16 ಕೋಟಿ ಬೆಲೆ, 430 ಕಿ.ಮೀ. ವೇಗದ ಕಾರು ಭಾರತದಲ್ಲಿ!

ಬುಗಾಟಿ ಕಾರಿನೆದುರು ನಾನು ಫೋಟೋ ಕ್ಲಿಕ್ಕಿಸಿಕೊಂಡಾಗ

ಬುಗಾಟಿ ಕಾರಿನೆದುರು ನಾನು ಫೋಟೋ ಕ್ಲಿಕ್ಕಿಸಿಕೊಂಡಾಗ

ಕರಿ ಬ್ಯೂಟಿ – ಇದು ವಾಯು ವೇಗದ ಬುಗಾಟಿ

ಓಹ್! ಹಿಂದೆ ಜರ್ಮನಿಯ ಕಾರುಗಳ ಲೋಕಕ್ಕೆ ಭೇಟಿ ನೀಡಿದ್ದಾಗ, ಅಲ್ಲೊಂದು ವಿಚಿತ್ರವಾದ, ಕರ್ರಗೆ ಫಳ ಫಳನೆ ಹೊಳೆಯುವ, ಜೀರುಂಡೆಯಂತಹಾ ಬಾಡಿಯುಳ್ಳ ವಸ್ತುವೊಂದಿತ್ತು. ಅಂದು ವೂಲ್ಫ್‌ಬರ್ಗ್‌ನ ಕಾರುಗಳ ಮಾಯಾ ಲೋಕದೊಳಗೇ ಹೊಕ್ಕಿದ್ದೆವಾದುದರಿಂದ, ಇದೂ ಒಂದು ಐಷಾರಾಮಿ ಕಾರು ಆಗಿರಬಹುದು ಅಂತ ಊಹಿಸಬಲ್ಲಷ್ಟು ಪ್ರಜ್ಞೆ ನಮಗಿತ್ತು. ಹೌದು. ಇದು ಕೂಡ ಕಾರೇ! ಆದರೆ ಇದರ ವೇಗ ಗಂಟೆಗೆ 430 ಕಿ.ಮೀ.ಗೂ ಹೆಚ್ಚು ಎಂದು ನಮ್ಮ ಜೊತೆಗಿದ್ದ ವಿವರಣೆಕಾರರು ಹೇಳಿದಾಗ ಜತೆಗಿದ್ದ ನಾವು ಪತ್ರಕರ್ತರೆಲ್ಲರೂ ದಂಗಾಗಿದ್ದೆವು!

ಇದೇ ಕಾರು ಇದೀಗ ಭಾರತದಲ್ಲಿಯೂ (ಲಾಂಬೊರ್ಗಿನಿ, ಬೆಂಟ್ಲಿ ಮುಂತಾದ ಕಾರುಗಳನ್ನು ಈಗಾಗಲೇ ಪರಿಚಯಿಸಿರುವ ನವದೆಹಲಿಯ ಎಕ್ಸ್‌ಕ್ಲೂಸಿವ್ ಮೋಟಾರ್ಸ್ ಮೂಲಕ) ಬಿಡುಗಡೆಯಾಗಿದೆ ಎಂಬ ಸುದ್ದಿ ಕೇಳಿದ್ದೇ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಓದುಗರಿಗೆ ತಿಳಿಯಪಡಿಸೋಣ ಎಂದಿತು ಮನಸ್ಸು. ದೆಹಲಿಯಲ್ಲಿ ಈ ಕಾರಿನ ಎಕ್ಸ್-ಶೋ ರೂಂ (ಅಂದರೆ ರಸ್ತೆಗೆ ಬರುವ ಮುನ್ನ) ಬೆಲೆ 16 ಕೋಟಿ ರೂಪಾಯಿಯಂತೆ. ರಸ್ತೆಗೆ ಇಳಿಯುವಾಗ ರಸ್ತೆ ತೆರಿಗೆ, ವಿಮೆ, ನೋಂದಣಿ ಶುಲ್ಕ, ತೆರಿಗೆ ಇತ್ಯಾದಿತ್ಯಾದಿಗಳು ಸೇರಿ ಒಂದಷ್ಟು ಲಕ್ಷ ರೂಪಾಯಿ ಹೆಚ್ಚಾಗುತ್ತದೆ.

