ರಾಜ್ಯ ಬಿಜೆಪಿಗೂ ಜಾಡ್ಯ: ಪ್ರವಾಹದಲ್ಲಿ ಸಿಲುಕಿದ ಕಮಲ

ಅಧಿಕಾರದ ಮದ ಅಂತೀರೋ ಅಥವಾ ಅಧಿಕಾರ ಚಲಾಯಿಸಲು ಅನುಭವ ಸಾಲದು ಅಂತೀರೋ… ಇಲ್ಲಾ ಅಧಿಕಾರದ ಅಮಲು ಅಂತೀರೋ… ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕೇಸರಿ ಧ್ವಜ ಊರಿದಾಗ, ಹೊಸ ಶಕೆ ಆರಂಭವಾಗುತ್ತದೆ, 60 ವರ್ಷಗಳಿಂದ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯ ಸರಿಯಾಗಬಹುದು ಎಂಬ ಮತದಾರರ ನಿರೀಕ್ಷೆ ಹುಸಿಯಾಗತೊಡಗಿದೆ. ಅಧಿಕಾರವೇರಿದ್ದ ಬಿಜೆಪಿ ಮಂದಿಗೆ ಅಧಿಕಾರವೇ ಶಾಪವಾಗುತ್ತಿದೆ ಮತ್ತು ಪಕ್ಷವನ್ನು ದುರಸ್ತಿ ಮಾಡುವ ಕೆಲಸದಲ್ಲಿ ಅವರಿಗೆ ರಾಜ್ಯದ ಹಿತ ಕಾಯಲು ಸಮಯ ಸಿಗುವಂತೆ ತೋರುತ್ತಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಂಚು, ನಾಯಕತ್ವ ಬದಲಾವಣೆಯ ತಂತ್ರ, ದಿನಕ್ಕೊಂದು ಹೇಳಿಕೆ, ಮರುದಿನವೇ ನಿರಾಕರಣೆ, ಭಿನ್ನ ಮತ ಇದೆ ಎಂದು ಒಂದು ಕಡೆ, ಮತ್ತೊಂದೆಡೆ ಭಿನ್ನಮತವೇನಿಲ್ಲ ಎಂಬ ಸಮಜಾಯಿಷಿಗಳು, ಇಪ್ಪತ್ತನಾಲ್ಕು ಗಂಟೆ ಕರೆಂಟು ಕೊಡ್ತೀವಿ ಅಂತ ಹೇಳಿದ ಮರು ದಿನವೇ ಜನ ಕರೆಂಟಿಲ್ಲದೆ ಪರದಾಟ. ಇದು ಕರ್ನಾಟಕ ರಾಜಕೀಯದ ಸದ್ಯದ ಚಿತ್ರಣ.

ರಾಷ್ಟ್ರ ಮಟ್ಟದಲ್ಲಿಯೇ ಬಿಜೆಪಿ ಪರಿಸ್ಥಿತಿ ಅಯೋಮಯ. ಲೋಕಸಭೆ ಚುನಾವಣೆಯಿಂದಾರಭ್ಯ ಇತ್ತೀಚೆಗಿನ ಚುನಾವಣೆಗಳಲ್ಲೂ ಅದು ಎದ್ದು ಕಂಡಿದೆ. ಇದಕ್ಕೇ ಇರಬೇಕು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದು – ಬಿಜೆಪಿಗೆ ಸರ್ಜರಿ ಮಾತ್ರವಲ್ಲ, ಕೀಮೋ ಥೆರಪಿಯೇ ಬೇಕಾಗಬಹುದು ಅಂತ. ಒಟ್ಟಿನಲ್ಲಿ ಆಂತರಿಕ ಗೊಂದಲಗಳು, ವ್ಯಕ್ತಿ ಪ್ರತಿಷ್ಠೆ… ಇವೆಲ್ಲವೂ ಬಿಜೆಪಿಯ ಅಸ್ತಿತ್ವಕ್ಕೇ ಕೊಡಲಿಯೇಟು ಹಾಕುತ್ತಿದೆ ಎಂಬ ಅಂಶದಿಂದ ರಾಜ್ಯ ಮುಖಂಡರು ಕೂಡ ಪಾಠ ಕಲಿತಿಲ್ಲ.

