ಸಿಲಿಂಡರು ವರ್ಷಕ್ಕಾರು, ಅಡುಗೆಮನೆ ತಿಳಿಯದವರ ನಿರ್ಧಾರ!

[ವಿಜಯ ಕರ್ನಾಟಕದ Op-ed ಪುಟದಲ್ಲಿ]
ಭಾರತೀಯರು ಮೊದಲೇ ಹೊಟ್ಟೆಬಾಕರು ಅಂತ ಅಮೆರಿಕ ಈ ಹಿಂದೆ ಹೀಗಳೆದಿದ್ದನ್ನು ಕೇಳಿರಬಹುದು. ಅಥವಾ ಗೋಧಿ ಬೆಲೆ ಏರಿಕೆಗೆ ಭಾರತೀಯರ ತಿನ್ನುಬಾಕ ಶೈಲಿಯಲ್ಲಾಗಿರುವ ಬದಲಾವಣೆಯೂ ಕಾರಣ ಅಂತ ನಮ್ಮದೇ ಕೃಷಿ ಸಚಿವ ಶರದ್ ಪವಾರ್ ಹೇಳಿದ್ದು ನೆನಪಿರಬಹುದು. ಹೀಗಿರುವಾಗ ಒಂದು ಕುಟುಂಬಕ್ಕೆ ವರ್ಷಕ್ಕೆ ಆರು ಅಡುಗೆ ಅನಿಲ ಸಿಲಿಂಡರ್‌ಗಳು ಮಾತ್ರ ಎಂದು ಕೇಂದ್ರ ಸರಕಾರ ನಿಗದಿಪಡಿಸಿರುವ ಬಗೆಗಿನ ಚರ್ಚೆ ಇಲ್ಲಿ ಪ್ರಸ್ತುತವಾಗುತ್ತದೆ.

ಒಂದು ಕಡೆಯಿಂದ ಡೀಸೆಲ್ ಬೆಲೆಯನ್ನೂ ಏರಿಸಲಾಗಿದೆ, ಮತ್ತೊಂದೆಡೆಯಿಂದ ಚಿಲ್ಲರೆ, ವಿಮಾನಯಾನ ಹಾಗೂ ಪ್ರಸಾರ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಅನುಮತಿ ಕೊಟ್ಟಿದೆ. ಕಳೆದ ಎರಡು ಮೂರು ವರ್ಷಗಳಿಂದ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರು ಬಹುಶಃ ಈ ಎಲ್‌ಪಿಜಿ ಬಾಂಬ್‌ಗೆ ಮನದೊಳಗೆ ಹಿಡಿಶಾಪ ಹಾಕುತ್ತಾ ಕೊರಗಬಹುದೇ ಹೊರತು, ಧ್ವನಿಯೆತ್ತಿ ಪ್ರತಿಭಟಿಸುವ ಶಕ್ತಿಯಂತೂ ಯಾರಿಗೂ ಇಲ್ಲ. ಜನಪರ ಕಾಳಜಿಗಿಂತಲೂ ರಾಜಕೀಯವೇ ಹೆಚ್ಚಾಗಿಬಿಟ್ಟಿರುವಾಗ, ಯಾವುದೇ ಒಂದು ಪ್ರತಿಭಟನೆಯನ್ನು ಗುರಿ ತಲುಪಿಸಬಲ್ಲಷ್ಟು ಪ್ರಬಲವಾಗಿ ಹೋರಾಡುವ ಛಾತಿಯೂ ಯಾವುದೇ ಪಕ್ಷಕ್ಕೆ ಇದ್ದಂತೆಯೂ ಇಲ್ಲ!

