ಆಗ ಪ್ರೆಸ್…. ಈಗಂತೂ X- ಪ್ರೆಸ್…!

ನಾನು ಅವಿನಾಶ್ ಬಿ. ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೇ?
ಮೂಲತಃ ಮಂಗಳೂರಿನ, ಈಗ ಚೆನ್ನೈಯಲ್ಲಿ ಉದ್ಯೋಗದಲ್ಲಿರುವ ನಾನು, ಪತ್ರಕರ್ತನಾಗಿ ಮುಂಬಯಿ, ಮಂಗಳೂರು, ಬೆಂಗಳೂರುಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ದುಡಿದು, ಬದಲಾವಣೆಯೇ ಜಗದ ನಿಯಮ ಎಂಬ ಧ್ಯೇಯ ವಾಕ್ಯಕ್ಕೆ ಕಟ್ಟುಬಿದ್ದವ. ಪರಿಣಾಮವೋ ಎಂಬಂತೆ ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿರಿಸಿದವನಾದರೂ, ಬಿಟ್ಟರೂ ಬಿಟ್ಟಿರಲಾಗದ ಮೀಡಿಯಾ ಎಂಬೋ ಧನಾತ್ಮಕ ವ್ಯಸನ ಮತ್ತೆ ಇಂಟರ್ನೆಟ್ ಮೂಲಕ ನನಗಂಟಿಕೊಂಡಿದ್ದು ನನಗರಿವಿಲ್ಲದಂತೆಯೇ. ಈ ಕ್ಷೇತ್ರವಂತೂ ನನಗೆ ಕಲಿಸಿದ ಪಾಠ ಅನೇಕ. ಅದಕ್ಕಾಗಿ ನನ್ನೊಳಗಿನ ಮಿಡಿತವನ್ನು ನೆಟ್ ಮೂಲಕ ಅಕ್ಷರ ರೂಪಕ್ಕಿಳಿಸುವ ಸಾಹಸದ ಫಲ ಈ ಬ್ಲಾಗು….
ಸಾಫ್ಟ್‌ವೇರ್ ಕ್ಷೇತ್ರಕ್ಕೇಂತ ಹೋದವನಾದರೂ, ಮಾಧ್ಯಮದ ಆಕರ್ಷಣೆ ಬಿಟ್ಟಿರಲಿಲ್ಲ. ಈಗ ಅಂತರ್ಜಾಲ ಮಾಧ್ಯಮ ವೆಬ್ ದುನಿಯಾ ಎಂಬ ಕನ್ನಡ ತಾಣದ ಹೊಣೆಯೊಂದಿಗೆ ನನ್ನನ್ನು ಕೈಬೀಸಿ ಎರಡೂ ತೋಳಿನಿಂದ ಅಪ್ಪಿಕೊಂಡಿದೆ… ಹಾಗಾಗಿ ಒಂದು ಮಟ್ಟದ ಜೀವನ ಚಕ್ರ ಪೂರ್ಣವಾಗಿದೆ ಅಂದುಕೊಳ್ಳುತ್ತೇನೆ.
ಹಿನ್ನೆಲೆ: ಕರ್ನಾಟಕ ಕರಾವಳಿಯ ರಮ್ಯಾದ್ಭುತ ಕಲೆ ಎಂದೆನಿಸಿಕೊಂಡು ದೇಶ ವಿದೇಶಗಳಲ್ಲಿ ಮನೆಮಾತಾಗಲು ಹೊರಟಿರುವ ಯಕ್ಷಗಾನವೆಂಬ ಶ್ರೀಮಂತ ಕಲಾ ಪ್ರಕಾರ ನನ್ನ ರಕ್ತದಲ್ಲೇ ಇದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬೇಕಾಗಿದೆ. ಇದಕ್ಕೆ ಕಾರಣ, ನನ್ನ ಹೆತ್ತವರು. ಯಕ್ಷಗಾನ ರಂಗದಲ್ಲಿ ಬೈಪಾಡಿತ್ತಾಯ ಎಂಬ ಉಪನಾಮ ಕೇಳದವರೇ ಇಲ್ಲ. ಅಷ್ಟರ ಮಟ್ಟಿಗೆ ತಂದೆ, ಹಿರಿಯ ಯಕ್ಷಗಾನ ಕಲಾವಿದರೂ, ಉತ್ತಮ ಗುರುಗಳೂ ಆದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ತಾಯಿ, ಏಕೈಕ ವೃತ್ತಿಪರ ಮಹಿಳಾ ಭಾಗವತರೆಂಬ ಹೆಗ್ಗಳಿಕೆಗೆ ಪಾತ್ರವಾದ ಲೀಲಾ ಬೈಪಾಡಿತ್ತಾಯ ಅವರ ದಣಿವರಿಯದ ಸಾಧನೆ.
ಹವ್ಯಾಸ: ಇಂಥ ಹೆಮ್ಮೆಯ ಹೆತ್ತವರ ಮತ್ತು ಅವರು ಸವೆಸಿದ ಕ್ಷೇತ್ರದಲ್ಲಿಯೇ ಆಡುತ್ತಾಡುತ್ತಾ ಬೆಳೆದ ನನಗೆ ಯಕ್ಷಗಾನದ ಗಂಧ-ಗಾಳಿ ಹತ್ತದಿರಲು ಸಾಧ್ಯವೇ? ಯಕ್ಷಗಾನದಲ್ಲಿ ಹಿಮ್ಮೇಳದ ಸಾಧನಗಳಾದ ಚೆಂಡೆ-ಮದ್ದಳೆಗಳಲ್ಲಿ ಬೆರಳಾಡಿಸಬಲ್ಲಷ್ಟು ಪರಿಣತಿ ಪಡೆದಿರುವ ನಾನು, ತಾಯಿಯ ಗಾಯನ ಪರಂಪರೆಯನ್ನು ಉಳಿಸುವಲ್ಲಿ ಅದನ್ನು ಕಲಿಯಲಿಲ್ಲವಲ್ಲ ಎಂಬ ಕೊರಗು ಮನದ ಮೂಸೆಯಲ್ಲಿ ಇದ್ದೇ ಇದೆ. ಬದಲಾವಣೆಯೇ ಜಗದ ನಿಯಮ ಎಂಬುದು ಇಲ್ಲಿಯೂ ಅನ್ವಯಿಸಿತೇ ಎಂಬ ಪ್ರಶ್ನೆಯೊಂದಿಗೆ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತಿದ್ದೇನೆ.
ಮುಂದೆ ನನ್ನ ಸುಮ್ಮನಿರಲಾರದ ಕೈಗಳು, ಬಾಲ್ಯದಿಂದಲೂ ಸೆಳೆತಕ್ಕೀಡಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅದ್ಭುತ ಧ್ವನಿ ಹೊಮ್ಮಿಸುವ ಮತ್ತು ಯಕ್ಷಗಾನದ ಮದ್ದಳೆಯನ್ನೇ ಸ್ವಲ್ಪಮಟ್ಟಿಗೆ ಹೋಲುವ ಮೃದಂಗ ಎಂಬ ತಾಳವಾದ್ಯದತ್ತ ತನ್ನ ಆಕರ್ಷಣೆಯನ್ನು ತಡೆಯದಾಯಿತು. ಪರಿಣಾಮ, ಕರ್ನಾಟಕದ ಶ್ರೇಷ್ಠ ಮೃದಂಗ ವಾದಕರಲ್ಲೊಬ್ಬರಾದ, ಮಂಗಳೂರು ಆಕಾಶವಾಣಿ ಕಲಾವಿದ ಎಂ.ಆರ್.ಸಾಯಿನಾಥ್ ಅವರ ಶಿಷ್ಯತ್ವ. ಇಲ್ಲೂ ಕಾಡಿದ್ದು ಬದಲಾವಣೆಯ ನಿಯಮವೋ, ವಿಧಿ ಬರಹವೋ… ಅಂತೂ ಅದರಲ್ಲಿ ಪರಿಪೂರ್ಣತೆ ಸಾಧಿಸಲಾಗಲಿಲ್ಲ. ಸಣ್ಣಪುಟ್ಟ ಸಂಗೀತ ಕಛೇರಿಗಳಿಗೆ ವಿದ್ವತ್ ಪ್ರದರ್ಶಿಸುವ ಗೋಜಿಗೆ ಹೋಗದೆ ಮೃದಂಗ ವಾದಿಸುವಷ್ಟಕ್ಕೇ ನನ್ನನ್ನು ಸೀಮಿತಗೊಳಿಸಿದ ನನ್ನದೇ ಔದಾಸೀನ್ಯವೋ ಅಥವಾ ಪತ್ರಕರ್ತನ ಕೆಲಸದ ಒತ್ತಡವೋ, ಅಂತೂ ಅದರ ಕಲಿಕೆಗೆ ಬೇರೆಯ ಕೆಲವು ಕಾರಣಗಳೂ ಸೇರಿಕೊಂಡು, ತಡೆಯುಂಟಾಯಿತು. ಇದರ ನಡುವೆಯೂ ಮಂಗಳೂರಿನ ಕಲಾನಿಕೇತನದಲ್ಲಿ ಹಿರಿಯರಾದ ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಕೊಳಲು ವಾದನ ಅಭ್ಯಾಸ ಆರಂಭಿಸಿದ್ದೆನಷ್ಟೇ. ಅಷ್ಟರಲ್ಲಿ…..