ಭಾರತೀಯರ ಕಾರು ಪ್ರಿಯತೆ ಜಗದ್ವಿಖ್ಯಾತ. ಅದೇ ಕಾರಣಕ್ಕಲ್ಲವೇ ಇಂದು ಮೇಲ್ವರ್ಗದ ಹಾಗೂ ಬಹುತೇಕ ಮಧ್ಯಮ ವರ್ಗದ ಮಂದಿಯ ಪ್ರತೀ ಮನೆಗೊಂದೊಂದು ಕಾರು ಇರುವ ಪರಿಸ್ಥಿತಿ ಇರೋದು! ಕಾರು ಕಂಪನಿಗಳು, ಬ್ಯಾಂಕುಗಳು ನಾಮುಂದು-ತಾಮುಂದು ಎಂದು ಗ್ರಾಹಕರಿಗೆ ಕಾರಿನ ಆಸೆ ಹುಟ್ಟುವಷ್ಟು ಭರ್ಜರಿ ಕೊಡುಗೆಗಳನ್ನು ನೀಡುತ್ತಿವೆ. ಭಾರತೀಯರ ಈ ಕಾರು ಪ್ರಿಯತೆಗೆ, ಉಳ್ಳವರ ಐಷಾರಾಮಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿಬಿಟ್ಟಿದೆ – ಅಲ್ಟ್ರಾ ಲಕ್ಸುರಿ ಕಾರುಗಳ ಒಡೆಯ ‘ಬುಗಾಟಿ ವೇಯ್ರಾನ್’.

ಈ ಜೀರುಂಡೆ ಕಾರು ಭಾರತದ ಲಕ್ಸುರಿ ಕಾರುಗಳ ಲೋಕಕ್ಕೆ ಹೊಸತನ ನೀಡಲಿದೆ. ಮರ್ಸಿಡಿಸ್, ಮಿತ್ಸುಬಿಷಿ, ಬಿಎಂಡಬ್ಲ್ಯು, ಆವ್‌ಡಿ, ರೋಲ್ಸ್ ರಾಯ್ಸ್ ಮುಂತಾದವುಗಳ ಹೆಸರು ಕೇಳಿದ್ದ ನಮಗೆ ಬುಗಾಟಿ ವೇಯ್ರಾನ್ ಸ್ಪೋರ್ಟ್ಸ್ ಕಾರು ಹೊಸತು. ಮೂರೇ ಸೆಕೆಂಡುಗಳಲ್ಲಿ ಸೊನ್ನೆಯಿಂದ ಗಂಟೆಗೆ 100 ಕಿಮೀ ವೇಗಕ್ಕೆ ಪುಟಿದೇಳುವ ಈ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ (ರಸ್ತೆ ಸರಿ ಇದ್ದರೆ ಮತ್ತು ಏನೂ ಅಡೆತಡೆಗಳು ಎದುರಾಗದೇ ಹೋದರೆ) ಕೇವಲ ಒಂದು ಗಂಟೆಯಲ್ಲಿ ತಲುಪಬಹುದು! ವಿಮಾನದಲ್ಲಾದರೆ, ಚೆಕ್ ಇನ್ ಸಮಯ, ಚೆಕ್ ಔಟ್ ಸಮಯ ಅಂತೆಲ್ಲಾ ಕನಿಷ್ಠ ಮೂರು ಗಂಟೆ ಹಾಗೂ ಪ್ರಯಾಣಕ್ಕೆಂದು ಒಂದು ಗಂಟೆ ಸೇರಿಸಿದರೆ, ನಾಲ್ಕು ಗಂಟೆಯಾದ್ರೂ ಬೇಕು. ಆದರೆ ಈ ಕಾರಿನಲ್ಲಿ ಕೇವಲ 1 ಗಂಟೆ ಪ್ರಯಾಣ!

