Humble farmer ಅಲ್ಲ, Fumble Harmer!

ಇಪ್ಪತ್ತು ತಿಂಗಳ ಹಿಂದೆ ಆಗಿದ್ದ ಜೆಡಿಎಸ್-ಬಿಜೆಪಿ ಒಲ್ಲದ ಮದುವೆಯ ಬಂಧನ ಸರಿಪಡಿಸಲಾಗದಷ್ಟು ದೂರ ಸರಿದಿದ್ದು, ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೊಡಲು ಜೆಡಿಎಸ್ ಸ್ಪಷ್ಟವಾಗಿ ನಿರಾಕರಿಸಿದ ಕಾರಣದಿಂದಾಗಿ ಮತ್ತು ಬಿಜೆಪಿಯೂ ಸರಕಾರದಿಂದ ಹೊರಬರಲು ತೀರ್ಮಾನಿಸಿರುವುದರೊಂದಿಗೆ ರಾಜ್ಯದ ರಾಜಕೀಯ ಚುನಾವಣೆಯತ್ತ ಮುಖ ಮಾಡಿದೆ.

ಅಧಿಕಾರದ ಸವಿಯುಂಡ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಅಪ್ಪನ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ್ದಾರೆ ಮತ್ತು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಜಯದ ಉನ್ಮಾದದಲ್ಲಿದ್ದಾರೆ. ಚುನಾವಣೆ ತಕ್ಷಣವೇ ನಡೆದರೆ, ಸ್ಥಳೀಯ ಸಂಸ್ಥೆ ಚುನಾವಣೆಯ ಗೆಲುವಿನ ಅಲೆಯಲ್ಲಿ ತೇಲಾಡಬಹುದು ಎಂಬ ಹುನ್ನಾರವಿದು. ಹೇಗೂ ಕುಮಾರಸ್ವಾಮಿ ಪತ್ನಿಯ ಹೆಸರಿನಲ್ಲಿ ಹೊಸ ಕನ್ನಡ ಚಾನೆಲ್ ‘ಸುವರ್ಣ’ ಕೂಡ ಬೆಂಗಾವಲಿಗಿದೆ.

ಇದಕ್ಕಾಗಿಯೇ ಮೈತ್ರಿ ಮುರಿಯಲು ತೀರ್ಮಾನಿಸಿರುವ ಅವರು, ತಮ್ಮಪ್ಪನ ಗಬ್ಬು ರಾಜಕೀಯದ ಚಾಣಾಕ್ಷತೆಗಳನ್ನು ಮೈಗೂಡಿಸಿಕೊಳ್ಳತೊಡಗಿದ್ದಾರೆ.

ಈ ಚಾಣಾಕ್ಷತೆಯ ಮುಖ್ಯಾಂಶಗಳು ಇಂತಿವೆ: * ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡರೆ ಶೀಘ್ರವೇ ನಡೆಯುವ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಓಟು ಬುಟ್ಟಿಗೆ ಹಾಕಿಕೊಳ್ಳಬಹುದು.

* ಬಿಜೆಪಿ ತಮಗೆ ಅವಮಾನಿಸುತ್ತಿದೆ, ಬಿಜೆಪಿ ನಾಯಕರು ಏನೇನೋ ಹೇಳುತ್ತಿದ್ದಾರೆ ಎಂದು ಗೂಬೆ ಕೂರಿಸುತ್ತಾ, ಬಿಜೆಪಿಯೇ ಸರಕಾರ ಪತನಕ್ಕೆ ಕಾರಣ ಎಂದು ಬಿಂಬಿಸುವ ಹೇಳಿಕೆಗಳನ್ನು ನೀಡುತ್ತಾ ಇರುವುದು. ಈ ಮೂಲಕ ಸರಕಾರ ಉರುಳಿದ್ದರಲ್ಲಿ ಜೆಡಿಎಸ್‌ನ ತಪ್ಪು ಏನೂ ಇಲ್ಲ ಎಂಬ ಅಭಿಪ್ರಾಯ ಮೂಡಿಸುವುದು.