ಸಬ್ಸಿಡಿಯುಳ್ಳ ಎಲ್‌ಪಿಜಿ ಸಿಲಿಂಡರುಗಳ ಪ್ರಮಾಣವನ್ನು ವರ್ಷಕ್ಕೆ ಆರು, ಅಂದರೆ ಎರಡು ತಿಂಗಳಿಗೆ ಒಂದಕ್ಕಷ್ಟೇ ಸೀಮಿತಗೊಳಿಸಿರುವ ಪರಿಣಾಮ ಏನು ಅಂತ ಬಹುಶಃ ಜನ ಸಾಮಾನ್ಯರಿಗೆ ಇನ್ನೂ ನಿಖರವಾಗಿ ವೇದ್ಯವಾಗಿಲ್ಲವೋ ಅನಿಸುತ್ತಿದೆ. ಗಂಡ-ಹೆಂಡತಿ ಮತ್ತು ಒಂದು ಮಗು ಇರುವ ಕುಟುಂಬವನ್ನಷ್ಟೇ ಪರಿಗಣನೆಗೆ ತೆಗೆದುಕೊಂಡು ಕೇಂದ್ರ ಸರಕಾರದ ‘ಬುದ್ಧಿವಂತರು’ ಈ ಸೂತ್ರ ರೂಪಿಸಿದ್ದಾರೆ. ಇದರಲ್ಲಿ ಹಬ್ಬ-ಹರಿದಿನಗಳು, ನೆಂಟರಿಷ್ಟರೊಂದಿಗೆ ತಿನ್ನುಣ್ಣುವ ಸಂಗತಿಯನ್ನು ಲೆಕ್ಕದಿಂದ ಹೊರಗಿಡಲಾಗಿದೆ. ಅಷ್ಟೇ ಏಕೆ, ಗಂಡ-ಹೆಂಡತಿಯ ಅಪ್ಪ ಅಮ್ಮ ಕೂಡ ಜೊತೆಯಾಗಿ ಬಾಳುತ್ತಾರೆ ಎಂಬ ಕೂಡು-ಕುಟುಂಬದ ಸಿದ್ಧಾಂತವೇ ನಮ್ಮನ್ನಾಳುವವರಿಗೆ ಮರೆತುಹೋಗಿರಬಹುದು! ಅಂತೂ ಇಂತೂ ಹಬ್ಬ ಮಾಡಿದರೂ, ನೆಂಟರಿಷ್ಟರು ಬಂದರೂ ಮನೆಯೊಡತಿಯ ಗೊಣಗೊಣ ಸದ್ದು, ಮನೆಯ ಪಾತ್ರೆಗಳ ಸದ್ದಿಗಿಂತಲೂ ಹೆಚ್ಚಾಗಿ ಕೇಳಿಬರಲಿದೆಯಿನ್ನು!

ಹೀಗಂತ ಯಾಕೆ ಹೇಳಬೇಕಾಯಿತೆಂದರೆ, ನಗರೀಕರಣದಿಂದಾಗಿ ಉರುವಲು ಆಯ್ದು ತಂದು ಒಲೆ ಹಚ್ಚುವವರ ಸಂಖ್ಯೆ ಈಗ ವಿರಳವಾಗಿಬಿಟ್ಟಿದೆ. ನಮ್ಮ ಹಿಂದಿನ ರಾಜಕಾರಣಿಗಳ ದೂರದರ್ಶಿತ್ವದಿಂದಾಗಿ ಅಡುಗೆ ಅನಿಲವೆಂಬೊಂದು ಮಹಾನ್ ವರವು ಸರಕಾರಕ್ಕೆ ತೆರಿಗೆ ಕಟ್ಟುವ ಜನ ಸಾಮಾನ್ಯರ ಪಾಲಿಗೆ ಲಭಿಸಿತ್ತು. ಮತ್ತು ಹಳ್ಳಿಗಳವರೆಗೂ ಈ ಸೌಲಭ್ಯ ತಲುಪಿದೆಯೆಂದರೆ ನಮ್ಮನ್ನು ಈ ಮೊದಲು ಆಳುತ್ತಿದ್ದ ರಾಜಕಾರಣಿಗಳ ಇಚ್ಛಾಶಕ್ತಿ, ಜನಸೇವೆಯ ಕಾಳಜಿಯಿಂದಲೇ ಎಂಬುದಕ್ಕೆ ಎರಡು ಮಾತಿಲ್ಲ.

