ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

ವಿಜಯ ಕರ್ನಾಟಕ ಅಂಕಣ 17 ಸೆಪ್ಟೆಂಬರ್ 12
ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಕೊಳ್ಳಲು ಹೋದಾಗ Wi-Fi (Wireless Fidelity) ಅಥವಾ WLAN (Wireless Local Area Network) ಎಂದರೇನೆಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಆ ಕುರಿತು ಉಪಯುಕ್ತ ಮಾಹಿತಿ.

ಮೊಬೈಲ್ ಫೋನ್ ಮಾತುಕತೆ ಹೇಗೆ ವೈರ್ ಇಲ್ಲದ ಸಂವಹನವೋ, ಅದರಂತೆಯೇ ಹಾಡು, ಚಿತ್ರ, ವೀಡಿಯೋಗಳನ್ನು ಕೂಡ ವೈರ್ ಇಲ್ಲದೆಯೇ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯ ಆಧುನಿಕ ರೂಪ ವೈ-ಫೈ. ಹಿಂದಿನ ಮೊಬೈಲ್ ಫೋನ್‌ಗಳಲ್ಲಿ IR (Infrared) Port ಎಂಬುದನ್ನು ನೀವು ನೋಡಿದ್ದಿರಬಹುದು. ಅದರ ಮುಂದುವರಿದ ಭಾಗವೇ ಬ್ಲೂಟೂತ್ ಮತ್ತು ವೈ-ಫೈ. ಬ್ಲೂಟೂತ್ ಕೂಡ ವೈ-ಫೈಯಂತೆಯೇ ಎರಡು (ಕಂಪ್ಯೂಟರ್, ಮೊಬೈಲ್, ಪ್ರಿಂಟರ್ ಇತ್ಯಾದಿ) ಸಾಧನಗಳನ್ನು ಬೆಸೆಯುವ ಕೆಲಸ ಮಾಡುತ್ತದೆಯಾದರೂ, ಅದರ ವ್ಯಾಪ್ತಿ ಹತ್ತಾರು ಮೀಟರ್ ಮಾತ್ರ. ಆದರೆ ವೈ-ಫೈಯ ರೇಡಿಯೋ ಸಿಗ್ನಲ್‌ಗಳು ಹೆಚ್ಚು ದೂರದಲ್ಲಿ ಹರಡಿಕೊಂಡಿರಬಲ್ಲವು.

ನಿಮಗೂ ವೈ-ಫೈ
ಮನೆ/ಕಚೇರಿಯಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವಿದ್ದರೆ, ಕಂಪ್ಯೂಟರ್ ಇಲ್ಲದೆಯೂ, ಮೋಡೆಮ್ ಮಾತ್ರ ಆನ್ ಮಾಡಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ವೆಬ್ ಬ್ರೌಸ್ ಮಾಡಬಹುದು; ವೀಡಿಯೋ/ಆಡಿಯೋ, ಫೋಟೋ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು; ಮೊಬೈಲ್‌ನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಬಹುದು. ಹೀಗೆ ಮೊಬೈಲ್ ಇಂಟರ್ನೆಟ್ ವೆಚ್ಚವನ್ನು (ತಾಂತ್ರಿಕ ಭಾಷೆಯಲ್ಲಿ ‘ಡೇಟಾ ವೆಚ್ಚ’ – ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕಿಸಬೇಕಿದ್ದರೆ ಮೊಬೈಲ್ ಆಪರೇಟರುಗಳು ವಿಧಿಸುವ ಶುಲ್ಕ) ಉಳಿಸಬಹುದು.

