'ಬದಲಾವಣೆ…' ನಾಲ್ಕನೇ ವರ್ಷಕ್ಕೆ!

ಬ್ಲಾಗು ಎಂದರೇನೆಂದು ತಿಳಿಯದೇ ಇದ್ದ ದಿನಗಳವು. ಆವಾಗ ಅದು ಹೇಗೋ ಅಂತರಜಾಲ ಕ್ಷೇತ್ರದಿಂದ ಫಕ್ಕನೇ ಸೆಳೆಯಲ್ಪಟ್ಟವನಾಗಿ, ನಮ್ಮದೇ ಉಚಿತ ಪುಟ್ಟ ಜಾಲತಾಣವೊಂದನ್ನು ಸೃಷ್ಟಿಸಬಹುದು ಎಂದು ಆಕಸ್ಮಿಕವಾಗಿ ತಿಳಿದದ್ದು.

ಅಗಸ ಮೊಟ್ಟ ಮೊದಲು ಕೆಲಸ ಪ್ರಾರಂಭಿಸುವಾಗ ಬಟ್ಟೆಯನ್ನು ಎತ್ತಿ ಎತ್ತಿ ಒಗೆದನಂತೆ. ಹೀಗೇ ಆಯಿತು ನನ್ನ ಪರಿಸ್ಥಿತಿಯೂ. ಏನೋ ಒಂದು ಸಿಕ್ಕಿಬಿಟ್ಟಿತು ಅಂತ ಹತ್ತು ಹಲವಾರು ಸೈಟುಗಳಿಗೆ ಜಾಲಾಡಿ, ಇದ್ದಲ್ಲಿ, ಹೋದಲ್ಲೆಲ್ಲಾ ಬ್ಲಾಗುಗಳನ್ನು ಸೃಷ್ಟಿ ಮಾಡಿದೆ. ಕೆಲವನ್ನು ಪ್ರಯೋಗಕ್ಕಾಗಿ, ಮತ್ತೆ ಕೆಲವನ್ನು ಶೋಕಿಗಾಗಿ.. ಮತ್ತೆ ಕೆಲವು ಕುತೂಹಲಕ್ಕಾಗಿ, ಇನ್ನು ಕೆಲವು ಪ್ರಯೋಗಕ್ಕಾಗಿ… ಅಂದರೆ ಇದರಲ್ಲಿ ಏನಿದೆ, ವರ್ಡ್‌ಪ್ರೆಸ್‌ಗಿಂತ ಹೇಗೆ ಭಿನ್ನ, ಬ್ಲಾಗುಸ್ಪಾಟು ಯಾಕೆ ಚೆನ್ನ ಅಂತೆಲ್ಲಾ ಪ್ರಯೋಗ ಮಾಡುವುದಕ್ಕೆ…

ಅಂತೂ ಇಂತೂ ಜಾಲಾಡಿ ಜಾಲಾಡಿ, ಇದೊಂದು ಚಟವೇ ಆಗುತ್ತಿದೆಯಲ್ಲ ಅಂತ ಅದೊಂದು ದಿನ ಅರಿವಿಗೆ ಬಂತು. ನನ್ನ ಸಮಯವೂ ಸಾಕಷ್ಟು ವ್ಯಯವಾಗುತ್ತಿತ್ತಲ್ಲ ಎಂಬ ಕೊರಗು. ಕೊನೆಗೆ ಉಳಿದುಕೊಂಡದ್ದು ಈ ಬ್ಲಾಗು. ಬ್ಲಾಗುಸ್ಪಾಟಿನಲ್ಲಿಯೇ ನಾಲ್ಕಾರು, ರಿಡಿಫ್‌ನಲ್ಲಿ, ಯಾಹೂದಲ್ಲಿ, ಸಿಫಿಯಲ್ಲಿ, ಸುಲೇಖಾ ಡಾಟ್ ಕಾಂನಲ್ಲಿ… ಹೀಗೆ.. ಎಷ್ಟೆಷ್ಟೋ ಬ್ಲಾಗುಗಳಿದ್ದವು. ಅವೆಲ್ಲ ಈಗ ಗೊಟಕ್ ಅಂದಿವೆ. ಉಳಿದದ್ದು ಇದೊಂದು, ಉಳಿಸಿಕೊಂಡದ್ದು ಇದನ್ನು ಮಾತ್ರ.

