ಕೌನ್ ಬನೇಗಾ ಪ್ರಧಾನ ಮಂತ್ರಿ…?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ ಇದು ಸಾಧ್ಯ. ಇಲ್ಲಿ ದೇಶದ ಪ್ರಧಾನ ಅಧಿಕಾರ ಕೇಂದ್ರವಾದ ಪ್ರಧಾನಮಂತ್ರಿ ಹುದ್ದೆಯನ್ನು ಯಾರು ಬೇಕಾದರೂ ಬಯಸಬಹುದು. ಅದಕ್ಕೇ ಕೇಂದ್ರ ಪಂಚಾಯತ್ ರಾಜ್ ಸಚಿವ ಮಣಿಶಂಕರ್ ಅಯ್ಯರ್ ಹೇಳಿದ್ದು :”ಪ್ರಧಾನಿ ಹುದ್ದೆ ಎಂಬುದು ಟಿವಿಯಲ್ಲಿ ಬರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಂತಾಗಿದೆ-ಕೌನ್ ಬನೇಗಾ ಪ್ರಧಾನಮಂತ್ರಿ!”.

ಪ್ರಧಾನಿ ಹುದ್ದೆಗೇರಬೇಕಾದರೆ ದೇಶ ಮುನ್ನಡೆಸುವ ಸಾಮರ್ಥ್ಯ, ರಾಜತಾಂತ್ರಿಕ ಪರಿಣತಿ, ದೇಶದ ಸಮಗ್ರ ಸಮಸ್ಯೆಗಳ ಅರಿವು, ಅಸ್ಖಲಿತ ವಾಕ್ಚಾತುರ್ಯ, ಸಮಸ್ಯೆಗಳಿಗೆ- ಪ್ರಶ್ನೆಗಳಿಗೆ ತತ್‌ಕ್ಷಣ ಉತ್ತರ ಕೊಡುವ ಚಾಣಾಕ್ಷತೆ, ಎಲ್ಲಕ್ಕೂ ಮುಖ್ಯವಾಗಿ ನಾಯಕತ್ವದ ಗುಣವಿರಬೇಕು. ಆದರೋ ಇಲ್ಲಿ ಇವೆಲ್ಲ ಅರ್ಹತೆಗಳು ಗೌಣ. ಹಣ ಬಲ, ಸಂಖ್ಯಾ ಬಲ, ರಾಜಕೀಯ ಬಲ- ಇವುಗಳೇ ಸಾಕು ಪ್ರಧಾನಿಯಾಗಲು. ಅಥವಾ ಇವ್ಯಾವುವೂ ಬೇಕಾಗಿಯೂ ಇಲ್ಲ, ಒಂದಿಷ್ಟು ರಾಜಕೀಯ ಅನುಭವವಿದ್ದರೆ ಸಾಕು ಎಂಬುದು ಈ ಹಿಂದಿನ ಕೆಲವೊಂದು ಆಕಾಂಕ್ಷಿಗಳ ಚರಿತ್ರೆಯನ್ನು ನೋಡಿದರೆ ತಿಳಿದುಬರುತ್ತದೆ.

ಅಮೆರಿಕಕ್ಕೆ ಹೋಲಿಸಿದರೆ, ಅಲ್ಲಿ ಅಧ್ಯಕ್ಷೀಯ ಪದ್ಧತಿಯಿದೆ. ರಾಷ್ಟ್ರಾಧ್ಯಕ್ಷನೇ ಮುಖ್ಯ. ಭಾರತದಲ್ಲಿ ಸಂಸದೀಯ ಪ್ರಜಾಸತ್ತೆಯಿದ್ದು, ಇಲ್ಲಿ ಪ್ರಧಾನಿಗೆ ಆದ್ಯತೆ. ಅದರೆ ಅಲ್ಲಿ, ರಾಷ್ಟ್ರಾಧ್ಯಕ್ಷ ಪದವಿಗೆ ಆಯ್ಕೆ ನೆರವೇರುವ ವಿಧಾನವಿದೆಯಲ್ಲ, ಅತ್ಯಂತ ಅದ್ಭುತ, ಅನೂಹ್ಯ. ದೇಶವನ್ನು ಯಾರ ಕೈಗಿಡಬೇಕೆಂದು ಜನರು ಎಚ್ಚರಿಕೆಯಿಂದ ನಿರ್ಧರಿಸಲು ಅಲ್ಲಿ ಅವಕಾಶವಿರುತ್ತದೆ.