ಹೀಗಾಗಿಯೇ ಕೆಸರೆರಚಾಟ ನಡೆಯುತ್ತಲೇ ಇದೆ. ಇದೀಗ ಎರಚಾಡಿಕೊಳ್ಳುತ್ತಿರುವ ಕೆಸರಿನಲ್ಲಿಯೇ ಇರುವ ಕಮಲ, ರಾಜ್ಯದಲ್ಲಿಯೂ ಮುದುಡುವ ಲಕ್ಷಣಗಳು ದಟ್ಟವಾಗತೊಡಗಿದೆ. ರಾಷ್ಟ್ರೀಯ ಬಿಜೆಪಿಯ ವೈರಸ್ ರಾಜ್ಯ ಬಿಜೆಪಿಗೂ ತಗುಲಿದಂತಿದೆ.

ಅಭಿವೃದ್ಧಿಯೇ ಮೂಲಮಂತ್ರ ಎಂದು ಹೇಳುತ್ತಾ ಮುಖ್ಯಮಂತ್ರಿ ಯಡಿಯೂರಪ್ಪ ಆತ್ಮವಿಶ್ವಾಸದಲ್ಲಿಯೇ ಈ 17 ತಿಂಗಳು ಆಡಳಿತ ಮಾಡುತ್ತಿದ್ದರು. ನಾನು ಪ್ರಾಮಾಣಿಕವಾಗಿದ್ದೇನೆ, ಹೀಗಾಗಿ ಯಾರೇನೇ ಹೇಳಿದರೂ ಕೇರ್ ಮಾಡಲ್ಲ, ತಪ್ಪು ಆಗುವುದು ಸಾಧ್ಯವೇ ಇಲ್ಲ ಎಂಬಂತಹ ಮನೋಭಾವ ಯಡಿಯೂರಪ್ಪರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಅದಕ್ಕೆ ಉದಾಹರಣೆ, ಇತ್ತೀಚೆಗೆ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಟಿವಿ ಚಾನೆಲ್‌ಗಳ ಲೈವ್ ಕಾರ್ಯಕ್ರಮದಲ್ಲಿ, ಅನ್ಯಾಯವಾಗಿರುವುದರ ಕುರಿತು ದೂರುಗಳು ಬಂದಾಗ ಅವರು ಉತ್ತರಿಸುತ್ತಿದ್ದ ರೀತಿ. ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ, ವಾರದೊಳಗೆ ಫಲಿತಾಂಶ ಬಾರದಿದ್ದಲ್ಲಿ ನೋಡಿ ಅಂತ ಸವಾಲು ಕೂಡ ಹಾಕಿದ್ದರವರು. ಪತ್ರಿಕಾ ಗೋಷ್ಠಿಗಳಲ್ಲೂ ಇಂಥ ಆತ್ಮವಿಶ್ವಾಸದ ಮಾತುಗಳೇ ಕೇಳಿಬರುತ್ತಿದ್ದವು. ಇಂತಿಪ್ಪ ಯಡಿಯೂರಪ್ಪ ಈಗ ಕಂಗೆಟ್ಟಿದ್ದಾರೆ, ಮನದೊಳಗೆ ಅಳುಕಿದೆ, ಹತಾಶೆಯೂ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿದೆ.

ಭಿನ್ನಮತ ಇಲ್ಲವೆಂದಿಲ್ಲ, ಇದೆ, ಚರ್ಚಿಸಿ ಪರಿಹಾರ ಕೈಗೊಳ್ಳಬೇಕಾಗಿದೆ ಎನ್ನುತ್ತಿದ್ದಾರೆ. ಒಂದು ಕಾರ್ಯಕ್ರಮದಲ್ಲಂತೂ, ಒಳ್ಳೆಯ ಕೆಲಸ ಮಾಡುವುದು ಅಪರಾಧವೇ? ಪ್ರಾಮಾಣಿಕವಾಗಿರುವುದು ತಪ್ಪೇ ಎಂದು ಹೇಳಿಕೊಂಡು ಹತಾಶೆಯನ್ನೂ ಪ್ರದರ್ಶಿಸಿದ್ದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತರಿಗೆ ನೆರವು ವಿತರಣೆಯ ನಿಟ್ಟಿನಲ್ಲಿ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂಬ ಮಾತೂ ಅವರ ಬಾಯಿಂದಲೇ ಬಂದಿದೆ.

ನೆರೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ, ಸರಕಾರವನ್ನು ಬೈಪಾಸ್ ಮಾಡಿ, ನಾವೇ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂಬ ಕ್ರಮಕ್ಕೆ ಅಡ್ಡಿ ಮತ್ತು ಅದಿರು ಲಾರಿಗಳಿಗೆ ಸುಂಕ ಹೇರುವ ನಿರ್ಧಾರಗಳಿಂದಾಗಿ, ಸರಕಾರಕ್ಕೆ ‘ಆಪರೇಶನ್ ಕಮಲ’ ಮೂಲಕ ರಾಶಿ ರಾಶಿ ಎಂಎಲ್ಲೆಗಳನ್ನು ತಂದು ಹಾಕಿದ ರೆಡ್ಡಿ ಸಹೋದರರು ಕೆಂಗಣ್ಣು ಬೀರಿದ್ದಾರೆ. ಸರಕಾರದ ಉಳಿವಿಗೆ ತಮ್ಮೆಲ್ಲಾ ರೀತಿಯ ‘ಬಲ’ಗಳನ್ನು ಒಟ್ಟುಗೂಡಿಸಿದ್ದ ರೆಡ್ಡಿ ಸಹೋದರರ ಹಂಗಿನಲ್ಲಿದ್ದಾರೆ ಯಡಿಯೂರಪ್ಪ. ಏನೂ ಮಾಡಲಾರದ ಸ್ಥಿತಿ.

ಅದಿರು ಲಾರಿಗಳಿಗೆ ಹೆಚ್ಚುವರಿ ಸುಂಕ ಹೇರುವ ನಿರ್ಧಾರ ಜನಹಿತದ ದೃಷ್ಟಿಯಿಂದ ಸಂಪೂರ್ಣ ಸ್ವಾಗತಾರ್ಹ. ಯಾಕೆಂದರೆ, ಈ ಯಮಸದೃಶ ಲಾರಿಗಳು ಹೆದ್ದಾರಿಯಲ್ಲಿ ಮಾಡುವ ಅವಾಂತರ, ಅವಘಡಗಳು ಒಂದೇ ಎರಡೆ? ರಾಜ್ಯದ ರಸ್ತೆಗಳಂತೂ ಗಬ್ಬೆದ್ದು ಹೋಗಿದ್ದೇ ಈ ಭಾರದ ಅದಿರು ಲಾರಿಗಳಿಂದ. ಹೀಗಿರುವಾಗ ಆ ರಸ್ತೆಗಳ ಸುಧಾರಣೆಗೆ ಅದಿರು ಲಾರಿಗಳನ್ನೇ ಆಶ್ರಯಿಸಬೇಕಾದ್ದು ಸರಿ.

