ನೆರೆ ಚಿತ್ರಣ: ಕರ್ನಾಟಕದ ಬಗೆಗೆ ಯಾಕೀ ಅವಜ್ಞೆ?

ಕಳೆದ ಕೆಲವಾರು ದಿನಗಳಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು, ರಾಷ್ಟ್ರ ಮಟ್ಟದ ಪತ್ರಿಕೆಗಳನ್ನು, ಅಂತರಜಾಲ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಹೌದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೂರು ವರ್ಷಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಟಿ, ಪ್ರವಾಹಕ್ಕೆ ತುತ್ತಾಗಿ ಅಪಾರ ಜೀವ ಹಾನಿಯಾಗಿದೆ ಮತ್ತು ಆಸ್ತಿ ಪಾಸ್ತಿ ನಷ್ಟವಾಗಿದೆ ಎಂಬುದನ್ನು ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದರೆ, ಕರ್ನಾಟಕದ ಸಂಕಷ್ಟವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಂಡು ಬರುತ್ತದೆ.

ಸಮಗ್ರ ಸುದ್ದಿಯನ್ನು ಬಿತ್ತರಿದ ಅಥವಾ ಪ್ರಕಟಿಸಿದ ಸಂದರ್ಭ, ಕರ್ನಾಟಕಕ್ಕಿಂತ ಕಡಿಮೆ ನಷ್ಟ ಅನುಭವಿಸಿದ ಆಂಧ್ರಪ್ರದೇಶವನ್ನೇ ಪ್ರಮುಖವಾಗಿರಿಸಿ ವರದಿಯಾಗಿರುವುದನ್ನು ನೀವು ಗಮನಿಸಿರಬಹುದು. ಉದಾಹರಣೆಗೆ “ಆಂಧ್ರ ಸಹಿತ ದಕ್ಷಿಣ ಭಾರತದಲ್ಲಿ ಪ್ರವಾಹ, ಭಾರೀ ಸಾವು ನೋವು” ಅಥವಾ “ಭಾರೀ ನೆರೆ: ಆಂಧ್ರ, ಕರ್ನಾಟಕ ತತ್ತರ” ಎಂಬರ್ಥದ ತಲೆಬರಹಗಳ ಮೂಲಕ ನೆರೆಯ ರಾಜ್ಯಕ್ಕೆ ಪ್ರಾಧಾನ್ಯತೆ ನೀಡಿರುವ ವರದಿ ಗಮನಿಸಿದರೆ, ಖಂಡಿತವಾಗಿ ಕನ್ನಡಿಗರ ಮನಸ್ಸಿಗೆ ನೋವಾಗದಿರದು.

ಇಲ್ಲ ಸಲ್ಲದ ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಬ್ರೇಕಿಂಗ್ ನ್ಯೂಸ್ ಎಂಬ ಕೆಂಪು ಪರದೆ ಹಾಕಿಕೊಂಡು, ಪದೇ ಪದೇ ತೋರಿಸಿದ್ದನ್ನೇ ತೋರಿಸುತ್ತಾ, ಜನರಲ್ಲಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದ ಮಾಧ್ಯಮಗಳು, ಕರ್ನಾಟಕದ ನೆರೆ ಪೀಡಿತ ಸ್ಥಳಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದೇಕೆ ಎಂಬುದು ಅರ್ಥವಾಗದ ಸಂಗತಿ.

ಹೌದು. ಮಾನವೀಯತೆ ದೃಷ್ಟಿಯಿಂದ ನೋಡಿದರೆ, ಆಂಧ್ರದಲ್ಲಿಯೂ ಸಾಕಷ್ಟು ಸಾವು ನೋವು ಸಂಭವಿಸಿದೆ, ಅಲ್ಲಿನ ಸಂತ್ರಸ್ತರಿಗೂ ಸಾಕಷ್ಟು ನೆರವು ದೊರೆಯಬೇಕು, ಅವರೂ ನಮ್ಮ ಅಣ್ಣ ತಮ್ಮಂದಿರಲ್ಲವೇ? ಅವರಿಗೂ ಸಹಾಯದ ಅಗತ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿನ ಸಾವು ನೋವನ್ನು ಸಚಿತ್ರವಾಗಿ ವರದಿ ಮಾಡುವ ಸಂದರ್ಭದಲ್ಲಿ ಅದಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ ಕರ್ನಾಟಕವನ್ನು ಕಡೆಗಣಿಸಿರುವುದು ಮಾತ್ರ ಸರ್ವಥಾ ತಪ್ಪು.

