ಡಾಕ್ಟರ್ ಮನಮೋಹನ ಸಿಂಗರೇ, ಹೀಗಾದಿರಲ್ಲಾ, ಯಾಕೆ?

ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿನಲ್ಲಿ ನಮ್ಮ ಪ್ರಧಾನ ಮಂತ್ರಿಗೆ ಇತ್ತಿತ್ತಲಾಗಿ ಅಂದರೆ ಕಳೆದೆರಡ್ಮೂರು ವರ್ಷಗಳಿಂದ ಭಾರೀ ನಂಬಿಕೆ ಹುಟ್ಟುತ್ತಿರುವಂತಿದೆ. ಒಂದು ಕಾಲದಲ್ಲಿ ಸಂಸತ್ತನ್ನೇ ನಡುಗಿಸುವಷ್ಟು ಮಾತನಾಡುತ್ತಿದ್ದ, ಇಕನಾಮಿಕ್ಸ್ ಬದಲು ಮನಮೋಹನಾಮಿಕ್ಸ್ ಎಂದೆಲ್ಲಾ ಹೆಸರು ಗಳಿಸಿದ್ದ ವಿತ್ತ ತಜ್ಞರೊಬ್ಬರ ಧ್ವನಿಯು, ಅವರ ವಿತ್ತಾನುಭವ ಅಗತ್ಯವಿದ್ದ ಕಾಲದಲ್ಲಿಯೇ ಉಡುಗಿ, ಅಡಗಿ ಹೋಗಿದೆ. ಏನಾಗಿದೆ ನಮ್ಮ ಪ್ರಧಾನಿಗೆ? ಯಾಕೆ ಜನರ ಧ್ವನಿ ಕೇಳಿಸುತ್ತಿಲ್ಲ? ಯಾಕೆ ಬಾಯಿ ತೆರೆಯುತ್ತಿಲ್ಲ?

ಈ ಪ್ರಶ್ನೆ ಕೇಳುವುದಕ್ಕೂ ಒಂದಲ್ಲ, ನೂರಾರು ಕಾರಣಗಳಿವೆ. ಭಾರತವನ್ನು 21ನೇ ಶತಮಾನಕ್ಕೆ ಉಬ್ಬಿದೆದೆಯಿಂದ ಕಾಲಿಡಲು ಪ್ರೇರೇಪಣೆ ನೀಡಿದಂತಹಾ, ಆಧುನಿಕ ಕೌಟಿಲ್ಯ (ಚಾಣಕ್ಯ) ಎಂದೆಲ್ಲಾ ಕರೆಸಿಕೊಂಡ ಪಿ.ವಿ.ನರಸಿಂಹ ರಾವ್ ಕಾಲದಲ್ಲಿ ಹಂತ ಹಂತದಲ್ಲಿಯೂ ಆರ್ಥಿಕ ಸುಧಾರಣೆಗಳನ್ನು ಮಾಡುತ್ತಾ, ಬದಲಾವಣೆಯ ಹರಿಕಾರ ಎಂದೆಲ್ಲಾ ಕರೆಯಿಸಿಕೊಂಡಿದ್ದ ಡಾಕ್ಟರ್ ಮನಮೋಹನ್ ಸಿಂಗರು ಈಗ ಅವರ ಪಕ್ಷದಲ್ಲಿಯೇ ಏಕಾಂಗಿಯಾಗಿದ್ದಾರೆಯೇ?

