ಕನ್ನಡ ಲಿಪಿ ಸರಳೀಕರಣ: ಬದಲಾವಣೆಯ ಹೆಸರಲ್ಲಿ ಅಧ್ವಾನ ಬೇಡ

Leave a comment

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ಒಂದು ವಿಷಯ, ವಸ್ತು, ವ್ಯಕ್ತಿಯ ಬಗ್ಗೆ ಹೆಚ್ಚು ಪ್ರೀತಿ ಹುಟ್ಟುವುದು ಯಾವಾಗ? ಅವು/ಆ ವ್ಯಕ್ತಿ ನಮ್ಮಿಂದ ದೂರವಿದ್ದಾಗ. ಇದು ಅನುಭವದ ಮಾತು. ಆರು ವರ್ಷ ಚೆನ್ನೈಯಲ್ಲಿದ್ದು ಕನ್ನಡ ನಾಡಿಗೆ ಮರಳಿದಾಗ, ಕನ್ನಡವನ್ನು ದಿನವಿಡೀ ಕೇಳತೊಡಗಿದಾಗ ಮತ್ತು ಕನ್ನಡ ಲಿಪಿಯ ಸರಳೀಕರಣ ಕುರಿತು ‘ಸಾಪ್ತಾಹಿಕ ಲವಲವಿಕೆ’ಯಲ್ಲಿ ನಡೆಯುತ್ತಿರುವ ಸಂವಾದ ಸರಣಿಯನ್ನು ಓದಿದಾಗ, ನನ್ನ ಅನುಭವಗಳನ್ನೂ ಹಂಚಿಕೊಳ್ಳಬೇಕೆನಿಸಿತು.

ತಮಿಳೇ ನಮಗೆ ಮಾದರಿ ಎಂಬರ್ಥದ ವಾದವನ್ನು ಕೇಳುವಾಗ ನನಗೆ ಕಾಡುವುದು ವ್ಯಂಜನಗಳಲ್ಲಿ ಕ, ಙ, ಚ, ಞ, ಟ, ಣ, ತ, ನ, ಪ, ಮ ಮಾತ್ರವೇ ಇರುವ ಆ ಭಾಷಿಕರೊಂದಿಗೆ ಶಾಬ್ದಿಕ ಸಂವಹನ ಹೇಗೆ ನಡೆಸುವುದು ಎಂಬ ಪ್ರಶ್ನೆ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ರಾಹುಲ್ ಗಾಂಧಿ ಚೆನ್ನೈಗೆ ಭೇಟಿ ಕೊಟ್ಟಾಗ ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿದ್ದು ರಾಕುಲ್ ಗಾಂಧಿ ಎಂಬ ಸ್ಪೆಲ್ಲಿಂಗೇ! ಇನ್ನೊಂದು ಅನುಭವ ಕೇಳಿ. ವೆಸ್ಟ್ ಮಾಂಬಳಂ ಎಂಬಲ್ಲಿರುವ ಹೋಟೆಲಿನ ಬೋರ್ಡನ್ನು ನಾನು ಬಕ್ಯ ಎಂದು ಓದಿದಾಗ ತಮಿಳು ಗೆಳೆಯರು ಬಿದ್ದು ಬಿದ್ದು ನಕ್ಕಿದ್ದರು. ಅದು ನಿಜಕ್ಕೂ ಭಾಗ್ಯ ಹೋಟೆಲ್! ಆದರೆ ಸ್ಪೆಲ್ಲಿಂಗ್ ಮಾತ್ರ ಹಾಗೆ! ಅವರು ಅತಿಥಿ, ಭಾಭೀ, ಭಗವಾನ್ ಎಂಬಿತ್ಯಾದಿ ಪದಗಳನ್ನು ಬರೆಯಲು ತಿಣುಕಾಡುವುದನ್ನು ಕಂಡಿದ್ದೇನೆ, ಕೇಳಿದ್ದೇನೆ. ಅದು ಒತ್ತಟ್ಟಿಗಿರಲಿ, ಅಂತರ್ಜಾಲದಲ್ಲಿ ಸರ್ವಸ್ವವನ್ನೂ ನಮ್ಮ ಮುಂದಿಡುವ ‘ಗೂಗಲ್’ ಅನ್ನು ‘ಕೂಕುಲ್’ ಅಂತ ಕರೆದರೆ ಯಾರಿಗೇನಾಗಬೇಡ? ವಿಷಯವೇನೆಂದರೆ ಅವರಿಗೆ ತಮ್ಮ ತಮಿಳು ಲಿಪಿಯಲ್ಲಿರುವಂತೆಯೇ ಆಂಗ್ಲದಲ್ಲಿಯೂ K-G (ಕ-ಗ), T-D (ತ-ದ), P-B (ಪ-ಬ) ಗಳ ನಡುವೆ ವ್ಯತ್ಯಾಸವೇ ಇಲ್ಲವೆಂಬಂತಹಾ ಮನೋಭಾವನೆ ಬಂದುಬಿಟ್ಟಿದೆ ಅನಿಸುತ್ತದೆ.

ಇನ್ನೊಂದು ಉದಾಹರಣೆ. ತಮಿಳುನಾಡು ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ತಂಗಬಾಲು ಎಂಬ ಹೆಸರನ್ನು ತಂಗಬಾಲು ಅಂತಲೇ ಉಚ್ಚರಿಸುತ್ತಾರಾದರೂ, ತಮಿಳು ಲಿಪಿಯಲ್ಲಿ ಬರೆಯುವಂತೆಯೇ ಇಂಗ್ಲೀಷಿನಲ್ಲೂ ತಂಗ್‌ಕಬಾಲು (Tangkabalu ತ-ಇಂಗ್-ಕ-ಬಾ-ಲು) ಎಂದೇ ಬರೆಯುತ್ತಾರೆ. ಇದರ ಕನ್ನಡೀಕರಣಕ್ಕೆ ಹೊರಟಾಗ ತಬ್ಬಿಬ್ಬಾಗುವುದು ಸಹಜ. ಅಂದರೆ ಅರ್ಧಾಕ್ಷರಗಳ ವಿಭಜನೆ ಯಾವ ರೀತಿಯಿದೆ ಎಂದರೆ, ತಂಗ ಎಂಬುದನ್ನು ನಾವು ತಂ ಮತ್ತು ಗ ಎಂದು ವಿಂಗಡಿಸಿದರೆ, ಅವರು ಇಂಗ್ಲಿಷಿನಂತೆಯೇ ತ (ta), ಇಂಗ್(ng) ಮತ್ತು ಕ (ka) ಎಂದು ವಿಂಗಡಿಸುತ್ತಾರೆ. (ಅಲ್ಲಿ ವ್ಯಂಜನಗಳು ಇಕ್ ಇಂಗ್ ಇಚ್ ಇಂಜ್ ಇಟ್ ಇನ್ ಇಮ್…. ಈ ಅರ್ಧಾಕ್ಷರಗಳ ರೂಪದಲ್ಲಿರುತ್ತದೆ. ಅಂದರೆ ಹಲಂತ ಅಕ್ಷರಗಳನ್ನು ಓದುವುದು ಕಷ್ಟ ಎಂಬ ಕಾರಣಕ್ಕೆ ಇ ಎಂಬ ಸ್ವರಾಕ್ಷರದಿಂದ ಆರಂಭಿಸಲಾಗುತ್ತದೆ).

ಇನ್ನು ಕ-ಕಾರ, ಗ-ಕಾರಗಳ ವ್ಯತ್ಯಾಸವು ಧ್ವನಿಯಲ್ಲಿ ಮಾತ್ರವಷ್ಟೇ ಹೊರತು, ಲಿಪಿಯಲ್ಲಿ ಇಲ್ಲ ಎಂಬ ಕಾರಣವು ಸಮಸ್ಯೆ ಉಂಟುಮಾಡದಿರಲಿ ಅಂತಲೋ ಅಥವಾ ನಮ್ಮದು ಸಂಸ್ಕೃತದ ಬೇರು ಅಲ್ಲ ಅಂತಲೋ ಹೇಳಿಕೊಳ್ಳುವುದಕ್ಕೆಂದೇ ಪ್ರತಿಯೊಂದಕ್ಕೂ ತಮಿಳು ಪದಗಳನ್ನು ಕಂಡುಹುಡುಕಿ ಬಳಸುತ್ತಿದ್ದಾರೆ ಎನ್ನುವುದು ಮೆಚ್ಚಬೇಕಾದ ಅಂಶ. ಗಣಪತಿ ಎಂದರೆ ಅದು ಕಣಬದಿ ಎಂದಾಗುವ ಅಪಾಯವಿದೆಯಲ್ಲಾ… ಅದನ್ನು ತಪ್ಪಿಸಲು ಏನು ಮಾಡಬೇಕು? ಆ ದೇವರಿಗೂ ತಮಿಳು ಹೆಸರನ್ನೇ ಕೊಡೋಣವೆಂದುಕೊಂಡು ಪುಳ್ಳೆಯಾರ್ ಅಂತ ಕರೆದರು ವಿಘ್ನೇಶ್ವರನನ್ನು. ಮಹಾವಿಷ್ಣುವನ್ನು ಪೆರುಮಾಳ್ ಆಗಿಯೂ, ಈಶ್ವರನನ್ನು ಸಿವನ್ ಆಗಿಯೂ, ಷಣ್ಮುಖನನ್ನು ಆರ್ಮುಗಂ ಆಗಿಯೂ, ದುರ್ಗೆಯನ್ನು ಅಂಬಾಳ್ ಆಗಿಯೂ ಪೂಜಿಸಲಾರಂಭಿಸಿದರು. ಸಂಸ್ಕೃತ ಕಷ್ಟವಾಗುತ್ತದೆ ಎಂದುಕೊಂಡು ತಮಿಳು ಮಂತ್ರಗಳನ್ನೇ ಮಾಡಿಕೊಂಡಿದ್ದಾರವರು. ಅಂಥ ಒಂದು ಸಾಲು – ಸ್ರೀ ಮಗಾ ಗಣವತತೇ ನಮಗಾ! (ಅರ್ಥವಾಗಲಿಲ್ವೇ? ಶ್ರೀ ಮಹಾ ಗಣಪತಯೇ ನಮಃ) ಲಿಪಿ ಸರಳೀಕರಣಕ್ಕೆ ಹೋಗಿ, ಬರೆಯುವುದಕ್ಕೂ- ಓದುವುದಕ್ಕೂ ಸಂಬಂಧವೇ ಇಲ್ಲದಂತಾದರೆ ಹೀಗಾಗುತ್ತದೆ ಎಂಬುದಕ್ಕೆ ಇಷ್ಟು ಹೇಳಬೇಕಾಯಿತು.

ಭಾಷೆ ಇರುವುದು ಸಂವಹನಕ್ಕೆ ಎಂಬ ಮೂಲಸೂತ್ರವನ್ನಿಟ್ಟುಕೊಂಡರೆ ಅಲ್ಪಪ್ರಾಣ, ಮಹಾಪ್ರಾಣಗಳು ಬೇಡ, ತಮಿಳಿನಲ್ಲಿರುವಂತೆ ಕನಿಷ್ಠ ಅಕ್ಷರಗಳಲ್ಲೇ ಮಾತು ಮುಗಿಸಿಬಿಡೋಣ ಎಂಬ ವಾದಕ್ಕೆ ನನ್ನ ತಕರಾರು ಇದೆ.

ಮಹಾಪ್ರಾಣ ಉಚ್ಚಾರಕ್ಕೆ ಕಷ್ಟ, ಬಳಕೆಗೆ ಕಷ್ಟ ಎಂದೆಲ್ಲಾ ಆರೋಪಿಸಲಾಗುತ್ತದೆ. ಆದರೆ, ಹ-ಅ; ನ-ಣ; ಲ-ಳ ಬದಲಾದರೆ ಗ್ರಂಥಭಾಷೆಯಿರಲಿ, ಆಡುಭಾಷೆಯೂ ಎಷ್ಟು ಅಧ್ವಾನಕ್ಕೊಳಗಾಗಬಹುದು? ದನಕ್ಕೂ ಧನಕ್ಕೂ ವ್ಯತ್ಯಾಸವಿಲ್ಲದಂತಾಗಬಹುದು, ವಿಫಲ ಹೋಗಿ ವಿಪುಲವೂ ಆದೀತು. ಉಲಿಯುವುದು ಉಳಿ ಆಗಬಹುದು. ಹೀಗಾಗಿ, ಮಹಾಪ್ರಾಣಗಳು ಇರುವುದರಿಂದಲೇ ಕನ್ನಡ ಕಲಿಕೆ ಕಷ್ಟ ಎಂಬ ವಾದ ಒಪ್ಪತಕ್ಕದ್ದಲ್ಲ. ಸುನಾಥ ದೇಶಪಾಂಡೆಯವರು (ವಿ.ಕ. 9 ಅಕ್ಟೋಬರ್ 2011) ಈ ಬಗ್ಗೆ ಜಾಯಮಾನಕ್ಕಿಂತ ಕಾಲಮಾನವೇ ದೊಡ್ಡದು ಎಂದು ವಿವರಿಸಿದ್ದಾರೆ.

ಲಿಪಿ ಸರಳೀಕರಣ ವಿಷಯದಲ್ಲಿ ಸಚಿನ್ ಕುಮಾರ್ ಹೀರೇಮಠ (ಸಾಪ್ತಾಹಿಕ, ಅ.30) ಅವರ ‘ಒಂದೇ ರೀತಿಯ ಧ್ವನಿಯುಳ್ಳ ಅಕ್ಷರಗಳನ್ನು ನಿವಾರಿಸುವ’ ಸಲಹೆ ಸೂಕ್ತವೆನಿಸಿದೆ. ಭಾಷೆಯ ಸೌಂದರ್ಯ ಕೆಡಬಾರದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿರಿಯರಾದ ನಿ.ಉಮಾಕಾಂತ (ಸಾಪ್ತಾಹಿಕ. ಅ.16) ಅವರು ಹೇಳಿರುವ ದ್ವಿತ್ವ ಶಬ್ದಗಳ ಬರವಣಿಗೆ ಶೈಲಿಯು ಬಹುತೇಕ ತಮಿಳನ್ನು (ಮೇಲೆ ‘ತಂಗಬಾಲು’ ಬಗ್ಗೆ ವಿವರಿಸಿದಂತೆ) ಹೋಲುವಂತಿದೆ. ಆ ಕಾರಣಕ್ಕೆ ಇದನ್ನು ವಿರೋಧಿಸುತ್ತಿಲ್ಲ, ಆದರೆ ಇದು (‘ಯುಕ್ತಾಕ್ಷರ’ ಎಂಬುದನ್ನು ‘ಯುಕ್‌ತಾಕ್‌ಷರ’ ಅಂತ ಬರೆಯುವುದು) ಭಾಷಾ ಸೌಂದರ್ಯವನ್ನು ಕೆಡಿಸಬಹುದು. ಮಿ.ವೆಂ.ಶ್ರೀನಿವಾಸರು ಚರ್ಚೆಯನ್ನು ಆರಂಭಿಸಿದ ಲೇಖನದಲ್ಲಿ (ಸಾಪ್ತಾಹಿಕ ಆ.14) ತಿಳಿಸಿದ ಕನ್ನಡ ಬರವಣಿಗೆಯ ಸುಧಾರಣೆಯ ವಿಧಾನ -1 ಇಂಥದ್ದು. ಬಹುಶಃ ಇದನ್ನು ಯಾರು ಕೂಡ ಒಪ್ಪಲಾರರು. ಆದರೆ ಅವರೇ ಉಲ್ಲೇಖಿಸಿದ ಸುಧಾರಣೆ ವಿಧಾನ 2 ನ್ನು ನೋಡಿದರೆ, ಮತ್ತು ಅವರೇ ಹೇಳಿದಂತೆ ‘ಕನ್ನಡವು ಒಂದು ಜೀವಂತ ಭಾಷೆ ಮತ್ತು ಬದಲಾವಣೆಗಳಿಗೆ ಸ್ಪಂದಿಸುತ್ತದೆ’ ಎಂಬ ಆಗ್ರಹಪೂರ್ವಕ ಮಾತಿನೇಟನ್ನೂ ಗಮನಿಸಿದರೆ, ಮತ್ತು ಅನ್ಯಭಾಷಿಕರಿಗೂ ಕನ್ನಡವು ಕಬ್ಬಿಣದ ಕಡಲೆಯಾಗದಂತಿರಲಿ ಎಂಬ ಆಶಯವನ್ನೂ ನೋಡಿದರೆ, ಒಪ್ಪಬಹುದು. ಇದರಲ್ಲಿಯೂ ಒಂದು ಕೊರೆ ಇದೆ. ಉದಾಹರಣೆಗೆ ಸ್ವಾಸ್ಥ್ಯ ಇದನ್ನು ಬರೆಯೋದು ಹೇಗೆ? ‘ಸ್‌ವಾಸ್‌ಥ್‌ಯ’ ಎಂಬುದು ಸ್ವೀಕಾರಾರ್ಹವಾಗಲಾರದು. ಈ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬೇಕಾಗಿದೆ.

ಒಟ್ಟಿನಲ್ಲಿ, ನಮ್ಮ ಭಾಷೆಯನ್ನು ನಾವೇ ಉತ್ತುಂಗಕ್ಕೇರಿಸೋಣ. ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್ ಆಗಿರುವ ಕನ್ನಡಿಗರ ಸಿರಿನುಡಿಯನ್ನು ಮತ್ತಷ್ಟು ಸುಪುಷ್ಟವಾಗಿಸಲು ಪೂರ್ವಗ್ರಹರಹಿತ, ಸಂಘಟಿತ ಪ್ರಯತ್ನ ಮಾಡೋಣ. ಕನ್ನಡ ಉಲಿಯುವ ಬಗ್ಗೆ ಮತ್ತು ಉಳಿಸುವ ಬಗ್ಗೆ ಹೆಮ್ಮೆ ಪಡೋಣ, ಕನ್ನಡವನ್ನು ಮತ್ತಷ್ಟು ಸಮೃದ್ಧವಾಗಿಸೋಣ.

ಬಂದಿದೆ ಜನವರಿ, ಮಾಡ್ಕೋಬೇಡಿ ವರಿ!

Leave a comment

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ನಿಮ್ ಕೈಲಾಗೋ ಹೊಸ ವರ್ಷ ನಿರ್ಣಯಗಳಿಲ್ಲಿವೆ
ದೇಹವೂ ಸ್ವಸ್ಥ, ದೇಶವೂ ಸ್ವಚ್ಛ

ಹೇಳದೇ ಕೇಳದೇ ಮತ್ತೊಂದು ಜನವರಿ 1 ಬಂದಿದೆ. ಅಂಥದ್ದೊಂದು ದಿನಾಂಕ ಇಷ್ಟು ಬೇಗ ಬರುತ್ತದೆಯೆಂಬುದು ನನಗೇನು ಗೊತ್ತು? ಮೊನ್ನೆಯಷ್ಟೇ ನಾನೊಂದು ಶಪಥ ಮಾಡಿದ್ದು ನೆನಪಿದೆ. ಇನ್ನೇನು ಅದನ್ನು ಪೂರೈಸುವ ಪ್ರಯತ್ನ ‘ಆರಂಭಿಸೋಣ’ ಅಂದುಕೊಳ್ಳುತ್ತಿರುವಾಗಲೇ, ಅದಾಗಲೇ ಮತ್ತೆ ಹೊಸ ವರ್ಷ ಬಂದೇಬಿಟ್ಟಿತಲ್ಲ! ಕಾಲ ಯಾರನ್ನೂ ಕಾಯುವುದಿಲ್ಲ ಅಂತ ನನಗೀಗ ಗೊತ್ತಾಗಿದೆ. ಇನ್ನಾದರೂ ಹೊಸ ವರ್ಷದ ನಿರ್ಣಯವನ್ನು ಕೈಗೊಂಡಂದಿನಿಂದಲೇ ಸಾಧಿಸುವ ಪ್ರಯತ್ನಕ್ಕೆ ಮುಂದಾಗಬೇಕು ಅಂದುಕೊಳ್ಳುವುದು ಪ್ರತಿ ವರ್ಷದ ಕಾರ್ಯಕ್ರಮವಾಗಿಬಿಟ್ಟಿದೆಯೇ? ಹೊಸ ವರ್ಷದ ರೆಸೊಲ್ಯುಶನ್ ಕೈಗೊಳ್ಳಲು ಇಲ್ಲೊಂದು ಸುಲಭ ಮಾರ್ಗವಿದೆ. ಇದರಿಂದ ದೇಹವೂ, ದೇಶವೂ ಕೊಂಚ ಮಟ್ಟಿಗೆ ಸ್ವಸ್ಥವಾಗುವುದು ಗ್ಯಾರಂಟಿ.

ಬೇರೇನೇ ಶಪಥ ಮಾಡಿದರೂ ಪೂರ್ಣಗೊಳಿಸುವುದು ಅಷ್ಟರಲ್ಲೇ ಇದೆ. ಹೀಗಾಗಿ ದೇಶವನ್ನು ವ್ರಣದಂತೆ ಕಾಡುತ್ತಿರುವ ಭ್ರಷ್ಟಾಚಾರವನ್ನು ಗುಡಿಸಿ ಕಸ ತೆಗೆಯಲು ಪೊರಕೆ ಹಿಡಿದು ಒಂದಿಷ್ಟು ಪ್ರಯತ್ನಿಸಬಾರದೇಕೆ?

ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ದೇಶವ್ಯಾಪಿ ಆಂದೋಲನಕ್ಕೆ ಪೂರಕವಾಗಿ ಏನನ್ನಾದರೂ ಮಾಡಿ, ಅದಕ್ಕೆ ಕೊಂಚವಾದರೂ ಅಳಿಲು ಸೇವೆ ನಡೆಸೋಣ ಅಂತ ಪ್ಲ್ಯಾನ್ ಹಾಕಿಕೊಳ್ಳಿ. ಈ ಬಾರಿ ಒಬ್ಬನಾದರೂ ಭ್ರಷ್ಟಾಚಾರಿಯನ್ನು ಕಾನೂನಿನ ಕಬಂಧ ಬಾಹುಗಳಡಿ ಸಿಲುಕಿಸಿಯೇ ತೀರುತ್ತೇನೆ ಅಂತ ಶಪಥ ಮಾಡಿ ನೋಡೋಣ. ನಿಮ್ಮ ಧೈರ್ಯ, ಸ್ಥೈರ್ಯ, ಸಾಹಸ ಪ್ರವೃತ್ತಿಗಳು ನಿಮ್ಮ ನೆರವಿಗೆ ಬಂದೇ ಬರುತ್ತವೆ. ಒಂದಾದ ಮೇಲೊಂದರಂತೆ ನಿರ್ಣಯಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ.

* ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ, ಅಲ್ಲಿಂದಲೇ ಆರಂಭಿಸಿ. ಬೇಕಾಬಿಟ್ಟಿಯಾಗಿ ಆ ಶುಲ್ಕ-ಈ ಶುಲ್ಕ ಹೆಸರಿನಲ್ಲಿ ಹಣ ಸುಲಿಯುವ ಶಾಲೆಗಳು ಬೋಧನಾ ಶುಲ್ಕ ಹೆಸರಿನಲ್ಲಿಯೋ, ಕಟ್ಟಡ ಅಭಿವೃದ್ಧಿ ಎಂಬ ನೆಪದಲ್ಲೋ ಏನೇನೋ ಸಬೂಬು ಹೇಳಿಯೋ ವಂತಿಗೆ ಸಂಗ್ರಹಿಸುತ್ತವಲ್ಲ… ಅಂಥವರಿಗೆ ಕಾನೂನಿನ ಚುರುಕು ಮುಟ್ಟಿಸುತ್ತೇವೆ ಅಂತ ಒಂದು ನಿರ್ಣಯ ಕೈಗೊಳ್ಳಿ. ಶಾಲೆಗೆ ಏನೇ ದುಡ್ಡು ಕೊಟ್ಟರೂ ರಶೀದಿ ಪಡೆಯಲು ಮರೆಯಬೇಡಿ. (ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಹಾಕಿರುತ್ತಾರಲ್ಲ…. ‘ಚೀಟಿ ಕೇಳಿ ಪಡೆಯಿರಿ’, ಅದನ್ನು ಎಲ್ಲ ಕಡೆ ಅನುಸರಿಸಿಬಿಡಿ!) ಈ ರಶೀದಿಯೇ ನಿಮಗೆ ಅಸ್ತ್ರ. ಅದನ್ನೇ ಹಿಡಿದುಕೊಂಡು ನೀವು ನ್ಯಾಯಾಲಯದ ಮೊರೆಯನ್ನೂ ಹೋಗಬಹುದು.

* ಇನ್ನು, ಎಲ್ಲ ದಾಖಲೆ ಪತ್ರಗಳು ಸರಿಯಾಗಿದ್ದರೂ, ವಾಹನ ಸವಾರರನ್ನು ರಸ್ತೆಯ ಮೂಲೆಗೆ ಬರುವಂತೆ ತಡೆದು ನಿಲ್ಲಿಸಿ, ಅತಿ ವೇಗವಾಗಿ ಗಾಡಿ ಓಡಿಸುತ್ತಿದ್ದೀ ಅಂತೆಲ್ಲಾ ಹೇಳಿ, ‘ಚಾ ಕುಡಿಯಲು ಒಂದಿಷ್ಟು ಕೊಟ್ಟರೆ ಬಿಡ್ತೀವಿ, ಇಲ್ಲಾಂದ್ರೆ, ಏನಾದರೂ ರಶೀದಿ ಬರೆದುಬಿಟ್ರೆ ಕನಿಷ್ಠ ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ’ ಅಂತ ಬೆದರಿಸೋ ಟ್ರಾಫಿಕ್ಕು ಪೊಲೀಸರಿಗೊಂದು ಪಾಠ ಕಲಿಸಿಯೇ ತೀರುತ್ತೇನೆ ಅಂತ ಕೂಡ ನಾವೊಂದು ‘ಗುರಿ’ ಇರಿಸಿಕೊಳ್ಳಬಹುದು. ಅದರ ಮಧ್ಯೆ, ‘ಸಾವ್ಕಾರ್ರು ಜೀಪಿನಲ್ಲಿ ಕೂತಿದ್ದಾರೆ, ನಂಗೇನೋ ನಡೆಯುತ್ತೆ, ಅವರಿಗೆ ಸಾಕಾಗಲ್ಲ’ ಅಂತ ಹೆಚ್ಚು ಪೀಕಿಸುವ ಪ್ರಯತ್ನವೇನಾದರೂ ಮಾಡಿದರಂತೂ ನಿಮಗೆ ನಿಮ್ಮ ಶಪಥ ಪೂರೈಸುವ ಅವಕಾಶ ದುಪ್ಪಟ್ಟಾಗಿಬಿಡುತ್ತದೆ ಅಂತ ಹೆಮ್ಮೆ ಪಟ್ಟುಕೊಂಡು ಮುಂದುವರಿದುಬಿಡಿ.

* ಔಷಧಿಯಲ್ಲೋ, ದಿನ ಬಳಕೆ ವಸ್ತುಗಳಲ್ಲೋ, ಎಂಆರ್‌ಪಿ (ಗರಿಷ್ಠ ಮಾರಾಟ ಬೆಲೆ)ಗಿಂತ ಹೆಚ್ಚು ದುಡ್ಡು ಕೀಳುವ ಪರಿಸ್ಥಿತಿಯೇನಾದರೂ ನಿಮಗೆ ಎದುರಾದರಂತೂ ನಿಮ್ಮ ಛಾನ್ಸ್! ಅದೇ ಮೊತ್ತಕ್ಕೆ ಬಿಲ್ ಕೇಳಿದಲ್ಲಿ ನಿಮ್ಮ ‘ಶಪಥ’ ಪೂರೈಸುವ ಕೆಲಸವಂತೂ ಸಿಕ್ಕಾಪಟ್ಟೆ ಸುಲಭವಾಗಿಬಿಡುತ್ತದೆ.

* ಸಾರಿಗೆ ಕಚೇರಿಗೆ ಹೋಗಿ ಕಲಿಕಾ ಪರವಾನಗಿಯೋ, ಅಥವಾ ಪೂರ್ಣ ಲೈಸೆನ್ಸ್ ಮಾಡಿಸಲು ಹೋಗುತ್ತೀರೆಂದುಕೊಳ್ಳಿ. ಅಲ್ಲಿ ಇಂಥಾ ಕೆಲಸಕ್ಕೆ ಇಂತಿಷ್ಟು ಅಂತ ಪಟ್ಟಿಯಲ್ಲಿ ಶುಲ್ಕದ ಮೊತ್ತ ಬರೆದಿರುತ್ತಾರೆ. ಅದಕ್ಕಿಂತ ಹೆಚ್ಚು ಹಣ ತೆರುವ ಪರಿಸ್ಥಿತಿ ಬಂದಿತೇ? ಅದನ್ನು “ಸಾಹೇಬ್ರ ಕೊಠಡಿಗೆ” ಸಹಿಗಾಗಿ ಕಳುಹಿಸುವ ಜವಾನನೊಬ್ಬ, ಅದ್ಯಾವುದೋ ಮುದ್ರಿತ ಸ್ಟ್ಯಾಂಪ್ ಅಥವಾ ಇನ್ನೇನನ್ನೋ ತೋರಿಸಿ, ಇದಕ್ಕೆ ಇಪ್ಪತ್ರೂಪಾಯಿ ಆಗುತ್ತೆ ಅಂತ ಹಣ ಕೀಳಲು ಪ್ರಯತ್ನಿಸಿದ ಅಂದುಕೊಳ್ಳಿ. ಸಂದೇಹವೇ ಬೇಡ, ಅತ ಬೇರಾರೂ ಅಲ್ಲ, ಪರಮ ಭ್ರಷ್ಟಾಚಾರಿಯೇ! ನಿಮ್ಮ ಹೊಸ ವರ್ಷದ ಪ್ರತಿಜ್ಞೆ ಪೂರೈಸಿದಂತೆಯೇ ಅಲ್ಲವೇ? ಆ ಕೆಲಸವನ್ನು ಅದೆಷ್ಟು ಸುಲಭವಾಗಿಸಿದ ಪುಣ್ಯಾತ್ಮ!