ಹೆಚ್ಚೆಂದರೆ ಎರಡ್ಮೂರು ಪಕ್ಷಗಳು ತಮ್ಮ ಪಕ್ಷದೊಳಗೇ ಉಮೇದುವಾರರನ್ನು ಮತದಾನದ ಮೂಲಕ ಆರಿಸುತ್ತವೆ. ಅಂದರೆ ಈ ಪದವಿಗೆ ತಮ್ಮ ಪಕ್ಷದಿಂದ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆಯೇ ಒಂದು ಪಕ್ಷದೊಳಗೆ ಚುನಾವಣೆ. ಅವರಲ್ಲಿ ಆಯ್ಕೆಯಾದವ, ವಿರುದ್ಧ ಪಕ್ಷದಿಂದಲೂ ಇದೇ ರೀತಿ ಆಯ್ಕೆಯಾಗಿ ಬಂದ ಅಭ್ಯರ್ಥಿಯನ್ನು ಮಹಾ ಮತದಾನದಲ್ಲಿ ಎದುರಿಸಬೇಕು. ಈ ಪದವಿಗೆ ಚುನಾವಣೆಗಳು ನಡೆಯುವ ಮುನ್ನ ಆ ಅಭ್ಯರ್ಥಿಗಳ ಮಧ್ಯೆ ಅಲ್ಲಲ್ಲಿ ಮುಖಾಮುಖಿ ಚರ್ಚೆ ಏರ್ಪಡಿಸಲಾಗುತ್ತದೆ. ಒಂದು ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಹೇಗೆ ಕಂಡುಹುಡುಕುತ್ತೀರಿ (ಉದಾಹರಣೆಗೆ ಈಗ ಜಗತ್ತನ್ನೇ ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು) ಎಂಬ ಬಗ್ಗೆ ಅಭ್ಯರ್ಥಿಗಳಿಗಿರುವ ಜ್ಞಾನವೆಷ್ಟು ಎಂಬುದನ್ನೆಲ್ಲಾ ಅಳೆದು ತೂಗಲು ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಅಭ್ಯರ್ಥಿಗಳ ಮಧ್ಯೆ ನೇರಾನೇರ ಪ್ರಶ್ನೋತ್ತರ ಕಲಾಪ ನಡೆಯುತ್ತದೆ.

ಅವರಲ್ಲಿ ಈತ ನಮ್ಮ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಎಂಬುದು ಜನರಿಗೆ ಮನದಟ್ಟಾಗುವ ವೇದಿಕೆ ಸಿದ್ಧವಾಗಿರುತ್ತದೆ. ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಅವರು ರಿಪಬ್ಲಿಕನ್ ಪ್ರತಿಸ್ಪರ್ಧಿ ಜಾನ್ ಮೆಕೇನ್ ಎದುರು ಗೆದ್ದದ್ದು ಇದೇ ವಿಧಾನದ ಮೂಲಕ.