ಸ್ವತಃ ತಮ್ಮದೇ ಪಕ್ಷದವರು, “ರಾಹುಲ್ ಗಾಂಧಿ ಪ್ರಧಾನಿಯಾಗಲು ಇದು ಸಕಾಲ” ಎಂದೆಲ್ಲಾ ಹೇಳಿಕೆ ನೀಡುತ್ತಿರುವಾಗ, ಹತಾಶರಾಗಿ ತುಟಿ ಪಿಟಕ್ಕೆನ್ನುತ್ತಿಲ್ಲ ಎಂದಾದರೆ, ಈ ದೇಶದ ನೂರಾ ಹದಿನೈದು ಕೋಟಿ ಜನರು ಯಾರತ್ತ ಮುಖ ಮಾಡಿ ತಮ್ಮ ನೋವು, ಸಿಟ್ಟು, ಸೆಡವುಗಳನ್ನೆಲ್ಲಾ ಹೇಳಿಕೊಳ್ಳಬೇಕು? ಈ ಪರಿಯಲ್ಲಿ ಭ್ರಷ್ಟಾಚಾರಗಳ ಮಹಾಪೂರ, ದಿನಕ್ಕೊಂದೊಂದಾಗಿಯೇ ಏರುತ್ತಿರುವ ಬೆಲೆಗಳು, ಅದರ ಮೇಲೆ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುವಂತೆ ಡೀಸೆಲ್, ಅಡುಗೆ ಅನಿಲ, ಸೀಮೆಎಣ್ಣೆ ಬೆಲೆಯೂ ಏರಿ, ಜನ ಸಾಮಾನ್ಯರು ವಿಶೇಷವಾಗಿ ಭಾರತೀಯ ಮಧ್ಯಮ ವರ್ಗ ಬದುಕುವುದೇ ದುಸ್ತರವಾಗುತ್ತಿರುವ ಈ ಹಂತದಲ್ಲಿ, ಇನ್ಯಾರಲ್ಲಿ ನಾವು ನಮ್ಮ ದಯನೀಯ ಪರಿಸ್ಥಿತಿ ಹೇಳಿಕೊಳ್ಳುವುದು?

ಅದೇನೋ ನಮಗರ್ಥವಾಗದ ಹಣದುಬ್ಬರವನ್ನು ಇಳಿಸಬೇಕಾಗಿದೆಯಂತೆ, ಅದಕ್ಕಾಗಿ ಸಾಲದ ಬಡ್ಡಿ ದರಗಳನ್ನು ಏರಿಸಬೇಕಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಪ್ಪಣೆ ಕೊಡಿಸಿದ್ದೇ ತಡ, ಸಾಲ ಸೋಲ ಮಾಡಿ ಮನೆ ಕಟ್ಟಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವ ಹಂತದಲ್ಲೇ ಎರಗಿತ್ತು ಈ ಬರಸಿಡಿಲು ಬಡ ಮಧ್ಯಮ ವರ್ಗಕ್ಕೆ. ಬದುಕುವುದಕ್ಕೆ ಮೂಲಭೂತ ಆವಶ್ಯಕತೆಯಲ್ಲೊಂದಾದ ಮನೆಗಾಗಿ ಮಾಡಿದ ಸಾಲದ ಬಡ್ಡಿ ದರ ದಿಢೀರ್ ಏರಿಕೆ ಕಂಡು, ಮಾಸಿಕ ಕಂತಿನಲ್ಲಿಯೂ ದಿಢೀರ್ ಏರಿಕೆಯಾಗಿ, ತಿಂದುಣ್ಣುವ ನಡುವೆ, ಜೇಬಿಗೆ ದೊಡ್ಡ ರಂಧ್ರ ಬಿದ್ದದ್ದು ನೋಡಿ, ಬೆವರು ಸುರಿಸಿ ಇಪ್ಪತ್ತನಾಲ್ಕು ಗಂಟೆ ದುಡಿದರೂ ಕೂಡಿಡಲು ಪ್ರಯತ್ನಿಸುವ ಆ ಹಣವೆಲ್ಲ ಎಲ್ಲಿ ಹೋಗುತ್ತದೆ ಎಂದು ಬೆಚ್ಚಿ ಬೀಳುವ ಸರದಿ ನಿಮ್ಮದೇ ಪ್ರಜೆಗಳದ್ದು ಅಲ್ಲವೇ ಸಿಂಗರೇ?