* ಸರಕಾರದಿಂದ ನಿಮಗೇನಾದರೂ ಸವಲತ್ತು ದೊರೆಯುತ್ತದೆ ಎಂದುಕೊಳ್ಳೋಣ. ಅಂಗ ಊನತೆಯುಳ್ಳವರಿಗೋ, ಕಡಿಮೆ ಆದಾಯದವರಿಗೋ, ಅನಾಥ ಕುಟುಂಬದವರಿಗೋ, ರೈತರಿಗೋ… ಹೀಗೆ ನಾನಾ ಸವಲತ್ತುಗಳು ಇರುತ್ತವೆ. ಇದನ್ನು ಕೊಡಿಸಿ ಅಂತ ನೀವು ನಿಮ್ಮನ್ನಾಳುವ ಜನಪ್ರತಿನಿಧಿಯನ್ನು ಕೇಳಿದಾಗ, ಆತ ‘ಈ ಅರ್ಜಿ ನೋಡ್ಕೊಳಪ್ಪಾ’ ಅಂತ ತಮ್ಮ ಆಪ್ತ ಕಾರ್ಯದರ್ಶಿಗೆ ಹೇಳಬಹುದು. ನೀವು ಕೆಲಸವಾಯಿತೆಂದು ಸಂಭ್ರಮಿಸುತ್ತಿದ್ದರೆ, ನಿಮ್ಮ ಕೈಗೆ ಬಂದ ಚೆಕ್ ಮೊತ್ತದ ಹಣವು ಅದೆಲ್ಲೋ ‘ಫಿಲ್ಟರ್’ ಆಗಿ ಬಂದಿರುತ್ತದೆ. ಅದು ಗಮನಕ್ಕೆ ಬಂತೋ…. ನಿಮ್ಮಷ್ಟು ಲಕ್ಕಿ ಬೇರಾರೂ ಇಲ್ಲ. ಒಬ್ಬ ಭ್ರಷ್ಟಾಚಾರಿ ಕೈಗೆ ಸಿಕ್ಕ ಹಾಗೆಯೇ!

* ಇನ್ನು, ಸರಕಾರದಿಂದ ದೊರೆಯುವ ಪ್ರಶಸ್ತಿಗಳು ಇರುತ್ತವಲ್ಲಾ… ಸಿಕ್ಕಾಪಟ್ಟೆ ಲಾಬಿ ಮಾಡಿಸಿ, ತಮಗೆ ಸಂಬಂಧವೇ ಇಲ್ಲದ ಯಾವ್ಯಾವುದೋ ಕೆಟಗರಿಯ ರಾಜ್ಯ ಪ್ರಶಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಸಫಲರಾಗಿರುವ ವ್ಯಕ್ತಿಯ ಬಗ್ಗೆ ನಿಮಗೆ ಆಕಸ್ಮಿಕವಾಗಿ ಗೊತ್ತಾಗಿಬಿಟ್ಟರೂ, ಇಲ್ಲೂ ನಿಮ್ಮ ಶಪಥ ಈಡೇರಿಸುವ ಅವಕಾಶದ ಹೆಬ್ಬಾಗಿಲೊಂದು ತೆರೆದಂತೆಯೇ ಆಯಿತಲ್ಲಾ! (ಇದರಲ್ಲಿ, ಪ್ರಶಸ್ತಿಯ ಹಣ ಬಾರದಿದ್ದರೂ ಚಿಂತಿಲ್ಲ, ಪ್ರಶಸ್ತಿಯಂತೂ ಸಿಗಲಿ ಅಂತ ಉಡಾಫೆ ಭಾವನೆಯೊಂದಿಗೆ ಆ ಹಣವನ್ನು ತಾವಾಗಿಯೇ ಸುಲಭವಾಗಿ ‘ಫಿಲ್ಟರ್’ ಆಗಿಸುವವರೂ ಸಿದ್ಧಿ-ಪ್ರಸಿದ್ಧಿಗಾಗಿ ಮಾಡುವಂತಹವರೂ ಸೇರುತ್ತಾರೆಂಬುದು ನೆನಪಿರಲಿ!)

* ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಬೇಕೆಂದರೆ ಮೆಸ್ಕಾಂ, ಬೆಸ್ಕಾಂ, ಹೆಸ್ಕಾಂ… ಇತ್ಯಾದಿಗಳ ‘ಸ್ಕಾಂ’ ಅಧಿಕಾರಿ-ನೌಕರರಿಗೆ ನೀವು ಇಂತಿಷ್ಟು ಕೊಡಬೇಕಾದ ‘ಸ್ಕ್ಯಾಮ್’ನ ಪರಿಸ್ಥಿತಿ ಬಂದಿತೇ? ನಿಮ್ಮ ಹೊಸವರ್ಷದ ನಿರ್ಣಯ ಈಡೇರಿಸುವ ಕಾಲ ಬಂದಿದೆ ಅಂತಲೇ ಅರ್ಥ!

* ನಗರ ಪ್ರದೇಶದಲ್ಲಾದರೆ, ತೀರಾ ತಳ ಮಟ್ಟದ ಭ್ರಷ್ಟಾಚಾರಿಯನ್ನು ಹೇಗೆ ಪತ್ತೆ ಹಚ್ಚಬಹುದು? ನಿಮ್ಮ ಮನೆಯ ಬಳಿಗೆ ಕಸ ಒಯ್ಯುವ ಪಾಲಿಕೆ ಲಾರಿಯೋ, ತ್ರಿಚಕ್ರ ವಾಹನವೋ ಬರುತ್ತದೆ. ತಿಂಗಳಾರಂಭದಲ್ಲಿ ನಿಮ್ಮ ಮನೆಗೆ ಹಾಜರಾಗುವ ಅವರು, ತಿಂಗಳ ಮಾಮೂಲಿಗಾಗಿ (ಒಂದು ಮನೆಗೆ ಕನಿಷ್ಠ ಹತ್ರೂಪಾಯಿ) ಕೈಚಾಚುತ್ತಾರೆ. ಸರಕಾರದಿಂದಲೋ, ಕಸ ವಿಲೇವಾರಿ ಏಜೆನ್ಸಿಯ ಕೈಯಲ್ಲೋ ಸಂಬಳ ಪಡೆಯುವ ಇವರ ಈ ದಂಧೆ ಕೂಡ ಭ್ರಷ್ಟಾಚಾರವೇ ಸ್ವಾಮೀ! ಅಷ್ಟೂ ಗೊತ್ತಾಗಲಿಲ್ಲವೇ? ಸಿಕ್ಕಿಯೇ ಬಿಟ್ಟಿತಲ್ಲ ಪಾಪದ ಮಿಕ! ಆದರೆ, ದುಡಿದು ತಿನ್ನುವ ಇವರ ಭ್ರಷ್ಟಾಚಾರಕ್ಕಿಂತ ಫೈಲ್‌ಗೆ ಸಹಿ ಹಾಕಲು ತಿಂದುಂಡು ಕೋಟಿ ಕೋಟಿ ನುಂಗುವ ಭ್ರಷ್ಟಾಚಾರಿಗಳನ್ನೇ ಹಿಡಿಯುವುದು ನಿಮ್ಮ ಧ್ಯೇಯವಾಗಿಟ್ಟುಕೊಂಡಿದ್ದೀರಾ? ಅದಕ್ಕಂತೂ ಫುಲ್ ಮಾರ್ಕ್ಸ್ ಸಿಗುತ್ತೆ!

* ನಿಮ್ಮೂರಿನ ರಸ್ತೆ ಹಾಳಾಗಿದೆ. ಅದರ ದುರಸ್ತಿಗಾಗಿ ಊರಿನ ಜನರೆಲ್ಲಾ ನಿಮ್ಮನ್ನು ಲೋಕಸಭೆಯಲ್ಲೋ, ರಾಜ್ಯಸಭೆಯಲ್ಲೋ, ವಿಧಾನಸಭೆಯಲ್ಲೋ ಪ್ರತಿನಿಧಿಸುವ ‘ಜನ ನಾಯಕರಿಗೆ’ ಮನವಿ ಸಲ್ಲಿಸಿದ್ದಾಗಿದೆ. ಅವರು ಊರಿನ ಕಾರ್ಯಕ್ರಮದ ಭಾಷಣವೊಂದರಲ್ಲಿ, ನಿಮ್ಮೂರಿನ ರಸ್ತೆಗೆ ಹಣ ಮಂಜೂರಾಗಿದೆ ಅಂದು ಬಿಡ್ತಾರೆ. ಮರುದಿನವೇ ಒಂದಷ್ಟು ರೋಡ್ ರೋಲರುಗಳು, ಜಲ್ಲಿ-ಡಾಂಬರುಗಳೊಂದಿಗೆ ಬಂದು ಸದ್ದು ಮಾಡಿ ಹೋಗುತ್ತವೆ. ಒಂದೇ ಒಂದು ಮಳೆ ಬಂದಾಗ, ಈ ರಸ್ತೆಗೆ ಅವರು ಹಾಕಿದ ‘ನಾಮ’ ಎಂಥದ್ದೆಂದು ಬಯಲಾಗಿಬಿಡುತ್ತದೆ. ರಸ್ತೆಯೊಳಗೆ ಜಲ್ಲಿಯೋ, ಜಲ್ಲಿಯ ನಡುವೆ ರಸ್ತೆಯೋ ಎಂದು ತಿಳಿಯದಾಗದ ಪರಿಸ್ಥಿತಿ. ಹಿಡಿಯಿರಿ ಈ ರಸ್ತೆ ಕಾಮಗಾರಿ ಗುತ್ತಿಗೆ ಪಡೆದವರನ್ನು! ಒಂದಷ್ಟು ಸಾಹಸ ಮಾಡಿದರೆ, ಜನ್ಮ ಜನ್ಮಾಂತರದ ಪುಣ್ಯ ನಿಮ್ಮದಾಗುತ್ತದೆ!

* ಇನ್ನೂ ಒಂದಿದೆ. ಹಳ್ಳಿಗಳಲ್ಲಿ ರೈತರು ಕಷ್ಟಪಟ್ಟು ದುಡಿಯುತ್ತಾರೆ. ಅವರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದರ ಇರುತ್ತದೆ. ಆದರೆ ನೀವು ಬೆವರು ಸುರಿಸಿ ಬೆಳೆದ ಫಸಲಿಗೆ ಅಸಲು ಬಂದರೆ ನಿಮ್ಮ ಪುಣ್ಯ. ಅರೆ, ನಾನು ಕಷ್ಟಪಟ್ಟು ಸಂಪಾದಿಸಬೇಕಿರುವ ದುಡ್ಡನ್ನು ನುಂಗೋ ನುಂಗಣ್ಣಗಳು ಯಾರು ಅಂತ ತಲೆ ಕೆರೆದುಕೊಂಡಿರಾ? ಅದೋ ಒಂದು ಅವಕಾಶದ ಮರದ ಬಾಗಿಲು ಕಿರ್ರನೇ ತೆರೆದುಕೊಂಡಂತಾಯಿತೆಂದೇ ಅರ್ಥ. ಹೇಗೂ ಜೀವನಪೂರ್ತಿ ಕಷ್ಟಪಡುತ್ತಲೇ ಇದ್ದೀರಿ, ಮತ್ತೊಂದಿಷ್ಟು ತ್ರಾಸ ತೆಗೆದುಕೊಂಡು ಹಿಡೀರಿ ಅವರನ್ನು! ನಿಮ್ಮ ಹೊಸ ವರ್ಷದ ನಿರ್ಣಯದ ತೂಕ ಮತ್ತಷ್ಟು ಹೆಚ್ಚಾಗುತ್ತದೆ.

* ಸುಖಾ ಸುಮ್ಮನೆ ಓಟು ಪಡೆದುಕೊಂಡು ಐದೂ ವರ್ಷಗಳ ಕಾಲ ಏನೂ ಮಾಡಲಾರದೆ, ಕೇಂದ್ರದಿಂದ ಬರುವ ಕೋಟ್ಯಂತರ ರೂಪಾಯಿ ಹಣವನ್ನು, ರಾಜ್ಯದಿಂದಲೂ ಬರುವ ಹಣವನ್ನು ಹಾಗೆಯೇ ಹಿಂದಕ್ಕೆ ಕಳುಹಿಸುವಂತಹಾ, ತಮ್ಮದೇ ಉದ್ಯೋಗದಲ್ಲಿಯೇ ಬಿಜಿಯಾಗಿಬಿಟ್ಟಿರುವ ‘ಸ್ವಕಾರ್ಯ ನಿರತ’ ಸಂಸದರು, ಶಾಸಕರು ನಿಮ್ಮೂರಿನವರೇ? ನಿಮ್ಮ ಕೆಲಸ ಮತ್ತಷ್ಟು ಸುಲಭವಾಗಿಬಿಟ್ಟಿತು. ನೀವು ಓಟು ಕೊಟ್ಟು ಅವರನ್ನು ಆರಿಸಿ ಕಳುಹಿಸಿದ್ದೀರಿ, ಅವರನ್ನು ಪ್ರಶ್ನಿಸುವ ಹಕ್ಕು ನಿಮಗಿದೆ. ಯಾವುದೇ ಸಭೆ-ಸಮಾರಂಭಗಳಲ್ಲಿ ಅವರು ‘ಓಟು-ಪ್ರಚೋದಕ’ ಭಾಷಣ ಮಾಡುವಾಗ ಸುಮ್ಮನೇ ಕೇಳಿಬಿಡಿ ಅಥವಾ ಕಾರ್ಯಕ್ರಮ ಆಯೋಜಕರೊಂದಿಗೆ ಚರ್ಚಿಸಿ, ಮಾಧ್ಯಮಗಳನ್ನೂ ಕರೆಯಿರಿ; ಸಭೆಯಲ್ಲೇ, ಸ್ಟೇಜಿನಲ್ಲೇ ಊರಿನ ಸಮಸ್ಯೆಗಳಿಗಾಗಿ ಏನು ಮಾಡಿದ್ದೀರಿ ಅಂತ ಕೇಳಿಬಿಡಿ. ನಿಮ್ಮ ನ್ಯೂ ಇಯರ್ ರೆಸೊಲ್ಯುಶನ್ ಕೂಡಾ ಈಡೇರಿತು, ಜೀವನವೂ ಪಾವನವಾಯಿತು!

* ಒಂದಿಷ್ಟು ತ್ರಾಸ ಪಡುವ ನಿರ್ಣಯವಿದು: ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರಿಗೆ ಸರಕಾರವು ಇಷ್ಟೆಲ್ಲಾ ಸವಲತ್ತುಗಳನ್ನು ನೀಡುತ್ತಿದ್ದರೂ, ನಿಮ್ಮೂರಿನಲ್ಲಿರೋ ಈ ವರ್ಗಕ್ಕೆ ಸೇರಿದವರು ಉದ್ಧಾರವೇ ಆಗಿಲ್ಲ ಯಾಕೆ ಅಂತ ತಲೆ ರಪರಪ ಕೆರೆದುಕೊಂಡಿದ್ದುಂಟೋ? ಸ್ವಲ್ಪ ತನಿಖೆ ಮಾಡಿ, ಆರ್‌ಟಿಐ (ಮಾಹಿತಿ ಹಕ್ಕು) ಕಾಯಿದೆ ಇದೆ. ಪತ್ರಿಕೆಯವರಿಗೆ ಕೊಟ್ಟುಬಿಡಿ. ನಿಮ್ಮ ಈ ಹೊಸ ವರ್ಷದ ನಿರ್ಣಯಕ್ಕಾಗಿ ಆ ಇಡೀ ಊರೇ ನೆನಪಿಸಿಕೊಳ್ಳುತ್ತಿರುತ್ತದೆ! ನಿಮ್ಮ ತವರೂರಿಗೆ ಸಲ್ಲಿಸಿದ ಕೊಡುಗೆಯೂ ಇದಾಗುತ್ತದೆ.

ಯಾವ್ಯಾವುದೋ ಕೈಲಾಗದ ನಿರ್ಣಯಗಳನ್ನೆಲ್ಲಾ ಮಾಡಿಕೊಂಡು, ಅದು ಈ ಬಾರಿ ಸಾಧ್ಯವಾಗಲಿಲ್ಲ, ಮುಂದಿನ ಬಾರಿ ನೋಡೋಣ ಅಂತೆಲ್ಲಾ ಹತಾಶರಾಗುವ ಬದಲು, ಈ ರೀತಿಯದೊಂದು ನಿರ್ಣಯವನ್ನು (ನೀವು ಮತ್ತಷ್ಟನ್ನು ಪತ್ತೆ ಮಾಡಿಕೊಳ್ಳಬಹುದು – ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ!) ಮಾಡಿಕೊಂಡು ಬಿಟ್ಟರೆ, ಒಂದು ಮಿಕವನ್ನಲ್ಲ, ನೂರಾರು ಮಿಕಗಳನ್ನು ಹಿಡಿಯುತ್ತೇನೆ ಎಂದೂ ಶಪಥ ಮಾಡಿಕೊಳ್ಳುವ ಭರ್ಜರಿ ಅವಕಾಶವಿರುವ ಏಕೈಕ ಹೊಸವರ್ಷ ನಿರ್ಣಯದ ಕೆಟಗರಿ ಇದು. ಹೀಗಾಗಿ ಇದನ್ನೇ ನಿಮ್ಮ ಹೊಸ ವರ್ಷದ ಧ್ಯೇಯವಾಗಿಸಿಕೊಳ್ಳಿ! ಶುಭಮಸ್ತು!

ಸ್ಮಾರ್ಟಾಗುವ ಸ್ಲೇಟುಗಳು; ಬಳಪ ಹಿಡಿವ ಟೆಕೀಗಳು

Leave a comment

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯ ಭರಾಟೆಯಿಂದಾಗಿ ಈ ವಿಶಾಲವಾದ ಜಗತ್ತು ನಮ್ಮ ಕೈಬೆರಳುಗಳ ಎಡೆಯಲ್ಲಿ ಸಿಲುಕಿ ನರಳುವಂತಾಗಿದೆೆ. ಆದರೆ ಭೂಮಿ ಗುಂಡಗಿದೆ ಎಂಬುದನ್ನು ಮರೆಯುವಂತಿಲ್ಲ. ಭೂಮಿ ಗುಂಡಗಿರುವುದಕ್ಕೂ ತಂತ್ರಜ್ಞಾನ ಬೆಳೆದಿದ್ದಕ್ಕೂ ಏನು ಸಂಬಂಧ ಅಂತ ಅಚ್ಚರಿ ಪಡುತ್ತಿದ್ದೀರಾ? ಹಾಗಿದ್ದರೆ ಮುಂದೆ ಓದಿ.

ಒಂದು ರಸ್ತೆ ವರ್ತುಲಾಕಾರದಲ್ಲಿದೆ ಎಂದಾದರೆ, ಅದರಲ್ಲಿ ಎಷ್ಟೇ ಮುಂದಕ್ಕೆ ನುಗ್ಗಿ ನಡೆದು ಸಾಗಿದರೂ ನಾವು ಎಲ್ಲಿಂದ ಆರಂಭಿಸಿದ್ದೇವೋ ಅಲ್ಲಿಗೇ ಬಂದು ಸೇರುತ್ತವಲ್ಲವೇ? ಹಾಗೆಯೇ ಈ ತಂತ್ರಜ್ಞಾನ ಮತ್ತು ಫ್ಯಾಶನ್ ಇತ್ಯಾದಿ ಕೂಡ.

ಇನ್ನೂ ಒಂಚೂರು ಸ್ಪಷ್ಟವಾಗಿ ಹೇಳಬೇಕೆಂದಾದರೆ, ಹಿಂದಿನ ಕಾಲದಲ್ಲಿ ಕೌಪೀನದ ಜಾಗದಲ್ಲಿ ಬಂದ ಚಡ್ಡಿ, ಲಂಗ-ರವಿಕೆ ಫ್ಯಾಶನ್ ಆಗಿಬಿಟ್ಟಿತು. ಆ ಬಳಿಕ ಸ್ವಲ್ಪ ಉದ್ದನೆಯ ಪ್ಯಾಂಟು, ಮತ್ತೂ ಉದ್ದದ ಲಂಗ ಸಹಿತ ದಾವಣಿ ಬಂತು. ಈಗ ಮತ್ತೆ ಮರಳಿ ಚಡ್ಡಿಗೇ ಮತ್ತು ಮಿಡ್ಡಿಗೇ, ಕೊಂಚ ಗಿಡ್ಡವಾಗಿಯೇ ಬಂದು ನಿಂತಿದೆಯಲ್ಲಾ! ಅದನ್ನು ಬರ್ಮುಡಾ, ಮಿನಿ, ಮಿಡಿ, ಟೂಪೀಸ್ ಎಂದೆಲ್ಲಾ ಬಹು ನಾಮಗಳಿಂದ ಕರೆಯುತ್ತಾರಷ್ಟೇ. ಅದೇ ರೀತಿ, ಸೀರೆಯೇ ನಮ್ಮ ಸಂಪ್ರದಾಯ, ಪರಂಪರೆ ಎಂದೆಲ್ಲಾ ನಾವು ಸ್ವೀಕರಿಸಿಕೊಂಡುಬಿಟ್ಟಿದ್ದೆವು. ಒಂದು ಸಂಧಿಕಾಲದಲ್ಲಿ ಅದು ಇನ್ನೇನು ಅವಸಾನ ಕಾಣುತ್ತದೆ ಎಂಬಂತಹಾ ಪರಿಸ್ಥಿತಿಯೂ ಇತ್ತು. ಅದರ ಜಾಗದಲ್ಲಿ ಚೂಡಿದಾರ, ಪ್ಯಾಂಟು ಶರಟು, ಜೀನ್ಸ್, ಅದು ಇದು ಎಂದೆಲ್ಲಾ ಬಂದು ಸೇರಿಕೊಂಡವು. ಇದೀಗ ಸೀರೆ ಮತ್ತೆ ಗಮನ ಸೆಳೆಯುತ್ತಿದೆ, ಆಕರ್ಷಣೆ ಪಡೆಯುತ್ತಿದೆ. ಅದು ಕೂಡ ಹೇಗೆ? ಫ್ಯಾಶನ್‌ನ ಹೊಸಾ ರೂಪದಲ್ಲಿ! ಅಂದ್ರೆ ಸೀರೆ ಉಡೋದು ಕೂಡ ಫ್ಯಾಶನ್ ಅಂತ ಆಗತೊಡಗಿದೆ. ಅಂದರೆ ಎಲ್ಲವೂ ಒಂದು ಸುತ್ತು ತಿರುಗಿ ಕೊನೆಗೆ ಹಿಂದೆ ಇದ್ದಲ್ಲಿಗೇ ಬಂದು ತಲುಪಿದೆ.

ಪರಿಸ್ಥಿತಿ ಹೀಗಿರುವಾಗ, ತಂತ್ರಜ್ಞಾನವೂ ಹೀಗೆಯೇ ಅಲ್ಲವೇ? ಒಂದು ಉದಾಹರಣೆಯೆಂದರೆ, ಜಗತ್ತನ್ನೇ ಕಿರಿದಾಗಿಸಿದೆ ಅಂತೆಲ್ಲಾ ಮೆಚ್ಚಿದವರ, ಬೆಚ್ಚಿದವರ, ಟೀಕಾಕಾರರ, ಕುತೂಹಲಿಗಳೆಲ್ಲರಿಂದಲೂ ಆರೋಪವನ್ನು ಹೊತ್ತುಕೊಂಡ ಮೊಬೈಲ್ ಫೋನ್. ಆರಂಭದಲ್ಲಿ ಉದ್ದನೆಯ ಬಾರುಕೋಲು ಮಾದರಿಯ ಆಂಟೆನಾ ಹೊಂದಿದ ದೊಡ್ಡ ಗಾತ್ರದ ಮೊಬೈಲ್ ಫೋನ್‌ಗಳನ್ನು ನೋಡುತ್ತಿದ್ದೆವು. ಜಗತ್ತು ಮತ್ತಷ್ಟು ಕಿರಿದಾಗುತ್ತಿದೆ ಎನ್ನತೊಡಗಿದಾಗ ಅದಕ್ಕೆ ಅನುರೂಪವಾಗಿಯೋ, ಅನುಗುಣವಾಗಿಯೋ, ಮೊಬೈಲ್ ಫೋನ್‌ನ ಗಾತ್ರವೂ ಕಿರಿದಾಗತೊಡಗಿತು. ಅಂಗೈಯೊಳಗೆ ಮೊಬೈಲ್ ಬೆಚ್ಚನೆ ಕುಳಿತಿರುವಷ್ಟು ಕಿರಿದಾಯಿತು. ಅದರಲ್ಲಿ ಟೈಪಿಸಲು ಕಡ್ಡಿಗಳನ್ನು (ಸ್ಟೈಲಸ್) ನೀಡಲಾಯಿತು. ಜೇಬಿನೊಳಗೆ ಮೊಬೈಲ್ ಇದೆ ಎಂದೋ, ಅಥವಾ ಅದೆಲ್ಲಾದರೂ ಬಿದ್ದು ಹೋಯಿತೆಂದೋ ತಿಳಿಯಲಾರದಷ್ಟೂ ಕಿರಿ ಕಿರಿ ರೂಪದಲ್ಲಿ ಬಂದವು ಕೆಲವು ಮೊಬೈಲುಗಳು. ಇಂಥಲ್ಲೆಲ್ಲಾ ಕರೀನಾ ಕಪೂರಳ ‘ಸೈಜ್ ಜೀರೋ’ ನೆನಪಾಗುತ್ತಿತ್ತು. ಆದರೆ ಈಗ?

ಮೊಬೈಲ್ ಫೋನ್‌ಗಳ ಗಾತ್ರ ಮತ್ತೆ ಬೆಳೆಯತೊಡಗಿದೆ. ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆಯಿಂದಾಗಿ ಪುರುಷರು-ಮಹಿಳೆಯರೆಂಬ ಭೇದವಿಲ್ಲದೆ ಭಾರತೀಯರ ‘ಸೈಜ್’ ಕೂಡ ಹೇಗೆ ಏರುತ್ತಾ ಹೋಗುತ್ತಿದೆಯೋ, ಮೊಬೈಲ್ ಕೂಡ ಅದೇ ಹಾದಿ ಹಿಡಿಯತೊಡಗಿದೆ. ಜನರು ಎರಡೆರಡು ಮೂರುಮೂರು ಮೊಬೈಲ್ ಫೋನುಗಳನ್ನು ಹಿಡಿಯುವ ಮಟ್ಟಕ್ಕೆ ಬೆಳೆದಿದ್ದಾರಾದರೂ, ಅವುಗಳ ಗಾತ್ರವು ಅವರಿಗೆ ಸಮಸ್ಯೆಯೇ ಆಗುತ್ತಿಲ್ಲ. ಅಗಲ ಸ್ಕ್ರೀನ್‌ನ ಫೋನುಗಳು, ಉದ್ದನೆಯ ಮೊಬೈಲುಗಳು, ಉದ್ದ ಇನ್ನೂ ಸಾಲದಾಯಿತು ಎಂಬ ಕಾರಣಕ್ಕೆ ಪರ್ಸಿನಂತೆ ಮಡಚಿ ಜೇಬಿನೊಳಗಿಟ್ಟುಕೊಳ್ಳಬಲ್ಲ (ಫ್ಲಿಪ್) ಫೋನುಗಳು ಬಂದವು. ಅದನ್ನು ತುಂಬಾನೇ ಸ್ಮಾರ್ಟ್ ಆಗಿರೋ ಫೋನುಗಳೆಂದು ಕರೆದರು. ಇವುಗಳ ಸಾಲಿಗೆ ತೀರಾ ಇತ್ತೀಚಿನವು ಎಂದರೆ ಪ್ಯಾಡುಗಳು ಅಥವಾ ಟ್ಯಾಬ್‌ಗಳು. ಹೆಸರು ಮಾತ್ರ ಬೇರೆ ಬೇರೆ. ನೋಡಲು ಮಾತ್ರ ನಾವು ಅಂಗನವಾಡಿಯಲ್ಲಿ ಬರೆಯುತ್ತಿದ್ದ ಸ್ಲೇಟಿನಂತಿರುತ್ತವೆ. ಐಪ್ಯಾಡ್, ಗ್ಯಾಲಕ್ಸಿ ಟ್ಯಾಬ್ ಎಂದೆಲ್ಲಾ ಕರೆದುಕೊಂಡು ಅತ್ತ ಕಂಪ್ಯೂಟರೂ ಹೌದಾದ, ಇತ್ತ ಮೊಬೈಲ್ ಫೋನೂ ಹೌದಾಗಿರುವ ಭಯಂಕರ ಸಾಧನಗಳು ಬಣ್ಣ ಹಚ್ಚಿ ವೇಷಕ್ಕೆ ಕುಳಿತುಕೊಂಡವು. ಬಹುಶಃ ನಮ್ಮ ಸಾಂಸದರಿಗೂ ಇದರ urge ತಡೆದುಕೊಳ್ಳಲಾಗುತ್ತಿಲ್ಲ ಅನಿಸುತ್ತಿದೆ. ಅವರಿಗೆಲ್ಲರಿಗೂ ಹೈಫೈ ಆಗಿರೋ ಐಪ್ಯಾಡುಗಳನ್ನು ವಿತರಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ನಮ್ಮ ರಾಜ್ಯದ ಶಾಸಕರು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.

