ನೆನಪಾದಾಗ ನೋಟ್ ಮಾಡಿಕೊಳ್ಳಲು ‘ಗೂಗಲ್ ಕೀಪ್’

ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ 29 (ಮಾರ್ಚ್ 25, 2013)
ಕಚೇರಿಯಲ್ಲೋ, ಮನೆಯಲ್ಲೋ, ಸಾಕಷ್ಟು ಐಡಿಯಾಗಳು ಹೊಳೆಯುತ್ತಿರುತ್ತವೆ. ಅಥವಾ ಮಾಡಬೇಕಾದ ಕೆಲಸಗಳು ಥಟ್ಟನೆ ನೆನಪಾಗಿಬಿಡುತ್ತವೆ. ಅದನ್ನು ಎಲ್ಲಾದರೂ ಬರೆದಿಟ್ಟರೆ ಬಚಾವ್, ಇಲ್ಲವಾದಲ್ಲಿ ದೊಡ್ಡ ಅವಾಂತರವಾಗೂವ ಸಾಧ್ಯತೆಯೂ ಇಲ್ಲದಿಲ್ಲ. ಅದೇ ರೀತಿ, ಶಾಪಿಂಗ್‌ಗೆ ಹೋದಾಗ ಮನೆಗೆ ಏನೆಲ್ಲಾ ಸಾಮಾನು-ಸರಂಜಾಮು ತರಬೇಕೆಂಬುದನ್ನೂ ನೆನಪಾದಾಗ ಬರೆದಿಟ್ಟುಕೊಳ್ಳಬೇಕಾಗುತ್ತದೆ. ಇಂತಹಾ ಕೆಲಸಗಳಿಗೆ ನೆರವಿಗೆ ಬರುವುದೇ ಗೂಗಲ್ ಹೊರತಂದಿರುವ ‘ಕೀಪ್’ ಎಂಬ ಹೊಸ ವ್ಯವಸ್ಥೆ. ಆನ್‌ಲೈನ್‌ನಲ್ಲಿ ಜಿಮೇಲ್ ಮೂಲಕ ಲಾಗಿನ್ ಆಗಿ, ಗೂಗಲ್ ಡ್ರೈವ್ ಎಂಬ ಉಚಿತ ಸ್ಟೋರೇಜ್ ಸ್ಥಳದಲ್ಲಿ ಈ ಟಿಪ್ಪಣಿಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದು.

ಮನಸ್ಸಿಗೆ ಹೊಳೆದಿದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳಲೆಂದು ಈಗಾಗಲೇ ಎವರ್‌ನೋಟ್ ಎಂಬುದೊಂದು ಅಪ್ಲಿಕೇಶನ್ ಜನಪ್ರಿಯವಾಗಿದೆ. ಇದರ ರೂಪದಲ್ಲಿಯೇ ಗೂಗಲ್ ಈ ಅಪ್ಲಿಕೇಶನನ್ನು ಉಚಿತವಾಗಿ ಒದಗಿಸಿದ್ದು, ಕಳೆದ ವಾರವಷ್ಟೇ ತನ್ನ ಬಳಕೆದಾರರಿಗೆ ಇದನ್ನು ಪರಿಚಯಿಸಿದೆ.

ಇಂಟರ್ನೆಟ್ ಮೂಲಕ ನೀವು ಇದರ ಪ್ರಯೋಜನ ಪಡೆಯುವುದಾದರೆ, https://drive.google.com/keep/ ಎಂಬಲ್ಲಿ ನಿಮ್ಮ ಜಿಮೇಲ್ ಖಾತೆಯ ಮೂಲಕ ಲಾಗಿನ್ ಆದಾಗ, ಟಿಪ್ಪಣಿ ಮಾಡಿಕೊಳ್ಳುವ ವಿಂಡೋ ಕಾಣಿಸುತ್ತದೆ. ಇದರಲ್ಲಿ ನಿಮಗೆ ಬೇಕಾದ ಚಿತ್ರಗಳನ್ನು ಸೇರಿಸಬಹುದು (ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಾದರೆ, ಕ್ಯಾಮರಾ ಮೂಲಕ ಚಿತ್ರ ತೆಗೆದು ಸೇರಿಸಬಹುದು). ಇದಲ್ಲದೆ, ಆಯಾ ದಿನಗಳಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನೋ, ದಿನಸಿ ಅಂಗಡಿಯಿಂದ ತರಬೇಕಾಗಿರುವ ವಸ್ತುಗಳ ಪಟ್ಟಿಯನ್ನೋ ಟೈಪ್ ಮಾಡಿಟ್ಟುಕೊಳ್ಳಬಹುದು. ಕೆಲಸ ಮುಗಿಸಿದ ಬಳಿಕ ಅದನ್ನು ಟಿಕ್ ಗುರುತು ಮಾಡಿ ಉಳಿಸಿಕೊಳ್ಳಬಹುದು ಇಲ್ಲವೇ ಡಿಲೀಟ್ ಮಾಡಬಹುದು ಅಥವಾ ಐಡಿಯಾವೊಂದನ್ನು ಬರೆದಿಟ್ಟುಕೊಳ್ಳಬಹುದು. ಈ ಟಿಪ್ಪಣಿಗಳಿಗೆ ಬಣ್ಣ ಹಚ್ಚಿಡುವ ವ್ಯವಸ್ಥೆಯೂ ಇಲ್ಲಿದೆ.

