ಸ್ಕ್ರೀನ್‌ನಲ್ಲಿರುವ ಮೈಕ್ ಬಟನ್ ಅದುಮಿದ ಬಳಿಕ ಅಥವಾ ‘ಓಕೆ ಗೂಗಲ್’ ಅಂತ ಹೇಳಿದಾಗ, ‘ಸ್ಪೀಕ್ ನೌ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಆಗ “ಕಾಲ್ ಅವಿನಾಶ್ ಮೊಬೈಲ್” ಅಂತ ಹೇಳಿದರೆ, ಅದು ನಿಮ್ಮ ಕಾಂಟಾಕ್ಟ್ಸ್ ಪಟ್ಟಿಯಲ್ಲಿ ಸೇವ್ ಆಗಿರುವ ಅವಿನಾಶ್ ಹೆಸರಿನ ವ್ಯಕ್ತಿಯ ಮೊಬೈಲ್‌ಗೆ ಸ್ವಯಂಚಾಲಿತವಾಗಿ ಕರೆ ಮಾಡುತ್ತದೆ; ಹಲವು ಮಂದಿ ಅವಿನಾಶ್‌ಗಳು ನಿಮ್ಮ ಪಟ್ಟಿಯಲ್ಲಿದ್ದರೆ, ಯಾವ ಅವಿನಾಶ್‌ಗೆ ಕರೆ ಮಾಡಬೇಕು ಅಂತ ಅದು ಧ್ವನಿಯ ಮೂಲಕವೇ ನಿಮ್ಮನ್ನು ಕೇಳುತ್ತದೆ. ‘ಗೆಟ್ ಮಿ ಸಮ್ ಜೋಕ್ಸ್’ ಅಂತ ಹೇಳಿದರೆ, ಇಂಟರ್ನೆಟ್ ಸರ್ಚ್ ಮಾಡಿ, ಜೋಕ್‌ಗಳನ್ನು ನಿಮ್ಮ ಮುಂದಿಡುತ್ತದೆ; ‘ಹೌ ಇಸ್ ದ ವೆದರ್ ಟುಡೇ ಇನ್ ಬೆಂಗಳೂರು’ ಅಂತ ಕೇಳಿದರೆ, ಬೆಂಗಳೂರಿನ ಹವಾಮಾನ ವರದಿಯನ್ನು ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ನಲ್ಲಿ ತೋರಿಸುತ್ತದೆ.

ಆದರೆ, ಇದುವರೆಗೆ ನಾವು ಸ್ಕ್ರೀನ್ ಲಾಕ್ ತೆರೆದು, ಹೋಂ ಸ್ಕ್ರೀನ್‌ನಿಂದ ಮಾತ್ರವೇ “ಓಕೆ ಗೂಗಲ್” ಎನ್ನುತ್ತಾ ಈ ಆ್ಯಪ್‌ನ ಸ್ಪೀಕರನ್ನು ಎನೇಬಲ್ ಮಾಡಬಹುದಾಗಿತ್ತು. ಇತ್ತೀಚಿನ ಅಪ್‌ಡೇಟ್ ಪ್ರಕಾರ, ಯಾವುದೇ ಸ್ಕ್ರೀನ್‌ನಿಂದಲೂ ಕೂಡ ನೀವು ‘ಓಕೆ ಗೂಗಲ್’ ಎಂದು ಹೇಳಿದರೆ, ಅದರ ಮೈಕ್ ಸಕ್ರಿಯವಾಗುತ್ತದೆ ಮತ್ತು ನಿಮಗೆ ಬೇಕಾಗಿದ್ದನ್ನು ಹೇಳಬಹುದಾಗಿದೆ. ಈ ಕುರಿತಾಗಿನ ಅಪ್‌ಡೇಟ್‌ಗಳನ್ನು ಒಂದೊಂದೇ ಸ್ಮಾರ್ಟ್‌ಫೋನ್‌ಗಳ ಮಾದರಿಗಳಿಗೆ ಗೂಗಲ್ ರವಾನಿಸುತ್ತಿದೆಯೆಂಬ ಮಾಹಿತಿ ಇದೆ. ಸ್ವಲ್ಪ ಕಾಯಬೇಕಷ್ಟೆ.