ಇಂಥಹಾ ಸ್ಥೂಲದೇಹಿ ಗ್ಯಾಜೆಟುಗಳೊಳಗೆ, ಕೋಪದಿಂದ ಜೋರಾಗಿ ಕೂಡಿ ರೊಯ್ಯನೆ ನೆಗೆದು ಪಾಯಿಂಟುಗಳನ್ನು ಸಂಪಾದಿಸುವ ಆಂಗ್ರಿಬರ್ಡುಗಳು ಬಂದು ಕುಳಿತವು. ರಾ.ಒನ್ ಆಟಗಳು, ನುಂಗುತ್ತಾ ನುಂಗುತ್ತಾ ಉದ್ದವಾಗುವ ಹಾವುಗಳು, ಬೈಕು – ಕಾರು ರೇಸುಗಳು, ಇಡೀ ಭೂಮಿಯನ್ನೇ ಧ್ವಂಸ ಮಾಡಬಲ್ಲಂತಹಾ ಯುದ್ಧೋನ್ಮಾದದ ಆಟಗಳೆಲ್ಲಾ ಸೇರ್ಪಡೆಯಾದವು. ಗಡಚಿಕ್ಕುವ ಸಂಗೀತಗಳನ್ನು ಸರೌಂಡ್ ಸೌಂಡ್ ಅನುಭವದೊಂದಿಗೆ ಕೇಳುವುದು ಸಾಧ್ಯವಾಯಿತು, ಇಡೀ ಜಗತ್ತನ್ನೇ ಜಾಲಾಡಬಲ್ಲ ನಕಾಶೆಗಳು, ಟ್ರಾಫಿಕ್ ಎಲ್ಲಿ ಬ್ಲಾಕ್ ಆಗಿದೆ ಎಂದು ಹೇಳುತ್ತಲೇ, ಈ ದಾರಿಯಾಗಿ ಹೋಗಿ ಎಂದೆಲ್ಲಾ ಕೈಹಿಡಿದು ಮುನ್ನಡೆಸಬಲ್ಲ ಮ್ಯಾಪುಗಳು ತೂರಿಕೊಂಡವು. ಸಂವಹನದ ಓಘಕ್ಕೆ ವೇದಿಕೆಯೊದಗಿಸಿದ ಫೇಸುಬುಕ್ಕು, ಟ್ವಿಟರುಗಳೆಲ್ಲವೂ ಅಂಗೈಗಿಂತ ಅಗಲದ ಜಾಗದೊಳಗೆ ಮೆರೆದಾಡತೊಡಗಿದವು. ಇಷ್ಟೆಲ್ಲಾ ಕೆಲಸ ಕಾರ್ಯಗಳೊಂದಿಗೆ, ಮೇಲು-ಫೀಮೇಲುಗಳ ಸರಸಕ್ಕೆ, ಸಂಭಾಷಣೆಗೆ ಪೂರಕವಾಗುವ ಇಮೇಲುಗಳು ಕೂಡ ಅದರಲ್ಲಿ ಭರ್ಜರಿ ಜಾಗ ಗಿಟ್ಟಿಸಿದವು.

ಹಾಗಿದ್ದರೆ, ತಂತ್ರಜ್ಞಾನ ಬೆಳೆದಂತೆ, ತಂತ್ರಜ್ಞಾನಿಗಳು, ಟೆಕೀಗಳು, ಗ್ಯಾಜೆಟ್ ಗುರುಗಳು ಎಂದೆಲ್ಲಾ ‘ಅಪ’ವಾದಕ್ಕೆ ಸಿಲುಕುವವರೆಲ್ಲರೂ ಸ್ಲೇಟು- ಹಿಡಿಯುವ ತಂತ್ರಜ್ಞಾನಕ್ಕೆ ಮರಳುತ್ತಿದ್ದಾರೆ. ಅಂದು ಕಡ್ಡಿಯಲ್ಲಿ ಗೀಚುತ್ತಿದ್ದರು, ಇಂದು ಕಡ್ಡಿಯನ್ನು ಮುಟ್ಟಿಸಿ, ಅಂದರೆ ಟಚ್ ಮಾಡಿ ಮೆರೆಯುತ್ತಿದ್ದಾರೆ, ಅಷ್ಟೇ ವ್ಯತ್ಯಾಸ! ಅದಕ್ಕೇ ಇರಬೇಕು, ಇತ್ತೀಚೆಗೆ ಸರಕಾರವು ವಿದ್ಯಾರ್ಥಿಗಳಿಗೆ ಕೊಡಿಸುವ 35 ಡಾಲರಿನ (ಒಂದುವರೆ-ಎರಡು ಸಾವಿರ ರೂ. ಬೆಲೆಯ) ಟ್ಯಾಬ್ಲೆಟ್ ಗ್ಯಾಜೆಟ್ಟಿನ ಹೆಸರು ಆಕಾಶ್ ಎಂದಾಗಿದ್ದರೂ, ಅದರ ಮೂಲ ಹೆಸರು ಮಾತ್ರ ಯುಬಿ‘ಸ್ಲೇಟ್ ’ ಅಂತಲೇ!

ಇನ್ನೂ ಒಂದು ವಿಷ್ಯ – ತಂತ್ರಜ್ಞಾನದ ಉನ್ಮಾದದಿಂದಾಗಿ ಜಗತ್ತು ಕಿರಿದಾಗಿದ್ದರೂ, ನಮ್ಮ ಮನಸುಗಳು ಮಾತ್ರ ನಾಲ್ಕು ಗೋಡೆಗಳೊಳಗೆ ಕಿರಿದಾಗುತ್ತಿರುವುದನ್ನು ನೀವು ಗಮನಿಸಿದಿರಾ?

ಲೋಕಪಾಲ: ಮೊದಲು ಕಾಯಿದೆ; ನಂತರ ಪ್ರತಿಭಟನೆ

Leave a comment

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ದೇಶವನ್ನು ಕ್ಯಾನ್ಸರ್ ವ್ರಣದಂತೆ ಕಾಡುತ್ತಿರುವ ಭ್ರಷ್ಟಾಚಾರ ಮಟ್ಟ ಹಾಕುವ ಇಚ್ಛಾಶಕ್ತಿಯಾಗಲೀ, ಬದ್ಧತೆಯಾಗಲೀ, ಯಾವುದೇ ರಾಜಕಾರಣಿಗೆ ಇಲ್ಲ. ಇದರಲ್ಲಂತೂ ಪಕ್ಷಭೇದವಂತೂ ಇಲ್ಲವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ, ನಾಲ್ಕು ದಶಕಗಳಿಂದಾಗದ ಕಾರ್ಯವೊಂದು ಈಗ ನಡೆಯುತ್ತಿದೆ ಎಂದಾದರೆ, ಅದಕ್ಕೇಕೆ ಅವಕಾಶ ಕೊಟ್ಟು ನೋಡಬಾರದು? ಇಂತಹಾ ಒಂದು ಪರಿಸ್ಥಿತಿಗೆ, ಇಂತಹಾ ಒಂದು ಹತಾಶೆಯ ಬೇಡಿಕೆಗೆ ಕಾರಣವೂ ಇದೆ. ಆಗಸ್ಟ್ ತಿಂಗಳಲ್ಲಿ ಯುಪಿಎ ಸರಕಾರವು ಸಂಸತ್ತಿನಲ್ಲಿ ಮಂಡಿಸಿದ ಲೋಕಪಾಲ ವಿಧೇಯಕಕ್ಕೆ ಹೋಲಿಸಿದರೆ, ಮೊನ್ನೆ ಡಿಸೆಂಬರ್ 22ರಂದು ಸಂಸತ್ತಿನಲ್ಲಿ ಮಂಡಿಸಿದ ಲೋಕಪಾಲ ವಿಧೇಯಕ ತೀರಾ ದುರ್ಬಲ! ಇನ್ನೂ ಹಠ ಹಿಡಿದರೆ, ಲೋಕಪಾಲದ ಜಾಗದಲ್ಲಿ ತೀರಾ ನಾಮಕಾವಾಸ್ತೇ ಸಂಸ್ಥೆಯೊಂದು ಬಂದರೂ ಅಚ್ಚರಿಯಿಲ್ಲ!

ಕಳೆದ ಗುರುವಾರ ಲೋಕಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯನ್ನು ಗಮನಿಸಿದರೆ, ಸರಕಾರದ ಉದ್ದೇಶ ಸ್ಪಷ್ಟವಾಗುತ್ತದೆ. ‘‘ದೇಶದ ಸಂವಿಧಾನ ರೂಪಿಸುವವರು ರಾಜಕಾರಣಿಗಳು, ನಾವು ಜನರಿಂದ ಚುನಾಯಿತರು. ಸಂಸತ್ತಿನಲ್ಲಿ ಕೂತು ಎಲ್ಲವನ್ನೂ ಮಾಡುತ್ತೇವೆ. ನಮ್ಮನ್ನು ಯಾರೂ ಪ್ರಶ್ನಿಸಬಾರದು’’ ಎಂದು ಸಂಸತ್ತಿನೊಳಗೆ ಕುಳಿತವರು ಗರ್ಜಿಸಿದ್ದಾರೆ. ಇದರಲ್ಲೇನೂ ತಪ್ಪಿಲ್ಲ ಬಿಡಿ. ಸಂಸತ್ತಿಗೇ ಪರಮಾಧಿಕಾರ ಇದೆ ಎಂಬುದು ನಿಜವಾದರೂ, ನಮ್ಮನ್ನು ಪ್ರತೀ ಹೆಜ್ಜೆಗೂ ಕಾಡುತ್ತಿರುವ, ಸರಕಾರದ ಪ್ರತಿಯೊಂದು ಯೋಜನೆಯಲ್ಲಿಯೂ ತೆರಿಗೆದಾರರ ಹಣ ಪೋಲಾಗಲು ಕಾರಣವಾಗುತ್ತಿರುವ ಭ್ರಷ್ಟಾಚಾರವೆಂಬೋ ಪೆಡಂಭೂತವನ್ನು ನಿಯಂತ್ರಿಸಿ ಅಂತ ಕೂಗಾಡಲು- ತೆರಿಗೆ ಕಟ್ಟುವ ಪ್ರತಿಯೊಬ್ಬ ನಾಗರಿಕನಿಗೂ ಇದೆಯಲ್ಲವೇ?

ಅವರು ‘ಪರಮ’ ಅಧಿಕಾರವುಳ್ಳವರಾದರೂ, ಪ್ರಜೆಗಳ ಪ್ರತಿನಿಧಿಗಳು ಅನ್ನಿಸಿಕೊಂಡವರು- ನಾವೇ ಆರಿಸಿ ಕಳುಹಿಸಿದವರು ಇದುವರೆಗೆ ಮಾಡಿದ್ದೇನು ಮತ್ತು ಈಗಲೂ ಮಾಡುತ್ತಿರುವುದೇನು? ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕಿದೆ ಎಂಬ ಕೂಗು ಈ ಮಟ್ಟಕ್ಕೆ ಹೋಗಲು ಕಾರಣವಾಗಿರುವುದಾದರೂ ಏನು ಅಂತ ಒಂದು ಕ್ಷಣ ಯಾಕೆ ಯಾವುದೇ ಸಂಸತ್ ಸದಸ್ಯನೂ ಯೋಚಿಸುವುದಿಲ್ಲ? ನಾಲ್ಕು ದಶಕಗಳೇ ಬೇಕಾಯಿತೇ ಸಂಸತ್ತಿನೊಳಗೆ ಕುಳಿತವರಿಗೆ ಇಂಥದ್ದೊಂದು ಲೋಕಪಾಲದ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂಬುದು ಮನಸ್ಸಿಗೆ ನಾಟಲು?

‘ಲೋಕಪಾಲ’ ಮತ್ತು ‘ಲೋಕಾಯುಕ್ತ’ ಪದವಿಗೇ ಒಂದು ಇತಿಹಾಸವಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅದುವರೆಗೆ ಸ್ವೀಡಿಶ್ ಪರಿಕಲ್ಪನೆಯಾಗಿದ್ದ ‘ಓಂಬುಡ್ಸ್‌ಮನ್’ ಎಂಬುದಕ್ಕೆ ಭಾರತೀಯ ಪರ್ಯಾಯ ಪದವನ್ನು 1963ರಲ್ಲೇ (ಏಪ್ರಿಲ್ 3) ಕಾಯಿನ್ ಮಾಡಿದವರು ಅಂದು ಜೋಧ್‌ಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ, ಪಕ್ಷೇತರ ನಾಯಕ, ಪದ್ಮಶ್ರೀ ಪುರಸ್ಕೃತ ಲಕ್ಷ್ಮೀ ಮಲ್ ಸಿಂಘ್ವಿಯವರು. ಬರಹಗಾರ, ನ್ಯಾಯವಾದಿ, ರಾಜತಾಂತ್ರಿಕ ಅಧಿಕಾರಿಯೂ ಆಗಿದ್ದ ಎಲ್.ಎಂ.ಸಿಂಘ್ವಿ ಬಳಿಕ 1998ರಿಂದ 2004ರವರೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದರು. ಅವರಿಂದ ಅಂದಿನ ಪ್ರಧಾನಿ ನೆಹರೂಗೆ ಈ ಸಲಹೆ ಬಂದ ದಿವಸವು ಮೂರ್ಖರ ದಿನದ (ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಮೊದಲ 3 ದಿನ) ವ್ಯಾಪ್ತಿಗೆ ಬರುತ್ತದೆಯಾದರೂ, ಅದೇನೂ ಜೋಕ್ ಆಗಿರಲಿಲ್ಲ. ಈಗ ಅದೇ ರಾಜಕಾರಣಿಯ ಪುತ್ರ, ಕಾಂಗ್ರೆಸ್ ಸಂಸದರೂ, ವಕ್ತಾರರೂ ಆಗಿ ಈಗ ಪ್ರಸಿದ್ಧಿ ಪಡೆದಿರುವ ಅಭಿಷೇಕ್ ಮನು ಸಿಂಘ್ವಿ ಅವರೇ ಲೋಕಪಾಲ ವಿಧೇಯಕದ ಕರಡು ರೂಪಿಸುವ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಆಗಿದ್ದಾರೆಂಬುದು ಕಾಕತಾಳೀಯ!

‘‘ಒಳ್ಳೆಯ ಕಟ್ಟು ನಿಟ್ಟಾದ ಮಸೂದೆ ಕೊಡಿ, ನೀವು ಬೇಕಾಬಿಟ್ಟಿಯಾಗಿ ರಾಜಕೀಯ ಕಾರಣಕ್ಕೋಸ್ಕರ ಬಳಸಿಕೊಳ್ಳುತ್ತಿರುವ, ತಥಾಕಥಿತ ‘ಸ್ವತಂತ್ರ’ ತನಿಖಾ ಮಂಡಳಿ ಎಂದೆಲ್ಲಾ ಹೇಳಲಾಗುತ್ತಿರುವ ಸಿಬಿಐಯನ್ನು ಲೋಕಪಾಲ ವ್ಯಾಪ್ತಿಗೆ ತನ್ನಿ, ಕೆಳ ಮಟ್ಟದ ಸರಕಾರಿ ಅಧಿಕಾರಿಗಳನ್ನೂ ಸೇರಿಸಿ’’ ಎಂದೆಲ್ಲಾ ಒತ್ತಾಯಿಸುತ್ತಿರುವುದು ಒಬ್ಬ ಅಣ್ಣಾ ಹಜಾರೆಯೇನಲ್ಲ. ಅಧಿಕಾರದಲ್ಲಿದ್ದವರು ತಿಂದದ್ದೇ ಬಂತು. ಪ್ರತಿದಿನವೂ ನರಳಬೇಕಾಗಿರುವುದು ಬಡ ಪ್ರಜೆ-ಜನ ಸಾಮಾನ್ಯ.

ಹಜಾರೆ ವ್ಯಕ್ತಿಗತವಾಗಿ ಭ್ರಷ್ಟರೇ ಆಗಿರಲಿ (ಅವರ ಮೇಲೆ ಆರೋಪ ಹೊರಿಸುವ ಪ್ರಯತ್ನಗಳು ನಡೆದು, ತನಿಖೆಯೂ ಆಗಿದೆ), ಅಥವಾ ಕೆಟ್ಟ ನಡವಳಿಕೆಯವರೇ ಆಗಿರಲಿ; ಜನ ಸಾಮಾನ್ಯರ ಒಡಲ ಕೂಗಿಗೆ ಧ್ವನಿಯಾಗಿದ್ದಾರಲ್ಲಾ… ಮತ್ತು ಪ್ರಜೆಗಳ ಒಕ್ಕೊರಳ ಹೋರಾಟವನ್ನು ಕೇಂದ್ರೀಕರಿಸುವ ಶಕ್ತಿಯಾಗಿದ್ದಾರಲ್ಲಾ… ಇದನ್ನಾದರೂ ರಾಜಕಾರಣಿಗಳು ಅರಿತುಕೊಳ್ಳಬೇಕು.

ಈಗ ಲೋಕಪಾಲಕ್ಕೆ ಮೈನಾರಿಟಿ ಕೋಟಾ ಸೇರಿಸಲಾಗಿದೆ ಹಾಗೂ ರಾಜ್ಯಗಳೂ ಕೂಡ ಈ ಕಾಯಿದೆಯಡಿ ಕಡ್ಡಾಯವಾಗಿ ಲೋಕಾಯುಕ್ತವನ್ನು ರಚಿಸಬೇಕು ಎಂಬ ಉಲ್ಲೇಖಗಳಿವೆ. ಇವು ಎರಡೂ ಕೂಡ ಈ ಫೆಡರಲ್ ವ್ಯವಸ್ಥೆಯಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅರ್ಹವಾಗಿರುವ ವಿಚಾರಗಳೇ. ಮೀಸಲು ವ್ಯವಸ್ಥೆಯನ್ನು ಉಲ್ಲೇಖಿಸಿರುವುದರ ಹಿಂದೆ ‘ಒಂದೇಟಿಗೆ ಎರಡು ಹಕ್ಕಿ’ ಎಂಬ ತಂತ್ರವಿದೆ. 5 ರಾಜ್ಯಗಳ, ವಿಶೇಷವಾಗಿ ಉತ್ತರ ಪ್ರದೇಶ ಚುನಾವಣೆಗಳು ಮುಂದಿವೆ; ಒಂದೆಡೆ ಅಲ್ಪಸಂಖ್ಯಾತರ ಮತ ನಿಧಿಯನ್ನು ಸೆಳೆಯಲು ಇದನ್ನು ಎಳೆದು ತರಲಾಗಿದ್ದರೆ, ಇದು ವಿವಾದಕ್ಕೆ ಕಾರಣವಾಗಿ, ಕೋರ್ಟ್ ಮೆಟ್ಟಿಲೇರಿದರೆ, ಲೋಕಪಾಲದ ಆಗಮನ ಖಂಡಿತ ವಿಳಂಬವಾಗುತ್ತದೆ. ಗೊತ್ತಿದ್ದೂ ಗೊತ್ತಿದ್ದೂ ಯಾರಾದರೂ ನೇಣಿಗೆ ಕೊರಳೊಡ್ಡಿಕೊಳ್ಳುತ್ತಾರೆಯೇ?

ದುರ್ಬಲ ಅಂತ ಹೇಳಿದ್ದೇಕೆಂದರೆ, ಹಿಂದಿನ ಲೋಕಪಾಲ ವಿಧೇಯಕದಲ್ಲಿ, ಸ್ವತಂತ್ರ ತನಿಖಾ ಅಧಿಕಾರವೂ ಲೋಕಪಾಲರಿಗಿತ್ತು. ಕರ್ನಾಟಕದ ಲೋಕಾಯುಕ್ತರಿಗಿರುವ ಸಮಗ್ರ ತನಿಖಾ ಅಧಿಕಾರವು ‘ಹೊಸ’ ಲೋಕಪಾಲರಿಗಿಲ್ಲ. ಬರೇ ಪ್ರಾಥಮಿಕ ತನಿಖೆ ಮಾತ್ರ ನಡೆಸಬಹುದು! ಇನ್ನು ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿರಬೇಕು ಎಂದು ಆಡಳಿತಾರೂಢರು ಏನೇ ಸಮರ್ಥನೆ ನೀಡಿದರೂ, ಇದುವರೆಗೆ ಸಿಬಿಐಯನ್ನು ಅಧಿಕಾರಸ್ಥರೆಲ್ಲರೂ ಬಳಸಿಕೊಂಡಿರುವ ಪರಿ ನಮ್ಮ ಕಣ್ಣ ಮುಂದೆಯೇ ಇದೆಯಲ್ಲ! ಅದನ್ನೇಕೆ ಲೋಕಪಾಲ ವ್ಯಾಪ್ತಿಗೆ ತರುವುದಿಲ್ಲ?

ಒಟ್ಟಾರೆಯಾಗಿ, ಐತಿಹಾಸಿಕ ಕ್ಷಣವಾಗಬೇಕಿದ್ದ ಚರ್ಚೆಯೊಂದು ಲಾಲು ಪ್ರಸಾದ್ ಯಾದವ್‌ರಂತಹಾ ‘ಜನಪ್ರಿಯ’ ವಾಗ್ಮಿಗಳ ಜೋಕ್‌ಗೆ ಆಹಾರವಾಯಿತು, ಲೋಕಪಾಲದ ಗಂಭೀರತೆಯ ಹರಣವೂ ಆಯಿತು. ಕೊನೆ ಕ್ಷಣದಲ್ಲಿ ತಿದ್ದುಪಡಿಗಳನ್ನು ಮಾಡಿದ ಬಳಿಕ ವಿಧೇಯಕ ಮಂಡಿಸುವ ಮೂಲಕ, ಅದರೊಳಗೇನಿದೆ ಎಂದು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಸಂಸತ್ತಿನಲ್ಲಿ ಚರ್ಚೆ ಮಾಡಬೇಕಾದ ಅನಿವಾರ್ಯತೆ ಸಂಸದರದಾಗಿತ್ತು.

ಏನೇ ಆದರೂ, ಜನರ ಕೈಗೆ ಇದುವರೆಗೆ ರಾಜಕಾರಣಿಗಳಿಂದ ಅಧಿಕಾರಿಗಳವರೆಗೆ ‘ಫಿಲ್ಟರ್’ ಆಗಿ ಬರುತ್ತಿರುವ ಸವಲತ್ತುಗಳು, ಪರಿಹಾರಗಳು ನೇರವಾಗಿ ಅವರವರ ಕೈಗೇ ಸಿಗುವಂತಾಗಲಿ. ಭಾರತದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ರಾಜಕೀಯ ಭ್ರಷ್ಟಾಚಾರವೆಂಬ ರಾಕ್ಷಸನ ನಿಯಂತ್ರಣಕ್ಕಾಗಿ, ನಾಲ್ಕು ದಶಕಗಳಿಂದ ಇಂಥದ್ದೊಂದು ಕಾಯಿದೆಗೆ ಕಾದಿದ್ದೇವೆ. ಅಣ್ಣಾ ಹಜಾರೆ ಸುಮ್ಮನಾಗಿ, ಕಾಯಿದೆ ಬಂದ ಮೇಲೆ ತಿದ್ದುಪಡಿಗಾಗಿ ಹೋರಾಟ ಮಾಡಲಿ. ಇಲ್ಲವಾದರೆ, ಈ ಸರಕಾರದ ನೀತಿಯನ್ನು ನೋಡಿದರೆ, ವಿಧೇಯಕವು ಮತ್ತಷ್ಟು ದುರ್ಬಲವಾಗುತ್ತಲೇ ಹೋಗುವ ಸಾಧ್ಯತೆಗಳೂ ಇವೆ!

ಸರಕಾರಕ್ಕೆ ಬೇರೆ ಕೆಲಸವೇ ಇಲ್ಲವೇ?

Leave a comment

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ]

ನಮ್ಮನ್ನಾಳುವ ಸರಕಾರಕ್ಕೆ ಏನಾಗಿದೆ? ಈಗಾಗಲೇ ಇರುವ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬೆಲೆ ಏರಿಕೆಗೆ ಕಡಿವಾಣ ಹಾಕುವ ಬದ್ಧತೆ ತೋರುವ ಬದಲು, ಅನಗತ್ಯ ವಿವಾದಗಳನ್ನು ಎಳೆದುಕೊಳ್ಳುತ್ತಲೇ ಸಂಸತ್ತಿನ ಅಮೂಲ್ಯವಾದ ಕಾಲಹರಣ ಮಾಡುತ್ತಿದೆಯಲ್ಲಾ…!

ಮತ್ತಿನ್ನೇನು ಹೇಳಬೇಕು? ಚಿಲ್ಲರೆ ಮಾರಾಟ ವಲಯಕ್ಕೂ ವಿದೇಶೀ ಕಂಪನಿಗಳಿಗೆ ಭರ್ಜರಿ ಮಣೆ ಹಾಕುತ್ತೇವೆ ಎನ್ನುತ್ತಲೇ, ತೀವ್ರ ಪ್ರತಿಭಟನೆ ಎದುರಾದಾಗ ಆ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳುವ ಯೋಚನೆ ಮಾಡುವ ಮೂಲಕ ಸಂಸತ್‌ನ ಅಮೂಲ್ಯ ಅವಧಿಯನ್ನು ವ್ಯರ್ಥಗೊಳಿಸಿತು. ಚಳಿಗಾಲದ ಅಧಿವೇಶನದಲ್ಲಿ ಮುಖ್ಯ ಚರ್ಚಾ ವಿಷಯವಾಗಬೇಕಿದ್ದ ಲೋಕಪಾಲ ಮಸೂದೆಯನ್ನು ಮೂಲೆಗುಂಪು ಮಾಡುವ ಪ್ರಯತ್ನಗಳಲ್ಲಿ ಇದೂ ಒಂದು ಅಂತ ವಿಶ್ಲೇಷಿಸಬಹುದು. ಇದರ ನಡುವೆಯೇ, ಇಲ್ಲದ ಉಸಾಬರಿಯೋ ಎಂಬಂತೆ ನಮ್ಮ ಘನ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಅವರು, ಈ ಹಿಂದೆ 2ಜಿ ಹಗರಣದಲ್ಲಿ ಸರಕಾರಕ್ಕೆ ಝೀರೋ ಲಾಸ್ (ನಷ್ಟ ಶೂನ್ಯ-ಅಂದರೆ ಈ ಹಗರಣದಲ್ಲಿ ಸರಕಾರಕ್ಕೆ ನಷ್ಟವೇ ಆಗಿಲ್ಲ) ಎಂಬ ಹೇಳಿಕೆ ಕೊಟ್ಟ ವೇಗದಲ್ಲಿಯೇ, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿನ ಅಭಿವ್ಯಕ್ತಿಗೆ ಕಡಿವಾಣ ಹಾಕಲು ಹೊರಟಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ತೀವ್ರ ಟೀಕೆಗಳು ಎದುರಾದಾಗ ‘ಇದು ಸೆನ್ಸಾರ್ ಅಲ್ಲ’ ಅಂತ ಹೇಳುವ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ!

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಈ ಕುರಿತು ವರದಿ ಪ್ರಕಟಿಸಿದ ತಕ್ಷಣವೇ ಫೇಸ್‌ಬುಕ್, ಟ್ವಿಟರ್ ತಾಣಗಳಲ್ಲೆಲ್ಲಾ ಕಪಿಲ್ ಸಿಬಲ್ ಅವರು ಯಾವ ನಿಂದನಾತ್ಮಕ ಭಾಷೆಯನ್ನು ನಿಯಂತ್ರಿಸಲು ಹೊರಟಿದ್ದರೋ, ಅದೇ ನಿಂದನಾತ್ಮಕ ಟೀಕೆಗಳು ಸರಾಗವಾಗಿ ಪ್ರವಾಹದಂತೆ ಹರಿದುಬಿಟ್ಟವು. ನೀವೊಮ್ಮೆ ‘IdiotSibal’ ಅಂತ ಗೂಗಲ್ ಸರ್ಚ್ ಮಾಡಿದರೆ ಸಾಕು, ಆರೂವರೆ ಲಕ್ಷದಷ್ಟು ಲೇಖನಗಳು ನಿಮ್ಮ ಮುಂದೆ ಧುತ್ತನೆ ಬಂದು ನಿಲ್ಲುತ್ತವೆ.

ಸಾಮಾಜಿಕ ತಾಣಗಳಲ್ಲೇನೋ ಈಗ ಅಭಿವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಬೆಲೆ ಏರಿಕೆಯಿಂದಾಗಿ ಮತ್ತು ಈ ಬಗ್ಗೆ ಸರಕಾರ ಗಮನ ಹರಿಸದೆ ಬೇರೆಲ್ಲಾ ವಿಚಾರಗಳ ಬಗೆಗಷ್ಟೇ ಚಿಂತನೆ ನಡೆಸುತ್ತಿರುವುದು, ನಮ್ಮ ದೇಶದ ಪ್ರಧಾನ ಮಂತ್ರಿಗಳು ವೌನವೇ ಮೂರ್ತಿವೆತ್ತಂತೆ ಇರುವುದು, ಬೆಳೆ ಬೆಳೆದ ಕೃಷಿಕರ ಕೈಗೆ ಚಿಕ್ಕಾಸು ದಕ್ಕದಿದ್ದರೂ, ಜನ ಸಾಮಾನ್ಯರು ಮಾತ್ರ ಪ್ರತಿಯೊಂದಕ್ಕೂ ಭಾರಿ ಬೆಲೆ ತೆತ್ತು ಖರೀದಿಸುವಂತಾಗಿರುವುದು, ಇಳಿಯದ ಬೆಲೆಗಳು…. ಇತ್ಯಾದಿಗಳಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ಜನಾಕ್ರೋಶವೆಷ್ಟರ ಮಟ್ಟ ತಲುಪಿದೆ ಎಂಬುದಕ್ಕೆ ಕೃಷಿ ಸಚಿವ ಶರದ್ ಪವಾರ್ ಅವರು ಏಟು ತಿಂದ ಅಪಾಯಕಾರಿ ಪ್ರಕರಣವೂ ನಮ್ಮ ಮುಂದೆ ನಡೆದಿದೆ. ದೇಶದಲ್ಲಿ ಪರಿಸ್ಥಿತಿ ಹೀಗಿರುವಾಗ, ‘ಈ ಸರಕಾರವಂತೂ ಏನೂ ಮಾಡುತ್ತಿಲ್ಲ. ನಮ್ಮ ಆಕ್ರೋಶವನ್ನು, ಸಿಟ್ಟು ಸೆಡವುಗಳನ್ನು ಫೇಸ್‌ಬುಕ್, ಟ್ವಿಟರ್‌ಗಳಲ್ಲಾದರೂ ಹರಿದುಬಿಟ್ಟು, ಕೊಂಚ ನೆಮ್ಮದಿಯಿಂದಿರೋಣ’ ಎಂದುಕೊಂಡಿದ್ದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನವೊಂದು ನಡೆದಾಗ ಜನರಿಗೆಷ್ಟು ನೆತ್ತರು ಕುದಿಯಲಿಕ್ಕಿಲ್ಲ? ಈ ರೀತಿಯ ಹೇಳಿಕೆಗಳನ್ನು ನೀಡಿ, ಟ್ವಿಟರ್-ಫೇಸ್‌ಬುಕ್‌ಗಳಲ್ಲಿ ನಿಂದನಾತ್ಮಕ ಪದಪ್ರಯೋಗದ ಪ್ರವಾಹವನ್ನು ಸಿಬಲ್ (ತಮ್ಮ ವಿರುದ್ಧವೇ!) ಹೆಚ್ಚಿಸಿದ್ದಾರೆ ಅಷ್ಟೇ.

