ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!

ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸಿದ ಎರಡು ವರ್ಷಗಳ ಬಳಿಕ ಕರುನಾಡಿನ ಮಗದೊಂದು ಸುವರ್ಣ ಅಧ್ಯಾಯ ಆರಂಭವಾಗಿದೆ. ಪಂಚಕೋಟಿ ಕನ್ನಡಿಗರ ಆಡುಭಾಷೆಯಾದ, ನಲ್ನುಡಿ, ಹೊನ್ನುಡಿ, ಚೆನ್ನುಡಿಯಾದ ಕನ್ನಡ ನುಡಿಗೆ ಸಿಗಲೇಬೇಕಾಗಿದ್ದ ಮನ್ನಣೆಯೊಂದು ದೊರಕಿದ ಸುವರ್ಣ ಕ್ಷಣವಿದು.

ಕನ್ನಡ, ಕನ್ನಡಿಗರ ಮಟ್ಟಿಗೆ ಇದೊಂದು ಅದ್ಭುತವೂ, ಆನಂದ ದಾಯಕವೂ ಆದ ರಸಮಯ ಕ್ಷಣ. ರಾಜ್ಯೋತ್ಸವ ಮುನ್ನಾ ದಿನ ದೊರೆತ ಈ ಕೊಡುಗೆಯನ್ನು ಉಳಿಸಿಕೊಳ್ಳುವುದು, ಈ ಮೂಲಕ ಭಾಷೆಯನ್ನು ಬೆಳೆಸುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯ.

ಕನ್ನಡಕ್ಕೆ “ಕ್ಲಾಸಿಕಲ್ ಲಾಂಗ್ವೇಜ್” ಎಂಬ, ಕನ್ನಡದಲ್ಲಿ ಹೇಳಬಹುದಾದರೆ “ಶಾಸ್ತ್ರೀಯ ಭಾಷೆ” ಅಥವಾ “ಅಭಿಜಾತ ಭಾಷೆ” ಎಂಬ ಸ್ಥಾನಮಾನ ದೊರಕಿ ಆಯಿತು. ಇನ್ನೇನು ಆಗುತ್ತದೆ? ಎಂಬ ಕುತೂಹಲ ಪ್ರತಿಯೊಬ್ಬ ಕನ್ನಡಿಗನದು. ಸ್ಥೂಲವಾಗಿ ಹೇಳಬಹುದಾದರೆ, ಕನ್ನಡಕ್ಕೆ ದೊರೆತ ಈ ಮನ್ನಣೆಯಿಂದ ಕನ್ನಡ ಭಾಷೆಯ ಕುರಿತು, ಕನ್ನಡದ ಸಂಸ್ಕೃತಿ ಕುರಿತು, ಕನ್ನಡವೆಂಬ ಸಂಪ್ರದಾಯದ ಕುರಿತು ಸಮಗ್ರವಾದ, ಆಮೂಲಾಗ್ರ ಅಧ್ಯಯನ ಕಾರ್ಯಗಳಿಗೆ ಹೊಸ ಚೇತನ ಬರುತ್ತದೆ. ಇದಕ್ಕಾಗಿ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ನಿಧಿ ಹರಿದುಬರುತ್ತದೆ. ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳು ಸ್ಥಾಪನೆಯಾಗುತ್ತವೆ, ಇವುಗಳ ಅನುಷ್ಠಾನಕ್ಕಾಗಿ ಕನ್ನಡಿಗರಿಗೆ ಪ್ರಮುಖ ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂಬೆಲ್ಲಾ ಸಾಧ್ಯತೆಗಳು ಇದರಿಂದ ಮೂಡುತ್ತವೆ.

ಈಗ ಕನ್ನಡವು ಸಿಂಹಾಸನವೇರಿಯಾಯಿತು. ಶಾಸ್ತ್ರೀಯವಾದ, ಶುದ್ಧವಾದ ಭಾಷೆ ಎಂಬ ಹೆಗ್ಗಳಿಕೆಯ ಕಾರಣಕ್ಕೆ ಹಳೆಗನ್ನಡ ಮತ್ತೆ ಉತ್ತುಂಗಕ್ಕೇರುತ್ತದೆಯೇ ಅಥವಾ ಆಧುನಿಕ ಕನ್ನಡದ ಪ್ರಗತಿಗೆ ಅಡ್ಡಿಯಾಗುತ್ತದೆಯೇ ಎಂಬ ಭಯಾತಂಕಗಳೂ, ಅನ್ಯ ಭಾಷಾ ಪದಗಳು ಕನ್ನಡಕ್ಕೆ ಎಷ್ಟು ಸ್ವೀಕಾರಾರ್ಹ ಎಂಬ ಚರ್ಚೆಗಳೂ ಇದರೊಂದಿಗೇ ರೆಕ್ಕೆ ಪುಕ್ಕ ಪಡೆದುಕೊಂಡಿವೆ. ಇದರೊಂದಿಗೆ ಅಲ್ಪಪ್ರಾಣ-ಮಹಾಪ್ರಾಣಗಳ ಅಳವಡಿಕೆ ಕುರಿತಾದ ವಾದ-ವಿವಾದವೂ ಧುತ್ತನೇ ಮೇಲೆದ್ದು ನಿಂತಿದೆ. ಈ ಕುರಿತು ವಿಸ್ತೃತ ಬರೆಹ ಇಲ್ಲಿದೆ.

ಇದರ ನಡುವೆ, ಈಗ ಅಧಿಕೃತವಾಗಿ ದೊರೆತ ಸ್ಥಾನಮಾನದ ಪೆರ್ಮೆಯನ್ನು ಅನುಭವಿಸಲು, ಕನ್ನಡವನ್ನು ಉಳಿಸಲು, ಬೆಳೆಸಲು ಮತ್ತು ಕನ್ನಡ ನಾಡಿನಲ್ಲಿರುವವರಿಗೆಲ್ಲಾ ಕನ್ನಡ ಪ್ರಜ್ಞೆಯನ್ನು ಮೂಡಿಸಲು ಇರುವ ಅನಂತ ಸಾಧ್ಯತೆಗಳತ್ತ ಗಮನ ಹರಿಸಬೇಕಾಗಿರುವುದು ಇಂದಿನ ತುರ್ತು. ಈ ಬಗ್ಗೆ ಕನ್ನಡದ ಮನಸ್ಸುಗಳು ಮನ ಮಾಡಿದಲ್ಲಿ ನಮ್ಮ ಗಂಧದ ಗುಡಿಯ ಈ ನುಡಿಯು ನಿಜ ಐಸಿರಿಯಾಗುವುದರಲ್ಲಿ ಸಂದೇಹವಿಲ್ಲ.

ಕನ್ನಡಾಂಬೆಗೆ ಜಯವಾಗಲಿ

ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು.

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s