ಪ್ರವಾಹ ಪೀಡಿತರಿಗೆ ಅಂತಾರಾಷ್ಟ್ರೀಯ ಮಟ್ಟದ ನೆರವು ದೊರೆಯುವಲ್ಲಿ ಈ ರಾಷ್ಟ್ರೀಯ ಮಟ್ಟದ, ಅಂತಾರಾಷ್ಟ್ರೀಯ ಸಹಯೋಗವಿರುವ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.

ಈಚೆಗೆ ನಡೆದ ಕೆಲವು ಘಟನೆಗಳು ನೆನಪಿರಬಹುದು. ಪಬ್ ಮೇಲಿನ ದಾಳಿ ಪ್ರಕರಣವಿರಲಿ, ಚರ್ಚ್ ದಾಳಿಯ ಘಟನೆಗಳಿರಲಿ, ಆ ದಿನಗಳನ್ನು ನೆನಪಿಸಿಕೊಂಡರೆ, ನಮ್ಮ ಮಾಧ್ಯಮಗಳ ಶಕ್ತಿ ಎಷ್ಟಿತ್ತೆಂಬುದು ಜಗಜ್ಜಾಹೀರಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತವನ್ನೇ ಜನರು ಸಂಶಯ ದೃಷ್ಟಿಯಿಂದ ನೋಡುವಂತಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗಳು ಕೂಡ ಹರಿದುಬಂದಿದ್ದವು. ಕರ್ನಾಟಕದ ಹೆಸರೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿತ್ತು. (ಆದರೆ ಅದು ಬೇಡವಾದ ಕಾರಣಕ್ಕೆ ಎಂಬುದು ಬೇರೆ ವಿಷಯ.)

ಈಗ ಕರ್ನಾಟಕದ ಜನರ ಸಂಕಷ್ಟಗಳನ್ನು ಕೂಡ ಅದೇ ಮಾದರಿಯಲ್ಲಿ ಬಿಂಬಿಸಬಹುದಿತ್ತಲ್ಲ? ವಿದೇಶೀ ನೆರವು ಹರಿದುಬರಲು ನೆರವಾಗಬಹುದಿತ್ತಲ್ಲ? ಸರಕಾರೇತರ ಸಂಸ್ಥೆಗಳಿಂದ ಪರಿಹಾರ ಕೇಂದ್ರಗಳು, ಪರಿಹಾರ ಸಾಮಗ್ರಿಗಳು ಸಾಕಷ್ಟು ದೊರೆಯುತ್ತಿತ್ತಲ್ಲವೇ? ನಮ್ಮ ನೊಂದು ಬೆಂದ ಕನ್ನಡಿಗರಿಗೆ ಒಂದಿಷ್ಟು ಬಟ್ಟೆ ಬರೆ, ಹೊಟ್ಟೆಗೆ ಕೂಳು, ಮತ್ತೊಂದಿನಿತು ಸಾಂತ್ವನ ದೊರೆಯುತ್ತಿತ್ತು. ಯೋಚಿಸಿ ನೋಡಿದರೆ, ಹೌದು ಅನ್ನಿಸುವುದಿಲ್ಲವೆ?

ಕೇಂದ್ರ ಸರಕಾರ ಕೂಡ ಕರ್ನಾಟಕದಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ವಿತರಣೆಯಲ್ಲಿ ಅನ್ಯಾಯ ಮಾಡಿದೆ, ತಾರತಮ್ಯ ಎಸಗಿದೆ ಎಂಬ ಆರೋಪಗಳ ನಡುವೆಯೇ, ಇದುವರೆಗೆ ಬಿಡುಗಡೆಯಾದ ಹಣ ಹಿಂದೆ ಕಾಡಿದ ಅನಾವೃಷ್ಟಿ ಪರಿಹಾರವೇ ಹೊರತು, ಈಗಿನ ನೆರೆ ಪರಿಹಾರ ಅಲ್ಲ ಎಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಇದು ಈಗ ವಿವಾದವಾಗಿ ಉಳಿದಿಲ್ಲ. ಕಳೆದ ವಾರ ಕೇಂದ್ರವು ಆಂಧ್ರಕ್ಕೆ 420 ಕೋಟಿ ರೂ., ಕರ್ನಾಟಕಕ್ಕೆ 148 ಕೋಟಿ ರೂ. ಮತ್ತು ಬುಧವಾರ ಆಂಧ್ರಕ್ಕೆ 156.84 ಕೋಟಿ, ಕರ್ನಾಟಕಕ್ಕೆ 52.26 ಕೋಟಿ ರೂ. ಬಿಡುಗಡೆಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿರುವ ಹಣವನ್ನು, ಇದೀಗ ನೆರೆ ಪರಿಹಾರಕ್ಕೂ ಉಪಯೋಗಿಸಬಹುದೆಂಬ ಕಾರಣಕ್ಕೆ ಶೀಘ್ರವಾಗಿ ಬಿಡುಗಡೆ ಮಾಡಲಾಗಿದೆ. ಅದು ನೆರೆ ಪರಿಹಾರದ್ದಲ್ಲ, ಕೆಲವು ತಿಂಗಳ ಹಿಂದೆ ಕಾಡಿದ ಬರಕ್ಕೆ ಕೇಂದ್ರದ ಪರಿಹಾರ ಎಂಬ ಕಾರಣಕ್ಕೆ ನಮಗೆ ತಾರತಮ್ಯವಾಗಿಲ್ಲ ಎಂದು ನಾವು ತೃಪ್ತಿಪಟ್ಟುಕೊಳ್ಳಬಹುದು.