ಒಂದು ಸೋಪು ತೆಗೆದುಕೊಂಡರೆ ತೆರಿಗೆ, ಅಕ್ಕಿ-ಬೇಳೆಗೂ ತೆರಿಗೆ, ಪೆನ್ನು ತೆಗೆದುಕೊಂಡರೆ ಮಾರಾಟ ತೆರಿಗೆ… ಒಂದು ಮಿತಿಗಿಂತ ಹೆಚ್ಚು ಆದಾಯ ಬಂದರೆ ಅದಕ್ಕೆ ತೆರಿಗೆ… ಈ ಮಾದರಿಯಲ್ಲಿ ನಾವೇ ತೆರಿಗೆ ಮೇಲೆ ತೆರಿಗೆ ಹಣ ಕಟ್ಟುತ್ತಲೇ ಇದ್ದರೂ, ಅದನ್ನು ಮೂಲ ಸೌಕರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬೆಲ್ಲಾ ಹೇಳಿಕೆಗಳು ಬಂದರೂ, ಒಂದೇ ವರ್ಷಕ್ಕೆ ಡಾಮರೆದ್ದು ಹೊಂಡದ ಕುಳಿಗಳಂತಾಗುವ ರಸ್ತೆಗಳು, ಅಗತ್ಯವಿದ್ದಾಗಲೇ ಕೈಕೊಡುವ ವಿದ್ಯುತ್ ವ್ಯವಸ್ಥೆಗಳು, ದಿಢೀರನೇ ಕುಸಿದು ಬೀಳುವ ಸೇತುವೆಗಳು, ನಳ್ಳಿ ತಿರುಗಿಸಿದರೆ ಗಾಳಿ ಮಾತ್ರವೇ ಬರುವ ನಳ್ಳಿಗಳು, ದೊಡ್ಡ ದೊಡ್ಡ ಪೈಪುಗಳು ಒಡೆದು ಸೋರುವ ನೀರು, ರೈತರು ಬೆಳೆಯುವ ಬೀಜವೂ ನಕಲಿ, ಅವರಿಗೆ ಕೊಡಲಾಗುವ ಗೊಬ್ಬರವೂ ನಕಲಿ… ಈ ರೀತಿಯಾಗಿ ಪ್ರತಿಯೊಂದು ಹಂತದಲ್ಲಿಯೂ ಭ್ರಷ್ಟಾಚಾರವಾಗಿ ನಮ್ಮ ಹಣ ಪೋಲಾಗುತ್ತಿರುವಾಗ, ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ನೀವೇನೇ ಹೇಳಿಕೊಂಡರೂ, ಅಭಿವೃದ್ಧಿಗಾಗಿ ನಾವು ಕೊಟ್ಟ ಹಣವು ಎಲ್ಲೋ ಸೋರಿಕೆಯಾಗಿ, ನಮ್ಮ ಕೈಗೆ ಸಿಗುತ್ತಿರುವುದು ಇಂತಹಾ ಗುಣಮಟ್ಟವಿಲ್ಲದ ಸೌಕರ್ಯಗಳೇ ತಾನೇ? ಇದು ಕೂಡ ನಿಮ್ಮ ಅರಿವಿಗೆ ಬಂದಿರಬಹುದು. ಹಾಗಿದ್ದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ತಪ್ಪೇ?

