“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”

ನಮ್ಮಲ್ಲಿಲ್ಲದ್ದನ್ನು ಅಪ್ಪಿಕೊಳ್ಳುವುದರಲ್ಲಿ ಭಾರತೀಯರು ಒಂದು ಕೈ ಮುಂದೆಯೇ ಎಂಬುದು ಅದೆಷ್ಟೊ ದೃಷ್ಟಾಂತಗಳಿಂದ ಈಗಾಗಲೇ ಸಾಬೀತಾಗಿದೆ. ತೀರಾ ಇತ್ತೀಚೆಗೆ ಭಾರತೀಯವಲ್ಲದ ಆದರೆ ಭಾರತೀಯ ಯುವಜನಾಂಗವೆಲ್ಲಾ ಪ್ರೀತಿಯಿಂದ ಅಪ್ಪಿಕೊಂಡಿರುವ ಸಂಪ್ರದಾಯವಾದ ವ್ಯಾಲೆಂಟೈನ್ಸ್ ದಿನವನ್ನು ಇಡೀ ದೇಶವೇ ಭರ್ಜರಿಯಾಗಿ ಆಚರಿಸಿತು.

ಇಂಥದ್ದನ್ನು ಆಚರಿಸಬೇಕು, ಇಂಥದ್ದನ್ನು ಆಚರಿಸಬಾರದು ಎಂಬುದೆಲ್ಲಾ ಅವರವರ ಮನೋಭಾವಗಳಿಗೆ ಬಿಟ್ಟ ವಿಷಯ. ಆದರೆ ಈ ಆಚರಣೆಯಲ್ಲಿ ಮಾಧ್ಯಮಗಳ ಪಾತ್ರ ಎಷ್ಟು ಎಂಬುದರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮುದ್ರಣ ಮಾಧ್ಯಮದಲ್ಲಾಗಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಾಗಲಿ ಇಂಥದ್ದೊಂದು ಸಂಪ್ರದಾಯದ ಕುರಿತು ಭರ್ಜರಿ ಪ್ರಚಾರ ನೀಡಿರುವುದನ್ನು ಗಮನಿಸಿದ್ದೀರಾ? ಸುದ್ದಿ ಬಿತ್ತರಿಸಬೇಕಾದ ಚಾನೆಲ್‌ಗಳು ಕೂಡ ಈ ಪ್ರೇಮಿಗಳ ದಿನಾಚರಣೆ ಕುರಿತಾಗಿ ವಿಶೇಷ ಎಪಿಸೋಡ್‌ಗಳನ್ನು ಸೃಷ್ಟಿ ಮಾಡಿ ಪದೇ ಪದೇ ಬಿತ್ತರಿಸುತ್ತಿದ್ದವು. ಮುದ್ರಣ ಮಾಧ್ಯಮಗಳಲ್ಲೂ ಇದಕ್ಕಾಗಿಯೇ ವಿಶೇಷ ಪುರವಣಿ ಅಥವಾ ಕನಿಷ್ಠ ಒಂದು ಲೇಖನ ಮೀಸಲಿಡದ ಪತ್ರಿಕೆ/ಮ್ಯಾಗಜಿನ್ ಇಲ್ಲವೇ ಇಲ್ಲ ಎಂದೇ ಹೇಳಬಹುದು.

ಇದು ಗ್ರೀಟಿಂಗ್ ಕಾರ್ಡ್ಸ್ ಅಥವಾ ಚಿನ್ನ, ಉಡುಗೆ ಮುಂತಾದವುಗಳನ್ನು ಮಾರಾಟ ಮಾಡುವ ಕಂಪನಿಗಳ ಜಾಹೀರಾತಿಗೆ, ಮಾರಾಟ ವರ್ಧನೆಗೊಂದು ಒಳ್ಳೆಯ ಅವಕಾಶವಾಗಿಬಿಟ್ಟಿರುವುದರಿಂದ ಇಂಥದ್ದೊಂದು ದಿನಗಳಿಗೆ ಭರ್ಜರಿ ಪ್ರಚಾರ ಸಿಕ್ಕಿರುತ್ತದೆ ಎನ್ನುವುದನ್ನೂ ಅಲ್ಲಗಳೆಯಲಾಗದು. ಇದು ಪ್ರೇಮಿಗಳ ದಿನಕ್ಕೆ ಮಾತ್ರವಲ್ಲ, ಅಪ್ಪನ ದಿನ, ಅಮ್ಮನ ದಿನ, ಮಹಿಳೆಯರ ದಿನ, ಪುರುಷರ ದಿನ, ಯುವಕರ ದಿನ, ಹಿರಿಯರ ದಿನ, ಮಕ್ಕಳ ದಿನ, ಶಿಕ್ಷಕರ ದಿನ, ವೈದ್ಯರ ದಿನ, ಗೆಳೆಯರ ದಿನ ಎಂಬಿತ್ಯಾದಿ ಸಕಲ ಜೀವರಾಶಿಗಳಿಗೂ ಒಂದೊಂದು ದಿನದೊಂದಿಗೆ, ಮೂರ್ಖರಿಗೂ ಒಂದು ದಿನ ಇದ್ದು, ಅವುಗಳು ಕೂಡ ಕಾರ್ಪೊರೇಟ್ ಸಂಸ್ಕೃತಿಯ ಕರಿಛಾಯೆಯಡಿಯಲ್ಲಿ ಆಚರಣೆಗೊಳ್ಳುತ್ತಿವೆ.