ಗೂಗಲ್ ಡ್ರೈವ್ ಎಂಬ ಆನ್‌ಲೈನ್ ಸ್ಟೋರೇಜ್ ಸ್ಥಳದಲ್ಲಿ ಸೇವ್ ಆಗಿರುವ ಈ ಮಾಹಿತಿಯನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಉಪಯೋಗಿಸಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ (ಆವೃತ್ತಿ 4.0 -ಐಸ್ ಕ್ರೀಂ ಸ್ಯಾಂಡ್‌ವಿಚ್ ಹಾಗೂ ಮೇಲ್ಪಟ್ಟವುಗಳು) ಅಪ್ಲಿಕೇಶನ್ ರೂಪದಲ್ಲಿ ಲಭ್ಯವಿರುತ್ತದೆ. ಒಂದೇ ಜಿಮೇಲ್ ಐಡಿಯಿಂದ ಲಾಗಿನ್ ಆಗುವುದರಿಂದ, ಕಂಪ್ಯೂಟರಿನಲ್ಲೋ, ಸ್ಮಾರ್ಟ್‌ಫೋನ್‌ನಲ್ಲೋ ಮಾಡಿದ ತಿದ್ದುಪಡಿ, ಸೇರ್ಪಡಿಸಿದ ವಿಷಯಗಳು ಸಿಂಕ್ರನೈಸ್ ಆಗುತ್ತವೆ. ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚುವರಿಯಾದ ಒಂದು ಪ್ರಯೋಜನವೆಂದರೆ, ಇಂಗ್ಲಿಷ್‌ನಲ್ಲಿ ನೀವು ಬರೆದಿಡಬೇಕಾಗಿರುವುದನ್ನು ಟೈಪ್ ಮಾಡಬೇಕಾಗಿಲ್ಲ, ಅಕ್ಷರಶಃ ‘ಹೇಳಿದರೆ’ ಸಾಕು. ಗೂಗಲ್‌ನ ಧ್ವನಿ ತಂತ್ರಾಂಶವು ಅದನ್ನು ಸ್ಮಾರ್ಟ್‌ಫೋನ್‌ನ ಸ್ಪೀಕರ್ ಮೂಲಕ ಅದನ್ನು ಸ್ವೀಕರಿಸಿ, ಪಠ್ಯ ರೂಪಕ್ಕೆ ಪರಿವರ್ತಿಸಿ, ಗೂಗಲ್ ಕೀಪ್‌ನಲ್ಲಿ ಇರಿಸುತ್ತದೆ! ಹೀಗೆ ಮಾಡಲು ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಮೈಕ್ರೋಫೋನ್‌ನ ಒಂದು ಐಕಾನ್ ಒತ್ತಿಬಿಟ್ಟರಾಯಿತು.

ಕೆಲವು ಕಚೇರಿಗಳಲ್ಲಿ ಅಥವಾ ಮನೆಗಳಲ್ಲಿ ಫ್ರಿಜ್ ಮೇಲೆ, ಬಾಗಿಲಿನ ಮೇಲೆ ಕಾಗದದ ತುಂಡುಗಳಲ್ಲಿ ಏನನ್ನೋ ಟಿಪ್ಪಣಿ ಮಾಡಿ, ಪಟ್ಟಿ ಮಾಡಿ ಅಂಟಿಸಿರುವುದನ್ನು ನೋಡಿರಬಹುದು. ಸ್ಟೇಶನರಿ ಅಂಗಡಿಗಳಲ್ಲಿ ‘ಸ್ಟಿಕಿ ನೋಟ್’ ಎಂಬ ಈ ಅಂಟಿಸುವ ಕಾಗದದ ಕಂತೆಯೇ ಸಿಗುತ್ತದೆ. ಇದರ ಬದಲಾಗಿ ಇನ್ನು ಸ್ಮಾರ್ಟ್‌ಫೋನ್‌ಗಳನ್ನು ಬಳಸಬಹುದು, ಇದರಿಂದ ಕಾಗದವೂ ಉಳಿತಾಯ, ಪರಿಸರ ರಕ್ಷಣೆಗೂ ಕೊಂಚ ಕೊಡುಗೆ ನೀಡಿದಂತೆ.

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s