ಇಲ್ಲಿ ಈ ಸಂಗತಿಯನ್ನೇಕೆ ಪ್ರಸ್ತಾಪಿಸಿದ್ದು ಎಂದರೆ, ಚುನಾವಣೆ ಘೋಷಣೆಯಾಗುವ ಮುನ್ನವೇ ಮುಂದಿನ ಪ್ರಧಾನಿ ಹುದ್ದೆಗೆ ನಾನು ಅಭ್ಯರ್ಥಿ, ನಾನು ಅಭ್ಯರ್ಥಿ ಎಂಬ ಹೇಳಿಕೆಗಳು ಕೇಳಿಬರತೊಡಗಿದ್ದವು ನಮ್ಮಲ್ಲಿ. ಹೊಸ ಸೇರ್ಪಡೆ ಎಂದರೆ ಹಾಸ್ಯನಟ ಜಸ್ಪಾಲ್ ಭಟ್ಟಿ. ಚಂಡೀಗಢದಿಂದ ತಾವು ಹೊಸದಾಗಿ ಸ್ಥಾಪಿಸಿರುವ ‘ರಿಸೆಶನ್ ಪಾರ್ಟಿ’ ಮೂಲಕ ಪ್ರಧಾನಿಯಾಗುವ ಏಕೈಕ ಉದ್ದೇಶದಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಅವರ ಮಾತಿನಲ್ಲಿ ವ್ಯಂಗ್ಯದ ಮೊನಚಿದ್ದರೂ ಅದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಅಂತೆಯೇ, ಈ ಪರಮ ಪವಿತ್ರ ಹುದ್ದೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುಪಿಎಯ ಅಭ್ಯರ್ಥಿ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾರೆ, ಹಲವು ಸಮಯದಿಂದ ಕಾಯುತ್ತಿರುವ ಎಲ್.ಕೆ.ಆಡ್ವಾಣಿ ಇದ್ದಾರೆ, ನರಸಿಂಹರಾವ್ ಕಾಲದ ಬಳಿಕ ಇತ್ತ ಒಂದು ಕಣ್ಣು ನೆಟ್ಟಿದ್ದ ಶರದ್ ಪವಾರ್, ಈಗ ಬೇಡ ಎನ್ನುವ ರಾಹುಲ್ ಗಾಂಧಿ, ನಾನೂ ಯಾಕಾಗಬಾರದು ಎನ್ನುವ ಲಾಲೂ ಪ್ರಸಾದ್ ಯಾದವ್ ಮತ್ತು ರಾಮ ವಿಲಾಸ್ ಪಾಸ್ವಾನ್, ಇಲ್ಲ ಇಲ್ಲ ಎನ್ನುತ್ತಲೇ ಇರುವ ಎಚ್.ಡಿ.ದೇವೇಗೌಡ, ಅತ್ತಕಡೆಯಿಂದ ಚಂದ್ರಬಾಬು ನಾಯ್ದು, ‘ಸದ್ಯಕ್ಕೆ ಇಲ್ಲ’ ಎನ್ನುವ ಜಯಲಲಿತಾ, ನಂಗೂ ಒಂದು ಕೈನೋಡುವ ಆಸೆಯಿದೆ ಎಂದಿದ್ದ ಭೈರೋನ್ ಸಿಂಗ್ ಶೇಖಾವತ್… ಹೀಗೆ ಎಲ್ಲರೂ ಈ ಹಾಟ್ ಸೀಟ್ ಮೇಲೆ ಕಣ್ಣಿಟ್ಟವರೇ.

ಇಲ್ಲಿ ಅರ್ಹತೆ ಆಧಾರವಾಗುವುದಿಲ್ಲ, ಕಾರ್ಯಕ್ಷಮತೆ ಲೆಕ್ಕಕ್ಕೆ ಬರುವುದಿಲ್ಲ, ಅನುಭವಕ್ಕೆ ಬೆಲೆ ಇಲ್ಲ. ಇಲ್ಲಿರುವುದು ಚೌಕಾಶಿ ಸಾಮರ್ಥ್ಯಕ್ಕೆ ಬೆಲೆ ಮಾತ್ರ. ಇದಕ್ಕೆ ಕಾರಣವೂ ಇಲ್ಲದಿಲ್ಲ, ಯಾವುದೇ ಪಕ್ಷಕ್ಕೆ ಕೂಡ ನಾವಾಗಿಯೇ ಪರಿಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಬಲ್ಲೆವು ಎಂಬ ಆತ್ಮವಿಶ್ವಾಸವಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳದೇ ಕಾರು ಬಾರು. ಹತ್ತು ದಿಕ್ಕು, ನೂರು ದನಿ ಈ ಒಂದು ಪ್ರಧಾನಿ ಪದವಿಗೆ.