ಅನಿರೀಕ್ಷಿತವಾಗಿ ಕರ್ನಾಟಕ ಸಂಗೀತವು ಇನ್ನಿಲ್ಲದಂತೆ ಬೆಳಗುತ್ತಿರುವ ಪ್ರದೇಶವಾದ ಚೆನ್ನೈಯಿಂದ ಉದ್ಯೋಗವೊಂದು ಕೈಬೀಸಿ ಕರೆದಾಗ, ಕಲಾ ಮಾತೆಯೇ ಕರೆದಂತಾಗಿ, ಕುಲದೇವಿಯೇ ಕರುಣಿಸಿದಂತಾಗಿ ಪುಳಕಗೊಂಡು ಆದದ್ದಾಗಲಿ ಎಂದು ಚೆನ್ನೈಯ ರೈಲೇರಿದಾಗ ಒಂದು ರೀತಿಯ ಧನ್ಯತಾ ಭಾವ. ಅಲ್ಲೀಗ ಮೃದಂಗ ವಿದ್ವಾಂಸ ಗಣೇಶ್ ಕೆ. ಆರ್. ಅವರಲ್ಲಿ ಮೃದಂಗಾಭ್ಯಾಸ ಮುಂದುವರಿಕೆ. ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ಹೆಸರು ಗಳಿಸುವ ಮಹದಾಸೆ.
ಪತ್ರಿಕಾ ರಂಗ: ವಿದ್ಯೆಗಾಗಿ ಹೋಟೆಲ್ ನಲ್ಲಿ, ಲಾಡ್ಜ್ ನಲ್ಲಿ ಕೆಲಸ ಮಾಡಿಕೊಂಡೇ ಹುಟ್ಟೂರಿಗೆ ದೂರದ ತಿಪಟೂರು ಎಂಬಲ್ಲಿ ವಿಜ್ಞಾನ ಪದವಿ ಮುಗಿಸಿದ ತಕ್ಷಣ, ಬದಲಾವಣೆ ಬಯಸಿ ಮುಂಬಯಿಗೆ ಹಾರಿದ ನನಗೆ, ಪತ್ರಿಕಾ ರಂಗ ಪ್ರವೇಶಕ್ಕೆ ಮೊದಲ ಮೆಟ್ಟಿಲಾದ ಮುಂಬಯಿಯ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಆ ಬಳಿಕ ಅನಾರೋಗ್ಯದಿಂದಾಗಿ ಮತ್ತೆ ಮಂಗಳೂರಿಗೆ ಎಳೆದುತಂದಂತೆ ಬಂದು ಬಿದ್ದ ನನ್ನೊಳಗಿನ ಪತ್ರಕರ್ತನನ್ನು ಬಡಿದೆಬ್ಬಿಸಿದ ಮಂಗಳೂರಿನ ಕನ್ನಡ ಜನ ಅಂತರಂಗ ದಿನ ಪತ್ರಿಕೆ ಮತ್ತು ಕರಾವಳಿ ಅಲೆ ಸಂಜೆ ದೈನಿಕದ ಸಂಪಾದಕ ಮತ್ತು ಮಾಲೀಕರೂ ಆದ ಬಿ.ವಿ.ಸೀತಾರಾಂ, ದೇಶದ ನಂ.1 ಕನ್ನಡ ದಿನಪತ್ರಿಕೆ ಎಂಬ ನಾಮಧೇಯವನ್ನು ಅಲ್ಪ ಕಾಲಾವಧಿಯಲ್ಲಿ ಪಡೆದು ಪತ್ರಿಕಾ ರಂಗದಲ್ಲಿ ಕ್ರಾಂತಿಯ ಕಹಳೆಯೂದಿದ ವಿಜಯ ಕರ್ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ತಿದ್ದಿ ತೀಡಿದ ಈಶ್ವರ ದೈತೋಟ, ಆ ಬಳಿಕ ನನ್ನೊಳಗಿನ ಪತ್ರಕರ್ತನಿಗೆ ಹೊಸ ರೂಪ, ನವೀನತೆ ತುಂಬಿ, ಆಗಾಗ್ಗೆ ಗೆಳೆಯನಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ, ವಿಜಯ ಕರ್ನಾಟಕದ ದಿಗ್ವಿಜಯದ ಏಣಿಯ ಆಧಾರ ಕಂಬವೇ ಆಗಿಬಿಟ್ಟಿರುವ ವಿಶ್ವೇಶ್ವರ ಭಟ್, ಮಂಗಳೂರು ಕಚೇರಿಯಲ್ಲಿ ಸದಾ ಕಾಲ ನನ್ನನ್ನು ಕಾರ್ಯನಿರತನಾಗುವಂತೆ ಮಾಡಿ, ನನ್ನೊಳಗಿನ ಔದಾಸೀನ್ಯವನ್ನು ತೊಡೆದು ಹಾಕಿದ ಕುಮಾರನಾಥ್….. ಹೀಗೆಯೇ ಬೆಳೆಯುತ್ತಿದೆ ನನ್ನನ್ನು ತಿದ್ದಿ ತೀಡಿದವರ ಪಟ್ಟಿ.
ಇಷ್ಟೆಲ್ಲದರ ಮಧ್ಯೆ, ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಬಾಲಕಾಶ್ರಮ ಸೇರಿದ ನನ್ನೊಳಗಿನ ಒಳ್ಳೆಯ ಗುಣಗಳನ್ನು ಗುರುತಿಸಿ, ನನ್ನೊಳಗಿನ ನನ್ನತನವನ್ನು ಸರಿಯಾದ ದಿಕ್ಕಿಗೆ ಹೋಗುವಂತೆ ನಿರ್ದೇಶಿಸಿದ ಸ್ವಾಮೀಜಿಗಳಾದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಅವರ ಮಾರ್ಗದರ್ಶನ ಎಂದಿಗೂ ಮರೆಯಲಾಗದು. ಇವರಿಗೆಲ್ಲಾ ಸದಾ ಋಣಿಯಾಗಿದ್ದುಕೊಂಡು, ವಾಣಿ ಜತೆಗೂಡಿ ನನ್ನ ಬಾಳ ಪಯಣ ಸಾಗುತ್ತಿದೆ.
ಒಟ್ಟಿನಲ್ಲಿ ನಾನೂ ಈಗ ಒಬ್ಬ “ಸಂಪಾದಕ” ಅನ್ನಿಸಿಕೊಂಡಿದ್ದೇನೆ.
ಬದಲಾವಣೆಯೇ ಜಗದ ನಿಯಮ ಯಾಕೆ?
ಬದಲಾವಣೆ ಎಂಬುದು ಆಟೋಮ್ಯಾಟಿಕ್ ಆಗಿ ನನ್ನ ಜೀವನದ ಧ್ಯೇಯವಾಗಿಬಿಟ್ಟಿದೆ. ಕಾರಣ ಹೇಳುತ್ತೇನೆ ಕೇಳಿ. ನನ್ನ ವಾಸಸ್ಥಳಗಳು ಚಿಕ್ಕಂದಿನಿಂದ ಇದುವರೆಗೆ ಬದಲಾಗುತ್ತಲೇ ಬಂದವು. ಕಡಬ, ಕಟೀಲು, ಕುಡುಪು, ಅಳದಂಗಡಿ(ಅರುವ), ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ತಿಪಟೂರು, ಮುಂಬಯಿ, ಮಂಗಳೂರು(ಬಜಪೆ), ಮತ್ತೀಗ ಚೆನ್ನೈ. ಮುಂದೆ ಯಾವುದೋ….
ವಾಸಸ್ಥಳ ಬದಲಾವಣೆಯೊಂದಿಗೆ ನನ್ನ ಶಾಲೆ-ಕಾಲೇಜುಗಳೂ ಬದಲಾಗತೊಡಗಿದವು. ಆ ಮೇಲೆ ನನ್ನದೇ ಕಾರುಬಾರು. ಉದ್ಯೋಗಗಳನ್ನು ಬದಲಿಸಿದೆ, ಸೆಲ್ ಫೋನ್‌ಗಳನ್ನು ಬದಲಿಸಿದೆ, ಫೋನ್ ಸಿಮ್ ಕಾರ್ಡ್ ಬದಲಿಸಿದ ಕಾರಣ ನಂಬರ್‌ಗಳೂ ಬದಲಾಗತೊಡಗಿದವು. ಮೋಟಾರು ಬೈಕುಗಳನ್ನು ಬದಲಾಯಿಸಿದೆ, ಕಾರುಗಳನ್ನೂ ಖರೀದಿಸಿದೆ-ಬದಲಾಯಿಸುವ ಸಲುವಾಗಿ! ಇ-ಮೇಲ್ ಐಡಿಗಳನ್ನು ಬದಲಾಯಿಸತೊಡಗಿದೆ. ನನ್ನ ಇಚ್ಛೆಗಳನ್ನು ಬದಲಿಸಿದೆ, ಆಕಾಂಕ್ಷೆಗಳನ್ನು ಬದಲಿಸಿದೆ, ಮಹತ್ವಾಕಾಂಕ್ಷೆ ಬದಲಿಸಿದೆ, ಜತೆಯಲ್ಲೇ ಇತ್ಯಾದಿತ್ಯಾದಿ…. ಏನೇನೋ ಬದಲಾಗತೊಡಗಿದವು.
