ಕಪಿಲ್ ದೇವ್ ಟ್ವೆಂಟಿ -20 ಆಡಿದ್ದಕ್ಕೆ ರಜತ ಸಂಭ್ರಮ!

ಸ್ಕೋರ್ ಬೋರ್ಡ್ ತೋರಿಸುತ್ತಿದ್ದದ್ದು 9-4. ಇದೇನು ಟೆನಿಸ್ ಆಟದ ಸೆಟ್ ಗೆಲುವಿನ ಅಂತರವಲ್ಲ. ಕೇವಲ 9 ರನ್ನಿಗೆ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ದಿಂಡುರುಳಿದ್ದರು. ಎದುರಿಗಿದ್ದದ್ದು ಆಗಷ್ಟೇ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದ ಜಿಂಬಾಬ್ವೆ. ಆ ಹಂತದಲ್ಲಿ ಕೈಯಲ್ಲಿ ಬ್ಯಾಟು ಹಿಡಿದು ‘ಹರ್ಯಾಣದ ಬಿರುಗಾಳಿ’ ಕಪಿಲ್ ದೇವ್ ಬಂದದ್ದೊಂದು ಗೊತ್ತು. ಆ ನಂತರ ಮೂರುವರೆ ಗಂಟೆಗಳಲ್ಲಿ ಸೃಷ್ಟಿಯಾಗಿದ್ದೊಂದು ಇತಿಹಾಸ.

ಕ್ರಿಕೆಟ್ ಜಗತ್ತಿನಲ್ಲಿ ಜೂನ್ 18ಕ್ಕೆ ವಿಶೇಷ ಮಹತ್ವವಿದೆ. 1983ರ ವಿಶ್ವ ಕಪ್ ಕ್ರಿಕೆಟ್ ಕೂಟದಲ್ಲಿ ಕಪಿಲ್ ದೇವ್ ಐದನೇ ವಿಕೆಟ್ ಆಡಲೆಂದು ಕಣಕ್ಕಿಳಿದು ಸಿಡಿಸಿದ ಬೌಂಡರಿ, ಸಿಕ್ಸರುಗಳ ಆರ್ಭಟವನ್ನು ನೆನಪಿಸಿಕೊಂಡರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಇಂದಿಗೂ ರೋಮಾಂಚನಗೊಳ್ಳುತ್ತಾರೆ. ಇದೇನು ಮ್ಯಾಜಿಕ್ಕೋ, ಪವಾಡವೋ, ಅದೃಷ್ಟವೋ… ಅಥವಾ ಕೇವಲ ಹೋರಾಟದ ಕೆಚ್ಚೋ… 138 ಎಸೆತಗಳಲ್ಲಿ ಅಜೇಯವಾಗಿಯೇ ಇದ್ದ ಕಪಿಲ್ ಬ್ಯಾಟಿನಿಂದ ಸಿಡಿದದ್ದು 175 ರನ್ನುಗಳು. ಇದರಲ್ಲಿ 16 ಬೌಂಡರಿಗಳು, ಆರು ಭರ್ಜರಿ ಸಿಕ್ಸರ್‌ಗಳಿದ್ದವು. ಆ ಪಂದ್ಯವನ್ನು 31 ರನ್ನುಗಳಿಂದ ಗೆದ್ದುಕೊಂಡ ಭಾರತವು ತನ್ನ ವಿಜಯ ಯಾತ್ರೆಯನ್ನು ಮುಂದುವರಿಸುತ್ತಲೇ, ಮುಂದಿನ ಒಂದು ವಾರದಲ್ಲಿ, ಅಂದರೆ ಜೂನ್ 25ರಂದು ಉರಿ ದಾಳಿಗೆ ಹೆಸರಾಗಿದ್ದ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿ ಹಾಕಿ ವಿಶ್ವ ಕ್ರಿಕೆಟ್ ಕಿರೀಟವನ್ನೇ ಧರಿಸಿಕೊಂಡ ಕ್ರಿಕೆಟ್ ಶಿಶು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಭಾರತವು ಅಂದು ಎರಡು ಬಾರಿಯ ವಿಶ್ವಚಾಂಪಿಯನ್ನರಾದ ವಿಂಡಿಗರನ್ನು ಫೈನಲಿನಲ್ಲಿ ಮಣಿಸಿ ಕ್ರಿಕೆಟ್ ಜಗತ್ತಿನಲ್ಲಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು. ಅದಾಗಿ ಈಗ 25 ವರ್ಷಗಳು ಸಂದಿವೆ. ಅದರ ರಜತ ಮಹೋತ್ಸವಕ್ಕೂ ಸಿದ್ಧತೆ ನಡೆಯುತ್ತಿದೆ.