ಈಗ ಸರಕಾರದ ಅಥವಾ ಒಟ್ಟಾರೆಯಾಗಿ ರಾಜಕಾರಣಿಗಳ ಹಗರಣಗಳ ಬಗ್ಗೆ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವುದು ಇಂಟರ್ನೆಟ್‌ನಲ್ಲಿಯೇ. ಈ ಅದ್ಭುತ ಮಾಹಿತಿ ಸಾಮ್ರಾಜ್ಯದಲ್ಲಿ ನಮ್ಮನ್ನಾಳುವವರು ಏನು ಹೇಳಿದ್ದಾರೆ, ಏನು ಮಾಡಿದ್ದಾರೆ, ಯಾವ ಪರಿ ತಿಪ್ಪರಲಾಗ ಹಾಕಿದ್ದಾರೆ, ಅವರ ಹಗರಣಗಳೇನು ಎಂಬುದೆಲ್ಲಾ ಕ್ಷಣಾರ್ಧದಲ್ಲಿ ನಿಮ್ಮ ಮುಂದಿರುತ್ತದೆ.

ಈ ಹಿಂದೆ ನಿಮಗೆ ನೆನಪಿರಬಹುದು. ಟ್ವಿಟರ್‌ನಲ್ಲಿ ಯುಪಿಎ ಸರಕಾರದ ವಿರುದ್ಧವೋ, ಜಾತ್ಯತೀತತೆ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನೋ ವಿರೋಧಿಸಿ ಬರೆದವರನ್ನು ‘ಇಂಟರ್ನೆಟ್ ಹಿಂದುಗಳು’ ಎಂಬ ಹಣೆಪಟ್ಟಿಯೊಂದನ್ನು ಕಟ್ಟಲಾಗಿತ್ತು. ಅಂದರೆ, ಬೆಲೆ ಏರಿಕೆ, ಮೂಲ ಸೌಕರ್ಯಗಳ ಕೊರತೆ, ಲಂಚ-ಭ್ರಷ್ಟಾಚಾರದ ವಿರುದ್ಧ ಮತ್ತು ಇದೆಲ್ಲಾ ನಡೆಯುತ್ತಿರುವ ಆಡಳಿತ ಯಂತ್ರದ ವಿರುದ್ಧ ಧ್ವನಿಯಾಗಲು ತಮಗೆ ಬೇರಾವುದೇ ಮಾಧ್ಯಮಗಳು ಇಲ್ಲದಾದಾಗ, ಜನ ಸಾಮಾನ್ಯರ ಒಡಲಿನ ನಿತ್ಯ ವೇದನೆಗೆ ಮಾಧ್ಯಮಗಳು ಧ್ವನಿ ನೀಡದೇ ಹೋದಾಗ, ಈ ತಥಾಕಥಿತ ‘ಇಂಟರ್ನೆಟ್ ಹಿಂದುಗಳು’ ಫೇಸ್‌ಬುಕ್, ಬ್ಲಾಗ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೊರೆ ಹೊಕ್ಕರು. ಸರಕಾರವನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ಪ್ರಮುಖ ವಾಹಿನಿಗಳ ಪತ್ರಕರ್ತರ ಮೇಲೂ ಹರಿಹಾಯ್ದರು.

ಇಂಥದ್ದೊಂದು ಅಸಹನೆಗೆ ಕಾರಣವೂ ಇಲ್ಲದಿಲ್ಲ. ಜನರ ರಕ್ತಹೀರುವ ಭ್ರಷ್ಟಾಚಾರದಿಂದ ಮುಕ್ತಿ ದೊರಕಿಸಿಕೊಡಲು ಸಾಮಾಜಿಕ ಹೋರಾಟ ನಡೆಸುತ್ತಿರುವ, ಪ್ರಬಲವಾದ ಲೋಕಪಾಲ ಕಾಯಿದೆಗೆ ಆಗ್ರಹಿಸುತ್ತಿರುವವರ ಜೀವನ ಚರಿತ್ರೆ ಕೆದಕಿ, ತೇಜೋವಧೆ ಮಾಡಲಾಗುತ್ತಿದೆ. ಕಪ್ಪು ಹಣ ವಾಪಸ್ ತರಿಸಲು ಆಗ್ರಹಿಸಿದವರ ಮೇಲೆ ಲಾಠಿ ಬೀಸಿ, ಚಳವಳಿಯೊಂದನ್ನು ಹತ್ತಿಕ್ಕಲಾಗಿದೆ. ಲಾಠಿಯೇಟಿನಿಂದಲೇ ರಾಜ್ ಬಾಲಾ ಎಂಬ ಮಹಿಳೆಯೊಬ್ಬಾಕೆ ಸಾವನ್ನಪ್ಪಿದರೂ, ಲಾಠಿ ಪ್ರಯೋಗಿಸಲೇ ಇಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಲಾಗುತ್ತಿದೆ. 2ಜಿ ಹಗರಣದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಕ್ಕಿಬಿದ್ದ ಭಾರೀ ಕುಳಗಳ ಜಾಮೀನು ಅರ್ಜಿಯನ್ನು ನಾವು ವಿರೋಧಿಸುವುದಿಲ್ಲ ಅಂತ ತನಿಖಾ ಮಂಡಳಿಗಳು ಹೇಳಿ ಕೈತೊಳೆದುಕೊಳ್ಳುತ್ತಾ ಅಚ್ಚರಿ ಹುಟ್ಟಿಸುತ್ತವೆ. ಸಿಬಿಐ ಸ್ವಾಯತ್ತ ತನಿಖಾ ಸಂಸ್ಥೆಯಾದರೂ, ಅದನ್ನು ಲೋಕಪಾಲದ ಪರಿಧಿಗೆ ಬಾರಗೊಡದೆ, ತಮಗಾಗದವರ ಮೇಲೆ ಛೂಬಿಟ್ಟು, ಅಗತ್ಯ ಬಿದ್ದಾಗ ಕೇಸು ವಾಪಸ್ ತೆಗೆದುಕೊಳ್ಳುವ ಅದೆಷ್ಟೋ ಪ್ರಕರಣಗಳು ನಮ್ಮ ಮುಂದಿವೆ. ಜನರ ಬವಣೆಗಳಿಗೆ ಧ್ವನಿಯಾಗಬೇಕಾದ ಪ್ರತಿಪಕ್ಷಗಳು ಕೂಡ ಆಳುವವರ ‘ವಿಷಯಾಂತರ’ ತಂತ್ರಕ್ಕೆ ಬಲಿಯಾಗಿಹೋಗಿವೆ. ಹೀಗಾದರೆ ಜನ ಸಾಮಾನ್ಯರ ಒಡಲ ಧ್ವನಿಗೆ ಧ್ವನಿವರ್ಧಕ ಆಗುವವರಾದರೂ ಯಾರು?

ಹಾಗಂತ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದಾಕ್ಷಣ ಬಾಯಿಗೆ ಬಂದಂತೆ ಬರೆದುಕೊಳ್ಳುವುದೋ, ವ್ಯಕ್ತಿನಿಂದನೆ, ತೇಜೋವಧೆ ಅಭಿಯಾನ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾರ್ಯ… ಇದಕ್ಕೆಲ್ಲಾ ಸ್ವಯಂ ಕಡಿವಾಣ ಬೇಕಾಗುತ್ತದೆ ಎಂಬುದು ದಿಟವಾದರೂ, ಮಾಹಿತಿ ತಂತ್ರಜ್ಞಾನ ಸಚಿವರ ಈ ಸೂಚನೆಯು ಕಾರ್ಯತಃ ಅಸಾಧ್ಯವಾದ ಕೆಲಸ ಎಂಬುದು ಅವರಿಗೂ ಗೊತ್ತಾಗಲಿಲ್ಲವೇಕೆ? ಪ್ರತಿಯೊಂದು ಕಾಮೆಂಟು, ಹೇಳಿಕೆ, ಅಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸಿ ಪ್ರಕಟಿಸುವ ಹೊತ್ತಿಗೆ, ಸಮಯ ಮೀರುತ್ತದೆ ಎಂಬುದವರಿಗೆ ತಿಳಿಯಲಿಲ್ಲವೇ? ಹೀಗೆಲ್ಲಾ ನಿಯಂತ್ರಣ ಕಾರ್ಯಕ್ಕೆ ಮುಂದಾಗುವ ಬದಲು ಜಪ್ಪಯ್ಯ ಅಂದರೂ ಕೆಳಗಿಳಿಯಲಾರೆ ಎನ್ನುತ್ತಲೇ ಇರುವ ಆವಶ್ಯಕ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಿದ್ದರೆ?

ಯಡಿಯೂರಪ್ಪ ‘ಜೈಲು ಯಾತ್ರೆ’ಯೂ, ಮಾಧ್ಯಮಗಳ ಕರ್ತವ್ಯ ಪ್ರಜ್ಞೆಯೂ!

Leave a comment

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ, ಆಕೆಯನ್ನು ಅವರ ಸಿಖ್ ಸಮುದಾಯದ ಅಂಗರಕ್ಷಕ ಗುಂಡಿಟ್ಟು ಕೊಂದನೆಂಬ ಏಕೈಕ ಕಾರಣಕ್ಕೆ ಸಾವಿರಾರು ನಿಷ್ಪಾಪಿ ಸಿಖ್ಖರನ್ನು ಕೊಚ್ಚಿ ನರಮೇಧ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು – “ಹೆಮ್ಮರವೊಂದು ಉರುಳಿ ಬಿದ್ದಾಗ, ಭೂಮಿಯೇ ಅದುರುವುದು ಸಹಜ”! ಇದು ನೆನಪಾಗಿದ್ದು, ಜನಸಂಘದ ಕಾಲದಿಂದಲೂ ಪಕ್ಷ ಕಟ್ಟುತ್ತಾ, ಇಬ್ಬರೇ ಶಾಸಕರಿದ್ದ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರದ ಪಟ್ಟಕ್ಕೇರಿಸಿ, ಇದೀಗ ‘ಮಹಾ ಪತನ’ಗೊಂಡ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಹೋರಾಟಗಾರ ಪರಪ್ಪನ ಅಗ್ರಹಾರದ ಜೈಲಿನೊಳಗೆ ಹೋದಾಗ.

ಹೋರಾಟಗಾರ ಎಂಬ ಪದಕ್ಕೆ ಕೆಲವರ ಆಕ್ಷೇಪವಿರಬಹುದು. ಆದರೆ, 1975ರಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ 45 ದಿನಗಳ ಕಾಲ ಹುಬ್ಬಳ್ಳಿ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹಗಳಲ್ಲಿ ಕಳೆದಿದ್ದ ಯಡಿಯೂರಪ್ಪ ಅವರಿಗೆ ಜೈಲು ಎಂಬುದು ತೀರಾ ಅರಿಯದ ಸಂಗತಿಯೇನಲ್ಲವಾದರೂ, ಈಗ ಜೈಲು ಪಾಲಾಗಿರುವುದು ತಮ್ಮ ಪುತ್ರವ್ಯಾಮೋಹದಿಂದಾಗಿ ಜಮೀನನ್ನು ಡೀನೋಟಿಫೈ ಮಾಡಿ, ತಮ್ಮ ಮಕ್ಕಳಿಗೆ ಅದೇ ಜಮೀನನ್ನು ಕಡಿಮೆ ದುಡ್ಡಿಗೆ ಕೊಡಿಸಿದರು ಎಂಬ ಆರೋಪಕ್ಕೆ ಸಂಬಂಧಿಸಿದ ಖಾಸಗಿ ಕೇಸುಗಳ ರಾಶಿಯಿಂದಾಗಿ. ಅವರು ಪೊಲೀಸರ ಬಂಧನಕ್ಕೆ ಸಿಲುಕದೆ, ತಾವಾಗಿಯೇ ಶರಣಾಗತರಾಗಿ, ಬಿಜೆಪಿ ಮತ್ತು ತಮ್ಮ ಮಾನ ಉಳಿಸಲು ನೋಡಿದ್ದಾರೆ. ಆದರೆ, ಕೋರ್ಟಿನಿಂದ ಜೈಲು, ಜೈಲಿನಿಂದ ಆಸ್ಪತ್ರೆ ಮತ್ತು ಮರಳಿ ಜೈಲಿಗೆ ಹೋದ ಈ ಘಟನಾವಳಿಗಳನ್ನು ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದಾಗ, ಮತ್ತು ವೆಬ್‌ದುನಿಯಾ ಓದುಗರು ಕೆಲವರು ಸುದ್ದಿಗಳಲ್ಲಿ ದಾಖಲಿಸಿದ ಕಾಮೆಂಟುಗಳನ್ನು ನೋಡಿದಾಗ ಈ ಬಗ್ಗೆ ಬರೆಯಲೇಬೇಕೆನಿಸಿತು.

ಒಂದು ಕಾಲವಿತ್ತು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಅಂತ ಸ್ವತಃ ವಿರೋಧ ಪಕ್ಷಗಳವರೂ ಒಪ್ಪುತ್ತಿದ್ದ ಕಾಲವದು. ಇನ್ನು ಇಪ್ಪತ್ತು ವರ್ಷ ಈ ಯಡಿಯೂರಪ್ಪನೇ ಸರ್ಕಾರ ನಡೆಸುತ್ತಾನೆ ಅಂತ ಅವರೇ ಹಲವು ಸಭೆ ಸಮಾರಂಭಗಳಲ್ಲಿ ಆತ್ಮವಿಶ್ವಾಸದಿಂದ ಹೇಳಿಕೊಂಡದ್ದಿದೆ ಮತ್ತು ಪ್ರತಿ ಉಪ ಚುನಾವಣೆಗಳಲ್ಲಿಯೂ ಅವರು ಬಿಜೆಪಿಗೆ ವಿಜಯ ದೊರಕಿಸಿಕೊಡುವ ಮೂಲಕ ಅದನ್ನು ಸಾಧಿಸಲು ಹೊರಟಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಬಹುಶಃ ಇದುವೇ ಎಡವಟ್ಟಾಗಿರುವುದು.

ಆದರೆ, ನಾಲ್ಕನೇ ಆಧಾರಸ್ಥಂಭವಾದ ಸುದ್ದಿ ಮಾಧ್ಯಮದ ನಡೆ ಎತ್ತ….?
ಇಷ್ಟು ಹೇಳಿ, ಒಂದು ಪ್ರಜಾಪ್ರಭುತ್ವದ ಅಳಿವು ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದೊಂದಿಗೆ ಮಾಧ್ಯಮರಂಗವೂ ನಾಲ್ಕನೇ ಸ್ತಂಭವಾಗಿದೆ ಎಂಬ ಚರ್ವಿತ ಚರ್ವಣ ಮಾತನ್ನು ಈಗಲೂ ಕೇಳುತ್ತಿದ್ದೇವೆ. ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ಭ್ರಷ್ಟತೆಯ ಬಣ್ಣ ಅಂಟಿಕೊಂಡು ಅದೆಷ್ಟೋ ಸಮಯ ಕಳೆದಿದೆ. ಆದರೀಗ, ಮಾಧ್ಯಮ ರಂಗಕ್ಕೂ ಈ ಕಳಂಕ ಬಂದಿದೆ ಮತ್ತು ಅದನ್ನು ಎಗ್ಗಿಲ್ಲದೆ ತೋರ್ಪಡಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಈ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಎಂಬ ಕಾರ್ಪೊರೇಟ್ ಕುಳ ಬಯಲಿಗೆಳೆದ ಮಾಹಿತಿಯನ್ನೇ ನೋಡಿ, ಹಲವು ‘ಮಹಾನ್’ ಪತ್ರಕರ್ತರ ಬಣ್ಣ ಬಯಲಾಗಿದೆ. ಆ ನಂತರ, ನೋಟಿಗಾಗಿ ಓಟು ಅಥವಾ ಓಟಿಗಾಗಿ ನೋಟು ಎಂಬ, ಈ ದೇಶದ ಪ್ರಜಾತಂತ್ರ ವ್ಯವಸ್ಥೆಗೇ ಕಪ್ಪು ಚುಕ್ಕೆಯಾಗಿಬಿಟ್ಟ ಹಗರಣದಲ್ಲಿ ಮತ್ತೊಂದು ದೃಶ್ಯ ಮಾಧ್ಯಮದ ಹೆಸರಿಗೆ ಸೆಗಣಿ ಮೆತ್ತಿಕೊಂಡಿತ್ತು. ಇವುಗಳನ್ನೆಲ್ಲಾ ಒತ್ತಟ್ಟಿಗಿರಿಸಿ, ಕರ್ನಾಟಕದ ಮಾಧ್ಯಮರಂಗದಲ್ಲೂ ಇಂಥದೇ ಬೆಳವಣಿಗೆಯಾಗುತ್ತಿದೆಯೇ ಎಂಬ ಶಂಕೆಯೇ ಆತಂಕಕಾರಿ ಸಂಗತಿ.

ಈಗ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಮೀನನ್ನು ಡೀನೋಟಿಫೈ ಮಾಡಿಸಿ, ತಮ್ಮ ಪುತ್ರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಇದು ಭ್ರಷ್ಟಾಚಾರ ಎಂಬ ಕಾರಣಕ್ಕೆ ಅವರ ವಿರುದ್ಧ ಕೇಸು ದಾಖಲಾಗಿದೆ, ಅವರು ನ್ಯಾಯಾಂಗ ಬಂಧನಕ್ಕೆ ಹೋಗುವ ಮೂಲಕ ಅವರ ನಾಲ್ಕು ದಶಕಗಳ ಹೋರಾಟದ ಗರಿಮೆಗೆ ಮಸಿ ಬಳಿದಂತಾಗಿದೆ. ಈ ಬಗ್ಗೆ ನೆಲದ ಕಾನೂನು ತನ್ನದೇ ಕ್ರಮವನ್ನು ಕೈಗೊಳ್ಳುತ್ತಿದೆ. ಇದರಿಂದಾಗಿ ಯಡಿಯೂರಪ್ಪ ಅವರು ತಲೆಮರೆಸಿಕೊಳ್ಳದೆ (ಆದರೆ, ಮಾಧ್ಯಮಗಳ ಕಣ್ಣಿಗೆ ಸಿಲುಕದೆ), ನ್ಯಾಯಾಲಯಕ್ಕೆ ಶರಣಾಗಿದ್ದಾರೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದಾರೆ, ಮತ್ತೆ ಜೈಲು ಪಾಲಾಗಿದ್ದಾರೆ.

ಆದರೆ, ಕೇಸು ದಾಖಲಾಗಿ, ಜಾಮೀನು ನಿರಾಕರಣೆಯಾದಾಗ, ಯಡಿಯೂರಪ್ಪ ಅವರು ಕಾನೂನಿನ ಕೈಯಿಂದ ನುಣುಚಿಕೊಳ್ಳಲು ಓಡಿಹೋಗುತ್ತಾರೆ ಎಂದೆಲ್ಲಾ ಇದೇ ಮಾಧ್ಯಮಗಳು ಬಿಂಬಿಸಿದವು. ಕೊನೆಗೆ ಅವರು ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಗೆ ಸಿಲುಕದೆ ಇದ್ದಾಗ “ಇದು ತಪ್ಪು, ಮಾಧ್ಯಮಗಳಿಂದ ತಪ್ಪಿಸಿಕೊಂಡು ಅವರು ಮನೆಯಿಂದಲೇ ಅಜ್ಞಾತ ಸ್ಥಳಕ್ಕೆ ಪರಾರಿಯಾದರು” ಅಂತೆಲ್ಲಾ ಮೊದಲು ಬಿಂಬಿಸಲ್ಪಟ್ಟು, ನಂತರ, ನ್ಯಾಯಾಲಯದಲ್ಲಿ ಅವರು ಶರಣಾದಾಗಲೂ, ಬಿಎಸ್‌ವೈ ಅವರ ಕಾರ್ಟೂನುಗಳನ್ನು ಹಾಕಿ, ಅಳುತ್ತಿರುವಂತಹಾ ದೃಶ್ಯಗಳನ್ನು, ಕಂಬಿ ಎಣಿಸುವ ಕ್ಯಾರಿಕೇಚರ್‌ಗಳನ್ನು ಪ್ರದರ್ಶಿಸಿದವು. ವ್ಯಂಗ್ಯಚಿತ್ರಗಳೊಂದಿಗೆ ಆನಿಮೇಶನ್‌ಭರಿತ ಹಾಡುಗಳೆಲ್ಲವೂ ಜನರನ್ನು ರಂಜಿಸಿದವು. ಕೆಲವು ಪತ್ರಿಕೆಗಳಂತೂ ಧಾರಾವಾಹಿ ರೂಪದಲ್ಲಿ, ಯಡಿಯೂರಪ್ಪ ಅವರ ಒಂದೊಂದು ನಡೆಯನ್ನೂ ಇಂಚಿಂಚಾಗಿ ವಿಶ್ಲೇಷಿಸಿ, ನ್ಯೂಸ್ ಬದಲು ವ್ಯೂಸ್ (views) ಹೆಚ್ಚು ತುರುಕಿ, ಓದುಗರಿಗೆ ರಸದೌತಣವನ್ನೇ ನೀಡಿದವು. ಅಲ್ಲಿ ವಸ್ತುನಿಷ್ಠತೆಗೆ, ವಿಶ್ವಾಸಾರ್ಹತೆಗೆ ಬೆಲೆ ಇರಲಿಲ್ಲ.

ಆ ಬಳಿಕ, ಯಡಿಯೂರಪ್ಪ ಜಾಮೀನಿಗೆ ಅರ್ಜಿ ಸಲ್ಲಿಸಿ, ಇತರೆಲ್ಲ ಆರೋಪಿಗಳೂ ಮಾಡಿರುವಂತೆಯೇ, ಅನಾರೋಗ್ಯ ಕಾರಣಗಳನ್ನು ಮುಂದಿಡುತ್ತಿದ್ದಾರೆ, ಹೈ ಡ್ರಾಮಾ ಮಾಡುತ್ತಿದ್ದಾರೆ ಎಂಬುದು ಅತೀ ಹೆಚ್ಚು ವರ್ಣರಂಜಿತವಾಗಿ ಚರ್ಚೆಗೆ ಗ್ರಾಸವಾಯಿತು. ಅವರು ಜೈಲಿನಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಜೈಲಿಗೆ ರವಾನೆಯಾಗುವ ದೃಶ್ಯಾವಳಿಗಳು ರನ್ನಿಂಗ್ ಕಾಮೆಂಟರಿ ರೂಪದಲ್ಲಿ ಹರಿದುಬಂದವು. ನಾವು ಹೆಚ್ಚು ಕವರೇಜ್ ನೀಡುತ್ತಿದ್ದೇವೆ ಎಂಬ ಹೆಗ್ಗಳಿಕೆಗಾಗಿ, ಟಿಆರ್‌ಪಿ ಏರಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಚಾನೆಲ್‌ಗಳೂ ಹಗಲು ರಾತ್ರಿ ಕೆಲಸ ಮಾಡಿದವು. ಎಲ್ಲೆಲ್ಲೂ ಕ್ಯಾಮರಾಗಳೇ ಕಾಣಿಸುತ್ತಿದ್ದವೇ ಹೊರತು, ಯಡಿಯೂರಪ್ಪ ಕಾಣಿಸಲಿಲ್ಲ. ಅಂತೂ ಅವರು ಕೊನೆಗೆ, ಕ್ಯಾಮರಾ ಕಣ್ಣುಗಳಿಗೆ ಬೀಳದಂತಾಗಲೂ ಬೆಡ್‌ಶೀಟ್ ಕವರ್ ಮೂಲಕ ಆಂಬ್ಯುಲೆನ್ಸ್‌ಗೆ ಹೋಗಬೇಕಾದ ಪ್ರಸಂಗವೂ ಬಂತು. ಮಾಧ್ಯಮಗಳಲ್ಲೆಲ್ಲಾ ಅವಮಾನಕಾರಿ ಲೇಖನಗಳು ಬಂದವು. ಊಹಾಪೋಹದ ವರದಿಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆತು, ತೇಜೋವಧೆ, ಚಾರಿತ್ರ್ಯಹನನವೇ ಜಾಸ್ತಿಯಾಗತೊಡಗಿದಾಗ ರೋಸಿ ಹೋದ ಯಡಿಯೂರಪ್ಪ, “ಚಿಕಿತ್ಸೆಯೇ ಬೇಡ, ಜೈಲಿಗೇ ಹೋಗುತ್ತೇನೆ, ಅಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ” ಅಂದುಬಿಟ್ಟರು ಮತ್ತು ಜೈಲಿಗೆ ಮರಳಿದರು. ಇದನ್ನೂ ಕೂಡ, ಐಷಾರಾಮಿ ಜೈಲು ಯಾತ್ರೆ ಎಂದು ಕರೆಯಲಾಯಿತು.

ಹಾಗಂತ, ಇದು ಯಡಿಯೂರಪ್ಪರಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಟ ದರ್ಶನ್ ಬಂಧನ ವಿಷಯದಲ್ಲಾಗಲೀ, ಎಚ್.ಡಿ.ಕುಮಾರಸ್ವಾಮಿ ಪತ್ನಿಸಮೇತರಾಗಿ ನ್ಯಾಯಾಲಯಕ್ಕೆ ಬರುತ್ತಿರುವ ವಿಚಾರವಾಗಲೀ, ದೆಹಲಿಯಲ್ಲಿ ಎ.ರಾಜಾ, ಕನಿಮೋಳಿ ಮುಂತಾದವರು ಜೈಲುಪಾಲಾದ ವಿಚಾರಗಳಲ್ಲಾಗಲೀ, ಮಾಧ್ಯಮಗಳು ಮಾಡಿದ್ದು ಇದೇ ರೀತಿಯಲ್ಲವೇ?

ಸಮಾಜ ತಿದ್ದುವ ಮಾಧ್ಯಮಗಳಿಗೇಕೆ ಕಳಂಕ ?
ಮೂರು ದಶಕಗಳ ಹೋರಾಟದ ರಾಜಕೀಯ ಚರಿತ್ರೆಯುಳ್ಳ ಯಡಿಯೂರಪ್ಪ ಅವರಿಗೆ ಅಂಟಿಕೊಂಡ ಈ ಕಳಂಕವು ಖಂಡಿತವಾಗಿಯೂ ಅವರ ಹೋರಾಟದ ಬದುಕಿಗೊಂದು ಕಪ್ಪು ಚುಕ್ಕೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಅವರು ಮೂರು ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ದೊರೆತದ್ದಕ್ಕಿಂತ ಅವರ ವಿರುದ್ಧದ ಸಂಚು-ಒಳಸಂಚುಗಳಿಗೇ ದೊರೆತ ಪ್ರಚಾರವೇ ಗರಿಷ್ಠ.

ಇಲ್ಲಿ ಪ್ರಶ್ನೆ ಇರುವುದೆಂದರೆ, ಮಾಧ್ಯಮಗಳಿಗೂ ಯಾಕೆ ಕಳಂಕ ತಟ್ಟಿಕೊಳ್ಳಬೇಕು ಎಂಬುದು. ವಸ್ತುನಿಷ್ಠ ವರದಿ ನೀಡಿದರೆ ಮಾಧ್ಯಮಗಳ ಬಗ್ಗೆ ಯಾರೂ ಕೈಯೆತ್ತಿ ತೋರಿಸುವಂತಿಲ್ಲ. ಆದರೆ ಇತ್ತಿತ್ತಲಾಗಿ, ಸರಕಾರದಿಂದ ಸೈಟು ಪಡೆದುಕೊಂಡಿದ್ದಾರೆ, ಅಲ್ಲಲ್ಲಿ ಸೈಟುಗಳನ್ನು ಮಾಡಿಕೊಂಡಿದ್ದಾರೆ, ವಾಣಿಜ್ಯ ಕಟ್ಟಡ ಕಟ್ಟಿಸಿದ್ದಾರೆ, ಅಕ್ರಮ ಗಣಿ ಕಪ್ಪ ಪಡೆದುಕೊಂಡಿದ್ದಾರೆ ಎಂಬೆಲ್ಲಾ ಆರೋಪಗಳು ಜೋರಾಗಿ ಮತ್ತು ಬಲವಾಗಿ ಕೇಳಿಬರುತ್ತಿರುವುದು ಖಂಡಿತವಾಗಿಯೂ ಕನ್ನಡದ ಮಾಧ್ಯಮಲೋಕಕ್ಕೆ ಹಿತವಲ್ಲ.

ಯಡಿಯೂರಪ್ಪ ಅಧಿಕಾರಕ್ಕೇರಿದಾಗಿನಿಂದ ಚರ್ಚುಗಳ ಮೇಲೆ ದಾಳಿ, ರೈತರ ಮೇಲೆ ಗೋಲೀಬಾರ್, ನೈಸ್ ರಸ್ತೆಯ ಹೋರಾಟ, ಅಕ್ರಮ ಗಣಿಗಾರಿಕೆ, ಭೂಹಗರಣ ಮುಂತಾದವುಗಳ ಕುರಿತು ಮಾಧ್ಯಮಗಳ ಅಬ್ಬರದ ಕವರೇಜ್ (ಅದು ಏಕಪಕ್ಷೀಯವೋ ಅಥವಾ ನಿಷ್ಪಕ್ಷಪಾತವೋ ಎಂಬುದನ್ನು ಓದುಗರು, ಪ್ರೇಕ್ಷಕರು ನಿರ್ಧರಿಸಬೇಕು) ನೋಡಿದಾಗ, ಈ ಮಾಧ್ಯಮದ ಮಂದಿಯೇಕೆ ಅವರ ವಿರುದ್ಧ ಮಾತ್ರ ಅಷ್ಟೊಂದು ಬಂಡೆದ್ದು ನಿಂತಿದ್ದಾರೆ? ವೈಯಕ್ತಿಕವಾಗಿ ಯಡಿಯೂರಪ್ಪ ಮೇಲೆ, ಶೋಭಾ ಕರಂದ್ಲಾಜೆ ಮೇಲೆ ಅವರಲ್ಲಿ ಕೆಲವರಿಗೆ ಎಷ್ಟೊಂದು ಆಕ್ರೋಶವಿರಬಹುದು ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತಿದೆ. ಯಾಕೆಂದರೆ ಗಣಿ ಹಗರಣದ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಇಬ್ಬರ ಹೆಸರು ಮಾತ್ರವೇ ಅಲ್ಲವಲ್ಲ ದಾಖಲಾಗಿದ್ದುದು? ಪಕ್ಷಾತೀತವಾಗಿಯೇ ಇಲ್ಲಿ ಕೊಳ್ಳೆ ಹೊಡೆಯಲಾಗಿದೆ ಅಂತಲೇ ಉಲ್ಲೇಖವಿತ್ತಲ್ಲ?