ಹಾಗಿದ್ದರೆ ಈಗ ನನ್ನ ಜೀವನದ ಧ್ಯೇಯವೇ ಆಗಿಬಿಟ್ಟಿರುವ ಬದಲಾವಣೆಯನ್ನೇ ಬದಲಿಸಿದರೆ ಹೇಗೆ?
ಪ್ರಶ್ನೆಗೆ ಉತ್ತರ ಗೊತ್ತಿಲ್ಲ!
ಸಂಪರ್ಕ: avinash.net@gmail.com
Posted by ಶ್ರೀವತ್ಸ ಜೋಶಿ on April 25, 2006 at 11:55 PM
ಅವಿನಾಶ್:
ನಮಸ್ಕಾರ!
ಇವತ್ತು ಕನ್ನಡಬ್ಲಾಗ್ ನಕ್ಷತ್ರಗಳನ್ನು (ಸರಿಯಾಗಿ ೨೭ ಇವೆ!) ಇ-ಭೇಟಿಯಾಗುವ ಒಂದು ಯೋಜನೆ ಹಾಕಿಕೊಂಡೆ; ಫಲವಾಗಿ ನಿಮಗೂ ‘ಹಲೋ!’ ಹೇಳುತ್ತಿದ್ದೇನೆ. ಮಾಧ್ಯಮಕ್ಷೇತ್ರದಲ್ಲಿದ್ದ ನೀವು ಐ.ಟಿ.ಗೆ ಧುಮುಕಿದ ವಿಚಾರ ತಿಳಿಯಿತು. ಐ.ಟಿ.ಯಲ್ಲೇ ಇರುವ ನನಗೆ ‘ಮಾಧ್ಯಮ’ ಒಂದು ಸೈಡ್-ಗೀಳು/ಹುಚ್ಚುಹವ್ಯಾಸ ಅಷ್ಟೆ. ದಟ್ಸ್ ಕನ್ನಡದ ಶಾಮ್ ಮತ್ತು ವಿ.ಕ ದ ಭಟ್ ಈ ನನ್ನ ಹವ್ಯಾಸಕ್ಕೆ ನೀರೆರೆವವರು.
ನಿಮ್ಮ ನೆಟ್-ಬರವಣಿಗೆಯನ್ನೋದಿ ನೆಟ್-ರಿಸಲ್ಟ್ ಏನೆಂದರೆ, ಅಪಾರ ಸಂತೋಷವಾಯಿತು! ಹೀಗೆಯೇ ಮುಂದುವರೆಸಿ!
ಇತಿ,
ಶ್ರೀವತ್ಸ ಜೋಶಿ
Posted by Avi on May 8, 2006 at 7:53 PM
ಧನ್ಯವಾದಗಳು ಜೋಷಿಯವರಿಗೆ,
ಎಲ್ಲೋ ಇದ್ದವರನ್ನು ಎಳೆದುತಂದು ಹುಡುಕಿ ಗುರುತಿಸಿ ಓದಿದ್ದೀರಿ. ಕಾಮೆಂಟ್ ಕೂಡ ಮಾಡಿದ್ದೀರಿ.
ನಿಮ್ಮ ವಿಚಿತ್ರಾನ್ನ ಉಣಬಡಿಸುವಿರಂತೆ….
ಧನ್ಯವಾದ
Posted by ಮುರಲಿ on May 24, 2006 at 2:04 PM
ಅವಿನಾಶರಿಗೆ ನಮಸ್ಕಾರ..
ನಾನೂ ಸದ್ಯಕ್ಕೆ ನಿಮ್ಮ೦ತೆ ಮಾಹಿತಿ ತ೦ತ್ರಜ್ನಾನದ ಸ೦ಸ್ಥೆಯೊ೦ದರಲ್ಲಿ ಕೆಲಸ ಮಾಡುತ್ತಿದ್ದೇನೆ..ನನಗೂ ಯಕ್ಷಗಾನದ ಗೀಳು ಬಹಳ..ಬೆ೦ಗಳೂರಿನಲ್ಲಿ ಆಗುವ ಹೆಚ್ಚಿನ ಪ್ರದರ್ಶನಗಳಿಗೆ ಹಾಜರಿ ಹಾಕುತ್ತೇನೆ. ಹಾಗೆಯೇ ಸಾಹಿತ್ಯ ಮತ್ತು ಪತ್ರಿಕಾರಒಗದಲ್ಲೂ ಕೂಡಾ ಆಸಕ್ತಿ ಇದೆ..
ನಿಮ್ಮ ಬರಹಗಳು ಚೆನ್ನಾಗಿವೆ..ಹೀಗೇ ಇ-ಪತ್ರಿಕೊದ್ಯಮ ಮು೦ದುವರಿಸಿ
ಮುರಲಿ
Posted by Avi on May 25, 2006 at 4:32 PM
ನಮಸ್ಕಾರ ಮುರಳಿ ಅವರಿಗೆ,
ಬ್ಲಾಗಿನೊಳಗೆ ಇಣುಕಿ ಶುಭ ಹಾರೈಸಿದ್ದಕ್ಕೆ ಥ್ಯಾಂಕ್ಸ್.
ಸದ್ಯಕ್ಕೆ ಬ್ಲಾಗ್ ಅಪ್ ಡೇಟ್ ಗೆ ಸಮಯ ಸಿಗುತ್ತಿಲ್ಲ.
ಇದಕ್ಕೆ ಕಾರಣ ನನ್ನ ಇನ್ನೊಂದು ಬ್ಲಾಗ್. ಕೆಲವು ದಿನಗಳಿಂದ ಊರಿಗೆ ಹೋಗಿದ್ದರಿಂದ ಅದೂ ಸ್ವಲ್ಪ ಸೊರಗಿದೆ. ಮತ್ತೆ ರಿಪೇರಿಸಬೇಕಾಗಿದೆ.
ಧನ್ಯವಾದಗಳು.
ಅವಿನಾಶ್
Posted by ಶ್ರೀನಿವಾಸ on June 17, 2006 at 8:16 PM
ನಾನೀ ಬ್ಲಾಗನ್ನು ನೋಡಿರಲೇ ಇಲ್ಲ. ಬಹಳ ಸುಂದರವಾದ ಹೂದೋಟವಿದು. ಆದರೆ ಸ್ವಲ್ಪ ದಿನಗಳಿಂದು ನೀರು ನೆರಳು ಕಾಣದೆ ಬಳಲಿದಂತಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಪರಿಣಿತಿ ಪಡೆದು ಮುಂದುವರೆಯುತ್ತಿರುವವರು ಬಹಳ ಕಡಿಮೆ. ಅದೂ ಅಲ್ಲದೇ ಜೀವನದ ಮರ್ಮವನ್ನು ತಿಳಿದ ನೀವು ಸತ್ಯವಾಗಿಯೂ ಬಹು ಎತ್ತರಕ್ಕೆ ಏರುವಿರಿ.
ನಿಮ್ಮ ಮುಂದಿನ ಸುಗಮವಾಗಿರಲಿ ಎಂದು ಹಾರೈಸುವೆ.
Posted by Avi on June 19, 2006 at 2:09 PM
ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು ಶ್ರೀನಿವಾಸ್.
ನೆಟ್ಟಿನಲ್ಲಿ ಕನ್ನಡದ ಕಂಪು ಹರಡಿಸುತ್ತಾ, ಎಳೆಯರನ್ನು ಬ್ಲಾಗ್ ಮಾಡಲು, ಅಪ್ ಡೇಟ್ ಮಾಡಿಸಲು ಅವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ನಿಮ್ಮ ನೆಟ್ಗನ್ನಡ ಸೇವೆ ಅನನ್ಯ.
ನನ್ನ ಬ್ಲಾಗ್ ಕೂಡ ಅಪ್ಡೇಟ್ ಆಗಲು ನಿಮ್ಮ ಪ್ರೋತ್ಸಾಹವೇ ಕಾರಣ.
ನಮಸ್ಕಾರ.
Posted by ಶೇಷಾದ್ರಿ on June 25, 2006 at 11:18 AM
ಮಾನ್ಯ ಅವಿನಾಶರೇ,
ನಿಮ್ಮ ಈ ಬ್ಲಾಗನ್ನು ಇಂದಿನವರೆಗೆ ನೋಡಿರಲಿಲ್ಲ. ನಿಮ್ಮಂತೆಯೇ ನಾನೂ ಸಹ ಸಾಫ್ಟ್‌ವೇರ್ ಉದ್ಯೋಗಿ ಮತ್ತು ಪತ್ರಿಕೋದ್ಯಮದ ಬಗೆಗೆ ಆಸಕ್ತಿ ಉಳ್ಳವನು. ಆದರೆ, ಆ ಉದ್ಯಮದಲ್ಲಿ ಯಾವುದೇ ಅನುಭವ ಇಲ್ಲದವನು.
ಇದೀಗತಾನೆ ನಿಮ್ಮ ಪರಿಚಯ ಲೇಖನ ಓದಿದೆ. ಉಳಿದ ಲೇಖನಗಳನ್ನು ತಪ್ಪದೇ ಓದುತ್ತೇನೆ.