ಗಣಿ ಧಣಿಗಳೆಂದೇ ಖ್ಯಾತರಾಗಿರುವ ಶ್ರೀರಾಮುಲು, ಕಂದಾಯ ಸಚಿವ ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಇವರೆಲ್ಲರೂ ಸರಕಾರಕ್ಕೇ, ಮತ್ತು ವಿಶೇಷವಾಗಿ ಮುಖ್ಯಮಂತ್ರಿಗೇ ಸವಾಲೊಡ್ಡಿ, ತಾವೇ ಪರ್ಯಾಯ ಸರಕಾರವೆಂಬಂತೆ ನೆರೆ ಸಂತ್ರಸ್ತರಿಗೆ 500 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ಮನೆ ನಿರ್ಮಿಸಿಕೊಡುವ ಯೋಜನೆಗೆ ಚಾಲನೆ ನೀಡಿಯೇ ಸಿದ್ಧ ಎಂದು ಬಹಿರಂಗವಾಗಿ ತೊಡೆ ತಟ್ಟಿದ್ದಾರೆ. ಇದಕ್ಕೆ ಸಚಿವರಾದ ಗೂಳಿಹಟ್ಟಿ ಶೇಖರ್, ಆನಂದ ಅಸ್ನೋಟಿಕರ್, ಬಾಲಚಂದ್ರ ಚಾರಕಹೊಳಿ, ಶಿವನಗೌಡ ನಾಯಕ ಮತ್ತು ಶಿವರಾಜ್ ತಂಗಡಗಿ ದನಿಗೂಡಿಸಿದ್ದಾರೆ. ಇದು ಸರಕಾರದ ಕೆಲಸ. ಹೀಗಾಗಿ ಎಲ್ಲರೂ ಒಟ್ಟಾಗಿ ಮಾಡೋಣ ಎಂಬ ಮುಖ್ಯಮಂತ್ರಿ ಮಾತಿಗೆ ಬೆಲೆ ಕೊಡಲು ಅವರು ಸಿದ್ಧರಿಲ್ಲ. ತಮಗೆ ಬರುವ ಹೆಸರನ್ನು, ಖ್ಯಾತಿಯನ್ನು ತಗ್ಗಿಸಲು ಸಿಎಂ ಯತ್ನಿಸುತ್ತಿದ್ದಾರೆ ಎಂಬುದು ರೆಡ್ಡಿ ಸಹೋದರರ ಅಭಿಮತ. ಈ ಕಾರಣಕ್ಕೆ ಪಕ್ಷದಲ್ಲಿ, ಸರಕಾರದಲ್ಲಿ ಒಡಕು.

ಮತ್ತೊಂದೆಡೆ ರೇಣುಕಾಚಾರ್ಯ ಅವರ ನೇತೃತ್ವದ ಪುಟ್ಟ ಗಡಣವೊಂದು ಬೇರೆಯೇ ಮುಚ್ಚಿದ ಬಾಗಿಲ ಸಭೆ ನಡೆಸಿದೆ. ಹೊರಗೆ ಬಂದ ಮೇಲೆ ‘ಇಲ್ಲ, ಇಲ್ಲ, ಭಿನ್ನಮತ ಇಲ್ಲ’ ಎಂಬ ಸಮಜಾಯಿಷಿ. ಒಟ್ಟಿನಲ್ಲಿ ಬಿಜೆಪಿಯ ಪವರ್ ಸೆಂಟರ್ ಗೊಂದಲದ ಗೂಡಾಗಿದೆ. ಯಾರು ಯಾರ ಪರ ಎಂಬುದೇ ಗೊತ್ತಾಗುತ್ತಿಲ್ಲ. ಅಲ್ಲಲ್ಲಿ ಮುಚ್ಚಿದ ಬಾಗಿಲ ಸಭೆಯೂ ಸಂಧಾನ ಸಭೆಗಳೂ ನಡೆಯುತ್ತಿವೆ. ಹೊರಗೆ ಬಂದಾಗ ‘ಏನೂ ಇಲ್ಲ, ಇದು ಮಾಮೂಲಿ ಸಭೆ’ ಎಂಬುದೇ ಉತ್ತರ. ನಡು ನಡುವೆ, ಈಗಾಗಲೇ ಭಿನ್ನಮತದ ಕಹಳೆಯೂದಿದ್ದ ಜಗದೀಶ್ ಶೆಟ್ಟರ್, ಈಶ್ವರಪ್ಪ ಹೆಸರುಗಳೂ, ಸಂಸದ ಅನಂತ್ ಕುಮಾರ್ ಹೆಸರುಗಳೂ ಬಂದು ಹೋಗುತ್ತಿವೆ.

ರೆಡ್ಡಿ ಸಹೋದರರು ಮತ್ತು ಇತರ ಸಚಿವ-ಶಾಸಕರ ಅಸಮಾಧಾನಕ್ಕೆ ಕಾರಣವಾದ ಮತ್ತೊಂದು ಅಂಶವೆಂದರೆ ಯಡಿಯೂರಪ್ಪ ಅವರು ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆ, ಸೂಕ್ತ ಅಧಿಕಾರ ನೀಡುತ್ತಿಲ್ಲ ಎಂಬುದು. ನೆರೆ ಸಂತ್ರಸ್ತರಿಗಾಗಿ ರಾಜ್ಯದ ಜನ ಉದಾರವಾಗಿ ದಾನ ನೀಡುತ್ತಿದ್ದಾರೆ, ಅದು ಕೋಟಿ ಕೋಟಿ ಸಂಗ್ರಹವಾಗುತ್ತಿದೆ ಎಂಬುದನ್ನು ಮತ್ತು ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಏನು ಅಂದುಕೊಳ್ಳಬಹುದು? ಎಂಬುದು ಓದುಗರಿಗೆ ಬಿಟ್ಟ ವಿಚಾರ.