ಒಟ್ಟಾರೆಯಾಗಿ, ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ದಿನ ಪುಟಗಟ್ಟಲೆ ಪ್ರಕಟವಾದ, ಗಂಟೆಗಟ್ಟಲೆ ಪ್ರಸಾರವಾದ ಮಾಹಿತಿಗಳು, ಆ ನಂತರ ಅವರ ಶರಣಾಗತಿಯ ಸಂದರ್ಭದಲ್ಲಿ ನಮ್ಮ ನಿಮ್ಮೆಲ್ಲರ ಕಣ್ಣೆದುರು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಪರಿಯನ್ನು ನೋಡಿದರೆ, ಮಾಧ್ಯಮಗಳು ಕೂಡ ಯಾವುದೋ ಒಂದು ಸಂಚಿನ ಭಾಗವಾಗಿ, ಯಾರದೋ ಕೈಯಲ್ಲಿ ಆಡುತ್ತಿರುವ ಗೊಂಬೆಗಳಂತೆ ಗೋಚರಿಸುತ್ತಾರೆ. ಸಮಾಜದ ಏಳಿಗೆಗೆ, ಅಭಿವೃದ್ಧಿಪರ ಕಾರ್ಯಗಳಿಗೆ, ಭವ್ಯ ಭವಿಷ್ಯದ ಭಾವೀ ಪ್ರಜೆಗಳು ಎಂದು ಪರಿಗಣಿಸಲಾಗುವ ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ತುಂಬಬೇಕಿರುವ ಮಾಧ್ಯಮಗಳೇ ಹಾದಿ ತಪ್ಪುತ್ತಿವೆಯೇ ಎಂಬ ಪ್ರಶ್ನೆ ಉದ್ಭವವಾಗಿರುವುದು ಖಂಡಿತಾ ಅಪಾಯಕಾರಿ ಬೆಳವಣಿಗೆಯೇ.

ಏಕ ಪಕ್ಷೀಯ ವರದಿಗಳು ಮತ್ತು ವ್ಯಕ್ತಿ ಕೇಂದ್ರಿತ ತೇಜೋವಧೆ ಅಭಿಯಾನವೇ ಮಾಧ್ಯಮಗಳಿಗೆ ಕಳಂಕ ತಂದಿರುವುದು. ನಮ್ಮಲ್ಲಿ ಎಂತೆಂಥಾ ಪತ್ರಕರ್ತರಿದ್ದಾರೆ! ಅದೆಷ್ಟೋ ಹಗರಣಗಳನ್ನು ತನಿಖಾ ವರದಿಯ ಮೂಲಕ ಬಯಲಿಗೆಳೆದವರಿದ್ದಾರೆ! ಆದರೆ, ಯಡಿಯೂರಪ್ಪ ಒಬ್ಬರೇ ಭೂಮಿ ನುಂಗಿದವರು, ಡೀನೋಟಿಫಿಕೇಶನ್ ಮಾಡಿಸಿದವರು, ಆಪ್ತರಿಗೆ, ನೆಂಟರಿಗೆ, ಕುಟುಂಬಿಕರಿಗೆ ಸೈಟು ಕೊಡಿಸಿದವರು ಎಂಬ ಬಗ್ಗೆ ಮಾತ್ರವೇ ತನಿಖೆಯಾಗಿದೆ. ಬೇರೆ ನಾಯಕರು, ಬೇರೆ ಪಕ್ಷಗಳ ಮೇಲೂ ಅಲ್ಲೊಂದಿಲ್ಲೊಂದು ಹಗರಣದ ಮಾತು ಕೇಳಿ ಬಂದವಾದರೂ, ಅವುಗಳ ಮೇಲೆ ಬೆಳಕು ಚೆಲ್ಲಲೇ ಇಲ್ಲ. ಇದು ವ್ಯಕ್ತಿಕೇಂದ್ರಿತ ತೇಜೋವಧೆ ಕಾರ್ಯಾಚರಣೆ ಅಂತ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದುದು ನೆನಪಾಗುತ್ತಿದೆ. ಹೀಗಾಗಿ ಮಾಧ್ಯಮಗಳ ವಸ್ತುನಿಷ್ಠತೆ, ವಿಶ್ವಾಸಾರ್ಹತೆಯು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಮಾಧ್ಯಮ ಮಿತ್ರರ ಕೈಯಲ್ಲೇ ಇದೆ.

ಹಾಗಂತ ಮಾಧ್ಯಮಗಳು ಬರೇ ನೆಗೆಟಿವ್ ತೋರಿಸುತ್ತವೆ ಎನ್ನುವಂತಿಲ್ಲ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಯಶಸ್ಸು ದೊರಕಿಸಿಕೊಡುವಲ್ಲಿ. 2ಜಿ ಹಗರಣ ಬಯಲಿಗೆಳೆಯುವಲ್ಲಿ, ಗಣಿ ಹಗರಣವನ್ನು ಬಯಲಿಗೆಳೆಯುವಲ್ಲಿ, ರಾಜ್ಯದ ಭೂಹಗರಣವನ್ನು ಕೆದಕುವಲ್ಲಿ ಕೂಡ ಮಾಧ್ಯಮಗಳು ಅತ್ಯಂತ ಶ್ಲಾಘನಾರ್ಹ ಪಾತ್ರ ವಹಿಸಿರುವುದನ್ನು ಖಂಡಿತಾ ಮರೆಯುವಂತಿಲ್ಲ. ಮತ್ತು ಭ್ರಷ್ಟಾಚಾರದ ವಿರುದ್ಧ, ಭ್ರಷ್ಟರ ವಿರುದ್ಧ, ಅವರೆಷ್ಟೇ ದೊಡ್ಡವರಾಗಲೀ, ಯಾವುದೇ ಪಕ್ಷದವರಾಗಲೀ, ವಸ್ತುನಿಷ್ಠ ವರದಿ ಮಾಡಲೇಬೇಕು ಎಂಬುದರಲ್ಲಿಯೂ ಎರಡು ಮಾತಿಲ್ಲ. ಅದೇ ಒಂದು ಪರಿಸ್ಥಿತಿ ನೆನಪಿಸಿಕೊಳ್ಳಿ. ಯಡಿಯೂರಪ್ಪ ಹೇಗೂ ಜೈಲೋ, ಆಸ್ಪತ್ರೆಯೋ ಸೇರುತ್ತಾರೆ ಎಂಬುದು ಗ್ಯಾರಂಟಿ. ಇಡೀ ಎರಡು-ಮೂರು ದಿನ ಯಡಿಯೂರಪ್ಪಗೆ ಕವರೇಜ್ ನೀಡುವ ಬದಲು, ಇಂತಿಂಥಾ ಊರಲ್ಲಿ ರಸ್ತೆ ಸರಿ ಇಲ್ಲ, ಮೂಲ ಸೌಕರ್ಯ ಇಲ್ಲ ಅಂತೆಲ್ಲಾ ಜನ-ಪರವಾದ ವಿಶೇಷ ವರದಿಗಳನ್ನು ಮಾಡಿದರೆ ಎಷ್ಟು ಹಿತವಾಗಿರುತ್ತದೆ, ಅಲ್ಲವೇ?

ಪಕ್ಷದೊಳಗಿನ ಮತ್ತು ಹೊರಗಿನ ಸಂಚು
ಎಚ್.ಆರ್.ವಿಶ್ವನಾಥ್ ಎಂಬ ವಕೀಲರೊಬ್ಬರು ಹೈಕೋರ್ಟಿನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನೋಡಿದಾಗ ಇದು ಖಚಿತವಾಗಿಬಿಟ್ಟಿತು. ಯಡಿಯೂರಪ್ಪ ಅವರ ವಿರುದ್ಧ ಅವರ ಕಟ್ಟಾ ರಾಜಕೀಯ ವಿರೋಧಿ ಅನಂತ್ ಕುಮಾರ್, ರಾಜ್ಯಪಾಲರು, ಲೋಕಾಯುಕ್ತ ನ್ಯಾಯಮೂರ್ತಿಗಳು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕೈಜೋಡಿಸಿ, ಒಂದು ಸಂಚಿನ ಭಾಗವಾಗಿ ಇವೆಲ್ಲವನ್ನೂ ಮಾಡುತ್ತಿದ್ದಾರೆ ಎಂದಿದ್ದಾರೆ ಅವರು ತಮ್ಮ ಸಾರ್ವಜನಿಕ ಹಿತಾಸಕ್ತಿ ದೂರಿನಲ್ಲಿ. ಅದರ ವಿಚಾರಣೆ ನಡೆಯುತ್ತಿರುವುದನ್ನು ನೀವು ಗಮನಿಸಿರಬಹುದು.

ನಿಮಗೆ ನೆನಪಿರಬಹುದು. “ನನ್ನ ವಿರುದ್ಧ ಗೌಡ ಕುಟುಂಬದ ಅಪ್ಪ ಮಕ್ಕಳು ಸಂಚು ಮಾಡುತ್ತಿದ್ದಾರೆ, ಕಾಂಗ್ರೆಸ್‌ನವರು ಸಂಚು ರೂಪಿಸುತ್ತಿದ್ದಾರೆ” ಎಂದು ಹೇಳುತ್ತಲೇ ಇದ್ದ ಯಡಿಯೂರಪ್ಪ, ಒಂದು ಹಂತದಲ್ಲಂತೂ, “ಇನ್ನು ಇಪ್ಪತ್ತು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಮತ್ತು ಇದನ್ನು ಸಹಿಸದೆ ಕಾಂಗ್ರೆಸ್, ಜೆಡಿಎಸ್ ಚಡಪಡಿಸುತ್ತಿವೆ” ಎಂದೆಲ್ಲಾ ಹೇಳಿದ್ದರು. ಬಹುಶಃ ಪಕ್ಷದೊಳಗಿನಿಂದಲೇ ಅವರ ವಿರುದ್ಧ ಒಂದು ಸಂಚು ರೂಪಿಸಲು ಕಾರಣವಾಗಿದ್ದಿರಬಹುದು. (ಈ ಬಗ್ಗೆ ಯಡಿಯೂರಪ್ಪ ಅವರ ವಕೀಲ ರವಿ ಬಿ.ನಾಯಕ್ ಅವರೇ “ಪಕ್ಷದೊಳಗಿನಿಂದ ಮತ್ತು ಹೊರಗಿನಿಂದ ಸಂಚು ನಡೆದಿದೆ, ಸಿರಾಜಿನ್ ಬಾಷಾಗೆ ಇಷ್ಟೊಂದು ಬೆಂಬಲ ಹೇಗೆ, ಇದಕ್ಕಾಗುವ ಹಣಕಾಸು ಎಲ್ಲಿಂದ ಪೂರೈಕೆಯಾಗುತ್ತದೆ” ಎಂದೆಲ್ಲಾ ಶಂಕೆ ವ್ಯಕ್ತಪಡಿಸಿದ್ದನ್ನು ಗಮನಿಸಿ) ಈ ಅಧಿಕಾರಯುತ ಮಾತುಗಳೇ ಬಹುಶಃ ಯಡಿಯೂರಪ್ಪ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದ್ದು. ಮತ್ತು ಪ್ರತೀ ಚುನಾವಣೆಯಲ್ಲಿಯೂ ಯಡಿಯೂರಪ್ಪ ನಾಯಕತ್ವವೇ ಎದ್ದುಕಂಡು, ಇಷ್ಟೆಲ್ಲಾ ಭ್ರಷ್ಟಾಚಾರ ಆರೋಪಗಳಿದ್ದ ಹೊರತಾಗಿಯೂ ಬಿಜೆಪಿಗೆ ಸುಖಾಸುಮ್ಮನೆ ವಿಜಯ ದೊರೆಯುತ್ತಿದ್ದುದು, ಬಿಜೆಪಿಯಲ್ಲಿರುವವರಿಗೆ ಕೂಡ “ಇನ್ನು ನಮ್ಮ ಆಟ ನಡೆಯುವುದು ಅಸಾಧ್ಯ” ಎಂಬ ಭಾವನೆ ಬಂದಿರಬಹುದು.

ಯಡಿಯೂರಪ್ಪ ಇರುವವರೆಗೂ ನಾವು ಕರ್ನಾಟಕ ರಾಜಕಾರಣದಲ್ಲಿ ಮೇಲೆ ಬರುವುದು ಅಸಾಧ್ಯ ಎಂಬುದು ಅರಿವಾದಾಗ, ಇದು ದ್ವೇಷದ ರಾಜಕಾರಣವಾಗಿ ಪರಿವರ್ತನೆಗೊಂಡು, ಸಂಚೊಂದು ರೂಪುಗೊಂಡಿತು. ಅದು ಪಕ್ಷದ ಹೊರಗೆ ಇದ್ದೇ ಇತ್ತಾದರೂ ಪಕ್ಷದೊಳಗೆ ಹೆಚ್ಚು ವ್ಯಾಪಿಸಿತು ಅಂತ ಅಂದುಕೊಳ್ಳಬಹುದು.

ಮೂರು ವರ್ಷಗಳ ಕಾಲ ಮಾನಸಿಕ ಕಿರುಕುಳ, ಒತ್ತಡಗಳು ಕಾಡುತ್ತಲೇ ಇದ್ದರೂ ಯಡಿಯೂರಪ್ಪ ಅವರ ಧೃತಿ ಕುಂದಿಸಲಾಗಲಿಲ್ಲ ಎಂಬುದರಿಂದ ಹತಾಶೆಗೊಂಡ ವಿರೋಧಿಗಳು, ತೇಜೋವಧೆಯ ಕಾರ್ಯಾಚರಣೆ ಶುರು ಮಾಡಿದ್ದರು ಎಂಬ ಶಂಕೆಯೂ ಓದುಗರಲ್ಲಿ ಮೂಡಿರುವ ಬಗ್ಗೆ ಈಗಾಗಲೇ ವೆಬ್‌ದುನಿಯಾ ಓದುಗರು ಅಲ್ಲಲ್ಲಿ ದಾಖಲಿಸಿದ ಕಾಮೆಂಟುಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಮುಖಂಡರೆಲ್ಲರೂ ಯಡಿಯೂರಪ್ಪ ಬಂಧನದ ವಾರಂಟ್ ಹೊರಡಿಸಿದಾಕ್ಷಣ ಶಿವಮೊಗ್ಗದ ಸಭೆಯಲ್ಲಿ ಪರಸ್ಪರ ಕೈಕುಲುಕುತ್ತಾ, ಕೇಕೆ ಹಾಕುತ್ತಾ ಸಂಭ್ರಮಿಸಿದ ಪರಿ ಈಗಲೂ ಕಣ್ಣಿಗೆ ಕಟ್ಟುವಂತಿದೆ.

ಹೋರಾಟದ ಹಿನ್ನೆಲೆಯಿಂದ ಬಂದು, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಹಂತ ಹಂತವಾಗಿ ಮೇಲೇರುತ್ತಾ, ಈ ಮಟ್ಟಕ್ಕೆ ಬೆಳೆದ ವ್ಯಕ್ತಿಯ ಹೋರಾಟದ ಬದುಕಿಗೆ ಈ ರೀತಿಯ ಕಳಂಕಿತ ಅರ್ಧವಿರಾಮ ಅಸಹ್ಯ. ಆದರೆ, ನಮ್ಮ ನಿಮ್ಮಂಥವರನ್ನು ನೋಡಲು ಆಸ್ಪತ್ರೆಗೆ ಯಾರೂ ಬರಲಾರರು. ಆದರೆ ಇಷ್ಟೊಂದು ಮಂದಿ ಸ್ವಾಮೀಜಿಗಳು, ಮಂತ್ರಿಗಳು, ಅಭಿಮಾನಿಗಳು, ಗಣ್ಯರೆಲ್ಲಾ ಬಂದು ನೋಡುತ್ತಾರೆ ಎಂದರೆ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ವ್ಯಕ್ತಿಯೊಬ್ಬರು, ತಮ್ಮ ಆರೋಗ್ಯದ ಕುರಿತಾಗಿ ಮಾಧ್ಯಮಗಳು ನಡೆಸುತ್ತಿರುವ ತೇಜೋವಧೆ ಯತ್ನದಿಂದ ರೋಸಿ ಹೋಗಿ, “ನನಗೆ ಇಲ್ಲಿ ಚಿಕಿತ್ಸೆಯೇ ಬೇಡ, ಜೈಲಿಗೆ ಸೇರಿಸಿ. ಇದ್ದರೂ ಸತ್ತರೂ ಅಲ್ಲೇ ಇರುತ್ತೇನೆ” ಎಂದು ಮನನೊಂದು ನುಡಿದು, ಈಗ ಜೈಲಿಗೆ ಮರಳಿದ್ದಾರೆ. ಇದು ಮಾಧ್ಯಮಗಳ ಮೇಲೆ ಜನರ ದೃಷ್ಟಿ ಮತ್ತೊಮ್ಮೆ ಬೀಳುವಂತೆ ಮಾಡಿದೆ. ಹೀಗಾಗಿ ನಮ್ಮ ಮಾಧ್ಯಮಗಳು ಸ್ವಚ್ಛವಾಗಿರಲಿ, ಅವುಗಳಿಗೆ ಕಳಂಕ ಅಂಟಿಕೊಳ್ಳದಿರಲಿ ಎಂಬುದು ಸದಾಶಯ.

ನ್ಯಾಯಾಲಯ – ಕಾರ್ಗತ್ತಲಲ್ಲಿ ಬೆಳ್ಳಿ ಚುಕ್ಕಿ
ಇನ್ನೊಂದು ಮಾತು ಹೇಳಲೇಬೇಕು. ಈ ದೇಶದಲ್ಲಾಗಲೀ, ರಾಜ್ಯದಲ್ಲಾಗಲೀ ಆಡಳಿತ ವ್ಯವಸ್ಥೆಯು ಧನದಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ, ಕೆಟ್ಟು ಕೆರ ಹಿಡಿದು ಹೋಗಿರುವಾಗ ನಮ್ಮ ನಿಮ್ಮಂಥ ಜನ ಸಾಮಾನ್ಯರಿಗೆ ಅತಿದೊಡ್ಡ ಆಶಾವಾದ, ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ ಅಂತ ಗೋಚರಿಸುತ್ತಿರುವುದು ನ್ಯಾಯಾಲಯಗಳು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮುಂತಾಗಿ, ರಾಜ್ಯದಲ್ಲಿ ಮಂತ್ರಿ ಮಾಗಧರಾಗಿ ಮೆರೆದವರೆಲ್ಲರೂ ಜೈಲು ಸೇರಿತ್ತಿದ್ದಾರೆಂದರೆ, ಈ ಕಾನೂನು ಎಷ್ಟರ ಮಟ್ಟಿಗೆ ಬಲಿಷ್ಠವಾಗಿದೆ ಎಂಬುದು ನಮಗೆ ವೇದ್ಯವಾಗುತ್ತದೆ. ಹೀಗಾಗಿ ಭ್ರಷ್ಟಾಚಾರ ಮಾಡಲು ಅಡ್ಡಿಯಾಗುತ್ತಿರುವ ಇಂಥಹಾ ನ್ಯಾಯಾಲಯಗಳಿಗಿದೋ ಸಾವಿರ ಸಾವಿರ ನಮನಗಳು. ಇನ್ನಾದರೂ ಅಧಿಕಾರಸ್ಥರು ದುರಾಸೆ ಬಿಡುತ್ತಾರೆ ಎಂದು ಹಾರೈಸೋಣ.
[ವೆಬ್‌ದುನಿಯಾಕ್ಕಾಗಿ]

ಎಸಿ ರೂಮಲ್ಲಿ ಕೂತೋರಿಗೇನ್ ಗೊತ್ತು 32 ರೂಪಾಯಿ ಬದುಕು?

2 Comments

32 ರೂಪಾಯಿಯಲ್ಲಿ ನಗರ ಜೀವನ ಮತ್ತು 26 ರೂಪಾಯಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಜೀವನ ಸಾಗಿಸಬಹುದು ಎಂಬ ಸುರೇಶ್ ತೆಂಡುಲ್ಕರ್ ಸಮಿತಿ ವರದಿಯನ್ನು ನಮ್ಮ ದೇಶದ ಮಹಮಹಾನ್ ಯೋಜನಾ ಆಯೋಗವು ಕಣ್ಣು ಮುಚ್ಚಿ ಸ್ವೀಕರಿಸಿ, ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವುದನ್ನು ನೋಡಿದರೆ, ಎಸಿ ಕೊಠಡಿಯೊಳಗೆ ಕುಳಿತವರು ಈ ದೇಶದ ಬಡ ಪ್ರಜೆಯ ಬದುಕಿನ ಬಗೆಗೆ ಎಷ್ಟರ ಮಟ್ಟಿಗೆ ಅರಿವು ಇದೆ ಎಂಬುದು ತಿಳಿಯಬಹುದು.

ಇವರೆಲ್ಲಾ ನಮ್ಮ ನೀತಿ ನಿರೂಪಕರು. ದೇಶದ ಭವಿಷ್ಯ ರೂಪಿಸುವವರು. ದೇಶವನ್ನು ಸೂಪರ್ ಪವರ್ ಆಗಿಸಲು ಹೊರಟವರು! ವಿಮಾನದಲ್ಲೇ ಪ್ರಯಾಣಿಸುತ್ತಾ, ಕಾರುಗಳಲ್ಲೇ ಓಡಾಡುತ್ತಾ, ಎಸಿ ಕೊಠಡಿಯೊಳಗೆ ಕುಳಿತು, ದಿನಕ್ಕೆ ಐದು ರೂಪಾಯಿಯ ಅಕ್ಕಿ, 2 ರೂಪಾಯಿ ಬೇಳೆ, 1 ರೂಪಾಯಿಯ ಸಾಂಬಾರ್ ಸಾಕಾಗುತ್ತದೆ ಎಂದೆಲ್ಲಾ ಲೆಕ್ಕ ಹಾಕಿದವರಿಗೇನೂ ಗೊತ್ತು ವಸ್ತು ಸ್ಥಿತಿ? ಸರಕಾರೀ ಆಸ್ಪತ್ರೆಗೆ ಹೋದ್ರೆ, ಒಳ್ಳೆಯ ಟ್ರೀಟ್‌ಮೆಂಟು ದೊರೆಯಬೇಕಿದ್ದರೆ ನೀಡಬೇಕಾಗಿರುವ ಲಂಚದ ಒಂದು ಪರ್ಸೆಂಟ್ ಕೂಡ ಅಲ್ಲ ಈ ದೈನಿಕ ಮೊತ್ತ 32 ರೂ.!

ಹೊರಗೊಮ್ಮೆ ಹೋಗಿ ನೋಡಿ, ಕಾಲು ಕಿಲೋ ತರಕಾರಿ 10 ರೂಪಾಯಿಗಿಂತ ಕಡಿಮೆಗೆ ಸಿಗುವುದಿಲ್ಲ. ಒಂದು ತೆಂಗಿನ ಕಾಯಿ ಬೆಲೆ 20 ರೂಪಾಯಿವರೆಗೂ ಏರಿಕೆಯಾಗಿದ್ದನ್ನು ನಾವು ನೋಡುತ್ತೇವೆ. ಅರ್ಧ ಲೀಟರು ಹಾಲು ತೆಗೆದುಕೊಳ್ಳಬೇಕಿದ್ದರೆ 20 ರೂಪಾಯಿಗಿಂತ ಹೆಚ್ಚು ನೀಡಬೇಕು! ಒಂದು ಕಿಲೋ ತಿನ್ನಬಹುದಾದ ಅಕ್ಕಿಯ ಬೆಲೆ 20-30 ರೂಪಾಯಿಯ ರೇಂಜ್‌ನಲ್ಲಿದೆ. ಬೇಳೆ ಕಾಳುಗಳು, ಇತರ ಮಸಾಲೆ ಸಂಬಾರ ಪದಾರ್ಥಗಳು… ಇವುಗಳ ಬೆಲೆ ಕೇಳುವುದೇ ಬೇಡ. ಇಂಥಹಾ ಪರಿಸ್ಥಿತಿಯಲ್ಲಿ, ಈ ಯೋಜನಾ ಆಯೋಗವೇ ಒಪ್ಪಿಕೊಂಡಂತೆ 32 ರೂಪಾಯಿಯಲ್ಲಿ ಕನಿಷ್ಠ ಸೌಲಭ್ಯದ ಜೀವನ ನಡೆಸಬಹುದು ಎಂಬುದನ್ನು, ಅದು ಕೂಡ ನಮ್ಮ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತು, ನಮ್ಮದೇ ತೆರಿಗೆಯಲ್ಲಿ ಸಂಬಳ ತೆಗೆದುಕೊಂಡು ಐಷಾರಾಮದ ಜೀವನ ನಡೆಸುತ್ತಿರುವವರ ಬಾಯಿಯಿಂದ ಕೇಳಿದರೆ ಯಾರಿಗೆ ತಾನೇ ಉರಿಯದೇ ಇದ್ದೀತು?

ನಮ್ಮನ್ನು ಆಳುವವರಿಗೆ ಒಂದು ಬದ್ಧತೆ ಇರಬೇಕಾಗುತ್ತದೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಹೇಗೆ, ಬೆಲೆ ಏರಿಕೆಯಿಂದ ಕಂಗಾಲಾಗಿಬಿಟ್ಟಿರುವ ಜನರ ಬವಣೆಯನ್ನು ಕಡಿಮೆ ಮಾಡುವುದು ಹೇಗೆ ಎಂದೆಲ್ಲಾ ಚರ್ಚೆ ನಡೆಸಬೇಕಾಗಿರುವ ಸಂಸತ್ತಿನಲ್ಲಿ ಇಲ್ಲ ಸಲ್ಲದ, ವ್ಯಕ್ತಿಗತ, ರಾಜಕೀಯ ಸೇಡಿನ ವಿಚಾರಗಳನ್ನೇ ಮುಂದಿಟ್ಟುಕೊಂಡು ಗುದ್ದಾಡುತ್ತಿರುವವರನ್ನೊಮ್ಮೆ ನೋಡಿದಾಗ, ಏನನ್ನಿಸುತ್ತದೆ? ಆಮೇಲೆ ಸಂಸತ್ ಕಲಾಪಕ್ಕೆ ದಿನಕ್ಕೆ ಇಷ್ಟು ಕೋಟಿ ಖರ್ಚಾಗುತ್ತದೆ, ಅದು ವ್ಯರ್ಥವಾಯಿತು ಅಂತ ಅವರೇ ಕೂಗಾಡುತ್ತಾರೆ! ಅವರಿಗೇನಾದರೇನು, ಸಂಸತ್ತಿನ ಕ್ಯಾಂಟೀನುಗಳಲ್ಲಿ 10 ಪೈಸೆಗೆ ಕಾಫಿ/ಚಹಾ, ಒಂದೆರಡು ರೂಪಾಯಿಗೆ ಭರ್ಜರಿ ಊಟ ಇತ್ಯಾದಿಯೆಲ್ಲವೂ ‘ಸಬ್ಸಿಡಿ’ ದರದಲ್ಲಿ ದೊರೆಯುತ್ತದೆ. ಅವರು ಕೂಡ ದಿನ ದೂಡುವುದು ನಮ್ಮ-ನಿಮ್ಮಂಥ ಜನಸಾಮಾನ್ಯರು ಕಟ್ಟಿದ ತೆರಿಗೆ ಹಣದಿಂದಲೇ. ಹೀಗಾಗಿ ಅವರಿಗೆ ಜನ ಸಾಮಾನ್ಯರ ಬವಣೆ, ಪಾಡು ಅರ್ಥವಾಗುವುದಿಲ್ಲ ಅಂತಲೇ ಅಂದುಕೊಳ್ಳಬೇಕಾಗುತ್ತದೆಯಲ್ಲವೇ?

ಇದೇ ವಿಷಯದ ಬಗ್ಗೆ ನಮ್ಮದೇ ಅಂಗಸಂಸ್ಥೆಯಾಗಿರುವ ತಮಿಳು ವೆಬ್‌ದುನಿಯಾ ಸಂಪಾದಕರಾದ ಅಯ್ಯನಾಥನ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೆ. ಆಗ ನಮ್ಮಲ್ಲೇ ನಾವು ಮಾತನಾಡಿಕೊಂಡಿದ್ದೇನೆಂದರೆ, ಒಬ್ಬ ಮಂತ್ರಿಯನ್ನೋ, ಜನಪ್ರತಿನಿಧಿಯನ್ನೋ, ಒಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ದಿನಕ್ಕೆ 32 ರೂಪಾಯಿ ನೀಡಿ, ಮಾರುಕಟ್ಟೆ ದರದ ಆಧಾರದಲ್ಲಿಯೇ ಎಲ್ಲವನ್ನೂ ಒದಗಿಸಿ, “ಬದುಕಿ ತೋರಿಸಿ ನೋಡೋಣ” ಅಂತ ಸವಾಲು ಹಾಕುವುದು. ಕನಿಷ್ಠ ಒಂದು ವಾರ ಹೀಗೆಯೇ ಕಳೆದರೆ, ಆತ ದಿನಕ್ಕೆ ಏನಿಲ್ಲವೆಂದರೂ ಎರಡೆರಡು ರೂಪಾಯಿಯಂತೆ ಎರಡು ಬಾರಿ ‘ಸುಲಭ್’ ಶೌಚಾಲಯದ ಒಳಗೆ ಹೋಗಿ ಹೊರಬರಬೇಕಿದ್ದರೆ ನಾಲ್ಕು ರೂಪಾಯಿ ವ್ಯಯವಾಗುತ್ತದೆ. ಹೀಗಿರುವಾಗ, ಅನ್ನಾಹಾರ ಕಡಿಮೆಯಾಗಿ, ಹೊಟ್ಟೆಗೆ ಸೂಕ್ತ ಪೌಷ್ಟಿಕಾಂಶಯುಕ್ತ ಆಹಾರ ದೊರೆಯದ ಪರಿಣಾಮ ಭೇದಿಯೇ ಶುರುವಾದರಂತೂ ಹಲವು ಬಾರಿ ಹೋಗಿ ಬರಲು ಆ 32 ರೂಪಾಯಿಯನ್ನು ಪೂರ್ತಿಯಾಗಿ ಕೂಡ ಶೌಚಾಲಯಕ್ಕೇ ನೀಡಬೇಕಾದೀತು!