ಬಹುಶಃ ಈ ಕಾರು ಭೂಮಿಯ ಮೇಲಿರುವ ಅತ್ಯಂತ ವೇಗದ ಕಾರು (ಗಂಟೆಗೆ 431.072 ಕಿ.ಮೀ. ವೇಗ). ಆದರೆ ಇದರ ಗರಿಷ್ಠ ವೇಗ 407 Kmph. Bugatti Veyron 16.4 Grand Sport ಹೆಸರಿನ ಇದು, ಜಗತ್ತಿನ ಅತೀ ಹೆಚ್ಚು ಬೆಲೆಯ ಕಾರೂ ಹೌದು. ರೇಸ್ ಕಾರು ಮೆಕ್‌ಲಾರೆನ್ ಎಫ್1 ಅನ್ನೂ ಹಿಂದಿಕ್ಕಿದ ವೇಗ ಹೊಂದಿದೆ ಈ ಬುಗಾಟಿಯೆಂಬ ಕರಿ ಬ್ಯೂಟಿ.

ವೋಕ್ಸ್‌ವ್ಯಾಗನ್‌ಗೂ ಬುಗಾಟಿಗೂ ಏನು ಸಂಬಂಧ?
ಜರ್ಮನಿಯ ವೋಕ್ಸ್‌ವ್ಯಾಗನ್ ಎಂಬುದು ಯೂರೋಪಿನ ಕಾರುಗಳ ರಾಜ ಎಂಬುದರಲ್ಲಿ ಎರಡು ಮಾತಿಲ್ಲ. ತನ್ನತನವನ್ನು ಉಳಿಸಿಕೊಂಡಿರುವ ಅದು, ಜಗತ್ತಿನ ಪ್ರಮುಖ ಕಾರು ತಯಾರಿಕಾ ಸಂಸ್ಥೆಗಳನ್ನು ಖರೀದಿಸಿ, ಆಯಾ ಬ್ರಾಂಡ್‌ಗಳಲ್ಲೇ ಆಯಾ ಕಾರುಗಳು ಮಾರುಕಟ್ಟೆಯಲ್ಲಿರುವಂತೆ ನೋಡಿಕೊಳ್ಳುತ್ತಿದೆ. ಅಂಥದ್ದೇ ಬ್ರ್ಯಾಂಡುಗಳಲ್ಲಿ ಬುಗಾಟಿ (Bugatti), ಆವ್‌ಡಿ (Audi), ಬೆಂಟ್ಲಿ (Bentley), ಲಾಂಬೊರ್ಗಿನಿ (Lamborghini), ಸಿಯಟ್ (Seat) ಮತ್ತು ಸ್ಕೋಡಾ (Skoda) ಪ್ರಮುಖವಾದವುಗಳು. ಇಲ್ಲಿ ಪ್ರಸ್ತಾಪಗೊಂಡಿರುವ ಬುಗಾಟಿ ಆಟೋಮೊಬೈಲ್ಸ್ ಕಂಪನಿಯು ಮೂಲತಃ ಫ್ರಾನ್ಸ್‌ನದು. ಅದೀಗ ವೋಕ್ಸ್‌ವ್ಯಾಗನ್ ಬಳಗದೊಳಗೆ ಸೇರಿಕೊಂಡಿದೆ.