ಇದು ನಿಮಗೂ ಸಾಧ್ಯ. ಮಾರುಕಟ್ಟೆಯಲ್ಲಿ ಬ್ರಾಡ್‌ಬ್ಯಾಂಡ್ ವೈ-ಫೈ ರೌಟರ್‌ಗಳು (ಒಂದುವರೆಯಿಂದ 4 ಸಾವಿರ ರೂ. ಒಳಗೆ) ಸಿಗುತ್ತವೆ. ಈ ರೌಟರ್, ಬ್ರಾಡ್‌ಬ್ಯಾಂಡ್‌ನ ಇಂಟರ್ನೆಟ್ ಸಂಪರ್ಕವನ್ನು ರೇಡಿಯೋ ತರಂಗಗಳ ಮೂಲಕ ಪ್ರಸಾರ ಮಾಡುತ್ತದೆ. ಯಾರು ಬೇಕಾದರೂ ಈ ಸಿಗ್ನಲ್‌ಗಳನ್ನು ಬಳಸಿಕೊಳ್ಳಬಹುದು ಮತ್ತು ಒಂದಕ್ಕಿಂತ ಹೆಚ್ಚು ಉಪಕರಣಗಳನ್ನು ಕೂಡ ಸಂಪರ್ಕಿಸಬಹುದು (ಅದಕ್ಕನುಗುಣವಾದ ಸಾಮರ್ಥ್ಯದ ರೌಟರ್‌ಗಳಿರುತ್ತವೆ). ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಇಲ್ಲದಿದ್ದರೂ ನೀವು ವೈ-ಫೈ ಬಳಸಿ ಇಂಟರ್ನೆಟ್ ಜಾಲಾಡಬಹುದು.

ಎಚ್ಚರವಿರಲಿ
ಆದರೆ, ನಿಮ್ಮ ಮನೆಯ ವೈ-ಫೈ ಸಿಗ್ನಲ್ಲನ್ನು ಪಕ್ಕದ ಮನೆಯವರು ಬಳಸಿ, ನಿಮ್ಮ ಬ್ರಾಡ್‌ಬ್ಯಾಂಡ್ ಬಿಲ್ ಹೆಚ್ಚಿಸುವಂತೆ ಮಾಡಬಲ್ಲರು! ಹೀಗಾಗದಂತೆ ತಡೆಯಲು, ಎರಡೂ ಸಾಧನಗಳಲ್ಲಿ ವೈ-ಫೈ ಸಂಪರ್ಕವನ್ನು ಪಾಸ್‌ವರ್ಡ್ ಮೂಲಕ ಸುರಕ್ಷಿತವಾಗಿರಿಸಿಕೊಳ್ಳಬೇಕು. ಭಯೋತ್ಪಾದಕರು ಇಂತಹಾ ವೈ-ಫೈ ಬಳಸುತ್ತಾರೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

ಹಾಟ್‌ಸ್ಪಾಟ್
ಆಗೀಗ್ಗೆ ಮಾತ್ರ ಇಂಟರ್ನೆಟ್ ಬಳಸುವವರು ನೀವಾಗಿದ್ದರೆ, ಮೊಬೈಲ್ ಆಪರೇಟರ್‌ಗಳು ನೂರು ರೂಪಾಯಿಯೊಳಗೆ ಮಾಸಿಕ 1ಜಿಬಿ ಡೇಟಾ ಬಳಕೆಯ ವ್ಯವಸ್ಥೆಯನ್ನು ನೀಡುತ್ತಿದ್ದಾರೆ. ಮೊಬೈಲ್ ಇಂಟರ್ನೆಟ್ ಆನ್ ಮಾಡಿ, ಅದನು ವೈ-ಫೈ ಮೂಲಕ ಕಂಪ್ಯೂಟರಿಗೆ ಹಾಯಿಸಿ ಅಂತರಜಾಲ ಜಾಲಾಡಬಹುದು. ಇಂಟರ್ನೆಟ್ ಬಳಕೆಗೆ 2ಜಿಗಿಂತ, ವೇಗವೂ ಹೆಚ್ಚು, ಸ್ವಲ್ಪ ಶುಲ್ಕಲವೂ ಹೆಚ್ಚಿರುವ 3ಜಿ ಮೊಬೈಲ್ ಸಂಪರ್ಕ ಒಳಿತು.

