ವಿಜಯ ಕರ್ನಾಟಕ ಅಂಕಣ, ಜುಲೈ 22, 2013
ಇಂಟರ್ನೆಟ್ ಈಗ ಗ್ರಾಮೀಣ ಜನರಿಗೂ ನಿಧಾನವಾಗಿ ತಲುಪುತ್ತಿದ್ದರೂ, ಬ್ಲಾಗ್ ಕುರಿತು ಹೆಚ್ಚಿನವರಲ್ಲಿ ಮಾಹಿತಿ ಇಲ್ಲ. ಗ್ರಾಮೀಣ ಭಾಗವೇಕೆ, ಸ್ವತಃ ಬೆಂಗಳೂರಿನಲ್ಲಿಯೇ ಇತ್ತೀಚೆಗೆ ನಡೆದ ಬ್ಲಾಗರ್‌ಗಳ ಕಾರ್ಯಾಗಾರವೊಂದರಲ್ಲಿ, “ಬ್ಲಾಗ್ ಎಂದರೇನು, ಅದನ್ನು ಯಾಕೆ, ಹೇಗೆ ಮಾಡಬೇಕು ಎಂಬ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ’ ಎಂಬ ಮಾತೊಂದು ಕೇಳಿಬಂದಿತ್ತು. ಹೀಗಾಗಿ, ಬ್ಲಾಗ್ ಬಗ್ಗೆ ತಿಳಿಯದವರಿಗಾಗಿ ಈ ಅಂಕಣದಲ್ಲಿ ಒಂದಿಷ್ಟು ಮಾಹಿತಿ.
ಗ್ರಾಮೀಣ ಭಾಗದವರು ಕೇಳುತ್ತಿದ್ದ ಒಂದು ಬಹುಮುಖ್ಯ ಪ್ರಶ್ನೆಯೆಂದರೆ, ಬ್ಲಾಗ್ ಮಾಡಲು ಎಷ್ಟು ಖರ್ಚಾಗುತ್ತದೆ ಎಂಬುದು. ಬ್ಲಾಗ್ ಎಂಬುದು ಉಚಿತವಾದ ವೇದಿಕೆ ಎಂಬುದು ನೆನಪಿನಲ್ಲಿರಲಿ.
ವೆಬ್ ಲಾಗ್ ಎಂಬುದರ ಹೃಸ್ವರೂಪವೇ ಬ್ಲಾಗ್. ಬ್ಲಾಗ್ ಯಾರು ಬೇಕಾದರೂ ತೆರೆಯಬಹುದು. ಸರಳವಾಗಿ ಹೇಳಬಹುದಾದರೆ, ಅಂತರ್ಜಾಲದಲ್ಲಿ ನಮ್ಮ ಅನಿಸಿಕೆಗಳು, ಭಾವನೆಗಳು, ಬರವಣಿಗೆಗಳು, ದಿನಚರಿಗಳು, ಫೋಟೋಗಳು ಇತ್ಯಾದಿಗಳನ್ನು ಒಂದು ಕಡೆ ದಾಖಲಿಸಲು ನೆರವಾಗುವ ವೇದಿಕೆ. ಇದೊಂದು ನಮ್ಮದೇ ಆದ ಪುಟ್ಟ ವೆಬ್ ಸೈಟ್ ಇದ್ದಂತೆ.
