ಕನ್ನಡ ಮನಸುಗಳ ತುಡಿತ ಮುದಗೊಳಿಸಿದ ನುಡಿಸಿರಿಗೆ ಪರದೆ

ಮುದುಡಿದಂತಿದ್ದ ಮನಸ್ಸುಗಳು ಮುದಗೊಂಡವು ಇಲ್ಲಿ. ಪ್ರೇರಣೆಯ ಕೊರತೆ ಕಾಡುತ್ತಿದ್ದ ಕನ್ನಡ ಮನಸ್ಸುಗಳಂತೂ ಸಾಕು ಬೇಕಾಗುವಷ್ಟರ ಮಟ್ಟಿಗೆ ನಲಿದಾಡಿದವು. ಅರೆ, ಇಷ್ಟು ಬೇಗ ಈ ಸಂತೋಷದ ಕ್ಷಣಗಳು ಮರೆಯಾದವೇ ಎಂಬ ಅಚ್ಚರಿ ಎಲ್ಲರ ಮುಖದಲ್ಲಿ.

ಹತ್ತು ಹಲವು ರೀತಿಯಲ್ಲಿ ಮನಸ್ಸುಗಳನ್ನು ಅರಳಿಸಿದ, ಕನ್ನಡಮ್ಮನ ವೈಭವವನ್ನು ಪ್ರಚುರಪಡಿಸಿದ ಆಳ್ವಾಸ್ ನುಡಿಸಿರಿ-2007ಗೆ ಸಡಗರದ ಸಮಾಪನ. ಆದರೆ ಈ ಸಾಹಿತ್ಯ-ಸಂಸ್ಕೃತಿಯ ಜಾತ್ರೆಯು ಬೊಗಸೆ ತುಂಬಾ ಕಟ್ಟಿಕೊಟ್ಟ ನೆನಪುಗಳ ಸಿಹಿ ಮಧುರ, ಅಮರ.

ದಕ್ಷಿಣದಲ್ಲಿ ಗಡಿನಾಡಾದ ಕಾಸರಗೋಡಿನಿಂದ ಉತ್ತರದ ಬೆಳಗಾವಿವರೆಗೆ ಕನ್ನಡಾಸಕ್ತರು ಇಲ್ಲಿ ಬಂದಿದ್ದಾರೆ, ಬೆರೆತಿದ್ದಾರೆ. ನೋವು ಮರೆತಿದ್ದಾರೆ, ಹೊಸ ಕನಸುಗಳೊಂದಿಗೆ ಮರಳಿದ್ದಾರೆ. ನೋವ ಮರೆತು, ನಲಿವ ಬೆರೆತ ಭಾರವಾದ ಮನಸ್ಸಿನೊಂದಿಗೇ ತೆರಳಿದ್ದಾರೆ. ಎತ್ತ ನೋಡಿದರತ್ತ ಕನ್ನಡದ ಮನಸ್ಸುಗಳು ಪ್ರಫುಲ್ಲಿತವಾಗಿದ್ದುದನ್ನು ಇಲ್ಲಿ ಕಂಡಿದ್ದೇವೆ. ಸಾಹಿತ್ಯ ಸಮ್ಮೇಳನವೆಂದರೆ ಈ ರೀತಿ ಇರಬೇಕು, ಮೋಹನ ಆಳ್ವರನ್ನು ಸಂಘಟನಾ ಚಾತುರ್ಯವನ್ನು ನೋಡಿ ಕಲಿಯಬೇಕು ಎಂಬುದು ಅಲ್ಲಿ ಆಗಾಗ್ಗೆ ಭಾಷಣಗಳ ಮಧ್ಯೆ ಹಿರಿಯರಿಂದ ಕೇಳಿಬರುತ್ತಿದ್ದ ಮಾತು.

ವಿದ್ಯುದ್ದೀಪಗಳಿಂದ ಸಾಲಂಕೃತವಾಗಿದ್ದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಈ ಮೂರು ದಿನಗಳ ಕಾಲ ಹೊಸದೊಂದು ಲೋಕವೇ ಸೃಷ್ಟಿಯಾಗಿತ್ತು. ಮೊಳಗುವ ಕನ್ನಡದ ಡಿಂಡಿಮದ ಮಧ್ಯೆ ಕನ್ನಡ ದೇವಿ ಸಾಹಿತ್ಯಾರ್ಚನೆಯಿಂದ ಸಂತುಷ್ಟಳಾಗಿದ್ದಾಳೆ. ಇಂಥದ್ದೊಂದು ವಿಜೃಂಭಣೆಯ ಸಿಂಗಾರ ಮಾಡಿದ ಡಾ.ಮೋಹನ ಆಳ್ವರಿಗೆ ಸಂತೃಪ್ತ ಕನ್ನಡಾಂಬೆ ಮತ್ತಷ್ಟು ಕನ್ನಡ ಸೇವೆಯ ವರ ದಯಪಾಲಿಸಿದ್ದಾಳೆ ಎಂಬುದನ್ನು ಅಲ್ಲಗಳೆಯುವುದು ಸಾಧ್ಯವೇ?

ಮೂರೂ ದಿನಗಳ ಕಾಲ ಕನ್ನಡ ಅಳಿವು-ಉಳಿವಿನ ಚರ್ಚೆ ನಡೆದಿದೆ, ಕನ್ನಡ ಮಣ್ಣಿನ ಜಾನಪದವೇ ಮುಂತಾದ ಕಲಾ ವೈಭವದ ನಾದ ಮೊಳಗಿದೆ. ಪಡುಗಡಲ ತೀರದ ಚಳಿಯನ್ನು ಹೋಗಲಾಡಿಸಿದ ಈ ಕಾರ್ಯಕ್ರಮ ಮನಸ್ಸುಗಳನ್ನು ಬೆಚ್ಚಗಾಗಿಸಿದೆ.