ಅದೆಲ್ಲಾ ನಮ್ಮ ಕರ್ಮ ಎಂದುಕೊಂಡು ಸುಮ್ಮನಾಗೋಣ. ಒಲೆ ಉರಿಸಲು ಸೌದೆ ಸಿಗುತ್ತಿಲ್ಲ. ಸೀಮೆಎಣ್ಣೆಯೋ, ಅಡುಗೆ ಅನಿಲವನ್ನೋ ನೆಚ್ಚಿಕೊಂಡಿದ್ದೇವೆ. ಇದು ಬದುಕಲು ಅತ್ಯಗತ್ಯ ಕೂಡ. ಅದರ ಬೆಲೆ ಏರಿಸಿದರೆ, ಮಧ್ಯಮ ವರ್ಗದ ಜನ, ಪೈಸೆ ಪೈಸೆ ವೆಚ್ಚ ಮಾಡಲು ಎರಡೆರಡು ಬಾರಿ ಯೋಚಿಸುವ ಜನ ಏನು ಮಾಡಬೇಕು? ನೀವು ಹೇಳಿಕೊಳ್ಳಬಹುದು, ನಾವು ಬರೇ 3 ರೂಪಾಯಿ ಡೀಸೆಲ್‌ಗೆ, 50 ರೂಪಾಯಿ ಅಡುಗೆ ಅನಿಲಕ್ಕೆ ಹೆಚ್ಚಿಸಿದ್ದೆಂದು. ಆದರೆ ಎಲ್ಲ ದರ ಏರಿಕೆಯ ತಾಯಿ ಇದು. ಡೀಸೆಲ್ ಬೆಲೆ ಏರಿದ ತಕ್ಷಣವೇ ಬಸ್ ಪ್ರಯಾಣ ದರ ಏರುತ್ತದೆ, ಹೋಟೆಲ್ ತಿಂಡಿ ದರ ಏರಿಕೆಯಾಗುತ್ತದೆ. ಎಲ್ಲ ವಸ್ತುಗಳ ಸಾಗಾಟ ದರ ಹೆಚ್ಚಳವಾಗುವುದರಿಂದ, ಪ್ರತಿಯೊಂದು ವಸ್ತುವಿನ ಬೆಲೆಯೂ ಏರಿಕೆಯಾಗುತ್ತದೆ. ನೀವು ಏರಿಸಿದ 3 ರೂಪಾಯಿಗೆ ನಾವು ಒಂದು ದಿನದಲ್ಲಿ “ಬಡ್ಡಿ ಸಹಿತವಾಗಿ ದಂಡ” ಕಟ್ಟ ಬೇಕಿರುವುದು ಒಂದು ಹೊತ್ತಿನ ಊಟಕ್ಕೆ ಕನಿಷ್ಠ ಇಪ್ಪತ್ತು ರೂಪಾಯಿ! ಆ ಪೆಟ್ರೋಲ್, ಡೀಸೆಲ್, ಎಲ್ಪಿಜಿ, ಸೀಮೆಎಣ್ಣೆಗಳ ಮೇಲಿನ ತೆರಿಗೆಗಳು, ಸುಂಕಗಳನ್ನಾದರೂ ಕಡಿತಗೊಳಿಸಿ ಜನರಿಗೆ ಒಂದಿಷ್ಟಾದರೂ ನೆಮ್ಮದಿ ನೀಡಬಾರದೇಕೆ? ಜನರನ್ನು ಹಿಂಡಲು ಸರಕಾರವು ಈ ಪೆಟ್ರೋಲಿಯಂ ಉತ್ಪನ್ನಗಳನ್ನೇ ಯಾಕೆ ನೆಚ್ಚಿಕೊಳ್ಳಬೇಕು? ಹಣ ಸಾಲುತ್ತಿಲ್ಲವೆಂದಾದರೆ ಬೇರಾವುದೇ ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ವಿಧಿಸಬಹುದಿತ್ತಲ್ಲಾ?

ತೈಲ ವಿತರಣಾ ಕಂಪನಿಗಳಿಗೆ ನಷ್ಟವಾಗುತ್ತಿರುವುದರಿಂದ ಅದನ್ನು ಭರಿಸಬೇಕು ಎಂದು ನೀವು, ನಿಮ್ಮವರು ಏನೇ ಸಮಜಾಯಿಷಿ ನೀಡಿದರೂ, ಜಗಮಗಿಸುವ ಐಷಾರಾಮಿ ಮಾಲ್‌ಗಳು ತುಂಬಿರುವ, ಭರ್ಜರಿ ಬಂಗಲೆಗಳಂತಿರುವ ಪೆಟ್ರೋಲ್ ಪಂಪುಗಳೆಂಬ ತೈಲ ವಿತರಣಾ ಕೇಂದ್ರಗಳನ್ನು ನೋಡಿದರೆ, ಇವು ನಷ್ಟದಲ್ಲಿ ನಡೆಯುತ್ತಿವೆ ಅನ್ನಿಸುತ್ತಿವೆಯೇ? ಪೆಟ್ರೋಲ್ ಬಂಕ್ ಪರವಾನಗಿಗಾಗಿ ಇಷ್ಟೊಂದು ಪೈಪೋಟಿ, ಕಾದಾಟ, ಹಗರಣಗಳೂ ನಡೆಯುತ್ತಿರುವುದು ಅವುಗಳಿಂದ ಲಾಭವಿಲ್ಲ ಎಂಬ ಕಾರಣದಿಂದಲೇ? ಹಾಗಿದ್ದರೆ ನಷ್ಟ ಆಗುತ್ತಿರುವುದು ಎಲ್ಲಿ? ಬಿಳಿ ಕಾಲರುಗಳು, ಬಿಳಿಯಾನೆಗಳು ಇಲ್ಲೇ ಎಲ್ಲೋ ಅಡ್ಡಾಡುತ್ತಿವೆ ಅನ್ನಿಸುವುದಿಲ್ಲವೇ? ಅದನ್ನು ನೀವು ಬಿಚ್ಚಿಡಬೇಕಾದ ಅನಿವಾರ್ಯತೆಯಿದೆ.