ಬ್ಲಾಗ್ ಆರಂಭಿಸಲು ನಿಮಗೆ ಬೇಕಾಗಿರುವುದು ನಿಮ್ಮ ಇಮೇಲ್ ವಿಳಾಸ ಹಾಗೂ ಇಂಟರ್ನೆಟ್ ಸಂಪರ್ಕ. ನಮ್ಮಲ್ಲಿ ಹೆಚ್ಚಿನವರು ಬಳಸುತ್ತಿರುವ Blogger.com ಅಥವಾ WordPress.com ಎಂಬ ತಾಣಗಳಿಗೆ ಹೋಗಿ, ಅಲ್ಲಿ Sign-up ಅಂತ ಇರುವಲ್ಲಿ ಕ್ಲಿಕ್ ಮಾಡಿದರೆ, ಅಲ್ಲಿ ನಿಮ್ಮ ಹೆಸರು, ಊರು, ಜನ್ಮದಿನಾಂಕ, ದೂರವಾಣಿ ಸಂಖ್ಯೆ ಮುಂತಾದ ಮೂಲ ಮಾಹಿತಿಯನ್ನು ದಾಖಲಿಸುತ್ತಾ ಹೋಗಿ. ಹೆಚ್ಚಿನವರು ಗೂಗಲ್ ಕಂಪನಿಯ Blogger.com ಬಳಸುತ್ತಾರೆ. ಅದರಲ್ಲಾದರೆ, ನಿಮ್ಮ ಜಿಮೇಲ್ ಖಾತೆ ಬಳಸಿ ಲಾಗ್ ಇನ್ ಆಗಿ, ಸುಲಭವಾಗಿ ಬ್ಲಾಗ್ ರಚಿಸಬಹುದು. ವರ್ಡ್‌ಪ್ರೆಸ್‌ನಲ್ಲಿ ಯಾಹೂ, ರೆಡಿಫ್, ಜಿಮೇಲ್ ಮುಂತಾದ ಯಾವುದೇ ಇಮೇಲ್ ಖಾತೆ ಬಳಸಬಹುದು.
ಬ್ಲಾಗರ್‌ನಲ್ಲಿ, ಜಿಮೇಲ್ ಮೂಲಕ ಲಾಗ್ ಇನ್ ಆದ ತಕ್ಷಣ ಕಾಣಿಸಿಕೊಳ್ಳುವ New blog ಬಟನ್ ಒತ್ತಿ. Title ಅಂತ ಇರುವಲ್ಲಿ ಬ್ಲಾಗ್‌ಗೆ ಕನ್ನಡದಲ್ಲಿ, ನಿಮಗಿಷ್ಟದ ಒಂದು ಸುಂದರ ಹೆಸರು ಕೊಡಿ. ನಂತರ Address ಎಂದಿರುವಲ್ಲಿ ನಿಮ್ಮ ಬ್ಲಾಗ್‌ನ ವಿಳಾಸ, ಅಂದರೆ ಯುಆರ್‌ಎಲ್ ನಿಮಗೆ ಬೇಕಾದಂತೆ ಇಂಗ್ಲಿಷ್‌ನಲ್ಲಿ ನಮೂದಿಸಿ. ನಿಮ್ಮ ಹೆಸರನ್ನೋ, ಬ್ಲಾಗಿನ ಹೆಸರನ್ನೋ ಬರೆದರೆ ಸಾಕು. ಉಳಿದಂತೆ ಮುಂದಿನ ಭಾಗ (ಡೊಮೇನ್ ಅಂತಾರೆ) blogspot.com ಎಂಬುದು ತಾನಾಗಿ ಸೇರಿಕೊಳ್ಳುತ್ತದೆ.
ಬಳಿಕ Template ಅಂತ ಕಾಣಿಸುತ್ತದೆ. ಅಂದರೆ ನಿಮ್ಮ ಬ್ಲಾಗ್ ಯಾವ ರೀತಿ ಕಾಣಿಸಬೇಕೆಂದು ಮೊದಲೇ ವಿನ್ಯಾಸಪಡಿಸಿರುವ ಬ್ಲಾಗ್ ಟೆಂಪ್ಲೇಟ್ ಅದು. ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಿ.