ಇತ್ತೀಚೆಗೆ ಕೇಳಿಬರುತ್ತಿರುವ ಮಾತುಗಳ ಪ್ರಕಾರ, ವೋಕ್ಸ್‌ವ್ಯಾಗನ್ ಮತ್ತು ಜಪಾನಿನ ಸುಜುಕಿ ಮೋಟಾರ್ಸ್ ಕೂಡ ಪಾಲುದಾರಿಕೆಯ ಪ್ರಯತ್ನದಲ್ಲಿದ್ದು, ಅವೆರಡೂ ಕೈಜೋಡಿಸಿದರೆ, ಕಡಿಮೆ ಬೆಲೆಯಲ್ಲಿ ಜರ್ಮನ್ ತಂತ್ರಜ್ಞಾನದ ಕಾರುಗಳು ಭಾರತದ ರಸ್ತೆಗಳಿಗೆ ಇಳಿಯಬಹುದು. ಮಾರುತಿ ಜತೆ ಸೇರಿಕೊಂಡು ಸುಜುಕಿ ಕಂಪನಿಯು ಭಾರತದಲ್ಲಿ ಮಾಡಿರುವ ಕಾರುಗಳ ಕ್ರಾಂತಿ ಎಲ್ಲರಿಗೂ ತಿಳಿದಿದೆ. ಹೀಗಾಗಿ ಭಾರತೀಯರ ಮನಸ್ಥಿತಿಗೆ ತಕ್ಕುದಾದ ಬೆಲೆಯಲ್ಲಿ ಮತ್ತು ಭಾರತದ ಪರಿಸ್ಥಿತಿಗೆ ತಕ್ಕುದಾದ ಸಾಮರ್ಥ್ಯವುಳ್ಳ ಕಾರುಗಳು ನಮ್ಮೆದುರು ಬಂದು ನಿಂತಾವೆಂಬ ಆಶಯ ಕಾರು ಆಕಾಂಕ್ಷಿಗಳದು.

ಹೀಗೆ ಹೇಳಲು ಕಾರಣವೂ ಇದೆ. ಜರ್ಮನಿಗೆ ಭೇಟಿ ನೀಡಿದ ಭಾರತದ 19 ಮಂದಿ ಪತ್ರಕರ್ತರ ತಂಡದೊಂದಿಗೆ ಮಾತನಾಡುತ್ತಿದ್ದ ವೋಕ್ಸ್‌ವ್ಯಾಗನ್ ಜಾರ್ಗ್ ಮುಲ್ಲರ್, ಕಡಿಮೆ ಬೆಲೆಯ ಕಾರುಗಳು ಪರಿಗಣನೆಯಲ್ಲಿದೆ ಎಂದಿದ್ದಾರಾದರೂ, ನ್ಯಾನೋದಷ್ಟು ಚೀಪ್ ಅಲ್ಲ ಎಂಬ ಮಾತನ್ನೂ ಸೇರಿಸಿದ್ದಾರೆ! ಅಲ್ಲದೆ ಭಾರತ ಮತ್ತು ಚೀನಾಗಳು ನಮ್ಮ ಮುಂದಿನ ಮಾರುಕಟ್ಟೆಗಳೂ ಎಂದು ಹೇಳಿರುವುದರಿಂದ ಕಾರು ಕೊಳ್ಳುವವರಿಗೆ ಆಸೆಯ ಏಣಿ ಕಟ್ಟಲು ಯಾವುದೇ ತೊಂದರೆಯಿಲ್ಲ.