ಒಂದು ಪಂಗಡಕ್ಕೆ, ಒಂದು ಜಾತಿಗೆ, ಒಂದು ಕೋಮಿಗೆ, ಒಂದು ಪ್ರದೇಶಕ್ಕೆ, ಒಂದು ನಿರ್ದಿಷ್ಟ ಹಿತಾಸಕ್ತಿಗೆ ಸೀಮಿತವಾಗಿರುವ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಫಳ ಫಳನೆ ಹೊಳೆಯತೊಡಗುತ್ತವೆ. ಇದರಿಂದಾಗಿ ಯಾವುದೇ ಪ್ರಜೆ ಬೇಕಾದರೂ ಪ್ರಭುವಾಗುವ ಕನಸು ಕಾಣುತ್ತಿದ್ದಾರೆ. ಇದು ಅರಾಜಕತೆಗೆ ನಾಂದಿಯೇ? ಅಂದರೆ ನಮ್ಮ ಬಳಿ ಒಂದಷ್ಟು ಸಂಖ್ಯಾಬಲವಿದ್ದರೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣು ಇಡಬಹುದು. ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳ ಅಭಿವೃದ್ಧಿಗೆ ಅತ್ಯಗತ್ಯ ಎಂದು ಹೇಳಬಹುದಾದರೂ, ರಾಷ್ಟ್ರೀಯ ಮಟ್ಟದಲ್ಲಿ? ಹೆಚ್ಚು-ಕಡಿಮೆ ಅವುಗಳ ಅಜೆಂಡಾ ರಾಷ್ಟ್ರ ರಾಜಕಾರಣದಲ್ಲಿ ಅಪ್ರಸ್ತುತವಾಗಬಹುದು. ಈ ಬಗ್ಗೆ ಚಿಂತಿಸಬೇಕಾಗಿದೆ.

ಇನ್ನು, ಈಗಿನ ಪ್ರಧಾನಿ ಅಭ್ಯರ್ಥಿಗಳಲ್ಲಿ ಆ ಹುದ್ದೆಗೆ ತಕ್ಕುದಾದ ಛಾತಿ, ವರ್ಚಸ್ಸಿನ ಕೊರತೆ ಇರುವುದು ಎದ್ದುಕಾಣುತ್ತದೆ. ಇದು ಸಂಸತ್ಸದಸ್ಯ ಸ್ಥಾನಕ್ಕೆ ಟಿಕೆಟ್ ಯಾರಿಗೆ ಕೊಡುವುದು ಎಂಬಲ್ಲಿಂದ ತೊಡಗಿ ಪ್ರಧಾನಿ ಹುದ್ದೆವರೆಗೂ ಈ ನಾಯಕರ ಕೊರತೆ ವ್ಯಾಪಿಸಿದೆ. ಓಟು ಕೊಡುವುದು ಜನರಾದರೂ, ಯಾವುದಾದರೊಂದು ಪಕ್ಷದ ಅಧ್ಯಕ್ಷರು ಪ್ರಧಾನಿಯನ್ನು ‘ನೇಮಕ’ ಮಾಡುತ್ತಾರೆ. ಅಂದರೆ ಪ್ರಧಾನಿಯಾಗಬೇಕಿದ್ದವರು ಪ್ರಜಾಸತ್ತಾತ್ಮಕವಾಗಿ ಚುನಾಯಿಸಿ ಬರಬೇಕಾಗಿಲ್ಲ. ಹುದ್ದೆಗೆ ಏರಿದ ಬಳಿಕ ಚುನಾವಣೆ ಎದುರಿಸಿದರೂ ಸಾಕು! ಕಳೆದ ಲೋಕಸಭೆಯಲ್ಲಿ ಆಗಿದ್ದೂ ಇದೇ. ಭಾರತದ ಸಂಸದೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹುಶಃ ತೀರಾ ನಿರಾಶಾದಾಯಕ ಬೆಳವಣಿಗೆಯೂ ಹೌದಾಗಿದ್ದರೂ, ಪ್ರಧಾನಿ ಯಾರಾಗುವರು ಎಂಬುದು ಕೊನೆಯವರೆಗೂ ಸಸ್ಪೆನ್ಸ್ ಆಗಿಯೂ, ಥ್ರಿಲ್ಲರ್ ಆಗಿಯೂ ಮಾರ್ಪಡುವ ಪ್ರಕ್ರಿಯೆಯಿದೆಯಲ್ಲ, ಅಲ್ಲಿ ಸಾಕಷ್ಟು ಮನೋರಂಜನೆಯೂ ಇರುತ್ತದೆ ಎಂಬುದು ಅಷ್ಟೇ ದಿಟ.