ಅಲ್ಲ, ನೀವೇ ಹೇಳಿ. 20 ತಿಂಗಳ ಹಿಂದೆ ಅಧಿಕಾರ ಹಸ್ತಾಂತರದ ಒಪ್ಪಂದವಾದದ್ದು ನಿಜವಷ್ಟೆ? ಅಧಿಕಾರ ಹಸ್ತಾಂತರಿಸಲು ಪಿಳ್ಳೆ ನೆವ ನೀಡುತ್ತಿರುವುದೇಕೆ? 20 ತಿಂಗಳ ಅಧಿಕಾರದ ಸವಿಯುಂಡು, ತಮ್ಮ ಅವಧಿ ಮುಗಿಯಿತು ಎಂದಾದಾಗ “ಬಿಜೆಪಿ ಜತೆ ಕೈಜೋಡಿಸಿ ಪಾಪ ಮಾಡಿದೆವು” ಅಂತ ಜೆಡಿಎಸ್‌ನ ವಕ್ತಾರ ಹೇಳುತ್ತಿದ್ದಾರೆ. ಹಾಗಿದ್ದರೆ, ಇದು ಖಂಡಿತವಾಗಿಯೂ ಪೂರ್ವಯೋಜಿತ. ಕುಮಾರಸ್ವಾಮಿ ಅಧಿಕಾರ ಕಬಳಿಸಿದ್ದಾಗ, ಅಪ್ಪನಿಗೆ ತಿಳಿದಿರಲಿಲ್ಲ ಎಂಬುದೆಲ್ಲಾ ಖಂಡಿತವಾಗಿಯೂ ನಾಟಕ ಎಂಬುದು ಈಗ ವೇದ್ಯವಾಗುತ್ತದೆ.

ಈ ವಿಧಾನಸಭೆಯಲ್ಲಿ, ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಅತಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿ ಪ್ರತಿಪಕ್ಷದಲ್ಲಿತ್ತು. ಕಾಂಗ್ರೆಸ್ ಜೊತೆಗೆ ಇದ್ದರೆ, ತಮಗೆ ಆಡಳಿತ ದೊರೆಯುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ಜೆಡಿಎಸ್, ಅತ್ಯುತ್ತಮ (ಕು)ತಂತ್ರ ಹೆಣೆಯಿತು. ಹೇಗಿದ್ದರೂ ಮಾಜಿ ಪ್ರಧಾನಿಯ ಮಂಡೆ ಅಲ್ಲವೇ..? ಕನಿಷ್ಠ ಪಕ್ಷ 20 ತಿಂಗಳಾದರೂ ಆಡಳಿತ ನಡೆಸಿ, ತಮ್ಮ ಓಟಿನ ಮೂಲ ಭದ್ರಪಡಿಸಿಕೊಳ್ಳೋಣ ಎಂಬ ದೂ(ದು)ರಾಲೋಚನೆ. ಸಿಕ್ಕಿದ್ದು ಪುಣ್ಯ ಎಂದು ಬದ್ಧವೈರಿಯಾದ “ಕೋಮುವಾದಿ” ಬಿಜೆಪಿಯನ್ನು ಅಪ್ಪಿಕೊಂಡು, ಅದಕ್ಕೂ ಅಧಿಕಾರದ ಆಮಿಷ ತೋರಿಸಿ ಸರಕಾರ ಉರುಳಿಸಿ ಸರಕಾರ ಕಟ್ಟಿತು ಜೆಡಿಎಸ್. ಮಗ ಕಾಂಗ್ರೆಸಿಗೆ ಕೈಕೊಟ್ಟಿದ್ದು ನನಗೆ ಗೊತ್ತೇ ಇಲ್ಲ, ಇದು ಜೀವನದ ಅತ್ಯಂತ ಕೆಟ್ಟ ದಿನ ಅಂತೆಲ್ಲಾ ಗೌಡರು ಅಲವತ್ತುಕೊಂಡರು, ಮೌನವ್ರತ ಮಾಡಿದರು. ಅಬ್ಬಾ… ಎಂಥಾ ಅದ್ಭುತ ನಟನೆಯದು!

ಈ ಬಿಜೆಪಿಗಾದರೂ ಬುದ್ಧಿ ಬೇಡವೆ? ಹಿಂದಿನ ಕಾಂಗ್ರೆಸ್ ಸರಕಾರವನ್ನು ಗೌಡರು ಹೇಗೆ ಕಾಡಿದರು ಎಂಬುದರ ಯೋಚನೆಯೂ ಬೇಡವೆ? ಅತ್ಯಧಿಕ ಸಂಖ್ಯೆಯ ಶಾಸಕರನ್ನು ಹೊಂದಿದ್ದರೂ, ರಾಷ್ಟ್ರೀಯ ಪಕ್ಷವಾಗಿದ್ದರೂ, ಪ್ರಾದೇಶಿಕ ಪಕ್ಷವೊಂದು ಬಿಜೆಪಿಗೆ ಮುಖ್ಯಮಂತ್ರಿಯಾಗುವ ಮೊದಲ ಅವಕಾಶ ನಿರಾಕರಿಸಿದಾಗಲೇ, ಅಪ್ಪ-ಮಕ್ಕಳ ಮಂಡೆಯೊಳಗೆ ಏನಿತ್ತು ಎಂಬ ಅರಿವು ಬಿಜೆಪಿಗೆ ಆಗಲೇ ಇಲ್ಲ.