“ನಿಮ್ಮ ಬ್ಲಾಗ್ ರಚಿಸಲಾಗಿದೆ, ಪೋಸ್ಟಿಂಗ್ ಪ್ರಾರಂಭಿಸಿ’ ಅನ್ನೋ ಸಂದೇಶ ಅಲ್ಲೇ ಕಾಣಿಸುತ್ತೆ. ನೆನಪಿಡಿ, ಬ್ಲಾಗ್ ಎಂದರೆ ನಿಮ್ಮ ಸ್ವಂತ ವೆಬ್ ತಾಣವಿದ್ದಂತೆ. ಅದಕ್ಕೆ ನೀವು ಬರೆಯುವ (ಅಂದರೆ ಪೋಸ್ಟ್ ಮಾಡುವ) ಲೇಖನಗಳನ್ನು ಪೋಸ್ಟ್ ಅಂತ ಕರೀತಾರೆ. ಪೋಸ್ಟನ್ನು (ಲೇಖನವನ್ನು) ಕೂಡ ಬ್ಲಾಗ್ ಅಂತ ಉಲ್ಲೇಖಿಸಲಾಗುತ್ತಿದೆ. (ಉದಾ. ನಾನು ಬ್ಲಾಗ್ ಬರ್ದಿದ್ದೀನಿ…)
ಅಲ್ಲಿ ಕಾಣಸಿಗುವ ಪೆನ್ಸಿಲ್ ಚಿತ್ರವಿರುವ ಒಂದು ಬಟನ್ ಒತ್ತಿದರೆ, ಬ್ಲಾಗ್ ಪೋಸ್ಟ್‌ನ ಶೀರ್ಷಿಕೆ (Post Title) ಹಾಕಲು ಮತ್ತು ವಿಷಯವನ್ನು ಬರೆಯುವ ಎರಡು ಬಾಕ್ಸ್‌ಗಳಿರುವ ಫಾರ್ಮ್ ಕಾಣಿಸುತ್ತದೆ. ಅಲ್ಲೇ ಕನ್ನಡದಲ್ಲಿಯೂ ಬರೆಯಲು ಗೂಗಲ್ ನಿಮಗೆ ಅನುಕೂಲ ಮಾಡಿಕೊಟ್ಟಿದೆ. ಬರಹ ಬರೆಯುವ ಫಾರ್ಮ್‌ನ ಬಲ ಮೇಲ್ಭಾಗದಲ್ಲಿರುವ ಹಿಂದಿಯ “ಅ’ ಅಕ್ಷರ ಕಾಣಿಸುವ ಬಟನ್ ಕ್ಲಿಕ್ ಮಾಡಿದರೆ, ಯಾವ ಭಾಷೆಯನ್ನು ಬೇಕಾದರೂ ಆಯ್ಕೆ ಮಾಡುವ ಅವಕಾಶವಿರುತ್ತದೆ. ಎಲ್ಲ ಬರೆದಾದ ಬಳಿಕ, Publish ಬಟನ್ ಒತ್ತಿದರೆ, ನಿಮ್ಮ ಬ್ಲಾಗ್ ಪೋಸ್ಟ್ ಆನ್‌ಲೈನ್‌ನಲ್ಲಿ ಪ್ರಕಟವಾಗುತ್ತದೆ.
ಇದು ಸಾದಾ, ಸಾಮಾನ್ಯ ಬ್ಲಾಗ್. ಪ್ರತೀ ಬಾರಿ ನೀವು New Post ಅಂತ ಇರುವಲ್ಲಿ ಕ್ಲಿಕ್ ಮಾಡಿದರೆ, ಹೊಸದಾಗಿ ಲೇಖನ ಪ್ರಕಟಿಸಬಹುದು, ಬೇರೆ ಕಡೆ ಟೈಪ್ ಮಾಡಿಯೂ ಇಲ್ಲಿಗೆ ಪೇಸ್ಟ್ ಮಾಡಬಹುದು.