ಯಾರೇ ಆದರೂ ಪ್ರಧಾನಿ ಆಗಬಹುದು ಎಂಬುದು ಒಂದು ರೀತಿಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ನೀತಿಗೆ ತಾರ್ಕಿಕವಾಗಿ ಪೂರಕವಾದರೂ, ಪ್ರಜಾಸತ್ತೆಗೆ ಹಿನ್ನಡೆಯೂ ಹೌದು. ಯಾಕೆಂದರೆ ಜನ ಯಾರಿಗೋ ಮತ ಹಾಕುತ್ತಾರೆ, ಯಾರೋ ಒಬ್ಬರು ಪ್ರಧಾನಿಯಾಗುತ್ತಾರೆ. ಇಲ್ಲಿ ಸಂಖ್ಯೆಗಳೇ ಮುಖ್ಯವಾಗಿಬಿಡುತ್ತವೆ. ಪ್ರಧಾನಿಯಾಗುವವರಿಗೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಎಂದರೇನು, ಪರಮಾಣು ಒಪ್ಪಂದವೇಕೆ, ದೇಶದ ಭಯೋತ್ಪಾದನೆ ನಿಗ್ರಹಿಸುವುದು ಹೇಗೆಂಬ ದೂರದೃಷ್ಟಿಯಿರಬೇಕಿಲ್ಲ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟರ ಮಟ್ಟಿಗೆ ಪಾವಿತ್ರ್ಯ ಕಳೆದುಕೊಂಡಿದೆಯೆಂದರೆ, ಇಲ್ಲಿ ಕ್ರಿಮಿನಲ್ ಕೇಸುಗಳಿದ್ದರೂ ಉನ್ನತ ಹುದ್ದೆಗೇರಬಹುದು. ಇದು ಕೆಲವು ರಾಜ್ಯಗಳ ಮುಖ್ಯಮಂತ್ರಿ ಪಟ್ಟದವರೆಗೆ ಹೋಗಿದೆ, ಅಷ್ಟೇಕೆ ಕೇಂದ್ರದ ಸಚಿವ ಪದವಿವರೆಗೂ ಕ್ರಿಮಿನಲ್‌ಗಳು ತಲುಪಿದ್ದಾರೆ. ಭಾರತಾಂಬೆಯ ಪುಣ್ಯ, ಪ್ರಧಾನಿ ಹುದ್ದೆ ಆ ಮಟ್ಟಕ್ಕೆ ಇನ್ನೂ ಇಳಿದಿಲ್ಲ.