ಈ ಕಪ್ಪು ಹಣ, ಈ ಹಗರಣಗಳಿಂದಾಗುವ ನಷ್ಟ ಕಷ್ಟಗಳೆಲ್ಲವನ್ನು ತಡೆಯಲು ನಮ್ಮ ಆಡಳಿತ ವ್ಯವಸ್ಥೆಗೆ ಯಾಕೆ ಸಾಧ್ಯವಾಗುತ್ತಿಲ್ಲ? ಈ ಕಪ್ಪು ಹಣವನ್ನೇ ತಂದರೂ ಕೂಡ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗುತ್ತಿರುವ ಕಂಪನಿಗಳಿಗೆ ಸುರಿದು ಅವನ್ನೆಲ್ಲಾ ಮೇಲೆತ್ತಿ, ಕನಿಷ್ಠ ಪಕ್ಷ ನಿಮ್ಮ ಪ್ರಜೆಗಳನ್ನಾದರೂ ಉಳಿಸಬಹುದಲ್ಲಾ? ಹಾಗಂತ ಅನಿಸುವುದಿಲ್ಲವೇ? ಯಾಕೀ ಮೌನ? ನಿಮ್ಮ ಬಾಯಿ ಕಟ್ಟಿ ಹಾಕಿದವರಾದರೂ ಯಾರು? ಹಿಂದಿನ ಯುಪಿಎ ಅವಧಿಯಲ್ಲಿ ಅಮೆರಿಕ ಪರಮಾಣು ಒಪ್ಪಂದಕ್ಕಾಗಿ ಸರಕಾರ ಬೀಳುವ ಹಂತದಲ್ಲಿದ್ದಾಗ ‘ಓಟಿಗಾಗಿ ಹಣ’ ಎಂಬ ಪ್ರಕರಣ ನಡೆದು ನಿಮ್ಮ ಸರಕಾರ ಬಚಾವಾದಾಗ, ಎರಡು ಬೆರಳುಗಳನ್ನು ತೋರಿಸಿ ವಿಜಯದ ನಗೆ ಬೀರಿದಾಗ, ನಿಮ್ಮ ಮನದೊಳಗಿದ್ದ ದುಗುಡವನ್ನು ನಿಮಗೆ ಮುಚ್ಚಿಡಲು ಸಾಧ್ಯವಾಗಿರಲಿಲ್ಲ ಎಂಬುದು ನಿಜವಲ್ಲವೇ? ಸೋಮಾಲಿಯಾ ಕಡಲ್ಗಳ್ಳರ ಸೆರೆಗೆ ಸಿಕ್ಕವರ ಕುಟುಂಬಿಕರು ರಕ್ಷಿಸಬೇಕು ಎಂದು ನಿಮ್ಮಲ್ಲಿಗೇ ಬಂದು ಮೊರೆಯಿಟ್ಟಾಗ, ನಾನೇನೂ ಮಾಡುವ ಸ್ಥಿತಿಯಲ್ಲಿಲ್ಲ ಎಂಬ ಅಸಹಾಯಕತೆ ಪ್ರದರ್ಶಿಸಿ ಕೈಎತ್ತಿದ್ದರ ಹಿಂದಿರುವ ರಹಸ್ಯವಾದರೂ ಏನು? ಅತ್ತ ಕಡೆ, ಭಾರತದ ಎಲ್ಲ ಸಮಸ್ಯೆಗಳಿಗೆ ಗಡಿಯಾಚೆಗಿನ ಭಯೋತ್ಪಾದನೆ ಮೂಲ ಕಾರಣ ಎಂದು ಗೊತ್ತಿದ್ದರೂ, ವಿಶ್ವದ ಹಿರಿಯಣ್ಣ ಅಮೆರಿಕವೇ ಹೇಳಿದಾಗಲೂ, ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಗತಿ ಕಾಣಿಸುವುದು ನಮಗಿನ್ನೂ ಸಾಧ್ಯವಾಗಿಲ್ಲ. ಪಾಕಿಸ್ತಾನಕ್ಕೂ ದಿಟ್ಟ ಎದೆಗಾರಿಕೆ ಪ್ರದರ್ಶಿಸಿ ಬುದ್ಧಿ ಹೇಳುವುದು ನಮಗೆ ಸಾಧ್ಯವಾಗಿಲ್ಲ. ಇದಕ್ಕೂ ನಿಮ್ಮದು ಮೌನವೇ ಉತ್ತರವೇಕೆ?