ಜೂನ್ 18ರಂದು ಇಡೀ ವಿಶ್ವದ ಗಮನ ಸೆಳೆದ ಕಪಿಲ್ ದೇವ್ ಏಕಾಂಗಿ ಹೋರಾಟ ಮಾಡಿದ ಪಂದ್ಯದ ಒಂದು ಝಲಕ್ ಇಲ್ಲಿದೆ:

ಪ್ರುಡೆನ್ಷಿಯಲ್ ಕಪ್ ಕೂಟದ 20ನೇ ಪಂದ್ಯವಾಗಿದ್ದ ಬಿ ಗ್ರೂಪ್‌ನ ಪಂದ್ಯ ನಡೆದದ್ದು ಟನ್‌ಬ್ರಿಡ್ಜ್ ವೆಲ್ಸ್‌ನ ನೆವಿಲ್ ಮೈದಾನದಲ್ಲಿ. 60 ಓವರುಗಳ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತದ ನಾಯಕ ಕಪಿಲ್ ನಿರ್ಧಾರ ತಪ್ಪು ಎಂದು ಸಾಬೀತು ಮಾಡಿದಂತೆ ತೋರಿದವರು ಆರಂಭಿಕರಾದ ಸುನಿಲ್ ಗವಾಸ್ಕರ್ (0) ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ (0). ಇಬ್ಬರೂ ಮಾಡಿದ್ದು ಶೂನ್ಯ ರನ್. ಭಾರತ ಖಾತೆ ತೆರೆಯುವ ಮುನ್ನವೇ ಗವಾಸ್ಕರ್ ನಿರ್ಗಮಿಸಿದರೆ, ಭಾರತದ ಮೊತ್ತ 6 ರನ್ ಆಗಿದ್ದಾಗ ಶ್ರೀಕಾಂತ್ ಮತ್ತು ಮೊಹಿಂದರ್ ಅಮರ್‌ನಾಥ್ (5) ಪೆವಿಲಿಯನ್ ದಾರಿ ಹಿಡಿದಿದ್ದರು. 9 ರನ್ ಆದಾಗ ಸಂದೀಪ್ ಪಾಟೀಲ್ (1) ಅವರೂ ವಿಕೆಟೊಪ್ಪಿಸಿದರು. ಇವರೆಲ್ಲರೂ ರಾಸನ್ (12 ಓವರ್, 47 ರನ್ ನೀಡಿ 3 ವಿಕೆಟ್) ಮತ್ತು ಕುರ್ರನ್ (12 ಓವರು, 65 ರನ್ನಿಗೆ 3 ವಿಕೆಟ್) ದಾಳಿಗೆ ನಲುಗಿದವರು.