ಹಾಗಿದ್ದರೆ, ಪ್ರಾದೇಶಿಕ ಪಕ್ಷಗಳ ಈ ಪರಿಯ ಬೆಳವಣಿಗೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದೆಯೇ? ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಹಂಗಿಗೆ ಬೀಳುವಂತಾಗಿರುವುದೇಕೆ? 20-30 ಸಂಸದರನ್ನಿಟ್ಟುಕೊಂಡು 545 ಸದಸ್ಯಬಲದ ಲೋಕಸಭೆಯಲ್ಲಿ ಪ್ರಧಾನಿಯಾಗಬಹುದಾದರೆ, ಅಥವಾ ಯಾವುದಾದರೂ ಅಧಿಕಾರಕ್ಕೇರಿದ ರಾಷ್ಟ್ರೀಯ ಪಕ್ಷವನ್ನು ಗಡಗಡನೆ ನಡುಗಿಸಬಹುದಾದರೆ (ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಎಡಪಕ್ಷಗಳು ಮಾಡಿದಂತೆ) ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವೇ ಅಥವಾ ಅಣಕವೇ? ಬಹುಶಃ ನಮ್ಮ ಸಂವಿಧಾನವನ್ನು ರಚಿಸಿದವರಿಗೆ ಇಂಥದ್ದೊಂದು ಪರಿಸ್ಥಿತಿಯ ಕಲ್ಪನೆಯೇ ಇದ್ದಿರಲಾರದು.

ಒಟ್ಟಾರೆ ಪರಿಣಾಮ? ಒಬ್ಬ ಯಾವುದೇ ಅಧಿಕಾರವಿಲ್ಲದ ದುರ್ಬಲ ಪ್ರಧಾನಮಂತ್ರಿ! ಏನೇ ನಿರ್ಧಾರ ಕೈಗೊಳ್ಳಬೇಕಿದ್ದರೂ, ಪರಿಸ್ಥಿತಿಯ ಕೈಗೊಂಬೆಯಾಗಿರುವ ಆತನಿಗೆ ಎಡದಿಂದ, ಬಲದಿಂದ, ಮೇಲಿಂದ, ಕೆಳಗಿಂದ ‘ಬೆಂಬಲ ಹಿಂತೆಗೆದುಕೊಳ್ತೀವಿ’ ಎಂಬ ಬೆದರಿಕೆ ಯಾವುದೇ ಕ್ಷಣ ಎದುರಾಗಬಹುದು. ಒಂದು ಸಮಷ್ಟಿಯ ಹಿತಕ್ಕಾಗಿ ಅಲ್ಲೊಂದು ಸರ್ವಸಮ್ಮತ ನಿರ್ಧಾರ ಮೂಡಬೇಕಿದ್ದರೆ ಆಕಾಶ ಭೂಮಿ ಒಂದು ಮಾಡಬೇಕಾಗುತ್ತದೆ.

ಈ ಬಾರಿಯ ಚುನಾವಣಾ ದೃಶ್ಯಾವಳಿಗಳನ್ನು ಗಮನಿಸಿದರೆ, ಒಂದು ಪಕ್ಷಕ್ಕೆ, ಒಂದು ಪ್ರಧಾನಿ ಅಭ್ಯರ್ಥಿಗೆ ಪೂರ್ಣ ಬಹುಮತ ದೊರೆಯುವುದೇ ಕಷ್ಟ. ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್‌ಗಳಾಗುತ್ತವೆ ಮತ್ತು ಕಿಂಗ್ ಕೂಡ ಆಗಬಹುದಾಗಿದೆ. ಹಾಗಿದ್ದರೆ ರಾಷ್ಟ್ರೀಯ ಮಟ್ಟದಲ್ಲಿ ದ್ವಿ-ಪಕ್ಷ ಸಿದ್ಧಾಂತ ಒಳ್ಳೆಯದೇ? ನೀವೇನಂತೀರಿ?
[ವೆಬ್‌ದುನಿಯಾದಲ್ಲಿ ಪ್ರಕಟ]

Advertisements

4 thoughts on “ಕೌನ್ ಬನೇಗಾ ಪ್ರಧಾನ ಮಂತ್ರಿ…?