ವಂದನೆಗಳು.
Posted by Avi on June 25, 2006 at 6:39 PM
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಶೇಷಾದ್ರಿ ಅವರೆ,
ಈ ಬ್ಲಾಗು ಸ್ವಲ್ಪ ಮಂಕಾಗಿಬಿಟ್ಟಿದೆ. ಮನದಾಳದ ಮಾತುಗಳನ್ನು ಬರೆಯಬೇಕೆಂಬಾಸೆ, ಪುರುಸೊತ್ತು ಸಿಗುತ್ತಿಲ್ಲ.
ಇದನ್ನು ಮುಂದುವರಿಸಲು ಒತ್ತಡ ಬರುತ್ತಿದೆ.
ನಮಸ್ಕಾರ
ಅವಿನಾಶ್
Posted by Rajanarayana on July 7, 2006 at 9:21 AM
ಚೆನ್ನಾಗಿ ಬರೆದಿದ್ದೀರ ಓದುತ್ತ ಸಂತೋಶವಾಯ್ತು.
-ರಾಜ್
Posted by Avi on July 8, 2006 at 5:04 PM
ಬ್ಲಾಗಿಗೆ ನಿಮಗೆ ಸ್ವಾಗತ ರಾಜ್ ನಾರಾಯಣ ಅವರೆ.
ಆಗಾಗ ಬರುತ್ತಾ ಇರಿ
Posted by jithendra on July 24, 2006 at 11:37 AM
Hi avinash
nanu nimma ottige kelasa maadiddarooo nnage nimma istella gunaglu, prthibhe iddaddu gottilla
neevu olleya sangeetha kalavida
net nalloo tumba hushaaru aagiddeeri
keep it up
- jithendra
nana blog
samajvani.blogspot.com
Posted by Avi on July 24, 2006 at 6:52 PM
ನಮಸ್ಕಾರ ಜಿತೇಂದ್ರ ಕುಂದೇಶ್ವರರಿಗೆ,
ನನ್ನ ಬಗ್ಗೆ ನಿಮಗೆ ಹೆಚ್ಚು ತಿಳಿದುಕೊಳ್ಳಲು ಅಸಾಧ್ಯವಾಗಲು ಕಾರಣ ಎಂದರೆ ಬಹುಶಃ ನನ್ನನ್ನು ನಾನು ಸಂಪೂರ್ಣವಾಗಿ ತೆರೆದಿಡದಿರುವುದೇ ಇರಬಹುದು. ಯಾವತ್ತೂ ಕಡಿಮೆ ಮಾತಿಗೆ ಕಟ್ಟು ಬಿದ್ದವನು ನಾನು.
ಇನ್ನೂ ಸತ್ಯ ವಿಷಯವೆಂದರೆ, ನನಗೆ ಮಾತನಾಡುವುದಕ್ಕೇ ಗೊತ್ತಿಲ್ಲ!
Posted by Soni on August 18, 2006 at 1:16 PM
ohooooo avi! atlast I’m successful reading “About Me” section of your blog Hmmmmmmmmm……… Very talented haan…It’s nice to know about you.
Posted by Avi on August 18, 2006 at 5:25 PM
ಧನ್ಯವಾದ ಸೋನಿ….
ಟ್ಯಾಲೆಂಟ್ ಇದೆ ಅಂತ ನೆನಪಿಸಿದ್ದಕ್ಕೆ ಥ್ಯಾಂಕ್ಸ್
Posted by jayant on August 21, 2006 at 11:27 PM
blogna vinyasa haagu content sogasada combination…. kushi aaytu nimma blog noDi
Posted by Avi on August 22, 2006 at 9:23 AM
ಬ್ಲಾಗಿಗೆ ಸ್ವಾಗತ ಜಯಂತ್ ಅವರೆ,
ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದ.
Posted by ವೇಣು ವಿನೋದ್ on September 9, 2006 at 6:12 PM
ಬೈಪಡಿತ್ತಾಯರಿಗೆ ನಮಸ್ಕಾರ…
ನೀವು ಅವಿನಾಶ್ ಎಂದು ತಿಳಿದಾಗಲೇ ಯಾರೀತ ಎಂಬ ಕುತೂಹಲ. ಇಂದು ನಿಮ್ಮ ಬ್ಲಾಗ್‌ನ about you ವಿಭಾಗ ನೋಡಿದಾಗಲೇ ತಿಳಿದದ್ದು ನೀವು ನನ್ನ ಪರಿಚಿತರು ಅಂತ. ನಿಮ್ಮ ಭಾವಚಿತ್ರ ನೋಡಿದ ಮೇಲಂತೂ all clear. ನಾನು ಮಂಗಳುರಿನಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಡುವ ಹಂತದಲ್ಲಿ ೪೦ ದಿನಗಳ ತರಬೇತಿ ವಿಜಯಕರ್ನಾಟಕದಲ್ಲಿ ಪಡೆದದ್ದು, ಆ ಬಳಿಕವೂ ಹಲವು ಕಾರ್ಯಕ್ರಮಗಳಲ್ಲಿ ಭೇಟಿ ಇನ್ನೂ ನೆನಪಿದೆ, ನಿಮಗೂ ಇರಬಹುದೆಂದುಕೊಳ್ಳುತ್ತೇನೆ. ಬ್ಲಾಗ್ ಚೆನ್ನಾಗಿದೆ. ಜಾಲದಲ್ಲಿ ಕನ್ನಡ ಪಸರಿಸುವ ನಿಮ್ಮ ಕನ್ನಡ ಮನಸ್ಸು ಸದಾ ಕ್ರಿಯಾಶೀಲವಾಗಿರಲಿ ಎಂಬ ಹಾರೈಕೆ ನಿಮ್ಮ ಈ ಕಿರಿಯ ಮಿತ್ರನದ್ದು. ಸಮಯ ಇದ್ದಾಗ ನನ್ನ ತಾಣಗಳಾದ venuvinod.blogspot.com, venukapra.blogspot.comಗಳಿಗೆ ಭೇಟಿ ಕೊಡಿ, ಸಲಹೆ ಕೊಡಿ
Posted by Avi on September 10, 2006 at 12:29 PM
ಧನ್ಯವಾದ ವೇಣು ವಿನೋದ್…
ಮರೆತೇನೆಂದರೆ ಮರೆಯಲೀ ಹ್ಯಾಂಗೆ… ಅಲ್ಲವೇ…
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಿದ್ಧಿ-ಪ್ರಸಿದ್ಧಿ ಗಳಿಸಿ ಅಂತ ಹಾರೈಕೆ.
Posted by Vishweshwar Bhat on October 2, 2006 at 12:01 AM
Hi avinash,
Go ahead.. I have been reading your recent posts. Its quite interesting.
Vishweshwar Bhat
Posted by Avi on October 2, 2006 at 6:47 PM
ಆತ್ಮೀಯರಾದ, ಗುರು ಸಮಾನರಾದ ವಿಶ್ವೇಶ್ವರ ಭಟ್,
ಈ ನನ್ನ ಪುಟ್ಟ ತಾಣಕ್ಕೆ ಬಂದು ಹರಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.
ನನಗೆ ತಿಳಿದಿರುವಂತೆ, ಕನ್ನಡ ಬ್ಲಾಗ್ ಜಗತ್ತಿನಲ್ಲಿ ಬೇರಾರಿಗೂ ಸಿಗದ ಆಶೀರ್ವಾದವಿದು ಅಂತ ಭಾವಿಸಿದ್ದೇನೆ. ಇದು ಅತಿಶಯೋಕ್ತಿ ಖಂಡಿತಾ ಅಲ್ಲ. ಧನ್ಯತಾ ಭಾವ.
Posted by ಭೂತ on November 4, 2006 at 4:09 AM
ಅಬ್ಬ,
ಅದ್ಭುತವಾದ ಬ್ಲಾಗ್. ಈ ಬ್ಲಾಗಿಗೆ ಇದೆ ಮೊದಲ ಬಾರಿ ಭೇಟಿ. ಎರಡೆರಡು ಬ್ಲಾಗ್ ಹೇಗೆ ನಿರ್ವಹಿಸುತ್ತಿರಿ ಸ್ವಾಮಿ? ಅಥವ ಇನ್ನು ಒಂದು ಇದ್ಯೋ? ನನಗೆ, ಒಂದು ನಿಬಾಯ್ಸೋದೆ ಕಷ್ಟ.
ನಿಮ್ಮಲ್ಲಿರುವ ಅಮೋಘವಾದ ಅಬ್ರವಣಿಗೆಯನ್ನು ಮುಂದುವರಿಸುತ್ತರಿ. ನಮ್ಮಂತ ಓದುಗರಿಗೆ ಸ್ವಲ್ಪವಾದರು ತಿಳುವಳಿಕೆ ಬಂದೀತು.
ಇಂತಿ
ಭೂತ
Posted by Avi on November 4, 2006 at 9:38 AM
ಭೂತ

ನಿಮಗೆ ಸ್ವಾಗತ.
ಭೂತ ಅಂತ ಹೆಸರು ಕೇಳಿದ್ರೆ ಸ್ವಲ್ಪ ಹೆದರಿಕೆ.