ಒಂದಿಷ್ಟು ತಿಳಿವಳಿಕೆ ಉಪಯೋಗಿಸಿದರೆ, ನಿಮ್ಮ ಬ್ಲಾಗ್ ವಿನ್ಯಾಸವನ್ನು ನೀವೇ ಬದಲಾಯಿಸಿಕೊಳ್ಳಬಹುದು, ಟೆಂಪ್ಲೇಟ್ ಬದಲಿಸಬಹುದು, ಬ್ಲಾಗ್ ಹೆಸರು ಬದಲಿಸಲೂಬಹುದು, ಅದಕ್ಕೊಂದು ಟ್ಯಾಗ್‌ಲೈನ್ ಸೇರಿಸಬಹುದು, ಮತ್ತು ಲೇಔಟ್ ಎಂದಿರುವಲ್ಲಿ ಕ್ಲಿಕ್ ಮಾಡಿದರೆ, ವಿಭಿನ್ನ ಗ್ಯಾಜೆಟ್‌ಗಳನ್ನು (ಸರಳವಾಗಿ ಹೇಳುವುದಾದರೆ ಬ್ಲಾಗ್ ವಿನ್ಯಾಸಕ್ಕೆ ಪೂರಕವಾಗಿರುವ ಅಪ್ಲಿಕೇಶನ್‌ಗಳು, ಉದಾ: ಫೇಸ್‌ಬುಕ್, ಟ್ವಿಟರ್ ಲಿಂಕ್‌ಗಳು) ಸೇರಿಸಿಕೊಳ್ಳಬಹುದು. ಎಲ್ಲ ಆದ ಮೇಲೆ ಲಾಗೌಟ್ ಮಾಡುವುದನ್ನು ಮರೆಯಬಾರದು.
ನಿಮ್ಮ ಬ್ಲಾಗ್ ಪೋಸ್ಟ್‌ಗಳಿಗೆ ಯಾರು ಓದುಗರು? ಮುಖ್ಯವಾಗಿ ಇಮೇಲ್ ಖಾತೆಯಿರುವ ನಿಮ್ಮ ಸ್ನೇಹಿತರು. ಅಲ್ಲದೆ, ಬೇರೆ ಬ್ಲಾಗುಗಳಿಗೆ ನೀವು ಸಂದರ್ಶಿಸಿ, ಕಾಮೆಂಟ್‌ಗಳನ್ನು ಹಾಕುತ್ತಾ, ನಿಮ್ಮ ಇರುವಿಕೆಯನ್ನು ಬೇರೆಯವರಿಗೆ ತಿಳಿಯಪಡಿಸಬೇಕಾಗುತ್ತದೆ. ಈಗ ಹಿಂದಿನಂತಲ್ಲ, ಬ್ಲಾಗ್ ಶೇರ್ ಮಾಡಿಕೊಳ್ಳಲು ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳಿದ್ದು, ಇಲ್ಲಿ ಸ್ನೇಹಿತರಿಗೆ ನಿಮ್ಮ ಬ್ಲಾಗ್ ಪರಿಚಯ ಮಾಡಿಸುವುದು ಸುಲಭ. ಇನ್ನೇಕೆ ತಡ, ಬ್ಲಾಗಿಲು ತೆರೆಯಿರಿ, ಬ್ಲಾಗಿಸಲು ಆರಂಭಿಸಿ.
ತಿಳಿದುಕೊಳ್ಳಲೇ ಬೇಕಾದ ವಿಚಾರ ಧನ್ಯವಾದಗಳು
LikeLike
ಥ್ಯಾಂಕ್ಸ್ ರಾಜು ಅವರೇ.
LikeLike
Reblogged this on rhbhat1964.
LikeLike
ಧನ್ಯವಾದ ಭಟ್ ಅವರೇ…
LikeLike
thanks for useful info. . but i am not getting how to write in kannada. . pls let me know sir. . and where to write about myself on blog. .
LikeLike
ಶ್ರೀನಿವಾಸನ್ ಸರ್, ಈ ಬ್ಲಾಗನ್ನೇ ನೋಡ್ತಾ ಇರಿ… ಕನ್ನಡ ಟೈಪ್ ಮಾಡೋ ಎಲ್ಲ ವಿಚಾರಗಳೂ ಇಲ್ಲಿವೆ…
LikeLike
chanagide anthinee
LikeLike
ಧನ್ಯವಾದ ಶ್ರೀಪತಿ ಅವರೇ, 🙂
LikeLike