 1. ಹಿಂದೆ, ರಾಜರಾಡಳಿತದ ಕಾಲದಲ್ಲಿ, “ಯಥಾ ರಾಜ, ತಥಾ ಪ್ರಜಾ” ಅಂಥಾ ಇತ್ತು..
  ಇಂದು, “ಪ್ರಜಾಪ್ರಭುತ್ವ”ದಲ್ಲಿ, “ಯಥಾ ಪ್ರಜಾ, ತಥಾ ಮಂತ್ರಿ” ಎನ್ನಬಹುದು. ನಿಮ್ಮ ವೆಬ್‌ದುನಿಯಾದಲ್ಲಿ ಪ್ರಕಟವಾದ ಇದೇ ಲೇಖನಕ್ಕೆ ಯಾರೋ ಮಂದಿರ, ಮಸೀದಿ ಎಂದೆಲ್ಲ ಪ್ರತಿಕ್ರಿಯೆ ಬರೆದುಬಿಟ್ಟಿದ್ದಾರೆ. ಜನತೆ ಸರಿಯಾಗುವ ತನಕ, ರಾಜಕಾರಣಿಗಳಾಗುವರೇ? ತಮ್ಮ ಬೇಳೆ ಬೇಯುವಲ್ಲಿ ಬೇಯಿಸದೇ ಬಿಡುವರೇ?

  Like

 2. ಇವತ್ತು ದೇಶದ ಪರಿಸ್ಥಿತಿ ನೋಡಿದ್ರೆ ನಂಗೆ ಸಮ್ಮಿಶ್ರ ಸರಕಾರವೇ ಬೇಕು ಅನಿಸ್ತಾ ಇದೆ. ಯಾರಾದ್ರೂ ಬರ್ಲಿ, ಆದ್ರೆ ಅವರು ದೇಶಕ್ಕೆಲ್ಲ ತಾವೇ ಅಂತ ಸೊಕ್ಕಿನಿಂದ ಮೆರೆಯಲಿಕ್ಕೆ ಮಾತ್ರ ಮತದಾರ ಬಿಡದಿರಲಿ…

  Like

 3. ಪ್ರದೀಪ್ ಅವರೆ,
  ನೀವು ಹೇಳಿದ್ದು ಸರಿ. ಏನೇ ಸಂಭವಿಸಿದರೂ, ಬರೆದರೂ ಅಲ್ಲಿ ಜಾತಿ-ಮತ-ಧರ್ಮವನ್ನು ಎಳೆದು ತರೋ ಜನರು ಇರುವಾಗಲೆಲ್ಲಾ, ಅದು ಕೂಡ ಸುಶಿಕ್ಷಿತರೇ ಈ ಕೆಲಸ ಮಾಡುತ್ತಿರುವಾಗಲೆಲ್ಲಾ ಅನ್ನಿಸುವುದು… ಇವರ ಮನಸ್ಥಿತಿ ಒಂದಿಷ್ಟು ವಾಸ್ತವದತ್ತ ಬದಲಾಗಿದ್ದಿದ್ದರೆ… ಎಂಬ ಭಾವನೆ. ಆದರೆ ಅದು… “…ರೆ” ಆಗಿಯೇ ಉಳಿಯುತ್ತಿರುವುದು ವಿಪರ್ಯಾಸ.

  Like

 4. @ ಶ್ರೀ,
  ಸಮ್ಮಿಶ್ರ ಸರಕಾರ ಇರಲಿ. ಆದರೆ ಪ್ರಾದೇಶಿಕ ಹಿತವು ರಾಷ್ಟ್ರ ಹಿತಕ್ಕಿಂತ ಮುಖ್ಯವಾಗದಿರಲಿ. ಮತ್ತು ನೀವು ಹೇಳಿದ್ದೇ… ಅವರು ‘ನಾನು ಹೇಳಿದ್ದೇ ಸಂವಿಧಾನ’ ಎಂಬ ಸೊಕ್ಕಿನಿಂದ ಬೆಳೆಯಲು ಮತದಾರ ಬಿಡದೇ ಇರಲಿ. ಇದು ನನ್ನದೂ ಆಶಯ.

  Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s