ಆಗ ಬಂದರು ‘ಹರ್ಯಾಣದ ಹರಿಕೇನ್’ ಕಪಿಲ್. ಒಂದೆಡೆಯಿಂದ ಯಶಪಾಲ್ ಶರ್ಮಾ ತಂಡದ ಮೊತ್ತ 17 ಆಗಿದ್ದಾಗ (9), ರೋಜರ್ ಬಿನ್ನಿ (22) ತಂಡದ ಮೊತ್ತ 77 ರನ್ ಆಗಿದ್ದಾಗ ಮತ್ತು ರವಿ ಶಾಸ್ತ್ರಿ (1) ತಂಡದ ಮೊತ್ತ 78 ಆಗಿದ್ದಾಗ ತರಗೆಲೆಗಳಂತೆ ಉದುರಿ ಹೋಗುತ್ತಿದ್ದರೆ, ಕಪಿಲ್ ದೇವ್ ತಮ್ಮ ಬೀಸುಗೆಯನ್ನು ನಿಲ್ಲಿಸಲೇ ಇಲ್ಲ. ಸ್ವಲ್ಪ ಹೊತ್ತು ಮದನ್ ಲಾಲ್ (17) ನೆರವಿನಲ್ಲಿ 62 ರನ್ ಕೂಡಿ ಹಾಕಿದ ಈ ಜೋಡಿ ಬೇರ್ಪಟ್ಟಾಗ, ಕಪಿಲ್ ಅವರನ್ನು ಕೂಡಿಕೊಂಡವರು ಭಾರತ ಕಂಡ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲೊಬ್ಬರಾದ ಸಯ್ಯದ್ ಕೀರ್ಮಾನಿ. 9ನೇ ವಿಕೆಟಿಗೆ ಈ ಜೋಡಿ ಸೇರಿಕೊಂಡು ಮಾಡಿದ ಮೋಡಿಯಂತೂ ಇತಿಹಾಸವಾಗಿ ದಾಖಲಾಯಿತು. 72 ಎಸೆತಗಳಲ್ಲೇ ಶತಕ ಪೂರೈಸಿದ ತಕ್ಷಣ ಬ್ಯಾಟು ಬದಲಿಸಿದ ಕಪಿಲ್, ಮತ್ತಷ್ಟು ಉಗ್ರರಾದರು. 9ನೇ ವಿಕೆಟಿಗೆ ಕಪಿಲ್ ಮತ್ತು ಕೀರ್ಮಾನಿ ಅಜೇಯವಾಗಿ ಸೇರಿಸಿದ 126 ರನ್ನುಗಳು ಇಂದಿಗೂ ಕ್ರಿಕೆಟ್ ಇತಿಹಾಸವಾಗಿ ಉಳಿದಿದೆ.

ಕೀರ್ಮಾನಿ ಅವರು ಅಜೇಯವಾಗಿ ಮಾಡಿದ್ದು 24 ರನ್ನುಗಳಾದರೂ, ಕಪಿಲ್‌ಗೆ ಸಮರ್ಥ ಬೆಂಬಲ ನೀಡುತ್ತಾ ಬಂದರು. ಅಂತಿಮವಾಗಿ ಭಾರತ 60 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 266 ರನ್ ಸೇರಿಸಲು ಶಕ್ತವಾಗಿತ್ತು. ಇದರಲ್ಲಿ ಮೂರನೇ ಎರಡು ಭಾಗವೂ ಕಪಿಲ್‌ರದ್ದು.

60 ಓವರುಗಳಲ್ಲಿ 267 ರನ್ನುಗಳ ಬೆಂಬತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತಾದರೂ, ರೋಜರ್ ಬಿನ್ನಿ (11 ಓವರ್, 45 ರನ್ 2 ವಿಕೆಟ್) ಮತ್ತು ಮದನ್ ಲಾಲ್ (11 ಓವರ್ 42 ರನ್ 3 ವಿಕೆಟ್) ತೀಕ್ಷ್ಣ ದಾಳಿ ದಾಳಿ ಮತ್ತು ರನ್ ಗತಿ ನಿಯಂತ್ರಿಸಿದ ಕಪಿಲ್ (11 ಓವರು 32 ರನ್ 1 ವಿಕೆಟ್) ವೇಗಕ್ಕೆ ನಲುಗಿ 57 ಓವರುಗಳಲ್ಲಿ 235 ರನ್ನುಗಳಿಗೆ ಸರ್ವ ಪತನ ಕಂಡಿತು. ಭಾರತಕ್ಕೆ ಸ್ವಲ್ಪ ಭೀತಿ ಹುಟ್ಟಿಸಿದವರು ಅದೇ ಕುರ್ರನ್ (78). ಅದಕ್ಕಿಂತ ಮೊದಲು ಆರಂಭಿಕ ಬ್ರೌನ್ (35) ಸ್ವಲ್ಪ ಕಾಡಿದ್ದರು. ಅದು ಹೊರತಾಗಿ ಪೀಟರ್ಸನ್ (23) ಸ್ವಲ್ಪ ಚಿಗಿತುಕೊಂಡಿದ್ದರಷ್ಟೇ. ಉಳಿದವರ್ಯಾರಿಗೂ ಹೇಳಿಕೊಳ್ಳುವ ರನ್ ಮಾಡಲು ಭಾರತದ ಬೌಲರುಗಳು ಅವಕಾಶ ನೀಡಿರಲಿಲ್ಲ. ಉಳಿದಂತೆ ಸಂಧು ಮತ್ತು ಮೊಹಿಂದರ್ ತಲಾ ಒಂದು ವಿಕೆಟ್ ಕಿತ್ತಿದ್ದರು.