ನಿಮಗೆ ತಿರುಗಾಟ ಜಾಸ್ತಿ ಎಂದಾದರೆ, ಕಚೇರಿಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳೊಳಗೆ, ಬಸ್ಸುಗಳೊಳಗೆ, ರೈಲಿನಲ್ಲಿ, ಹೋಟೆಲ್‌ಗಳಲ್ಲಿ… ಹೀಗೆ ಎಲ್ಲ ಕಡೆ ವೈ-ಫೈ ಹಾಟ್‌ಸ್ಪಾಟ್‌ಗಳು ಎಂಬೊಂದು ವ್ಯವಸ್ಥೆ ಇರುತ್ತದೆ. ಈ ಹಾಟ್‌ಸ್ಪಾಟ್‌ಗೆ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸಂಪರ್ಕಿಸಿ ನೀವು ಸದಾ ಆನ್‌ಲೈನ್ ಆಗಿರಬಹುದು. ಹೆಚ್ಚಿನೆಡೆ ಇವು ಉಚಿತ.

ವೈರ್‌ಲೆಸ್ ಜಗತ್ತು
ವೈ-ಫೈ ಮೌಸ್, ವೈ-ಫೈ ಕೀಬೋರ್ಡ್, ವೈ-ಫೈ ಗೇಮ್ ಉಪಕರಣಗಳು, ವೈರ್‌ಲೆಸ್ ಹಾರ್ಡ್ ಡ್ರೈವ್ ಎಲ್ಲವೂ ಬಂದಿದೆ. ಹಿಂದೆಲ್ಲಾ ಗ್ಯಾಜೆಟ್ ಬಳಸುತ್ತಿರುವವರನ್ನು Wired ಅಂತ ಕರೆಯುತ್ತಿದ್ದರು. ಆದರೆ ಈಗ ಎಲ್ಲರೂ ವೈರ್‌ಲೆಸ್ ಆಗುತ್ತಿದ್ದಾರೆ! ಹೀಗಾಗಿ ಭವಿಷ್ಯದಲ್ಲಿ ನೀವು ತೆಗೆದುಕೊಳ್ಳುವ ಯಾವುದೇ ಉಪಕರಣದಲ್ಲಿ ವೈ-ಫೈ ಸೌಲಭ್ಯ ಖಾತ್ರಿಪಡಿಸಿಕೊಳ್ಳುವುದು ಒಳಿತು.

Advertisements

2 thoughts on “ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

 1. ಆದರೆ ವೈ-ಫೈಯ ರೇಡಿಯೋ ಸಿಗ್ನಲ್‌ಗಳಿಗೆ ಈ ದೂರದ ‘ಮಿತಿ’ ಇರುವುದಿಲ್ಲ ಅನ್ನುತ್ತಿದ್ದೀರಿ. ಆದರೆ ನನಗೆ ತಿಳಿದ ಹಾಗೆ ವೈ-ಫೈ ಸಿಗ್ನಲ್ ಗಳಿಗೂ ದೂರದ ಮಿತಿ ಇರುತ್ತದೆ. ಪ್ಲೀಸ್ ಕ್ಲಾರಿಫೈ.!

  Like

  • ವಿರಾಹೆ ಅವರೇ,
   ಹೌದು, ವೈಫೈಗೆ ದೂರದ ಮಿತಿ ಇದೆ ಎಂಬುದು ಸತ್ಯ. ಆದರೆ ಬ್ಲೂಟೂತ್‌ನಂತೆ ತೀರಾ ಕಡಿಮೆ ಮಿತಿ ಅಲ್ಲ ಎಂಬುದು ನನ್ನ ಮಾತಿನ ಭಾವಾರ್ಥ. ಈಗ ಸರಿಪಡಿಸಿದ್ದೇನೆ.

   Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s