2006ರ ಮಾರ್ಚ್ 16ರಂದು ಈ ಬ್ಲಾಗು ತೆರೆದಾಗ ಏನು ಬರೆಯಬೇಕೆಂಬ ನಿರ್ಧಾರವಿರಲಿಲ್ಲ. ಹೇಗೆ ಮುಂದುವರಿಯುವುದೆಂಬ ಗುರಿ ಇರಲಿಲ್ಲ. ಹಾಗೆಯೇ ಅಂತರಜಾಲದಲ್ಲಿ ಜಾಲಾಡುತ್ತಾ ಜಾಲಾಡುತ್ತಾ, ಅಲ್ಲಿಂದ ಇಲ್ಲಿಂದ ಕೆಲವನ್ನು ಎತ್ತಿಕೊಂಡು, ಇ-ಮೇಲ್ ಫಾರ್ವರ್ಡುಗಳನ್ನು ಹಾಕಿಕೊಂಡು ಇರುತ್ತಿದ್ದೆ. ನನ್ನ ಬಗ್ಗೆ ನಾನು ಬರೆದುಕೊಂಡ ‘ನಾನು ಹೀಗಿದ್ದೇನೆ’ ಪುಟದಲ್ಲಿ ಬಿದ್ದ ಮೊದಲ ಕಾಮೆಂಟ್ ಶ್ರೀವತ್ಸ ಜೋಷಿಯವರದು. ಆಗ ಕನ್ನಡ ಬ್ಲಾಗ್ ನಕ್ಷತ್ರಗಳಿದ್ದದ್ದು ಕೇವಲ 27 ಅಂತ ಅವರ ಕಾಮೆಂಟಿನಲ್ಲಿರುವ ಸಂಗತಿಯನ್ನು ಗಮನಿಸಿದರೆ, ಇಂದು ಕನ್ನಡದಲ್ಲಿ ಬ್ಲಾಗೆಂಬ ಲೋಕ ಯಾವ ಪರಿ ಬೆಳೆದಿದೆ ಎಂದು ಅರ್ಥೈಸಿಕೊಳ್ಳಬಹುದು.

ಆ ಮೇಲೆ, ನನ್ನ ಬರವಣಿಗೆಯನ್ನು ಮತ್ತಷ್ಟು ಹದಗೊಳಿಸಲು ಇದನ್ನೊಂದು ವೇದಿಕೆಯಾಗಿ ಯಾಕೆ ಪರಿವರ್ತಿಸಬಾರದು ಎಂದು ಮನಸ್ಸಿನಲ್ಲಿ ಮೂಡಿತು. ಕವನಗಳು ಎಂದರೆ ದೂರವೇ ಇದ್ದ ನಾನು ಕವನ ಬರೆಯಲೂ ಪ್ರಯತ್ನಿಸಿದೆ. ಅದು ನನಗೆ ಒಲಿಯಿತೋ… ಗೊತ್ತಿಲ್ಲ. ಮತ್ತೆ ಮಾಮೂಲಿ ರಾಜಕೀಯ ವಿಷಯವಿದ್ದೇ ಇದೆಯಲ್ಲ, ಸಾಕಷ್ಟು ಮನರಂಜನೆಗೆ 🙂 . ಹೀಗಾಗಿ ರಾಜಕೀಯದತ್ತಲೂ ನನ್ನ ಅಭಿಪ್ರಾಯ ಹೊರಗೆಡಹುತ್ತಾ ಬಂದೆ.