ಸಾಕಷ್ಟು ಸಂಖ್ಯೆಯಲ್ಲಿ ಬ್ಲಾಗು ಹುಟ್ಟು ಹಾಕಿದ್ದೇನೆ. ಕೆಲವು ನಡೆದಾಡುವ ಭೂತಗಳು, ಮತ್ತೆ ಕೆಲವು ಸ್ಥಗಿತಗೊಂಡಿವೆ.
ಬರ್ತಾ ಇರಿ.
Posted by Sibanthi Padmanabha K V on November 19, 2006 at 9:57 PM
ನಮಸ್ಕಾರ ಅವಿನಾಶ್ ರಿಗೆ.
ಹೀಗೇ ಸುಮ್ನೆ ಬ್ಲೋಗ್ ಗಳನ್ನು ಚೆಕ್ ಮಾಡ್ತಿರ್ ಬೇಕಾದ್ರೆ ನೀವು ಕಣ್ಣಿಗೆ ಬಿದ್ದಿರಿ… ತುಂಬಾ ಖುಶಿಯಾಯಿತು. ಕನ್ನಡದಲ್ಲೇ ಹೇಗೆ ಎರಡು ಮಾತು ಬರೆಯೋದು ಅಂತ ತಲೆ ಕೆರೆದುಕೊಳ್ಳುತ್ತಿದ್ದೆ. ಈ ಉಪಾಯವನ್ನೂ ಜೊತೆಗೆ ಹೇಳಿಕೊಟ್ಟಿದ್ದೀರಿ. ಥ್ಯಾಂಕ್ಯೂ!
ಒಂದೇ ಕಚೇರಿಯಲ್ಲಿರಬೇಕಾದರೆ ನಾವು ಹೆಚ್ಚು ಮಾತನಾಡಲಿಲ್ಲ, ಅಥವಾ ಮಾತನಾಡುವ ‘ವ್ಯವಸ್ಟೆ’ ಇರಲಿಲ್ಲ… ನಿಮಗೆ ನನ್ನ ನೆನಪಿರಬಹುದೆಂದು ಭಾವಿಸುತ್ತೇನೆ. ಈಗ ನಾನು ‘ಡೆಕ್ಕನ ಹೆರಾಲ್ಡ್ ‘ನಲ್ಲಿದ್ದೇನೆ. ಸದ್ಯಕ್ಕೆ ಇಲ್ಲಿ ನಿಲ್ಲಿಸುತ್ತೇನೆ. ಇಷ್ಟು ಬರೆಯುವುದಕ್ಕೆ ಬಹಳ ಪಾಡು ಪಟ್ಟಿದ್ದೇನೆ! ಮುಂದೆ ಧಾರಾಳ ಮಾತಾಡುವ, ಆಗದೇ?
ಇತೀ, ಸಿಬಂತಿ ಪದ್ಮನಾಭ ಕೆ. ವಿ.
Posted by Avi on November 20, 2006 at 10:00 AM
ಸಿಬಂತಿ ಪದ್ಮನಾಭ ಅವರಿಗೆ ಸ್ವಾಗತ
ಹೌದು, ಆ ವ್ಯವಸ್ಥೆ ನನಗೂ ತಿಳಿದಿತ್ತು. ಅದು ಮರೆತುಬಿಡಬಹುದಾದದ್ದು.
ಡೆಕ್ಕನ್ ಹೆರಾಲ್ಡ್‌ಗೆ ಸೇರಿದ್ದು ಕೇಳಿ ಖುಷಿಯಾಯಿತು. ನಿಮಗೆ ಶುಭಾಕಾಂಕ್ಷೆಗಳು.
ಬರುತ್ತಾ ಇರಿ,
ನೀವೂ ಬರೆಯಿರಿ
Posted by Veena Shivanna on December 5, 2006 at 4:12 PM
ಅವಿನಾಶ್ ಅವರಿಗೆ ನಮಸ್ಕಾರ. ನಿಮ್ಮ ಕನ್ನಡ ಬ್ಲಾಗ್ ನೋಡಿ ಬಹಳ ಸಂತೋಷವಾಯಿತು. ಅಬ್ಬ ಒಳ್ಳೆ ಕೆಲ್ಸ ಮಾಡ್ತಿದೀರಿ. ಹೀಗೆ ಮುಂದುವರಿಸಿ.
ವೀಣಾ, ಬೆಂಗಳೂರು.
Posted by Avi on December 5, 2006 at 7:45 PM
ವೀಣಾ ಅವರಿಗೆ ನಮಸ್ಕಾರ.
ನಿಮ್ಮ ಪ್ರೋತ್ಸಾಹಕ ನುಡಿಗೆ ಧನ್ಯವಾದಗಳು.
ನಿಮ್ಮ ಫೋಟೋ ಬ್ಲಾಗ್ ನೋಡಿ ಖುಷಿಯಾಯಿತು.
Posted by nilgiri on February 3, 2007 at 11:35 PM
ನಮಸ್ಕಾರ…ನಿಮ್ಮ “ವರದಿಗಳನ್ನು” ಓದುವಾಗ…ನೀವು ಹೆಂಗೋ…ಇದ್ದೀರಾ ಅನ್ಕೊಂಡಿದ್ದೆ….ಇವತ್ತೆ ಸುಮ್ಮನೆ ನಿಮ್ಮ ” about me “ಓದಿದ್ದು…ನಾನೆನಾದ್ರೂ ನಿಮ್ಮ ವರದಿಗಳಿಗೆ ಪೆದ್ದು ಪೆದ್ದಾಗಿ ಕಾಮೆಂಟ್ ಮಾಡಿದ್ರೆ…ದಯಮಾಡಿ ಕ್ಷಮಿಸಿ….
Posted by Avi on February 4, 2007 at 9:09 AM
nilgiri ಅವರೆ,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.
ಇದೇ ಮೊದಲ ಸಲ ಬರ್ತಾ ಇದ್ದೀರಾ ಇಲ್ಲಿಗೆ. ಬಹುಶಃ ಬೇರೆ ಹೆಸರಲ್ಲಿ ಕಾಮೆಂಟ್ ಮಾಡ್ತಾ ಇದ್ದೀರೇನೋ…ಮತ್ತು ಅಂಥ ಯಾವುದೇ ಕಾಮೆಂಟ್ ಗಳು ಇಲ್ಲಿ ಇಲ್ಲವಲ್ಲ.
ಕ್ಷಮಿಸುವಷ್ಟು ದೊಡ್ಡವನಲ್ಲ.
ಬರ್ತಾ ಇರಿ.
Posted by chida on February 6, 2007 at 12:00 AM
ಊರ್ದಾರ್ನ ಕನ್ನಡ ಬ್ಲಾಗ್ ತೂದ್ ಬಾರಿ ಖುಶಿ ಆಂಡ್.
ಚಿದ….
Posted by Avi on February 6, 2007 at 7:54 AM
ಚಿದಾ, ಈರೆಗ್ ನಮ್ಮ ಬ್ಲಾಗ್‌ಗ್ ಸ್ವಾಗತ.
ಬರೋಂದುಪ್ಪುಲೆ. ಈರ್‌ಲಾ ಬ್ಲಾಗಿಸೊಯರ ಶುರು ಮಲ್ಪುಲೆ.
ಧನ್ಯವಾದ,
Posted by JyothiMahadev on March 31, 2007 at 12:48 PM
ಅವಿ, ನಿಮ್ಮ ಬ್ಲಾಗ್ ಖುಷಿ ಕೊಟ್ಟಿತು, ಹೀಗೇ ಮುಂದುವರೆಸುತ್ತಿರಿ. ನನ್ನ ಬ್ಲಾಗ್’ನಲ್ಲಿ ಲಿಂಕ್ ಹಾಕಿಕೊಂಡಿದ್ದೇನೆ. ಒಪ್ಪಿಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು.
Posted by Avi on April 1, 2007 at 1:34 PM
ಜ್ಯೋತಿ ಅವರೆ,
ನಿಮಗೆ ಸ್ವಾಗತ… ಪ್ರೋತ್ಸಾಹದ ನುಡಿಗೆ ಧನ್ಯವಾದಗಳು. ಲಿಂಕಿಸಿಕೊಳ್ಳುವಿರಂತೆ….
Posted by Harish Mambady on May 21, 2007 at 9:15 PM
Hi Avinash,
Neevu X press Alla Ekendre, blog patrakartana oladwhani tereyuttade…
Posted by anonymous on May 22, 2007 at 12:38 AM
hello
Posted by Avi on May 22, 2007 at 1:18 PM
ಬನ್ನಿ ಹರೀಶ್ ಅವರೆ, ನಿಮಗೆ ಸ್ವಾಗತ.
ತುಂಬಾ ವರ್ಷದ ನಂತರ ಸಿಕ್ಕಿದ್ದೀರಿ.
ನೀವು ಹೇಳಿದ್ದು ಸರಿ. ಈಗಲೂ ಪ್ರೆಸ್ ಎಂಬ ನಂಟು ಬಿಟ್ಟಿಲ್ಲ.
Posted by peddi on May 31, 2007 at 10:21 AM
REALLY SUPER!!!!
Posted by Avi on June 4, 2007 at 12:39 PM
ಪೆದ್ದಿ???