ಇದು ವ್ಯಂಗ್ಯ ಎನ್ನಬಹುದಾದರೂ ವಸ್ತು ಸ್ಥಿತಿಯೂ ಹೌದಲ್ಲಾ? ನಗರ ಪ್ರದೇಶದಲ್ಲಿ ದುಡಿಯುವ ಸಾಮರ್ಥ್ಯವಿಲ್ಲದೆ ಭಿಕ್ಷಾಟನೆಗಿಳಿದ ವ್ಯಕ್ತಿ ಕೂಡ 32 ರೂಪಾಯಿಗಿಂತ ಹೆಚ್ಚು ಸಂಪಾದಿಸಬಲ್ಲ. ಅಥವಾ ಅಷ್ಟು ಸಂಪಾದಿಸದೇಹೋದರೆ ಆತ ಬದುಕುವುದೂ ಸಾಧ್ಯವಿಲ್ಲ. ಅದೆಲ್ಲಾ ಬಿಡಿ, ಬೆಲೆ ಏರಿಕೆಯ ಈ ದಿನಗಳಲ್ಲಿ ಒಬ್ಬ ವ್ಯಕ್ತಿಯ ದಿನಗೂಲಿ ಪ್ರಮಾಣ ಎಷ್ಟು ಅಂತ ಯೋಚಿಸಿ ನೋಡಿ!

ಹಾಗೆ ಲೆಕ್ಕಾಚಾರ ಹಾಕಿದಾಗ, ಶ್ರೀಮಂತ ಖೈದಿ, ನಮ್ಮ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅಥವಾ ನಟ ದರ್ಶನ್‌ಗೆ ಜೈಲಿನಲ್ಲಿ ನೀಡುತ್ತಿರುವ ಗ್ರಾಂ ಅಳತೆಯಲ್ಲಿನ ಆಹಾರ ಪ್ರಮಾಣ ನೆನಪಾಗುತ್ತದೆ. 600 ಗ್ರಾಂ ಅನ್ನ, 100 ಗ್ರಾಂ ದಾಲ್, 250 ಗ್ರಾಂ ತರಕಾರಿ ನೀಡಲಾಗುತ್ತಿತ್ತು. ಹಾಗಿದ್ದರೆ ಈ 32 ರೂಪಾಯಿಯಲ್ಲಿ ಇಲ್ಲಿ ಬದುಕಿ ಸಾಯುವುದಕ್ಕಿಂತ ಜೈಲಿನಲ್ಲಿಯೇ “ಭರ್ಜರಿ” ಆಹಾರ ದೊರೆಯುತ್ತದೆ ಎಂಬ ಭಾವನೆ ಬಾರದಿದ್ದರೆ ಅದು ನಮ್ಮನ್ನಾಳುವವರ ಪುಣ್ಯ!

ಇದು ಬಡತನ ನಿವಾರಣೆಯೋ, ಬಡವರ ನಿವಾರಣೆಯೋ?
ಈ ಸರಕಾರದ ಹಣಕಾಸು ನೀತಿಯು ಎಲ್ಲೋ ದಾರಿತಪ್ಪಿ, ಸಿರಿವಂತರ ರಕ್ಷಣೆಗೆ, ಕಾರ್ಪೊರೇಟ್‌ಗಳ ಉನ್ನತಿಗೆ ಮೀಸಲಾಗಿಟ್ಟಂತೆ ತೋರುವುದರಲ್ಲಿ ಸಂದೇಹವಿಲ್ಲ ಬಿಡಿ. ಯಾಕೆ? ಹಣದುಬ್ಬರ ಕಡಿಮೆ ಮಾಡಲೇಬೇಕು ಎನ್ನುತ್ತಾ ಇದಕ್ಕಾಗಿ ಬಡ್ಡಿದರಗಳನ್ನು ಏರಿಸಿದರು. ಇದು ಯಾರ ಲಾಭಕ್ಕೆ? ಹಣ ಉಳ್ಳವರು ಬ್ಯಾಂಕಿನಲ್ಲಿ ಇರಿಸುವ ಠೇವಣಿಗೆ ಬಡ್ಡಿದರ ಹೆಚ್ಚು ಸಿಕ್ಕಿ, ಮತ್ತಷ್ಟು ಲಾಭವಾಗುತ್ತದೆ. ಅವರ ಶ್ರೀಮಂತಿಕೆ ಮತ್ತಷ್ಟು ಏರುತ್ತದೆ. ಇತ್ತ, ಮನೆಯೋ, ಶಿಕ್ಷಣವೋ, ಅಥವಾ ಬೇರಾವುದೇ ಮೂಲ ಸೌಕರ್ಯವನ್ನೋ ಮಾಡಿಕೊಳ್ಳಲೆಂದು ಸಾಲ ಸೋಲ ಮಾಡಿದ ಜನ ಸಾಮಾನ್ಯ, ಈ ಬಡ್ಡಿ ದರ ಹೆಚ್ಚಳದಿಂದಾಗಿ, ತಿಂಗಳ ಬಜೆಟಿನ ಮೇಲೆ ಮತ್ತಷ್ಟು ಹೊರೆಯಾಗಿ ಮತ್ತಷ್ಟು ಬಡವನಾಗುತ್ತಾನೆ. ಅಂದರೆ, ಜೇಬಿಗೆ ಬಂದ ವೇತನ ಎಲ್ಲಿ ಹೋಯಿತೆಂಬುದೇ ಗೊತ್ತಾಗದೆ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ. ಹಾಗಿದ್ದರೆ, ಈ ದೇಶದಲ್ಲಿ ಬಡವನ ಪರಿಸ್ಥಿತಿ ಎಲ್ಲಿಗೆ ಬಂತು ಮತ್ತು ಶ್ರೀಮಂತರು ಯಾವ ಮಟ್ಟಕ್ಕೇರುತ್ತಿದ್ದಾರೆ? ಉಳ್ಳವರು ಶಿವಾಲಯವ ಮಾಡುವರಯ್ಯಾ, ನಾನೇನು ಮಾಡಲಿ ಬಡವನಯ್ಯಾ ಅನ್ನೋ ಮಾತು ಬೇರೆಯೇ ಕಾರಣಕ್ಕೆ ಇಲ್ಲಿ ನೆನಪಾಗ್ತಿದೆ.

ನಮ್ಮನ್ನು ನಾವು ತೆರಿಗೆದಾರರು ಅಂತ ಹೇಗೆ ಕರೆದುಕೊಳ್ಳುವುದು ಅಂತ ಯೋಚಿಸುತ್ತಿರುವವರಿಗಾಗಿ ಈ ಒಂದು ಸಾಲು: ನಾವು-ನೀವು ಉಪಯೋಗಿಸುವ ಸಣ್ಣ ಬೆಂಕಿ ಪೆಟ್ಟಿಗೆ, ಚಾಕಲೇಟು, ಬೀಡಿ, ಸಿಗರೇಟಿಗೂ, ಕೊಡುವ ಹಣದಲ್ಲಿ ಒಂದಿಷ್ಟು ಹಣ ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಂದಾಯವಾಗುತ್ತದೆ. ಪ್ರತಿಯೊಂದು ವಸ್ತುವಿನ ಬೆಲೆಯಲ್ಲಿಯೂ ಸರಕಾರಕ್ಕೆ ನೀಡುವ ತೆರಿಗೆ ಅಡಕವಾಗಿದೆ. ಹೀಗಾಗಿ ನಾವು ತೆರಿಗೆದಾರರು.

ಜನ ಸಾಮಾನ್ಯರೇನೋ, ಇಂತಿಷ್ಟು ಮಿತಿಗಿಂತ ಹೆಚ್ಚು ಆದಾಯ ಗಳಿಸಿದರೆ, ತಕ್ಷಣವೇ ಆದಾಯ ತೆರಿಗೆಯನ್ನು ವೇತನದಿಂದಲೇ ಕಡಿತ ಮಾಡಲಾಗುತ್ತದೆ. ಇದು ಕಡ್ಡಾಯವಾಗಿ ಸ್ವಯಂಚಾಲಿತವಾಗಿ ಸರಕಾರಕ್ಕೆ ಸಂದಾಯವಾಗುವಂತಹಾ ವ್ಯವಸ್ಥೆ ರೂಪಿಸಲಾಗಿದೆ. ಆದರೆ, ದೊಡ್ಡ ದೊಡ್ಡ ಕುಳಗಳು, ಬೃಹತ್ ಉದ್ಯಮಿಗಳೆಲ್ಲರೂ ಕೋಟಿ ಕೋಟಿ ಆದಾಯ ಸಂಗ್ರಹಿಸುತ್ತಾರಾದರೂ (ಅದು ಅವರು ಕಷ್ಟಪಟ್ಟು ಗಳಿಸಿದ ಹಣ ಎಂಬುದರಲ್ಲಿ ಸಂದೇಹವಿಲ್ಲ ಬಿಡಿ, ತಪ್ಪು ಕೂಡ ಅಲ್ಲ), ಸರಕಾರಕ್ಕೆ ತೆರಿಗೆ ಕಟ್ಟುವ ವಿಷಯ ಬಂದಾಗ, ಏನೇನೋ ತಂತ್ರಗಳನ್ನು ಮಾಡಿ, ತೆರಿಗೆ ತಪ್ಪಿಸಿಕೊಂಡಿದ್ದನ್ನು ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಇನ್ನು ಕೆಲವರು ಅಕ್ರಮವಾಗಿಯೂ ಸಾಕಷ್ಟು ದುಡ್ಡು ಮಾಡಿ ಮಾಡಿ, ಹಣವೆಲ್ಲವನ್ನೂ ವಿದೇಶೀ ಬ್ಯಾಂಕುಗಳಲ್ಲಿ (ಎಲ್ಲವೂ ಸ್ವಿಸ್ ಬ್ಯಾಂಕುಗಳು ಎಂದೇ ಜನ ಸಾಮಾನ್ಯರ ಭಾವನೆ) ಭದ್ರವಾಗಿ ಕಾಪಾಡುತ್ತಾರೆ. ಅದನ್ನು ಭಾರತಕ್ಕೆ ತರಲು ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರೆ!

ಈಗೇನು ಹೇಳುತ್ತಿದ್ದಾರೆ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಎಂಬ ನಮ್ಮ ದೇಶದ ಎಲ್ಲ ಯೋಜನೆಗಳ ರೂವಾರಿಯಾಗಿರುವ ಯೋಜನಾ ಆಯೋಗದ ಉಪಾಧ್ಯಕ್ಷರು? ಈ ವರದಿಗೂ, ಬಡವರಿಗೆ ದೊರೆಯಬೇಕಿರುವ ಸರಕಾರೀ ಸೌಲಭ್ಯದ ಲಭ್ಯತೆಗೂ ಯಾವುದೇ ಸಂಬಂಧವಿಲ್ಲ, ಈ ವರದಿಯು ಯೋಜನಾ ಆಯೋಗದ ಅಭಿಪ್ರಾಯವಲ್ಲ ಅಂದಿದ್ದಾರೆ. ಇದು ಸಮಾಧಾನಕರ ಸಂಗತಿಯಾದರೂ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮತ್ತೊಂದು ಗಣತಿ ಮಾಡುತ್ತದೆ ಅಂತಲೂ ಹೇಳಿದ್ದಾರೆ. ಅಂದ್ರೆ, ಹಿಂದೆ ತೆಂಡುಲ್ಕರ್ ಸಮಿತಿ ವರದಿ ತಯಾರಿಗಾಗಿ ಸುರಿದ ನಮ್ಮ ನಿಮ್ಮ ತೆರಿಗೆಯ ಹಣ ದಂಡವಾಯಿತೆಂದೂ, ಈಗ ಮತ್ತೊಂದು ಸಮೀಕ್ಷೆಗಾಗಿ ಮತ್ತಷ್ಟು ಹಣ ವ್ಯಯವಾಗುತ್ತದೆ ಎಂಬ ಅರ್ಥವೇ? ಇದಕ್ಕೆ ಸರ್ಕಾರ ಉತ್ತರಿಸಬೇಕಿದೆ.
[ವೆಬ್‌ದುನಿಯಾಕ್ಕಾಗಿ]

ಹೆಸರು ಮೂರಾಬಟ್ಟೆ: ಇದು ಸೂಪರ್ ಪವರ್ ಆಗೋ ಭಾರತದ ಸ್ಥಿತಿ!

Leave a comment

ಈ ದೇಶಕ್ಕೆ ಏನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ… ಒಂದು ಕಾಲದಲ್ಲಿ ಭಾರತ ಸೂಪರ್ ಪವರ್ ಆಗುವತ್ತ ದಾಪುಗಾಲಿಟ್ಟಿದೆ ಎಂಬ ಮಾತು ಕೇಳಿಬರುತ್ತಿತ್ತು. ಹೆಚ್ಚೇನಿಲ್ಲ, ಕೇವಲ ಆರೇಳು ವರ್ಷಗಳ ಹಿಂದೆ. ಈಗೇನಾಗಿದೆ? ರಾಜಕಾರಣಿಗಳ ಹಣದ ದಾಹ, ಭ್ರಷ್ಟಾಚಾರ ಮುಚ್ಚಿಹಾಕಲು ಏನೇನೆಲ್ಲಾ ಪ್ರಯತ್ನಗಳು, ಒಬ್ಬರ ಮೇಲೊಬ್ಬರು ಕೆಸರೆರಚಾಟ, ಭ್ರಷ್ಟರನ್ನು ಬಯಲಿಗೆಳೆದವರೇ ಹತ್ಯೆಗೀಡಾಗುತ್ತಿದ್ದಾರೆ, ಅಷ್ಟೇಕೆ, ಎಲ್ಲ ರೀತಿಯಲ್ಲಿಯೂ ತಪ್ಪು ಮಾಡಿರುವ, ಭಯೋತ್ಪಾದಕರನ್ನು ದೇಶದೊಳಗೆ ತೂರಿಸುತ್ತಿರುವ ಪಾಕಿಸ್ತಾನವೇ ಭಾರತವನ್ನು ದೂಷಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ನಾವು ಅಸಹಾಯಕರಾಗಿ ಕೈಚೆಲ್ಲಿ ಕೂತಿದ್ದೇವೆ. ಚಕ್ರವ್ಯೂಹ, ಇದು ಚಕ್ರವ್ಯೂಹ, ಹಣದಾ ಮೋಹ, ಅಧಿಕಾರದ ದಾಹ ಎಂಬ ಕನ್ನಡ ಚಿತ್ರಗೀತೆ ನೆನಪಾಗುತ್ತಿದೆ. ದೇಶದ ಮಾನ ಹರಾಜಾಗುತ್ತಿದೆ!

ಸೋನಿಯಾ ಗಾಂಧಿ ಬಗೆಗೆ ಯಾಕೀ ನಿಗೂಢತೆ?
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಆಳುತ್ತಿರುವ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ ಅದ್ಯಾವುದೋ ನಿಗೂಢವಾದ ಕಾಯಿಲೆಗಾಗಿ ಒಂದು ತಿಂಗಳು ಯಾರಿಗೂ ತಿಳಿಯದಂತೆ ವಿದೇಶಕ್ಕೆ ಹೋಗಿದ್ದಾರೆ ಮತ್ತು ಇನ್ನೂ ವಾಪಸ್ ಬಂದಿರುವ ಕುರಿತಾಗಿಯೂ ಸಂದೇಹಗಳಿವೆ. ಅವರು ಹೇಗಿದ್ದಾರೆ, ಆರೋಗ್ಯ ಹೇಗಿದೆ ಎಂಬಿತ್ಯಾದಿ ವಿಷಯ ಇನ್ನೂ ಹೊರಬರುತ್ತಿಲ್ಲ. ಅವರು ಮನೆಯೊಳಗೇ ಕುಳಿತು ಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತಾ, ಸರಕಾರವನ್ನು ‘ಮುನ್ನಡೆಸುತ್ತಿದ್ದಾರೆ’ ಎಂಬಂತಹಾ ಭಾವನೆಯನ್ನು ಉಂಟು ಮಾಡಲಾಗುತ್ತಿದೆ.

ಅದಿರಲಿ, ದಿನ ಬೆಳಗಾದರೆ, ಸೋನಿಯಾ ನಿವಾಸವಿರುವ ದೆಹಲಿಯ 10, ಜನಪಥ್ ನಿವಾಸದ ಮುಂದೆಯೇ ಏನು ಸುದ್ದಿ ಸಿಗುತ್ತದೆ ಎಂದು ಕಾದುಕೊಂಡು ಕುಳಿತಿರುವ ಮಾಧ್ಯಮಗಳು ಕೂಡ, ಸೋನಿಯಾ ಗಾಂಧಿಯ ಮುಖವನ್ನು ಈ ದೇಶದ ಜನತೆಗೆ ತೋರಿಸುವ ಧೈರ್ಯ ಮಾಡಿಲ್ಲ. ಹಾಗಾದರೆ, ನಿಜಕ್ಕೂ ಏನು ನಡೆದಿದೆ? ಸೋನಿಯಾ ಗಾಂಧಿ ಅನಾರೋಗ್ಯ ಎಂಬುದು ಅವರ “ಖಾಸಗಿ” ವಿಷಯ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿ ಸುಮ್ಮನೆ ಕುಳಿತಿದೆಯಾದರೂ, ಒಂದು ದೇಶದ ಆಡಳಿತದ ಮುಖ್ಯಸ್ಥೆ, ಪ್ರಧಾನಿಗಿಂತಲೂ ಹೆಚ್ಚಿನ ಅಧಿಕಾರವಿರುವ ನಾಯಕಿಯ ಬಗ್ಗೆ ಎಲ್ಲವನ್ನೂ ಇಷ್ಟೊಂದು ಗೌಪ್ಯವಾಗಿ ಮುಚ್ಚಿಡುವುದೇತಕ್ಕೆ? ಏನು ಗಂಡಾಂತರ ಕಾದಿದೆ? ಎಂಬ ಶಂಕೆ ಮೂಡಲು ಕಾರಣವಾಗದಿರದೇ?

ಪ್ರತಿಭಟಿಸೋ ಶಕ್ತಿ ಕಳೆದುಕೊಂಡ ಆಮ್ ಆದ್ಮೀ
ಒಂದು ಕಡೆ ಕಾಮನ್ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣ, ಸಿವಿಸಿ ನೇಮಕಾತಿ, ಪದೇ ಪದೇ ಬೆಲೆ ಏರಿಕೆ, ಹಣದುಬ್ಬರ, ಈ ದೇಶದ ಜನತೆಯ ನರಕಯಾತನೆ…. ಇವೆಲ್ಲವುಗಳ ನಡುವೆ ಕಾಂಗ್ರೆಸ್ ಪಕ್ಷದೊಳಗಿನ, ಸರಕಾರದೊಳಗಿನ ಗೊಂದಲಗಳು. ಅತ್ತಕಡೆಯಿಂದ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ವೈಫಲ್ಯ, ಮತ್ತೊಂದೆಡೆ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಯೋಗ… ಎಲ್ಲ ವಿಷಯದಲ್ಲಿಯೂ ಭಾರತದ ಹೆಸರನ್ನು ಲೋಕ ಮುಖದೆದುರು ಸಂಪೂರ್ಣವಾಗಿ ಹಾಳು ಮಾಡಲು ಇಷ್ಟು ಸಾಕಲ್ಲವೇ? ಕೆಲವೇ ವರ್ಷಗಳ ಹಿಂದೊಮ್ಮೆ ಕಣ್ಣು ಹಾಯಿಸಿ ನೋಡಿ. ಭಾರತವು ಈ ಶತಮಾನದ ಬಲಿಷ್ಠ ರಾಷ್ಟ್ರವಾಗಿ, ಸೂಪರ್ ಪವರ್ ಆಗಿ ಮೂಡಿಬರಲಿದೆ ಎಂಬ ಅದೆಂಥಹಾ ಆಶಾವಾದ ನಮ್ಮಲ್ಲಿತ್ತು? ಈಗಿನ ಪರಿಸ್ಥಿತಿ ಹೇಗಿದೆ? ಬೆಲೆ ಏರಿಕೆಯಿಂದ ತತ್ತರಿಸಿ, ತಲೆ ಎತ್ತದಂತಹಾ ಪರಿಸ್ಥಿತಿಯಲ್ಲಿದ್ದಾನೆ ಜನ ಸಾಮಾನ್ಯ. ಇನ್ನು ಕಳೆದ ನಾಲ್ಕೈದು ವರ್ಷಗಳಲ್ಲಿ ಪೆಟ್ರೋಲ್ ಬೆಲೆ ದುಪ್ಪಟ್ಟಾದರೂ ಸಹ ಪ್ರತಿಭಟಿಸುವ ಶಕ್ತಿ ಈ ಜನಸಾಮಾನ್ಯನಲ್ಲಿದ್ದಂತೆ ತೋರುತ್ತಿಲ್ಲ. ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸುವುದರಲ್ಲೇ ಹೈರಾಣಾಗಿದ್ದಾನೆ ಈ ಆಮ್ ಆದ್ಮಿ.

ಸುಪ್ರೀಂ ಕೋರ್ಟ್ – ಕಗ್ಗತ್ತಲಲ್ಲಿ ಆಶಾಕಿರಣ
ಪ್ರತಿಯೊಬ್ಬರೂ ಕೂಡ ಈ ದೇಶವನ್ನು ಲೂಟಿ ಮಾಡುತ್ತಿದ್ದಾರೆಯೋ ಎಂಬಂತೆ ತೋರುತ್ತಿದೆ. ಈ ನ್ಯಾಯಾಲಯವೇನಾದರೂ ಇಲ್ಲದಿದ್ದರೆ, ದೇಶದ ಗತಿಯೇನಾಗಿರುತ್ತಿತ್ತು? ಭಾರತದಲ್ಲಿ ಲೂಟಿ ಮಾಡಿ ವಿದೇಶದಲ್ಲಿ, ಸ್ವಿಸ್ ಬ್ಯಾಂಕುಗಳಲ್ಲಿ ಅಕ್ರಮವಾಗಿ ರಾಶಿ ಹಾಕಿರುವ ಕಪ್ಪುಹಣವೇ ಇರಲಿ, ಕಾಮನ್ವೆಲ್ತ್, 2ಜಿ ಹಗರಣಗಳೇ ಇರಲಿ; ಸುಪ್ರೀಂ ಕೋರ್ಟು ಏನಾದರೂ ಇಲ್ಲದೇ ಹೋಗಿದ್ದರೆ, ಒಬ್ಬನೂ ಕೂಡ ಈ ಪರಿಯಾಗಿ ಜೈಲಿಗೆ ಸಾಲುಗಟ್ಟಿ ಹೋಗುತ್ತಿರಲಿಲ್ಲ. ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಎ.ರಾಜಾ, ಕನಿಮೋಳಿ, ಸುರೇಶ್ ಕಲ್ಮಾಡಿ, ಅಮರ್ ಸಿಂಗ್, ಸುಧೀಂದ್ರ ಕುಲಕರ್ಣಿ ಮುಂತಾದ ಘಟಾನುಘಟಿಗಳು ಮತ್ತು ಕಾರ್ಪೊರೇಟ್ ಕಂಪನಿಗಳ ಒಡೆಯರು ತಿಹಾರ್ ಜೈಲಿನಲ್ಲಿದ್ದರೆ, ರಾಜ್ಯದಲ್ಲಿಯೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿಗೆ ಹೋಗಿದ್ದಾರೆ. ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಜೈಲು ಪಾಲಾಗದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾ, ಕೋರ್ಟಿಗೆ ಅಲೆದಾಡುತ್ತಿದ್ದಾರೆ. ರಾಜಕಾರಣಿಗಳ ಹಣದ ದುರಾಸೆ ಎಂಬುದು ಈ ದೇಶವನ್ನು ಯಾವ ಮಟ್ಟಕ್ಕೆ ತಲುಪಿಸಿದೆ!

ಇನ್ನು ಈ ದೇಶದ ಆಳ್ವಿಕೆಯ ಮುಖ್ಯ ರೂವಾರಿ, ಸಚ್ಚಾರಿತ್ರ್ಯವಂತ, ಸದ್ಗುಣ ಸಂಪನ್ನ, ಮೌನವೇ ಮೂರ್ತಿವೆತ್ತಂತಿರುವ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಸರಕಾರದ ಸದಸ್ಯರು. ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಚಾರಿತ್ರ್ಯವಧೆಯಲ್ಲಿ ನಿರತರಾದರೇ ಹೊರತು, ಆಡಳಿತದಲ್ಲಿ ಕ್ಷಮತೆ ತರುವತ್ತ ಅಷ್ಟೇ ಫೋರ್ಸ್‌ನಿಂದ ಗಮನ ಹರಿಸುವ ಬಗ್ಗೆ ಆಲೋಚಿಸುತ್ತಲೇ ಇಲ್ಲ! ಈಗ ಭ್ರಷ್ಟಾಚಾರದ ಬಗೆಗೆ ದೊಡ್ಡ ಕೋಲಾಹಲವೇರ್ಪಟ್ಟಿರುವುದು ಚುನಾವಣೆಗಳನ್ನು ಶೀಘ್ರವಾಗಿ ಹೇರಲು ಪ್ರತಿಪಕ್ಷಗಳ ಕುತಂತ್ರವೆಂದು ಪ್ರಧಾನಿಗಳೇ ಹೇಳತೊಡಗಿದ್ದಾರೆ! ನಮ್ಮ ಪ್ರಧಾನಿಯವರು ಹೀಗೇಕಾದರು? ಬೆಲೆ ಏರಿಕೆ ಬಗೆಗಾಗಲೀ, ತಮ್ಮ ಸಚಿವ ಸಂಪುಟ ಸದಸ್ಯರ ಬಗೆಗೆ ಆರೋಪಗಳು ಬಂದಿರುವ ಬಗೆಗಾಗಲೀ, ಅವರೇಕೆ ದೃಢ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ?

ಈಗ ಕಾಡುವ ನಾಲ್ಕು ಪ್ರಶ್ನೆಗಳು
1. 2008ರಲ್ಲಿ ಪತನದ ಅಂಚಿನಲ್ಲಿದ್ದ ಮನಮೋಹನ್ ಸಿಂಗ್ ಸರಕಾರವನ್ನು ಉಳಿಸಲು ನಡೆದಿದೆ ಎನ್ನಲಾಗುತ್ತಿರುವ “ಓಟಿಗಾಗಿ ನೋಟು” ಪ್ರಕರಣದಲ್ಲಿ ಹಣದ ವ್ಯವಹಾರವೇ ನಡೆದಿಲ್ಲ ಎಂದು ಸಂಸತ್ತಿನಲ್ಲೇ ಘೋಷಿಸಿದರು ನಮ್ಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್. ಆದರೆ ಘಟಾನುಘಟಿಗಳಾದ ಅಮರ್ ಸಿಂಗ್, ಸುಧೀಂದ್ರ ಕುಲಕರ್ಣಿ, ಸೊಹೇಲ್ ಹಿಂದೂಸ್ತಾನಿ, ಮಹಾವೀರ್ ಭಗೋಡಾ, ಫಗ್ಗಾನ್ ಸಿಂಗ್ ಕುಲಾಸ್ಥೆ ಜೈಲಿಗೆ ಹೋಗಿದ್ದು ಯಾಕಾಗಿ?

2. ದೆಹಲಿಯ ರಾಮಲೀಲಾ ಮೈದಾನದಲ್ಲಿ ಶಾಂತಿಯುತವಾಗಿ ಮಲಗಿ ನಿದ್ರಿಸುತ್ತಿದ್ದ ಸತ್ಯಾಗ್ರಹಿಗಳ ಮೇಲೆ ಮಕ್ಕಳು ಮರಿಗಳು ವೃದ್ಧರೆಂದು ಲೆಕ್ಕಿಸದೆ ಪೊಲೀಸರು ಎರಗಿದ್ದು ಎಲ್ಲ ಮಾಧ್ಯಮಗಳಲ್ಲಿ ಚಿತ್ರ, ವೀಡಿಯೋ ಸಮೇತ ಬಂದರೂ, ಲಾಠೀ ಚಾರ್ಜನ್ನೇ ನಡೆಸಿಲ್ಲ ಎಂದಿತು ಯುಪಿಎ. ಆದರೆ ರಾಜಬಾಲಾ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ಮಾಡಿ, ಕೊನೆಗೆ ಸಾವನ್ನಪ್ಪಿದ್ದಾರೆ. ಅದು ಹೇಗೆ?

3. 2ಜಿ ಹಗರಣದಲ್ಲಿ ಶೂನ್ಯ ನಷ್ಟ (ಝೀರೋ ಲಾಸ್) ಅಂತ ಘೋಷಿಸಿದ್ರು ಕಪಿಲ್ ಸಿಬಲ್ ಎಂಬ ಮಂತ್ರಿವರೇಣ್ಯರು. ಆದರೆ, ಎ.ರಾಜಾ, ಕನಿಮೋಳಿ, ಹಾಗೂ ಕಾರ್ಪೊರೇಟ್ ಕುಳಗಳೆಲ್ಲ ಜೈಲಿನಲ್ಲಿದ್ದಾರೆ. ದಯಾನಿಧಿ ಮಾರನ್ ಕೇಸು ಏನಾಯಿತೆಂದೇ ಗೊತ್ತಾಗ್ತಾ ಇಲ್ಲ, ಗೃಹ ಸಚಿವರ ಪದವಿಯೇ ಅಲುಗಾಡುತ್ತಿದೆ. ಇದೆಲ್ಲಾ ಆಗುತ್ತಿರುವುದು ಹೇಗೆ?