ಈ ಮೂರು ವರ್ಷಗಳಲ್ಲಿ ಹಲವು ಬಾರಿ ಬ್ಲಾಗಿನ ವಿನ್ಯಾಸ ಬದಲಾಯಿಸಿದ್ದೇನೆ. ಯಾಕೆಂದರೆ ಬದಲಾವಣೆಯೇ ಪ್ರಕೃತಿ ನಿಯಮವಲ್ಲವೇ ? 🙂 ಇಷ್ಟು ವರ್ಷಗಳಲ್ಲಿ ಅದೆಷ್ಟೋ ಮಂದಿ ಹಿರಿಯರು, ನನ್ನ ಹಿಂದಿನ ಬಾಸ್‌ಗಳು, ಕಿರಿಯರು, ಸಹೋದ್ಯೋಗಿಗಳು, ಸಹವರ್ತಿಗಳು, ಸಹ-ಬ್ಲಾಗಿಗರು ಬಂದು ಶುಭ ಕೋರಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಮತ್ತು ಆತ್ಮೀಯರಾಗಿಬಿಟ್ಟಿದ್ದಾರೆ, ಮಿತ್ರರಾಗಿದ್ದಾರೆ. ಅವರಿಗೆಲ್ಲ ಚಿರಋಣಿ ಮತ್ತು ಕಾಮೆಂಟುಗಳಿಗೆ ಉತ್ತರಿಸಲು ಕೆಲವು ದಿನ ತಡವಾದದ್ದಿದೆ. ಅದಕ್ಕೆ ಅದೇ ನೆಪ ಕೊಡುತ್ತಿದ್ದೇನೆ – Busy ಸ್ವಾಮೀ ಅಂತ. ಹೊಟ್ಟೆಗೆ ಹಾಕಿಕೊಳ್ಳಿ. ಬರುತ್ತಾ ಇರಿ, ಅಭಿಪ್ರಾಯ ಮಂಡಿಸ್ತಾ ಇರಿ. ಅನಿಸಿಕೆ, ಸಲಹೆ ನೀಡುತ್ತಾ ಇರಿ.

ನೆಟ್ ಕನ್ನಡಿಗರಿಗೆಲ್ಲರಿಗೂ ಆತ್ಮೀಯ ಧನ್ಯವಾದಗಳು.

11 thoughts on “'ಬದಲಾವಣೆ…' ನಾಲ್ಕನೇ ವರ್ಷಕ್ಕೆ!

  1. ವಿಕಾಸ್ ಅವರೆ,
    ಸೀನಿಯರ್? ಹುಹ್… ಹೊಸ ಬಿರುದು 🙂
    ನಮ್ಮದೇನಿಲ್ಲ… ಈಗ ಹೊಸದಾಗಿ ಬಂದಿರೋ ನಿಮ್ಮಂಥೋರ ಬ್ಲಾಗುಗಳು ಭರ್ಜರಿಯಾಗಿ ಓಡುತ್ತಿವೆಯಲ್ಲ… ನಿಮಗೂ ಕೂಡ happy blogging…

    Like

  2. ರಂಜಿತ್,
    ಹಾರೈಕೆಗೆ Thanks. ಅಷ್ಟು ಹಿರಿಯರಾ? ನಮಗಿಂತಲೂ ಹಿರಿಯರಿದ್ದಾರೆ… ಕೆಳಗೆ ಶ್ರೀನಿಧಿ ಇದ್ದಾರೆ..

    ಶ್ರೀನಿಧಿ ಅವರೆ,
    ಬ್ಲಾಗಿನಲ್ಲಿ ನಮಗಿಂತ ಹಿರಿಯರಾದ ನಿಮಗೂ ಅಭಿನಂದನೆ 🙂

    Like

  3. ಅವಿ, ಬ್ಲಾಗ್ ಬರಹಗಳು ತುಂಬಾ ಕಡಿಮೆ ಆದವಲ್ಲಾ ಯಾಕೆ.. ನಿತ್ಯ ನೋಡುವುದು ಹೊಸದಿಲ್ಲ ಅಂತ ಹೋಗುವುದು ಇದೆ ಕೆಲಸ ಹಚ್ಚಿದ್ದೀರಿ ನಂಗೆ

    ಶಮ, ನಂದಿಬೆಟ್ಟ

    Like

ನೀವೇನಂತೀರಾ?