ಸ್ವಾಗತ…
Posted by s.k.shama sundara on June 24, 2007 at 7:17 PM
hosadu enu bareeta ideera Avinash?
Please alert me when you referesh your blog.
Thanks.
Shyam
Posted by Avi on June 25, 2007 at 7:41 AM
ಶ್ಯಾಮ್ ಸುಂದರ್ ಅವರೆ ಸ್ವಾಗತ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಈ ದಿನಗಳಲ್ಲಿ ಒಂದಿಷ್ಟು ಬ್ಯುಸಿಯಾಗಿರುವುದರಿಂದ ಅಪ್‌ಡೇಟ್ ನಿಧಾನವಾಗ್ತಿದೆ.
ಹೊಣೆಗಾರಿಕೆ ನೆನಪಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.
-ಅವಿನಾಶ್
Posted by rashmi on August 4, 2007 at 9:01 PM
adbhuthavagide nimma blog isht dina node iralilla really i miss a lot
Posted by Avi on August 4, 2007 at 9:49 PM
ನನ್ನ ಬ್ಲಾಗಿಗೆ ಸ್ವಾಗತ ರಶ್ಮಿ ಅವರೆ,
ನಿಮ್ಮಿಂದಲೂ ಒಂದು ಬ್ಲಾಗು ಆರಂಭವಾಗುತ್ತದೆಯೆಂಬ ನಿರೀಕ್ಷೆಯಲ್ಲಿ….
Posted by Deepak R.Karade on August 16, 2007 at 11:33 AM
Hi Dear sir
This is (X kannada team member msn team)
how ru sir
I got ur web page while searching kalavida pictures
how ru avi sir, and how is our vijay sarathi sir
sir mail me ur email address we will keep in touch
my id is deepak836@yahoo.com
Posted by Deepak R.Karade on August 16, 2007 at 9:01 PM
Hello ಅವಿ ಸರ್ ನಮಸ್ಕಾರ ಹಗೆ ಇದ್ದಿರಾ
ನಿಮ್ಮ ಬ್ಲಾಗ ತುಂಬಾ ಚನ್ನಾಗಿದೆ
ನಮ್ಮ ವಿಜಯ ಸರ್ ಮತ್ತು ಚಂದ್ರಾ ಅವರು ಹೇಗಿದ್ದಾರೆ, ನಿಮ್ಮ ಎಲ್ಲರ ಮೇಲ್ ಐಡಿ ನನಗೆ ಕಳಿಸಿ.
Posted by chitrakarkera dolpady on August 22, 2007 at 7:52 PM
ನಮಸ್ಕಾರ ಅವಿನಾಶ್ರವರಿಗೆ,
ಹೇಗಿದ್ದಿರಿ?
ನಿಮ್ ಬ್ಲಾಗ್ ಚೆನ್ನಾಗಿದೆ. ನಿಮಗೆ ನೆನಪಿರಬೇಕು..ನಾನು ರೋಹಿದಾಸ್ ತಂಗಿ(ವಿಜಯಕರ್ವಾಟಕ ಮಂಗಳೂರು)ನೀವು ಚೆನ್ನೈಗೆ ಹೋಗುವ ಮುಂಚೆ ನಮ್ಮಣ್ಣ ನಿಮ್ ಜತೆ ಹೋಗುತಿಯಾ ಅಂದಿದ್ದ..ಯಾಕೋ ದೂರ ಅನಿಸಿತು. ಈಗ ನಾನು ದ ಸಂಡೆ ಇಂಡಿಯನ್ ವಾರಪತ್ರಿಕೆಯಲ್ಲಿ ಕೆಲ್ಸ ಮಾಡುತ್ತಿದ್ದೇನೆ.
ಆದ್ರೂ ಪತ್ರಿಕೋದ್ಯಮದಲ್ಲಿ ಸಿಕ್ಕ ಖುಷಿ ಸಾಫ್ಟ್ ವೇರ್ ನಲ್ಲಿ ಸಿಗುವುದೇ?
Posted by Avi on September 5, 2007 at 1:41 PM
ನಮಸ್ಕಾರ ಚಿತ್ರಾ,
ವಿ.ಕ.ದಲ್ಲಿ ಪ್ರಕಟವಾಗುತ್ತಿದ್ದ ನಿಮ್ಮ ಲೇಖನಗಳನ್ನು ಓದುತ್ತಿದ್ದೆ. ನೀವು ಬ್ಲಾಗ್ ಆರಂಭಿಸಿ.
ಸಾಫ್ಟ್‌ವೇರ್ ಆಗ್ಲಿ, ಪತ್ರಿಕೋದ್ಯಮವೇ ಆಗಲಿ, ಅದು ಅವರವರ ಭಾವಕ್ಕೆ ತಕ್ಕಂತಿರುತ್ತದೆ. ನಾನಿರೋದು ಪೂರ್ಣ ಸಾಫ್ಟ್‌ವೇರ್ ಅಲ್ಲ. ಆನ್‌ಲೈನ್ ಮೀಡಿಯಾವೂ ಹೌದು, ಸಾಫ್ಟ್‌ವೇರ್ ಕ್ಷೇತ್ರದಲ್ಲಿಯೂ ಏನೆಲ್ಲಾ ನಡೀತಿದೆ ಅಂತೆಲ್ಲಾ ತಿಳಿದುಕೊಳ್ಳಲೂಬಹುದು.
ಬರುತ್ತಾ ಇರಿ.
Posted by Avi on September 5, 2007 at 1:42 PM
ದೀಪಕ್,
ಎಲ್ಲಿದ್ದೀರಿ, ಏನು ಮಾಡ್ತಾ ಇದ್ದೀರಿ, ನಮ್ಮನ್ನು ಮರೆತ್ರಾ ಹೇಗೆ ಅಂತ ಯೋಚ್ನೆ ಮಾಡೋಷ್ಟರಲ್ಲಿ ಬಂದುಬಿಟ್ರಿ…
ವಿವರ ಕಳುಹಿಸುವೆ.
Posted by Deepak on October 28, 2007 at 7:40 PM
ನಮಸ್ಕಾರ avi sir
nivu allar mail id kodtira anta kai ta edini
na use madta iro system nalli unicode install madill adake kannada dalli type madoke aglilla cut and paste madi letter bariyona andre yako manasu barlilla
sir nim allardu id math contact no nan id ge mail madi sir nim allar jote matad bek ede, vijay sir chandra madam, sowmya maday mathu sarathi(system admin) allaru hege edare sir
nim reply ge kaita edin sir
with warm regards
deepak
Posted by ಸಂಜಯ ಕಟ್ಟಿಮನಿ on December 3, 2007 at 9:14 PM
ನಮಸ್ಕಾರ ಅವಿನಾಶ್,
ನಿಮ್ಮ ಕನ್ನಡದ ಬ್ಲಾಗ್ ನೊಡಿ ತುಂಬಾ ಸಂತೋಷವಾಯಿತು. ಇದೆ ರೀತಿ ನಿರ್ಭಯವಾಗಿ ರಾಜಕೀಯ ಹಾಗೂ ಇತರೆ ವಿಷಯಗಳ ಮೆಲೆ ಬರೆಯುತ್ತಿರಿ.
ಸಂಜಯ ಕಟ್ಟಿಮನಿ.
Posted by Avi on December 8, 2007 at 1:31 PM
ಸ್ವಾಗತ ಸಂಜಯ ಅವರಿಗೆ,
ನಿಮ್ಮ ಹಾರೈಕೆಗೆ ಧನ್ಯವಾದ.
Posted by mallenahalli on December 28, 2007 at 1:24 PM
ನಮಸ್ಕಾರ ನಲ್ಮೆಯ ಅವಿನಾಶ್ ರವರಿಗೆ,
ಕನ್ನಡ ಜ್ಞಾನ ಸರಸ್ವತಿಯ ಸವಿಮನದ ಅಂಗಳದಿಂದ
ಹೆಕ್ಕಿ ಹೆಕ್ಕಿ ತೆಗೆದಂತೆ ನೀವು ಬರೆದಿರುವ
ಅರ್ಥ ತುಂಬಿ ಒಲವಾಗಿರುವ ಪದಗಳು, ಮಧುರ
ವಾಕ್ಯಗಳನ್ನು ಓದಿ ನನ್ನ ಮನವು ತಣಿದಿದೆ
ನಿಮ್ಮ ಮಾತೃಭಾಷಾ ಸಾಮರ್ಥ್ಯ ಬಹಳ ವಿಸ್ತುರವಾದುದು..
ಹೀಗೆ ನಿಮ್ಮ ಅನವರತ ಸೇವೆ ಮುಂದುವರಿಯಲಿ.
ಇಂತಿ ನಿಮ್ಮ
ಸುನಿಲ್ ಮಲ್ಲೇನಹಳ್ಳಿ
sunilkumara.ms@gmail.com,
Posted by Avi on December 31, 2007 at 7:06 PM
ಆತ್ಮೀಯ ಸುನಿಲ್ ಅವರೇ.
ನಿಮಗೆ ಸ್ವಾಗತ.
ನಿಮ್ಮ ಪ್ರಶಂಸೆ ಮನತುಂಬಿದೆ. ಧನ್ಯವಾದ. ಬರ್ತಾ ಇರಿ,
ಹೊಸ ವರ್ಷದ ಶುಭಾಶಯಗಳು.