ಮಾಧ್ಯಮಗಳ ಈ ರೀತಿಯ ಪ್ರಚಾರದಿಂದಾಗಿಯೋ ಏನೋ, ಕರ್ನಾಟಕವೀಗ ನಿರ್ಲಕ್ಷಿತವಾಗಿದೆ. ಆಂಧ್ರ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಸೇನಾ ಸಿಬ್ಬಂದಿ, 23 ವಿಶೇಷ ದೋಣಿಗಳು, 11 ಮೋಟಾರು ದೋಣಿ, 11 ಪರಿಹಾರ ತಂಡಗಳು ಮತ್ತು 3 ವೈದ್ಯಕೀಯ ತಂಡಗಳು ಕಾರ್ಯಾಚರಣೆಗಿಳಿದಿದ್ದರೆ, ಕರ್ನಾಟಕಕ್ಕೆ 12 ವಿಶೇಷ ದೋಣಿ, 6 ಮೋಟಾರು ದೋಣಿ, 4 ಪರಿಣತ ಈಜುಗಾರರ ತಂಡಗಳು ಸೇರಿದಂತೆ ಹಲವು ಪರಿಹಾರ ಸಾಮಾಗ್ರಿಗಳನ್ನು ಕೇಂದ್ರ ನೀಡಿದೆ.

ನಷ್ಟದ ಅಂದಾಜು: ಆರಂಭಿಕ ಅಂದಾಜಿನ ಪ್ರಕಾರ, ರಾಜ್ಯದಲ್ಲಾಗಿರುವ ನಷ್ಟದ ಪ್ರಮಾಣ ಸುಮಾರು 16,500 ಕೋಟಿ ರೂ. ರಾಜ್ಯದ 15 ಜಿಲ್ಲೆಗಳಲ್ಲಿ ಸುಮಾರು ಒಂದೂವರೆ ಸಾವಿರ ಹಳ್ಳಿಗಳು ಪ್ರವಾಹದ ಭಯಾನಕತೆಗೆ ಸಾಕ್ಷಿಯಾಗಿದ್ದು, ಸುಮಾರು 3 ಲಕ್ಷ ಮನೆಗಳು ಪೂರ್ಣ ಅಥವಾ ಭಾಗಶಃ ಹಾನಿಗೀಡಾಗಿವೆ. 25 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ. ಸೇತುವೆಗಳು, ಕುಡಿಯುವ ನೀರಿನ ಟ್ಯಾಂಕುಗಳು, ವಿದ್ಯುತ್ ವಿತರಣೆ ಮುಂತಾದ ಮೂಲಸೌಕರ್ಯಗಳೆಲ್ಲವೂ ಬಹುವಾಗಿ ಹಾನಿಗೀಡಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 205 ದಾಟಿದೆ. ಅಂದಾಜು 20 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ನಷ್ಟದ ಅಂದಾಜು ಸುಮಾರು 16,500 ಕೋಟಿ ರೂ.

ಆಂಧ್ರದಲ್ಲಾದ ಹಾನಿಯ ಬಗ್ಗೆ ಗಮನ ಹರಿಸಿದರೆ, 5 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, 70ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಒಟ್ಟು 500ರಷ್ಟು ಹಳ್ಳಿಗಳು ಬಾಧೆಗೀಡಾಗಿವೆ. ಸುಮಾರು 15 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ನಷ್ಟದ ಅಂದಾಜು 12 ಸಾವಿರ ಕೋಟಿ ರೂ.