ಎಂ.ಎಫ್.ಹುಸೇನ್ ಬಳಿಯಿದೆ ಈ ಕಾರು…
ಇದುವರೆಗೆ ವಿಶ್ವಾದ್ಯಂತ ಮಾರಾಟವಾದ ಬುಗಾಟಿ ವೇಯ್ರಾನ್ ಕಾರುಗಳ ಸಂಖ್ಯೆ 300ಕ್ಕಿಂತ ಬೆರಳೆಣಿಕೆಯಷ್ಟು ಜಾಸ್ತಿ. ಅವುಗಳಲ್ಲಿ, ಭಾರತದ ಬಹು ವಿಖ್ಯಾತ ಚಿತ್ರ ಕಲಾವಿದ ಎಂ.ಎಫ್.ಹುಸೇನ್ ಈ ಬ್ಯೂಟಿ ಕಾರುಗಳ ಒಡೆಯರಲ್ಲೊಬ್ಬರು. ಅವರು ದುಬೈಯಲ್ಲಿ ಈ ಕಾರು ಹೊಂದಿದ್ದಾರೆ. ಅವರು ವಿಶ್ವದಲ್ಲೇ ಮೊತ್ತ ಮೊದಲ ಬರಿಗಾಲಿನ ಬುಗಾಟಿ ಚಾಲಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವುದು ವಿಶೇಷ.

ಟೈರು ಬದಲಾಯಿಸಲು ಲಕ್ಷ ಲಕ್ಷ ಬೇಕು…
ವೇಯ್ರಾನ್ ಹೆಸರು ಬಂದಿರುವುದು ಫ್ರೆಂಚ್ ರೇಸಿಂಗ್ ಚಾಲಕ ಪಿಯರಿ ವೇಯ್ರಾನ್ ಮೂಲಕ. ಎಂಟು ಲೀಟರ್ ಎಂಜಿನ್ (ನ್ಯಾನೋ ಕಾರಿನ 13 ಪಟ್ಟು ಹೆಚ್ಚು), ಏಳು ಗಿಯರ್, ಹದಿನಾರು ಸಿಲಿಂಡರ್‌ಗಳು, 64 ವಾಲ್ವ್‌ಗಳು (ಸಾಮಾನ್ಯ ಕಾರುಗಳಲ್ಲಿ 4 ಸಿಲಿಂಡರ್, 16 ವಾಲ್ವ್‌ಗಳು) 1001 ಬಿಎಚ್‌ಪಿ ಸಾಮರ್ಥ್ಯದ (ನ್ಯಾನೋ ಕಾರಿನ 28 ಪಟ್ಟು) ಎಂಜಿನ್ ಹೊಂದಿದೆ ಈ ಕಾರು. ಸಾಮರ್ಥ್ಯ 7993 ಸಿಸಿ. ಫೋಲ್ಡಿಂಗ್ ರೂಫ್ ಇದ್ದು, ಮಳೆ ಬಂದಾಗ ಮುಚ್ಚಿಕೊಂಡಿದ್ದರೆ ಅದು ಚಲಿಸಬಹುದಾದ ವೇಗ ತಗ್ಗಿಸಬೇಕಾಗುತ್ತದೆ. ವೇಗಕ್ಕೆ ಹೊಂದಿಕೊಳ್ಳಲೆಂದೇ ವಿಶೇಷವಾಗಿ ಸಿದ್ಧಪಡಿಸಲಾದ ಮಿಚೆಲಿನ್ ಪ್ಯಾಕ್ಸ್ ಫ್ಲ್ಯಾಟ್ ಟೈರುಗಳು ಕೂಡ ಇದೆ.

ಒಂದು ವಿಷಯ ಕೇಳಿದ್ರೆ ಬೆಚ್ಚಿ ಬೀಳುವಿರಿ. ಈ ಟೈರನ್ನು ಅದರ ರಿಮ್‌ನಿಂದ ತೆಗೆಯುವುದು ಸಾಧ್ಯವಿರುವುದು ಸದ್ಯದ ಮಟ್ಟಿಗೆ ಫ್ರಾನ್ಸ್‌ನಲ್ಲಿ ಮಾತ್ರ. ಆದರೆ, ಒಂದು ಮಾಹಿತಿ ಪ್ರಕಾರ, ಟೈರು ಬದಲಾಯಿಸುವ ಕಾರ್ಯಕ್ಕೆ ತಗುಲುವ ಸರ್ವಿಸ್ ಚಾರ್ಜ್ ಎಷ್ಟು ಗೊತ್ತೇ? 70 ಸಾವಿರ ಡಾಲರ್ (ಅಂದಾಜು 32 ಲಕ್ಷ ರೂಪಾಯಿ!)