Posted by mallenahalli on January 2, 2008 at 3:37 PM
ಆತ್ಮೀಯ ಅವಿನಾಶ್ ರವರಿಗೆ
ಹೊಸ ವರುಷದ ಹಾರ್ಧಿಕ ಶುಭಾಶಯಗಳು,
ಈ ಹೊಸ ವರುಷವು ನಿಮ್ಮ ಬಾಳ ಪಯಣದ ಹಾದಿಗೆ
ನವ ಚೈತನ್ಯ ಸ್ಫೂರ್ತಿಯಾಗಿರಲಿ.
ಇಂತಿ ನಿಮ್ಮ
ಸುನಿಲ್ ಮಲ್ಲೇನಹಳ್ಳಿ
Posted by Avi on January 11, 2008 at 5:09 PM
ಸುನಿಲರೇ, ನಿಮಗೂ ಆತ್ಮೀಯ ಹಾರೈಕೆಗಳು. ಧನ್ಯವಾದ.
Posted by Kiran on March 2, 2008 at 7:58 AM
ಅವಿನಾಶ್ ಅವರೇ,
ನಿಮ್ಮ ಬ್ಲಾಗನ್ನು ನೋಡಿ ತುಂಬಾ ಖುಶಿಯಾಯಿತು. ನಿಮಗೆ ಒಂದು ನಮಸ್ತೆ ಹೇಳಿಹೋಗುವಾ ಅಂತ ಇಲ್ಲಿ ಭೇಟಿ ಕೊಟ್ಟೆ. ನಾನು ಇತ್ತೀಚಗೆ ಬ್ಲಾಗ್ ಬರೀಲಿಕ್ಕೆ ಶುರು ಮಾಡಿದ್ದೇನೆ. ನಿಮ್ಮ ಅತ್ಯಮೂಲ್ಯ ಅನಿಸಿಕೆ ವ್ಯಕ್ತಪಡಿಸಬೇಕಾಗಿ ವಿನಂತಿ.
http://kiranjayanth.blogspot.com
ಧನ್ಯವಾದಗಳು.
ಕಿರಣ್
Posted by Avi on March 7, 2008 at 8:23 PM
ಕಿರಣ್ ಅವರೆ,
ನನ್ನ ಪುಟ್ಟ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗಿಂಗ್ ಅದ್ಭುತವಾಗಿ ಬೆಳೆಯಲಿ ಅಂತ ಹಾರೈಕೆ.
Posted by ಗುರುಪ್ರಸಾದ್ ಕೆ.ಎಚ್ on April 7, 2008 at 12:07 PM
ನಾನು ಇತ್ತೀಚೆಗೆ ಹೊಸದಾಗಿ ಬ್ಲಾಗ್ ಲೋಕಕ್ಕೆ ಸೇರಿದವ. ಇನ್ನೂ ಅಂಬೆಗಾಲಿಡುತ್ತಿರುವ ಮಗು. ನನ್ನ ಬ್ಲಾಗ್ ನೋಡಿ ಸದಾ ಸಂಪರ್ಕದಲ್ಲಿ ಇರಬೇಕೆಂಬುದೇ ನನ್ನ ಆಶಯ. ಹಾಗೆಯೇ ಬ್ಲಾಗ್ ಲೋಕದಲ್ಲಿನ ಅನೇಕ ಮಿತ್ರರನ್ನು ಭೇಟಿ ಮಾಡುವ ಆಸೆ. ಇನ್ನೊಂದು ಬ್ಲಾಗ್ ಸಮ್ಮೇಳನ ನಡೆಸಲೇಬೇಕು. ಅದು ಬೆಂಗಳೂರಿನಲ್ಲಾದರೆ ಉತ್ತಮ.
Posted by Ganesh K on April 11, 2008 at 2:10 PM
ಮಾಧ್ಯಮ ಕ್ಷೇತ್ರದಿಂದ ಐ.ಟಿ.ಗೆ ವಲಸೆ ಹೋಗಿ ಕೂಡಾ ತಮ್ಮ ಮಾಧ್ಯಮ ಪ್ರೀತಿಯಿಂದಾಗಿ ನಾವು ಇಂಟರ್ನೆಟ್ ನಲ್ಲಿ ನಿಮ್ಮ ಬ್ಲಾಗ್ ಓದುವಂತಾಯಿತು..! ತಮ್ಮ ಅಕ್ಷರ ಪ್ರೀತಿ ಹಿಂಗೇ ಮುಂದುವರಿಯಲೆಂದು ಹರಸುವ ಹಾರೈಸುವ…
ಗಣೇಶ್.ಕೆ.
Posted by Avi on April 12, 2008 at 12:35 PM
ಗಣೇಶ್ ಅವರೆ, ಬ್ಲಾಗು ಬುಟ್ಟಿಗೆ ಸ್ವಾಗತ. ನಿಮ್ಮ ಹಾರೈಕೆಗೆ ಧನ್ಯವಾದಗಳು.
Posted by ಗುರುಪ್ರಸಾದ್ ಕೆ.ಎಚ್ on May 15, 2008 at 10:17 PM
ಹೆಲೋ ಅವಿನಾಶ್ ಅವರೇ…..ನನ್ನ ಗುರುತು ಸಿಕ್ಕೆತಾ?
Posted by shama on October 28, 2008 at 6:59 PM
hello
avinash…
nimma blog nodiddu ondu akasmika. odi thumba khushiyaythu. computernalli kannada mathra gothu… adare blognalli hege bareyodu gothagalilla… addarinda nanna englikannada shisikolluvudu nimge anivarya..
anda haage naanu shama antha… belthangady nandibettada hudugi… ega bendakaaloorinalli udyogi…
Posted by Avi on October 29, 2008 at 11:21 PM
ಹಲೋ ಶಾಮಾ ಅವರೆ,
ಬ್ಲಾಗಿಗೆ ಸ್ವಾಗತ. ನೀವು ಕಂಪ್ಯೂಟರಿನಲ್ಲಿ ಕನ್ನಡ ಟೈಪ್ ಮಾಡಬೇಕಿದ್ದರೆ ಗೂಗಲ್ ಅವರ ಟ್ರಾನ್ಸ್‌ಲಿಟರೇಶನ್ ಟೂಲ್ ಬಳಸಿ. http://www.google.co.in/transliterate/indic/Kannada
ಬೆಂದ ಕಾಳೂರಿನಲ್ಲಿ ಏನು ಮಾಡುತ್ತಿದ್ದೀರಿ? ನೀವು ಕೂಡ ಯಾಕೆ ಬ್ಲಾಗ್ ಮಾಡಬಾರದು?
Posted by ಶಮ on October 31, 2008 at 7:48 PM
ಇಂದು ಶಮ ಕನ್ನಡ ಕಲಿತಳು. ಈಗ ಟೈಪಿಸುತ್ತಿದ್ದಾಳೆ. ಅವಿನಾಶ್ ರವರಿಗೆ ವಂದನೆಗಳು.
naanu illi CEO aagi kelasa madtha ideeni.. naanu balaso kannada software nudi. so its bit difficult at once to this kind of kanglish typing… anyways i shall try.. blog create madidini. but running short of time to write a single word…
i was browsing sibanthi’s write ups . i found u at that time.
nice knowing u..
bye 4 nw.
Posted by Avi on November 1, 2008 at 11:00 AM
ಶಮ ಅವರೆ, ಕೊನೆಗೂ ಕನ್ನಡ ಕಲಿತಿರಲ್ಲ!!
‘ನುಡಿ’ಯಲ್ಲೂ ಯುನಿಕೋಡ್ ಸೌಲಭ್ಯ ಇದೆ. ಅದಲ್ಲದೆ, ನುಡಿಯಲ್ಲಿ ಬರೆದಿದ್ದನ್ನು ಯುನಿಕೋಡಿಗೆ ಕನ್ವರ್ಟ್ ಮಾಡಬಲ್ಲ ತಂತ್ರಾಂಶಗಳೂ ಇವೆ. ನಿಮಗೆ ಅವಶ್ಯಕತೆಯಿದ್ದಲ್ಲಿ ಇ-ಮೇಲ್ ಮೂಲಕ ಸಂಪರ್ಕಿಸಿ. ಅದಕ್ಕೆ ಸಂಬಂಧಪಟ್ಟ ಲಿಂಕ್/ವಿವರ ನೀಡಬಲ್ಲೆ….
ಬ್ಲಾಗಿಸಲು ಆರಂಭಿಸಿ, ಬ್ಲಾಗಿಸ್ತಾ ಇರಿ.
btw ನಿಮ್ಮ ಬ್ಲಾಗಿನ ಯುಆರ್ಎಲ್ ಏನು?