ಆದರೆ ಈಗೇನಾಗುತ್ತಿದೆ? ಎಲ್ಲಿ ನೋಡಿದರೂ ಹಗರಣಗಳದ್ದೇ ಸುದ್ದಿ, ಶಾಸಕರು, ಸಂಸದರು, ಮಂತ್ರಿಗಳು ಅಧಿಕಾರಿಗಳು ಕಾಸು ಮಾಡುತ್ತಿದ್ದಾರಷ್ಟೇ ಎಂದುಕೊಂಡು, ‘ಏನಾದರೂ ನಮಗೇನು, ನಮಗಂತೂ ಅಡುಗೆ ಅನಿಲಕ್ಕೆ ಒಂದು ಸಿಲಿಂಡರಿಗೆ 356 ರೂಪಾಯಿ ಸಬ್ಸಿಡಿಯಾದರೂ ನೀಡುತ್ತದೆಯಲ್ಲಾ, ಕಟ್ಟಿದ ತೆರಿಗೆ ಹಣ ಸಾರ್ಥಕವಾಯಿತು’ ಎಂದುಕೊಂಡ ಸಾಮಾನ್ಯ ಪ್ರಜೆಯ ಈ ‘ಸ್ವಯಂ-ಸಮಾಧಾನ’ದ ಆತ್ಮಪ್ರಜ್ಞೆಗೇ ಬೆಂಕಿ ಬಿದ್ದಿದೆ. ವ್ಯವಸ್ಥೆಯ ವೈಫಲ್ಯದಿಂದಾಗಿ ಆಗುತ್ತಿರುವ ನಷ್ಟ ತುಂಬಿಸಲು ಜನಸಾಮಾನ್ಯರ ಹೊಟ್ಟೆಗೆ ಹೊಡೆಯುವುದು ಎಷ್ಟು ಸರಿ?

ಸಬ್ಸಿಡಿ ನೀಡಿದರೆ ತೈಲ ವಿತರಣಾ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂಬ ಮಾತನ್ನು ಒಪ್ಪಿಕೊಳ್ಳೋಣ. ಇದೇ ಗೃಹಬಳಕೆಯ ಸಿಲಿಂಡರುಗಳನ್ನು (14.2 ಕೆಜಿ ಸಿಲಿಂಡರ್ ಬೆಲೆ 408 ರೂ., ಸರಕಾರ ನೀಡುವ ಸಬ್ಸಿಡಿ 356 ರೂ.) ಕಾಳಸಂತೆಯಲ್ಲಿ ಮಾರುವ ಅಥವಾ ಮತ್ತಷ್ಟು ದುಡ್ಡು ಮಾಡಲು ಕಮರ್ಷಿಯಲ್ ಸಿಲಿಂಡರುಗಳಿಗೆ ತುಂಬಿಸಿ ಮಾರುವ ಜಾಲವೂ ಸಕ್ರಿಯವಾಗಿದೆ ಎಂಬುದನ್ನು ನಾವು ಈಗಾಗಲೇ ಓದಿದ್ದೇವೆ. ಅಷ್ಟಲ್ಲದೆ, ಸಬ್ಸಿಡಿ ಸಿಲಿಂಡರುಗಳನ್ನು ಕೆಲವು ಹೋಟೆಲುಗಳಿಗೆ, ವಾಹನಗಳಿಗೆ, ಬೀದಿಬದಿ ವ್ಯಾಪಾರದ ಅಂಗಡಿಗಳಲ್ಲಿ ಬಳಸಲಾಗುತ್ತಿರುವುದನ್ನು ಕೂಡ ಕೇಳಿದ್ದೇವೆ, ಕಣ್ಣಾರೆ ಕಂಡಿದ್ದೇವೆ. ಇಂಥದ್ದಕ್ಕೆಲ್ಲಾ ಕಡಿವಾಣ ಹಾಕುವ ಬದಲು, ಜನರಿಗೇ ಪ್ರಹಾರ ನೀಡುವುದು ಎಷ್ಟು ಸರಿ?

ಕುಟುಂಬ ಒಡೆಯುತ್ತದೆ…ಅಂತ ಹೇಳಲೇಬೇಕಾಗಿದೆ. ಹೇಗೆ? ಅಪ್ಪ, ಅಮ್ಮ, ಮಗು ಇರುವ ಒಂದು ಕುಟುಂಬಕ್ಕೆ ಎರಡು ತಿಂಗಳಿಗೆ ಒಂದು ಸಿಲಿಂಡರ್ ಸಾಕಾಗುವುದು ತುಂಬಾ ಕಷ್ಟ. ಇನ್ನು ತಂದೆ-ತಾಯಂದಿರು, ಸಹೋದರ-ಸಹೋದರಿಯರು ಜತೆಯಾಗಿ ಬಾಳುವ ಕೂಡು ಕುಟುಂಬಗಳು ಇನ್ನು ಪ್ರತ್ಯೇಕವಾಗಿ ವಾಸಿಸಲು ಹೋಗಬಹುದು. ಲಾಜಿಕ್ ಸಿಂಪಲ್! ಒಂದು ಕುಟುಂಬವು ಪ್ರತ್ಯೇಕವಾಗಿ ಒಡೆದು ನಾಲ್ಕು ಕುಟುಂಬವಾಗಿ ವಾಸಿಸತೊಡಗಿದರೆ, ಅಷ್ಟೇ ಸಿಲಿಂಡರು ಪಡೆದರೆ ಸಮಸ್ಯೆ ಪರಿಹಾರವಾಗುತ್ತದೆ! ಬದುಕಬೇಕಲ್ಲಾ!