ಈ ಸಮಾಜದ ಉದ್ಧಾರವಾಗಬೇಕು, ಪ್ರತಿಯೊಂದು ಹಂತದಲ್ಲಿಯೂ ಲಂಚ ನೀಡಬೇಕಾದ ಅನಿವಾರ್ಯತೆಯಿಂದ ಜನರನ್ನು ರಕ್ಷಿಸುವ ಸಲುವಾಗಿ ಅಣ್ಣಾ ಹಜಾರೆಯವರು ನಿಸ್ವಾರ್ಥ ಹೋರಾಟಕ್ಕೆ ಮುಂದಾದಾಗ, ನಿಮ್ಮದೇ ಸರಕಾರದ ಮಂದಿ, ನಿಮ್ಮದೇ ಪಕ್ಷದ ಮಂದಿ ಅಡ್ಡಿ ಪಡಿಸುತ್ತಿರುವುದನ್ನೂ ಕಣ್ಣು ಬಾಯಿ ಎರಡೂ ಮುಚ್ಚಿಕೊಂಡು ನೋಡುತ್ತಿರುವುದು ಎಷ್ಟು ಸರಿ? ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರ ಮೇಲೆ ಕಾರಣವಿಲ್ಲದೆಯೇ ಪೊಲೀಸರು ದಬ್ಬಾಳಿಕೆ ನಡೆಸುವಾಗ ನಿಮಗೆ ಈ ಬಡಪಾಯಿಗಳು ಯಾತಕ್ಕಾಗಿ ಆಂದೋಲನ ನಡೆಸಿದರು ಎಂಬುದನ್ನು ಯೋಚಿಸಲೂ ಸಾಧ್ಯವಾಗಲಿಲ್ಲವೇ? ಜನ ಲೋಕಪಾಲ ಮಸೂದೆಯ ಕುರಿತು ಇಷ್ಟೊಂದು ಅಬ್ಬರದ ಚರ್ಚೆ ನಡೆಯುತ್ತಿದ್ದರೂ, ನಿಮ್ಮ ಅಭಿಪ್ರಾಯವನ್ನು ಕಟ್ಟಿ ಹಾಕಿದವರು ಯಾರು? ಪ್ರಧಾನಿಯೂ ಲೋಕಪಾಲ ವ್ಯಾಪ್ತಿಗೆ ಬರಬೇಕು ಎಂದು ಒಂದೇ ಒಂದು ಬಾರಿ ಅದೊಮ್ಮೆ ಬಾಯ್ತೆರೆದು ಹೇಳಿದ ಬಳಿಕ ನಿಮ್ಮ ಕಡೆಯಿಂದ ಒಂದೇ ಒಂದು ಧ್ವನಿ ಹೊರಬಿದ್ದಿಲ್ಲ. ಅದೇಕೆ ನಿಮ್ಮ ಧ್ವನಿ ಅಲ್ಲಿಗೇ ಅಡಗಿ ಹೋಯಿತು?

ಸರಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪ್ರತಿಯೊಂದಕ್ಕೂ ಪತ್ರಿಕಾಗೋಷ್ಠಿ ಕರೆದು, ನಾನು ಈ ರೀತಿ ಮಾಡುತ್ತಿದ್ದೇನೆ, ಹೀಗೆ ಮಾಡಿದರೆ ಹೀಗಾಗುತ್ತದೆ ಎಂದೆಲ್ಲಾ ವಿವರಿಸುತ್ತಿದ್ದುದು ನೀವೇನಾ? ‘ಕೌಟಿಲ್ಯ’ನಿಗೆ ಸಮದಂಡಿಯಾಗಿ ಬಜೆಟ್ ಮಂಡಿಸಿದ ತಕ್ಷಣವೇ ಅದರ ಕುರಿತು ಸ್ಪಷ್ಟನೆ ನೀಡಲು ಸಿಗುವ ಎಲ್ಲ ವೇದಿಕೆಗಳನ್ನೂ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದುದು ನೀವೇನಾ? 2ಜಿ ಹಗರಣವು ದೇಶವನ್ನೇ ಕೊಳ್ಳೆ ಹೊಡೆದಾಗ, “ಇದು ಸಮ್ಮಿಶ್ರ ರಾಜಕೀಯಧರ್ಮದ ಅನಿವಾರ್ಯತೆ” ಎಂಬ ವಾಕ್ಯವು ಬಾಯಿ ತಪ್ಪಿ ಬಂದಿತ್ತೇ? ಇದು ನಿಮ್ಮ ಅಸಹಾಯಕತೆಯ ಪರಾಕಾಷ್ಠೆಯ ನುಡಿಯೇ? ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಇರುವಾಗ ಜಗತ್ತನ್ನು ಕಾಡಿದ ಆರ್ಥಿಕ ಹಿಂಜರಿತ ಭಾರತದ ಮೇಲೆ ಏನೂ ಪರಿಣಾಮ ಬೀರದು ಎಂದುಕೊಂಡಿದ್ದೆವು ನಾವು ಪ್ರಜೆಗಳು. ಆದರೆ ಈಗೇನಾಯಿತು? ಏರಿದ ಬೆಲೆಗಳು ಇಳಿಯುತ್ತಿಲ್ಲವೇಕೆ? ನಿಮ್ಮ ಪ್ರಜೆಗಳು ಎಂಥಾ ಸ್ಥಿತಿಯಲ್ಲಿದ್ದಾರೆ ನೋಡಿದ್ದೀರಾ? ದಯವಿಟ್ಟು ಈಗಲಾದರೂ ಮಾತನಾಡಿ. ಇಲ್ಲವಾದಲ್ಲಿ ನಿಮ್ಮ ಕೈಗಳನ್ನು ಕಟ್ಟಿದವರು, ಕಿವಿ-ಬಾಯಿಗಳನ್ನು ಮುಚ್ಚಿಸಿದವರು ಯಾರು ಅಂತಲಾದರೂ ಹೇಳಿಬಿಡಿ. ಅದೂ ಇಲ್ಲವಾದಲ್ಲಿ, ಅಂತರಜಾಲದಲ್ಲಿ ಹರಿದಾಡುತ್ತಿರುವ ಜೋಕುಗಳಿಗೆ (ದಂತ ವೈದ್ಯರು ಡಾ.ಮನಮೋಹನ್ ಸಿಂಗ್‌ಗೆ ಹೇಳುವುದು: “ದಯವಿಟ್ಟು ಇಲ್ಲಾದರೂ ಬಾಯಿ ತೆರೆಯಿರಿ!”) ನೀವು ಮತ್ತಷ್ಟು ಆಹಾರವಾಗುತ್ತೀರಿ.