ಐಫೋನ್‌ನಲ್ಲಿ ‘ಸಿರಿ’ ಎಂಬ ಆಪ್ತ ಸಹಾಯಕ ಆ್ಯಪ್ ಇದೆ. ಆದರೆ, ಭಾರತೀಯರು ಇಂಗ್ಲಿಷ್ ಉಚ್ಚರಿಸುವ ರೀತಿಯಲ್ಲಿ ಅದಕ್ಕೆ ಯಾವುದೇ ಆದೇಶ ನೀಡಿದರೆ ಅರ್ಥ ಮಾಡಿಕೊಳ್ಳಲಾರದು. ಯಾಕೆಂದರೆ, ಇಂಗ್ಲಿಷನ್ನು ಭಾರತೀಯರು ಉಚ್ಚರಿಸುವ ರೀತಿಗೂ, ಅಮೆರಿಕದಲ್ಲಿ ಉಚ್ಚರಿಸುವ ರೀತಿಗೂ ಅಜ-ಗಜ-ಅಂತರವಿದೆ. ಗೂಗಲ್ ಇದೀಗ ಭಾರತೀಯ ಉಚ್ಚಾರಣೆಯ ವಿಧವನ್ನೂ ಸೇರಿಸಿರುವುದು ಆಂಡ್ರಾಯ್ಡ್ ಬಳಕೆದಾರರಿಗೆ ವರದಾನವಾಗಿದೆ. ಇದೇ ವೇಳೆ, ಬ್ಲ್ಯಾಕ್‌ಬೆರಿ ಬಳಕೆದಾರರಿಗೆ ಬ್ಲ್ಯಾಕ್‌ಬೆರಿ ಅಸಿಸ್ಟೆಂಟ್, ವಿಂಡೋಸ್ ಫೋನ್ ಬಳಕೆದಾರರಿಗೆ ಕೋರ್ಟನಾ ಎಂಬ ಆಪ್ತ ಸಹಾಯಕ ಅಪ್ಲಿಕೇಶನ್‌ಗಳಿವೆ. ಇವೆಲ್ಲವೂ ಇದೀಗ ಭಾರತೀಯ ಉಚ್ಚಾರಣೆಗೆ ತಮ್ಮನ್ನು ಸಿದ್ಧವಾಗಿಸಿಕೊಳ್ಳುತ್ತಿವೆ.