Posted by shama on November 22, 2008 at 6:48 PM
ಅವಿನಾಶ್,
ಧನ್ಯವಾದಗಳು. ನಿಮ್ಮ ಈ ಮೇಲ್ ವಿಳಾಸ ನೀಡಿದಲ್ಲಿ ಸಂಪರ್ಕಿಸುವೆ. ನುಡಿಯಲ್ಲಿ ಬರೆದಿದ್ದನ್ನು ಯುನಿಕೋಡಿಗೆ ಕನ್ವರ್ಟ್ ಮಾಡಬಲ್ಲ ತಂತ್ರಾಂಶದ ವಿವರಗಳು ಸಿಕ್ಕಿದಲ್ಲಿ ಎಷ್ಟೊ ಸಮಯ ಉಳಿತಾಯ ಆಗುತ್ತದೆ. ಸಮಯ ಖರ್ಚು ಮಾಡುವುದರಲ್ಲಿ ಸ್ವಲ್ಪ ಕಂಜೂಸ್ ನಾನು. ಚಿಕುನ್ ಗುನ್ಯಾದ ದೃಷ್ಟಿ ನನ್ನ ಮೇಲೆ ಬಿದ್ದ ಕಾರಣ ಹಲವು ದಿನ ಮರೆಯಾಗ್ಬೇಕಾದ ಅನಿವಾರ್ಯತೆ ಬಂತು. ಡಾಕ್ಟರ್ ಗಂಡ ಇರುವ ಕಾರಣ ಫೀಸ್ ಕೊಡದೆ ಅದೊಂದು ಕರ್ಮಕಾಂಡ ಮುಗೀತು. ಅಂದ ಹಾಗೆ ನನ್ನ ಬ್ಲಾಗಿನಲ್ಲಿ ಒಂದೆರಡು ಅಕ್ಷರಗಳನ್ನು ಬರೆದ ಮೇಲೆ ವಿಳಾಸ ಹೇಳುವೆ. ಆಗದೆ ?
-’ಶಮ’, ನಂದಿಬೆಟ್ಟ
Posted by minchulli on November 27, 2008 at 6:08 PM
ಅವಿನಾಶ್,
ನನ್ನ ಹೊಸ ಬ್ಲಾಗ್ ಶುರುವಾಗಿದೆ. ಒಳ್ಗೇನಿಲ್ಲ. ಬರೆಯಲು ಒಂಚೂರು ಸಮಯ ಸಿಕ್ಕರೂ ಖಂಡಿತ ಬರೆಯುತ್ತೇನೆ. ಅದ್ಸರಿ, ಹಲವು ದಿನಗಳಿಂದ ನಿಮ್ಮ ಪತ್ತೆ ಇಲ್ಲ… ಎಲ್ಲಿ ಮರೆಯಾದಿರಿ ? ನುಡಿಯಿಂದ ಕನ್ವರ್ಟ್ ಮಾಡಬಲ್ಲ ಟ್ರಿಕ್ ಹೇಳ್ತೀರಿ ಅಂತ ಕಾದು ಕಾದು ನನ್ನ ಕತ್ತು ಉದ್ದ ಆಗಿದೆ. ನಾನಾಗಿ ನಾನು ಹುಡುಕಿಕೊಳ್ಳುವ ಮೊದಲು ನೀವೇ ಹೇಳಿಬಿಡಿ.
ಬರ್ಲಾ….
http://minchulli.wordpress.com
Posted by minchulli on November 28, 2008 at 6:29 PM
ಏನೂ ಪರವಾಗಿಲ್ಲ. ಸುಮ್ಮನೆ ಕೇಳಿದೆ ಅಷ್ಟೆ. ಅಂಥಾ ಅರ್ಜೆಂಟು ನಂಗೂ ಏನಿಲ್ಲ.. ಕೆಲಸ ಮುಗಿಸಿಕೊಂಡು ಬಂದ ಮೇಲೆ ಉತ್ತರಿಸಿ. ಬರ್ಲಾ….
Posted by Avi on November 29, 2008 at 10:47 AM
ಹಲೋ ಮಿಂಚುಳ್ಳಿ,
ಬ್ಲಾಗು ಆರಂಭಿಸಿದ್ದು ಒಳ್ಳೆಯ ಪ್ರಯತ್ನ. ಶಮ ಇನ್ನು ಬರೆಯಲು ಶುರು ಮಾಡ್ತಾರೆ.
Posted by ಗುರು ಬಾಳಿಗ on January 21, 2009 at 6:04 PM
ಅವಿನಾಶ್!
ಫಕ್ಕನೆ ನನ್ನ ಬ್ಲಾಗಿಗೆ ಬಂದು ಖೋ ಕೊಟ್ಟು ಕಾಣೆಯಾದಿರಲ್ಲ.
ಹುಡುಕುತ್ತಾ ಇಲ್ಲಿ ಬಂದಾಗ ನಿಮ್ಮ ಅಭಿಮಾನಿಗಳ ದಂಡು ನೋಡಿ ಬೆರಗಾದೆ. ನೀವು ಚೆನ್ನೈಗೆ ಹಾರಿದ ಸುದ್ದಿ ಇಲ್ಲಿಯೇ ಓದಿ ಇನ್ನೇನು ಕುಮಾರನಾಥ್, ಚಂದ್ರಕಾಂತ್ ಮೊದಲಾದವರ ಬಗ್ಗೆಲ್ಲ ಕೇಳಬೇಕು ಅಂತೆಲ್ಲ ಯೋಚಿಸುತ್ತಾ ಬಂದಿದ್ದು ನುಂಗಿ ಬಿಟ್ಟೆ.
ಒಳಿತಾಗಲಿ. ಇನ್ನು ಸಿಕ್ತಾ ಇರ್ತಿರಲ್ಲ.
ಗುರು ಬಾಳಿಗ
Posted by Avi on January 24, 2009 at 7:04 PM
ಗುರುದತ್,
ಎಷ್ಟು ಸಮಯ ಆಯ್ತು ನಿಮ್ಮನ್ನು ನೋಡಿ… ಬರ್ತಾ ಇರಿ. ದಿಲ್ಲಿಯಲ್ಲೇನು ಮಾಡ್ತಾ ಇದ್ದೀರಿ.
ಶುಭವಾಗಲಿ.
Posted by Manju on January 31, 2009 at 11:43 AM
Avinash
Nimma Baravanige tumba chennagide
Posted by Avinash on February 2, 2009 at 8:59 AM
ಮಂಜು ಅವರೆ,
ಬ್ಲಾಗಿಗೆ ಬಂದು ಸಕ್ಕರೆ ಮಾತಾಡಿದ್ದಕ್ಕೆ ಧನ್ಯವಾದ. ನೀವೇಕೆ ಬ್ಲಾಗಿಸಬಾರದು? ಯೋಚಿಸಿ.
Posted by devdas suvarna on June 25, 2009 at 11:51 AM
namaskaara sar nimage devdas na tumba namaskaaragalu
Posted by Avinash on July 8, 2009 at 9:47 AM
ನಿಮಗೂ ನಮಸ್ಕಾರ. ನೀವು ಕೂಡ ಬ್ಲಾಗು ಆರಂಭಿಸಬಹುದಲ್ವಾ?
Posted by anamika on July 10, 2009 at 9:19 AM
interesting. ನೀವು ಕರಾವಳಿಯವರ ಮರಾಯರೆ. ತುಂಭಾ ಚೆನ್ನಾಗಿದೆ. ನಿಮ್ಮ ಬಗ್ಗೆ ತಿಳಿದು ಖುಶಿಯಾಯಿತು.
Posted by Avinash on July 16, 2009 at 6:52 PM
ಅನಾಮಿಕರೆ, ಬ್ಲಾಗಿಗೆ ಸ್ವಾಗತ, ನೀವೂ ಕರಾವಳಿಯವರಾಗಿರಬಹುದು. ನಿಮ್ಮ ಬ್ಲಾಗು ಇಲ್ಲವೇ?
Posted by umesh vashist on August 4, 2009 at 7:24 PM
Nimma yradu mooru lekhanagalannu oadide chennagide naanu hosadaagi kannada blogige serikondiddu matte nive nanna modala snehitaraagiddu ivattu about u oodide nimma bagge neevu chennaagitilisiddiri devaru nimage olledannu maadali
Posted by Avinash on August 6, 2009 at 8:34 PM
ನಮಸ್ಕಾರ ಉಮೇಶ್ ಅವರಿಗೆ, ಹೀಗೇ ಬರ್ತಾ ಇರಿ…
Posted by lingadevaru on September 2, 2009 at 6:05 PM
to
avinash
after a long time i saw your blog, i am very happy to see u on kannada blog
this is same old lingadevaru from tiptur kalpataru college.
i am in bangalore working for an NGO as data management and web portal manager.
Posted by k.m.basavarajappa on September 11, 2009 at 8:39 PM
Namaskara
naanu K.M.Basavarajappa , mtte bhetiyagona.
Posted by Avinash on October 8, 2009 at 3:54 PM
ಲಿಂಗದೇವರು, ಮತ್ತೆ ಹೇಗಿದ್ದೀರಿ… ಪತ್ತೇನೆ ಇಲ್ಲ… ದಯವಿಟ್ಟು ಸಂಪರ್ಕಿಸಿ… ಮೇಲ್ ಐಡಿ ಕೊಡಿ.
ಬಸವರಾಜರೇ ನಮಸ್ಕಾರ… ಬರ್ತಾ ಇರಿ.
Posted by lingadevaru on October 31, 2009 at 2:11 PM
Avinash
since one year I am in Bangalore. after November 2nd i am shifting to Mysore from Bangalore.
keep in touch with this email id lingadevaru@prajayatna.in
regards
lingadevaru