ಈ ಪಂದ್ಯವನ್ನು ಯಾವುದೇ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿರಲಿಲ್ಲವೆಂಬುದೊಂದು ದುರಂತ. ಆದರೂ, ಪ್ರೇಕ್ಷಕರೊಬ್ಬರು ಈ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿದಿದ್ದರು ಮತ್ತು ಕಪಿಲ್ ಅವರು ಅದನ್ನು ಭಾರೀ ಮೊತ್ತದ ಹಣ ನೀಡಿ ಕೊಂಡು ಕೊಂಡಿದ್ದರು. ಪಂದ್ಯ ಪ್ರಸಾರವಾಗದಿರುವುದಕ್ಕೆ ಪ್ರಧಾನ ಕಾರಣವೆಂದರೆ ಬಿಬಿಸಿ ಮುಷ್ಕರ ನಡೆಸುತ್ತಿತ್ತು. ಮಾತ್ರವಲ್ಲದೆ, ಅದೇ ದಿನ ಅದೇ ಸಮಯಕ್ಕೆ ಲಾರ್ಡ್ಸ್‌ನಲ್ಲಿ ವಿಂಡೀಸ್ ಮತ್ತು ಆಸ್ಟ್ರೇಲಿಯಾ ಪಂದ್ಯವೂ ನಡೆಯುತ್ತಿತ್ತು. ಇದು ಪುಟ್ಟ ರಾಷ್ಟ್ರಗಳ ಪಂದ್ಯವೆಂದು ಪರಿಗಣಿತವಾಗಿದ್ದರಿಂದ ಎಲ್ಲ ಕ್ಯಾಮರಾಮನ್‌ಗಳು ಲಾರ್ಡ್ಸ್ ಪಂದ್ಯವನ್ನೇ ನೆಚ್ಚಿಕೊಂಡಿದ್ದರು.

ಒಟ್ಟಿನಲ್ಲಿ ‘ಧೂಳಿನಿಂದೆದ್ದು ಬರುವುದು’ ಎಂಬ ಮಾತಿಗೆ ಸೂಕ್ತ ಉದಾಹರಣೆಯಾಗಬಲ್ಲ ಪಂದ್ಯವೊಂದು ಏರ್ಪಟ್ಟಿದ್ದು, ಈ ಸಂಭ್ರಮಕ್ಕೆ ಇಂದು ರಜತ ಸಡಗರ. ಆ ನಂತರ ಒಂದು ವಾರದಲ್ಲಿ ಲಾರ್ಡ್ಸ್ ಮೈದಾನದಲ್ಲಿ ದೈತ್ಯರನ್ನು ಬಗ್ಗು ಬಡಿದು ಭಾರತವು ಕಿರೀಟ ಮುಡಿಗೇರಿಸಿಕೊಂಡದ್ದು ಸುವರ್ಣಾಕ್ಷರದಲ್ಲಿ ದಾಖಲಾಗಿರುವ ಅಂಶ.

Advertisements

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s