ಗೂಗಲ್ ನೌ ಪರೀಕ್ಷಿಸಬೇಕಿದ್ದರೆ, ಗೂಗಲ್ ಪ್ಲೇ ಸ್ಟೋರ್‌ನಿಂದ Google Search ಎಂಬ ಆ್ಯಪ್ (ಹೆಚ್ಚಿನ ಸಾಧನಗಳಲ್ಲಿ ಇರುತ್ತವೆ) ಇನ್‌ಸ್ಟಾಲ್ ಮಾಡಿಕೊಳ್ಳಿ. ಬಳಿಕ ನಮ್ಮ ಮೆನುವಿನಲ್ಲಿ ಆ್ಯಪ್ಸ್ ಹಾಗೂ ವಿಡ್ಗೆಟ್ಸ್ ಎಂಬ ಎರಡು ವಿಭಾಗಗಳಿರುತ್ತವೆ. ವಿಡ್ಗೆಟ್ಸ್ ಎಂಬಲ್ಲಿಗೆ ಹೋಗಿ ಗೂಗಲ್ ಸರ್ಚ್ (ಅಥವಾ ನೀಲಿ ಬಣ್ಣದಲ್ಲಿರುವ ಗೂಗಲ್ ಹೆಸರಿನಲ್ಲಿರುವ) ವಿಡ್ಗೆಟ್ ಅನ್ನು ನಿಮ್ಮ ಹೋಂ ಸ್ಕ್ರೀನ್‌ಗೆ ಎಳೆದು ಹಾಕಿ. ನಂತರ ಅದರಲ್ಲಿರುವ ಮೈಕ್ ಬಟನ್ ಒತ್ತಿ, ನಿಮಗೆ ಬೇಕಾದ ಮಾಹಿತಿಯನ್ನು ಕೇಳಿ. ಅದು ಉತ್ತರಿಸುತ್ತದೆ ಇಲ್ಲವೇ ಇಂಟರ್ನೆಟ್‌ನಿಂದ ಸರ್ಚ್ ಮಾಡಿ, ಮಾಹಿತಿಯನ್ನು ನಿಮ್ಮ ಮುಂದಿಡುತ್ತದೆ. ನೆನಪಿಡಿ. ಈಗ ಬರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳ ಹೋಂಸ್ಕ್ರೀನ್‌ನಲ್ಲಿ ಗೂಗಲ್ ಎಂದು ಬರೆದಿರುವ ಪಟ್ಟಿಯೊಂದನ್ನು ನೋಡಿರಬಹುದು. ಬಲಭಾಗದಲ್ಲಿ ಮೈಕ್ ಐಕಾನ್ ಇರುತ್ತದೆ. ಅದನ್ನು ಟಚ್ ಮಾಡಿದರೂ ಸಾಕಾಗುತ್ತದೆ. ಇದು ಆಂಡ್ರಾಯ್ಡ್‌ನ 4.1 ಹಾಗೂ ನಂತರದ ಆವೃತ್ತಿಗಳಲ್ಲಿ ಮಾತ್ರ ಇದು ಲಭ್ಯ.

ಟೆಕ್-ಟಾನಿಕ್
ಫೇಸ್‌ಬುಕ್‌ನಲ್ಲಿ ನಂತರ ಓದಿ

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಈಗ ಸೇವ್ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ನಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿವಿಧ ಪ್ರಾಯೋಜಿತ ಲಿಂಕ್‌ಗಳನ್ನು ನಂತರ ನೋಡುವಂತಾಗಲು, ‘ಸೇವ್’ ಎಂಬ ಆಯ್ಕೆಯನ್ನು ಅದು ಒದಗಿಸಿದೆ. ಲಿಂಕ್ ಬಾಕ್ಸ್‌ನ ಬಲ ಮೇಲ್ತುದಿಯಲ್ಲಿ ‘More’ ಬಟನ್ ಕ್ಲಿಕ್ ಮಾಡಿದಾಗ ಈ ಸೇವ್ ಬಟನ್ ಗೋಚರಿಸುತ್ತದೆ. ಮೊಬೈಲ್ ಆ್ಯಪ್ ಮೂಲಕ ಸೇವ್ ಮಾಡಿದ ವಿಷಯವನ್ನು ಡೆಸ್ಕ್‌ಟಾಪ್‌ನಲ್ಲೂ ನಂತರ ಓದಬಹುದಾಗಿದೆ. ಪುನಃ ಓದಬೇಕಿದ್ದರೆ, ಮೊಬೈಲ್‌ನಲ್ಲಾದರೆ ‘More’ ಕ್ಲಿಕ್ ಮಾಡಬೇಕು, ಬ್ರೌಸರ್‌ನಲ್ಲಾದರೆ Saved ಬಟನ್ ಕ್ಲಿಕ್ ಮಾಡಿದರಾಯಿತು. ನೀವು ಸೇವ್ ಮಾಡಿದ್ದನ್ನು ಶೇರ್ ಮಾಡಿದರೆ ಮಾತ್ರ ನಿಮ್ಮ ಸ್ನೇಹಿತರಿಗೆ ಕಾಣಿಸುತ್ತದೆ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s