ಇನ್ನು, ನೆರೆ ಬಂದಾಗ ಪ್ರಧಾನಿ ಮತ್ತು ಕೇಂದ್ರದ ಸಚಿವರು ವೈಮಾನಿಕ ಸಮೀಕ್ಷೆ ನಡೆಸುವುದು ರೂಢಿ. ಆದರೆ, ಇದರಲ್ಲಿಯೂ ಮೊದಲು ಆಂಧ್ರ ಪ್ರದೇಶಕ್ಕೆ, ಆ ಬಳಿಕ ಕರ್ನಾಟಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹ ಸಚಿವ ಚಿದಂಬರಂ ಮಾಡಿದ್ದೂ ಅದನ್ನೇ. ಅವಸರವಸರವಾಗಿ ಆಂಧ್ರದ ಎಲ್ಲ 5 ನೆರೆ ಪೀಡಿತ ಜಿಲ್ಲೆಗಳ ಸಮೀಕ್ಷೆ ನಡೆಸಿದ್ದ ಅವರು, ಕರ್ನಾಟಕದಲ್ಲಿ ಎರಡು ಜಿಲ್ಲೆಗಳಿಗೆ ಮಾತ್ರವೇ ಭೇಟಿ ನೀಡಿ, ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರಕ್ಕೆ ಧಾವಿಸಿದ್ದರು.

ಇಷ್ಟು ಮಾತ್ರವಲ್ಲದೆ, ಈ ಪರಿ ಸಾವು-ನೋವು-ನಾಶ-ನಷ್ಟ ಸಂಭವಿಸಿದ್ದರೂ ಪ್ರಧಾನಮಂತ್ರಿಯವರ ಸಮೀಕ್ಷಾ ಕಾರ್ಯಕ್ರಮ ಮುಂದೂಡಲಾಗಿದೆ. ಅವರು ಹರ್ಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಮೊದಲು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ, ಸಂಜೆ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸರ್ವೇಕ್ಷಣೆ ನಡೆಸಲಿದ್ದಾರೆ.

ಈ ಸಣ್ಣ ಪುಟ್ಟ ವಿಷಯಗಳೆಲ್ಲವೂ ಜನರ ಮನಸ್ಸಿನಲ್ಲಿ ‘ಆಂಧ್ರಕ್ಕೆ ಪ್ರಾಧಾನ್ಯತೆ’ ನೀಡಲಾಗುತ್ತಿದೆ ಎಂಬ ಭಾವನೆ ಬರಲು ಕಾರಣವಾಗುತ್ತಿದೆ.

ಇದನ್ನು ತಪ್ಪಿಸಬಹುದಾಗಿತ್ತಲ್ಲವೇ? ಮತ್ತು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನಕ್ಕೆ ರಾಜಕೀಯ ರಹಿತವಾಗಿ ಚಿಂತಿಸಿ ಕೈಜೋಡಿಸಬಹುದಿತ್ತಲ್ಲವೇ?

ಇನ್ನು ಪ್ರಾದೇಶಿಕ ಮಾಧ್ಯಮಗಳ ಬಗ್ಗೆ ಹೇಳಲೇಬೇಕು. ಆಂಧ್ರ ಮತ್ತು ತಮಿಳುನಾಡು ಮೂಲದ ಟಿವಿ ವಾಹಿನಿಗಳಾದರೂ, ಅವರವರ ಕನ್ನಡ ಚಾನೆಲ್‌ನಲ್ಲಿ ಕರ್ನಾಟಕಕ್ಕೇ ಪ್ರಾಧಾನ್ಯತೆ ನೀಡಿದ್ದವು ಎಂಬುದು ಮೆಚ್ಚುವ ಸಂಗತಿ. ಆದರೆ ಇದೇ ಧ್ವನಿ ಆಂಗ್ಲ ಚಾನೆಲ್‌ಗಳಲ್ಲಿಯೂ ಬಿತ್ತರವಾಗಿದ್ದಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಶತಮಾನದಲ್ಲೇ ಅತ್ಯಂತ ಭೀಕರ ಎಂದು ಪರಿಗಣಿಸಲ್ಪಟ್ಟಿರುವ ಈ ಪ್ರಕೃತಿ ವಿಕೋಪವನ್ನು ನಿಭಾಯಿಸಲು ಕನ್ನಡಿಗರಿಗೆ ಶಕ್ತಿ ದೊರೆಯುತ್ತಿತ್ತು.
[ವೆಬ್‌ದುನಿಯಾದಲ್ಲಿ ಪ್ರಕಟಿತ]

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s