ಊರು ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬಂತಾಗಿದೆ ರಾಜ್ಯದ ಜನತೆಯ ಸ್ಥಿತಿ. ರಾಜ್ಯ ಹಿಂದೆಂದೂ ಕಂಡು ಕೇಳರಿಯದ ದುರಂತಕ್ಕೆ ಈಡಾಗಿರುವಾಗ ಈ ಕ್ಷುಲ್ಲಕ ರಾಜಕೀಯದಿಂದಾಗಿ ಸರಕಾರದ ಎಲ್ಲ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಜನಹಿತ ಕಾರ್ಯಗಳ ಬದಲಾಗಿ, ಪಕ್ಷ ಹಿತ ಕಾರ್ಯಕ್ಕೇ ಸಮಯ ನೀಡಬೇಕಾದ ಅನಿವಾರ್ಯತೆ ಊರಿನ ದೊರೆಗೆ.

ಈ ಪರಿಸ್ಥಿತಿಯಿರುವಾಗ, ಒಂದು ರಾಜ್ಯದ ಜನರ ರಕ್ಷಣೆಯ ಬಹುಮೂಲ್ಯ ಜವಾಬ್ದಾರಿ ಇರುವ ಮಂತ್ರಿಗಳು, ಶಾಸಕರು ಈಗಲಾದರೂ ಜನಹಿತವೇ ಪರಮಗುರಿ ಎಂದು ಬರೇ ಬಾಯಲ್ಲಿ ಹೇಳಿಕೊಂಡು ತಿರುಗುತ್ತಿರುವ ಬದಲು, ಒಂದಿನಿತು ಹೊಣೆಯರಿತು ಕೈಯಲ್ಲಿ ಮಾಡಿ ತೋರಿಸಬೇಕಾಗಿದೆ. ನೆರೆ ಸಂತ್ರಸ್ತರೆಲ್ಲರಿಗೂ ಸೂಕ್ತ ಮನೆ-ಮಠ ದಯವಿಟ್ಟು ಕಲ್ಪಿಸಿಕೊಡಿ ರಾಜಕಾರಣಿಗಳೇ… ಅದೆಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಅದೆಷ್ಟು ಜನ ಗುಳೆ ಹೊರಟಿದ್ದಾರೆ… ಅವರಿಗೆಲ್ಲಾ ಒಂದು ಸೂರು ಅಂತ ಮಾಡಿಕೊಡಿ, ಅಷ್ಟರವರೆಗೆ ನಿಮ್ಮ ಈ ಕ್ಷುಲ್ಲಕ ರಾಜಕೀಯ ದೂರವಿಡಿ. ಉಳಿದದ್ದೆಲ್ಲಾ ಆಮೇಲೆ. ಸ್ವಾರ್ಥಕ್ಕಾಗಿ ರಾಜ್ಯದ ಅಭಿವೃದ್ಧಿ ಬಲಿಯಾಗುವುದು ಸರ್ವಥಾ ಸಲ್ಲದು ಎಂಬುದು ಗಮನಕ್ಕೆ ಬಾರದೇ ಹೋದಲ್ಲಿ ಮತದಾರರು ಕೈಯಲ್ಲಿ ತಮ್ಮ ಅಸ್ತ್ರ ಹಿಡಿದುಕೊಂಡು ಕುಳಿತಿದ್ದಾರೆ, ಮತ್ತೊಂದು ಚುನಾವಣೆ ಬರಲಿ, ಇವರಿಗೆ ಪಾಠ ಕಲಿಸುತ್ತೇವೆ ಎಂಬ ಮನೋಭಾವದೊಂದಿಗೆ!
(ವೆಬ್‌ದುನಿಯಾದಲ್ಲಿ ಪ್ರಕಟಿತ)

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s