4. ಸಿಬಿಐ – ಒಂದು ಸ್ವತಂತ್ರ ಸ್ವಾಯತ್ತ ಸಂಸ್ಥೆ, ಸರಕಾರದ ನಿಯಂತ್ರಣವೇ ಇಲ್ಲ, ಅದು ತಾನಾಗಿಯೇ ಕ್ರಮ ಕೈಗೊಳ್ಳುತ್ತದೆ ಎಂದು ಯುಪಿಎ ಸರಕಾರ ಪದೇ ಪದೇ ಘೋಷಿಸುತ್ತಿದೆ. ಆದರೆ, 2ಜಿ ಹಗರಣದಲ್ಲಿ ಪಾತ್ರದ ಬಗೆಗೆ ಸಾಕ್ಷ್ಯಾಧಾರಗಳೆಲ್ಲಾ ದೊರಕಿ, ಕ್ಲೀನ್ ಪ್ರಧಾನಿಯ ಇಮೇಜು ನಷ್ಟವಾಗುವ ಹಂತದಲ್ಲಿರುವಾಗ, ನಮ್ಮದೇ ಗೃಹ ಸಚಿವರ ಮೇಲೆ ತನಿಖೆ ನಡೆಸುವುದೇ ಇಲ್ಲ ಎನ್ನುತ್ತಿದೆ ಅತ್ಯುತ್ತಮ ತನಿಖೆ ನಡೆಸುವ ಸರ್ವತಂತ್ರ ಸ್ವತಂತ್ರ ಸಿಬಿಐ! ಕೇವಲ ಶಂಕೆಯ ಸುಳಿ ಸಿಕ್ಕರೂ ಸಾಕು, ಯಾರನ್ನೂ ಬಂಧಿಸಬಲ್ಲ ಛಾತಿಯುಳ್ಳ ಸಿಬಿಐ, ಬೋಫೋರ್ಸ್ ಪ್ರಕರಣದಲ್ಲಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧ ಸಾಕ್ಷ್ಯಾಧಾರಗಳೇ ಇಲ್ಲ, ಕೇಸು ಮುಚ್ಚಿಬಿಡಿ ಎಂದು ಕೋರ್ಟಿನಲ್ಲಿ ವಾದಿಸಿದ ಸಿಬಿಐ, ಇಷ್ಟೊಂದು ದೊಡ್ಡ ಮಟ್ಟದ ಗದ್ದಲ ಕೇಳಿಬರುತ್ತಿರುವಾಗಲೂ ಚಿದಂಬರಂ ಮೇಲೆ ತನಿಖೆ ನಡೆಸುವುದೇ ಇಲ್ಲ ಎಂದು ಹಠ ಹಿಡಿದು ಕೂತಿರುವುದು ಏಕೆ?

2ಜಿ ಹಗರಣ ಹಿಂದಿದೆಯೇ ಭಯಾನಕ ಸತ್ಯಗಳು?
ಈ 2ಜಿ ಹಗರಣ ಎಂಬುದು ನಾವು ನೀವು ಅಂದುಕೊಂಡಷ್ಟು ಸಣ್ಣ ಪ್ರಮಾಣದ್ದೇನಲ್ಲ. ಜನತಾ ಪಾರ್ಟಿ ಎಂಬ ಏಕ ಸಂಸದ ಪಕ್ಷದ ಮುಖ್ಯಸ್ಥ, ಆಕ್ಸ್‌ಫರ್ಡ್ ಪ್ರೊಫೆಸರ್ ಡಾ.ಸುಬ್ರಹ್ಮಣ್ಯಂ ಸ್ವಾಮಿ ಅವರು 2ಜಿ ಹಗರಣ ಬಯಲಿಗೆಳೆಯುತ್ತಾ, ಒಬ್ಬೊಬ್ಬರ ಹೆಸರನ್ನೇ ಕೋರ್ಟಿಗೆ ಹೋಗಿ ಆಚೆಗೆ ತರುತ್ತಿದ್ದಾರೆ. ಎ.ರಾಜಾ, ದಯಾನಿಧಿ ಮಾರನ್, ಮತ್ತು ಈಗ ಚಿದಂಬರಂ ಅವರ ಹೆಸರೆಲ್ಲಾ ಬಂದಿದೆ. ಈಗ ಈ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿರುವುದು ಒಂದು ಸರಕಾರದ ಸಾಮೂಹಿಕ ಹೊಣೆಗಾರಿಕೆ ಎಂಬುದಕ್ಕೆ ಎರಡು ಮಾತಿಲ್ಲ. ಹೀಗಾಗಿ ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನಿಯೂ ಹೊಣೆಗಾರಿಕೆ ಹೊರಬೇಕಾಗುತ್ತದೆ. ಆನಂತರ, ಡಾ.ಸ್ವಾಮಿ ಈಗಾಗಲೇ ಹೇಳಿರುವಂತೆಯೇ…. ಮುಂದಿನ ಸರದಿ… ಸೋನಿಯಾ ಗಾಂಧಿ ಮನೆ ಬಾಗಿಲಿಗೆ. ಅಂದರೆ ಸೋನಿಯಾ ಗಾಂಧಿಯ ಅಳಿಯ, ಪ್ರಿಯಾಂಕಾ ವಾದ್ರಾಳ ಪತಿ, ಭಾರೀ ಸಾಮ್ರಾಜ್ಯವುಳ್ಳ ಉದ್ಯಮಿ ರಾಬರ್ಟ್ ವಾದ್ರಾ ಅವರು ಕೂಡ 2ಜಿ ಹಗರಣದಲ್ಲಿ ಪಾಲುದಾರರು, ಈ ಬಗ್ಗೆ ದಾಖಲೆ ಒಪ್ಪಿಸುತ್ತೇನೆ ಎಂದಿದ್ದಾರೆ ಡಾ.ಸ್ವಾಮಿ.

ಭ್ರಷ್ಟಾಚಾರ ಬಯಲಿಗೆಳೆದವರೂ ಜೈಲು ಪಾಲಾಗುತ್ತಿದ್ದಾರೆ, ಶಾಂತಿಯುತವಾಗಿ ಸತ್ಯವನ್ನು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರನ್ನು ಛೂಬಿಡಲಾಗುತ್ತದೆ, ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕೇಳುವವರಿಲ್ಲವಂತಾಗಿದೆ, ಮತ್ತು ಕೇವಲ 25 ರೂಪಾಯಿಗಿಂತ ಹೆಚ್ಚು ಖರ್ಚು ಮಾಡಬಲ್ಲವರು ಬಡವರಲ್ಲ ಎಂದು ನಮ್ಮ ಯೋಜನಾ ಆಯೋಗವೇ ಸುಪ್ರೀಂ ಕೋರ್ಟಿಗೆ ಬರೆದುಕೊಡುತ್ತದೆ… ಹಾಗಿದ್ದರೆ ಸೂಪರ್ ಪವರ್ ಆಗಹೊರಟಿರುವ ಭಾರತಕ್ಕೆ ಏನಾಗುತ್ತಿದೆ?
[ವೆಬ್‌ದುನಿಯಾಕ್ಕಾಗಿ]

‘ಆಮ್ ಆದ್ಮೀ’ಯತ್ತ ಪೆಟ್ರೋಲ್ ಬಾಂಬ್ ಎಸೆದ ಸರ್ಕಾರ!

Leave a comment

ಬಟ್ಟೆ ಒಗೆದು ನೀರು ಹಿಂಡುವುದು ಹೇಗೆಂಬುದು ನಿಮಗೆ ಗೊತ್ತಿದೆ. ಕಬ್ಬನ್ನು ಜ್ಯೂಸ್ ಯಂತ್ರದೊಳಗೆ ಹಾಕಿ ತಿರುಗಿಸಿದರೆ, ಎಷ್ಟು ಸಾಧ್ಯವೋ ಅಷ್ಟು ರಸ ಹಿಂಡಲು ಜ್ಯೂಸ್ ಅಂಗಡಿಯವನು ಏನೆಲ್ಲಾ ಮಾಡುತ್ತಾನೆ ಎಂಬುದನ್ನೂ ನೋಡಿದ್ದೀರಿ. ಈಗ ಕೇಂದ್ರ ಸರಕಾರವೂ ಅದನ್ನೇ ಮಾಡುತ್ತಿದೆ. ಇಲ್ಲಿ ಹಿಂಡುವುದು ನೀರನ್ನಲ್ಲ, ಬದಲಾಗಿ ಜನ ಸಾಮಾನ್ಯನ, ವಿಶೇಷವಾಗಿ ಮಧ್ಯಮ ವರ್ಗದವರ ರಕ್ತವನ್ನು.

ಅಲ್ಲ ಸ್ವಾಮೀ, ನಮ್ಮಲ್ಲಿ ಮಹಾ ಮಹಿಮರಾದ ಆರ್ಥಿಕ ತಜ್ಞರು, ಆಕ್ಸ್‌ಫರ್ಡ್, ಹಾರ್ವರ್ಡ್ ಪದವಿಯ ಗರಿಯೇರಿಸಿಕೊಂಡವರು ಪ್ರಧಾನಿಗಳಾಗಿ, ವಿತ್ತ ಸಚಿವರಾಗಿದ್ದಾರೆ ಮತ್ತು ಸರಕಾರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅದೇನೋ ಇನ್‌ಫ್ಲೇಶನ್ (ಹಣದುಬ್ಬರ) ಅನ್ನೋ ಭೂತವನ್ನು ಜನರ ಮುಂದಿಟ್ಟು, ಅದಕ್ಕೆ ಕಡಿವಾಣ ಹಾಕಬೇಕಾಗಿದೆ, ದರ ಏರಿಕೆ ಅನಿವಾರ್ಯ, ಏರುತ್ತಿರುವ ದರವನ್ನು ಇಳಿಸಲು ನಮ್ಮಲ್ಲಿ ಮಂತ್ರದಂಡವೇನಿಲ್ಲ ಎಂಬಿತ್ಯಾದಿಯೆಲ್ಲಾ ಹೇಳಿಕೆ ನೀಡುತ್ತಾ, ತಾನೇ ಗೊಂದಲದಲ್ಲಿ ಮುಳುಗಿಕೊಂಡಿದ್ದಾರೆ! ಹೀಗಿರುವಾಗ ಜನ ಸಾಮಾನ್ಯರ ರಕ್ಷಣೆಯ ಮಾತೆಲ್ಲಿಂದ?

ಪೆಟ್ರೋಲನ್ನು ಬಡ ಮಧ್ಯಮ ವರ್ಗದವರು ಮಾತ್ರವೇ ತಮ್ಮ ಬೈಕುಗಳಿಗೆ ಅಥವಾ ಒಂದಿಷ್ಟು ಸುಖವಾಗಿರೋಣ ಅಂತ ಖರೀದಿಸಿದ ಕಾರುಗಳಿಗೋ ಬಳಸುತ್ತಾರೆ. ಅಲ್ಲಿಗೇ ಕೊಡಲಿ ಹಾಕಿದರೆ, ಜನ ಸಾಮಾನ್ಯ ಖಂಡಿತಾ ಮೇಲೇಳಲಾರ ಎಂಬುದು ಆಳುವವರಿಗೆ ಗೊತ್ತಿದೆ. ಮಂತ್ರಿಗಳು, ಮಾಗಧರು, ಅಧಿಕಾರಿಗಳು ಬಳಸುವ ಹೆಚ್ಚಿನ ಐಷಾರಾಮಿ ಕಾರುಗಳು ಡೀಸೆಲ್ ಬಳಸುತ್ತವೆ. ಅಂದರೆ ಇದು ಶ್ರೀಮಂತರು ಬಳಸುವ ಇಂಧನ. ಅದಕ್ಕೆ ನೀಡಲಾಗುವ ಸಬ್ಸಿಡಿಯನ್ನೇನಾದರೂ ಮುಟ್ಟಿದರೆ, ಸರಕಾರವೇ ಪತನವಾಗಬಹುದು ಎಂಬ ಆತಂಕ. ಯಾಕೆಂದರೆ, ನಮ್ಮನ್ನು ಆಳುವ ಬಹುತೇಕ ಮಂದಿ ಬಳಸುವುದು ಈ ಐಷಾರಾಮದ ಡೀಸೆಲ್ ವಾಹನಗಳನ್ನೇ ಅಲ್ಲವೇ? ಐಷಾರಾಮಿ ಕಾರುಗಳಿಗೆ ಬಳಸುವ ಡೀಸೆಲ್‌ಗೆ ಸಬ್ಸಿಡಿ ಹಿಂತೆಗೆದುಕೊಂಡು, ಕೃಷಿ ಪಂಪ್ ಸೆಟ್ಟುಗಳು, ಟ್ಯಾಕ್ಸಿಗಳು, ಸರಕು ಸಾಗಾಟ ವಾಹನಗಳು, ಜನ ಸಾರಿಗೆ ವಾಹನಗಳು ಬಳಸುವ ವಾಹನಗಳಿಗೆ ಮಾತ್ರವೇ ಸಬ್ಸಿಡಿ ನೀಡಿದರೆ ಜನರು ಒಂದಿಷ್ಟು ಉಸಿರಾಡುವಂತೆ ಮಾಡುವ ಧೈರ್ಯ ಸರಕಾರಕ್ಕಿದೆಯೇ?

ಜನರಿಗೆ ಹೀಗೂ ಮೋಸ ಮಾಡಬಹುದು!
2009ರ ಜುಲೈ ತಿಂಗಳಲ್ಲಿ ಪೆಟ್ರೋಲ್ ದರ ನಿಯಂತ್ರಣವನ್ನು ಸರಕಾರವು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸಿದ ಬಳಿಕ ಎರಡು ವರ್ಷಗಳಲ್ಲಿ 12ನೇ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿಕೆಯಾಗುತ್ತಿದೆ, ಅದಕ್ಕೆ ಅನುಸಾರವಾಗಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ಅಂದು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹಲವಾರು ಬಾರಿ ಏರಿವೆ, ಇಳಿಕೆಯೂ ಆಗಿವೆ. ಆದರೆ ಭಾರತದಲ್ಲಿ ಮಾತ್ರ ಏರುತ್ತಲೇ ಇದೆ! ಜನರನ್ನು ಹೇಗೆ ಮೋಸಪಡಿಸುವುದು ಅಂತ ಇವರನ್ನು ನೋಡಿ ಕಲಿಯಬೇಕು!

ಇದು ಶ್ರೀಮಂತರ ಸರಕಾರ. ಇಲ್ಲಿರುವವರೆಲ್ಲರೂ ಕೋಟಿ ಕೋಟಿ ಹಣ ಮಾಡುತ್ತಿದ್ದಾರೆ. ಇವತ್ತು ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನೇ ನೋಡಿ. ಯುಪಿಎ ಸರಕಾರದ ಮಂತ್ರಿಗಳಲ್ಲಿ ಶೇ.77 ಮಂದಿಯ ಆಸ್ತಿಪಾಸ್ತಿಯು ಮೂರು ವರ್ಷಗಳ ಹಿಂದೆ ಘೋಷಿಸಿದ್ದಕ್ಕಿಂತ 3 ಕೋಟಿ ಹೆಚ್ಚಾಗಿ, 10.3 ಕೋಟಿಗೆ ತಲುಪಿದೆ! ಅಂದರೆ, ಇವರಿಗೆ ಹಣದುಬ್ಬರವಾಗಲೀ, ಬೆಲೆ ಏರಿಕೆಯಾಗಲೀ, ಪೆಟ್ರೋಲ್ ಬೆಲೆಯಾಗಲೀ ತಟ್ಟುವುದು ಸಾಧ್ಯವೇ ಇಲ್ಲ. ಹೀಗಾಗಿ ಜನ ಸಾಮಾನ್ಯರ ಬವಣೆಯೂ ಅರಿವಾಗುವುದಿಲ್ಲ!

ಅಷ್ಟು ಮಾತ್ರವಲ್ಲ, ಕಾಂಗ್ರೆಸ್ ನೇತೃತ್ವದ ಯುಪಿಎ ಸಚಿವ ಸಂಪುಟದಲ್ಲಿ ಒಬ್ಬೊಬ್ಬರ ಆಸ್ತಿ ನೋಡಿದರೆ ತಲೆ ತಿರುಗಬಹುದು. (ಹೆಚ್ಚಿನ ವರದಿಗೆ ಇಲ್ಲಿ ಕ್ಲಿಕ್ ಮಾಡಿ) ಸಚಿವ ಕಮಲ್‌ನಾಥ್ ಆಸ್ತಿ 263 ಕೋಟಿ, ಪ್ರಫುಲ್ ಪಟೇಲ್ 122 ಕೋಟಿ… ಪಟ್ಟಿ ದೊಡ್ಡದೇ ಇದೆ. ಹೀಗಿರುವಾಗ ಸರಕಾರದಲ್ಲಿರುವವರಿಗೆ ಜನ ಸಾಮಾನ್ಯರ ಬವಣೆ ಅರ್ಥವಾಗದಿರುವುದಕ್ಕೆ ಖಂಡಿತಾ ಸಮರ್ಥನೆಯಿದೆ!

ಕುಂಟು ನೆಪ
ಪೆಟ್ರೋಲಿಯಂ ವಿತರಣಾ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂಬುದು ಕುಂಟು ನೆಪ ಅಂತ ನಮ್ಮ ನಿಮ್ಮಂಥಾ ಜನ ಸಾಮಾನ್ಯರು ಅಂದುಕೊಳ್ಳಬಹುದು. ಯಾಕೆಂದರೆ, ದಿನಕ್ಕೆ ಹತ್ತು ಹದಿನೈದು ಕೋಟಿ ನಷ್ಟವಾಗುತ್ತದೆ ಎಂದು ಈ ಪೆಟ್ರೋಲಿಯಂ ಕಂಪನಿಗಳು ಹೇಳಿಕೊಳ್ಳುತ್ತಿದ್ದರೆ, ಇದುವರೆಗೆ ಅವುಗಳು ಬಾಳಿ ಬದುಕಿದ್ದು ಹೇಗೆ? ಕೋಟಿ ಕೋಟಿ ನಷ್ಟವಾಗಿಯೂ ವ್ಯವಹಾರ ನಡೆಸುತ್ತಿರುವುದು ಹೇಗೆ ಸಾಧ್ಯ? ನಿಜಕ್ಕೂ ಎಲ್ಲಿ ನಷ್ಟವಾಗುತ್ತಿದೆ? ಈ ತೈಲ ಕಂಪನಿಗಳೆಂಬ ಬಿಳಿಯಾನೆಗಳನ್ನು ಸಾಕುವುದಕ್ಕೇ ಹಣ ಸಾಲುತ್ತಿಲ್ಲವೇ? ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುವ ಪ್ರಶ್ನೆಗಳಾದರೆ, ತೈಲ ಕಂಪನಿಗಳು ನಿಜಕ್ಕೂ ತೈಲ ಬೆಲೆಯನ್ನು ಯಾವ ರೀತಿ ಲೆಕ್ಕಾಚಾರ ಮಾಡುತ್ತಿವೆ ಎಂಬುದರ ಸ್ಪಷ್ಟ ವಿಚಾರ ಜನರ ಮುಂದಿಲ್ಲ. ಅದ್ಯಾವ ಸೂತ್ರ ಆಧರಿಸಿ ಅವರು ಬೆಲೆ ನಿಗದಿಪಡಿಸುತ್ತಾರೆ? ಪೆಟ್ರೋಲ್ ಬಂಕುಗಳ ಅತ್ಯಾಧುನಿಕ, ಐಷಾರಾಮದ ಕಟ್ಟಡಗಳನ್ನು ನೋಡಿದರೆ, ಮತ್ತು ಪೆಟ್ರೋಲ್ ಬಂಕ್‌ಗಾಗಿ ಗುತ್ತಿಗೆ ಪಡೆಯಲು ಹಣವುಳ್ಳವರ ಪೈಪೋಟಿ ನೋಡಿದರೆ ಗೊತ್ತಾಗುತ್ತದೆ ಅದು ಎಷ್ಟು ನಷ್ಟ ಅನುಭವಿಸುತ್ತವೆ ಎಂಬುದು! ಅಂದರೆ, ಎಲ್ಲಿಯೂ ಪಾರದರ್ಶಕತೆಯಿಲ್ಲ. ಹೀಗಾಗಿಯೇ ಜನರಲ್ಲಿ ಶಂಕೆ ಮೂಡಲು ಕಾರಣವಾಗಿದೆ.

ಪ್ರತೀ ಬಾರಿಯೂ ಖಜಾನೆ ಖಾಲಿಯಾಗುತ್ತಿದೆ ಎಂದಾದಾಗ ಸರಕಾರ ಮೊದಲು ನೋಡುವುದು ಮಧ್ಯಮ ವರ್ಗದವರು ಬಳಸುವ ಪೆಟ್ರೋಲನ್ನು. ಅಲ್ಲಿಯೇ ಕುಳಿತುಕೊಂಡು ಕತ್ತು ಹಿಚುಕಿ, ಹಣ ಹಿಂಡುತ್ತದೆ.

ಬಡ್ಡಿ ಹೆಚ್ಚಳವೆಂಬ ಮತ್ತೊಂದು ‘ಹಿಂಡುವ’ ತಂತ್ರ
ಇನ್ನು, ಸಾಲ ಸೋಲ ಮಾಡಿ ಮನೆ ಕಟ್ಟಿದವರು, ಬದುಕುವುದಕ್ಕಾಗಿ ಬ್ಯಾಂಕುಗಳಿಂದ ಯಾವುದೋ ವ್ಯವಹಾರ ಮಾಡಲು ಸಾಲ ತೆಗೆದವರನ್ನೂ ಸರಕಾರ ಬಿಡುವುದಿಲ್ಲ. ಬಡ್ಡಿ ದರ ಏರಿಸುತ್ತಲೇ ಇದೆ. ಅದಕ್ಕೆ ನೀಡುವ ನೆಪವೆಂದರೆ, ಹಣದುಬ್ಬರವೆಂಬ ಭೂತವನ್ನು ನಿಯಂತ್ರಿಸಲು! ಅದೇ ಹೊತ್ತಿಗೆ, ಹಣವಿದ್ದ ಶ್ರೀಮಂತರು ಬ್ಯಾಂಕುಗಳಲ್ಲಿ ಕೂಡಿಟ್ಟಿರುವ ಹಣದ ಬಡ್ಡಿಯೂ ಏರಿಕೆಯಾಗಿ, ಅವರಿಗೆ ಲಾಭವೇ ಹೆಚ್ಚಾಗುತ್ತದೆ! ಬಡವರು ಮತ್ತಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಸಿರಿವಂತರಾಗುತ್ತಾರೆ! ಇದು ನಮ್ಮ ಮಹಾಮಹಿಮ ವಿತ್ತ ತಜ್ಞರ ಆಡಳಿತ ವೈಖರಿ! ಇಂಧನ ದರ ಏರಿಕೆ ಮಾಡಿದರೆ, ಹಣದುಬ್ಬರ ಜಾಸ್ತಿಯಾಗುತ್ತದೆ ಎಂಬುದು ಕನಿಷ್ಠ ಜ್ಞಾನ. ಆ ಹಣದುಬ್ಬರ ನಿಯಂತ್ರಣಕ್ಕೆ ಸಾಲ ಮಾಡಿದ ಜನರನ್ನು ಹಿಂಡುವುದು ಎಷ್ಟು ಸರಿ?

ಒಟ್ಟಿನಲ್ಲಿ ಸರ್ಕಾರ ದಿಕ್ಕೆಟ್ಟಿದೆ
ಸರಕಾರಕ್ಕೆ ನಿಜಕ್ಕೂ ಬಡವರ ಬಗ್ಗೆ ಕಾಳಜಿ ಇದೆಯೆಂದಾದರೆ, ಮತ್ತು ತೈಲ ಕಂಪನಿಗಳನ್ನು “ಬಚಾವ್” ಮಾಡುವ ಉದ್ದೇಶವಿದೆಯೆಂದಾದರೆ, ಇಂಧನದ ಮೇಲೆ ವಿಧಿಸುವ ಆಮದು ಸುಂಕ, ಸೆಸ್, ಮಾರಾಟ ತೆರಿಗೆ, ಸೇವಾ ತೆರಿಗೆ, ವ್ಯಾಟ್… ಆ ತೆರಿಗೆ, ಈ ತೆರಿಗೆ… ಇವುಗಳಲ್ಲೆಲ್ಲಾ ಒಂದಿಷ್ಟು ಕಡಿತ ಮಾಡಲಿ. ಯಾಕೆಂದರೆ, ಇಂಧನ ಬೆಲೆಯಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಇರುವುದು ಈ ತೆರಿಗೆಗಳ ಪಾಲು. ಈ ನಿಟ್ಟಿನಲ್ಲಿ ಏನೇ ಮಾಡಿದರೂ ಈ ಸರಕಾರ ಅಧಿಕಾರಕ್ಕೇರಲು ಕಾರಣವಾಗಿರುವ “ಆಮ್ ಆದ್ಮೀ”ಗೇ ಅಲ್ಲವೇ ಪ್ರಯೋಜನವಾಗುವುದು? ಹಾಗೆ ಮಾಡಲು ನಮ್ಮ ರಾಜಕಾರಣಿಗಳಿಗೆ ಸುತಾರಾಂ ಮನಸ್ಸಿಲ್ಲ. ಅಲ್ಲೂ ರಾಜಕೀಯ ಬಿಡುವುದಿಲ್ಲ!

ಬದಲಾಗಿ, ಸೌರ ಶಕ್ತಿಯ ಬಳಕೆಗೆ ಸರಕಾರ ಉತ್ತೇಜನ, ಪ್ರೋತ್ಸಾಹ ನೀಡಲಿ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆಯಾಗಬಹುದು.

ಸಬ್ಸಿಡಿ ನೀಡಿದರೆ ಸರಕಾರಕ್ಕೆ ತೊಂದರೆಯಾಗುತ್ತದೆ ಎಂಬುದೇನೋ ಸರಿ. ಆದರೆ, ಈಗಾಗಲೇ ಎಲ್ಲ ರೀತಿಯಲ್ಲಿಯೂ, ಪ್ರತಿಯೊಂದು ವಸ್ತುವಿನ ಮೂಲಕವೂ ನಾವು ಸರಕಾರದ ಖಜಾನೆಗೆ ತೆರಿಗೆ ತೆರುತ್ತಿದ್ದೇವೆ. ಅದನ್ನು ಬಳಸಬೇಕಾಗಿರುವುದು ಕೂಡ ನಮಗಾಗಿಯೇ ಅಲ್ಲವೇ? ಹೀಗಿರುವಾಗ, ಈಗ ಬೆಲೆ ಏರಿಕೆ ಯಾವುದೇ ರೀತಿಯಲ್ಲಿಯೂ ತಟ್ಟದೆ ನಿಶ್ಚಿಂತೆಯಿಂದ (ಅಂದರೆ, ಅವರ ಫೋನ್ ಬಿಲ್, ವಿದ್ಯುತ್ ಬಿಲ್, ಸಂಚಾರ ಬಿಲ್, ತಿಂಡಿ ತಿನಸು, ಆಳುಗಳು, ಸೇವಕರ ಬಿಲ್… ಇತ್ಯಾದಿ ಎಲ್ಲ ಖರ್ಚು ವೆಚ್ಚಗಳನ್ನೂ ಜನರ ತೆರಿಗೆ ಹಣದ ಮೂಲಕ ಸರಕಾರವೇ ಭರಿಸುತ್ತದೆ) ಆಡಳಿತ ನಡೆಸುತ್ತಿರುವವರ ಕರ್ತವ್ಯವೆಂದರೆ ಜನರಿಗೆ ಕೊಂಚವಾದರೂ ನೆಮ್ಮದಿ ನೀಡುವುದೇ ಅಲ್ಲವೇ?

ಒಟ್ಟಿನಲ್ಲಿ ಮೂರು ವರ್ಷಗಳಿಂದ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿ ಬಡ ಪ್ರಜೆ ಕಂಗಾಲಾಗಿದ್ದಾನೆ. ವಿದ್ಯಾಭ್ಯಾಸ ಕೈಗೆಟುಕದಷ್ಟು ಶುಲ್ಕ ಹೆಚ್ಚಾಗಿದೆ. ವಿದ್ಯುತ್ ದರ ಏರಿದೆ, ನೀರಿನ ದರ ಏರಿದೆ, ನಾಳೆ ಅಡುಗೆ ಅನಿಲದ ಸಿಲಿಂಡರನ್ನೂ ಗ್ರಾಹಕರ ಮನೆ ಬಾಗಿಲಿನಲ್ಲೇ ‘ಬೆಲೆ’ ಸ್ಫೋಟ ಮಾಡುವಂತಹಾ ಯತ್ನವೊಂದೂ ಕೇಳಿಬರುತ್ತಿದೆ. ಇನ್ನು ವರ್ಷಕ್ಕೆ 4 ಸಿಲಿಂಡರುಗಳಿಗೆ ಮಾತ್ರವೇ ಸಬ್ಸಿಡಿ, ಹೆಚ್ಚು ಬೇಕಾದರೆ ಸಿಲಿಂಡರಿಗೆ ಅಂದಾಜು 800 ರೂ. ನೀಡಬೇಕಾಗುವಂತಹಾ ಪ್ರಯತ್ನ. ಹೀಗೆ ಆದರೆ, ಈ ಬೆಲೆ ಏರಿಕೆಯ ಊರಿನಲ್ಲಿ ಬದುಕಲು ಕಷ್ಟ ಎಂದುಕೊಂಡು, ಊರು ಬಿಟ್ಟು ಓಡಿ ಹೋಗಲೂ ಕೈಯಲ್ಲಿ ಹಣವಿಲ್ಲದಂತಾಗುತ್ತದೆ!

ಸರಕಾರ ಬುದ್ಧಿವಂತಿಕೆ
ಸರಕಾರಕ್ಕೆ ಜನರನ್ನು ಮೂರ್ಖರಾಗಿಸಲು ಚೆನ್ನಾಗಿ ಗೊತ್ತಿದೆ… ಚುನಾವಣೆಗಳು ಬರಲಿ ನೋಡೋಣ…. ಅವರೆಂದಾದರೂ ದರ ಏರಿಸುವ ದುಸ್ಸಾಹಸಕ್ಕೆ ಇಳಿಯುತ್ತಾರೆಯೇ? ಖಂಡಿತಾ ಇಲ್ಲ.