ಹೊಣೆಗೇಡಿತನದ, ಅಧಿಕಾರ ಲಾಲಸೆಯ, ಕುತಂತ್ರಗಳೇ ತುಂಬಿದ, ವಚನಭ್ರಷ್ಟತೆಯ ಇಂಥ ರಾಜಕೀಯಕ್ಕೆ ಧಿಕ್ಕಾರವಿರಲಿ.

ಧಿಕ್ಕಾರ ಯಾಕಂದ್ರೆ… ಇಂಥ ಖೂಳ ರಾಜಕೀಯ ಮಾಡುವ ಮೂಲಕ ಕರ್ನಾಟಕದ ಹೆಸರು ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿ, ಇಡೀ ವಿಶ್ವದಲ್ಲೇ ಕುಲಗೆಟ್ಟು ಹೋದಂತಾಗಿದೆ. ಕುಟುಂಬ ರಾಜಕಾರಣದಿಂದಾಗಿ ಇಡೀ ರಾಜ್ಯದ ಹೆಸರಿಗೆ ಕಳಂಕವಾಗಿದೆ. ಇನ್ನು ಮುಂದೆ ಕನ್ನಡಿಗರನ್ನು ಜನಾ ನಂಬೋದು ಹೇಗೆ? ದೇವೇಗೌಡರು “ಮಾಜಿ ಪ್ರಧಾನಿ” ಹಣೆಪಟ್ಟಿಗೂ ಕಳಂಕ ತಂದಿದ್ದಾರೆ. ಈ ವಯಸ್ಸಿನಲ್ಲಿ ಇಂಥ ಗಬ್ಬು ರಾಜಕಾರಣ ಮಾಡೋ ಬದಲು ರಾಜಕೀಯ ನಿವೃತ್ತಿ ತೆಗೆದುಕೊಂಡರೆ ರಾಜ್ಯವು ಅದೆಷ್ಟು ಉದ್ಧಾರವಾದೀತು. ಅಲ್ಲಾ, ನನಗೆ ಅರ್ಥವಾಗದ ಸಂಗತಿಯೆಂದರೆ, ದೇಶದ ಮಾಜಿ ಪ್ರಧಾನಿಯೊಬ್ಬರು ಈ ಮಟ್ಟಕ್ಕೂ ಇಳಿಯುವುದು ಸಾಧ್ಯವೇ???

ರಾಜ್ಯದ ಜನತೆ ಮೂರ್ಖರು ಅಂತ ಇವರೆಲ್ಲಾ ತಿಳಿದುಕೊಂಡಿದ್ದಾರೆ. ಅಧಿಕಾರಕ್ಕಾಗಿ ತಾವು ಏನನ್ನೂ ಮರೆಯಲು ಸಿದ್ಧ, ಅದೇ ರೀತಿ ಪ್ರಜೆಗಳೂ ಮರೀತಾರೆ ಅಂತ ತಿಳ್ಕೊಂಡಿದ್ದಾರೆ. ಅಂಥವರಿಗೆ ಸರಿಯಾದ ಪಾಠ ಕಲಿಸುವುದು ಜನರ ಕೈಯಲ್ಲೇ ಇದೆ.

ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಎಸ್.ಎಂ.ಕೃಷ್ಣ ಆಡಳಿತಾವಧಿಯನ್ನೊಮ್ಮೆ ನೆನಪಿಸಿಕೊಳ್ಳೋಣ… ಅಯ್ಯೋ… ಯಾರ ಕೈಗೆ ನಾವೀ ಕರ್ನಾಟಕವೆಂಬ ಮಾಣಿಕ್ಯವನ್ನು ಕೊಟ್ಟಿದ್ದೇವೆ!

Advertisements

2 thoughts on “Humble farmer ಅಲ್ಲ, Fumble Harmer!

  1. ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಇಲ್ಲ. ನಮಗೆ ಮುಖ್ಯಮಂತ್ರಿ ಇಲ್ಲ… ಎಲ್ಲ ಮಾಯಾ ಇಲ್ಲಿ ಎಲ್ಲ ಮಾಯಾ

    Like

  2. ವೀಣಾ ಅವರೆ, ಬ್ಲಾಗಿಗೆ ಸ್ವಾಗತ.

    ರಾಜಕೀಯದಲ್ಲಿ ಏನು ಬೇಕಾದ್ರೂ ನಡೀಬಹುದು ಅನ್ನೋದಕ್ಕೆ ಕರ್ನಾಟಕವೇ ಸಾಕ್ಷಿಯಾಗುತ್ತಿದೆ. ಮಾಜಿ ಪ್ರಧಾನಿಯೊಬ್ಬರು ಈ ರೀತಿ ವರ್ತಿಸುತ್ತಿರುವುದು… ಛೆ!!

    Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s