ಇದರಿಂದಾಗಿಯೇ ಮಾಧ್ಯಮಗಳಲ್ಲೂ ಈ ದಿನಗಳ ಆಚರಣೆಗೊಂದು hype ಹುಟ್ಟಿಕೊಂಡಿವೆ. ಅಂಥಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಿಂದ ವೀಕ್ಷಕರು ಖಂಡಿತವಾಗಿ ಅದರ ಪ್ರಭಾವಕ್ಕೊಳಗಾಗುತ್ತಾರೆ ಎಂಬುದು ಸ್ಪಷ್ಟ.

ಆದರೆ ತಪ್ಪುಗಳನ್ನು (Negative effect) ಒಪ್ಪಿಕೊಳ್ಳುವಷ್ಟು ಶೀಘ್ರವಾಗಿ ಧನಾತ್ಮಕ ವಿಷಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರುವುದು ಮಾನವ ಸಹಜ ಗುಣ. ಹಾಗಾಗಿ ಭವಿಷ್ಯಕ್ಕೆ ಮೆಟ್ಟಿಲಾಗಬೇಕಾದ ಕಾಲೇಜು ಜೀವನದಲ್ಲಿ ಪ್ರೇಯಸಿ-ಪ್ರಿಯಕರರಿಗಾಗಿ ಮನಬಂದಂತೆ ಖರ್ಚು ಮಾಡುವುದು ತಪ್ಪಲ್ಲ, ಭರ್ಜರಿ, ಐಷಾರಾಮಿ, ದುಬಾರಿ ಉಡುಗೊರೆ ಕೊಟ್ಟರಷ್ಟೇ ತಮ್ಮ ಪ್ರೀತಿ, ಪ್ರೇಮ ಅಮರವಾಗುತ್ತದೆ, ಮಧುರವಾಗುತ್ತದೆ, ಹಿರಿಯರ, ಪೋಷಕರ ಮೇಲೆ ಗೌರವ ಹೆಚ್ಚುತ್ತದೆ (ಅಪ್ಪ-ಅಮ್ಮನ ದಿನಾಚರಣೆ, ಹಿರಿಯರ ಅಥವಾ ಶಿಕ್ಷಕರ ದಿನಾಚರಣೆಯಲ್ಲಾದರೆ) ಎಂಬಿತ್ಯಾದಿ ತಪ್ಪು ಕಲ್ಪನೆಗಳೂ ಸುಲಭವಾಗಿಯೇ ಆವರಿಸಿಕೊಂಡುಬಿಡುತ್ತದೆ. ಇನ್ನೊಂದೆಡೆ ದುಬಾರಿ ಉಡುಗೊರೆ ಖರೀದಿಸಲು ಶಕ್ತರಾಗದವರು ತನ್ನ ಪ್ರೀತಿಯೇ ಸರಿ ಇಲ್ಲ, ಪ್ರೀತಿಸಲು ನಾನು ನಾಲಾಯಕ್ಕು, ಹಿರಿಯರ ಬಗ್ಗೆ ನನಗೊಂದಿಷ್ಟೂ ಗೌರವವಿಲ್ಲ ಮುಂತಾಗಿ ಒಳಗೊಳಗೇ ಕೊರಗುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು.

ಒಟ್ಟಿನಲ್ಲಿ ಪ್ರೀತಿ ತೋರಿಸಲು, ಗೌರವ ತೋರಿಸಲು, ಮೆಚ್ಚುಗೆ ತೋರಿಸಲು ನಮಗೊಂದು ನೆವನ ಬೇಕು ಅಷ್ಟೆ. ಉಳಿದ ದಿನಗಳಲ್ಲಿ ಈ ರೀತಿ ಮಾಡಿದರೆ ಅದು ನಾಟಕೀಯವಾಗುತ್ತದೆ ಎಂಬಷ್ಟರ ಮಟ್ಟಿಗೆ ಕಾಲ ಬದಲಾಗಿಬಿಟ್ಟಿದೆ.

ಹಾಗಿದ್ದರೆ ಪ್ರೀತಿ, ಪ್ರೇಮ, ಗೌರವ, ಮೆಚ್ಚುಗೆ ಇಂಥ ಭಾವನೆಗಳೆಲ್ಲವನ್ನೂ ನಾವು ಆಯಾ ದಿನಗಳಿಗಷ್ಟೇ ಸೀಮಿತವಾಗಿರಿಸಬೇಕೇ? ಬೇರೆ ದಿನಗಳಲ್ಲಿ ಈ ಭಾವಾಭಿವ್ಯಕ್ತಿಗಳೆಲ್ಲವೂ ನಾಟಕೀಯ ಎಂದಾಗದಂತೆ ಮಾಡಲು ಏನು ಮಾಡಬೇಕು? ಇದರಲ್ಲಿ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಜವಾಬ್ದಾರಿಯೇನು? ಇವುಗಳ ಬಗ್ಗೆ ಚರ್ಚೆಯಾಗಲಿ.