ಒಂದು ಅಂದಾಜಿನ ಪ್ರಕಾರ, ಉಗ್ರಗಾಮಿ ಅಜ್ಮಲ್ ಕಸಬ್‌‍ನನ್ನು ಜೈಲಿನಲ್ಲಿಟ್ಟುಕೊಂಡು ಭದ್ರತೆಯಿಂದ ಸಾಕಿ ಸಲಹಲು ದಿನಕ್ಕೆ 7.5 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಅಂತೆಯೇ ಮತ್ತೊಬ್ಬ ಭಯೋತ್ಪಾದಕ, ಈಗಾಗಲೇ ಮರಣ ದಂಡನೆಗೆ ಗುರಿಯಾಗಿರುವ ಅಫ್ಜಲ್ ಗುರುವನ್ನು ಭಾರೀ ಭದ್ರತೆಯಿಂದ ಸಾಕಲು ಕೂಡ ಬಹುಶಃ ಅಷ್ಟೇ ವೆಚ್ಚವಾಗಬಹುದು. ಇದೆಲ್ಲವೂ ಜನ ಸಾಮಾನ್ಯರು ಕಟ್ಟುವ ತೆರಿಗೆಯಿಂದ ಬರುವ ಹಣವೇ ಎಂಬುದನ್ನು ಮರೆಯುವಂತಿಲ್ಲ. ಅವರಿಗೆ ದೊರೆಯುವ ಜೀವನ ಭದ್ರತೆ, ನಮ್ಮ ಜನ ಸಾಮಾನ್ಯರಿಗಿಲ್ಲ. ನಾಳೆ ಯಾವುದರ ಬೆಲೆ ಹೆಚ್ಚಾಗುತ್ತದೋ ಎಂಬ ಆತಂಕದಲ್ಲೇ ಜನರು ಜೀವನ ಕಳೆಯುವಂತಾಗಿದೆ!

ಜನರ ಮೌನವೇ ಸರಕಾರಕ್ಕೆ ಅಮೃತ!
ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಎಂಬ ಗಾದೆ ಮಾತನ್ನು ನೀವೆಲ್ಲಾ ಕೇಳಿದ್ದೀರಿ. ನಾವು-ನೀವು ಸುಮ್ಮನಿರುವುದಕ್ಕೆ ಈ ದೇಶದಲ್ಲಿ ಏನೇನೆಲ್ಲಾ ಆಗುತ್ತಿದೆ ಎಂಬುದನ್ನೀಗ ಕಣ್ಣಾರೆ ಕಾಣುತ್ತಿದ್ದೀರಿ. ಕಳೆದ ಎರಡು ವರ್ಷಗಳಲ್ಲಿ, ಅಂದರೆ ಪೆಟ್ರೋಲ್ ಬೆಲೆ ನಿಯಂತ್ರಣವನ್ನು ನಮ್ಮನ್ನು ಆಳುತ್ತಿರುವ ಈ ನಮ್ಮ ಘನ ಕೇಂದ್ರ ಸರಕಾರವು ತೈಲ ಕಂಪನಿಗಳಿಗೇ ಬಿಟ್ಟು ಕೊಟ್ಟ ಬಳಿಕ, 12ನೇ ಬಾರಿ ದರ ಏರಿಕೆ ಮಾಡಿದೆ. ಎಷ್ಟೇ ದರ ಏರಿಕೆ ಮಾಡಿದರೂ ಈ ಜನರು ನಾಲ್ಕು ದಿನ ಕೂಗಾಡುತ್ತಾರೆ, ಆಮೇಲೆ ಅವರಲ್ಲಿ ಬೆಲೆ ಏರಿಕೆಗೆ ಇಮ್ಯುನಿಟಿ (ಪ್ರತಿರೋಧ ಶಕ್ತಿ) ಬಂದಿರುತ್ತದೆ ಎಂಬುದು ಸರಕಾರಕ್ಕೆ ಮನದಟ್ಟಾಗಿದೆ. ಹೀಗಾಗಿ, ಕೊಂಚ ಕೊಂಚವೇ ನಿಧಾನ ವಿಷದಂತೆ ಬೆಲೆ ಏರಿಕೆ ಮಾಡುತ್ತಾ, ಒಂದೆರಡ್ಮೂರು ರೂಪಾಯಿ ದೊಡ್ಡ ಸಂಗತಿಯೇನಲ್ಲ ಎಂಬ ಭಾವನೆ ಉಂಟಾಗುತ್ತದೆ. ಹೀಗಾಗಿ ಜುಲೈ 2009ರಲ್ಲಿ ಲೀಟರಿಗೆ 48 ರೂಪಾಯಿ ಆಸುಪಾಸು ಇದ್ದ ಪೆಟ್ರೋಲ್ ಬೆಲೆ, ನಾವೆಲ್ಲಾ ನಿದ್ದೆಯಿಂದ ಎಚ್ಚೆತ್ತುಕೊಳ್ಳುವಾಗ ಇನ್ನು 100 ರೂಪಾಯಿಗೆ ತಲುಪಿದರೂ ಆಶ್ಚರ್ಯವಿಲ್ಲ! ಜನ ಎಚ್ಚೆತ್ತುಕೊಳ್ಳುವುದು ಯಾವಾಗ? ಬಹುಶಃ ಪೆಟ್ರೋಲ್ ಬೆಲೆ ಏರಿಕೆಯೆಂಬ “ಹಗರಣ”ಕ್ಕೆ ಕಡಿವಾಣ ಹಾಕಲು, ದೇಶವ್ಯಾಪಿ ಆಂದೋಲನ ನಡೆಸಲು ಮತ್ತೊಬ್ಬ ಅಣ್ಣಾ ಹಜಾರೆ ಬೇಕೇನೋ!

ದಮ್ಮಿಲ್ಲದ ಪ್ರತಿಪಕ್ಷ
ತಮ್ಮ ಆಡಳಿತದ, ವಿತ್ತ ವ್ಯವಸ್ಥೆಯ ಸಮತೋಲನಗೊಳಿಸುವ ಅಸಾಮರ್ಥ್ಯವನ್ನು ಬಚ್ಚಿಟ್ಟು, ತಾನು ಬಚಾವ್ ಆಗಲು ಜನಸಾಮಾನ್ಯನಿಗೆ ಹೊಡೆಯುವುದೇ ಅತ್ಯಂತ ಸುಲಭ ಮಾರ್ಗ ಎಂದುಕೊಂಡಂತಿದೆ ನಮ್ಮನ್ನಾಳುವ ಸರಕಾರ. ಪ್ರತಿಪಕ್ಷಗಳೂ ಒಂದಷ್ಟು ದಿನ ಕೂಗಾಡುತ್ತವೆ. ಅಷ್ಟು ಹೊತ್ತಿಗೆ ಬೇರೊಂದು “ಬರ್ನಿಂಗ್ ಇಶ್ಯೂ”ವನ್ನು ಸರಕಾರವು ತನ್ನ ಬತ್ತಳಿಕೆಯಿಂದ ಹೊರ ಹಾಕಿರುತ್ತದೆ. ಪ್ರತಿಪಕ್ಷಗಳ ಗಮನ ಅತ್ತ ಹೋಗುತ್ತದೆ. ಅಲ್ಲಿಗೆ ಜನ ಸಾಮಾನ್ಯನ ಸ್ಥಿತಿ ದೇವರಿಗೇ ಪ್ರೀತಿ!

ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳಿಗೂ ಜವಾಬ್ದಾರಿಯಿದೆ ಮತ್ತು ಶಕ್ತಿಯಿರಬೇಕಾಗಿತ್ತು. ಆದರೆ, ಬೆಲೆ ಏರಿಕೆಯಿಂದ ಜನ ಸಾಮಾನ್ಯರನ್ನು ರಕ್ಷಿಸಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಈ ಬಾರಿಯಾದರೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಮುಂದೆ ಹೋಗಿ, ಜನ ಸಾಮಾನ್ಯ ಸಾಯುತ್ತಿದ್ದಾನೆ ಅಂತ ಸರಕಾರದ ಮನಸ್ಸಿಗೆ ನಾಟುವಂತೆ ಮಾಡಬಲ್ಲವೇ?

ಅಂತರಜಾಲದಲ್ಲಿ ಹರಿದಾಡುವ ಎರಡು ಮಾತು
* ಈಗಾಗಲೇ ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಯುತ್ತಿರುವುದರ ಬಗ್ಗೆ ಜನ ಸಾಮಾನ್ಯರೂ ಧ್ವನಿಯೆತ್ತಿ ಅಣ್ಣಾ ಹಜಾರೆಯವರ ಬೆಂಬಲಕ್ಕೆ ನಿಂತಿದ್ದಕ್ಕಾಗಿ, ಯುಪಿಎ ಸರಕಾರ ಈ ರೀತಿಯಾಗಿ, ಅಂದರೆ ಬೆಲೆ ಏರಿಕೆ ತಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಮೂಲಕ, ಸೇಡು ತೀರಿಸಿಕೊಳ್ಳುತ್ತಿದೆ.
* ಪೆಟ್ರೋಲ್ 75, ಸಚಿನ್ 99, ಮೊದಲು 100 ತಲುಪುವುದು ಯಾರು?
[ವೆಬ್‌ದುನಿಯಾಕ್ಕಾಗಿ]

ದರ್ಶನ್ ಕೃತ್ಯಕ್ಕೆ ನಿಖಿತಾಳಿಗೆ ಶಿಕ್ಷೆ: ಇದ್ಯಾವ ನ್ಯಾಯ?

4 Comments

ಇದೊಂದು ಕಾಮನ್ ಸೆನ್ಸ್ ಪ್ರಶ್ನೆ. ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾನ್ಯ ಕುಡುಕನೊಬ್ಬ ಯಾವತ್ತೂ ಮಾಡುವಂತೆ, ತನ್ನ ಮನೆಗೆ ಆ ದಿನ ಬಂದು ಅಮಲಿನಲ್ಲಿ ಪತ್ನಿಗೆ ಚೆನ್ನಾಗಿ ಮುಖ ಮೂತಿಯೆಂದು ನೋಡದೆ ಥಳಿಸುತ್ತಾರೆ. ಇದುವರೆಗೆ ನೋವನ್ನು ಸಹಿಸಿಕೊಂಡೇ ಇದ್ದ ಪತ್ನಿ ವಿಜಯಲಕ್ಷ್ಮಿಗೆ ಆ ದಿನ ಮಾತ್ರ ನೋವಿನ ನಡುವೆಯೂ ಸ್ವಾಭಿಮಾನವು ಎದ್ದು ನಿಂತಿದೆ. ಕೆರಳಿ ಕೆಂಡವಾಗಿ ಸಿಟ್ಟಿನ ಭರದಲ್ಲಿ ಪೊಲೀಸರಿಗೆ ದೂರು ನೀಡಿಯೇ ಬಿಡುತ್ತಾರೆ. ಕೊನೆಗೆ ಹೊಡೆತ ತಿಂದು ತನ್ನ ಮೇಲಿನ ಗಾಯಗಳಿಂದಾಗಿ ಆಸ್ಪತ್ರೆ ಸೇರಲೇಬೇಕಾಗುತ್ತದೆ. ಆಗ ರಂಗಕ್ಕಿಳಿಯುವ ಚಿತ್ರ ನಿರ್ಮಾಪಕರ ಸಂಘವು, ಈ ಗಂಡ-ಹೆಂಡಿರ ಜಗಳಕ್ಕೆ ಮೂರನೆಯ ಹೆಣ್ಣುಮಗಳೊಬ್ಬಳನ್ನು ತಪ್ಪಿತಸ್ಥೆ ಎಂದು ಶಿಕ್ಷೆ ವಿಧಿಸಿಬಿಡುತ್ತದೆ!

ಹಾಂ, ನೀವೆಂದಾದರೂ ದೊಡ್ಡ ದೊಡ್ಡ ಭಾಷಣಗಳಲ್ಲೋ, ಅಥವಾ ಲೇಖನಗಳಲ್ಲೋ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಂಬ ಗಾದೆ ಮಾತನ್ನು ಬರೇ ಗಾದೆ ಮಾತು ಎಂದಷ್ಟೇ ಅಂದುಕೊಂಡು ಕೇಳಿರುತ್ತೀರಿ, ಓದಿರುತ್ತೀರಿ. ಹಾಗಂದರೆ ಏನು, ಅದರ ನಿಜವಾದ ಅರ್ಥ ಏನು ಎಂಬುದು ನಿಮಗೀಗ ಅರಿವಾಗಿರಬೇಕು.

ಇಲ್ಲಿ ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಬೆಂಬಲಿಸಿಯೋ, ಅಥವಾ ಪತಿ ಮತ್ತು ಪತ್ನಿಯ ಮಧ್ಯೆ ಬಂದಿದ್ದಾರೆಂಬ ಆರೋಪ ಹೊತ್ತಿರುವ ‘ಅವಳು’ – ಬಹುಭಾಷಾ ನಟಿ ನಿಖಿತಾ ಅವರನ್ನು ಸಪೋರ್ಟ್ ಮಾಡಿಯೋ ಬರೆಯುತ್ತಿಲ್ಲ. ಒಂದು ತೀರಾ ಜನಸಾಮಾನ್ಯನ ದೃಷ್ಟಿಯಿಂದ ನೋಡಿದರೆ ಕೂಡ ಇದೆಂಥಾ ಅನ್ಯಾಯ ಅಂತ ಅನಿಸದೇ ಇರದು.

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಪರಿಸ್ಥಿತಿ ಈ ಕಾಲದಲ್ಲಿ ಖಂಡಿತಾ ಇಲ್ಲ. ಇದು ಸ್ತ್ರೀಸಮಾನತೆಯ ಕಾಲ. ಬದಲಾಗಿರುವ ಕಾಲದಲ್ಲಿ ಹೆಣ್ಣು ಮಕ್ಕಳಲ್ಲಿ ಕೂಡ ಆತ್ಮಾಭಿಮಾನ ಎದ್ದು ಕೂತಿದೆ. ಮಹಿಳೆಯೀಗ ತಾನೇನೂ ಕಮ್ಮಿ ಇಲ್ಲ ಎಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ತೋರಿಸಿಕೊಡುತ್ತಿದ್ದಾಳೆ.

ಅದು ಒತ್ತಟ್ಟಿಗಿರಲಿ. ಬರೇ ಗಾಸಿಪ್ ಕಾಲಂಗಳಲ್ಲಿ ಬರುತ್ತಿದ್ದ ಸುದ್ದಿಯ ಆಧಾರದಲ್ಲಿ ಸತ್ಯಾಸತ್ಯತೆ ವಿವೇಚನೆ ಮಾಡದೆ, ಕರ್ನಾಟಕ ಚಿತ್ರ ನಿರ್ಮಾಪಕರ ಸಂಘವು ಅರಳು ಪ್ರತಿಭೆಯಾಗಿರುವ ನಟಿಯೊಬ್ಬಳಿಗೆ ನಿಷೇಧ ಹೇರಿದೆ ಎಂದರೆ, ಇದು “ನಮ್ಮ ನೆಚ್ಚಿನ ನಟ ದರ್ಶನ್‌ಗೆ ನ್ಯಾಯ ಒದಗಿಸಿಕೊಟ್ಟಿದ್ದೇವೆ” ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವಂತಹಾ ತೀರ್ಮಾನವೇನಲ್ಲ. ಅಲ್ಲೊಬ್ಬಳು ಇನ್ನೂ ಬೆಳೆಯಬೇಕಾದ ನಟಿಯಿದ್ದಾಳೆ, ‘ನಟಿ’ ಎಂಬುದನ್ನು ಮರೆತುಬಿಡಿ. ಮಾನವೀಯತೆಯ ದೃಷ್ಟಿಯಿಂದಲಾದರೂ, ಒಬ್ಬ ‘ಅವಿವಾಹಿತೆ ಹೆಣ್ಣು ಮಗಳಿ’ದ್ದಾಳೆ ಅಂತ ನೋಡಿಕೊಳ್ಳಬಹುದಿತ್ತು. ಇಂತಹಾ ನಿರ್ಧಾರಗಳಿಂದಾಗಿ ಅವಳ ಜೀವನ, ಅವಳ ಭವಿಷ್ಯ ಏನಾಗಬೇಡ?

ಗ್ಲ್ಯಾಮರ್ ಜಗತ್ತಿನಲ್ಲಿ ಸೆಳೆತ, ಅಫೇರು, ಮುಂತಾದವುಗಳನ್ನೆಲ್ಲಾ ಲೆಕ್ಕವಿಲ್ಲದಷ್ಟು ಕಂಡಿದೆ ಕನ್ನಡ ಚಿತ್ರರಂಗ. ಇಂತಹಾ ರಂಗು ರಂಗಿನ ಸಿನಿಮಾ ರಂಗದಲ್ಲಿ ಗಾಸಿಪ್‌ಗಳು ಎಷ್ಟು ಸಾಮಾನ್ಯವೋ, ಈ ಸಂಬಂಧಗಳ ಸೂಕ್ಷ್ಮತೆಯ ಪರಿಧಿ ಮೀರಿ ಹೋಗುವ ಪ್ರಕರಣಗಳೂ ಅಷ್ಟೇ ಸಾಮಾನ್ಯ. ತಮ್ಮ ವೈಯಕ್ತಿಕ ಜೀವನವನ್ನು ಅದೆಷ್ಟು ಜಾಗರೂಕತೆಯಿಂದ ಬಣ್ಣದ ಬದುಕಿಗೆ ಹೊಂದಿಸಿಕೊಂಡು ಹೋಗಬೇಕು ಎಂಬುದು ಈ ರಂಗದಲ್ಲಿರುವವರಿಗೇ ಗೊತ್ತು. ನಟನೆ ಮತ್ತು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವ ಅತ್ಯಂತ ಸೂಕ್ಷ್ಮ ಜವಾಬ್ದಾರಿ, ಅಂಥದ್ದೊಂದು ಪ್ರಜ್ಞೆ ಇಲ್ಲಿ ಪ್ರತಿಯೊಬ್ಬ ನಟನಿಗೂ, ನಟಿಗೂ ಇರುತ್ತದೆ; ಇರಬೇಕು.

ಗಂಡ-ಹೆಂಡಿರ ಜಗಳಕ್ಕೆ ಸಂಬಂಧಿಸಿದಂತೆ, ಕನ್ನಡ ಚಿತ್ರರಂಗವು ಇಂಥದ್ದೊಂದು ನಿಷೇಧದ ತೀರ್ಮಾನ ತೆಗೆದುಕೊಂಡಿದೆ ಎಂದರೆ, ಅದಕ್ಕೆ ಯಾವುದೇ ಸಮರ್ಥನೆ ಕೊಟ್ಟರೂ ಅದು ಒಪ್ಪತಕ್ಕದ್ದಲ್ಲ. ಬೇಕಿದ್ದರೆ, ‘ನಿಜವಾಗಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ನಮಗೆ ಮನಸ್ಸಿಲ್ಲ’ ಎಂದು ಘಂಟಾಘೋಷವಾಗಿ ಹೇಳಿಬಿಡಲಿ ಬೇಕಾದರೆ; ಆದರೆ, ಮತ್ತೊಂದು ಹೆಣ್ಣಿನ ಬಾಳು ಹಾಳು ಮಾಡುವುದು ಎಷ್ಟು ಸರಿ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಅದೇನೇ ಇರಲಿ. ದರ್ಶನ್ ಮೇಲೆ ಕೋಟಿ ಕೋಟಿ ಹೂಡಿದ ನಿರ್ಮಾಪಕರಿಗೆ ಅವರು ಈಗ ಜೈಲು ಪಾಲಾಗಿರುವುದರಿಂದ ನಷ್ಟವಾಗುತ್ತದೆ ಎಂದಾದರೆ, ನಿಖಿತಾ ಕೂಡ ಅವರಂತೆಯೇ ಒಬ್ಬ ನಟಿ, ಆಕೆಯ ಚಿತ್ರದ ಮೇಲೆ ಹಣ ಹೂಡಿದವರ ಪರಿಸ್ಥಿತಿ ಏನಾಗಬೇಡ?

ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಿಗರೇಟಿನ ಬೆಂಕಿಯಿಂದ ಸುಟ್ಟಿಸಿಕೊಂಡು, ಕಪಾಳ ಮೋಕ್ಷ ಮಾಡಿಸಿಕೊಂಡು, ರಕ್ತಸ್ರಾವ ಮಾಡಿಸಿಕೊಂಡು, ಸಿಟ್ಟಿನ ಭರದಲ್ಲಿ ಪೊಲೀಸರಿಗೆ ದೂರು ನೀಡಿದ ಪರಿಣಾಮವನ್ನು ಅರಿತುಕೊಂಡು ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ. ತಮ್ಮ ಸಂಸಾರ ಸರಿಹೋಗಲಿ, ಗಂಡನಿಗೆ ಯಾವುದೇ ತೊಂದರೆಯಾಗದಿರಲಿ ಎಂದು ದೂರು ವಾಪಸ್ ಪಡೆಯಲು ಕೂಡ ಒಪ್ಪಿಕೊಂಡು, ಪತಿಯೇ ಪರದೈವ ಎಂಬೋ ಭಾವನೆಯಿಂದ, ಇದೇನೋ ಸಣ್ಣಪುಟ್ಟ ಗಲಾಟೆ ಎಂದು ಸುಮ್ಮನಾಗುವಂತಿಲ್ಲ. ಯಾಕೆಂದರೆ, ದರ್ಶನ್ ಪತ್ನಿ ಐಸಿಯು ಸೇರುವಷ್ಟರ ಮಟ್ಟಿಗೆ ಥಳಿಸಲ್ಪಟ್ಟಿದ್ದಾರೆ! ಆದರೂ, ಗಂಡನ ಮೇಲಿನ ಪ್ರೀತಿಯಿಂದ, ಮಗ ವಿನೀಶನ ಭವಿಷ್ಯದ ದೃಷ್ಟಿಯಿಂದಲಾದರೂ ರಾಜಿಗೆ ಮುಂದಾಗಿದ್ದಾರೆ. ಹೀಗಾಗಿ, ಬಹುಶಃ, “ಗಂಡ ಏನೂ ಕೈ ಮಾಡಿಲ್ಲ, ತನಗೆ ಗಾಯವಾಗಿದ್ದು ಬಾತ್‌ರೂಮಲ್ಲಿ ಜಾರಿ ಬಿದ್ದ ಪರಿಣಾಮವಾಗಿ” ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಸ್ವತಃ ಆಕೆಯೇ ಸಂಕಷ್ಟ ಸ್ಥಿತಿಯಲ್ಲಿದ್ದರೂ, ಈಗ ಆಸ್ಪತ್ರೆಯಲ್ಲಿರುವ ತನ್ನ ಪತಿ, ದರ್ಶನ್‌ರನ್ನು ನೋಡಿ, ಕಳಕಳಿಯಿಂದ ಆರೋಗ್ಯ ವಿಚಾರಿಸಿ ಬಂದಿದ್ದಾರೆ.

ಪರಿಸ್ಥಿತಿ ಹೀಗಿರುವಾಗ, ನನಗೆ ಮತ್ತಷ್ಟು ಅಚ್ಚರಿಯಾಗಿದ್ದು, ನಿರ್ಮಾಪಕರ ಸಂಘದ ಕಡೆಯವರು ಟಿವಿ ಚಾನೆಲ್‌ಗಳಲ್ಲಿ ಕೊಟ್ಟ ಹೇಳಿಕೆ. ‘ವಿಜಯಲಕ್ಷ್ಮಿ ಬಾತ್‌ರೂಮಿಂದ ಬಿದ್ದಿದ್ದಕ್ಕೆ ದಾಖಲೆ ಏನಾದರೂ ಇದೆಯೇ?’ ಎಂದು ಚಾನೆಲ್ ಮಂದಿಯನ್ನೇ ಪ್ರಶ್ನಿಸಿದ್ದರು. ಹಾಗಿದ್ದರೆ, ನಿಖಿತಾಳೇ ಬಂದು ದರ್ಶನ್ ಕುಟುಂಬವನ್ನು ಹಾಳು ಮಾಡಿರುವುದಕ್ಕೆ ಏನಾದರೂ ದಾಖಲೆ ಇದೆಯೇ ಎಂಬ ಪ್ರಶ್ನೆಯೂ ಅಲ್ಲೇ ಇದೆಯಲ್ಲಾ… ಸರಿ ಪೊಲೀಸ್ ಸ್ಟೇಶನ್‌ಗೆ ನೀಡಿದ ಎಫ್ಐಆರ್ ಆಧಾರದಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ನಿರ್ಮಾಪಕರ ಸಂಘ ವಾದಿಸುತ್ತದೆಯೆಂದಾದರೆ, ದೂರು ಕೊಟ್ಟ ತಕ್ಷಣವೇ ಯಾರೂ ಅಪರಾಧಿ ಆಗಿರುವುದಿಲ್ಲ. ಯಾರು ಬೇಕಿದ್ದರೂ ಯಾರ ಮೇಲಾದರೂ ಏನಾದರೂ ದೂರು ಕೊಡಬಹುದು. ಈ ಅಂಶಕ್ಕೆ ಸ್ಪಷ್ಟನೆ ಇಲ್ಲ.

ಸರಿ. ಚಿತ್ರರಂಗದ ಅಳಿವು-ಉಳಿವಿನ ಬಗ್ಗೆ, ಈ ನಟನ ಜೀವನದ ಬಗ್ಗೆ ಇವರಿಗೆ ಇಷ್ಟು ಕಾಳಜಿ ಇದೆ ಎಂದಾದರೆ, ಈ ಒಡೆದ ಮನೆಯನ್ನು, ಮುರಿದ ಸಂಸಾರದ ನೌಕೆಯನ್ನು ಸರಿಪಡಿಸಲು ಏನು ಬೇಕಾದರೂ ಮಾಡಲಿ. ಆದರೆ ಅದ್ಯಾರೋ ಮೂರನೆಯವರು ಕಾರಣ ಅಂತೆಲ್ಲಾ ದೂರಿ, ಇಂತಹಾ ನಿರ್ಧಾರ ತೆಗೆದುಕೊಂಡಿರುವುದು ಹಾಸ್ಯಾಸ್ಪದವಲ್ಲವೇ? ಹಾಗಂತ ಕನ್ನಡ ಚಿತ್ರರಂಗದ ಮಾನ ಹರಾಜು ಆಗುತ್ತಿದೆ ಎಂಬುದೇನಾದರೂ ಆತಂಕವಿದ್ದರೆ ದರ್ಶನ್ ಅವರಿಗೇ ನಿರ್ಮಾಪಕರ ಸಂಘ ನಿಷೇಧ ಹೇರಬೇಕು ಎಂದು ನಾನೇನೂ ಇನ್ನೂ ಒತ್ತಾಯಿಸಿಲ್ಲ! ಕನಿಷ್ಠ ಪಕ್ಷ, “ನಮ್ಮ ಹುಡುಗನ” ಸಂಸಾರ ಸರಿ ಮಾಡುವ ಇರಾದೆ ಇದ್ದದ್ದೇ ಆದರೆ, ನಿಖಿತಾ ಹೇಳಿಕೆಯನ್ನು ಕೇಳಿಕೊಂಡು, ವಿಜಯಲಕ್ಷ್ಮಿಯನ್ನೂ ಕೂರಿಸಿಕೊಂಡು, ಮಾತುಕತೆ ನಡೆಸಿ ವಿವಾದ ಬಗೆಹರಿಸಬಹುದಿತ್ತಲ್ಲ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಿದೆ.

ಒಂದು ಸಂಸಾರದ, ಇಬ್ಬರ ನಡುವಿನ ವೈಯಕ್ತಿಕ ಸಮಸ್ಯೆಯನ್ನು ಇಡೀ ಕನ್ನಡ ಚಿತ್ರರಂಗದ ಸಮಸ್ಯೆಯಾಗಿ ಬದಲಾಯಿಸಿ, ಮೂರನೆಯವರಿಗೆ ಶಿಕ್ಷೆ ವಿಧಿಸಿದ್ದು ಖಂಡಿತಾ ತಪ್ಪು ಅನ್ನಿಸದಿರದು.

ಗಂಡ-ಹೆಂಡತಿ ಇಬ್ಬರೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಅವರ ಹೇಳಿಕೆ ಪಡೆಯದೇ ಸಂಘವು ಕ್ರಮ ಘೋಷಿಸಿದ್ದು ಮತ್ತು ಮನೆ ಜಗಳದ ವಿಷಯವನ್ನು ಪರಿಹರಿಸುವುದು ಬಿಟ್ಟು ಮೂರನೆಯವರ ಮೇಲೆ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಅದಕ್ಕೂ ಮಿಗಿಲಾಗಿ, ಚಿತ್ರರಂಗದವರೆಲ್ಲರೂ ದರ್ಶನ್ ಬೆಂಬಲಕ್ಕೆ ನಿಂತಿದ್ದುದು! ಮಂಡ್ಯದ ಮಹಿಳೆಯರು ಕೂಡ ಬಂದು, ದರ್ಶನ್ ಬಿಡುಗಡೆ ಮಾಡಬೇಕು ಎಂದು ಪೊಲೀಸ್ ಠಾಣೆಯೆದುರು ಒತ್ತಾಯಿಸಿದ್ದು!

ಅದೆಲ್ಲಾ ಇರಲಿ; ಕುಡಿದು ಬಂದು, ರಿವಾಲ್ವರ್ ಸೇರಿಸಿ ಏನೂ ಅರಿಯದ ಆ ಮುಗ್ಧ ಮಗುವಿಗೆ ಹೆದರಿಸುವುದು ಖಂಡಿತಾ ಪೌರುಷ ಅಲ್ಲ. ನಾನು ನನ್ನ ಅಪ್ಪನ ಹಾಗೆ ಆಗಬೇಕು ಅಂದುಕೊಳ್ಳೋ ಆ ಅಮಾಯಕ ಮಗುವಿನ ಪರಿಸ್ಥಿತಿ ಯಾರಾದರೂ ಊಹಿಸಿಕೊಂಡಿದ್ದೀರಾ? ಅಥವಾ ನಾನು ಹೀರೋ ದರ್ಶನ್ನ ಹಾಗೆ ಅಂದುಕೊಳ್ಳುವ ನಮ್ಮ ನಿಮ್ಮ ಮನೆಯ ಮಕ್ಕಳ ಬಗ್ಗೆ ಯೋಚಿಸಿದ್ದೀರಾ?
[ವೆಬ್‌ದುನಿಯಾಕ್ಕಾಗಿ]

Older Entries

Follow

Get every new post delivered to your Inbox.