ಮೈಲೇಜು ಎಷ್ಟು ಗೊತ್ತೇ….
ಇಂಧನ ಕ್ಷಮತೆ ಎಷ್ಟು? ನಗರದಲ್ಲಿ 100 ಕಿ.ಮೀ. ಸುತ್ತಬೇಕಿದ್ದರೆ 29 ಲೀಟರ್ ಪೆಟ್ರೋಲ್ ಬೇಕು (ಒಂದು ಲೀಟರಿಗೆ 3.45 ಕಿ.ಮೀ.). ಹೈವೇಯಲ್ಲಾದರೆ, 100 ಕಿ.ಮೀ.ಗೆ 19 ಲೀಟರ್ (ಲೀಟರಿಗೆ 5.27 ಕಿ.ಮೀ.) ಸಾಕು. ಆದರೆ ಟಾಪ್ ಸ್ಪೀಡ್‌ನಲ್ಲಿ ಗಾಡಿ ಓಡಿಸಿದ್ರೆ 100 ಕಿ.ಮೀ. ಹೋಗಲು ನೀವು 78 ಲೀಟರ್ ಪೆಟ್ರೋಲ್ ಸುರಿಯಬೇಕು (ಒಂದು ಲೀಟರಿಗೆ 1.27 ಕಿ.ಮೀ.)!

100 ಲೀಟರ್ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ ಹೊಂದಿರುವ ಇದರಲ್ಲಿ 400 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸಿದರೆ ಬರೇ 12 ನಿಮಿಷದಲ್ಲಿ ಅಂದಾಜು 80 ಕಿ.ಮೀ. ಕ್ರಮಿಸಿದರೆ ಟ್ಯಾಂಕ್ ಖಾಲಿಯಾಗುತ್ತದೆ!

ಮತ್ತೆ 400 ಕಿ.ಮೀ. ಓಡಿಸುವುದು ಭಾರತದಲ್ಲಂತೂ ಸಾಧ್ಯವಿಲ್ಲ. ಅದಕ್ಕೆ ಕನಿಷ್ಠ 7 ಕಿ.ಮೀ. ಯಾವುದೇ ಅಡೆತಡೆಯಿಲ್ಲದ ರಸ್ತೆಯಿದ್ದರೆ, ಒಮ್ಮೆ 400 ಕಿ.ಮೀ. ವೇಗವನ್ನು ಟೆಸ್ಟ್ ಮಾಡಬಹುದು. ಇಷ್ಟು ವೇಗಕ್ಕೆ ಹೋಗಬೇಕಿದ್ದರೆ, ವಿಶೇಷ ಕೀಲಿಯೊಂದರ ಅಗತ್ಯವಿರುತ್ತದೆ.

ವೇಗ ಇಷ್ಟಿದ್ದರೂ, 2005ರಲ್ಲಿ ಹುಟ್ಟು ಪಡೆದಾರಭ್ಯ ಇದುವರೆಗೂ ಒಂದೇ ಒಂದು ಅಪಘಾತವಾದ ಉದಾಹರಣೆಯಿಲ್ಲ ಎಂದು ಹೇಳಿಕೊಂಡಿದೆ ಕಂಪನಿ.

ಅತ್ಯಂತ ವೇಗಕ್ಕಾಗಿ ಬುಗಾಟಿ ವೇಯ್ರಾನ್ ಈಗಾಗಲೇ ಗಿನೆಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಹೋಗಿದೆ. ಹೇಗೆ ಒಂದು ಟೆಸ್ಟ್ ಡ್ರೈವ್ ಆದರೂ ಮಾಡೋಣವೇ?
[ವೆಬ್‌ದುನಿಯಾಕ್ಕಾಗಿ]

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s