“ಕನ್ನಡ ಮನಸ್ಸು: ಸಾಹಿತಿಯ ಜವಾಬ್ದಾರಿ” ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಸಮ್ಮೇಳನ ಅಗಲಿದ ಪೂರ್ಣ ಚಂದ್ರ ತೇಜಸ್ವಿ, ಪಿ.ಲಂಕೇಶ್, ಎಸ್ವಿಪಿ ಅವರನ್ನು ಮನಸಾ ಸ್ಮರಿಸಿತು. ಕವಿಸಮಯದಲ್ಲಿ ಆಗಾಗ್ಗೆ ನಾಡಿನ ಹೆಸರಾಂತ ಯುವ ಕವಿಗಳು ತಲಾ ಇಪ್ಪತ್ತು ನಿಮಿಷ ಕಾಲ ರಂಜಿಸಿದರು. ಸಾಹಿತಿಯ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಜವಾಬ್ದಾರಿಗಳ ಕುರಿತು ನಡೆದ ವಿಚಾರಗೋಷ್ಠಿ ಕಣ್ತೆರೆಸುವಂತಿತ್ತು. ಕರ್ನಾಟಕ ಅಭಿವೃದ್ಧಿ ಚಿಂತನೆ ಕುರಿತ ವಿಚಾರ ಮಂಥನ ನಡೆಯಿತು.

ಮಾತಿನ ಮಂಟಪದಲ್ಲಂತೂ ಹನಿಗವಿ ಡುಂಡಿರಾಜ್, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಪ್ರೊ.ಕೃಷ್ಣೇಗೌಡ ನಕ್ಕು ನಗಿಸಿ ನಲಿಸಿದರು. ನಡು ನಡುವೆ ಭಾವ ರಸ ಭರಿತ ಗಾಯನ ಕಿವಿಗೂ ಇಂಪು ನೀಡಿತು.

ಯಾವುದೇ ಕಾರ್ಯಕ್ರಮದಲ್ಲಿ, ಯಾವುದೇ ಭಾಷಣಕಾರರರ ಬಾಯಿಯಲ್ಲಿ, ಸಮ್ಮೇಳನದ ಅಚ್ಚುಕಟ್ಟುತನ, ಶಿಸ್ತು, ಸಮಯಪಾಲನೆಯ ಬಗೆಗೆ ಮೋಹನ ಆಳ್ವರಿಗಿದ್ದ ಕಾಳಜಿಯ ಕುರಿತ ಮೆಚ್ಚುಗೆಯ ನುಡಿಸಿರಿಯು ಬಾರದೇ ಹೋಗಲಿಲ್ಲ.

ರಾಜ್ಯದ ವಿಶಿಷ್ಟ ಜಾನಪದ ಕಲೆಗಳಾದ ಪೂಜಾಕುಣಿತ, ಕಂಸಾಳೆ, ಕಂಗೀಲು, ವೀರಗಾಸೆ, ಡೊಳ್ಳುಕುಣಿತ, ಸುಗ್ಗಿ ಕುಣಿತ, ಹಾಲಕ್ಕಿ ಕುಣಿತ, ಸೋಮನ ಕುಣಿತ, ಜೋಗಿತಿಯರ ಹಾಡು… ವಿಶಿಷ್ಟವಾಗಿ ಗಮನ ಸೆಳೆದ ಯಕ್ಷರಂಗ ಪ್ರಯೋಗ “ಕುರುಕ್ಷೇತ್ರಕ್ಕೊಂದು ಆಯೋಗ”, ಶಾಸ್ತ್ರೀಯ ನೃತ್ಯ ವೈಭವ, ಚಾಲುಕ್ಯ ವೈಭವ, ತೆಂಕು-ಬಡಗಿನ ಯಕ್ಷ ಸಂಗಮ “ಇಂದ್ರನಂದನ ವಾನರೇಂದ್ರ” ಮುಂತಾದ ಯಕ್ಷಗಾನ ಪ್ರದರ್ಶನಗಳು, ಮಹಾಮಾಯಿ ನಾಟಕ.. ಇವೆಲ್ಲವೂ “ನುಡಿ ಸಿರಿ”ಯ ಸಿರಿ ವೈಭವಕ್ಕೆ ಸಾಕ್ಷಿಯಾದವು. ಕನ್ನಡ ನಾಡಿನ ಕಲಾ ಸಮೃದ್ಧಿಗೆ ಸಾಕ್ಷಿಯಾದವು.

ಇವಕ್ಕೆಲ್ಲಾ ಕಳಶವಿಟ್ಟಂತೆ ಆಕರ್ಷಕ ವೇದಿಕೆ, ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ಗೂಡು ದೀಪಗಳು, ಪುಸ್ತಕ ಪ್ರದರ್ಶನ, ಅಪರೂಪದ ವಸ್ತು ಸಂಗ್ರಹ… ಇವೆಲ್ಲವುಗಳ ಸವಿನೆನಪುಗಳು ಮತ್ತೆ ನುಡಿಸಿರಿ ಎಂದು ಬರುವುದೋ ಎಂಬ ಕಾತುರತೆಯೊಂದಿಗೆ ನೆನಪಿನಂಗಳಕ್ಕೆ ಸೇರಿ ಹೋಗುತ್ತವೆ.

Advertisements

One thought on “ಕನ್ನಡ ಮನಸುಗಳ ತುಡಿತ ಮುದಗೊಳಿಸಿದ ನುಡಿಸಿರಿಗೆ ಪರದೆ

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s