ನಿಮ್ಮ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್ ಮುಂತಾದವರೇ ನಮಗೆ ಕಾಣಿಸುತ್ತಿದ್ದಾರೆ. ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್, ವೀರಪ್ಪ ಮೊಯ್ಲಿ, ಚಿದಂಬರಂ ಅವರದ್ದೇ ಧ್ವನಿ ಕೇಳಿಬರುತ್ತಿದೆ. ನೀವೆಲ್ಲಿ ಅಡಗಿದ್ದೀರಿ? ಕಾಂಗ್ರೆಸ್ ಪಕ್ಷದ ಸಭೆಗಳಲ್ಲೋ, ಸಂಪುಟ ಸಭೆಗಳಲ್ಲೋ ನಿಮ್ಮನ್ನು ನೋಡಿದರೆ, ನಿಮ್ಮ ಮುಖಭಾವವನ್ನು ನೋಡಿದರೆ, ಅದೇನೋ ಹತಾಶೆಯೊಂದಿಗೆ ಕುಳಿತಿರುತ್ತೀರಿ. ಅಂತಹಾ ಸಂದರ್ಭದಲ್ಲೆಲ್ಲಾ ಇಪ್ಪತ್ತು ವರ್ಷಗಳ ಹಿಂದೆ ನಾವು ನೋಡಿದ್ದ ಮನಮೋಹನ್ ನೀವಲ್ಲ ಅನಿಸುತ್ತಿರುವುದಾದರೂ ಯಾಕೆ? ನೂರಾ ಹದಿನೈದು ಕೋಟಿ ಪ್ರಜೆಗಳಿರುವ ಈ ಸುವಿಶಾಲ ದೇಶವನ್ನು ಮೌನವಾಗಿಯೇ ಮುನ್ನಡೆಸುವುದು ಸಾಧ್ಯವೆಂದು ನಿಮಗೆ ಈಗಲೂ ಅನಿಸುತ್ತಿದೆಯೇ? ಖಂಡಿತಾ ಮೌನ ಬಂಗಾರವಲ್ಲ! ಭಾರತೀಯರು ಅಸಹಾಯಕರಾಗಿದ್ದಾರೆ ಹೌದು, ಆದರೆ ಮೂರ್ಖರಾಗಿರುವುದು ಎಂದಿಗೂ ಸಾಧ್ಯವಿಲ್ಲ. ಬಿಹಾರದಲ್ಲಿ ಲಾಲೂ ಅವರನ್ನೇ ಮತದಾರ ಬಿಡಲಿಲ್ಲ, ತಮಿಳುನಾಡಿನಲ್ಲಿ ಡಿಎಂಕೆಯನ್ನು ಬಿಡಲಿಲ್ಲ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಕೂಡ ಈಗ ಒಬ್ಬ ಕೇವಲ ಶಾಸಕನ ಸ್ಥಿತಿಗೆ ತಲುಪಿದ್ದಾನೆ ಎಂಬುದು ನೆನಪಿನಲ್ಲಿರಬೇಕಲ್ಲಾ…!
[ವೆಬ್‌ದುನಿಯಾಕ್ಕಾಗಿ]

2 thoughts on “ಡಾಕ್ಟರ್ ಮನಮೋಹನ ಸಿಂಗರೇ, ಹೀಗಾದಿರಲ್ಲಾ, ಯಾಕೆ?

  1. ನೇರವಾಗಿ ಲೋಕಪಾಲ ಪರಿಧಿಗೆ ಪ್ರಧಾನಿ ಹುದ್ದೆಯನ್ನೂ ತನ್ನಿ ಎಂದು ಬಿಟ್ಟರೆ ಮುಂದೆ ಪ್ರಧಾನಿಯಾಗುವ ಎಲ್ಲರ ಮೇಲೂ ಸೇಡು ತೀರಿಸಿ ಕೊಳ್ಳಬಹುದು. ಆ ಮೂಲಕ ಪ್ರಜೆಗಳಿಗೂ ಅುಕೂಲ ಮಾಡಿದ ಹಾಗಾಗುತ್ತೆ.

    Like

    • ಪ್ರಸ್ಕ ಅವರೆ, ದ್ವೇಷ ಸಾಧನೆಗಾಗಿ ಸಿಬಿಐ ಬಳಸಿದಂತೆ, ಲೋಕಪಾಲವೂ ಆಗದಿರಬೇಕಾದರೆ, ರೂಪಿಸಲಾಗುವ ಕಾನೂನಿನಲ್ಲಿ ಆ ರೀತಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

      Like

ನೀವೇನಂತೀರಾ?