ಇಷ್ಟು ಮಾತ್ರವಲ್ಲ, ಅಡುಗೆ ಅನಿಲ ಉಳಿತಾಯ ಮಾಡಲು ಜನರು ಊಟ-ತಿಂಡಿಗೆ ಹೋಟೆಲಿಗೆ ಹೋಗತೊಡಗಿದರೂ ಅಚ್ಚರಿಯಿಲ್ಲ. ಮನೆಯಲ್ಲಿ ಮಾಡುವುದಕ್ಕಿಂತ ಹೋಟೆಲಲ್ಲಿ ಉಣ್ಣುವುದೇ ಅಗ್ಗದ ಸಂಗತಿ ಅಂತ ಲೆಕ್ಕಾಚಾರ ಹಾಕುವವವರಿಗೇನೂ ಕೊರತೆಯೂ ಇಲ್ಲ!

ಇನ್ನೂ ಒಂದು ಜೋಕ್ ಇದೆ. ತೈಲ ಕಂಪನಿಗಳ ನಷ್ಟ ತಗ್ಗಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಸಲ್ಲಿಸಿದ ವರದಿಯ ಅನುಸಾರ ಈ ಕ್ರಮ ಕೈಗೊಂಡಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಆದರೆ, ಇದೇ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಮತ್ತೊಂದು ಅಂಶವೂ ಇತ್ತು. ಅದೆಂದರೆ, ‘ಸರಕಾರದಿಂದ ಈಗಾಗಲೇ ಸಾಕಷ್ಟು ಸೌಲಭ್ಯ ಪಡೆಯುತ್ತಿರುವ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಹಾಗೂ ಜನ ಪ್ರತಿನಿಧಿಗಳಿಗೆ ಸಬ್ಸಿಡಿದರದ ಅಡುಗೆ ಅನಿಲ ಪೂರೈಕೆಯನ್ನು ರದ್ದುಗೊಳಿಸಬೇಕು’ ಎಂಬುದು. ವರದಿಯ ಈ ಭಾಗ ನಮ್ಮ ಕಣ್ಣಿಗೇ ಬಿದ್ದಿಲ್ಲ ಎಂದು ವರ್ತಿಸಿರುವ ಸರಕಾರ, ಜನಸಾಮಾನ್ಯನಿಗೆ ಹೊಡೆಯುವ ಅಂಶವನ್ನು ಮಾತ್ರ ಅಂಗೀಕರಿಸಿದೆ!

ಸರಕಾರವೇ ‘ಕರೆಂಟಿಲ್ಲ, ಉಳಿತಾಯ ಮಾಡಿ’ ಅನ್ನುತ್ತಿದೆ. ಹೀಗಾಗಿ ಸ್ವಲ್ಪ ಅನುಕೂಲಸ್ಥರು ನೀರು ಕಾಯಿಸಲೆಂದು ವಿದ್ಯುತ್ ಹೀಟರ್‌ಗಳ ಬದಲು, ಗ್ಯಾಸ್ ಗೀಸರ್‌ಗಳನ್ನು ಖರೀದಿಸಿದ್ದರು. ಅದೂ ಖೋತಾ ಆಯಿತು. ಕಾಡುವ ರೋಗಗಳ ತಡೆಗೆ ಕುದಿಸಿ ಆರಿಸುವ ನೀರು ಕುಡಿಯುವುದಂತೂ ಇನ್ನು ಸಾಧ್ಯವಿಲ್ಲ. ಇನ್ನು ಹೆಚ್ಚೆಚ್ಚು ಉಪವಾಸ ಮಾಡಬಹುದು, ಆರೋಗ್ಯಕ್ಕೂ ಉತ್ತಮವಾಗಿರುವ ಕಡಿಮೆ ಬೇಯಿಸಿದ ಆಹಾರ ಸೇವಿಸಬಹುದು. ಸೀಮೆ ಎಣ್ಣೆ ಸಿಗುವುದಿಲ್ಲ, ಕಾಂಕ್ರೀಟ್ ಕಾಡುಗಳೇ ಹೆಚ್ಚಾಗಿರುವಾಗ ಸೌದೆಯೂ ಇಲ್ಲ. ಹೀಗಾಗಿ ಕೇಂದ್ರವು ಅಡುಗೆಮನೆಗೇ ಬೆಂಕಿ ಹಚ್ಚಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ!

Advertisements

2 thoughts on “ಸಿಲಿಂಡರು ವರ್ಷಕ್ಕಾರು, ಅಡುಗೆಮನೆ ತಿಳಿಯದವರ ನಿರ್ಧಾರ!

  1. ಮಾನ್ಯರೇ,ನಮ್ಮ ಸಂಸದರು, ಅಧಿಕಾರಿಗಳು, ಬಡಜನರ ತಲೆಯಮೇಲೆ ಚಪ್ಪಡಿ ಎಳೆಯಲು. ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ಕಾರ್ಡಿಗೆ ಆರು ಸಿಲಿಂಡರ್ ಎಂದು ಹೇಳಿದರೆ ಹೇಗೆ. ಒಂದು ಕುಟುಂಬ ಎಂದರೆ, ಗಂಡ ಹೆಂಡತಿ ಮಾತ್ರವೇ? ಅಥವಾ ಗಂಡ ಹೆಂಡತಿ,ಎರಡು ಮಕ್ಕಳು ಮಾತ್ರವೇ? ಇನ್ನು ಮಿಕ್ಕವರು, ಅಂದರೆ, ತಂದೆ,ತಾಯಿ,ಅಣ್ಣ ತಮ್ಮಂದಿರು,, ಅಕ್ಕಂದಿರು ,ತಂಗಿಯರು, ಹೀಗೆ ಅವಿಭಕ್ತ ಕುಟುಂಬವಿದ್ದರೆ ಹೇಗೆ? ಏನೋ ಹಣ ಉಳಿಸುತ್ತೇವೆ ಎಂದು ಉಪ್ವಾಸ್ವಿರಲು ಸಾಧ್ಯವೇ? ಅದರ ಬದಲಾಗಿ ಅಕ್ರಮವಾಗಿ ಸಂಪರ್ಕ ಪಡೆದಿರುವವರು, ಅಕ್ರಮವಾಗಿ ಹೋಟೆಲ್ ಗೆ ಅಂಗಡಿಗಳಿಗೆ ಮಾರುವ ಏಜೆನ್ಸಿಗಳನ್ನು ಹಿಡಿದರೆ ಅನುಕೂಲವಾಗುತ್ತದೆ ಅಲ್ಲವೇ? ಬದವರಿಗಂತೂ ತುಂಬಾ ಕಷ್ಟವಾಗುತ್ತದೆ ಅಲ್ಲವೇ?

    Like

    • ಅವರಿಗೇನಂತೆ… ನಾವೇ ಕಟ್ಟುವ ತೆರಿಗೆ ಹಣವನ್ನು ತಿಂದು ತೇಗುತ್ತಾರೆ… ಜನ ಸಾಮಾನ್ಯರ ಸಂಕಷ್ಟ ಅವರಿಗೆ ಅರ್ಥವಾಗುವುದೇ ಇಲ್ಲ. ದುಡ್ಡು ಮಾಡುವುದು ಮಾತ್ರ ಅವರ ಚಿಂತೆ. ಬಡ ತೆರಿಗೆದಾರರಿಗೋ, ಖಾಲಿ ಹೊಟ್ಟೆಯಲ್ಲಿ ಕೂರದೇ ಇರುವುದು ಹೇಗೆಂಬುದೇ ಚಿಂತೆ. ಈಗ ನೋಡಿ, ಮತ್ತೆ ಗ್ಯಾಸ್ ಬೆಲೆ ಏರಿಸಿದ್ದಾರೆ….

      Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s